೧೦೬೯ರಲ್ಲಿ ೪೨ನೇ ಕನ್ನಡ ಸಾಹಿತ್ಯ ಸಮ್ಮೇಳನ ಮಣಿಪಾಲದಲ್ಲಿ ಜರುಗಿತ್ತು. ಕವಿಗೋಷ್ಠಿಯಲ್ಲಿ ಕೇಲವ ೪೦-೫೦ ಜನ ಕವಿಗಳಿಗೆ ಅವಕಾಶ ದೊರೆತಿದ್ದು ಉಳಿದಿದ್ದ ನೂರಾರು ತರುಣ ಕವಿಗಳು ತಮಗೆ ಅವಕಾಶ ದೊರೆಯಲಿಲ್ಲವೆಂದು ದೂರ ತೊಡಗಿದಾಗ ಬೆಂದ್ರೆಯವರು ವ್ಯವಸ್ಥಾಪಕರೊಡನೆ ಚರ್ಚಿಸಿ ಮೆಡಿಕಲ್ ಕಾಲೇಜು ಹಾಸ್ಟೆಲಿನ ಆವರಣದಲ್ಲಿ ಕವಿಗೋಷ್ಠಿ ಏರ್ಪಡಿಸಿದರು.
ಈ ಕವಿಗೋಷ್ಢಿಗೆ ಹಿರಿಯ ಕವಿಗಳಾದ ಡಿ.ಎಸ್. ಕರ್ಕಿಯವರು ಅಧ್ಯಕ್ಷತೆ ವಹಿಸಿದ್ದರು. ಕವಿಗೋಷ್ಠಿಯಲ್ಲಿ ಭಾಗವಹಿಸುವ ಕವಿಗಳು ಒಂದೊಂದೇ ಕವನ ವಾಚಿಸಬೇಕೆಂದು ತಾಕೀತು ಮಾಡಿದ್ದರು. ಕರ್ಕಿಯವರು ಕವನವಾಚನದಿಂದ ಕವಿಗೋಷ್ಠಿಗೆ ನಾಂದಿಯಾಯಿತು. ಬೇಂದ್ರೆಯವರು ಕರ್ಕಿಯವರ ಪಕ್ಕದಲ್ಲೇ ಕುಳಿತಿದ್ದರು. ಓರ್ವ ಯುವಕವಿ ಬಂದು ಬೇಂದ್ರೆಯವರಿಗೆ ನಮಸ್ಕರಿಸಿ ವಾಚನ ಮಾಡತೊಡಗಿದ. ಕಾವ್ಯದೇವಿ ಆತನ ಮೈಮೇಲೆ ತುಂಬಿಕೊಂಡಿರಬೇಕು, ಆತ ಅತ್ತಿತ್ತ ತುಯುತ್ತ ಕವಿತೆ ಓದತೊಡಗಿದ. ಆವೇಶ ಇನ್ನೂ ಆರೋಹಣಕ್ಕೇರಿ ಕವಿತಾ ದೆವ್ವ ಅವನಿಗೆ ವಕ್ಕರಿಸಿ ತುಯ್ದಾಟ ಬಲವಾಯಿತು.
ನೋಡುಗರಿಗೆ ಒಂದು ರೀತಿಯ ಮೋಜು, ಮುಜುಗರ ಎರಡೂ. ಕುಳಿತಿದ್ದ ಬೇಂದ್ರೆಯವರು ಎದ್ದು ಬಂದು ಅವನ ಭುಜ ಹುಡಿದು ನೆಟ್ಟಗೆ ನಿಲ್ಲಿಸಲು ಪ್ರಯತ್ನಿಸಿದಾಗ ಆತ ಕವನವಾಚನ ನಿಲ್ಲಿಸಿ ದಢಾರನೆ ಬೇಂದ್ರೆಗೆ ದೀರ್ಘ ದಂಡ ಹಾಕಿದ. ಇದನ್ನು ನೋಡಿದ ಬೇಂದ್ರೆಯವರು ಆತನನ್ನು ಏಳಿಸಹೋದಷ್ಟು ಆತ ಬೇಂದ್ರೆಯವರ ಕಾಲನ್ನು ಭದ್ರವಾಗಿ ಹಿಡಿಯುತ್ತಲಿದ್ದ. ಬಿಡಿಸಿಕೊಳ್ಳಲು ಬೇಂದ್ರೆಯವರು ಹೆಣಗಾಟ ನೆಡೆಸಿದ್ದು ಕಂಡು ಕೆಲವರು ವೇದಿಕೆಗೆ ಬಂದು ಆತನನ್ನು ಇಬ್ಬರು, ಬೇಂದ್ರೆಯವರನ್ನು ಇಬ್ಬರು ಹಿಡಿದು ಬೇರ್ಪಡಿಸಬೇಕಾಯಿತು. ಇದು ನಡೆದು ಸಾಕಷ್ಟು ಹೊತ್ತಾದರೂ ಸಭಾಂಗಣದಲ್ಲಿ ಮಾತ್ರ ನಗೆ ಹರಡುತ್ತಲೇ ಇತ್ತು.