ಮುಸ್ಲಿಂ ಕುಟುಂಬದಲ್ಲಿ ಮರಣಕ್ಕೀಡಾದವರನ್ನು ಗೋರಿಗೊಯ್ಯುವ ಮುನ್ನ ಅನುಸರಿಸುವ ಎಲ್ಲಾ ಆಚರಣೆಗಳು, ಶವಸಂಸ್ಕಾರ ಮಾಡುವ ಸಂಪೂರ್ಣ ವಿವರವನ್ನು ಈ ಕತೆಯಲ್ಲಿ ತಿಳಿಸಿದ್ದಾರೆ. ಇದು ಈ ಕತೆಯ ಉದ್ದೇಶವಲ್ಲ. ಶವಸಂಸ್ಕಾರ ಅದರಲ್ಲೂ ಅಪಘಾತದಲ್ಲಿ ಮಡಿದ ಹೆಣ್ಣು ಮಕ್ಕಳ ಪೂರ್ವವಿಧಿಗಳನ್ನು ಮಾಡುವ ಕಾಯಕವನ್ನೇ ಮಾಡುವ ಮಹಿಳೆಯ ಸ್ಥಿತಿಗತಿ, ಬಡತನ ಮತ್ತು ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿರುವ ಹೆಂಗಸು ಸಾವಾಗಿದ್ದ ಮನೆಯಲ್ಲಿ ಪಾತ್ರೆಗಳ ತುಂಬಾ ತುಳುಕುತ್ತಿದ್ದ ಅನ್ನ ನೋಡಿ ಪರಿಭಾವಿಸುವ ಪರಿ, ಶವ ಸ್ನಾನ ಮಾಡಿ ಮಿಕ್ಕಿದ ನೀರನ್ನು ಸಾಬೂನನ್ನು ನೋಡಿ ಸ್ನಾನ ಮಾಡುವುದು, ಬಟ್ಟೆಗಳನ್ನು ತನ್ನ ಮಗಳಿಗೆ ಹಾಕಿ ಕಲ್ಪಿಸಿಕೊಳ್ಳುವುದು, ಮನೆಯಲ್ಲಿ ಹಸಿದು ಕೂತಿರುವ ಎಳೆ ಕೂಸಿನ ಬಾಣಂತಿ, ಶವದ ಮೇಲಿದ್ದ ವಜ್ರದ ನತ್ತನ್ನು ನೊಡಿ ಆಸೆ ಪಡುವುದು. ಹಾಗಂತ ಅದನ್ನು ಕದಿಯುವ ವ್ಯಕ್ತಿತ್ವವಿಲ್ಲದಿರುವುದು. ತನ್ನ ಜೀವನವನ್ನು ನೆಡೆಸುವುದಕ್ಕೆ ಯಾರ ಮನೆಯಲ್ಲಾದರೂ ಸಾವನ್ನು ಬಯಸುವ ಸ್ಥಿತಿ, ಆದರೆ ಇದು ಬೇರೆಯವರಿಗೆ ಕೇಡು ಬಯಸುವುದಲ್ಲ......... ಬಾನು ಮುಷ್ತಾಕ್ ರವರು ಇದೆಲ್ಲವನ್ನು ಸವಿವರಾಗಿ ಈ ನೀಳ್ಗತೆಯಲ್ಲಿ ತಿಳಿಸಿದ್ದಾರೆ.