`ಆವರಣ'ದ ನಂತರ ನಾನು ಓದುತ್ತಿರುವ ಐತಿಹಾಸಿಕ ಕಾದಂಬರಿ `ದುರ್ಗಾಸ್ತಮಾನ'. ತ.ರಾ.ಸು ಅವರ ಕೃತಿಗಳನ್ನು ಈ ಹಿಂದೆ ಓದಿರಲಿಲ್ಲ. ಮೊದಲಿಗೆ ಓದಿದ್ದು ಇದೇ. ಪ್ರಾರಂಭದಿಂದ ಅಂತ್ಯದವರೆಗೂ ಸರಳ ಭಾಷಾ ಶೈಲಿಯಿಂದ ಓದಗನನ್ನು ಅಂತ್ಯದವರೆಗೂ ಓಡಿಸಿಕೊಂಡೇ ಹೋಗುತ್ತದೆ. ನಾನು ಓದಿದ ಎಷ್ಟೋ ಕಾದಂಬರಿಗಳು ರೋಮಾಂಚನವನ್ನು, ಕುತೂಹಲವನ್ನು ಮೂಡಿಸಿ ಕತೆಯಲ್ಲಿ ಕತೆಯಾಗಿಸಿವೆ. ಆದರೆ ಇದನ್ನು ಓದುವಾಗ, ಮೂಲತಃ ಇತಿಹಾಸ ವಿದ್ಯಾರ್ಥಿ ನನಗೆ ನಾನು ಓದುತ್ತಿರುವುದು ಕಾದಂಬರಿಯೆಂದು ಅನಿಸಲಿಲ್ಲ. ಯಾವುದೇ ವ್ಯಕ್ತಿ ಚಿತ್ರದುರ್ಗ ಎಂದಾಕ್ಷಣ ನೆನಪಿಸಿಕೊಳ್ಳುವ ಗಂಡೆದೆಯ ಭಂಟ ಮದಕರಿ ನಾಯಕನ ಐತಿಹಾಸಿಕ ದಾಖಲೆಯನ್ನು ಕಣ್ಣ ಮುಂದೆ ಎಳೆ ಎಳೆಯಾಗಿ ಬಿಚ್ಚಿಟ್ಟಂತಾಯಿತು. ಇತಿಹಾಸ ಪುಸ್ತಕದಲ್ಲಿ ಓದಿದ್ದರೂ ಕೂಡ ಗಾಢವಾಗಿ ಪರಿಣಾಮ ಬೀರಿರಲಿಲ್ಲಿ. ಪಠ್ಯಾನುಸಾರ ಮುದ್ರಿತವಾದ ಚರಿತ್ರೆ ಕೇವಲ ಮೇಲೋರಗವನ್ನು ಉಣಿಸುತ್ತದೆಯೇ ಹೊರತು, ನಿಜವಾದ ಊಟದ ರುಚಿಯನ್ನು ಉಣಿಸುವುದಿಲ್ಲ. ಅಂಥಹ ಕೆಲಸವನ್ನು ತ.ರಾ.ಸು.ರವರು ಮಾಡಿದ್ದಾರೆ.
ಭಾವೋದ್ವೇಗಗಳಿಗೆ ಒಳಮಾಡುವ, ರೋಮ ರೋಮಗಳಲ್ಲೂ ಸಂಚಲನವನ್ನುಂಟು ಮಾಡುವ ದುಗರ್ಾಸ್ತಮಾನ ನಿಜಕ್ಕೂ ಮೇರು ಕೃತಿಯೇ ಆಗಿದೆ. ಮುಖ್ಯವಾಗಿ ನಾಯಕನಲ್ಲಿನ ದೊರೆಯ ಲಕ್ಷಣಗಳ ಜೊತೆಗೆ ಅವನಲ್ಲಿರುವ ಮನುಷ್ಯತ್ವವೂ ಹೊರ ಹೊಮ್ಮುತ್ತದೆ. ಇದೇ ಗುಣ ದುರ್ಗದಲ್ಲಿನ ಜನರಲ್ಲಿದ್ದು, ಧರ್ಮದ ಹಿನ್ನಲೆಯಲ್ಲಿ ನ್ಯಾಯ, ನಿಷ್ಟೆ, ನೀತಿಗಳನ್ನು ಮರೆತ ಜನರಿಂದಲೇ ದುರ್ಗದ ಅಂತ್ಯವಾದುದ್ದು, ದುರ್ಗದ ದೌರ್ಭಾಗ್ಯವೇ ಹೌದಾಗಿದೆ.
ಮದಕರಿ ನಾಯಕನ ಕೊನೆಯ ದಿನಗಳು ಅಥವಾ ದುರ್ಗದ ಜನತೆಯ ಕೊನೆಯ ದಿನಗಳನ್ನು ಅತ್ಯದ್ಭುತವಾಗಿ ಚಿತ್ರಿಸಿದ್ದಾರೆ. ಓದುತ್ತಾ ಹೋದಂತೆ, ನಮಗೆ ಗೊತ್ತಿಲ್ಲದೇ ನಮ್ಮ ಕಣ್ಣು ತೇವವಾಗಿ ಅವರ ದುಃಖದಲ್ಲೂ ನಮ್ಮನ್ನು ಭಾಗಿಗಳನ್ನಾಗಿಸಿಕೊಳ್ಳುವುದು ಈ ಕಾದಂಬರಿಯ ವಿಶೇಷ ಮತ್ತು ಲೇಖಕರ ಯಶಸ್ಸಾಗಿದೆ. ಇದನ್ನು ಕೇವಲ ಒಂದು ಕಾದಂಬರಿಯ ದೃಷ್ಠಿಯಿಂದ ಪರಿಗಣಿಸಿದರೆ ಅತ್ಯದ್ಬುತ. ಆದರೆ ಇದು ಮೂಲತಃ ಐತಿಹಾಸಿಕ ಕಾದಂಬರಿಯಾಗಿರುವುದರಿಂದ ಇದರಲ್ಲಿ ಬರುವ ಘಟನೆಗಳು ಇತಿಹಾಸಕ್ಕೆ ಎಷ್ಟು ಹತ್ತಿರವಾಗಿವೆಯೆಂದು ಪರಿಶೀಲಿಸುವುದು ಅತ್ಯಗತ್ಯ.
ಯದ್ಧಗಳಿಗೆ ಸಂಬಂಧಿಸಿದಂತೆ ಕೆಲವು ವ್ಯತ್ಯಾಸಗಳು ಮತ್ತು ಸಾಮ್ಯತೆಗಳು ಕಂಡುಬರುತ್ತವೆ. ಪ್ರಮುಖವಾಗಿ ವ್ಯತ್ಯಾಸವನ್ನು ಗಮನಿಸಿದರೆ, ಇತಿಹಾಸದ ಪ್ರಕಾರ ನಿಜಗಲ್ಲು ಕೋಟೆಯನ್ನು ವಶಪಡಿಸಿಕೊಳ್ಳಲು ಹೈದರನಿಗೆ ಸಹಾಯ ಮಾಡುತ್ತಾನೆ. ಆದರೆ, ಕಾದಂಬರಿಯಲ್ಲಿ ನಿಜಗಲ್ಲು ಕೋಟೆಯನ್ನು ಮರಾಠರಿಗೆ ಗೆದ್ದು ಕೊಡುತ್ತಾನೆಂದಿದೆ. ಆದೇ ರೀತಿ ದೊಡ್ಡ ಮದಕರಿ ನಾಯಕನೂ ಮದಕರಿನಾಯಕನೊಂದಿಗೆ ಪಟ್ಟಾಭಿಷಿಕ್ತನಾಗುತ್ತಾನೆ. ಆದರೆ ಇದರ ಉಲ್ಲೇಖವಿಲ್ಲ.
ಇನ್ನೊಂದು ಪ್ರಮುಖ ಅಂಶವೆಂದರೆ, ಮದಕರಿ ನಾಯಕನಂತೆಯೇ ತನ್ನ ವೀರತ್ವದಿಂದ ಖ್ಯಾತಿಯನ್ನು ಪಡೆದಿರುವ ಓಬವ್ವ, ಇವಳ ಕತೆಯು ಇಲ್ಲಿ ಸ್ವಲ್ಪ ಭಿನ್ನವಾಗಿದೆ. ಹೈದರಾಲಿ ಸೈನಿಕರನ್ನು ಹೊಡೆದುರುಳಿಸಿದ ಯುದ್ದಾಂತ್ಯದಲ್ಲಿ ಓಬವ್ವ ಮರಣ ಹೊಂದುತ್ತಾಳೆಂದು ಇತಿಹಾಸ ಹೇಳುತ್ತದೆ. ಆದರೆ ಲೇಖಕರು ಕಾದಂಬರಿಯಲ್ಲಿ ಆಕೆಯನ್ನು ಬದುಕಿ ಆಕೆಯ ಪಾತ್ರಕ್ಕೆ ಅಮರತ್ವ ನೀಡಿದ್ದಾರೆ. ಅದೇ ರೀತಿ ಮದಕರಿ ನಾಯಕನ ಅಂತ್ಯ. ನಾಯಕ ಶತೃ ವಶವಾಗಿ ಶ್ರೀರಂಗಪಟ್ಟಣದ ಸೆರೆಮನೆಯಲ್ಲಿ ಕೊನೆಯುಸಿರೆಳೆಯುತ್ತಾನೆಂದು ಇತಿಹಾಸ ತಿಳಿಸಿದರೆ, ಇಲ್ಲಿ ಯುದ್ಧ ಭೂಮಿಯಲ್ಲೇ ವೀರ ಸ್ವರ್ಗವನ್ನು ಪಡೆಯುತ್ತಾನೆ.
ಈ ಅಲ್ಪ ವ್ಯತ್ಯಾಸನ್ನು ಪಾತ್ರಕ್ಕನುಸಾರನಾಗಿ ಚಿತ್ರಿಸಿರಬಹುದಾಗಿದೆ. ಮೂಲತಃ ವೀರಾವೇಶ ಗುಣಗಳನ್ನು ಹೊಂದಿದ್ದ ಮದಕರಿನಾಯಕನನ್ನು ಸೆರೆಯಾಗಿಸದೇ ವೀರಾವೇಶದಿಂದ ಹೋರಾಡಿ ಮರಣ ಹೊಂದುವಂತೆ ಮಾಡಿರುವುದು ಪಾತ್ರಕ್ಕೆ ಶೋಭಾಯಮಾನವಾಗಿದೆ. ಪ್ರತಿಯೊಂದು ಪಾತ್ರದಲ್ಲಿನ ಮನೋಭಿಲಾಷೆಯನ್ನು ಓದುಗನ ಮನಕ್ಕೆ ನಾಟುವಂತೆ ಚಿತ್ರಿಸಿದ್ದಾರೆ. ಎಲ್ಲೂ ಕೂಡ ಪಾತ್ರವು ಟೊಳ್ಳಾಗಿ ಬಿಂಬಿತವಾಗದೇ ಇರುವುದು ವಿಶೇಷವಾಗಿದೆ.