ಅನೇಕ ಕತೆ, ಕಾದಂಬರಿ ಓದಿದ್ದ ನಾನು ಕವನಗಳನ್ನು ಹೆಚ್ಚಾಗಿ ಓದಿರಲಿಲ್ಲ. ಪುಸ್ತಕಗಳ ಮಧ್ಯದಲ್ಲಿದ್ದ ಕುವೆಂಪುರವರ ಅನುತ್ತರಾ, ನವಿಲು, ಕಾಜಾಣ ಮೊದಲಾದವುಗಳು ಆಗಾಗಾ ಕಣ್ಣಿಗೆ ಬೀಳುತ್ತಿದ್ದವು. ಅವರ 'ನೆನಪಿನ ದೋಣಿಯಲ್ಲಿ' ವಿಹರಿಸುವಾಗ ಅನೇಕ ಪದ್ಯಗಳನ್ನು ಓದಿದ್ದ ನನಗೆ ಅಷ್ಟೇನೂ ಕುತೂಹಲವಿರಲಿಲ್ಲ. ಒಂದು ದಿನ ಇದ್ದಕ್ಕಿದ್ದ ಹಾಗೆ ಕವನ ಓದೋಣವೆನಿಸಿ, ಇದ್ದ ಕೆಲವು ಪುಸ್ತಕಗಳಲ್ಲಿ ' ಅನುತ್ತರಾ'ಳನ್ನು ಕೈಗೆತ್ತಿಕೊಂಡೆ. ಪ್ರೇಮ ಕವನ ಸಂಕಲನವಾಗಿದ್ದ ಇದರಲ್ಲಿ ಮೊದಲಿಗೆ ಅನುತ್ತರಾ ಕವನ ಓದಿದೆ. ಸಾಮಾನ್ಯವಾಗಿ ಕವಿ ತನ್ನ ಪ್ರೇಯಸಿ ಅಥವಾ ಹೆಂಡತಿ ಕುರಿತಂತೆ ವ್ಯಕ್ತಪಡಿಸುವ ಭಾವನೆ , ತೋರುವ ಪೀತಿ ಕಾಣಿಸಿತು.
ಮುಂದೆ 'ಸ್ವರ್ಗದ್ವಾರದಿ ಯಕ್ಷಪ್ರಶ್ನೆ' ಆರಂಭಿಸಿದೆ. ನನ್ನಲ್ಲೂ ಅನೇಕ ಪ್ರಶ್ನೆ ಮತ್ತು ಕುತೂಹಲವನ್ನೇಳಿಸಿಕೊಂಡು ಮುಂದೋಡಿತು. ಸ್ವರ್ಗದ ಮುಚ್ಚಿದ ಬಾಗಿಲ ಮುಂದೆ ನಿಂತ ದ್ವಾರಪಾಲಕನಿಗೆ ಇವರು ಯಾವ ಹೆಸರನ್ನು ಹೇಳಬಹುದೆಂದೇ ಓದಲಾರಂಭಿಸಿದೆ. ಅವರಿಗೆ ಇರುವುದು ಎರಡು ಹೆಸರು ಅದನ್ನು ಹೇಳಿದರು. ಅವರಿಗೆ ಸಿಕ್ಕ ಬಿರುದು ಬಾವಲಿಗಳನ್ನೆಲ್ಲಾ ಪಟ್ಟಿ ಮಾಡಿ ಹೇಳಿದರು. ಆದರೂ ಬಾಗಿಲು ತೆರೆಯಲಿಲ್ಲ. ಇನ್ನೂ ಯಾವ ಹೆಸರು ಹೇಳಬಹುದೆಂದು ಕೌತುಕದಿಂದ ಧಾವಿಸಿದಾಗ ಸಿಕ್ಕ ಉತ್ತರ ಅವರ ಮಾನಸಿಕ ಒಲವಿನ ನಿಜನಾಮ.
ಲೌಕಿಕ ಪ್ರಪಂಚದಲ್ಲಿ, ಬಾಹ್ಯವಾಗಿ ಅವರು ಎಷ್ಟೋ ಪಾತ್ರಗಳನ್ನು, ಸ್ಥಾನಗಳನ್ನು ನಿರ್ವಹಿಸಿದ್ದರೂ, ಎಷ್ಟೇ ಹೆಸರು, ಬಿರುದು, ಸನ್ಮಾನಗಳನ್ನು ಪಡೆದಿದ್ದರೂ ಕೂಡ, ತಮ್ಮ ಅಂತರ್ಯದಲ್ಲಿ ಅವರು ಒಲವಿನ ಪತಿ ಎಂಬುದನ್ನು ಸೊಗಸಾಗಿ ಕುತೂಹಲಕರವಾಗಿ ತಮ್ಮ ಈ ಕವನದಲ್ಲಿ ಮೂಢಿಸಿದ್ದಾರೆ. ಕವಿ ಇದರಲ್ಲಿ ತನ್ನ ಕನ್ನಡ ಪ್ರೇಮವನ್ನು ವ್ಯಕ್ತಗೊಳಿಸಿ, ತನ್ನೊಳಗಿದ್ದ ಎಲ್ಲಾ ಅಹಂಕಾರವನ್ನು ಕಿತ್ತೊಗೆದು ಮುಕ್ತರಾಗುತ್ತಾರೆ.