ಇಂದಿನ ಭ್ರಷ್ಟಾ ರಾಜಕೀಯ ವ್ಯವಸ್ಥೆಯಲ್ಲಿ ಪ್ರಮಾಣಿಕ ವ್ಯಕ್ತಿ ಅನುಭವಿಸುವ ಸಂಕಷ್ಟಗಳನ್ನು ಯಥಾವತ್ತಾಗಿ ಚಿತ್ರಿಸಿದ್ದಾರೆ. ತಾವು ಅನುಭವಿಸಿದ ಎಲ್ಲಾ ಅಂಶಗಳನ್ನು ಎಲ್ಲಿಯೂ ಜಾಳಾಗಿಸದೇ, ಸಂಕ್ಷಿಪ್ತವಾಗಿ, ಸರಳ ಶೈಲಿಯಲ್ಲಿ ಓದುಗರ ಮುಂದಿಡುವಲ್ಲಿ ಸಾರಾ ರವರು ಯಶಸ್ವಿಯಾಗಿದ್ದಾರೆ. ಲೇಖಕರು ಬರೆದಿರುವ ಅಣೆಕಟ್ಟು ಕಟ್ಟುವ ಸಂದರ್ಭದಲ್ಲಿನ ಜನರ ಮಾನಸಿಕ ಸ್ಥಿತಿ ಸತ್ಯವಾಗಿದೆ. ನನ್ನ ಊರಿನ ಹತ್ತಿರದ ವಾಣಿವಿಲಾಸ ಅಣೆಕಟ್ಟಿನ ಸಮೀಪದ ಜನರ ಮನಸ್ಥಿತಿಯು ಕೂಡ ನಾನು ತಿಳಿದ ಮಟ್ಟಿಗೆ ಇದೇ ಆಗಿದೆ. ಅಣೆಕಟ್ಟಿನ ಕೆಲಸಕ್ಕೆಂದು ಬಂದ ಅನೇಕ ಜನರು ಇಲ್ಲಿಯೇ ಜಮೀನನ್ನು ಕೊಂಡು ಇಂದು ಶ್ರೀಮಂತರಾಗಿ ಇಲ್ಲಿಯೇ ನೆಲಸಿದ್ದಾರೆ. ಅದನ್ನು ಮಾರಿದ, ಮುಂದಿನ ವ್ಯವಸ್ಥೆಯ ಬಗ್ಗೆ ಹೆಚ್ಚಿನ ತಿಳುವಳಿಕೆ ಇಲ್ಲದ ಜನರು ಇಂದು ಅವರ ಜಮೀನಿನಲ್ಲಿ ಕೂಲಿಯಾಳುಗಳಾಗಿ ದುಡಿಯುತ್ತಿದ್ದಾರೆ! ಮತ್ತು ಆ ಪ್ರದೇಶದಲ್ಲಿ ನೋಡಿದರೆ, ಇದು ಕರ್ನಾಟಕವೇ ಎಂಬಷ್ಟು ಜನರು ತಮಿಳಿಯನ್ನರು ಇಲ್ಲಿಯೇ ನೆೆಲಸಿದ್ದಾರೆ. ( ಇದರಲ್ಲಿ ಜನರ ತಪ್ಪು ಎಂದು ಹೇಳಲಾಗುವುದಿಲ್ಲ. ಹತ್ತಾರು ವರ್ಷ ಇದೇ ಕೆಲಸಕ್ಕೆ ನೆಲನಿಂತ ಜನರು ಇಲ್ಲಿಯೇ ಖಾಯಂ ಆಗುತ್ತಾರೆ?!) ಬಹುಶ: ಇದೇ ಸನ್ನಿವೇಶವನ್ನು ಎಲ್ಲಾ ಅಣೆಕಟ್ಟುಗಳ ಪ್ರದೇಶದಲ್ಲಿಯೂ ನೋಡಬಹುದಾಗಿದೆ.
ಪ್ರಮಾಣಿಕವಾಗಿ ಕೆಲಸ ನಿರ್ವಹಿಸಲು ಅವಕಾಶ ಕೊಡದ, ತಾವೂ ನಿರ್ವಹಿಸದ ಅಧಿಕಾರ ವರ್ಗದ ಸರ್ಕಾರಿ ಕೆಲಸ ಕಾರ್ಯ ಜನರಲ್ಲಿ ಹೇಸಿಗೆ ಹುಟ್ಟಿಸುವಂತಹದು. ಇಂಥವರ ಮಧ್ಯೆ ಬದುಕುವುದ ತುಂಬಾ ಕಷ್ಟ ಮತ್ತು ಸಾಹಸಕರ. ಎಷ್ಟೇ ಪ್ರಮಾಣಿಕವಾಗಿ ಇದ್ದರು ಎಲ್ಲರ ಗುಂಪಲ್ಲಿ ಅವರನ್ನು ಸೇರಿಸಿಬಿಡುತ್ತಾರೆ. ಇಂಥಹ ಸಂದರ್ಭದಲ್ಲಿ ದಿಟ್ಟವಾಗಿ ಎಲ್ಲವನ್ನು ಎದುರಿಸಲು ಸಿದ್ಧನಾಗಿದ್ದಾಗ ಮಾತ್ರ ನಾವು ನಮ್ಮ ಆದರ್ಶವನ್ನು ಪಾಲಿಸಲು ಸಾಧ್ಯ. ಆದರೂ ಈ ವ್ಯವಸ್ಥೆಯಲ್ಲಿ ಒಮ್ಮೆಯಾದರೂ ಇದರ ಬಲೆಗೆ ಬಿದ್ದೇ ಬೀಳುವುದು ಖಂಡಿತವೆಂದು ಇಲ್ಲಿನ ಒಂದು ಸನ್ನಿವೇಶ ತೋರಿಸಿಕೊಟ್ಟಿದೆ. ಸುತ್ತಲೂ ನಿರಂತರವಾಗಿ ಎಲ್ಲಾ ಹಂತದಲ್ಲಿಯು ನೆಡೆಯುವ ಭ್ರಷ್ಟಾಚಾರದ ಮದ್ಯೆ ಅದಕ್ಕೆ ಸಿಲುಕಿಕೊಳ್ಳದೇ ಇರಲು ಪೇಚಾಡುವ ಸ್ಥಿತಿ ಇದೆ. ಅದರೊಂದಿಗೆ ಸಾಮಾನ್ಯವಾಗಿ ಅಧಿಕಾರವರ್ಗದ ತೆರೆದ ಬಾಯಿಗೆ ಎಂಜಲನ್ನು ಹಾಕದ ನೌಕರ ಊರೂರಿಗೆ ಅಲೆದಾಡಿ ತನ್ನ ಇಳಿ ವಯಸ್ಸಿನಲ್ಲಿ ಪಡುವ ಪರಿಪಾಟಲ ಜೋತೆಗೆ ಅಣೆಕಟ್ಟಿನ ನೀರನ್ನೇ ನಂಬಿ ಕೊಂಡು ಬದುಕುವ ಬಡ ಜನರ ಜೀವನ ಸ್ಥಿತಿ, ಅದರ ಮೇಲೆಯೇ ನಿಂತಿರುವ ನಮ್ಮ ರೈತರ ಜೀವನ ದೃಶ್ಯಾವಳಿಗಳನ್ನು, ಮನಕಲುಕುವಂತೆ ವಸ್ತುಸ್ಥಿತಿಯನ್ನು ಎಲ್ಲಿಯೂ ಅತಿಶಯೋಕ್ತಿಗೊಳಿಸದೇ ತೆರೆದಿಟ್ಟಿದ್ದಾರೆ. ಇಲ್ಲಿಯು ಕಂಡುಬರುವ ಉಳ್ಳವನ ಬದುಕು ಅಂದರೆ, ಹಣ ಇದ್ದವನಿಗೆ ಎಲ್ಲ ರೀತಿಯ ಸೌಲಭ್ಯ, ಇಲ್ಲದವನಿಗೆ ಇಲ್ಲ ಎಂಬ ಸ್ಥಿತಿ. ಸಾಮಾನ್ಯವಾಗಿ ನಾವು ನೋಡುವ ರಾಜಕೀಯ ಬಲವಿರುವ ಪುಂಡಾಟಗಳು, ಅವರ ಅನೈತಿಕ ದುರ್ನಡತೆಗಳು, ಅಸಹಾಯಕ ರೈತರ ನೋವುಗಳ ಜೊತೆಗೆ ಅಧಿಕಾರಿಗಳು ತಮ್ಮ ಸ್ವಾರ್ಥ ಕೆಲಸಕ್ಕಾಗಿ ಸರ್ಕಾರಿ ಅಧಿಕಾರಿಗಳನ್ನು ನೆಡೆಸಿಕೊಳ್ಳುವ ರೀತಿ, ಜನರ ಹಣವನ್ನು ತಮ್ಮ ಸ್ವಂತ ಕೆಲಸಕ್ಕಾಗಿ ದಾಖಲೆಯಲ್ಲಿ ಸುಳ್ಳು ಲೆಕ್ಕ ತೋರಿಸಿ ಮಾಡುವ ಹಗಲು ದರೋಡೆಯಂತಹ ವಾಸ್ತವ ಅಂಶಗಳನ್ನು ಉತ್ಪ್ರೇಕ್ಷೆಗೊಳಿಸದೇ ಬರೆದಿದ್ದಾರೆ.
ಅಲ್ಲಿನ ಜನರರೊಂದಿಗೆ ಹೊಂದಿಕೊಳ್ಳಲಾಗದೇ ಈ ಊರಿನಿಂದ ಹೋದರೆ ಸಾಕು ಎಂದು ಬಯಸುತ್ತಿದ್ದ ಅಧಿಕಾರಿಯ ಹೆಂಡತಿ ಅಲ್ಲಿನ ರೈತರ, ಸುತ್ತಲಿನ ಜನರ ಸಮಸ್ಯೆಗಳನ್ನು ಕೇಳಿ, ಅದನ್ನು ಬಗೆಹರಿಸಲು ಪ್ರಯತ್ನಿಸುತ್ತಿರುವ ತನ್ನ ಗಂಡನ ಮನೋಭಿಲಾಷೆಯನ್ನು, ತಿಳಿದು ಜನರ ಕಷ್ಟಗಳನ್ನು ತಾನು ಒಬ್ಬಳಾಗುತ್ತಾಳೆ. ಅದನ್ನು ಬಗೆಹರಿಸಲು ಯೋಚಿಸುವ ಅವಳ ಮನಸ್ಥಿತಿಯು ಮೆಚ್ಚುವಂತದ್ದಾಗಿದೆ. ಊರನ್ನು ಬಿಟ್ಟು ಹೊರಟಾಗಲು ಅವಳ ಮನಸ್ಸು ರೈತರ ಬಗ್ಗೆ ಯೋಚಿಸುವಂತಿರಬೇಕಾದರೆ, ಅಲ್ಲಿನ ಜನರ ಬದುಕು ಹೇಗಿರಬೇಕು ಎಂಬ ಕಲ್ಪನೆಗೆ ಸ್ವಷ್ಟ ಉತ್ತರವನ್ನು ನೀಡುತ್ತದೆ.
ನಮ್ಮ ದೇಶದ ಜನರ ರಾಜಕೀಯ ಪ್ರೇರಿತ ಸಾಮಾಜಿಕ ವ್ಯವಸ್ಥೆಯ ಇನ್ನೊಂದು ಮುಖವನ್ನು ತಿಳಿಸಿಕೊಟ್ಟ ಚಿಕ್ಕದಾದ ಒಮ್ಮೆ ಓದಬಹುದಾದ ಕಾದಂಬರಿಯಾಗಿದೆ. (ಇದು ಅವರ ಜೀವನ ಅನುಭವ ಆಧಾರಿತ ಎಂಬುದು ಇನ್ನೊಂದು ಪ್ರಮುಖ ಅಂಶವಾಗಿದೆ. ಕಾದಂಬರಿಯುದ್ದಕ್ಕೂ ಅದರ ಯಥಾವತ್ತಾದ ಪ್ರಸ್ತುತೆಯ ಅರಿವಾಗುತ್ತದೆ.)