ಗೃಹಭಂಗದ ಮುಂದುವರಿದ ಭಾಗವಾಗಿ ಅನ್ವೇಷಣೆಯನ್ನು ಬರೆದಿದ್ದಾರೆ. ಆದರೆ ಸಂಪೂರ್ಣವಾಗಿ ಇಡೀ ಕತೆಯನ್ನು ಮುಂದುವರಸದೇ, ಗೈಹಭಂಗದಲ್ಲಿನ ಚೆನ್ನಿಗರಾಯರ ಕೊನೆಯ ಮಗ ವಿಶ್ವನಾಥನ ಸುತ್ತ ಕಥ ಸುತ್ತುವರಿಯುತ್ತಾ ಹೋಗುತ್ತದೆ. ಈ ಕಾದಂಬರಿಯ ವಿಶೇಷವೆಂದರೆ, ನಾಯಕನ ಪಾತ್ರ ಎಲ್ಲೂ ಕೂಡ ಓದುಗರ ಎದುರಿಗೆ ನಿಲ್ಲುವುದಿಲ್ಲ. ಬದಲಾಗಿ ಬೇರೆ ಬೇರೆ ಪಾತ್ರಗಳ ಮೂಲಕ ನಾಯಕನ ಜೀವನದ ಒಂದೊಂದೇ ಮಜುಲು ಬಿಚ್ಚಿಡಲಾರಂಭಿಸುತ್ತದೆ.
ಪ್ರಾರಂಭದಿಂದಲೂ ಒಬ್ಬರಲ್ಲ ಒಬ್ಬರು ಒಂದಲ್ಲಾ ಒಂದು ಕಾರಣಕ್ಕೆ ವಿಶ್ವನಾಥನ ಅನ್ವೇಷಣೆಯಲ್ಲಿ ತೊಡಗುತ್ತಾರೆ. ಎಳೆಯ ಮಗುವಾಗಿದ್ದಾಗ ಮೊಮ್ಮಗನ್ನು ಕಳೆದುಕೊಂಡ ಅಜ್ಜ ತನ್ನ ಅಂತ್ಯ ಕಾಲದಲ್ಲಿ ತನ್ನಲ್ಲಿರುವ ಹಣವನ್ನು ನೀಡಲು ಹುಡುಕಾಟ ಪ್ರಾರಂಭಿಸುತ್ತಾನೆ. ಅವನು ಇದ್ದ ಪ್ರತಿಯೊಂದು ಊರಿಗೆ ಹೋದಾಗಲೆಲ್ಲಾ ತನ್ನ ಮೊಮ್ಮಗನ ಚರಿತ್ರೆಯನ್ನು ತಿಳಿಯುತ್ತಾ ಓದುಗರಿಗೆ ತಿಳಿಸುತ್ತಾ ಹೋಗುತ್ತಾನೆ. ನಾಯಕನ 27/29ರ ವಯಸ್ಸಿನವರೆಗೆ ನೆಡದ ಘಟನಾವಳಿಗಳನ್ನು ಹೀಗೆಯೇ ತಿಳಿಸುತ್ತಾ ಹೋಗುತ್ತಾರೆ. ಕಾದಂಬರಿಯಲ್ಲಿ ಬರುವ ಪ್ರತಿಯೊಂದು ಪಾತ್ರವೂ ತಮ್ಮ ಜೀವನವನ್ನು ಮೆಲುಕು ಹಾಕುವಾಗ ವಿಶ್ವನಾಥನ ಒಂದೊಂದು ಮಜಲುಗಳು ತೆರೆದುಕೊಳ್ಳುತ್ತವೆ.
ಇಲ್ಲಿ ನಾಯಕನು ಅತೀ ಚಿಕ್ಕ ವಯಸ್ಸಿನಲ್ಲೇ ಅನಿರೀಕ್ಷಿತವಾಗಿ, ಅನಿವಾರ್ಯವಾಗಿ ಕೆಲವು ಅನುಭವಗಳನ್ನು ಪಡೆದು, ಕ್ಷಣಿಕ, ಆಕಸ್ಮಿಕ ಅನುಭವಗಳಾಚೆ ಜೀವನದ ಹುಡುಕಾಟದಲ್ಲಿ ತೊಡಗುತ್ತಾನೆ. ಬೌದ್ಧಿಕ ಉನ್ನತತೆಯ ವ್ಯಕ್ತಿಯೂ ಕೂಡ ಇವನ ಗಾಂಭೀರ್ಯ, ಛಲ ಮತ್ತು ಪ್ರೌಢ ಭಾವನೆಗಳನ್ನು ತನ್ನ ಜೀವನದೊಂದಿಗೆ ಹೋಲಿಕೆ ಮಾಡಿಕೊಂಡು ಪ್ರಶ್ನಿಸಿಕೊಳ್ಳುವಂತಾಗುತ್ತದೆ. ಒಬ್ಬ ಹೆಣ್ಣನ್ನು ಸಮಾಜಕ್ಕೆ ಗೊತ್ತಿರುವ ಹಾಗೆಯೇ ಸುಖಕ್ಕೆ ಮಾತ್ರ ಹೆಂಡತಿಯ ರೀತಿ ನೆಡೆಸಿಕೊಳ್ಳುವಾಗ ಯಾವುದೇ ಜಾತಿ, ಮಡಿ, ಮೈಲಿಗೆ ಎದುರಾಗುವುದಿಲ್ಲ.
ಬದಲಾಗಿ ಊಟದ ವಿಷಯದಲ್ಲಿ ದುತ್ತನೆ ನಿಲ್ಲುತ್ತದೆ ಯಾಕೆ? ಇಂಥ ಚಿಕ್ಕ ವಿಷಯವನ್ನು ಪ್ರಶ್ನಿಸಿಕೊಳ್ಳುವಂತೆ ನಾಯಕನ ಪಾತ್ರ ಮಾಡುತ್ತದೆ. ಭವ ಬಂಧನಗಳ ಜಂಜಾಟಗಳಿಂದ ಮುಕ್ತಿಯನ್ನು ಪಡೆಯಲು ಜನನಿಬಿಡ ಪ್ರದೇಶದಿಂದ ದೂರವಾಗಿ ಸಂನ್ಯಾಸತ್ವ ಪಾಲಿಸಲು ಎಲ್ಲವನ್ನೂ ತೊರೆದು ಬೆಟ್ಟದ ತುದಿಯ್ಲಿ ನೆಲಸಿರುವ ಸಂನ್ಯಾಸ ಸಂಗವನ್ನು ಮಾಡಲು ಹೊರಟ ನಾಯಕನು ಸಲಿಂಗಕಾಮಕ್ಕೆ ತುತ್ತಾಗಬೇಕಾಗುತ್ತದೆ. ಇದರಿಂದ ಬೇಸತ್ತು ಹೇಳದೇ ನಾಪತ್ತೆಯಾದವನ ಅನ್ವೇಷಣೆ ಸಂನ್ಯಾಸಿಯಿಂದ ನೆಡೆಯುತ್ತದೆ.
ನಾಯಕನ ಜೀವನ ತಿಳಿಯುವ ಸಂದರ್ಭದಲ್ಲಿ ಅವನಿಂದ ಎದುರಾದ ಒಂದೇ ಒಂದು ಸವಾಲಿಗೆ ನಾನು ಸೋಲುವುದಿಲ್ಲ ಎಂದು ಧೃಢ ಚಿತ್ತನಾದ ಸಂನ್ಯಾಸಿ ಅಲ್ಪ ಸಮಯದಲ್ಲಿ ಶರಣಾಗತಗುತ್ತಾನೆ. ಕೆಸರಿನಲ್ಲಿ ಕಮಲವಿರುತ್ತದೆ ಎಂಬ ಸತ್ಯವನ್ನು ತಿಳಿಯದೇ ಕೆಸರಿನಲ್ಲಿ ರಾಡಿಯಾಗಿರುವ ನಾಯಕನ ಜೀವನವನ್ನು ಕಲ್ಪಿಸಿಕೊಂಡು ಅಸಹ್ಯಪಟ್ಟುಕೊಳ್ಳುತ್ತಾನೆ. ಕೌತುಕದಿಂದ ಅವನಿದ್ದ ಸುತ್ತಲ ಜನರಿಂದ ವಿಷಯವನ್ನು ತಿಳಿದು ಆಶ್ಚರ್ಯಚಕಿತನಾಗಿ, ತನ್ನನ್ನೇ ತಾನು ಪ್ರಶ್ನಿಸಿಕೊಳ್ಳುವಂತಾಗುತ್ತಾನೆ. ಸಂನ್ಯಾಸಿ ಯಾರು? ಎಂದು.
ಮದುವೆಗೆ ಒಪ್ಪಿಸಿ ಸಂಸಾರಿಯನ್ನಾಗಿ ಮಾಡಿದ ಹೆಡ್ಮಾಸ್ಟ್ರು, ಅವನ ಡೈರಿಯನ್ನು ಓದಿ, ತಮ್ಮ ಜೀವನದ ಅನ್ವೇಷಣೆಯಲ್ಲಿ ತೊಡಗುತ್ತಾರೆ. ಮದುವೆಯಾಗಿ ಕೆಲವು ತಿಂಗಳು ಸಂಸಾರವನ್ನು ಮಾಡಿ, ಮಾವನ ಸುಳ್ಳು ಮಾತಿನ ಸತ್ಯವನ್ನು ತಿಳಿದು ಹೆಂಡತಿಯನ್ನು ಚಿಕ್ಕ ಮಗುವನ್ನು ತೊರೆದು ದುಡಿದು ವಿದ್ಯಾಭ್ಯಾಸ ಸಂಪಾದಿಸಿ, ತಾನು ಮಾಡಿದ ತಪ್ಪಿನ ಅರಿವಾಗಿ, ಹೆಂಡತಿಯ ಬಳಿ ಭಿನ್ನವಿಸಿಕೊಳ್ಳಲು ಬರುವ ವೇಳೆಗಾಗಲೇ, ಹೆಂಡತಿ ಜೀವನದ ಅಂತ್ಯವನ್ನು ಕಾಣಲು ಪ್ರಯತ್ನಿಸಿ, ಅದರಲ್ಲಿ ಮಗುವನ್ನು ಬಲಿಕೊಟ್ಟು, ತಂದೆಯ ಸುಳ್ಳಿನಿಂದ ಸಂಸಾರ ಒಡೆದರೂ, ತಾನು, ಮಗುವೂ ಕಾರಣವೇ? ಎಂದು ಪ್ರಶ್ನಿಸಿಕೊಂಡು ಅದಕ್ಕಾಗಿ ಉತ್ತರವನ್ನು ಕಂಡುಕೊಂಡು, ತನ್ನದೇ ಆದ ಜೀವನದ ಅನ್ವೇಷಣೆಯಲ್ಲಿ ಮುಂದುವರಿದಿರುತ್ತಾಳೆ.
ಹೀಗೆ ಪ್ರತಿಯೊಬ್ಬರೂ ಒಂದಿಲ್ಲೊಂದು ಕಾರಣಕ್ಕೆ ಅವನನ್ನು ಅನ್ವೇಷಿಸುತ್ತಾರೆ. ಆದರೆ ನಾಯಕನು ತನ್ನ ಅನ್ವೇಷಣೆಯಲ್ಲೇ ತೊಡಗಿರುತ್ತಾನೆ. ಅವನು ಯಾರ ಕೈಗೂ ಸಿಗದೇ ಅವನನ್ನು ಪ್ರವೇಶಿಸಿದ ಪ್ರತಿಯೊಬ್ಬರ ಜೀವನವನ್ನು ಅವರು ಅನ್ವೇಷಿಸಿಕೊಳ್ಳುವಂತೆ ಮಾಡುತ್ತಾನೆ.