ಕಾವ್ಯಕ್ಕೆ ಪ್ರಸಿದ್ದರಾದ ಅಡಿಗರ ಕಾದಂಬರಿಯನ್ನು ಓದುವ ಕುತೂಹಲದಿಂದಲೇ 'ಆಕಾಶ ದೀಪ'ವನ್ನು ಕೈಗೆತ್ತಿಕೊಂಡೆ. ಕಾವ್ಯಮಯ ವಾಕ್ಯಗಳಿಂದ ಕೂಡಿದ ಪದಪುಂಜಗಳು ನಮ್ಮನ್ನು ಕಾವ್ಯಲೋಕಕ್ಕೆ ಕರೆದೋಯ್ಯುತ್ತವೆ. ಸನ್ನಿವೇಶ ಕತೆಯೆಡೆ ಗಮನ ಕೊಡುವ ಕಾದಂಬರಿಗಳನ್ನೇ ಓದಿದವರಿಗೆ ಪ್ರಾರಂಭದಲ್ಲಿ ಅವರ ವರ್ಣನೆ, ಪ್ರಾಕೃತಿಕ ವಿಶ್ಲೇಷಣೆ ‘ಅಯ್ಯೋ ಏನು ಅರ್ಥವಾಗ್ತಿಲ್ಲ’ ಎಂಬ ನುಡಿಗಳನ್ನು ಹೊರಡಿಸುವುದು ಸಹಜ.
ಮಲೆನಾಡಿನ ಗ್ರಾಮೀಣ ಬದುಕಿನ ಮಕ್ಕಳ ಜೀವನವನ್ನು ತೆರೆದಿಡುತ್ತಾ, ಸ್ವಾತಂತ್ರ್ಯ ಚಳುವಳಿಯ ಒಳ-ಹೊರವುಗಳನ್ನು ಬಿಚ್ಚಿಡುತ್ತದೆ. ಆಪ್ತ ಗೆಳೆಯರು ಯಾವುದೋ ಒಂದು ವಿಷಯಕ್ಕೆ ಸ್ನೇಹವನ್ನು ಕಡಿದುಕೊಂಡು ತೊಳಲಾಡುವ ಸನ್ನಿವೇಶ ಪ್ರತಿಯೊಬ್ಬರ ಜೀವನವನ್ನು ನೆನಪಿಸುತ್ತದೆ. ಅದರೆ ಅಂತ್ಯ ಬೇರೆಯಾಗಿರಬಹುದಷ್ಟೆ. ಬಾಲ್ಯ ಸಹಜ ಹುಮ್ಮಸ್ಸಿನಲ್ಲಿ ಕಾಣುವುದು ಮತ್ತು ಹೇಳುವುದನ್ನೇ ಸತ್ಯವೆಂದು ನಂಬುವುದು. ಅದರ ಒಳನೋಟದ ಕೊರತೆ. ಹದಿವಯಸ್ಸಿನಲ್ಲಿ ಸಹಜವಾಗಿ ಕಾಣುವ ತಾಕಲಾಟಗಳನ್ನು ಇಲ್ಲಿ ಅಡಿಗರು ಸಮುದ್ರದ ಅಲೆಗಳಿಗೆ ಹೋಲಿಸಿದ್ದಾರೆಸುತ್ತದೆ. ಯಾವಾಗ ಹೇಗೆ ಉಬ್ಬರ ಇಳಿತವನ್ನು ಕಾಣುತ್ತದೆಂದು ಹೇಳಲಾಗದ ಅಲೆಗಳೋಪಾದಿಯಲ್ಲಿ ಮನಸ್ಸು ಕೂಡ ಎಲ್ಲೆ ಇಲ್ಲದೆ ಅರ್ಭಟಿಸುತ್ತದೆ ಮತ್ತು ಶಾಂತವಾಗುತ್ತದೆ.
ಆಗಾಗ ಬಂದು ಮನಸ್ಸಿನ ಮೇಲೆ ಅಧಿಪತ್ಯ ಸಾಧಿಸುತ್ತಿದ್ದ ಒಂದಂಶವನ್ನು ನಾಯಕ ಕೊನೆಯಲ್ಲಿ ಕಿತ್ತೆಸೆಯುತ್ತಾನೆ. ಅದನ್ನು ಮನಸ್ಸಿನಿಂದ ಓಡಿಸುವ ಪ್ರಯತ್ನಗನ್ನು ಅತ್ಯಂತ ಸಾಂಕೇತಿಕವಾಗಿ ಬಿಂಬಿಸಿದ್ದಾರೆ. ಕತೆಯ ಒಂದೊಂದು ಸನ್ನಿವೇಶಗಳು ನಾಯಕ ದಿಕ್ಕನ್ನು ಊಹಿಸುವಂತೆ ಮಾಡುತ್ತದೆ. ಆದರೆ ಕತೆ ಓದುಗರ ಊಹೆಯನ್ನು ಬಿಟ್ಟು ಸಹಜವಾಗಿ, ವಾಸ್ತವತೆಯ ದಿಕ್ಕನ್ನು ತೋರಿಸುತ್ತದೆ. ಸ್ವಾತಂತ್ರ ಚಳುವಳಿಗೆ ದುಮುಕಿದ ನಾಯಕ ದೊಡ್ಡ ಸ್ವಾತಂತ್ರ ಹೋರಾಟಗಾರ ಅಥವಾ ಸಮಾಜದ ಕಣ್ಣಿಗೆ ಕಾಣಿಸದೇ ಕ್ರಾಂತಿಕಾರಿ ಚಟುವಟಿಕೆಗಳನ್ನು ಕೈಗೊಳ್ಳಬಹುದೆಂದೆಣಿಸುತ್ತವೆ. ಆದರೆ ಇಲ್ಲಿ ನೆಡೆಯುವುದು ಮಾನಸಿಕ ಸುಪ್ತ ಬಂಧನ ಬಿಡುಗಡೆಯ ಹೋರಾಟ. ಒಬ್ಬ ವ್ಯಕ್ತಿಯ ಬಾಲ್ಯ ಮತ್ತು ಯೌವನದ ಪ್ರಾರಂಭ ಜೀವನವನ್ನು ತಿಳಿಸಿ ಕೊಡುವ ಕತೆಯನ್ನು ಒಳಗೊಂಡಿರುವ, ಒಮ್ಮೆ ಓದಬಹುದಾದ ಕಾದಂಬರಿ 'ಆಕಾಶ ದೀಪ'ವಾಗಿದೆ.