ಕಂಬಾರರ ಕೇವಲ ಗೀತೆಗಳನ್ನು ಕೇಳಿದ್ದ ನನಗೆ ಈ ಕಾದಂಬರಿಯು ಅವರ ಬರವಣಿಗೆ ಶೈಲಿಯನ್ನು ಪರಿಚಯಿಸಿ ಕೊಟ್ಟಿತು. ಸ್ಫುಟವಾಗಿ, ನೇರವಾಗಿ ಉತ್ತರ ಕರ್ನಾಟಕದ ಭಾಷೆಯಲ್ಲಿ ಕತೆಯನ್ನು ಬರೆದಿದ್ದಾರೆ. ಲೇಖಕರು ಮೊದಲ ವ್ಯಕ್ತಿಯಾಗಿ ಕತೆಯನ್ನು ಹೇಳುವುದು ಓದುಗನಿಗೆ ಇದು ನಿಜವಿರಬೇಕೆಂಬ ಕಲ್ಪನೆಯನ್ನು ಮೂಢಿಸುತ್ತದೆ. ಪ್ರಾರಂಭದಲ್ಲಿ ಗಂಡು ತನ್ನ ದುರಾಸೆಯಿಂದ ಸಂಬಂಧಗಳಿಗೆ, ಭಾವನೆಗಳಿಗೆ ಬೆಲೆ ಕೊಡದೇ ಕೇವಲ ಆಸ್ತಿಗಾಗಿ ಹೆಣ್ಣಿನ ಬದುಕನ್ನು ಬಲಿಕೊಡುವುದು, ಅದೇ ಪ್ರಯತ್ನದಲ್ಲಿ ತಾನು ಆಯ್ಕೆ ಮಾಡಿರುವ ವರನ ದೌರ್ಬಲ್ಯಗಳನ್ನು ಮುಚ್ಚಿ ಮದುವೆ ಮಾಡುವುದು. ಹೀಗೆ ಕಾದಂಬರಿಯುದ್ದಕ್ಕೂ ಹೆಣ್ಣಿನ ಅಸಹಾಯಕತೆಯನ್ನು ಹೊರಹೊಮ್ಮಿಸುತ್ತದೆ.
ಹದಿಹರೆಯಕ್ಕೆ ಕಾಲಿಡುವ ಮೊದಲೇ, ಮದುವೆಯಲ್ಲಿಯೇ ಗಂಡನನ್ನು ಕಳೆದು ಕೊಂಡ ಸಿಂಗಾರವ್ವನಲ್ಲಿ ಮತ್ತೆ ಆಸೆಗಳು ಗರಿಗೆದರುವುದು ತನ್ನ ಎರಡನೇ ಮದುವೆಯಲ್ಲಿ. ಹೊಂಗನಸುಗಳನ್ನು ಹೊತ್ತು ಶಿವಪುರದ ಅರಮನೆಯ ದೊರೆಸಾನಿಯಾಗಿ ಕಾಲಿಡುವ ಸಿಂಗಾರವ್ವನ ಬದುಕು ಬೇರೆಯದೇ ರೂಪವನ್ನು ಪಡೆಯುತ್ತದೆ. ಗಂಡನ ದೌರ್ಬಲ್ಯವನ್ನು ತಿಳಿದು ಅಸಹಾಯಕತೆಯಿಂದ ಬಳಲುವ ಸಿಂಗಾರವ್ವ ಮತ್ತು ಅವಳ ಗೆಳತಿ ಸೀನಿಂಗ್ವನವರ ಪಾತ್ರವನ್ನು ಮಾರ್ಮಿಕವಾಗಿ ಚಿತ್ರಿಸಿದ್ದಾರೆ. ಯಾವುದೇ ವ್ಯಕ್ತಿ ತನ್ನ ದೌರ್ಬಲ್ಯವನ್ನು ತನ್ನಲ್ಲಿಯೇ ಮುಚ್ಚಿಟ್ಟುಕೊಳ್ಳದಿದ್ದರೆ, ತನ್ನ ಸ್ಥಾನಮಾನವನ್ನು ತಿಳಿದು ಸರಿಯಾಗಿ ನೆಡೆಯದೇ ಇದ್ದರೆ ಏನಾಗುತ್ತದೆಂದು ದೊರೆಯ ಪಾತ್ರದಿಂದ ತಿಳಿಯುತ್ತದೆ. ತನ್ನ ಮನೆಯಲ್ಲಿಯೇ ತನ್ನ ಕೈಕೆಳಗೆ ದುಡಿಯುವ ಕೆಲಸದವರ ನಡೆತೆ, ದೌರ್ಬಲ್ಯವನ್ನೇ ಬಂಡವಾಳವಾಗಿಟ್ಟುಕೊಂಡು ಆಸ್ತಿಯನ್ನು ಪಡೆಯುಲು ಹೊಂಚು ಹಾಕುವ ಜನರ ಕಾತುರತೆ, ತಂತ್ರಗಾರಿಕೆಯನ್ನು ಕಾಣಬಹುದು.
ಮಾನಸಿಕ ತುಳಿತ, ತುಮುಲಕ್ಕೆ ಒಳಗಾಗುವ ವ್ಯಕ್ತಿ ತಾನು ಮಾಡುತ್ತಿರುವ ಕೆಲಸ ತಪ್ಪೆಂದು ತಿಳಿದೂ ಅದನ್ನು ಸ್ವೀಕರಿಸುವಾಗ ಅದು ವ್ಯಕ್ತಿಯ ಮಾನಸಿಕ ಜರ್ಜರಿತನ ಮತ್ತು ಒತ್ತಡವನ್ನು ತಿಳಿಸುತ್ತದೆ. ಬಾಲ್ಯದಿಂದಲೂ ಮಾನಸಿಕ ಸಂಕಷ್ಟಗಳನ್ನು ಎದುರಿಸುತ್ತಾ ಬಂದ ಸಿಂಗಾರವ್ವನ ಕತೆಯು ಅಂತ್ಯದಲ್ಲಿ ಓದುಗರಿಗೂ ಬೇಸರನ್ನು ತರುತ್ತದೆ.
ಇದನ್ನು ಓದಿದ ತಕ್ಷಣ ಸಿನಿಮಾ ನೋಡುವ ಅವಕಾಶವೂ ದೊರೆಯಿತು. ಸಿಂಗಾರವ್ವ ಎಂಬ ಹೆಸರಿನಿಂದ ಟಿ.ಎಸ್. ನಾಗಭರಣ ನಿರ್ಮಿಸಿದ್ದಾರೆ. ಸಿನಿಮಾ ದೃಷ್ಟಿಯಿಂದ ಕೆಲವೊಂದು ಬದಲಾವಣೆಯನ್ನು ಮಾಡಿದ್ದಾರೆನಿಸುತ್ತದೆ. ಪ್ರೇಮ ಸಿಂಗಾರವ್ವನಾಗಿದ್ದು, ನನಗೆ ವೈಯಕ್ತಿಕವಾಗಿ ಅವರು ಇನ್ನು ಚೆನ್ನಾಗಿ ಮಾಡಬಹುದೆನಿಸಿತು. ಅವಿನಾಶ್ ರವರು ನಿಜವಾಗಿಯು ಕತೆಯ ಪಾತ್ರವೇ ಎಂದೆನಿಸುತ್ತದೆ. ಅವರ ಅಭಿನಯ ಇಷ್ಟವಾಯಿತು. ಬಿಡುವಿದ್ದಾಗ ಓದಬಹುದಾದ ಚಿಕ್ಕ ಕಾದಂಬರಿಯಾಗಿದೆ. ಕಾದಂಬರಿಯನ್ನು ಓದಿದ ನಂತರ ಸಿನಿಮಾ ನೋಡಿದರೆ ಚೆನ್ನಾಗಿರುತ್ತದೆ.