ಕೊಪ್ಪದಿಂದ ಸುಮಾರು ಎರಡು ಕಿ.ಮೀ. ದೂರದ ಹೆದ್ದಾರಿ ಸಮೀಪ ಗತಕಾಲದ ಜೀವನದ ಕುರುವಾಗಿ ಕಾಡಲ್ಲಿ ಕಾಡಾಗಿರುವ ಕೋಟೆಗುಡ್ಡವು ರಮಣೀಯವಾಗಿದೆ. ಬಹುಶಃ ಗುಡ್ಡದ ಮೇಲೆ ಕೋಟೆ ಇರುವುದರಿಂದಲೇ ಇದಕ್ಕೆ ಈ ಹೆಸರು ಬಂತೆಂದು ಕಾಣುತ್ತದೆ. ಇದರ ಬಗ್ಗೆ ಇತಿಹಾಸದಲ್ಲಿ ಹೆಚ್ಚಿನ ಮಾಹಿತಿ ದೊರೆಯದಿದ್ದರೂ, ಇದು ಪಾಳೇಗಾರರು ಮತ್ತು ನಾಯಕರ ಕಾಲದಲ್ಲಿತೆಂದು, ಇದನ್ನು ತಿಮ್ಮಪ್ಪನಾಯಕನೆಂಬುವನು ಆಳ್ವಿಕೆ ಮಾಡುತ್ತಿದ್ದನೆನ್ನಲಾಗಿದೆ. ಟಿಪ್ಪು ಸುಲ್ತಾನ ಶೃಂಗೇರಿಗೆ ಬಂದಿದ್ದಾಗ ಇಲ್ಲಿಗೆ ಬಂದಿದ್ದನೆಂದು ದಾಖಲೆಯಲ್ಲಿ ಉಲ್ಲೇಖವಾಗಿರುವುದು ಇದರ ಮೇಲೆ ಬೆಳಕು ಚೆಲ್ಲುತ್ತದೆ.
ಕೋಟೆಗುಡ್ಡಕ್ಕೆ ಹೋಗಲು ಎರಡು ಮಾರ್ಗಗಳಿದ್ದು, ಒಂದು ಮಾರ್ಗ ದಡ್ಡಕಾಡಿನಲ್ಲಿ ಸಾಗಿದರೆ, ಇನ್ನೊಂದು ಕಾಡು ಮತ್ತು ಬಂಡೆಯ ಮೇಲೆ ಸಾಗುತ್ತದೆ. ಇಲ್ಲಿನ ಸ್ಥಳೀಯ ಜನರು ಪ್ರತಿವರ್ಷ ಸಂಕ್ರಾಂತಿಯನ್ನು ಈ ಕೋಟೆಗುಡ್ಡದಲ್ಲಿ ಆಚರಿಸುವುದು ವಿಶೇಷವಾಗಿದೆ. ಇಲ್ಲಿ ಪ್ರಮುಖವಾಗಿ ಮೂರು ಸುತ್ತಿನ ಕೋಟೆ ಇದ್ದು, ದಪ್ಪ ದಪ್ಪ ಕಲ್ಲುಗಳಿಂದ ಎತ್ತರವಾಗಿ ಕಟ್ಟಲಾಗಿದೆ. ಮೊದಲ ಮತ್ತು ಮೂರನೇ ಸುತ್ತಿನ ಕೋಟೆಗೆ ದಪ್ಪದಾದ, 7 ಅಡಿ ಎತ್ತರದ ಹೆಬ್ಬಾಗಿಲುಗಳಿದ್ದು, ಹೊವಿನ ಕೆತ್ತನೆಯ ಹೊಸ್ತಿಲನ್ನು ಹೊಂದಿದೆ ಮತ್ತು ಅದರ ಎಡಭಾಗದಲ್ಲಿ ಚಿಕ್ಕದ್ವಾರ ಮತ್ತು ಗುಡಿಯಾಕಾರದ ಗೋಡೆಯಿದೆ, ಅನೇಕ ಕಡೆ ಕೋಟೆಯ ಗೋಡೆಯ ಮೇಲೆ ಎತ್ತರವಾದ ಮರಗಳು ಬೆಳೆದು ಗೋಡೆಯ ಶಿಥಿಲಾವಸ್ಥೆಗೆ ಕಾರಣವಾಗಿವೆ.
ಒಳಭಾಗದಲ್ಲಿ ವಿಶಾಲವಾದ ಅಂಗಳವಿದ್ದು, ಕಲ್ಲುಗಳಿಂದ ಕಟ್ಟಿದ ಎರಡು ಬಾವಿಗಳು, ನಾಗರಕಲ್ಲುಗಳು, ಬುಜರ್್ಗಳು ಕಂಡುಬರುತ್ತವೆ. ಅದರ ಹೊರಭಾಗಕ್ಕೆ ಬಂದರೆ, ಹೊಲಗದ್ದೆಗಳು ಮತ್ತು ಪಶ್ಚಿಮಘಟ್ಟ ಸಾಲುಗಳ ಸುಂದರ ವಿಹಂಗಮ ನೋಟವನ್ನು ಸವಿಯಬಹುದು. ಇದರ ಜೊತೆಗೆ ಈ ಗುಡ್ಡ ಅನೇಕ ವಿಧ ವಿಧವಾದ ಔಷಧೀಯ ಸಸ್ಯಗಳನ್ನು ಒಳಗೊಂಡ ಸುಂದರ ತಾಣವಾಗಿದ್ದು, ಹೆಚ್ಚು ಪ್ರವಾಸಿಗರ ಕಾಟವಿಲ್ಲದೇ, ಸ್ವಚ್ಚ ಮತ್ತು ಶಾಂತವಾಗಿದ್ದು, ಪರಿಸರ ಪ್ರೇಮಿಗಳಿಗೆ ಒಂದು ದಿನದ ಪ್ರವಾಸಕ್ಕೆ ಯೋಗ್ಯವಾಗಿದೆ.
ಇದನ್ನು ತಲುಪುವ ಮಾರ್ಗ-ಕೊಪ್ಪದಿಂದ ಎರಡು ಕಿ,ಮೀ. ರಾಷ್ರೀಯ ಹೆದ್ದಾರಿಯಲ್ಲಿ ಹಿರೇಊರು ಎಂಬ ಸ್ಥಳದಿಂದ ಮುನ್ನೆಡೆಯಬೇಕು. ಸ್ಥಳೀಯರ ಮಾರ್ಗದರ್ಶನ ಅತ್ಯವಶ್ಯಕ.