ಮಲೆನಾಡಿನ ಗ್ರಾಮೀಣ ಪ್ರದೇಶದ ಬಡ ಬ್ರಾಹ್ಮಣ ಕುಟುಂಬದ ಸುತ್ತ ಕತೆಯು ಸುತ್ತುವರೆದಿದೆ. ಮನೆಗೆ ಆಧಾರವಾಗಿದ್ದು , ಇನ್ನು ದುಡಿಯುವ ವಯಸ್ಸಿನ ಯಜಮಾನ ಆಘಾತಕಾರಿಯಾಗಿ ಮರಣ ಹೊಂದಿದಾಗ ಅವನನ್ನೇ ನಂಬಿಕೊಂಡಿದ್ದ ಜನರ ಸ್ಥಿತಿ. ಅದನ್ನ ದುರುಪಯೋಗ ಪಡಿಸಿಕೊಂಡು ತಮ್ಮ ಸ್ವಾರ್ಥ ಸಾಧನೆಗೆ ಪ್ರಯತ್ನಿಸುವ ಅವರ ಸುತ್ತಲಿನ ಜನರು, ಅವರ ಮಧ್ಯದಲ್ಲಿ ಶ್ರಮ ಜೀವಿಯಾದ, ಯಾವುದೇ ಸ್ವಾರ್ಥತೆ ಇಲ್ಲದ ವ್ಯಕ್ತಿಯ ಚಿತ್ರಣವಿದೆ. ಗ್ರಾಮೀಣ ಪ್ರದೇಶದಲ್ಲಿ ಸಾಮಾನ್ಯವಾಗಿರುವ ಜಾತಿ, ಮಡಿವಂತಿಕೆ ಇವೆಲ್ಲವನ್ನು ದಿಕ್ಕರಿಸಿ ಮಾನವತ್ವದ ಹುಡುಕಾಟದಲ್ಲಿನ ನಾಯಕ ಅದನ್ನು ಕಂಡಕೊಂಡ ವ್ಯಕ್ತಿಯನ್ನು ವಿವಾಹವಾಗುವುದರೊಂದಿಗೆ ಹೊದ ಬಾಳನ್ನು, ಜೀವನವನ್ನು ಸ್ವೀಕರಿಸುತ್ತಾನೆ. ಅಲ್ಲೂ ಬೇರೆಯವರಿಂದ ತೊಡಕನ್ನು ಅನುಭವಿಸುತ್ತಾನೆ. ಇವುಗಳೊಂದಿಗೆ, ಪಾತ್ರಗಳ ಮಾನಸಿಕ ವಿಶ್ಲೇಷಣೆ ಉಚಿತವಾಗಿದೆ.
ತಾಯಿಯ ಮನಸ್ಸಿನಲ್ಲಿನ ಸುಪ್ತ ಬಯಕೆಯಗಳು ಅವಳಿಗರಿವಿಲ್ಲದೇ ಹೊರಹೊಮ್ಮಿ, ಅದರಿಂದ ಪಾಶ್ಚಾತ್ತಾಪಕ್ಕೊಳಗಾಗಿ ಪರಿತಾಪ ಪಡುವ ಸ್ಥಿತಿಯನ್ನು ಚಿತ್ರಿಸಿದ್ದಾರೆ. ಜನರಲ್ಲಿ ಮುಸುಕಿದ ವಿವಿಧ ರೀತಿಯ ವ್ಯಕ್ತಿತ್ವವು ಕಾರ್ಮುಗಿಲಿನಲ್ಲಿ ಅನಾವರಣಗೊಂಡಿದೆ. ಸರಳವಾದರೂ, ಓದುಗನ್ನು ತನ್ನಲ್ಲಿ ಹಿಡಿದಿಟ್ಟುಕೊಳ್ಳುವ ಗಟ್ಟಿತನವನ್ನು ಕತೆ ಹೊಂದಿದೆ.