ಅನೇಕ ಮಕ್ಕಳ ಕತೆಗಳು, ಕವನ, ಲೇಖನಗಳನ್ನು ಬರೆದಿರುವ ಶಾರದಾ ಹೆಮ್ಮಿಗೆಯವರು ಬರೆದಿರುವ ಏಕೈಕ ಕಾದಂಬರಿ ಇದಾಗಿದೆ. ತುಂಬಾ ಸರಳವಾಗಿ, ಒಬ್ಬ ವ್ಯಕ್ತಿಯ ಸಂಪೂರ್ಣ ಬದುಕಿನ ಚಿತ್ರಣವನ್ನು ಇದರಲ್ಲಿ ಮೂಢಿಸಿದ್ದಾರೆ. ಗಂಡನನ್ನು ಕಳೆದು ಕೊಂಡು, ಮನೆಯಲ್ಲಿ ಯಾರ ಹಿರಿಯರ ಆಸರೆಯಿಲ್ಲದೇ, ಅದರಲ್ಲೂ ಹಳ್ಳಿಗಾಡಿನ ಪ್ರದೇಶದಲ್ಲಿ ದಿಟ್ಟತನದಿಂದ ಬದುಕು ಸಾಗಿಸುವ ಮಹಿಳೆಯ ಜೀವನವನ್ನು ಸಂಪೂರ್ಣವಾಗಿ ತೆರೆದಿಡುತ್ತದೆ. ಕೇಶಮಂಡನ ಮಾಡಿಸಿಕೊಳ್ಳುವ ಸಂಪ್ರದಾಯವನ್ನು ಸಂಪೂರ್ಣವಾಗಿ ತಿರಸ್ಕರಿಸಿ, ಬೆಳೆದು ಮಕ್ಕಳ ಮದುವೆಯನ್ನು ಸರಾಗವಾಗಿ ಮಾಡುವುದಷ್ಟೇ ಅಲ್ಲದೇ, ಅನಿವಾರ್ಯವಾಗಿ ಜೀವನದಲ್ಲಿ ಮಾಡುವ ತಪ್ಪುಗಳನ್ನು ಸಹ ತೋರಿಸಿದ್ದಾರೆ (ಸತ್ತ ವ್ಯಕ್ತಿಯ ಮೇಲಿನ ಒಡವೆ ಮತ್ತು ಹಣವನ್ನು ಕದಿಯುವುದು). ಇದರಿಂದ ನಮಗೆ ಕತೆಯ ವ್ಯಕ್ತಿಯ ಬದುಕಿಗೂ ನಮ್ಮ ಸುತ್ತಲಿನಲ್ಲಿ ನೆಡೆಯುವ ಅನೇಕ ಬದುಕಿಗೂ ಅಷ್ಟೇನೂ ವ್ಯತ್ಯಾಯವೆನಿಸುವುದಿಲ್ಲ. ತೀರಾ ಆದರ್ಶತೆಯಿಂದ ಹೊರಗುಳಿಯುತ್ತದೆ. ಓದುಗರೂ ಖಂಡಿಸುವಂತಹ ಸಾಮಾನ್ಯ ಮನ:ಸ್ಥಿತಿಯ ವ್ಯಕ್ತಿತ್ವ ಇದರಲ್ಲಿದೆ. ಪಟ್ಟಣ ಪ್ರದೇಶದಲ್ಲಿ ಹೋಗಿಬಂದು ಮಾಡುವವರಿಗೆ ಸಾಮಾನ್ಯವಾಗಿ ಹುಟ್ಟುವ ಬಯಕೆಗಳು ನಾಯಕಿ ತಂಗಮ್ಮನಿಗೂ ಹುಟ್ಟಿ ಅವುಗಳನ್ನು ಸಹ ಈಡೇರಿಸಿಕೊಳ್ಳುತ್ತಾಳೆ. ಹಳ್ಳಿಗಾಡಿನಲ್ಲಿ ಇರುವ ಚಿತ್ರಣವೇ ಕತೆಯಲ್ಲಿಯೂ ಚಿತ್ರಿತವಾಗಿದೆ. ಯಾರಾದರೂ ಪದೇ ಪದೇ ಮನೆಗೆ ಬಂದರೆ ಸಂಶಯಿಸುವುದು. ಸಂಪ್ರದಾಯವನ್ನು ಮುರಿದರೆಂದು ಹೀಯಾಳಿಸುವುದು ಇಂತಹ ಸನ್ನಿವೇಶಗಳಿವೆ. ತಂಗಮ್ಮನ ಇನ್ನೊಂದು ವಿಶೇಷವೆಂದರೆ, ಕಷ್ಟವೆನ್ನುವವರಿಗೆ ಮರುಗುವುದು. ಇದು ಸರಿ ಆದರೆ ಕಳ್ಳತನ ಎಷ್ಟು ಸರಿ ಎಂದೆನಿಸುತ್ತದೆ. ಒಂದರ್ಥದಲ್ಲಿ ಸರಿ ಕೂಡ ಎಂದೆನಿಸುತ್ತದೆ. ಕಲ್ಲು ದೇವರ ಮೇಲಿರುವ ಒಡವೆಯಿಂದ ಇನ್ನೋಬ್ಬರಿಗೆ ಉಪಕಾರವಾಗುವುದಾದರೆ ಯಾಕೆ ಬಳಸಿಕೊಳ್ಳಬಾರದು?! ಇದು ಈ ಸಂದರ್ಭಕ್ಕೆ ಉಚಿತಾಗಿದ್ದು, ಇದೇ ಕೆಲಸ ಬೇರೊಂದು ಸಂದರ್ಭಕ್ಕೆ ಅನುಚಿತವಾಗಿದೆ.
ಸಮಯ ಸಿಕ್ಕಾಗ ಒಮ್ಮೆ ಓದಬಹುದಾದ ಕಿರು ಕಾದಂಬರಿಯಾಗಿದೆ.