ಒಮ್ಮೆ ಜಿ.ಪಿ. ರಾಜರತ್ನಂ ಮೈಸೂರಿನಲ್ಲಿ ಕುವೆಂಪುರವರನ್ನು ನೋಡಲು ಹೋದರು. ಇವರ ವೇಷ ಯಾವಾಗಲೂ ಪಂಜೆ, ಅರೆತೋಳಿನ ಜುಬ್ಬ, ಮೇಲೋಂದು ಹೊದೆದ ಬಿಳಿ ಪಂಚೆ. ಚಿಕ್ಕದಾಗಿ ಕತ್ತರಿಸಿದ ತಲೆಗೂದಲು. ಇವರ ವೇಷ ನೋಡಿದ ಯಾರಿಗಾದರೂ ಇವರೊಬ್ಬ ಬೌದ್ಧ ಭಿಕ್ಷು ಎನ್ನುವಂತಿದ್ದರು. ಅದೂ ಅಲ್ಲದೆ ಕುವೆಂಪು ಮನೆಗೆ ಯಾವಾಗಲೂ ಏನಾದರೂ ಚಂದಾ ವಸೂಲಿಗೆಂದು ದಿನ ಬೆಳಗಾಗರೆ ಹಲವಾರು ಮಂದಿ ಬರುತ್ತಿದ್ದುದರಿಂದ ಅವರ ಮನೆಯವರಿಂದ ಯಾರು ಬಂದರೂ 'ಯಾರು ಇಲ್ಲ ಮುಂದೆ ಹೋಗಿ' ಎಂಬ ಉತ್ತರ ಸಿದ್ಧವಾಗಿತ್ತು. ಅಂದು ರಾಜರತ್ನಂ ಬಂದಾಗಲೂ ಮನೆ ಬಾಗಿಲಿನಲ್ಲಿದ್ದ ಆಳಿಗೆ ಇವರ್ಯಾರು ಎಂದು ತಿಳಿಯದೆ, 'ಯಾರೂ ಇಲ್ಲ ಮುಂದೆ ಹೋಗಿ' ಎಂದ. ಜಿ.ಪಿ. ರಾಜರತ್ನಂ ಅದೃಷ್ಟ. ಇವರು ಗೇಟಿನಿಂದಾಚೆಗೆ ಹೋಗುವುದಕ್ಕೂ ಕುವೆಂಪು ಮನೆ ಒಳಗಿನಿಂದ ಹೊರಗೆ ಬರುವುದಕ್ಕೂ ಸರಿಯಾಗಿ, ಜಿ.ಪಿ.ರಾಜರತ್ನಂ ಅವರನ್ನು ನೋಡಿ 'ಬನ್ನಿ ಬನ್ನಿ' ಎಂದು ಒಳಗೆ ಕರೆದೊಯ್ದರು.
ಮುಂದೆ ರಾಜರತ್ನಂ ಯಾವಾಗ ಕುವೆಂಪು ಮನೆಗೆ ಹೋದರೂ 'ಒಳಗೆ ಬರಲೋ ಮುಂದೆ ಹೋಗಲೋ....' ಎಂದು ಬಾಗಿಲಲ್ಲಿ ನಿಂತು ಕೇಳುತ್ತಿದ್ದರು!