ಡಿಸೋಜರವರ ಕೆಲವು ಕಾದಂಬರಿಗಳಲ್ಲಿ ಇತ್ತಿಚೀಗೆ ಓದಿದ್ದು ಚಿನ್ನದ ಮೊಟ್ಟೆ. ಸಾಮಾನ್ಯ ವಸ್ತು ವಿಷಯವನ್ನು ಒಳಗೊಂಡಿರುವ ಕಾದಂಬರಿ. ಇರುವ ಎಲ್ಲರೂ ಒಂದೇ. ಪ್ರಕೃತಿ ಕೊಟ್ಟಿರುವುದು ನನಗೆ ಮಾತ್ರ ಸೀಮಿತವಲ್ಲ. ಅದನ್ನು ನನ್ನ ಸುತ್ತಲಿನ ಜನರೂ ಅನುಭವಿಸಬಹುದು ಇದಕ್ಕೆ ಪ್ರತಿಫಲಪೇಕ್ಷೆ ಸಲ್ಲದು ಎಂಬ ಮನೋಧರ್ಮವನ್ನು ಅವರಿಗೆ ಗೊತ್ತಿಲ್ಲದೇ ತಮ್ಮಲ್ಲಿ ಮೈಗೂಡಿಸಿಕೊಂಡಿರುವವರು ಹಳ್ಳಿಯ ಮುಗ್ದಜನರು. ಇವರ ನಡುವೆ ಪ್ರವೇಶಿಸುವ ನಗರವಾಸಿ ವ್ಯಾಪಾರಿ ಮನೋವ್ಯಕ್ತಿ. ಎಲ್ಲವನ್ನೂ ಹಣದಿಂದನೇ ತೂಗಿ ಕಳೆದು, ತನ್ನ ಕಾರ್ಯಸಾಧನೆಗೆ ಮುಂದಾಗುತ್ತಾನೆ. ಪ್ರಾರಂಚಿಕ ವ್ಯವಹಾರವನ್ನು ಅರಿಯದ ಜನರು ಸುಲಭವಾಗಿ ಮತ್ತು ಹೆಚ್ಚಿಗೆ ದೊರೆಯುವ ಹಣದ ಬೆನ್ನತ್ತಿ ತಾವು ಮಾಡುವ ನಿತ್ಯಕಾಯಕ ಕರ್ಮಗಳನ್ನು ಬದಿಗೊತ್ತಿ ದುಮಾರ್ಗವಿಡಿಯುತ್ತಾರೆ. ಕೆಲರು ಅತೀ ಆಶೆಗೆ ಒಳಗಾಗಿ ಬಂದದ್ದನ್ನು ಬಿಟ್ಟು ಮುಗಿದು ಹೋದ ಕೆಲಸಕ್ಕೆ ಕೊರುಗುತ್ತಾ ಇರುವುದನ್ನೂ ಅನುಭವಿಸಲಾಗದೇ ದುಃಖಿಸುತ್ತಲೇ ಆಕಸ್ಮಿಕವಾಗಿ ಅಂತ್ಯವಾಗುತ್ತಾರೆ.
ನಗರದಲ್ಲಿರುವ ಚಿನ್ನದ ಮೊಟ್ಟೆಯಿಡುವ ಕೋಳಿ ನೇರವಾಗಿ ಭಾಗಿಯಾಗಿರದಿದ್ದರೂ ತನ್ನ ಕೆಲಸಗಾರ ಮಾಡುವ ಎಲ್ಲಾ ಘಟನೆಗಳಿಗೆ ನೇರವಾಗಿ ಹೊಣೆಯಾಗಿ ಅದರ ಫಲವನ್ನು ಸಹ ಅನುಭವಿಸುತ್ತದೆ. ಮಾರುಕಟ್ಟೆಯಲ್ಲಿ ದೊರೆಯುವುದಕ್ಕಿಂತ ಅತೀ ಕಡಿಮೆ ಬೆಲೆಗೆ ದೊರೆಯುವ ವಸ್ತುಗಳನ್ನು ಪಡೆಯಲು ಮುಂದಾಗಿ ತಾವು ಕಟ್ಟಿದ ಕನಸಿನ ಗೋಪುರದ ಕಲ್ಪನೆಯನ್ನು ವಾಸ್ತವಾಗಿ ಅನುಭವಿಸಲು ಸಾಧ್ಯವಾಗುವುದಿಲ್ಲ. ಮಳೆಯನ್ನೇ ನೆಚ್ಚಿಕೊಂಡು ಬೆಳೆ ಬೆಳೆಯುವುದೇ ತಮ್ಮ ಕಾಯಕವೆಂದು ನಿತ್ಯನಿರಂತರವಾಗಿ ಬಂದದ್ದರಲ್ಲೇ ತೃಪ್ತಿಯನ್ನು ಕಾಣುತ್ತಿದ್ದ ಜನರ ಜೀವನ ಶೈಲಿಯಲ್ಲಿ ಆಗುವ ಬದಲಾವಣೆಗಳನ್ನು, ಒಬ್ಬ ವ್ಯಕ್ತಿ ಹಣಗಳಿಸಲು, ಉನ್ನತ ಸ್ಥಾನಮಾನಗಳ ಬೆನ್ನಟ್ಟಿ ಹೊರಟು ತನ್ನ ಕಣ್ಣೆದುರು ವ್ಯಭಿಚಾರ ನೆಡೆದರೂ ಸಹಿಸಿಕೊಳ್ಳುದು ಮನುಷ್ಯನ ಇನ್ನೊಂದು ಮುಖವನ್ನು ಪರಿಚಯಿಸುತ್ತದೆ.
ಅತ್ಯಂತ ಸರಳವಾಗಿ, ಸಹಜ ಭಾಷಾ ಶೈಲಿಯಲ್ಲಿ ಇದೆಲ್ಲವನ್ನು ಡಿಸೋಜರವರು ಇದರಲ್ಲಿ ತಿಳಿಸಿದ್ದಾರೆ. ಸುಮ್ಮನೆ ಸಮಯ ಸಿಕ್ಕಾಗ ಓದಬಹುದಾದ ಸಾಮಾನ್ಯ ಕಾದಂಬರಿಯಾಗಿದೆ.