ಬಡ ಕುಟುಂಬದಲ್ಲಿ ಹುಟ್ಟಿದ ಮಕ್ಕಳ ಮೇಲೆ ಹೆತ್ತವರು ಕಾಣುವ ಕನಸುಗಳು ಮಕ್ಕಳ ಜೀವನವನ್ನು ಎಲ್ಲಿಗೆ ಕೊಂಡೊಯ್ಯುತ್ತದೆ ಎನ್ನುವುದಕ್ಕೆ ಈ ಕತೆ ತಕ್ಕ ಉದಾಹರಣೆಯಾಗಿದೆ. ಹಾಗಂತಾ ಇಲ್ಲಿ ಹೆತ್ತವರ, ಒಡಹುಟ್ಟಿದವರ ತಪ್ಪು ಖಂಡಿತ ಇಲ್ಲ. ಇದಕ್ಕೆ ಮೂಲಕಾರಣ ಬಡತನ. ನಾವು ಕೇಳಿರುವಂತೆ, ನೋಡಿರುವಂತೆ ಬಡತನ ಎನ್ನುವುದು ಒಬ್ಬ ವ್ಯಕ್ತಿಯ ಕೈಯಲ್ಲಿ ಏನೆನ್ನೆಲ್ಲಾ ಕೆಲಸವನ್ನು ಮಾಡಿಸುತ್ತದೆ. ಕಳ್ಳತನ, ಮೋಸ, ವಂಚನೆ, ಕೊಲೆ, ಸುಲಿಗೆ, ದರೋಡೆ, .........ಹೀಗೆ ಇದರ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಆದರೆ ಈ ಕತೆ ಭಿನ್ನವಾಗಿದೆ. ಬಡತನವನ್ನು ನಿವಾರಿಸಿಕೊಳ್ಳಲು ತನ್ನ ಮಗನನ್ನು ಕಷ್ಟಪಟ್ಟು ಓದಿಸುವ ಪ್ರಯತ್ನ ಮಾಡುವ ತಾಯಿ ಮತ್ತು ಅಕ್ಕ. ವಿದ್ಯಾಭ್ಯಾಸದ ಆಯ್ಕೆಯಲ್ಲಿ ಗೊಂದಲಗೊಂಡು ಗೆಳೆಯನಿಂದ ಮೋಸ ಹೋಗುವ ಮಗ. ತಮ್ಮನ ವಿದೇಶಿ ದುಡಿಮೆಯಿಂದ ತಾಯಿಯ ಕಷ್ಟ ನಿವಾರಣೆಯಾಗಲೆಂದು ತನ್ನ ತಂದೆಯ ಮಯಸಿ್ಸನ ವ್ಯಕ್ತಿಯನ್ನು ಮದುವೆಯಾಗುವ ಅಕ್ಕ. ಹೀಗೆ ಬಡತನಕ್ಕೆ ಸಿಕ್ಕ ಕುಟುಂಬ ಪರಿಪಾಡಲು ಪಡುತ್ತದೆ. ಇವರೆಲ್ಲರಿಗೂ ಒಂದು ನಂಬಿಕೆಯಿರುತ್ತದೆ - ಕೊಲ್ಲಿ ರಾಷ್ಟ್ರಕ್ಕೆ ಹೋದರೆ ಕೈತುಂಬಾ ಹಣ ಸಿಗುತ್ತದೆ ನಾವು ಇತರರಂತೆ ಚೆನ್ನಾಗಿರಬಹುದು ಎಂದು. ಈ ಆಸೆ ಫಲಕಾರಿಯಾಗುತ್ತದೆಯೇ? ಚಿಕ್ಕ ಮಯಸ್ಸಿನಿಂದ ತಾಯಿಯ ಬಾಯಲ್ಲಿ ಕೇಳಿದ್ದ , ಕೊಲ್ಲಿಯಿಂದ ಹಣ ದುಡಿದು ತರುವ ಆಕಾಂಕ್ಷೆಯಿಂದ ಕಾಣದ ದೇಶಕ್ಕೆ ಹೋದ ಮಗ ಏನಾದ !!!!???
ಇದೆಲ್ಲವನ್ನು ಲೇಖಕರು ಮನಮುಟ್ಟುವಂತೆ ಬರೆದಿದ್ದಾರೆ. ಕತೆಯ ಅಂತ್ಯ ಕೇಳುಗರಿಗೆ ಒಂದು ರೀತಿಯ ತಲ್ಲಣವನ್ನುಂಟು ಮಾಡುವುದು ಸತ್ಯ. ಮನಕರಗಿಸುವ, ಯಾರಿಗೂ ಈ ರೀತಿಯಾಗದಿರಲೆಂದು ಕೇಳಗರು ಬಯಸುವಂತೆ ಮಾಡುವ ಕತೆಯಾಗಿದೆ.