ಬ್ರಿಟೀಷರ ವಿರುದ್ಧ ನೆಡೆಸುವ ಸ್ವಾತಂತ್ರ್ಯ ಹೋರಾಟದಲ್ಲಿ ಅನೇಕ ಜನ ಭಾಗವಹಿಸಿ ಸೆರೆಮನೆವಾಸ ಶಿಕ್ಷೆಯನ್ನು ಅನುಭವಿಸಿ, ಅನೇಕ ಚಳುವಳಿಗಳನ್ನು ಮಾಡಿ ಬ್ರಿಟೀಷರನ್ನು ಓಡಿಸುವಲ್ಲಿ ಪಾಲುದಾರರಾಗಿದ್ದಾರೆ. ಎಲ್ಲಾ ವರ್ಗದವರು ಭಾಗವಹಿಸಿದ್ದರೆಂಬುದು ಸಹಜವಾಗಿ ನಮಗೆ ತಿಳಿದಿರುವ ಸಂಗತಿ. ಆದರೆ ಎಲ್ಲಾ ಧರ್ಮದವರು? ಅದರಲ್ಲೂ ಕ್ರಿಶ್ಚಿಯನ್ನರಾದ ಬ್ರಿಟೀಷರ ವಿರುದ್ಧ ಭಾರತೀಯ ಕ್ರೈಸ್ತರು ಭಾಗವಹಿಸಿದ್ದರೇ ಎಂಬ ಪ್ರಶ್ನೇ ಡಿಸೋಜರವರಲ್ಲಿ ಸಹಜವಾಗಿ ಹುಟ್ಟಿ, ಅದರ ಜಾಡನ್ನು ಹಿಡಿದು ಹೋರಟಿದ್ದಾರೆ.
ಇದೇ ವಸ್ತುವನ್ನು ಈ ಕಾದಂಬರಿಯಲ್ಲಿ ಚಿತ್ರಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಒಂದು ಸ್ಥಳದಲ್ಲಿ ನೆಡೆಯುವ ಸ್ವಾತಂತ್ರ್ಯ ಹೋರಾಟದ ಕತೆಯಾಗಿದೆ. ಹುಟ್ಟಿನಿಂದ ಭಾರತೀಯನಾದರೂ ಇಲ್ಲಿಯ ಧರ್ಮ, ವರ್ಗಗಳಿಗೆ ಸೇರಿಕೊಂಡಿದ್ದರೂ ಸಹ ಕ್ರೈಸ್ತ ಧರ್ಮಕ್ಕೆ ಪರಿವರ್ತಿವಾಗಿ, ಅದರ ಕಟ್ಟು ಪಾಡು, ನೀತಿ ನಿಯಮಗಳಿಗೆ ಒಳಗಾಗಿ ಜೀವನ ಸಾಗಿಸುವ ಸಂಸಾರದಲ್ಲಿ, ಲೋಕಚಾರಗಳ ವಿಷಯಗಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲದಿದ್ದರೂ, ವ್ಯಕ್ತಿಯು ತನ್ನ ಸುತ್ತಲಿನ ವಾತಾವರಣದ ಪ್ರಭಾವಕ್ಕೆ ಒಳಗಾಗಿ ತನಗೆ ಗೊತ್ತಿಲ್ಲದೇ ಸ್ವಾತಂತ್ರ ಹೋರಾಟದಲ್ಲಿ ತೊಡಗುತ್ತಾನೆ. ಹೋರಾಟದಲ್ಲಿ ತೊಡಗಿದಾಗ ಅವನ ವಿಚಾರಗಳಲ್ಲಿ ಅನೇಕ ಬದಲಾವಣೆಗಳಾಗುತ್ತವೆ.
ಸಹಜವಾಗಿ ಅವನ ಸಮಾಜದಿಂದ ಎದುರಿಸುವ ತೊಂದರೆಗಳು, ಬೆಂಬಲಗಳು, ಗೌರವಗಳು ಇವೆಲ್ಲವುಗಳ ಜೊತೆಗೆ ಒಂದು ಪುಟ್ಟ ಪ್ರದೇಶದಲ್ಲಿನ ಸ್ವಾತಂತ್ರ ಹೋರಾಟದ ಚಟುವಟಿಕೆಗಳನ್ನು ಅತ್ಯಂತ ಮಾರ್ಮಿಕವಾಗಿ ಲೇಖಕರು ನಮ್ಮ ಮುಂದೆ ತೆರೆದಿಟ್ಟಿದ್ದಾರೆ. ಓದುಗನಿಗೆ ಹೋರಾಟದ ಬಿಸಿ ತಟ್ಟಿಸುವುದರ ಜೊತೆಗೆ, ನಂಬಬಹುದಾದ ಮತ್ತು ಒಪ್ಪಬಹುದಾದ ಅಂಶಗಳಿರುವ ಉತ್ತಮ ಪುಸ್ತಕವಾಗಿದೆ. ಇನ್ನಿತರ ಕಾದಂಬರಿಗಳಂತೆ ಇದರಲ್ಲೂ ಡಿಸೋಜರವರ ವಿಭಿನ್ನತೆಯನ್ನು ಗುರುತಿಸಬಹುದು.