ಧಾರವಾಡದ ಮುನಿಪಲ್ ಹಾಲ್ ನಲ್ಲಿ ಸಭೆ ಸೇರಿತ್ತು. ಕವಿ ಬೇಂದ್ರೆಯವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಭಾಷಣಕಾರರಾಗಿ ಬೀಚಿಯವರು ಆಗಮಿಸಿದ್ದರು. ಬೀಚಿಯವರು ತಮ್ಮದೇ ಆದ ಶೈಲಿಯಲ್ಲಿ ಹಾಸ್ಯಮಯವಾಗಿ ಭಾಷಣ ಪ್ರಾರಂಭಿಸಿದರು. “ಬೇಂದ್ರೆಯವರ ಕ್ಷಮೆ ಕೋರಿ ಒಂದು ಮಾತು ಹೇಳುವೆ. ‘ಲಂಡನ್ ಟವರ್ ಮೇಲೆ ನಿಂತು ಕಲ್ಲುಗಳನ್ನು ಎತ್ತ ತೂರಿದರೂ ಕೆಳಗೆ ಓಡಾಡುವ ಜನರಲ್ಲಿ ಕನಿಷ್ಟ ಒಬ್ಬನಿಗಾದರೂ ತಾಗುತ್ತದೆ’ ಎಂದು ಹೇಳಲಾಗುತ್ತದೆ. ಆದರೆ ಧಾರವಾಡದಲ್ಲಿ ಕವಿಗಳು ಇನ್ನೂ ಹೆಚ್ಚಾಗಿದ್ದಾರೆ. ಧಾರವಾಡದ ಗಾಂಧಿ ಚೌಕದಲ್ಲಿರುವ ಟವರ್ ಮೇಲೆ ನಿಂತು ಮೇಲಿನಿಂದ ಕಲ್ಲುಗಳನ್ನು ಒಗೆದರೆ ಕನಿಷ್ಟ ಮೂರು ಕವಿಗಳ ತಲೆ ಒಡೆಯುತ್ತದಂತೆ ಎಂದಾಗ ಇಡೀ ಸಭೆ ನಗೆಗಡಲಿನಲ್ಲಿ ಮುಳುಗಿತು.
ಬೆಂದ್ರೆಯವರು ತಮ್ಮ ಭಾಷಣದ ಸರದಿ ಬಂದಾಗ ಬೀಚಿಯವರ ಮಾತಿಗೆ ಉತ್ತರವಾಗಿ “ಧಾರವಾಡದ ಚೌಕದ ಟವರ್ ನಿಂದ ಕಲ್ಲು ಎಸೆದರೆ ಕನಿಷ್ಟ ಮೂರು ಕವಿಗಳ ತಲೆ ಒಡೆಯುತ್ತದೆ ಅಂತ ಬೀಚಿ ಹೇಳಿದರು. ಒಪ್ಪಿದೆ. ಆದರೆ ಕವಿಗಳದೇ ಯಾಕೆ ಒಡೆಯುತ್ತದೆ, ಬೇರೆಯವರ ತಲೆ ಏಕೆ ಒಡೆಯುವುದಿಲ್ಲ? ಕವಿಗಳಿಗೆ ತಲೆ ಇರೋದ್ರಿಂದ ಒಡೆದದ್ದು ಗೊತ್ತಾಗುತ್ತದೆ, ಇತರರದು ಗೊತ್ತಾಗುವುದಿಲ್ಲ” ಎಂದರು. ಸಭೆ ಮತ್ತೆ ನಗೆಗಡಲಿನಲ್ಲಿ ತೇಲಿತು.