ಚದುರಂಗರವರ ನಾಲ್ಕು ಕಾದಂಬರಿಗಳಲ್ಲಿ “ಹೆಜ್ಜಾಲ”ವೂ ಒಂದಾಗಿದೆ. ಕಾಲೂರುನ ಜೀವನದ ಸುತ್ತ ಕಾದಂಬರಿಯು ಸಾಗುತ್ತದೆ. ನಾವು ಸಹಜವಾಗಿ ನೋಡಿರುವ ಮತ್ತು ಕೇಳಿರುವ ಗ್ರಾಮೀಣ ಜೀವನದ ನೈಜ ಚಿತ್ರಣಗಳನ್ನು ಅಷ್ಟೇ ಕೂಲಂಕುಷವಾಗಿ ಚಿತ್ರಿಸಿದ್ದಾರೆ. ಜಗಳೂರಲ್ಲಿ ಕಂಡುಬರುವ ದಾಯಾದಿಗಳ ಜಗಳವಾಗಿರಬಹುದು, ಕ್ಷುಲ್ಲಕ ಕಾರಣವನ್ನು ಮುದ್ದಿಟ್ಟುಕೊಂಡು ರಾದ್ದಾಂತ ಮಾಡಿ ಆ ದ್ವೇಷವನ್ನೆೇ ಸಾಯುವವರೆಗೆ ಸಾಧಿಸುವುದು. ಜಾತ್ರೆಯ ಗಲಾಟೆಗಳು, ಹೀಗೆ ಅನೇಕ ವಿಪಯಗಳು ಇಂದಿಗೂ ಪ್ರಸ್ತುತ.
ಕಾಲೂರನು ತನ್ನ ಜೀವನದಲ್ಲಿ ಅನುಭವಿಸುವ ಕಷ್ಟ ಕಾರ್ಪಣ್ಯಗಳು ಒಬ್ಬನು ಒಂದೇ ಜೀವನದಲ್ಲಿ ಅನುಭವಿಸಿದ್ದೇ? ಅದು ಸಾಧ್ಯವೇ? ಕಷ್ಟಗಳು ಬಂದವರಿಗೇ ಬರತ್ತವೆಯೇ ಎಂಬ ಮಾತನ್ನು ಇಂತಹವರ ಜೀವನವನ್ನು ನೋಡಿ ಹೇಳಲಾಗಿದೆಯೇ ಎಂಬ ಪ್ರಶ್ನೇಗಳು ಮನಸ್ಸಿನಲ್ಲಿ ಮೂಡುತ್ತವೆ. ಕಾಲೂರನ ಪಾತ್ರವನ್ನು ಎಲ್ಲಾ ಕಷ್ಟಗಳನ್ನು ಸ್ಪೀಕರಿಸುವ ಸಹನಾಮೂರ್ತಿಯಂತೆ ಚಿತ್ರಿಸಿದ್ದಾರೆ. ಆದಾಗ್ಯೂ ಇದು ಸತ್ಯ ಕೂಡ. ಇಂದಿಗೂ ಅವತ್ತಿನ ಊಟವನ್ನೇ ಅಂದೇ ದುಡಿದು ತಿನ್ನುವವರ ಬದುಕೇ ಇದು!
ಕಾಫಿ ತೋಟದಲ್ಲಿ ಸೇರುವ ಕೆಲಸಗಾರರನ್ನು ಅಲ್ಲಿನ ತೋಟದವರು ಅನೇಕ ರೀತಿಯಲ್ಲಿ ತಮ್ಮ ಹಿಡಿತದಲ್ಲಿಟ್ಟುಕೊಳ್ಳವುದು ನಿಜಕ್ಕೂ ಸತ್ಯವಾಗಿದೆ. ಅನೇಕ ರೀತಿಯ ಕತೆಗಳನ್ನು ಅಲ್ಲಿಗೆ ಹೋಗಿ ಅನುಭವಿಸಿದ ಕೆಲವು ವ್ಯಕ್ತಿಗಳಲ್ಲಿ ನಾನು ಸಹ ಕೇಳಿದ್ದೇನೆ. ಇದು ದುಡಿಯುವ ಕೂಲಿಕಾರ್ಮಿಕರ ದುರಂತವೇ ಸರಿ.
ಗ್ರಾಮ್ಯ ಭಾಷೆಯ ಪದಗಳ ಬಳಕೆ ಪ್ರಾರಂಭದಲ್ಲಿ ಸ್ವಲ್ಪ ಹಿನ್ನಡೆ ಉಂಟು ಮಾಡಿದರೂ ನಂತರ ಕುತೂಹಲದೊಂದಿಗೆ ಸಾಗುವ ಕತೆ ಓದುಗನನ್ನು ತನ್ನಲ್ಲಿಯೇ ಹಿಡಿದಿಟ್ಟುಕೊಳ್ಳುತ್ತದೆ. ಒಮ್ಮೆಯಾದರೂ ಓದ ಬಹುದಾದ ಅಪರೂಪದ ಕಾದಂಬರಿಯಾಗಿದೆ.