ಬೆಳೆಗೆರೆ ಕೃಷ್ಣಶಾಸ್ತ್ರಿಗಳು ಒಮ್ಮೆ ದೇವುಡು ನರಸಿಂಹಶಾಸ್ತ್ರೀಗಳನ್ನು ನೋಡಲು ಹೋದರಂತೆ. ಆಗ ದೇವುಡುರವರ ಮನೆ ಶಂಕರಮಠದ ಬಳಿ ಇತ್ತು. ಕೃಷ್ಣಶಾಸ್ತ್ರಿಗಳು ಹೋಗುತ್ತಿದ್ದಂತೆ ಪತ್ನಿ ಗೌರಮ್ಮನವರನ್ನು ಕರೆದು ಶಾಸ್ತ್ರಿಗಳನ್ನು ಪರಿಚಯಿಸುತ್ತಾ, "ಕುವೆಂಪುರವರ ಬೆರಳ್ ಗೆ ಕೊರಳ್ ಹಳೆಗನ್ನಡ ನಾಟಕವನ್ನು ದೇವನೂರಿನ ಪುಟಾಣಿ ಮಕ್ಕಳಿಂದ ಹೇಗೆ ಆಡಿಸಿದರು ಗೊತ್ತಾ? ಹಳೆಗನ್ನಡ ಉಚ್ಛಾರ, ಭಾವಪೂರ್ಣ ಅಭಿನಯ, ತಕ್ಕುದಾದ ವೇಷಭೂಷಣಗಳು ಹೇಗಿತ್ತು ಅಂತೀಯಾ" ಎಂದು ಹಿಂದೆ ನೆಡೆದ ಕಾರ್ಯಕ್ರಮವನ್ನು ಪ್ರಶಂಸೆ ಮಾಡುತ್ತಾ ಮತ್ತೆ 'ಇವರಿಗೆ ಏನಾದರೂ ಉಪಚಾರ ಮಾಡುತ್ತೀಯಾ' ಎಂದು ಕೇಳಿದ ತಕ್ಷಣ ಎರಡು ತಟ್ಟೆಯಲ್ಲಿ ಕೋಡುಬಳೆ ತಂದಿಟ್ಟರಂತೆ.
ಈಗ ದೇವುಡುರವರಿಗೆ ನಗೆ ತಡೆಯಲಾಗಲಿಲ್ಲ. ಗೌರಮ್ಮನವರಿಗೆ ಏಕೆ ನಗುತ್ತಿದ್ದಾರೆಂಬುದು ತಿಳಿಯದೆ ಇಬ್ಬರ ಮುಖವನ್ನು ನೋಡಿದಾಗ, ದೇವುಡುರವರು, "ಗೌರ! ಅವರ ಬಾಯಿಯನ್ನು ನೋಡಲಿಲ್ಲವಾ? ಅವರು ಹೇಗೆ ಕೋಡುಬಳೆ ತಿಂದಾರು?" ಎಂದಾಗಲೇ ಇವರಿಗೆ ಅರ್ಥವಾದದ್ದು ಶಾಸ್ತ್ರಿಗಳದು ಬೊಚ್ಚು ಬಾಯೆಂದು!
'ಹೋಗಲಿ ಬಿಡು, ಮಜ್ಜೆಗೆ ಇದೆಯಲ್ಲಾ, ಒಂದು ಲೋಟ ತಂದು ಕೊಡು' ಎಂದರಂತೆ ದೇವುಡು.