ಬರಗೂರರವರ ಕ್ರಾಂತಿಕಾರಿ ಬಂಡಾಯದ ನುಡಿಗಳು 'ಶಬರಿ' ಕಾದಂಬರಿಯುದ್ದಕ್ಕೂ ಕಂಡುಬರುತ್ತವೆ. ಅದರೊಂದಿಗೆ ಜನಗಳು ತಮ್ಮ ಸ್ವಾರ್ಥ ಸಾಧನೆಗೆ ಕೆಲವು ಆಚರಣೆಗಳನ್ನು ದೇವರ ಹೆಸರಲ್ಲಿ ಹೇರಿ ಅದರ ಉಪಯೋಗವನ್ನು ಪಡೆದು ಮುಗ್ಧ ಜನರನ್ನು ವಂಚಿಸುವ ಚಿತ್ರಣದೊಂದಿಗೆ ಅದರಿಂದ ಹೊರಬರುವ ಅಂಶವು ಇದೆ. ಒಂದು ಪ್ರದೇಶದ ಬುಡಗಟ್ಟು ಜನಗಳ ಸಾಮಾಜಿಕ, ಧಾರ್ಮಿಕ, ಆರ್ಥಿಕ ಸ್ಥಿತಿಗತಿಗಳೊಂದಿಗೆ ಸಹಜವಾಗಿ ಕಂಡು ಬರುವ ರಾಜಕೀಯ ಪಿತೂರಿಗಳು ಇವೆ. ನಮ್ಮಲ್ಲಿ ಈಗಲೂ ತಾಂಡವವಾಡುತ್ತಿರುವ ಜಾತೀಯತೆಯು ಬುಡಕಟ್ಟುಗಳಲ್ಲಿ ಇದ್ದರೂ ಅಷ್ಟೋಂದು ಗಾಢವಾಗಿ ಹೊರಬರದೇ ಅಲ್ಲಿನ ಜನಗಳ ಮನೋವೈಶಾಲತೆಗೆ ಇಂಬುಕೊಟ್ಟಿದೆ. ವಿದ್ಯಾಭ್ಯಾಸದಿಂದಲೇ ಎಲ್ಲವು ಸಾಧ್ಯವೆಂದು ತೋರಿಸಿಕೊಟ್ಟಿದ್ದಾರೆ. ಮಾತು ಬಾರದ ವ್ಯಕ್ತಿ ತನ್ನಲ್ಲಿ ಅಡಗಿಸಿಕೊಂಡು ತೊಳಲಾಡುತ್ತಿದ್ದ ಸತ್ಯವನ್ನು ಅಕ್ಷರಗಳ ಮೂಲಕ ಹೊರಗೆಡವಲು ಸಾಧ್ಯವಾಗಿಸಿದ್ದಾರೆ. ಅನೇಕ ಶಬ್ದ, ಮಾತುಗಳಲ್ಲಿ ಹೇಳಬೇಕಾದ ಸನ್ನಿವೇಶಗಳನ್ನು ಅತ್ಯಂತ ಅರ್ಥಪೂರ್ಣ ಮತ್ತೆ ಮತ್ತೆ ಓದಬೇಕೆನಿಸುವ ಕಾವ್ಯ ನುಡಿಗಳಲ್ಲಿ ಬರೆದಿರುವುದು ಈ ಕಾದಂಬರಿಯ ವೈಶಿಷ್ಟ್ಯ ಮತ್ತು ಸೊಬಗಾಗಿದೆ.
ಇಡೀ ಕತೆಯು ಬುಡಕಟ್ಟಿನ ಸನ್ನಿವೇಶದಲ್ಲಿಯೇ ಹೆಚ್ಚಾಗಿ ನೆಡೆಯುತ್ತದೆ. ಅದರೆ ಕಾದಂಬರಿಯನ್ನು ಓದುತ್ತಾ ಹೋದಂತೆ ಅದರಲ್ಲಿ ಬರುವ ಮಾತು ಕತೆಗಳು ನಮ್ಮ ಮನಸ್ಸಿನಲ್ಲಿ ಮೂಢಿದ್ದ ಚಿತ್ರಣವನ್ನು ಹೊಡೆದೋಡಿಸಿ ನಮ್ಮಲ್ಲಿಯೇ ಪ್ರಶ್ನಿಸಿಕೊಳ್ಳುವಂತೆ ಮಾಡುತ್ತದೆ! ಸಾಮಾನ್ಯವಾಗಿ ನಾವು ಯಾವುದೇ ಒಬ್ಬ ವ್ಯಕ್ತಿಗೆ ಒಂದು ವಿಷಯವನ್ನು ಹೇಳಿದರೆ, ಅವನು ವಿದ್ಯಾವಂತನೊ ಅಥವಾ ದಡ್ಡನೊ ತಕ್ಷಣಕ್ಕೆ ಒಪ್ಪಿಕೊಳ್ಳುವುದು ಕಷ್ಟ. ಇಲ್ಲಿನ ಕೆಲವು ಸನ್ನಿವೇಶಗಳು ಇದಕ್ಕೆ ವ್ಯತಿರಿಕ್ತವಾಗಿದೆ. ಅದರೊಂದಿಗೆ ಈ ಕಾದಂಬರಿಯ ರಚನೆ ಇತ್ತಿಚಿನದ್ದಾಗಿದ್ದರೆ, ಇದು ವಾಸ್ತವತೆಗೆ ಬಹುದೂರವಿದೆಯೆಂದೆನಿಸುತ್ತದೆ. ಉದಾ; ಮದುವೆಯಾದ ಮಹಿಳೆ ತನ್ನ ಮೊದಲ ರಾತ್ರಿಯನ್ನು ದೇವರ ಜೊತೆ ಕಳೆಯುವುದು. ಶತ ಶತಮಾನಗಳಿಂದ ಆಚರಿಸಿಕೊಂಡು ಬಂದ ಈ ಆಚರಣೆಯನ್ನು ಇದುವರೆಗೂ ಪ್ರಶ್ನಿಸುವ, ಕುತೂಹಲಿ ವ್ಯಕ್ತಿ ಆ ಬುಡಕಟ್ಟಿನಲ್ಲಿ ಹುಟ್ಟಲೇ ಇಲ್ಲವೇ.(ಚಂದ್ರನನ್ನು ಹೊರತಾಗಿ) ಬುದ್ದಿವಂತರೆಂದೆನಿಸಿಕೊಂಡ ವ್ಯಕ್ತಿ(ಸಾಹುಕಾರ)ಗಳೊಂದಿಗೆ ಇಡೀ ದಿನ ಕಳೆಯುತ್ತಿದ್ದ ಈ ಜನಗಳಿಗೆ ಯಾವಾಗಲೂ ಪ್ರಶ್ನೆಯೇ ಹುಟ್ಟಲಿಲ್ಲವೇ ಎಂದೆನಿಸುತ್ತದೆ. ದಬ್ಬಾಳಿಕೆಯನ್ನು , ಕ್ರೌರ್ಯವನ್ನು ಸಹಿಸುವ ಉಸಿರೆತ್ತದೇ ಸಹಿಸುವ ಕಾಲವು ಇದಲ್ಲವಾಗಿದೆ. ಚಂದ್ರ ಮತ್ತು ಸೂರ್ಯರ ಸಾವು ಮತ್ತು ಅವರ ಚಟುವಟಿಕೆಗಳ ಹಿನ್ನಲೆಯು ಕೂಡ ವಾಸ್ತವತೆಗೆ ದೂರವೆನಿಸುತ್ತದೆ.
ಒಟ್ಟಾರೆಯಾಗಿ ಗದ್ಯ ಶೈಲಿಯ ಸಂಭಾಣೆಯುಕ್ತ ಕಾವ್ಯದಿಂದ ಕೂಡಿದ " ಶಬರಿ" ಯು ಈ ಕೆಲವು ಅಂಶಗಳ ಹೊರತಾಗಿ ಸೊಗಸಾಗಿದೆ. ಸೂರ್ಯ ಮತ್ತು ಅವನ ಸ್ನೇಹಿತರಿಗೆ ಅದರಲ್ಲೂ ಬುಡಕಟ್ಟಿನ ಜನರಿಗೆ, ಅವರ ಹೋರಾಟಕ್ಕೆ ಒಂದು ಅಂತ್ಯವನ್ನು ಮಾಡದೇ, ಇಂತಹ ಹೋರಾಟಗಳ ತೋಡರಗಳನ್ನು ಮಾತ್ರ ಚಿತ್ರಿಸಿದ್ದಾರೆ. ಅಪಜಯವನ್ನೇ ಓದುಗರಿಗೆ ಉಣಬಡಿಸಿ, ಕಾದಂಬರಿಗೆ ದುರಂತ ಅಂತ್ಯವಾಡಿದ್ದರೂ, ಶಬರಿಯ ಹೋರಾಟದ ಆರಂಭವಾಗಿಸಿದ್ದಾರೆ.