ಹವ್ಯಕ ಬ್ರಾಹ್ಮಣ ಸಂಪ್ರದಾಯದ ಶ್ರೀಮತಿ ನಂಜಕ್ಕ ಮತ್ತು ವಕೀಲ್ ಶ್ರೀ ಎನ್ ಎಸ್ ರಾಮಯ್ಯನವರ ಕೊನೆಯ ಮಗಳಾಗಿ ೧೯೧೨ ಮಾರ್ಚ್ ೫ ರಂದು ಮಡಿಕೇರಿಯಲ್ಲಿ ಜನಸಿದರು. ಬಾಲ್ಯದಲ್ಲೇ ತಾಯಿಯನ್ನು ಕಳೆದುಕೊಂಡು ತಂದೆಯ ನೆರಳಲ್ಲಿ ಬೆಳೆದಳು. ವಿದ್ಯಾಭ್ಯಾಸ ಮಡಿಕೇರಿಯ ಸೆಂಟ್ರಲ್ ಹೈಸ್ಕೂಲಿನಲ್ಲಿ. ಓದಿದ್ದು ಎಸ್.ಎಸ್.ಎಲ್.ಸಿ.ಯವರೆಗೆ. ೧೯೨೫ರಲ್ಲಿ ಶುಂಠಿಕೊಪ್ಪದ ಶ್ರೀ ಬಿ ಟಿ ಕೃಷ್ಣಮೂರ್ತಿಯವರನ್ನು ವಿವಾಹವಾಗಿ ಶ್ರೀಮತಿ ಬಿ ಟಿ ಜಿ ಕೃಷ್ಣ ಎಂದು ನಾಮಾಂಕಿತರಾದರು. ೧೯೩೧ರಲ್ಲಿ ಮಗ ವಸಂತ ನಿಗೆ ಜನ್ಮ ನೀಡಿದರು. ನೇರ ಮತ್ತು ಸ್ವಷ್ಟ ನುಡಿಯ ಗೌರಮ್ಮ ರಾಜಕೀಯ ಹಿನ್ನಲೆಯ ಕುಟುಂಬ ಮತ್ತು ಆಸಕ್ತಿಯಿಂದ ನ್ಯಾಷನಲ್ ಕಾಂಗ್ರೆಸ್ ಪರ ಕೆಲಸ ಮಾಡಿದ್ದರು. ೧೯೩೫ ರಲ್ಲಿ ಗಾಂಧೀಜಿ ಮಡಿಕೇರಿಗೆ ಭೇಟಿ ನೀಡಿದ್ದಾಗ, ಅವರನ್ನು ಮನೆಗೆ ಬರಮಾಡಿಕೊಂಡು, ಹರಿಜನೋದ್ಧಾರಕ್ಕೆ ತಮ್ಮ ಒಡವೆಗಳನ್ನು ದಾನ ನೀಡಿ, ಇನ್ನು ಮುಂದೆ ಕರಿಮಣಿ ಸರ, ಓಲೆ ಮತ್ತು ನತ್ತು ಬಿಟ್ಟರೆ ಬೇರೆ ಒಡವೆಯನ್ನು ಧರಿಸುವುದಿಲ್ಲವೆಂದು ಗಾಂಧೀಜಿಯವರ ಎದುರು ಪ್ರತಿಜ್ಞೆ ಮಾಡಿ ಅದರಂತೆ ನೆಡೆದುಕೊಂಡ ದಿಟ್ಟ ಮಹಿಳೆ ಗೌರಮ್ಮನವರಿಗೆ ಆಗ ಕೇವಲ ೨೧ ವರ್ಷ. ಈ ಘಟನೆಯನ್ನು ೧೯೩೪ ಮಾರ್ಚ ೨ ರ ಹರಿಜನ ಪತ್ರಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಇದರೊಂದಿಗೆ ಅನೇಕ ಸಾಹಿತ್ಯ ವ್ಯಕ್ತಿಗಳ ನಿಕಟ ಒಡನಾಟವಿತ್ತು. ಹಿಂದಿ, ಇಂಗ್ಲೀಷ್, ಕನ್ನಡದಲ್ಲಿ ಕೃತಿ ರಚಿಸುತ್ತಿದ್ದ ಪದ್ಮಾವತಿ ರಸ್ತೊಗಿ ಇವರ ಆತ್ಮೀಯ ಗೆಳತಿಯಾಗಿದ್ದರು. ಆರ್ ಕಲ್ಯಾಣಮ್ಮ, ಗಾಯಕಿ ಶಕುಂತಲಾಚಾರ್ ಒಡನಾಟವಿತ್ತು. ಬೇಂದ್ರೆ, ಮಾಸ್ತಿ, ರಾಜರತ್ನಂ, ದ. ಬಾ. ಕುಲಕರ್ಣಿ ಮೊದಲಾದವರು ಇವರ ಮನೆಗೆ ಬಂದು ಹೊಗುತ್ತಿದ್ದ ಸಾಹಿತ್ಯ ದಿಗ್ಗಜರು. ೧೯೩೧ ರಿಂದ ೧೯೩೯ರ ಅವಧಿಯಲ್ಲಿ ಅವರು ಬರೆದ ಕತೆಗಳು ೨೧. ಮನುವಿನ ರಾಣಿ , ಅಪರಾಧಿ ಯಾರು? ವಾಣಿಯ ಸಮಸ್ಯೆ ಇವರ ಪ್ರಸಿದ್ಧ ಕತೆಗಳು.
ಟೆನ್ನಿಸ್ ಮತ್ತು ಈಜು ಇವರ ಹವ್ಯಾಸಗಳಾಗಿದ್ದವು . ೧೯೩೯ ಏಪ್ರಿಲ್ ೧೩ ರಂದು ಈಜಲು ಹೋಗ ಗೌರಮ್ಮ ಸುಳಿಗೆ ಸಿಕ್ಕಿ ತಮ್ಮ ೨೭ ನೇ ವಯಸ್ಸಿನಲ್ಲಿ ಅಕಾಲಿಕ ಮರಣಕ್ಕೆ ತುತ್ತಾದರು.
'ದ. ರಾ. ಬೇಂದ್ರೆ'ಯವರ 'ಕಂಬನಿ' ಪುಸ್ತಕದಲ್ಲಿ ಗೌರಮ್ಮನವರನ್ನು ಕುರಿತು ಒಂದು ಕವನ ಬರೆದಿದ್ದಾರೆ.
ತಂಗಿ ಗೌರಮ್ಮ
ಜಲದೇವತೆ ವನದೇವತೆ ಒಂದೆಡೆಯಲಿ ಸೇರಿ
ಬಿನದಿಸುತಿಹ ಹೊಳೆಮಡುವಿಗೆ ನೀನೀಸಲು ಹಾರಿ
ತಾಯೊಡಲನು ಕೂಸಾಟಕೆ ತಾಯ್ಮಡಲಿಗೆ ಬೀರಿ
ತೀರಲು, ಜಡವಾಗಳೆ ಕಾವೇರಿಯೆ ತಂಪೇರಿ?
ನೆನೆದರೆಯೇ ನಾ ನಡುಗುವೆ ಇದು ಆದುದೆಂತೋ?
ಎಲ್ಲಿಂದೀ ಎಳೆಜೀವಕೆ ಸಾವೆಂಬುದು ಬಂತೋ?
ಪತಿಯೊಲವಿನ ಸುತನೊಲವಿನ ಕೆಳೆಯೊಲವಿನ ತಂತು
ಜಗ್ಗದೆ ನಿನ್ನನು ಮೇಲಕೆ ನೀ ಮುಳುಗಿದೆಯೆಂತು?
ಗೌರವಸ್ತ್ರ ಗೌರಸ್ಮಿತ ಗೌರವದೀ ಗೌರೀ
ಮಿಂಚಿದಳದೋ ಬಾನಂಚಿಗೆ ಕಾವೇರಿಯ ಕುವರಿ !
ಬೆಳದಿಂಗಳೆ ಕರುವಿಟ್ಟಿತೊ ಈ ನಿರ್ಮಲಮೂರ್ತಿ
ಮೊದಲಿಲ್ಲಿಯೆ ಕುಡಿಬಿಟ್ಟಿತೊ ಮುಗುಳಿಟ್ಟಿತೊ ಕೀರ್ತಿ?
ಉಷೆ ಸುರಿಸುವ ಇಬ್ಬನಿಯೊಲು ಕರುಣೆಯ ಕಂಬನಿಯ
ಬಾಳ್ ಬಳ್ಳಿಗೆ ಬೀರಿದೆ ನೀ ಮಧು ಹಾಸ್ಯದ ಹನಿಯ
-ಅಂಬಿಕಾತನಯದತ್ತ.
ಓದಿರುವ ಕತೆಗಳು:
ವಾಣಿಯ ಸಮಸ್ಯೆ
ಒಂದು ಪುಟ್ಟ ಚಿತ್ರ