ಕನ್ನಡ ರಂಗಭೂಮಿಯ ಮೇಲೆ ಬೆಳಕು ಚೆಲ್ಲುವ ಈ ಕೃತಿಯಾಗಿದೆ. ಇದು ಸುಧೀರ್ಘ ಕಾದಂಬರಿಯಾಗಿದ್ದು, ಸಿನಿಮಾ ಪ್ರಪಂಚ ತೆರೆದುಕೊಳ್ಳುವ ಮುಂಚಿನ ನಾಟಕ ರಂಗಭೂಮಿಯನ್ನು ಪರಿಚಯಿಸುತ್ತದೆ. ಅದರೊಂದಿಗೆ ಸಿನಿಮಾ ಕ್ಷೇತ್ರ ಪಾದಾರ್ಪಣೆಯ ಸಂದರ್ಭದ ರಂಗಭೂಮಿಯು ಎದುರಿಸುವ ಸವಾಲುಗಳು ಕೂಲಂಕುಷವಾಗಿ ವರ್ಣಿತವಾಗದಿದ್ದರೂ ಸ್ಪಲ್ಪ ಇಣುಕು ಹಾಕುತ್ತದೆ. ಕಲಾವಿದನು ತನ್ನ ಜೀವನವನ್ನೇ ಕಲೆಗಾಗಿ ಮುಡಿಪಿಟ್ಟು ಕಲಾಔನತ್ಯವನ್ನು ಪಡೆಯುವ ರೀತಿ, ಮಾನವನ ಸಹಜ ದೌರ್ಬಲ್ಯಗಳು ಈ ಕಲಾವಿದನಲ್ಲೂ ಕಂಡುಬಂದು, ಅದರಿಂದ ಹೊರಬಂದು ಮತ್ತೆ ತನ್ನ ಗುರಿಯತ್ತ ಸಾಗುವ ಪರಿ, ಅಲ್ಲಿ ಎದುರಾಗುವ ಎಡರು, ತೊಟರುಗಳನ್ನೆಲ್ಲಾ ಕಣ್ಣಿಗೆ ಕಟ್ಟುವ ಹಾಗೆ ವಿವರಿಸಿದ್ದಾರೆ.
ಕ ಥಾನಾಯಕ “ರಾಜಾಚಾರ್ಯ”ನ ಕಲಾಭಿಮಾನದಿಂದ ಪ್ರಾರಂಭವಾಗಿ, ಅವನಲ್ಲಿ ಕಲಾವರಣ ಹೊಂದಿ, ಕಲೆಯ ಬೆಳವಣಿಗೆಗೆ, ತನ್ನಲ್ಲಿನ ಕಲಾವಂತಿಕೆಯ ಅಭಿವೃದ್ಧಿಗಾಗಿ, ಅದಕ್ಕೆ ಸಂಬಂಧಿಸಿದ ಕೌಶಲ್ಯವನ್ನು ರೂಢಿಸಿಕೊಳ್ಳುವ ಹಂಬಲ, ಆ ಹಾದಿಯ ಜೀವನದ ಪಥವೇ ಬದಲಾಗುವುದು. ಶೈಕ್ಷಣಿಕ ಕ್ಷೇತ್ರದಲ್ಲಿ ಸಂಪೂರ್ಣವಾಗಿ ಆಸಕ್ತಿ ಕಳೆದುಕೊಂಡು ವೈಯಕ್ತಿಕ ಬದುಕಿನಲ್ಲಿ ಎರಡು ದೋಣಿಯ ಮೇಲೆ ಪಯಣಿಸುವ ರಾಜಾಚಾರ್ಯನಿಗೆ ತನ್ನ ಬದುಕನ್ನೇ ಅಲ್ಲೋಲ ಕಲ್ಲೋಲ ಮಾಡುವ ದುರ್ಘಟನೆಯೊಂದು ಎದುರಾಗುತ್ತದೆ. ಓದುಗನು ಕೂಡ ಆ ಆಘಾತಕ್ಕೆ ಸ್ವಲ್ಫ ತತ್ತರಿಸುವಂತಾಗುತ್ತದೆ. ಮುಂದೆ ಅವನ ಬದುಕಿನ ದಿಕ್ಕೆ ಬದಲಾಗುತ್ತದೆ. ಹೀಗಿರುವಾಗಲೇ ಎರಡನೇ ಆಘಾತದಿಂದ ಸಂಪೂರ್ಣ ಜರ್ಜರಿತನಾಗುತ್ತಾನೆ.
ರಾಜಾಚಾರ್ಯನ ಬದುಕನ್ನು ಸುಸ್ಥಿತಿಗೆ ತರುವ ಪ್ರಯತ್ನ ಮಾಡುವ ಅವನ ಸ್ನೇಹಿತರು ಅವನ ಮನಸ್ಸನ್ನು ಮತ್ತೆ ಕಲಾಕ್ಷೇತ್ರದತ್ತ ಕೊಂಡೋಯ್ದು, ಬದುಕಿನಲ್ಲಿ ಹೊಸದೊಂದು ಜೀವಸೆಲೆಯನ್ನು ಹೊತ್ತಿಸುತ್ತಾರೆ. ಕನ್ನಡ ರಂಗಭೂಮಿಯಲ್ಲಿ ಹೊಸದೊಂದು ಅಲೆಯನ್ನೇ ಸೃಷ್ಟಿ ಮಾಡಬೇಕೆಂದು ಕನಸು ಹೊತ್ತಿದ್ದ ರಾಜನಿಗೆ ಅದರಲ್ಲಿ ಹೊಕ್ಕಾಗ ನಿಜವಾದ ರಂಗಭೊಮಿಯ ಪರಿಚಯವಾಗುತ್ತದೆ. ಅದ್ಭುತ ಕಲಾವಂತಿಕೆಯನ್ನು ಹೊಂದಿದ್ದ ಕಲಾವಿದ ಕನ್ನಡ ರಂಗಭೂಮಿಯಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಾನೆ. ಕಲಾಪ್ರೇಮಿಗಳಲ್ಲಿ ಹೃದಯಗಳಲ್ಲಿ ನಟಸಾರ್ವಭೌಮನಾಗಿ ಮೆರೆಯುತ್ತಾನೆ. ಆದಾಗ್ಯೂ ಜೀವನದಲ್ಲಿ ಸಹಜ ಏಳುಬೀಳುಗಳನ್ನು ಅನುಭವಿಸುತ್ತಾನೆ.
ಅನಕೃರವರು ಕೆಲವಾರು ನಾಟಕಗಳನ್ನು ಸಹ ಇದರಲ್ಲಿ ಚಿತ್ರಿಸಿದ್ದಾರೆ. ಮೂಲವಸ್ತು ಮತ್ತು ರಂಗಪ್ರಯೋಗಕ್ಕೆ ಬದಲಾಯಿಸುವಲ್ಲಿನ ಅಂಶಗಳನ್ನು ತಿಳಿಸಿದ್ದಾರೆ. ಇದು ಲೇಖಕರ ಆಳ ಅಧ್ಯಯನವನ್ನು ತೋರಿಸುತ್ತದೆ. ರಾಜನಷ್ಟೇ ಪ್ರಮುಖ ಪಾತ್ರ ನೀಲಮ್ಮ. ಅವಳು ಸಂಪೂರ್ಣವಾಗಿ (ಹೀಗೂ ಇರಲು ಸಾಧ್ಯಎನ್ನುವಷ್ಟು) ತ್ಯಾಗಮಯಿಯಾಗಿದ್ದಾಳೆ. ವೆಂಕಣ್ಣ, ತಮ್ಮಯ್ಯ, ಅನ್ವರಿ, ಪಾರ್ವತಿ, ರಾಜನ ಸ್ನೇಹಿತರು ಇನ್ನು ಅನೇಕ ಪಾತ್ರಗಳು ಕಾದಂಬರಿಯ ಹಿಡಿತವನ್ನು ಗಟ್ಟಿಗೊಳಿಸಿವೆ.
ಅನಕೃರವರ ಅನೇಕ ಕಾದಂಬರಿಗಳಲ್ಲಿ ಮೊದಲನೆ ಸಾಲಿಗೆ ಸೇರುವ ಈ ಕಾದಂಬರಿ, ಒಮ್ಮೆಯಾದರೊ ಓದ ಬಹುದಾದ ಪ್ರಮುಖ ಕಾದಂಬರಿಯಾಗಿದೆ.