`ಹೇಗಿದೆ ಕಾದಂಬರಿ' ಎಂದು ಓದಿದವರನ್ನು ಕೇಳಿದಾಗ ತುಂಬಾ ಸಾಧಾರಣವಾಗಿದೆಯೆಂಬ ಉತ್ತರ ಬಂದಿತು. ಅದೇ ಹಿನ್ನಲೆಯಲ್ಲಿ ಕೈಗೆತ್ತಿಕೊಂಡ ಕಾದಂಬರಿ ಮೊದಲರ್ಧ ಭಾಗದವರೆಗೂ ನೀರಸವಾಗೇ ಮುಂದುವರೆಯುತ್ತದೆ. ಈ ಭಾಗದಲ್ಲಿ ಒಂದೇ ಒಂದು ಕುತೂಹಲ. ನೇರನುಡಿಯ ವಾಸ್ತವತೆಯ ಎಲ್ಲಾ ಅಂಶಗಳಲ್ಲೂ ಶೋಷಣೆಯನ್ನು ಉಂಡು, ಅದನ್ನು ಅಷ್ಷೇ ಕಠೋರವಾಗಿ ಅನುಭವಿಸುತ್ತಿದ್ದ, ಸಮಾಜದ ಎಲ್ಲಾ ವ್ಯವಸ್ಥೆಯ ವಿರುದ್ದದ ಶೋಷಣೆಯ ಜ್ವಾಲಾಮುಖಿಯನ್ನು ಹೊರಹಾಕಲು ಅವಕಾಶಕ್ಕೆ ಸನ್ನದ್ಧವಾಗಿದ್ದ ಶ್ರೀಧರನ ಕನಸನ್ನು ಮುಂದಿನ ಜೀವನದ ಧೇಯ್ಯೋದ್ದೇಶಗಳ ನಿಶ್ಚಿತ ಗುರಿಯಿಲ್ಲದ ರಾಜಶೇಖರ ಅದನ್ನು ಆದರ್ಶವಾಗಿ ಕೈಗೆತ್ತಿಕೊಂಡಿದ್ದು.
ಇದೇ ನಿಟ್ಟಿನಲ್ಲಿ ವೈದ್ಯಕೀಯ ತರಬೇತಿಯನ್ನು ಪ್ರವೇಶ ಮಾಡುವ ರಾಜಶೇಖರನು ಅನುಭವಿಸುವ, ನೋಡುವ, ಕೇಳುವ ಸಂಗತಿಗಳು ವಾಸ್ತವತೆಗೆ ಹತ್ತಿರವಾಗಿವೆ. ಆದರ್ಶದ ಬೆನ್ನೆತ್ತಿ ಹೊರಟ ಪರಿಣಾಮ ತಾನು ಕಳೆದುಕೊಳ್ಳವ ಬೆಲೆ ಕಟ್ಟಲಾಗದ ವ್ಯಕ್ತಿ. ಇದೆಲ್ಲವನ್ನು ಅವನು ಅನುಭವಿಸುವುದು ಒಬ್ಬ ಶ್ರೀಸಾಮಾನ್ಯನಾಗಿ. ಅವನ ಕಣ್ಣ ಮುಂದೆ ಒಂದೇ ಅದರ್ಶ.
ಕಾದಂಬರಿಯು ಹೆಚ್ಚು ಕುತೂಹಲವನ್ನು ಉಂಟು ಮಾಡುವುದು. ಕಾತ್ಯಾಯಿನಿಯ ಆದರ್ಶ ಹಂತ ಹಂತವಾಗಿ ಪರಿಚಯವಾಗ ತೊಡಗಿದಾಗ. ಅನೇಕ ರೋಗಗಳನ್ನು ಹೊತ್ತು ಬರುವ ಅನುಭವಿಸುವ ಜನಸಾಮಾನ್ಯರ ಸೇವೆ ಮಾಡುವ ಮೂಲಕ ಅವರಲ್ಲಿ ಜೀವಸೆಳೆಯನ್ನು ಹೊತ್ತಿಸಬೇಕೆಂಬ ದ್ಯೇಯವನ್ನು ಹೊಂದಿದ ರಾಜಶೇಖರ ಒಂದೆಡೆಯಾದರೆ, ಬಂಡವಾಳಶಾಹಿಯ ವ್ಯವಸ್ಥೆಯನ್ನು ಕಿತ್ತೋಗೆಯ ಬೇಕೆಂಬ ಕಮ್ಯುನಿಸಂನ ಅಂಶಗಳನ್ನು ತನ್ನಲ್ಲಿ ಮೈಗೂಡಿಸಿಕೊಂಡವಳು ಕಾತ್ಯಾಯಿನಿ. ಇದರಲ್ಲಿ ಪ್ರಮುಖ ಅಂಶವೆಂದರೆ ಇವರಿಬ್ಬರು ಪ್ರೇಮಿಗಳು.
ಆದರ್ಶಕ್ಕೂ ಜೀವನಕ್ಕೂ ಸಂಬಂಧವಿಲ್ಲವೇ?........... ಜೀವನ ಬೇರೆ ಆದರ್ಶ ಬೇರೆಯೇ.............. ಎಂಬ ಪ್ರಶ್ನೆಗಳನ್ನು ತಮ್ಮಲ್ಲಿಯೂ ಹೊಂದಿದ ಪಾತ್ರಗಳು ನಮ್ಮಲ್ಲಿಯೂ ಅದನ್ನು ಹುಟ್ಟು ಹಾಕುತ್ತವೆ. ಒಬ್ಬರಿಗೊಬ್ಬರು ಅಗಾಧವಾಗಿ ಪ್ರೀತಿಸುವ ಈ ಪ್ರೇಮಿಗಳಲ್ಲಿ ರಾಜಶೇಖರ ಇದಕ್ಕಾಗಿ ಅಪಾರ ದಂಡವನ್ನು ತೆರುತ್ತಾನೆ. ರಾಜಶೇಖರನಷ್ಟೇ ಆದರ್ಶವನ್ನು ಪ್ರೀತಿಸುವ ಕಾತ್ಯಾಯಿನಿಯ ಒಲವಿನ ವಿಶ್ಲೇಷಣೆ ಸಂಪೂರ್ಣವಾಗಿ ಕಮ್ಯೂನಿಸಂ ತಳಹದಿಯದ್ದು. ಆಳವಾಗಿ ಬೇರೂರಿದ್ದ ಈ ಅಂಶಗಳು ಪರಸ್ಪರ ಮಾನಸಿಕ ಘರ್ಷಣೆಗೊಳಗಾಗಿ ಅಂತ್ಯದಲ್ಲಿ ಪ್ರೇಮಿಯಿಂದ ಪಲಾಯನ ಮಾಡಿಸುತ್ತದೆ.
ಅಂತ್ಯ ಭಾಗದಲ್ಲಿನ ಸಂಭಾಷಣೆಗಳು ಓದಗನ್ನು ಕೂಡ ವಿಚಾರಪರನ್ನಾಗಿಸುವುದು ಈ ಕಾದಂಬರಿಯ ವಿಶೇಷವಾಗಿದ್ದು, ಇದು ಶರಚ್ಚಂದ್ರರ ಕಾದಂಬರಿಗಳನ್ನು ನೆನಪಿಸುತ್ತದೆ. ಕೊನೆಯಲ್ಲಿ ಯಾರು ಯಾವ ರೀತಿ ವಾಸ್ತವವನ್ನು ಕಂಡುಕೊಳ್ಳುತ್ತಾರೆ. ಯಾರ ಆದರ್ಶ ಇಲ್ಲಿ ಸುಳ್ಳಾಗುತ್ತದೆಯೆಂಬ ಕುತೂಹಲ ತಣಿಸಲು `ಕಣ್ಣು ತೆರೆಯಿತು' ಇದರ ಮೊರೆ ಹೋಗಬೇಕಾಗಿದೆ.