ಜನರು ಎಷ್ಟೇ ವಿದ್ಯಾವಂತರಾದರೂ ವೈಜ್ನಾನಿಕ ಹಿನ್ನಲೆಯಲ್ಲಿ ಅಭ್ಯಾಸವನ್ನು ಮಾಡಿದ್ದರೂ ಜೀವನದಲ್ಲಿ ಅವುಗಳನ್ನು ಅಳವಡಿಸಿಕೊಳ್ಳುವುದು ತುಂಬಾ ಕಡಿಮೆ. ಅನಾದಿ ಕಾಲದಿಂದ ಮುಂದುವರಿದುಕೊಂಡು ಬಂದಿರುವ, ಚಿಕ್ಕವಯಸ್ಸಿನಿಂದ ಕೇಳುತ್ತಾ ಬೆಳೆದಿರುವ ವಿಷಯಗಳಲ್ಲೇ ನಂಬಿಕೆ ಹೆಚ್ಚಾಗಿರುತ್ತದೆ. ನಮ್ಮಲ್ಲಿ ಇಂದಿಗೂ ಕೂಡ ಅನೇಕ ಕುರುಡು ನಂಬಿಕೆಗಳು, ಆಚರಣೆಗಳು ಇರುವುದು ಸರ್ವೆಸಾಮಾನ್ಯ. ಅಂತಹ ನಂಬಿಕೆಗಳಿಗೆ ಕಟ್ಟುಬಿದ್ದು ಮೋಸ ಹೋಗಿರುವವರ ಸಂಖ್ಯೆಯೂ ಹೆಚ್ಚಾಗಿದೆ. ಜನರ ಇಂತಹ ನಂಬಿಕೆಗಳನ್ನೇ ಬಂಡವಾಳವಾಗಿಟ್ಟುಕೊಂಡು ಜೀವನ ಮಾಡುತ್ತಿರುವವರ ಒಂದು ವರ್ಗವೇ ನಮ್ಮ ಸಮಾಜದಲ್ಲಿದೆ. ಎಲ್ಲಿಯವರೆಗೆ ಮೋಸ ಹೋಗುವವರು ಇರುತ್ತಾರೋ ಅಲ್ಲಿಯವರೆಗೆ ಮೋಸ ಮಾಡುವವರು ಇರುತ್ತಾರೆನ್ನುವುದಕ್ಕೆ ಕುವೆಂಪುರವರು ಬರೆದಿರುವ 'ಗುಪ್ತಧನ' ಒಂದು ಉದಾಹರಣೆಯಾಗಿದೆ. ಮಲೆನಾಡ ಪರಿಸರ, ಮತ್ತು ಅಲ್ಲಿರುವ ನಿಧಿಯ ನಂಬಿಕೆಗಳು, ಅದರ ಬೆನ್ನತ್ತಿ ಹೊರಟವರ ಕತೆಯನ್ನು ಸೊಗಸಾಗಿ ತಿಳಿಸಿದ್ದಾರೆ. ಇದನ್ನು 'ಸನ್ಯಾಸಿ ಮತ್ತು ಇತರ ಕತೆಗಳು' ಎಂಬ ಪುಸ್ತಕದಿಂದ ಆಯ್ಕೆಮಾಡಿಕೊಳ್ಳಲಾಗಿದೆ.