ಲಂಕೇಶ ಬರೆದಿರುವ “ದಾಹ” ಕತೆಯು ಒಬ್ಬ ವ್ಯಕ್ತಿಯ ಅಂತರಾಳವನ್ನು ಹೊರಗೆಡವುತ್ತದೆ. ಅದರೊಂದಿಗೆ ಪಶ್ಚತ್ತಾಪದ ಪರಿತಾಪವಿದೆ. ಈ ಕತೆಯ ನಾಯಕ ಶಿಕ್ಷಣ ಇಲಾಖೆಯಲ್ಲಿ ಉನ್ನತ ಅಧಿಕಾರಿ. ತನ್ನ ಹೆಂಡತಿಯ ಸಾವಿಗೆ ಒಂದು ವಿಧದಲ್ಲಿ ನನ್ನ ವರ್ತನೆಯೇ ಕಾರಣವೇ? ಎಂದು ಮನಸ್ಸಿನ ಒಂದೆಡೆ ಎನಿಸಿದರೆ ಇನ್ನೊಂದೆಡೆ ಅದಕ್ಕೆ ವಿರುದ್ಧವಾಗಿ ಇರಲಾರದೆಂಬ ಭಾವನೆ. ಹೀಗೆ ಸಾವಿನ ಸುತ್ತ ಕತೆಯ ಅನಾವರಣವಾಗುತ್ತದೆ. ಅಧಿಕಾರವನ್ನು ತನ್ನ ಸ್ವಾರ್ಥಸಾಧನೆಗೆ ಬಳಸಿಕೊಳ್ಳವುದು. ಅದರ ಪರಿಣಾಮಕ್ಕೆ ತಾನೇ ಕಾರಣವೆಂದು ಮನಸ್ಸಿನಲ್ಲಿ ಅಪರಾಧಿ ಪ್ರಜ್ಞೆ ಕಾಡುತ್ತಿದ್ದು, ಅದನ್ನು ಹೊರಗೆಡವಲು ಹಾತೊರಿಯುವುದು. ಮನಸ್ಸಿನ ಅನೇಕ ರೀತಿಯ ದಾಹಗಳು ವ್ಯಕ್ತವಾಗುತ್ತವೆ. ಕಾಮದ ದಾಹ, ಅಭಿವ್ಯಕ್ತಿಯ ದಾಹ, ಪಾಪ ಪ್ರಜ್ಞೆ, ಪಶ್ಚತ್ತಾಪ ಹೀಗೆ ವ್ಯಕ್ತಿಯ ಭಾವನೆಗಳ ತಾಕಲಾಟವನ್ನು ತಿಳಿಸಿದ್ದಾರೆ.