ಯಾವುದೇ ಕ್ಷೇತ್ರದಲ್ಲಿ, ಹುದ್ದೆಯಲ್ಲಿ ಇದ್ದರೂ ಅವ್ಯವಹಾರಕ್ಕೆ, ಬೇಡಿಕೆ ಲಂಚ, ಆಮಿಷಗಳು ಇದ್ದೇ ಇರುತ್ತವೆ. ಅದಕ್ಕೆ ಶಿಕ್ಷಣ ಕ್ಷೇತ್ರವೂ ಹೊರತಲ್ಲ ಎನ್ನುವುದಕ್ಕೆ ಗಿರಡ್ಡಿ ಗೋವಿಂದರಾಜು ರವರು ಬರೆದಿರುವ ಕತೆ ಉದಾಹರಣೆಯಾಗಿದೆ. ಪ್ರಾಮಾಣಿಕವಾಗಿ ಕೆಲಸ ಮಾಡುವ ನಾಯಕನಿಗೆ ಸಮಾಜದ ಪ್ರತಿಷ್ಠಿತ ವ್ಯಕ್ತಿಯಿಂದ ಬೇಡಿಕೆ ಬರುತ್ತದೆ. ಅದಕ್ಕೆ ಒಪ್ಪುದೇ ತನ್ನ ನಿಲುವನ್ನು ಸಡಿಲಿಸದೇ ಇರುವ ನಾಯಕ. ಇಂಥ ಸಂದರ್ಭದಲ್ಲಿ ಸಹಾಯ ಹಸ್ತ ಚಾಚಿ ಬಂದಿರುವವನಿಗೆ ಸಹಾಯ ಮಾಡಲು ಆಗುವುದಿಲ್ಲ ಎಂದು ಹೇಳಿ ಕಳಿಸಿದ ಮೇಲೆ, ಅದೇ ವ್ಯಕ್ತಿಯಿಂದ ಸಹಾಯ ಪಡೆದುಕೊಳ್ಳುವ ಸನ್ನಿವೇಶ/ಅನಿವಾರ್ಯತೆ. ನಾಯಕನು ತನಗೆ ಸಹಾಯ ಮಾಡುವ ವ್ಯಕ್ತಿಯು ನಿಜವಾಗಿಯೂ ಪ್ರಾಮಾಣಿಕವಾಗಿ ಸಹಾಯಮಾಡಿದ್ದರೂ ಅದರ ಹಿಂದಿನ ಉದ್ದೇಶವನ್ನು ಅರಿಯಲಾರದ ಸ್ಥಿತಿ. ( ಕತೆಯಲ್ಲಿ ಕೇವಲ ನಾಯಕನ ಆಲೋಚನೆಗಳು, ಅಭಿಪ್ರಾಯಗಳು ವ್ಯಕ್ತವಾಗುತ್ತವೆಯೇ ಹೊರತು ಪ್ರತಿವ್ಯಕ್ತಿಯ ಉದ್ದೇಶಗಳು ಸ್ವಷ್ಟವಾಗುವುದಿಲ್ಲ.) ಅತ್ಯಂತ ಸಂಕಷ್ಟ ಕಾಲದಲ್ಲಿ ಸಹಾಯ ಪಡೆದು ಅದಕ್ಕೆ ಪ್ರತ್ಯಪಕಾರ ಮಾಡುವ ಹಂಗಿನಲ್ಲಿ ಸಿಲಿಕಿಕೊಂಡೆನೇ ಎಂಬ ಗೊಂದಲ ಸ್ಥಿತಿ. ಒಬ್ಬ ವ್ಯಕ್ತಿಯು ಅಪರಿಚಿತ ವ್ಯಕ್ತಿಯನ್ನು ಭೇಟಿಯಾಗುವಾಗ ಅವನ ಮನಸ್ಸಿನಲ್ಲಿ ಸುಳಿಯುವ ಆಲೋಚನೆಗಳು, ಮಾತಿನ ಉದ್ದೇಶ ಸ್ವಷ್ಟವಾದ ವೇಲೆ ಒಬ್ಬ ವ್ಯಕ್ತಿಯನ್ನು ನೋಡುವ ದೃಷ್ಟಿಕೋನ ಸೊಗಸಾಗಿ ಹೊರಹೊಮ್ಮಿವೆ. ವ್ಯಕ್ತಿಗಳು, ಸನ್ನಿವೇಶಗಳು ಹೇಗೆ ಒಬ್ಬ ವ್ಯಕ್ತಿಯಲ್ಲಿ ಅನಿವಾರ್ಯತೆಯನ್ನು ಸಿಲುಕಿಸುತ್ತವೆ ಎನ್ನುವುದನ್ನು ಲೇಖಕರು ಸಂದರ್ಭೋಚಿತವಾಗಿ ಚಿತ್ರಿಸಿದ್ದಾರೆ.