ಕೆ. ಬೈರಪ್ಪನವರ ಕಾದಂಬರಿಯನ್ನು ಓದಿದ್ದು ಇದೇ ಮೊದಲು. ಆರಂಭದಿಂದ ಕುತೂಹಲದಿಂದ ಪ್ರಾರಂಭವಾಗುವ ಕತೆ ನಂತರ ತನ್ನ ಜಾಡನ್ನೇ ಬದಲಿಸುತ್ತದೆ. ಓದುಗರ ಊಹೆಗೂ ನಿಲುಕದೇ ಕತೆಯು ಮುಂದೋಡುತ್ತದೆ. ಓದುತ್ತಾ ಓದುತ್ತಾ ಹೋದ ಹಾಗೆ ಕತೆ ತುಂಬಾ ಜಾಳಾಗಿ ಹೊರಹೊಮ್ಮುತ್ತದೆ.
ಗ್ರಾಮ ಪಂಜಾಯ್ತಿಯಲ್ಲಿ ನೆಡೆಯುವ ಸಂಗತಿಗಳು, ದುಡ್ಡಿರುವ ಜನರ ಪ್ರಭಾವಗಳ ಮಧ್ಯೆ, ನ್ಯಾಯಕ್ಕೂ, ಸತ್ಯಕ್ಕೂ ಜಯ ದೊರೆಯುವ ಅಂಶಗಳ ಜೊತೆಗೆ, ಆಧುನಿಕ ಗ್ರಾಮೀಣ ಯುವಕರ ಸಂಘಟನೆ, ಜನರಲ್ಲಿ ಇರುವ ರಾಜಕೀಯ ಜಾಗರೂಕತೆಯನ್ನು ಕೂಲಂಕುಷವಾಗಿ ತಿಳಿಸಿದ್ದಾರೆ. ಈ ಕತೆಯಲ್ಲಿ ನೆಡೆಯುವ ಹಾಗೆ, ಜನರು ಹಣ, ಆಮಿಷಗಳಿಗೆ ಒಳಗಾಗದೇ, ಸತ್ಯ, ನೈತಿಕತೆಗೆ ಬೆಲೆಕೊಟ್ಟು ಅದರಂತೆ ನಮ್ಮ ನಾಯಕರುಗಳನ್ನು ಆಯ್ಕೆ ಮಾಡಿದರೆ, ಪ್ರಜಾಪ್ರಭುತ್ವ ವ್ಯವಸ್ಥೆಗೆ ನಿಜವಾದ ಅರ್ಥ ದೊರೆಯುತ್ತದೆ. ಆದರೆ, ಸಧ್ಯಕ್ಕೆ ಇದು ಕೇವಲ ಕಾದಂಬರಿ, ಕತೆಗಳಲ್ಲಿ ಮಾತ್ರ ಸಾಧ್ಯವೆಂಬುದೇ ವಿಷಾದನೀಯ ಸಂಗತಿಯಾಗಿದೆ.
ಪ್ರಾರಂಭದಿಂದ ಕೊನೆಯವರೆಗೂ ಗ್ರಾಮೀಣ ಜನಜೀವನದ ರಾಜಕೀಯ ವಸ್ತುಸ್ಥಿತಿಯನ್ನು ತಿಳಿಸಿದ್ದಾರೆ. ಅರ್ಧ ಕತೆಯ ನಂತರ ಕತೆಯ ದಿಕ್ಕು ಓದುಗನಿಗೆ ಸುಲಭವಾಗಿ ಗೊತ್ತಾಗುತ್ತದೆ. ತುಂಬಾ ನೀರಸವಾದ ಕಾದಂಬರಿಯಾಗಿದ್ದು, ಸಮಯವಿದ್ದರೆ, ಬೇರೆ ಓದಲು ಯಾವುದೇ ಒಳ್ಳೆಯ ಪುಸ್ತಕವಿಲ್ಲದಾಗ ಓದಬಹುದಾದ ಸಾಧಾರಣವಾದ ಕಾದಂಬರಿಯಾಗಿದೆ.