ಆಧುನಿಕ ಕನ್ನಡ ಸಾಹಿತ್ಯದ ಹಿರಿಯ ಲೇಖಕರಾದ ಡಾ. ಗೊರೂರು ರಾಮಸ್ವಾಮಿ ಅಯ್ಯಂಗಾರ್ ರವರು ೧೯೦೪ ರಲ್ಲಿ ಹಾಸನ ಜಿಲ್ಲೆಯ ಗೊರೂರಿನಲ್ಲಿ ಜನಿಸಿದರು. ಹಾಸನದ ಸರ್ಕಾರಿ ಪ್ರೌಢ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ ಗಾಂಧೀಜಿಯವರ ಅಸಹಕಾರ ಚಳುವಳಿಯಿಂದ ಇವರು ಪ್ರಭಾವಿತರಾಗಿ ತಮ್ಮ ಓದಿಗೆ ವಿದಾಯ ಹೇಳಿ ಗಾಂಧೀಜಿಯವರ ಆಶ್ರಮ ಸೇರಿದರು ‘ಆಂಧ್ರ ಪತ್ರಿಕೆ, ಭಾರತಿ ಪತ್ರಿಕೆಗಳ ಲೇಖಕರಾಗಿ ಲೋಕಮಿತ್ರ ಪತ್ರಿಕೆಯ ಉಪಸಂಪಾದಕರಾಗಿ ಕೆಲಸ ನಿರ್ವಹಿಸಿದರು.ಅನಂತರ ಕೆಂಗೇರಿಯ ಗುರುಕುಲಾಶ್ರಮದಲ್ಲಿ ದಲಿತೋದ್ದಾರ ಕಾರ್ಯದಲ್ಲಿ ತೊಡಗಿದರು. ಬೆಂಗಳೂರಿನ ಅಖಿಲ ಭಾರತ ಚರಕ ಸಂಘದ ಸಂಚಾಲಕರೂ ಆದರು ೧೯೩೩ ರಲ್ಲಿ ತಮ್ಮ ಗ್ರಾಮದಲ್ಲಿ ಮೈಸೂರು ಗ್ರಾಮಸೇವಾಸಂಘವನ್ನು ಸ್ಥಾಪಿಸಿದರು. ೧೯೪೨ ರಲ್ಲಿ ಚಲೇಜಾವ್ ಚಳುವಳಿಯಲ್ಲಿ ಭಾಗವಹಿಸಿ, ಸೆರೆಮನೆ ವಾಸವನ್ನು ಅನುಭವಿಸಿದರು. ಸ್ವಾತಂತ್ರ್ಯಾನಂತರ ಪ್ರಜಾಸರ್ಕಾರ ಸ್ಥಾಪನೆಗಾಗಿ ಮೈಸೂರಿನಲ್ಲಿ ನಡೆದ ಚಳುವಳಿಯಲ್ಲಿ ಭಾಗವಹಿಸಿದರು. ರಾಜ್ಯ ವಿಧಾನ ಸಭಾ ಸದಸ್ಯರೂ ಆಗಿದ್ದರು. ಕರ್ನಾಟಕದ ಏಕೀಕರಣದಲ್ಲೂ ಸಕ್ರಿಯವಾದ ಪಾತ್ರ ವಹಿಸಿದ್ದರು. ೧೯೯೧ ಸೆಪ್ಟಂಬರ್ ೮ ರಂದು ನಿಧನರಾದರು.