ಕರ್ನಾಟಕದಲ್ಲಿ ಹಲವಾರು ದಿನಗಳಿಂದ ವರದಿಯಾಗುತ್ತಿರುವ ‘ಭಾನಾಮತಿ’ ಪ್ರಕರಣಗಳು ಎಲ್ಲರನ್ನು ಬೆಚ್ಚಿ ಬೀಳಿಸಿವೆ. ನಿಧಿಯನ್ನು ವಶಪಡಿಸಿಕೊಳ್ಳುವ ದುರಾಸೆಗೆ ಬಲಿಯಾಗಿ, ಅತಿಮಾನುಷ ಶಕ್ತಿಗಳನ್ನು ಒಲಿಸಿಕೊಳ್ಳುವ ದುರುದ್ದೇಶದಿಂದ ಹನ್ನೇರಡು ವರ್ಷದ ಒಳಗಿನ ಎಳೇ ಮಕ್ಕಳನ್ನು ಬಲಿಕೊಡುವ ಅಮಾನವೀಯ ದುಶ್ಕೃತ್ಯಗಳು ನಮ್ಮ ಸಮಾಜದಲ್ಲಿಈಗಲೂ ನೆಡೆಯುತ್ತಿರುವುದು ಖೇದನೀಯ. ಇತ್ತಿಚಿನ ದಿನಗಳಲ್ಲಿ, ವರದಿಯಾಗಿರುವ ಪ್ರಕರಣಗಳೇ ಹತ್ತಕ್ಕಿಂತಲೂ ಅಧಿಕವಾಗಿವೆ. ಈ ಕೃತ್ಯಗಳು ಹೆಚ್ಚಾಗಿ ಕಂಡುಬರುತ್ತಿರುವುದು ಹೈದರಾಬಾದ್-ಕರ್ನಾಟಕ ಭಾಗಗಳಲ್ಲಿ. ಅದರಲ್ಲೂ ವಿಶೇಷವಾಗಿ, ಗುಲ್ಬರ್ಗಾ, ರಾಯಚೂರು ಮತ್ತು ಬೀದರ್ ಗಳಲ್ಲಿ. ಆಧುನಿಕತೆ, ವೈಜ್ಞಾನಿಕ ಮನೋಭಾವ ಬೆಳೆದುನಿಂತಿದೆಯೆಂದು ಹೇಳುವ ನಮ್ಮ ಸಮಾಜದಲ್ಲಿ ಇಂತಹ ಘಟನೆಗಳು ನೆಡೆಯುತ್ತಿರುವುದು ವಿಷಾದನೀಯ. ನಿಜವಾದ ವೈಜ್ಞಾನಿಕ ದೃಷ್ಟಿಕೋನ ಸಮಾಜದ ಒಳಿತಿಗೆ, ಬೆಳವಣಿಗೆಗೆ ಅತ್ಯಗತ್ಯವೆಂದು ನಂಬಿರುವ ಬ್ರೇಕ್ ಥ್ರೂ ಸೈನ್ಸ ಸೊಸೈಟಿಯು ಇಂತಹ ಅಸಹ್ಯ ಘಟನೆಗಳನ್ನು ಖಂಡಿಸುವುದರೊಂದಿಗೆ ಜನರಲ್ಲಿ ವೈಜ್ಞಾನಿಕತೆ ಅರಿವು ಮೂಡಿಸುವ, ಬೆಳೆಸುವ ಕಾರ್ಯಕ್ರಮಗಳನ್ನು ಮಾಡುತ್ತಿದೆ. ಈ ನಿಟ್ಟಿನಲ್ಲಿ, ಜನರನ್ನು ತಲುಪುವ ಅತ್ಯಂತ ಪರಿಣಾಮಕಾರಿ ಮಾಧ್ಯಮವಾದ ರಂಗಭೂಮಿ ಕ್ತೇತ್ರವನ್ನು ಆಯ್ದುಕೊಂಡು, ಜನರಲ್ಲಿ ಜಾಗೃತಿಯನ್ನೂ ಸ್ಥಿರಗೊಳಿಸುವ ಸಲುವಾಗಿ ‘ಭಾನಾಮತಿ’ ಎಂಬ ಹೆಸರಿನ ನಾಟಕವನ್ನು ರಚಿಸಿ, ನಟಿಸಿದೆ. ಈ ನಾಟಕ ಪ್ರದರ್ಶನದ ಮೂಲಕ ವಿಜ್ಞಾನ ಕ್ಷೇತ್ರದಲ್ಲಿ ಒಂದು ಹೊಸ ಪ್ರಯೋಗಕ್ಕೆ ನಾಂದಿಯಾಗಿದೆ.
ರಾಷ್ಟ್ರಮಟ್ಟದ ಸಂಸ್ಥೆಯಾದ ಇದು, ಬೆಂಗಳೂರಿನಲ್ಲಿ ೧೯೯೫-೯೬ ರಲ್ಲಿ ಸ್ಥಾಪನೆಯಾಗಿ ರಾಜ್ಯಾದಾದ್ಯಂತ ಅನೇಕ ಶಾಖೆಗಳನ್ನು ಹೊಂದಿದೆ. ‘ಪವಾಡ ರಹಸ್ಯ ಬಯಲು’, ‘ವೈಜ್ಞಾನಿಕ ವಿಚಾರಗಳ ಸಮ್ಮೇಳನ ಮತ್ತು ಸಂವಾದಗಳು’, ‘ವಿಜ್ಞಾನ ಪ್ರವಾಸಗಳು’, ‘ಬಾಹ್ಯಾಕಾಶ ವೀಕ್ಷಣೆ’ಗಳೊಂದಿಗೆ ಪ್ರತಿ ವರ್ಷ ‘ವಿಜ್ಞಾನ ಶಿಬಿರ’ಗಳನ್ನು ಆಯೋಜಿಸುವುದರ ಮೂಲಕ ವಿಜ್ಞಾನ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಸಕ್ರಿಯ ಪಾತ್ರ ನಿರ್ವಹಿಸುತ್ತಿದೆ. ಭಾನಾಮತಿ ಬಗ್ಗೆ ತನಿಖೆ ಮಾಡಲು ಕರ್ನಾಟಕ ವಿಧಾನ ಪರಿಷತ್ತು, ಖ್ಯಾತ ವಿಚಾರವಾದಿ ಡಾ.ಹೆಚ್.ನರಸಿಂಹಯ್ಯನವರ ನೇತೃತ್ವದ, ಖ್ಯಾತ ಮನೋವಿಜ್ಞಾನಿ ಡಾ.ಸಿ.ಆರ್.ಚಂದ್ರಶೇಖರ್, ಅಬ್ದುಲ್ ನಜೀರ್ ಸಾಬ್ ಮತ್ತಿತರನ್ನೊಳಗೊಂಡ ಸಮಿತಿಯ ವರದಿಯ ಸತ್ಯ ಕತೆಗಳು ಮತ್ತು ಇತ್ತಿಚಿಗೆ ವರದಿಯಾದ ಪ್ರಕರಣಗಳ ಆಧಾರದ ಮೇಲೆ ಈ ನಾಟಕವನ್ನು ರಚಿಸಲಾಗಿದೆ. ಬೆಂಗಳೂರಿನಲ್ಲಿ ‘ಆವಿಷ್ಕಾರ’ ಮತ್ತು ‘ಎ.ಇ.ಡಿ.ಎಸ್.ಓ’ ಸಂಘಟನೆಗಳಿಂದ ಆಯೋಜಿತವಾಗಿದ್ದ ೧೫ನೇ ಬೀದಿ ನಾಟಕೋತ್ಸವದಲ್ಲಿ ‘ಭಾನಾಮತಿ’ ಮೊದಲ ಪ್ರದರ್ಶನ ಕಂಡಿತು. ಈಗಾಗಲೇ ಧಾರವಾಡ ಕೇಂದ್ರದಲ್ಲಿ, ಧಾರವಾಡ ಸಮೀಪದ ಹಳ್ಳಿ ‘ದುಮ್ಮವಾಡ’, ರಾಯಚೂರಿನ ವಿಜ್ಞಾನ ಶಿಬಿರ ಮತ್ತು ರಾಯಚೂರಿನ ‘ಗೋರ್ಕಲ್ಲ’ ಎಂಬ ಹಳ್ಳಿಯಲ್ಲಿ ಹಾಗೂ ಮೈಸೂರಿನಲ್ಲಿ ಯಶಸ್ವಿ ಪ್ರದರ್ಶನವನ್ನು ನೀಡಿ ಉತ್ತಮ ಪ್ರತಿಕ್ರಿಯೆಯನ್ನು ಪಡೆದಿದೆ.
ಸಾಮಾನ್ಯ ಘಟನೆಗಳಿಗೆ (ಮನೆಯ ಮೇಲೆ ಕಲ್ಲು ಬೀಳುವುದು, ಬಟ್ಟೆ ಸುಡುವುದು, ಮಾವಿನ ಮರ ಒಣಗುವುದು, ಇದ್ದಕ್ಕಿದಂತೆ ಜನರಿಗೆ ಖಾಯಿಲೆ ಬರುವುದು ಇತ್ಯಾದಿ) ವಿಶೇಷ ಅರ್ಥ ಕಲ್ಪಿಸಿ ಭಾನಾಮತಿ ಎಂದು ಬೆದರುವ ಜನರು ಕೆಲವರು. ಅದನ್ನು ಹೊರಹಾಕಲು ಜನರಿಂದ ಸಾವಿರಾರು ರೂಪಾಯಿಗಳನ್ನು ಕಬಳಿಸಿ, ಮುಗ್ಧ ಜನರಿಗೆ ಮೋಸಮಾಡುವ ಅಂಶಗಳೊಂದಿಗೆ, ಮಂತ್ರವಾದಿ ಮಾಡುವ ಕೆಲವು ‘ಅದ್ಭುತ’ಗಳನ್ನು ಎಲ್ಲರೂ ಮಾಡಬಹುದೆಂಬುದೇ ಈ ನಾಟಕದ ತಿರುಳು. ಉದಾ: ಬರಿ ಕೈಯಿಂದ ವಿಭೂತಿ ಕೊಡುವುದು. ಕೈಯನ್ನು ಕೆಂಪಾಗಿಸುವುದು, ತೆಂಗಿನ ಕಾಯಿಯ ಮೇಲೆ ಬೆಂಕಿ ಹತ್ತಿಸುವುದು, ನಾಲಿಗೆಯ ಮೇಲೆ ಕರ್ಪೂರ ಉರಿಸಿ, ದಬ್ಬಳ ಸಿಕ್ಕಿಸಿಕೊಳ್ಳುವ ಕೆಲವಾರು ಪ್ರಯೋಗಗಳನ್ನು ಮಾಡಿ ತೋರಿಸಲಾಗಿದೆ. ಈಗಾಗಲೇ ಹಲವಾರು ನಾಟಕಗಳನ್ನು ನಿರ್ದೇಶನ ಮಾಡಿರುವ ‘ಡಾ.ಸುನೀತ್ ಕುಮಾರ್ ಶೆಟ್ಟಿ’ ಯವರು ಈ ನಾಟಕವನ್ನು ನಿರ್ದೇಶನ ಮಾಡಿದ್ದು, ‘ಶ್ರೀಯುತ ನಾರಾಯಣರಾವ್ ಮಾಣೆ’ಯವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಹಾಗೆಯೇ, ಹದಿನೈದಕ್ಕೂ ಹೆಚ್ಚು ಜನ ಸ್ವಯಂ ಸೇವಕರು ಇದರಲ್ಲಿ ಪಾಲ್ಗೊಂಡಿದ್ದಾರೆ.