೧೯೬೦ರಲ್ಲಿ ೪೨ನೇ ಕನ್ನಡ ಸಾಹಿತ್ಯ ಸಮ್ಮೇಳನ ಮಣಿಪಾಲದಲ್ಲಿ ಜರುಗುತ್ತು. ಹಲವಾರು ಮಂದಿ ಹಿರಿಯ ಸಾಹಿತಿಗಳು ಆಗಮಿಸಿದ್ದರು. ಬಸವರಾಜ ಕಟ್ಟೀಮನಿಯವರ ಜೊತೆ ಬೀಚಿಯವರನ್ನು ಕಂಡಾಗಲಂತೂ ಅಭಿಮಾನಿಗಳಿಗೆ ಸಂತಸವೋ ಸಂತಸ. ಬಹಳಷ್ಟು ಜನರಿಗೆ ಬೀಚಿಯವರ ಭಾಷಣ ಕೇಳಲು ಆಸೆ. ಆದರೆ ಸಮ್ಮೇಳನಕ್ಕೆ ಅವರೇನೂ ಆಹ್ವಾನಿತರಾಗಿಲ್ಲದಿದ್ದುದರಿಂದ ಅವರ ಭಾಷಣಕ್ಕೆ ಅವಕಾಶವಿರಲಿಲ್ಲ.
ಆದರೂ ಅಭಿಮಾನಿಗಳ ಒತ್ತಡಕ್ಕೆ ಮಣಿದ ವ್ಯವಸ್ಥಾಪಕರು ಸಂಜೆ ಕವಿಗೋಷ್ಠಿಯ ನಂತರ, ಮನರಂಜನೆಯ ಕಾರ್ಯಕ್ರಮಕ್ಕೆ ಮುಂಚೆ ಒಂದು ಘಂಟೆಯ ಕಾಲಾವಕಾಶವನ್ನು ನೀಡಿ ಬೀಚಿ ಭಾಷಣ ಮಾಡಲು ಅನುವು ಮಾಡಿಕೊಟ್ಟರು.
ಆದರೆ ಬಸವರಾಜ ಕಟ್ಟೀಮನಿಯವರಿಗೆ ಇದು ಹಿಡಿಸಲಿಲ್ಲ. "ಅಲ್ಲಯ್ಯಾ ಬೀಚಿ, ನೀನೇನೂ ಅತಿಥಿಯಲ್ಲ, ಅಂಥಾದ್ದರಲ್ಲಿ ಭಾಷಣ ಮಾಡಲು ಏಕೆ ಒಪ್ಪಿಕೊಂಡೆ" ಎಂದರು. ಅದಕ್ಕೆ ಬೀಚಿಯವರು 'ಇಲ್ಲಿ ನನ್ನದೇನು ಸ್ವಾಭಿಮಾನ? ಅಭಿಮಾನಿಗಳು ಒತ್ತಡ ಮಾಡುತ್ತಿದ್ದಾರೆ, ಸಮ್ಮೇಳನದ ಅತಿಥಿ ಎಂದರೆ ಅದೇನು ದೊಡ್ಡ ಪದವಿಯೇ' ಎಂದು ಕಟ್ಟೀಮನಿಯವರನ್ನು ಸುಮ್ಮನಾಗಿಸಿ ಕವಿಗೋಷ್ಠಿ ಮುಗಿದ ನಂತರ ಭಾಷಣ ಮಾಡಲು ವೇದಿಕೆ ಏರಿದರು.
ಕವಿಗೋಷ್ಠಿಗೆ ಹಾಜರಿದ್ದವರೆಲ್ಲರೂ ಬೀಚಿಯವರ ಭಾಷಣವೆಂದು ಅಲ್ಲಿಯೇ ಕುಳಿತರು. ಹೊಸದಾಗಿ ಬಂದವರು ಸ್ಥಳ ಸಾಲದೆ ನಿಂತು ಆಲಿಸತೊಡಗಿದರು. ಅದರೆ ವೇದಿಕೆಯ ವೇಲಿದ್ದ ಕವಿಗಳೆಲ್ಲರೂ ಗೋಷ್ಠಿ ಮುಗಿಯಿತೆಂದು ಕೆಳಗಿಳಿದರು. ವೇದಿಕೆಯ ವೇಲೆ ಬೀಚಿಯವರೊಬ್ಬರೇ! ಮೈಕ್ ಹಿಡಿದು ಅತ್ತಿತ್ತ ನೋಡಿ, "ಖಾಲಿ ಕುರ್ಚಿಗಳೇ...." ಎಂದು ಭಾಷಣ ಪ್ರಾರಂಭಿಸಿದಾಗ ಕರತಾಡನದ ಸದ್ದು ಇಡೀ ಸಭಾಂಗಣವನ್ನೆಲ್ಲಾ ಆಕ್ರಮಿಸಿತು. ಹೀಗೆ ಆಕರ್ಷಿಸಿದ ಸಭೀಕರನ್ನು ಬೀಚಿ ಒಂದು ಘಂಟೆಗೂ ಹೆಚ್ಚು ನಗಿಸಿದರು.