ನಾ.ಡಿಸೋಜರವರು ಬರೆದಿರುವ ಈ ಕಿರು ಕಾದಂಬರಿ ವಾಸ್ತವತೆಯನ್ನು ತೆರೆದಿಟ್ಟಿದೆ. ಮಾಲಿಕನ ಕೈಕೆಳಗೆ ದುಡಿಯುವ ರೈತರು ಬಡತನದಿಂದ, ಕಷ್ಟಕಾರ್ಪಣ್ಯಗಳಿಂದ ಮಾಲಿಕನಿಗೇ ವಂಶಪಾರಂಪರ್ಯವಾಗಿ ಜೀತದಾಳುಗಳಾಗಿ, ತಮ್ಮ ಸ್ವಾತಂತ್ರ್ಯತೆಯನ್ನು ಕಳೆದುಕೊಂಡು, ಅವನ ಮಾತಿಗೆ ಉಸಿರೆತ್ತದೇ, ಹಗಲಿರುಳು ದುಡಿದರೂ ತೀರಿಸಲಾಗದ ಸಾಲದ ಬಾಬ್ತನ್ನು ತೀರಿಸಲು ಋಣಿಯಾಗಿ ತಾನು, ತನ್ನ ಹೆಂಡತಿ, ಮಕ್ಕಳುಗಳನ್ನು ಆಳುಗಳಾಗಿ ದುಡಿಸಿ, ತಾನು ದುಡಿಯುವುದು, ಅವರು ಹೇಳಿದ ಮಾತಿಗೆ ಎದುರಾಡದೇ, ಹೇಳಿದ ಕೆಲಸ ಗೊತ್ತಿಲ್ಲದಿದ್ದರೂ ಮಾಡುವ, ಕೊಟ್ಟೂಷ್ಡು ಅನ್ನ, ನೀಡಿದಷ್ಡು ಹಣ ಪಡೆದು, ತನ್ನಲ್ಲಿರುವ ನೋವು, ಸಂಕಟ, ಹತಾಶೆ, ಕೋಪ, ದುಃಖವನ್ನು ಮರೆಯಲು ಮಾಲಿಕರಿಂದಲೇ ಸ್ಥಾಪಿತವಾದಂತಹ ಕುಡಿತದ ಅಂಗಡಿಯ ಮೊರೆ ಹೋಗುವುದು, ಮನುಷ್ಯ ತನ್ನ ಕಾರ್ಯ ಸಾಧನೆಗಾಗಿ ಕ್ಷುಲ್ಲಕ ಆಶೆ ಆಮುಷಗಳನ್ನು ಹೊಡ್ಡಿ, ಕೆಟ್ಟದಾರಿಯಲ್ಲಿ ನೆಡೆಸುವುದು, ತುಳವ ದಾರಿಯಿಂದ ಹಿಂತಿರುಗಿ ಬರದೇ ಅದನ್ನೇ ಒಂದು ಚಟವಾಗಿ ಮೈಗೂಡಿಸಿಕೊಂಡು ಮುಂದುವರೆಯುವುದು. ತಮ್ಮ ಮೇಲೆ ನೆಡೆಯುವ ಅನ್ಯಾಯ, ದಬ್ಬಾಳಿಕೆ, ಆಕ್ರಮಣಗಳನ್ನು ನೋಡಿಯೂ ಪ್ರತಿಭಟಿಸಲಾಗದೇ ಅನುಭವಿಸುವುದು.
ಇದೆಲ್ಲವು ಅತ್ಯಂತ ಮಾರ್ಮಿಕವಾಗಿ ತೆರೆದುಕೊಳ್ಳುವುದು ತಿರುಗೋಡಿನ ರೈತಮಕ್ಕಳಲ್ಲಿ. ವಾಸ್ತವವಾಗಿ ಈ ಚಿತ್ರಣ ನಮ್ಮ ಪ್ರಸ್ಥುತ ಸಮಾಜದಿಂದ ಕಣ್ಮರೆಯಾಗಿದ್ದರೂ ಈ ಘಟನೆಗಳು ನಡೆದೇ ಇಲ್ಲವೆಂದೂ ಹೇಳಲೂ ಸಾಧ್ಯವಿಲ್ಲ. ಎಷ್ಟೋ ಇಂಥ ಸಂಗತಿಗಳು ನೆಡೆದಿರುವುದು ಕಟುಸತ್ಯ. ಜೀತದಾಳು ಪದ್ಧತಿ ನಿರ್ಮೂಲನ ಕಾಯ್ದೆ, ಬಾಲಕಾರ್ಮಿಕ ಕಾಯ್ದೆ, ಸಮಾನ ಕೆಲಸಕ್ಕೆ ಸಮಾನ ವೇತನ, ಇವೇ ಮೊದಲಾದವುಗಳ ಮೂಲಕ , ಮುಖ್ಯವಾಗಿ ಶಿಕ್ಷಣದ ಮೂಲಕ ಹೋಗಲಾಡಿಸಲಾಗಿದ್ದರೂ, ಎಲ್ಲೋ ಒಂದು ಕಡೆ, ಕಂಡೂ ಕಾಣದಂತೆ, ಅಲ್ಲಲ್ಲಿ ಈಗಲೂ ಕಂಡು ಬರುವುದನ್ನು ನೋಡುತ್ತೇವೆ. ಒಟ್ಟಾರೆಯಾಗಿ ರೈತರು ಅನುಭವಿಸುವ ಎಲ್ಲವನ್ನೂ ಅತಿರೇಕಗೊಳಿಸದೇ ವಾಸ್ತವತೆಗೆ ಹತ್ತಿರವಾಗಿ ಚಿಕ್ಕದಾಗಿ ಚೊಕ್ಕವಾಗಿ ಮೂಢಿಸಿದ್ದಾರೆ.