ಸಖೀಗೀತ.

೧.ಚಿಗರಿಗಂಗಳ ಚೆಲುವಿ

ವಸುಂಧರಾ ಎನ್ನುವದು ನಮ್ಮ ಪುರಾತನ ಕವಿಗಳು ಭೂಮಿತಾಯಿಗೆ ಕೊಟ್ಟ ಹೆಸರು. ವಸು ಎಂದರೆ ಜೀವಿ. ಭೂಮಿತಾಯಿಯು ಜೀವಿಗಳನ್ನು ಹೊತ್ತವಳು, ಆದುದರಿಂದ ಇವಳು ವಸುಂಧರಾ. ಇವಳಲ್ಲಿ ಅಡಗಿರುವ ಅನೇಕ ಹಾಗೂ ಅಮೂಲ್ಯ ಸಂಪತ್ತಿನಿಂದಾಗಿ ಇವಳನ್ನು ‘ಬಹುರತ್ನಾ ವಸುಂಧರಾ’ ಎಂದು ಬಣ್ಣಿಸಲಾಗಿದೆ.

ಬೇಂದ್ರೆಯವರು ತಮ್ಮ ಕವನದಲ್ಲಿ ಭೂಮಿತಾಯಿಯನ್ನು ‘ಚಿಗರಿಗಂಗಳ ಚೆಲುವಿ’ ಎಂದು ಕರೆದಿದ್ದಾರೆ. ಚಿಗರಿಯ ಕಣ್ಣುಗಳು ಸೌಂದರ್ಯಕ್ಕೆ ಹೆಸರಾದಂತಹವು. ಸಂಸ್ಕೃತ ಸಾಹಿತ್ಯದಲ್ಲಿಯೂ ಸಹ ಸುಂದರ ಕಣ್ಣುಗಳ ಸ್ತ್ರೀಯನ್ನು ‘ಮೃಗನಯನಿ’ ಎಂದು ಕರೆಯಲಾಗಿದೆ. ಆದರೆ ಈ ಕವನದಲ್ಲಿ ಭೂಮಿತಾಯಿ ಸುಂದರ ಕಣ್ಣುಗಳಿಗಾಗಿ ಚಿಗರಿಗಂಗಳ ಚೆಲುವಿಯಾಗಿಲ್ಲ ; ಅವಳು ಇಲ್ಲಿ ಹೆದರಿದ ಹರಿಣಿ. ಹೆದರಿದ ಹರಿಣಿಯನ್ನು ನೋಡುವವರಿಗೆ ಎದ್ದು ಕಾಣುವ ಸಂಗತಿ ಎಂದರೆ, ಹರಿಣಿಯ ಕಣ್ಣುಗಳು ; ಅತ್ತಿತ್ತ ಚಂಚಲವಾಗಿ ಚಲಿಸುವ ಬೆದರಿದ ಕಣ್ಣುಗಳು.

‘ಚಿಗರಿಗಂಗಳ ಚೆಲುವಿ’ ಈ ಕವನವು ಬೇಂದ್ರೆಯವರ ‘ಸಖೀಗೀತ’ ಕವನಸಂಕಲನದಲ್ಲಿ ಸೇರಿದೆ.

‘ಸಖೀಗೀತ’ವು ೧೯೩೭ರಲ್ಲಿ ಪ್ರಕಟವಾಯಿತು.

………………………………………………………………..

‘ಚಿಗರಿಗಂಗಳ ಚೆಲುವಿ’ ಕವನವು ಮಾನವನ ವಿಕೃತ, ಜೀವಿರೋಧಿ ನಾಗರಿಕತೆಯ ದುರಂತವನ್ನು ಸೂಚಿಸುವ ಕವನ.

ಮಾನವನ ನಾಗರಿಕತೆ ಪ್ರಾರಂಭವಾಗುವ ಮೊದಲು ಈ ಸೃಷ್ಟಿಯು ಒಂದು ಸುಂದರವಾದ ಬನವಾಗಿತ್ತು. ಅಲ್ಲಿರುವ ಸಸ್ಯಸಂಕುಲ ಹಾಗೂ ಪ್ರಾಣಿಸಂಕುಲ ಸಾಮರಸ್ಯದಲ್ಲಿ ಜೀವಿಸುತ್ತಿದ್ದವು.

ನಾಗರಿಕತೆ ಪ್ರಾರಂಭವಾದಾಗಿನಿಂದ, ನಿಸರ್ಗದಲ್ಲಿದ್ದ ಸಾಮರಸ್ಯ ಹಾಳಾಯಿತೆನ್ನಬಹುದು.

ಮಾನವನ ಸ್ವಾರ್ಥ ಹಾಗೂ ದುರಾಸೆಯ ಮೊದಲ ಪೆಟ್ಟು ಬಿದ್ದದ್ದು ಸಸ್ಯಸಂಕುಲಕ್ಕೆ ಹಾಗೂ ಇತರ ಪ್ರಾಣಿಗಳಿಗೆ. ಬಳಿಕ ಮನುಷ್ಯವರ್ಗದಲ್ಲಿಯೇ ನಡೆದ ಆಂತರಿಕ ಕಲಹಗಳಿಂದಾಗಿ, ಸಂಕಷ್ಟಗಳ ಸರಪಳಿಯೇ ಪ್ರಾರಂಭವಾಯಿತು. ಇದನ್ನು ಈ ಕವನದಲ್ಲಿ ಹಂತ ಹಂತವಾಗಿ ವರ್ಣಿಸಲಾಗಿದೆ.

ಬೇಂದ್ರೆಯವರ ಕವನಗಳೆಂದರೆ, ಕವಿಯು ತನ್ನ ಭಾವನೆಗಳನ್ನು, ತನ್ನ ಸುಖ, ದುಃಖಗಳನ್ನು, ತನ್ನ ಅನುಭವಗಳನ್ನು ಎಲ್ಲರೊಡನೆ ಹಂಚಿಕೊಳ್ಳುವ ಕವನಗಳು. ಅವರ ಪ್ರಸಿದ್ಧ ಕವನವಾದ “ ಬೆಳಗು” ಕವನವು ಕೊನೆಗೊಳ್ಳುವದು, “ ಇದು ಬರಿ ಬೆಳಗಲ್ಲೊ ಅಣ್ಣಾ” ಎಂದು ಕವಿ ತನ್ನ ಹಿತಾನುಭವವನ್ನು ಹಂಚಿಕೊಳ್ಳುವದರೊಂದಿಗೆ.

“ಚಿಗರಿಗಂಗಳ ಚೆಲುವಿ” ಕವನದಲ್ಲಿಯೂ ಸಹ ಕವಿಯು ತನ್ನ ದುಃಖವನ್ನು, ತನ್ನ ಆಕ್ರೋಶವನ್ನು ತನ್ನ ಗೆಳೆಯನೆದುರಿಗೆ ಹೇಳಿಕೊಳ್ಳುತ್ತಿದ್ದಾನೆ.

ಕವನದ ಪೂರ್ತಿಪಾಠ ಹೀಗಿದೆ:

………………………………………………………………

ಚಿಗರಿಗಂಗಳ ಚೆಲುವಿ ಚೆದsರಿ ನಿಂತಾಳ ನೋಡೋ

ಬೆದsರಿ ನಿಂತಾಳ ||ಪಲ್ಲವಿ||

ಹೊಳಿಹಳ್ಳ ತೊರೆದಾವೋ

ಗೆಣೆಹಕ್ಕಿ ಬೆರೆದಾವೋ

ಆಗದವರ ಹೊಟ್ಟಿ ಉರದಾವೋ

ಗೆಣೆಯಾ ಉರದಾವs

ಅಂಥವರ ದಿಟ್ಟಿ ಮನಿ ಮುರದಾವ;

ಅದನ ತಾ ಕಂಡು ಕೊರಗ್ಯಾsಳೊ

ಮರುಗ್ಯಾsಳೊ

ಸೊರಗ್ಯಾsಳೋ

ಹೂ ಕಾಯಿ ಹಣ್ಣು ತುಂಬಿದ ಬನದಾsಗ || ಚಿಗರಿಗಂಗಳ. . . .

ಬ್ಯಾಟಿ ನಾಯೊದರ್ಯಾವೋ

ಹಸುಜೀವ ಬೆದರ್ಯಾವೋ

ಗಳಗಳನೆ ಗಿಡದೇಲಿ ಉದರ್ಯಾವೋ

ಗೆಣೆಯಾ ಉದರ್ಯಾವs

ದಿನ್ನಿ ಮಡ್ಡಿ ಗುಡ್ಡ ಅದರ್ಯಾವ;

ಅದನ ತಾ ಕಂಡು ನೊಂದಾsಳೊ

ಬೆಂದಾsಳೊ

ಅಂದಾsಳೋ

‘ಇದು ಎಂಥಾ ಜೀವದ ಬ್ಯಾಟಿ ಹಾಡೇ ಹಗಲs’ || ಚಿಗರಿಗಂಗಳ. . .

ಆಳುಗಳ ಹೋರಾಟ

ಆಳುವವರಿಗೆ ಆಟ

ಗಾಳಕ್ಕ ಸಿಕ್ಕ ಮೀನದ ಗೋಳಾಟೊ

ಗೆಣೆಯಾ ಗೋಳಾಟೋ

ಗೆದ್ದವರ ಇದ್ದವರ ಹಾರಾಟ;

ಅರೆಸತ್ತ ಜೀವಾ ಕೊಳೆತಾsವೊ

ಹುಳತಾsವೊ

ಅಳತಾsವೋ

ಹಸುಗೂಸು ತಿರುಗಿ ಹೊಟ್ಟ್ಯಾಗ ಹುಗಿಧ್ಹಾಂಗ || ಚಿಗರಿಗಂಗಳ. . .

ತನ್ನ ತಾ ಸುತ್ತ್ಯಾಳೊ

ಹೊತ್ತಿನ ಬೆನ್ಹತ್ತ್ಯಾಳೊ

ತಿಂಗಳನ ಬಗಲಾಗೆತ್ತ್ಯಾಳೊ

ಗೆಣೆಯಾ ಎತ್ತ್ಯಾಳೊ

ಉಕ್ಕುಕ್ಕುವ ದುಃಖ ಒಳಗೊತ್ತ್ಯಾಳೊ;

ನಿಂತ ನೆಲವೆಂದು ಕಡಿಲಾsಕೊ

ಬಡಿಲಾsಕೊ

ಒಡಿಲಾsಕೊ

ಒಡವ್ಯಲ್ಲೋ ಮಗನೇ ಉಸಿರಿದ್ದೊಡಲಂತಾsಳೋ || ಚಿಗರಿಗಂಗಳ. . .

…………………………………………………………….

ಕವನದ ಮೊದಲ ನುಡಿ ಹೀಗಿದೆ:

ಹೊಳಿಹಳ್ಳ ತೊರೆದಾವೋ

ಗೆಣೆಹಕ್ಕಿ ಬೆರೆದಾವೋ

ಆಗದವರ ಹೊಟ್ಟಿ ಉರದಾವೋ

ಗೆಣೆಯಾ ಉರದಾವs

ಅಂಥವರ ದಿಟ್ಟಿ ಮನಿ ಮುರದಾವ;

ಅದನ ತಾ ಕಂಡು ಕೊರಗ್ಯಾsಳೊ

ಮರುಗ್ಯಾsಳೊ

ಸೊರಗ್ಯಾsಳೋ

ಹೂ ಕಾಯಿ ಹಣ್ಣು ತುಂಬಿದ ಬನದಾsಗ || ಚಿಗರಿಗಂಗಳ. . . .

ಈ ನುಡಿ ಪ್ರಾರಂಭವಾಗುವದು ಸಾಮರಸ್ಯದಿಂದ ಕೂಡಿದ ಸಮೃದ್ಧ ನಿಸರ್ಗದ ವರ್ಣನೆಯೊಂದಿಗೆ :

“ಹೊಳಿಹಳ್ಳ ತೊರೆದಾವೋ

ಗೆಣೆಹಕ್ಕಿ ಬೆರೆದಾವೋ ”

ನಿಸರ್ಗದ ಸಂಪನ್ಮೂಲಗಳಾದ ಹಾಗೂ ಜೀವರಾಶಿಯ ಬೆಳವಣಿಗೆಗೆ ಅವಶ್ಯವಿರುವ ಹೊಳೆಹಳ್ಳಗಳು ತೊರೆಯುತ್ತಿವೆ ಅಂದರೆ ತುಂಬಿಕೊಂಡು ಸಮೃದ್ಧವಾಗಿ ಹರಿಯುತ್ತಿವೆ. ಈ ಸಂಪನ್ಮೂಲಗಳನ್ನು ಭೋಗಿಸುವ ಜೀವರಾಶಿಯಾದ ಹಕ್ಕಿಗಳು ಬೆರೆದಿವೆ ಅಂದರೆ ಹೊಸ ಸೃಷ್ಟಿಯ ಕ್ರಿಯೆಯಲ್ಲಿ ತೊಡಗಿಕೊಂಡಿವೆ. ಇದೆಲ್ಲ ಮನಸ್ಸನ್ನು ಮುದಗೊಳಿಸುವ ನೋಟ.

ಆದರೆ ಈ ಸಾಮರಸ್ಯದ ಪರಿಸ್ಥಿತಿಗೆ ಈಗ ಭಂಗ ಬಂದಿದೆ.

ಯಾಕೆಂದರೆ:

“ಆಗದವರ ಹೊಟ್ಟಿ ಉರದಾವೋ

ಗೆಣೆಯಾ ಉರದಾವs

ಅಂಥವರ ದಿಟ್ಟಿ ಮನಿ ಮುರದಾವ ”

ನಿಸರ್ಗದ ಈ ಸಾಮರಸ್ಯವನ್ನು ಸಹಿಸಲಾರದ ಜೀವಿ ಇಲ್ಲೊಂದಿದೆ. ಅದು ಮಾನವ ಜೀವಿ. ಮಾನವನ ಹೊರತಾಗಿ ಉಳಿದೆಲ್ಲ ಪಶು, ಪಕ್ಷಿಗಳನ್ನು ನಾವು ಆದಿವರ್ಗದ ಜೀವಿಗಳು ಎನ್ನಬಹುದು. ಈ ಅಮಾಯಕ ಜೀವಿಗಳು ನಿಸರ್ಗದೊಡನೆ ಒಂದಾಗಿ ಬಾಳುತ್ತಿವೆ. ಆದರೆ, ಮಾನವ ಎನ್ನುವ ಈ ಜೀವಿಗೆ ದುರಾಸೆ ಬಹಳ. ನಿಸರ್ಗದ ಸಂಪತ್ತನ್ನೆಲ್ಲ ತಾನೇ ಭೋಗಿಸುವ ಸ್ವಾರ್ಥ ಈ ಜೀವಿಗೆ. ಈ ಜೀವಿಗೆ ಬೇರೆ ಜೀವಿಗಳ ಸೌಖ್ಯವನ್ನು ಕಂಡರೆ ಸಹಿಸಲಾಗುವದಿಲ್ಲ. ಇವನಿಗೆ ಉಳಿದ ಜೀವಿಗಳ ಮೇಲೆ ಹೊಟ್ಟೆಕಿಚ್ಚು. ಅದಕ್ಕೆ ಬೇಂದ್ರೆ ಹೇಳುತ್ತಾರೆ:

“ಆಗದವರ ಹೊಟ್ಟಿ ಉರದಾವೋ

ಗೆಣೆಯಾ ಉರದಾವs”

ಇಷ್ಟೇ ಅಲ್ಲ, ಇಂಥವರ ಕೆಟ್ಟ ದೃಷ್ಟಿಯಿಂದಾಗಿ (evil eye) ‘ಮನಿ ಮುರದಾವ’. ಇಲ್ಲಿಯವರೆಗೆ, ಒಂದು ಕ್ರಮದಿಂದ ನಡೆಯುತ್ತಿದ್ದಂತಹ ಸಂಸ್ಥೆ , ಎಲ್ಲ ಜೀವಿಗಳಿಗೆ ನೆಲೆಯಾದ ನಿಸರ್ಗದ ಆಶ್ರಯ (=ಮನಿ) ಈಗ ಭಗ್ನವಾಗುತ್ತಿದೆ.

ಆದರೆ ಭೂಮಿತಾಯಿ ನಿಸ್ಸಹಾಯಕಳು. ತನ್ನ ಒಡಲೆಲ್ಲ ಹೂ,ಕಾಯಿ ಹಾಗು ಹಣ್ಣುಗಳಿಂದ ತುಂಬಿದೆ. ಅದನ್ನೆಲ್ಲ ದುರಾಸೆಯಿಂದ ದೋಚುತ್ತಿರುವವರನ್ನು ಅವಳು ತಡೆಯುವದೆಂತು?

ಹೀಗಾಗಿ, ಅವಳು ಕೊರಗುತ್ತಿದ್ದಾಳೆ (ಪರಿಸ್ಥಿತಿಯ ಬಗೆಗೆ),

ಮರಗುತ್ತಿದ್ದಾಳೆ (ದುರ್ಬಲರ ಬಗೆಗೆ),

ಹಾಗೂ ಈ ಶೋಷಣೆಯಿಂದಾಗಿ ಸೊರಗುತ್ತಿದ್ದಾಳೆ (ಸ್ವತಃ).

“ಅದನ ತಾ ಕಂಡು ಕೊರಗ್ಯಾsಳೊ

ಮರುಗ್ಯಾsಳೊ

ಸೊರಗ್ಯಾsಳೋ

ಹೂ ಕಾಯಿ ಹಣ್ಣು ತುಂಬಿದ ಬನದಾsಗ || ಚಿಗರಿಗಂಗಳ. . . . .”

ಈ ದುರಾಕ್ರಮಣಕ್ಕೆ ಹೆದರಿದ ಅವಳು (ಸ್ಥಿರತೆ=)ಸ್ಥೈರ್ಯವನ್ನು ಕಳೆದುಕೊಂಡಿದ್ದಾಳೆ. ಆದುದರಿಂದ ಧಾವಿಸಲು ಯತ್ನಿಸುವ ಹರಿಣಿಯಂತೆ ಚೆದರಿ(=scattered) ನಿಂತಿದ್ದಾಳೆ. ಯಾವ ಗಳಿಗೆಯಲ್ಲಿ ಯಾರು ಆಕ್ರಮಣ ಮಾಡುತ್ತಾರೊ ಎಂದು ಬೆದರಿ ನಿಂತಿದ್ದಾಳೆ. ಸ್ಥೈರ್ಯ ಹಾಗು ಧೈರ್ಯವನ್ನು ಕಳೆದುಕೊಂಡ ಹರಿಣಿ ಇವಳು. ಇದು ಈ ಕವನದ ಪಲ್ಲವಿ ಅಂದರೆ recurring theme.

“ಚಿಗರಿಗಂಗಳ ಚೆಲುವಿ ಚೆದsರಿ ನಿಂತಾಳ ನೋಡೋ

ಬೆದsರಿ ನಿಂತಾಳ .”

………………………………………………………………

ಮೊದಲನೆಯ ನುಡಿಯಲ್ಲಿ ಒಂದು static picture ಇದೆ. ತಾನು ಸಮೃದ್ಧವಾದ ಬನದಲ್ಲಿದ್ದೂ, ಮನೆಮುರುಕರ ದುರಾಸೆಯ ‘ಕೆಟ್ಟ ಕಣ್ಣಿ’ನಿಂದ ಹೆದರಿದ, ಎಲ್ಲಿ ಓಡಬೇಕೊ ತಿಳಿಯದ ಅಸಹಾಯಕ ಹರಿಣಿಯ ಚಿತ್ರವಿದೆ. ಎರಡನೆಯ ನುಡಿಯಲ್ಲಿ ಆಕ್ರಮಣದ ಚಿತ್ರವಿದೆ.

ಬ್ಯಾಟಿ ನಾಯೊದರ್ಯಾವೋ

ಹಸುಜೀವ ಬೆದರ್ಯಾವೋ

ಗಳಗಳನೆ ಗಿಡದೇಲಿ ಉದರ್ಯಾವೋ

ಗೆಣೆಯಾ ಉದರ್ಯಾವs

ದಿನ್ನಿ ಮಡ್ಡಿ ಗುಡ್ಡ ಅದರ್ಯಾವ;

ಅದನ ತಾ ಕಂಡು ನೊಂದಾsಳೊ

ಬೆಂದಾsಳೊ

ಅಂದಾsಳೋ

‘ಇದು ಎಂಥಾ ಜೀವದ ಬ್ಯಾಟಿ ಹಾಡೇ ಹಗಲs’ || ಚಿಗರಿಗಂಗಳ. . .

ಬೇಂದ್ರೆ ಈ ನುಡಿಯಲ್ಲಿ ಪಳಗಿಸಿದ ಬೇಟೆಯ ನಾಯಿಗಳ ಸಂಕೇತವನ್ನು ಬಳಸುತ್ತಿದ್ದಾರೆ. ಮಾನವನ ನಾಗರಿಕತೆಯಲ್ಲಿ ಜರುಗಿದ revolutionದ, ಅಂದರೆ Hunting stageದ ಚಿತ್ರವಿದು. ಬೇಟೆಯಾಡುವ ಪ್ರಾಣಿಗಳನ್ನು domesticate ಮಾಡಿ, ಅವುಗಳಿಂದ ಬೇಟೆಯಾಡಿಸುವ ಮಾನವ ಬುದ್ಧಿಯ ಚಿತ್ರವಿಲ್ಲಿದೆ. ಈ ಬೇಟೆಗೆ ‘ಹಸುಜೀವ’ ಬೆದರ್ಯಾವೊ. ಹಸು ಇದು ಪಶು ಪದದ ತದ್ಭವವಾಗಿದ್ದರೂ ಸಹ, ರೂಢಿಯಲ್ಲಿ ಹಸು ಅಂದರೆ ಆಕಳು ; ಆದುದರಿಂದ ಹಸುಜೀವ ಅಂದರೆ ಸಾಧು ಪ್ರಾಣಿಗಳು.

By indirect implication, ಇದು invaders ಹಾಗು invaded ಜನಾಂಗದವರನ್ನೂ ಸಹ ಸೂಚಿಸುತ್ತಿದೆ.

ಭಾರತ ದೇಶವನ್ನೇ ಉದಾಹರಣೆಗೆ ತೆಗೆದುಕೊಳ್ಳಬಹುದು. ಪ್ರಾಚೀನ ಕಾಲದಿಂದಲೂ ಈ ದೇಶದ ಮೇಲೆ ಆಕ್ರಮಣಗಳು ನಡೆಯುತ್ತಲೆ ಇವೆ. ಸುಸಂಸ್ಕೃತರಾದ ಹಾಗು ಆ ಕಾರಣದಿಂದಲೇ ದುರ್ಬಲರಾದ ಇಲ್ಲಿಯ ಜನತೆ, barbarian ಆಕ್ರಮಣಕಾರರಿಂದ ಅತ್ಯಾಚಾರಕ್ಕೊಳಗಾಗುತ್ತಲೆ ಬಂದಿದ್ದಾರೆ.

ಈ ಅತ್ಯಾಚಾರದಿಂದ ಪ್ರಕೃತಿಯೂ ಸಹ ಕಂಪಿಸಿದೆ ; ಗಿಡದ ಎಲೆಗಳು ಗಳಗಳನೆ ಉದರಿವೆ. ಅಷ್ಟೇ ಏಕೆ, ನಿರ್ಜೀವ ವಸ್ತುವಾದ ದಿನ್ನಿ, ಮಡ್ಡಿ, ಗುಡ್ಡ ಸಹ ನಡುಗಿವೆ.

ಬೇಂದ್ರೆಯವರು ಈ ವರ್ಣನೆಗಳಲ್ಲಿ gradation ಉಪಯೋಗಿಸುವದನ್ನು ಗಮನಿಸಬೇಕು.

ಮೊದಲು ಸಾಧುಪ್ರಾಣಿಗಳಿಗಾದ ಆಘಾತ ವರ್ಣಿಸಿ, ಆ ಬಳಿಕ ಸಸ್ಯಗಳಿಗಾದ ಆಘಾತವನ್ನು ಬಣ್ಣಿಸಲಾಗಿದೆ. ಆ ಬಳಿಕ ನಿರ್ಜೀವ ವಸ್ತುಗಳಿಗಾದ ಆಘಾತ ಬಣ್ಣಿಸಲಾಗಿದೆ. ಅಲ್ಲೂ ಸಹ, ಮೊದಲು ‘ದಿನ್ನಿ’, ಬಳಿಕ ಅದಕ್ಕಿಂತ ದೊಡ್ಡದಾದ ‘ಮಡ್ಡಿ’, ಬಳಿಕ ಅದಕ್ಕೂ ದೊಡ್ಡ ವಸ್ತುವಾದ ‘ಗುಡ್ಡ’ವನ್ನು ಬಣ್ಣಿಸಲಾಗಿದೆ.

ಈ ರೀತಿಯಾಗಿ ಕಲ್ಪನೆಯಲ್ಲೂ ಸಹ ಕ್ರಮಬದ್ಧತೆಯನ್ನು ಅನುಸರಿಸುವದು ಬೇಂದ್ರೆಯವರ ವೈಶಿಷ್ಟ್ಯವಾಗಿದೆ.

ಮೊದಲನೆಯ ನುಡಿಯ ಎರಡನೆಯ ಭಾಗದಲ್ಲಿ ಭೂಮಿತಾಯಿ ಮರುಗಿದಂತೆ, ಇಲ್ಲೂ ಸಹ ಅವಳು ಸಂಕಟಪಡುವ ಚಿತ್ರವಿದೆ:

ಅದನ ತಾ ಕಂಡು ನೊಂದಾsಳೊ

ಬೆಂದಾsಳೊ

ಅಂದಾsಳೋ

‘ಇದು ಎಂಥಾ ಜೀವದ ಬ್ಯಾಟಿ ಹಾಡೇ ಹಗಲs’ || ಚಿಗರಿಗಂಗಳ. . .

ವಸುಂಧರೆಗೆ ಪ್ರತಿ ಜೀವಿಯೂ,-- ಸಸ್ಯವೇ ಇರಲಿ ಅಥವಾ ಚಿಕ್ಕ ಪ್ರಾಣಿಯೇ ಇರಲಿ,-- ತನ್ನ ಮಗುವೆ. ಹೀಗಾಗಿ ಇಲ್ಲಿ ನಡೆಯುತ್ತಿರುವ ‘ಜೀವದ ಬೇಟೆ’ಯನ್ನು ಕಂಡು ಅವಳು ಶೋಕಿಸುತ್ತಿದ್ದಾಳೆ.

…………………………………………….........

ಮೂರನೆಯ ನುಡಿಯಲ್ಲಿ, ಮಾನವನ ಕ್ರಾಂತಿ ಇನ್ನೂ ಮೇಲಕ್ಕೇರಿದೆ. ಇದೀಗ ಆತ ರಾಜ್ಯಗಳನ್ನು ಕಟ್ಟಿಕೊಂಡಿದ್ದಾನೆ. ಪರರಾಜ್ಯಗಳನ್ನು ಆಕ್ರಮಿಸಿ ಚಕ್ರವರ್ತಿಯಾಗುತ್ತಿದ್ದಾನೆ. ಆದರೆ, ನಾಗರಿಕತೆಯ ಈ ಆಟದಲ್ಲಿ ಸ್ವತಃ ಮಾನವನೇ ಬಲಿಯಾಗುತ್ತಿದ್ದಾನೆ.

ಆಳುಗಳ ಹೋರಾಟ

ಆಳುವವರಿಗೆ ಆಟ

ಗಾಳಕ್ಕ ಸಿಕ್ಕ ಮೀನದ ಗೋಳಾಟೊ

ಗೆಣೆಯಾ ಗೋಳಾಟೋ

ಗೆದ್ದವರ ಇದ್ದವರ ಹಾರಾಟ;

ಅರೆಸತ್ತ ಜೀವಾ ಕೊಳೆತಾsವೊ

ಹುಳತಾsವೊ

ಅಳತಾsವೋ

ಹಸುಗೂಸು ತಿರುಗಿ ಹೊಟ್ಟ್ಯಾಗ ಹುಗಿಧ್ಹಾಂಗ || ಚಿಗರಿಗಂಗಳ. . .

ಹೋರಾಟವೆನ್ನುವದು, ರಾಜ್ಯವಿಸ್ತಾರ ಎನ್ನುವದು ಇವೆಲ್ಲ ಆಳುವವರಿಗೆ ಒಂದು ಆಟ. ಆದರೆ ಹೋರಾಟದಲ್ಲಿ ತೊಡಗಿದ ಆಳುಗಳಿಗೆ ಹಾಗೂ ಅಮಾಯಕ ಪ್ರಜೆಗಳಿಗೆ ಈ ಹೋರಾಟವೆನ್ನುವದು ಒಂದು ದುಃಸ್ವಪ್ನವಿದ್ದಂತೆ. ಕೌರವ-ಪಾಂಡವರ ಯುದ್ಧವೇ ಆಗಲಿ, ಜಾಗತಿಕ ಯುದ್ಧವೇ ಆಗಲಿ, ಸಾಮಾನ್ಯ ಜನತೆಗೆ ಅದು ಬೇಕಾಗಿಲ್ಲದ ಯುದ್ಧ. ಅವರು ಗಾಳಕ್ಕೆ ಸಿಕ್ಕ ಮೀನಿನಂತೆ ಚಡಪಡಿಸುತ್ತಾರೆ. ಎಷ್ಟೇ ಕಣ್ಣೀರು ಹಾಕಿದರೇನು, ಗಾಳವು ಮೀನಿಗೆ ದಯೆ ತೋರುವದೆ?

ಈ ಹೋರಾಟದಲ್ಲಿ ಗೆದ್ದವರು ಹಾಗು ಬದುಕಿದ್ದವರು ಸತ್ತವರ ಮೇಲೆ ಬಾವುಟ ಹಾರಿಸುತ್ತಾರೆ. ಸೋತು ಬದುಕುಳಿದವರ ಪಾಡು ನಾಯಿಪಾಡು. ಅವರು ಅರೆಸತ್ತಂತವರು. ಅವರ ಬದುಕು ಕೊಳೆತು ಹೋಗುತ್ತದೆ, ಹುಳತು ಹೋಗುತ್ತದೆ, ಅಳುವುದೊಂದೇ ಅವರಿಗೆ ಉಳಿದ ಬದುಕು.

ಇದನ್ನು ಕಂಡ ಭೂಮಿತಾಯಿಗೆ ಹೇಗೆ ಅನಿಸುತ್ತದೆ?

ನಾನಾ ಜೀವಿಗಳಿಗೆ ಜನ್ಮ ಕೊಡುತ್ತಿರುವ, ಅನ್ನ ಕೊಡುತ್ತಿರುವ, ತಾಯಿ ವಸುಂಧರೆಗೆ ಹೇಗೆನ್ನಿಸುತ್ತದೆ?

‘ಹಸುಗೂಸು ತಿರುಗಿ ಹೊಟ್ಟ್ಯಾಗ ಹುಗಿಧ್ಹಾಂಗ.’

Her womb is a burial ground for her babies.

ಬೇಂದ್ರೆಯವರ ಉಪಮೆಗಳಲ್ಲಿ ಅತಿ ಕಠೋರವಾದ ಉಪಮೆ ಇದು ಎಂದು ಹೇಳಬಹುದು. ಅವರ ಮತ್ತೊಂದು ರಚನೆ ‘ನೀ ಹೀಂಗ ನೋಡಬ್ಯಾಡ ನನ್ನ’ ಕವನದಲ್ಲಿ ಸಹ ಶೋಕರಸದ ಉನ್ನತ ಉಪಮೆಯೊಂದಿದೆ:

“ಹುಣ್ಣವಿ ಚಂದಿರನ ಹೆಣಾ ಬಂತೊ ಮುಗಿಲಾಗ ತೇಲುತ ಹಗಲs”.

ಆದರೆ ಈ ಉಪಮೆಯಲ್ಲಿ ಶೋಕವಷ್ಟೇ ಅಲ್ಲದೆ, ಕ್ರೌರ್ಯವಿದೆ.

……………………………………………………….......

ಕೊನೆಯ ನುಡಿಯಲ್ಲಿ, ಭೂಮಿತಾಯಿಯ ಈ ಬವಣೆ, ಕೊನೆಯಿಲ್ಲದ ಬವಣೆ ಎನ್ನುವ ಭಾವನೆಯನ್ನು ಕವಿ ವ್ಯಕ್ತಪಡಿಸುತ್ತಾರೆ:

ತನ್ನ ತಾ ಸುತ್ತ್ಯಾಳೊ

ಹೊತ್ತಿನ ಬೆನ್ಹತ್ತ್ಯಾಳೊ

ತಿಂಗಳನ ಬಗಲಾಗೆತ್ತ್ಯಾಳೊ

ಗೆಣೆಯಾ ಎತ್ತ್ಯಾಳೊ

ಉಕ್ಕುಕ್ಕುವ ದುಃಖ ಒಳಗೊತ್ತ್ಯಾಳೊ;

ನಿಂತ ನೆಲವೆಂದು ಕಡಿಲಾsಕೊ

ಬಡಿಲಾsಕೊ

ಒಡಿಲಾsಕೊ

ಒಡವ್ಯಲ್ಲೋ ಮಗನೇ ಉಸಿರಿದ್ದೊಡಲಂತಾsಳೋ || ಚಿಗರಿಗಂಗಳ. . . .

ವಾಸ್ತವತೆ ಹಾಗು ಕಲ್ಪನೆಗಳನ್ನು ಕರಗಿಸಿ ಒಂದಾಗಿಸುವ ಬೇಂದ್ರೆ ಪ್ರತಿಭೆ ಇಲ್ಲಿ ಮತ್ತೊಮ್ಮೆ ಕಾಣುತ್ತದೆ.

ಓರ್ವ ಅಸಹಾಯಕ ಸ್ತ್ರೀ, ಸಂಕಟಗಳಿಂದ ಪಾರಾಗಲು ತನ್ನ ಸೀಮಿತ ಪರಿಧಿಯಲ್ಲಿ ಸುತ್ತುವಳು ಎನ್ನುವ ಅರ್ಥವನ್ನು ಕೊಡುವ ಮೊದಲ ಸಾಲು, ಭೂಮಿಯು ತನ್ನ ಅಕ್ಷದ ಸುತ್ತಲೂ ತಿರುಗುವ ವಾಸ್ತವವನ್ನೂ ಹೇಳುತ್ತದೆ. ಅದರಂತೆ ‘ಹೊತ್ತಿನ ಬೆನ್ಹತ್ತ್ಯಾಳೊ’ ಎನ್ನುವ ಸಾಲು ಅವಳು ತನ್ನ ದುಃಖಗಳನ್ನು ನಿವಾರಿಸಲು ಕಾಲವನ್ನು ಕಾಯುತ್ತಿದ್ದಾಳೆ ಎನ್ನುವ ಅರ್ಥದ ಜೊತೆಗೇ, ಸೂರ್ಯನ (=ಹೊತ್ತಿನ) ಸುತ್ತಲೂ ತಿರುಗುವ ಭೂಮಿಯನ್ನೂ ಸಹ ಸೂಚಿಸುತ್ತದೆ. ‘ತಿಂಗಳನ ಬಗಲಾಗೆತ್ತ್ಯಾಳೊ’ ಎನ್ನುವ ಸಾಲು ಹಸುಗೂಸನ್ನು ಎತ್ತಿಕೊಂಡ ಹೆಂಗಸಿನ ಚಿತ್ರವನ್ನು ಕೊಡುತ್ತದೆ; ಅದರಂತೆಯೇ ಚಂದ್ರನು (=ತಿಂಗಳನು) ಭೂಮಿಯ ಸುತ್ತಲೂ ತಿರುಗುತ್ತಿರುವ ವಾಸ್ತವವನ್ನೂ ಒಳಗೊಂಡಿದೆ.

ಇಂತಹ ಭೂಮಿತಾಯಿ ತನ್ನ ದುಃಖವನ್ನು ತನ್ನೊಳಗೇ ಒತ್ತಿ ಹಿಡಿದುಕೊಂಡು, ತನ್ನ ಬುದ್ಧಿಶಾಲಿ (!) ಮಕ್ಕಳಿಗೆ ಅಂದರೆ ಮಾನವರಿಗೆ ಅಂಗಲಾಚುತ್ತಿದ್ದಾಳೆ:

ನಿಂತ ನೆಲವೆಂದು ಕಡಿಲಾsಕೊ

ಬಡಿಲಾsಕೊ

ಒಡಿಲಾsಕೊ

ಒಡವ್ಯಲ್ಲೋ ಮಗನೇ ಉಸಿರಿದ್ದೊಡಲಂತಾsಳೋ.

ಆಳುವವರಿಗೆ ಹೆಣ್ಣು, ಹೊನ್ನು, ಮಣ್ಣು ಇವು ತಮ್ಮ ಘನತೆಯನ್ನು ಸಾರುವ ಆಭರಣಗಳು ;

ದೊಡ್ಡಸ್ತಿಕೆ ತೋರುವ status- symbols.

ನವಾಬನ ಜನಾನಾ ದೊಡ್ಡದಿದ್ದಷ್ಟೂ ಆತ ದೊಡ್ಡ ನವಾಬ.

ಆದರೆ, ಆತನ ದೊಡ್ಡಸ್ತಿಕೆಗಾಗಿ ಬಲಿಯಾಗುವ ಜನರ ಕಣ್ಣೀರನ್ನು ಆತ ಗಮನಿಸುವದಿಲ್ಲ.

ಇದನ್ನೇ ಭೂತಾಯಿ ಹೀಗೆ ಹೇಳುತ್ತಾಳೆ:

ನನ್ನನ್ನು ನಿರ್ಜೀವ ನೆಲವೆಂದು ತಿಳಿದು ಕಡಿಯಬೇಡ; ನಾನು ಕೇವಲ ಒಡವೆ ಅಲ್ಲ, ನಾನು ಉಸಿರಿರುವ ಒಡಲು; ಯಾಕೆಂದರೆ ನನ್ನ ಉಸಿರಿನಿಂದಲೆ ಬದಕುತ್ತಿವೆ ನನ್ನಲ್ಲಿಯ ಕೋಟಿ ಕೋಟಿ ಜೀವಿಗಳು.

‘ಒಡವ್ಯಲ್ಲೊ ಮಗನೆ ಉಸಿರಿದ್ದೊಡಲೊ’!

…………………………………………………….......

ಬೇಂದ್ರೆಯವರ ಕಾಲದಲ್ಲಿಯೇ, ಎಲ್ಲಾ ಯುರೋಪಿಯನ್ ದೇಶಗಳು ಏಶಿಯಾ ಹಾಗೂ ಆಫ್ರಿಕಾ ಖಂಡದ ದೇಶಗಳಲ್ಲಿ ಕ್ರೌರ್ಯದಿಂದ ಅಧಿಕಾರ ಸ್ಥಾಪಿಸಿ, ಆ ದೇಶಗಳನ್ನು ಶೋಷಿಸುತ್ತಿದ್ದವು. ಭಾರತವಂತೂ ಪುರಾತನ ಕಾಲದಿಂದಲೇ ಆಕ್ರಮಣಗಳನ್ನು ಎದುರಿಸುತ್ತ ಬಂದ ನಾಡು.

ಈ ಎಲ್ಲ ಸಂಗತಿಗಳು ಬೇಂದ್ರೆಯವರಿಗೆ ಈ ಕವನವನ್ನು ಬರೆಯಲು ಪ್ರೇರಣೆ ಕೊಟ್ಟಿರಬೇಕು. ಇಂತಹದೇ ಇನ್ನೊಂದು ಕವನವನ್ನು ಅವರು ರಚಿಸಿದ್ದಾರೆ : ‘ಮೊದಲಗಿತ್ತಿ’

(ಮೊದಲಗಿತ್ತಿಯಂತೆ ಮೆರೆಯುವಿಯೇ ತಾಯಿ|

ಮೊದಲಗಿತ್ತಿಯಂತೆ ಮೆರೆಯುತಿಹೆ.)

ಮಾನವನ ನಾಗರಿಕತೆ ಬೆಳೆದಂತೆಲ್ಲ ಶೋಷಣೆಯೂ ಹೆಚ್ಚುತ್ತ ಹೋದದ್ದನ್ನು ಅವರು ತಮ್ಮ ‘ಕರಡಿ ಕುಣಿತ’ ಕವನದಲ್ಲಿ ಬಣ್ಣಿಸಿದ್ದಾರೆ:

ಯಾವ ಕಾಡಡವಿಯಲ್ಲಿ ಜೇನುಂಡು ಬೆಳೆದಿದ್ದ

ಜಾಂಬುವಂತನ ಹಿಡಿದು ತಂದಾನೊ

ಧಣಿಯರ ಮನೆ ಮುಂದೆ ಕಾವಲು ಮಾಡಣ್ಣ

ಧಣಿ ದಾನ ಕೊಡುವನು ಎಂದಾನೊ.

ಜಾಂಬುವಂತ ಅಂದರೆ ಮೂಲಜನಾಂಗದ ಪ್ರತಿನಿಧಿ. ಧಣಿ ಅಂದರೆ feudal societyಯ ಪ್ರತಿನಿಧಿ.

ಅಡವಿಯಲ್ಲಿ ಸ್ವತಂತ್ರನಾಗಿ, ಜೇನುಂಡು ಬದುಕುತ್ತಿದ್ದ ಕರಡಿಯನ್ನು, ನಾಗರಿಕ ಮಾನವನು ಹಿಡಿದು ತಂದು, ಧಣಿ ಕೊಡುವ ದಾನಕ್ಕಾಗಿ (!) ಸಲಾಮು ಹೊಡಿಸುತ್ತಾನೆ!

ಬೇಂದ್ರೆಯವರದು ಭಾರತೀಯ ಆದರ್ಶ, ಈಶಾವಾಸ್ಯ ಉಪನಿಷತ್ದಲ್ಲಿ ಹೇಳುವಂತೆ :

“ಈಶಾವಾಸ್ಯಮಿದಮ್ ಸರ್ವಮ್,ಯತ್ಕಿಂಚ ದುರಿತಮ್ ಮಯಿ;

ತೇನ ತ್ಯಕ್ತೇನ ಭುಂಜೀಥಾ:, ಮಾ ಗೃಧ: ಕಸ್ಯಸ್ವಿದ್ಧನಮ್.

ಈ ಆದರ್ಶವನ್ನು ಬಿಂಬಿಸುವ ಕವನಗಳೂ ಸಹ ಅವರಿಂದ ಹೊಮ್ಮಿವೆ. ಉದಾಹರಣೆಗೆ, ಅವರ ‘ಬೈರಾಗಿಯ ಹಾಡು’ ಎನ್ನುವ ಅತಿ ಚಿಕ್ಕ ಕವನವೊಂದನ್ನು ನೋಡಬಹುದು:

ಬೈರಾಗಿಯ ಹಾಡು

ಇಕೋ ನೆಲ-ಅಕೋ ಜಲ

ಅದರ ಮೇಲೆ ಮರದ ಫಲ

ಮನದೊಳಿದೆ ಪಡೆವ ಛಲ

ಬೆಳೆವಗೆ ನೆಲವೆಲ್ಲ ಹೊಲ.

ಜಲಧಿವರೆಗು ಒಂದೆ ಕುಲ

ಅನ್ನವೆ ಧರ್ಮದ ಮೂಲ

ಪ್ರೀತಿಯೆ ಮೋಕ್ಷಕ್ಕೆ ಬಲ

ಇದೇ ಶೀಲ ಸರ್ವಕಾಲ || ಇಕೋ ನೆಲ…..

……………………………………………….......

ಟಿಪ್ಪಣಿ:

ಕನಸುಗಾತಿ ತಮ್ಮ blog ಭಾವಸಂಗಮದಲ್ಲಿ,

enjabment ಎನ್ನುವ ಒಂದು ಇಂಗ್ಲಿಶ್ ಅಲಂಕಾರದ ಬಗೆಗೆ ವಿವರಿಸಿದ್ದಾರೆ. ನಾನು ತಿಳಿದುಕೊಂಡ ಪ್ರಕಾರ ಕವನದ flow ಅನ್ನು ಒಂದು extra ಸಾಲಿನ ಮೂಲಕ ಇಲ್ಲಿ ಮುರಿಯಲಾಗುತ್ತದೆ.

ಬೇಂದ್ರೆ ತಮ್ಮ ಈ ಕವನದಲ್ಲಿ enjambment ಅನ್ನು ಅತ್ಯುತ್ತಮವಾಗಿ ಬಳಸಿಕೊಂಡಿದ್ದಾರೆ. ಮೊದಲನೆಯ ನುಡಿಯ ಉದಾಹರಣೆಯನ್ನೇ ತೆಗೆದುಕೊಳ್ಳೋಣ:

ಹೊಳಿಹಳ್ಳ ತೊರೆದಾವೋ

ಗೆಣೆಹಕ್ಕಿ ಬೆರೆದಾವೋ

ಆಗದವರ ಹೊಟ್ಟಿ ಉರದಾವೋ

ಗೆಣೆಯಾ ಉರದಾವs

ಅಂಥವರ ದಿಟ್ಟಿ ಮನಿ ಮುರದಾವ;

ಅದನ ತಾ ಕಂಡು ಕೊರಗ್ಯಾsಳೊ

ಮರುಗ್ಯಾsಳೊ

ಸೊರಗ್ಯಾsಳೋ

ಹೂ ಕಾಯಿ ಹಣ್ಣು ತುಂಬಿದ ಬನದಾsಗ .

ಈ ನುಡಿಯ ಮೊದಲ ನಾಲ್ಕು ಸಾಲುಗಳಲ್ಲಿ ಒಂದು ಚಿತ್ರವಿದೆ ; ಕೊನೆಯ ನಾಲ್ಕು ಸಾಲುಗಳಲ್ಲಿ ಭೂಮಿತಾಯಿಯ ಸಂಕಟವಿದೆ. ಇವುಗಳ ಪ್ರವಾಹವನ್ನು ನಡುವಿನ ಸಾಲು ಅಂದರೆ ಐದನೆಯ ಸಾಲು ಮುರಿಯುತ್ತದೆ.

ಇದೇ ರೀತಿಯಾಗಿ ಇತರ ನುಡಿಗಳಲ್ಲೂ ಸಹ, ಮೊದಲ ನಾಲ್ಕು ಸಾಲುಗಳನ್ನು ಹಾಗು ಕೊನೆಯ ನಾಲ್ಕು ಸಾಲುಗಳನ್ನು ,ನಡುವಿನ ಅಂದರೆ ಐದನೆಯ ಸಾಲು ಪ್ರತ್ಯೇಕಿಸುತ್ತದೆ.

ಈ ಕವನದ ಇನ್ನೊಂದು ರಚನಾವೈಶಿಷ್ಟ್ಯವನ್ನು ಗಮನಿಸಬಹುದು :

ಪ್ರತಿಯೊಂದು ನುಡಿಯಲ್ಲಿ ಮೊದಲ ನಾಲ್ಕು ಸಾಲುಗಳು ಭೂಮಿತಾಯಿಯ ಒಂದು ಸ್ಥಿತಿಯನ್ನು ಬಣ್ಣಿಸುತ್ತವೆ. ಕೊನೆಯ ನಾಲ್ಕು ಸಾಲುಗಳು ಅವಳು ದುಃಖಿಸುವದನ್ನು ಬಣ್ಣಿಸುತ್ತವೆ.

ಮೊದಲನೆಯ ನುಡಿಯಿಂದ ಕೊನೆಯ ನುಡಿಯವರೆಗೆ, ವಸುಂಧರೆಯ ದುರಂತ ಗಂಭೀರವಾಗುತ್ತ ಹೋಗುವದನ್ನು ವರ್ಣಿಸಲಾಗಿದೆ.

“ಚಿಗರಿಗಂಗಳ ಚೆಲುವಿ” ಸ್ವತಃ ಬೇಂದ್ರೆಯವರಿಗೇ ಪ್ರಿಯವಾದ ಕವನವಾಗಿತ್ತು.

ಹೆಚ್ಚಿನ ಓದಿಗೆ:http://sallaap.blogspot.com/2008/09/blog-post.html

೨.ಪರಾಗ

’ಪರಾಗ’ ಕವನವು ಬೇಂದ್ರೆಯವರ ಸಖೀಗೀತದಲ್ಲಿ ಸೇರಿದೆ. ಕವನದ ಪೂರ್ತಿಪಾಠವು ಹೀಗಿದೆ:

ಬಾ ಭೃಂಗವೆ ಬಾ, ವಿರಾಗಿಯಂದದಿ

ಭ್ರಮಿಸುವಿ ನೀನೇಕೆ?

ಕಂಪಿನ ಕರೆಯಿದು ಸರಾಗವಾಗಿರೆ

ಬೇರೆಯ ಕರೆ ಬೇಕೆ?

ಬರಲಿಹ ಕಾಯಿಯ ಪಾಡಿನ ರುಚಿಯೂ

ಇದರೊಳು ಮಡಗಿಹುದು.

ನಾಳಿನ ಹಣ್ಣಿನ ರಸವಿಲ್ಲಿಯ ಮಕ-

ರಂದದೊಳಡಗಿಹುದು.

ಕವನ ಕೋಶದೀ ಕಮಲ ಗರ್ಭದಲ್ಲಿ

ಪರಾಗವೊರಗಿಹುದು.

ನಿನ್ನ ಮುಖಸ್ಪರ್ಶವೂ ಸಾಕು; ಹೊಸ

ಸೃಷ್ಟಿಯೆ ಬರಬಹುದು.

ಬೇಂದ್ರೆಯವರ ಈ ಕವನವು ಒಂದು ಸರಳವಾದ ಹಾಗು ಅಷ್ಟೇ ಮೋಹಕವಾದ ಕವನ. ಒಂದು ಹೂವು ದುಂಬಿಯನ್ನು ಕರೆಯುತ್ತಿರುವ ಚಿತ್ರ ಈ ಕವನದಲ್ಲಿದೆ. ದುಂಬಿ ತನ್ನನ್ನು ಗಮನಿಸದೆ, ದೂರ ಚಲಿಸಲು, ಈ ಹೂವು ಆ ದುಂಬಿಗೆ ಆಹ್ವಾನವೀಯುತ್ತಿದೆ. ನಾನು ಸೂಸುತ್ತಿರುವ ಕಂಪು ಸರಾಗವಾಗಿದೆ ಎಂದು ಹೂವು ದುಂಬಿಗೆ ಹೇಳುತ್ತಿದೆ. ಇಲ್ಲಿ ಸರಾಗಕ್ಕೆ ಎರಡು ಅರ್ಥಗಳು. ಒಂದು ಅರ್ಥವೆಂದರೆ ತನ್ನ ಸುವಾಸನೆಯಲ್ಲಿ ಅನುರಾಗವಿದೆ; ಎರಡನೆಯ ಅರ್ಥವೆಂದರೆ ದುಂಬಿಯ ಆತಿಥ್ಯಕ್ಕೆ ಹೂವು ಅನುಕೂಲವಾಗಿದೆ. ಹೀಗಿರಲು ದುಂಬಿ ವಿರಾಗಿಯಂತೆ ಭ್ರಮಿಸಬೇಕೆ? ಭ್ರಮಿಸು ಪದಕ್ಕೂ ಎರಡು ಅರ್ಥಗಳಿವೆ. ಒಂದು ಸುತ್ತಾಡು. ಎರಡನೆಯ ಅರ್ಥ ಹುಚ್ಚನಾಗು. So, ನನ್ನ ಬಳಿಗೆ ಬರದೆ ಹುಚ್ಚನಂತೆ ಎಲ್ಲೆಲ್ಲೊ ಹೋಗುತ್ತಿರುವದೇಕೆ? ನನ್ನಲ್ಲಿ ಅನುರಾಗವಿದೆ, ನಾನು ಅನುಕೂಲೆಯಾಗಿದ್ದೇನೆ ಎಂದು ಹೂವು ದುಂಬಿಗೆ ಹೇಳುತ್ತಿದೆ.

ಈ ಕರೆ ನೀಡುತ್ತಿರುವ ಉದ್ದೇಶವನ್ನು ಹೂವು ಈಗ ಬಯಲು ಮಾಡುತ್ತಿದೆ. ಅದು ಫಲದ ಸೃಷ್ಟಿ. ನಾಳೆ ಬರುವ ಹಣ್ಣಿನ ರುಚಿ ಈ ಮಕರಂದದಲ್ಲಿ ಅಡಗಿದೆ ಎಂದು ಹೂವು ಹೇಳುವಾಗ ಈ ದುಂಬಿಯ ಕಾರ್ಯವು ದೂತನ ಕಾರ್ಯವೆನ್ನುವದರ ಅರಿವು ಆಗುತ್ತದೆ. (=Pollinating Agent).

ಆದರೆ ಈ ಕವನವು ಕೇವಲ ನಿಸರ್ಗದ ಒಂದು ಪ್ರಕ್ರಿಯೆಯನ್ನು ವರ್ಣಿಸುವ ಕವನವಲ್ಲವೆನ್ನುವದು ಮೂರನೆಯ ನುಡಿಯಿಂದ ಗೊತ್ತಾಗುತ್ತದೆ. ’ಕವನ ಕೋಶದೀ ಕಮಲಗರ್ಭದಲಿ ಪರಾಗವೊರಗಿಹುದು’ ಎನ್ನುವ ಸಾಲನ್ನು ಓದಿದಾಗ, ’ಓಹೋ, ಈ ಹೂವು ನಮ್ಮ ಕಣ್ಣಿಗೆ ಬೀಳುವ ಹೂವಲ್ಲ; ಇದು ಕಾವ್ಯವಸ್ತುವೆನ್ನುವ ಹೂವು ಹಾಗು ಭ್ರಮರವೆಂದರೆ ಕವಿ’ ಎನ್ನುವ ಅರ್ಥ ಹೊಳೆಯುವದು. ಕವಿಯ ಮನಸ್ಸು ಕಾವ್ಯರಚನೆಗೆ ವಿಮುಖವಾಗಿ ಎಲ್ಲೆಲ್ಲೊ ಚಲಿಸುತ್ತಿರುವಾಗ ಅವನ ಒಳಗಿರುವ ಕಾವ್ಯವಸ್ತು ಅವನನ್ನು ಕಾವ್ಯಸೃಷ್ಟಿಗೆ ಕರೆಯುತ್ತಿದೆ. ಕವಿಯ ಮನಸ್ಸಿನಲ್ಲಿರುವ ಕಾವ್ಯ ಹೊರಬರಲು ಬೇಕಾದದ್ದು ಕೇವಲ ಆತನ ಮುಖಸ್ಪರ್ಶ ಮಾತ್ರ. ಕವಿಯು ಇಲ್ಲಿ ಕೇವಲ ದೂತನ ಕಾರ್ಯ ನಿರ್ವಹಿಸುತ್ತಿದ್ದಾನೆ ಎಂದು ಈ ಕವನದ ಭಾವ. ಇದೇ ಭಾವವು ಬೇಂದ್ರೆಯವರ ’ಭಾವಗೀತೆ’ ಕವನದಲ್ಲಿಯೂ ಕಾಣಿಸುತ್ತದೆ.

“ವಜ್ರಮುಖವ ಚಾಚಿ ಮುತ್ತುತಿತ್ತು ಹೂವ ಹೂವಾ

ನೀರ ಹೀರಿ ಹಾರುತಿತ್ತು ನೀರಸವಾ ಜಾವಾ

ಅಯ್ಯೊ ನೋವೆ! ಅಹಹ ಸಾವೆ! ವಿಫಲ ಸಫಲ ಜೀವಾ

ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸಾ”

ಮೇಲಿನ ಸಾಲುಗಳಲ್ಲಿಯೂ ಸಹ ದುಂಬಿಯು ತನ್ನ ವಜ್ರಮುಖದಿಂದ ಹೂ ಹೂವುಗಳ ಮಕರಂದವನ್ನು ಹೀರುವ ವರ್ಣನೆ ಇದೆ. ಈ ಕಾರ್ಯದಿಂದ ಹೊಸ ಸೃಷ್ಟಿ ಅಂದರೆ ಹಣ್ಣು ಹುಟ್ಟುವದು, ಆದರೆ ಹೂವಿನ ಬಾಳು ಕೊನೆಗೊಳ್ಳುವದು(=ವಿಫಲ ಸಫಲ ಜೀವಾ).

ಬೇಂದ್ರೆಯವರಿಗೆ ಕಷ್ಟಪಟ್ಟು ಕವನ ಕಟ್ಟಬೇಕಾಗಿರಲಿಲ್ಲ. ಕಾವ್ಯ ಅವರ ಮನಸ್ಸಿನಲ್ಲಿಯೆ ಯಾವಾಗಲೂ ಕುಣಿಯುತ್ತಿದ್ದು, ಅದನ್ನು ಹೊರಗೆ ತರುವದಷ್ಟೆ ತಮ್ಮ ಕಾರ್ಯವೆಂದು ಅವರು ಅನೇಕ ರೀತಿಗಳಲ್ಲಿ ಹೇಳಿದ್ದಾರೆ. ಅವರ ಮತ್ತೊಂದು ಕವನದಲ್ಲಿ ----

“ಕಟ್ಟೋರೆಲ್ಲ ಕವಿಗಳಲ್ಲ, ಹುಟ್ಟೋರೆಲ್ಲ ಭವಿಗಳಲ್ಲ;

ಕರು ಕೂಡ ಕಟ್ಟಿದ್ದುಂಟು, ಬಸವಣ್ಣನೂ ಹುಟ್ಟಿದ್ದುಂಟು.”

ಎಂದು ಹೇಳುತ್ತಾರೆ.

’ಕರು ಕಟ್ಟುವದು’ ಎಂದರೆ ಆಕಳು ಗರ್ಭ ಧರಿಸುವದು ’ಬಸವಣ್ಣನೂ ಹುಟ್ಟಿದ್ದುಂಟು’ ಎಂದರೆ ಆಕಳಿಗೆ ಹೋರಿಮರಿ ಜನಿಸುವದು. ಇದು ಬೇಂದ್ರೆಯವರ ಮಾತಿನ ಚಮತ್ಕಾರ.

ಹೆಚ್ಚಿನ ಓದಿಗೆ : http://sallaap.blogspot.com/2008/04/blog-post_21.html

೩.ಹುಬ್ಬಳ್ಳಿಯಾಂವಾ

‘ಹುಬ್ಬಳ್ಳಿಯಾಂವಾ’ ಇದು ಬೇಂದ್ರೆಯವರ ಅತ್ಯಂತ ಜನಪ್ರಿಯ ಗೀತೆಗಳಲ್ಲೊಂದು. ಜಾನಪದ ಗೀತೆಗಳ ಸರದಾರ ಎಂದೆನಿಸಿಕೊಂಡ ಹುಕ್ಕೇರಿ ಬಾಳಪ್ಪನವರ ಹಾಡುಗಾರಿಕೆಯಿಂದ ಈ ಹಾಡಿಗೆ ಸಿಕ್ಕಷ್ಟೇ ಪ್ರಸಿದ್ಧಿ, ಈ ಹಾಡಿನಿಂದ ಬಾಳಪ್ಪನವರಿಗೂ ದೊರೆಯಿತು.

ಬೇಂದ್ರೆಯವರು ಬರೆಯಬಯಸಿದ ಒಂದು ನಾಟಕದಲ್ಲಿ ಈ ಹಾಡು ಬರುತ್ತದೆ. ಪ್ರಣಯಭಂಗದಿಂದ ಹುಚ್ಚಳಂತಾದ ಸೂಳೆಯೊಬ್ಬಳು ಹಾಡುವ ಹಾಡಿದು.

ಹಾಡಿನ ಪೂರ್ತಿಪಾಠ ಇಲ್ಲಿದೆ :

ಇನ್ನೂ ಯಾಕ ಬರಲಿಲ್ಲವ್ವಾ ಹುಬ್ಬಳ್ಳಿಯಾಂವಾ

ವಾರದಾಗ ಮೂರಸರತಿ ಬಂದು ಹೋದಾಂವಾ ||ಪಲ್ಲ||

ಭಾರಿ ಜರದ ವಾರಿ ರುಮ್ಮಾಲಾ ಸುತ್ತಿಕೊಂಡಾಂವಾ

ತುಂಬು-ಮೀಸಿ ತೀಡಿಕೋತ ಹುಬ್ಬು ಹಾರಸಾಂವಾ

ಮಾತು ಮಾತಿಗೆ ನಕ್ಕ ನಗಿಸಿ ಆಡಿಸ್ಯಾಡಾಂವಾ

ಏನೋ ಅಂದರ ಏನೋ ಕಟ್ಟಿ ಹಾಡ ಹಾಡಾಂವಾ

ಇನ್ನೂ ಯಾಕ……….

ತಾಳೀಮಣೀಗೆ ಬ್ಯಾಳಿಮಣಿ ನಿನಗ ಬೇಕೆನಂದಾಂವಾ

ಬಂಗಾರ-ಹುಡೀಲೇ ಭಂಡಾರಾನ ಬೆಳೆಸೇನಂದಾಂವಾ

ಕಸಬೇರ ಕಳೆದು ಬಸವೇರ ಬಿಟ್ಟು ದಾಟಿ ಬಂದಾಂವಾ

ಜೋಗತೇರಿಗೆ ಮೂಗುತಿ ಅಂತ ನನsಗ ಅಂದಾಂವಾ

ಇನ್ನೂ ಯಾಕ……….

ಇರು ಅಂದರ ಬರತೇನಂತ ಎದ್ದು ಹೊರಡಾಂವಾ

ಮಾರೀ ತೆಳಗ ಹಾಕಿತಂದರ ಇದ್ದು ಬಿಡಾಂವಾ

ಹಿಡಿ ಹಿಡೀಲೆ ರೊಕ್ಕಾ ತಗದು ಹಿಡಿ ಹಿಡಿ ಅನ್ನಾಂವಾ

ಖರೇ ಅಂತ ಕೈಮಾಡಿದರ ಹಿಡsದ ಬಿಡಾಂವಾ

ಇನ್ನೂ ಯಾಕ……….

ಚಹಾದ ಜೋಡಿ ಚೂಡಾಧಾಂಗ ನೀ ನನಗಂದಾಂವಾ

ಚೌಡಿಯಲ್ಲ ನೀ ಚೂಡಾಮಣಿಯಂತ ರಮಿsಸ ಬಂದಾಂವಾ

ಬೆರಳಿಗುಂಗರಾ ಮೂಗಿನಾಗ ಮೂಗಬಟ್ಟಿಟ್ಟಾಂವಾ

ಕಣ್ಣಿನಾಗಿನ ಗೊಂಬೀಹಾಂಗ ಎದ್ಯಾಗ ನಟ್ಟಾಂವಾ

ಇನ್ನೂ ಯಾಕ……….

ಹುಟ್ಟಾ ಯಾಂವಾ ನಗಿಕ್ಯಾದಗೀ ಮುಡಿಸಿಕೊಂಡಾಂವಾ

ಕಂಡ ಹೆಣ್ಣಿಲೆ ಪ್ರೀತಿ ವೀಳ್ಯೆ ಮಡಿಚಿಕೊಂಡಾಂವಾ

ಜಲ್ಮ ಜಲ್ಮಕ ಗೆಣ್ಯಾ ಆಗಿ ಬರತೇನಂದಾಂವಾ

ಎದಿ ಮ್ಯಾಗಿನ ಗೆಣತೀನ ಮಾಡಿ ಇಟ್ಟಕೊಂಡಾಂವಾ

ಇನ್ನೂ ಯಾಕ……….

ಸೆಟ್ಟರ ಹುಡುಗ ಸೆಟಗೊಂಡ್ಹೋದಾ ಅಂತ ನನ್ನ ಜೀಂವಾ

ಹಾದಿ ಬೀದಿ ಹುಡುಕತೈತ್ರೇ ಬಿಟ್ಟು ಎಲ್ಲ ಹ್ಯಾಂವಾ

ಎಲ್ಲೀ ! ಮಲ್ಲೀ ! ತಾರೀ ! ಪಾರೀ ! ನೋಡೀರೇನವ್ವಾ?

ನಿಂಗೀ ! ಸಂಗೀ ! ಸಾವಂತರೀ ! ಎಲ್ಹಾನ ನನ್ನಾಂವಾ ?

ಇನ್ನೂ ಯಾಕ ಬರಲಿಲ್ಲಾ ?

ಬೇಂದ್ರೆಯವರು ಈ ಗೀತೆಯನ್ನು ೧೯೩೫ರಲ್ಲಿ ರಚಿಸಿದರು.

ಆ ಕಾಲದ ಸಮಾಜವ್ಯವಸ್ಥೆ ಹಾಗು ಜನರ ಜೀವನ ಪದ್ಧತಿಗಳು ಈ ಗೀತೆಯಲ್ಲಿ ಪ್ರತಿಬಿಂಬಿತವಾಗಿವೆ.

ವ್ಯಾಪಾರ ಕೇಂದ್ರವಾದ ಹುಬ್ಬಳ್ಳಿಯಲ್ಲಿಯ ಒಬ್ಬ ಸಿರಿವಂತ ರಸಿಕ ಹುಡುಗ ವಾರದಲ್ಲಿ ಮೂರು ಸಾರೆ ಧಾರವಾಡಕ್ಕೆ ವ್ಯಾಪಾರದ ನೆವ ಮಾಡಿಕೊಂಡು ಹೋಗುತ್ತಿರುತ್ತಾನೆ. ಅಲ್ಲಿ ಅವನ ‘ಶೋಕಿಯ ಹೆಣ್ಣು’ ಇದ್ದಾಳೆ. ಆದರೆ ಈ ಹುಡುಗ ಕೇವಲ ಹೆಣ್ಣುಗಳ ಚಟದವನಲ್ಲ ; ಈತನದು ರಸಿಕ ಹೃದಯ. ಒಮ್ಮೆ ಇವನಿಗೂ ಅವಳಿಗೂ ನಡೆದಿರುಬಹುದಾದ ಪ್ರಣಯಕಲಹವು ಮನಸ್ತಾಪಕ್ಕೆ ತಿರುಗಿ, ಆತ ಇವಳಲ್ಲಿ ಮತ್ತೆ ಬರುವದಿಲ್ಲ. ಅವಳು ಈತನ ವಿರಹದಲ್ಲಿ ಹುಚ್ಚಿಯಂತಾಗಿ ಹಾಡಿದ ಹಾಡಿದು.

ಬೇಂದ್ರೆಯವರು ಬರೆಯುವ ಎಲ್ಲ ಕವನಗಳಲ್ಲಿಯೂ ಒಂದು ಕ್ರಮಬದ್ಧತೆ ಇರುತ್ತದೆ. ಈ ಕವನದಲ್ಲಿಯೂ ಸಹ ಅಂತಹ ಕ್ರಮಬದ್ಧತೆಯನ್ನು ಕಾಣಬಹುದು.

“ಇನ್ನೂ ಯಾಕ ಬರಲಿಲ್ಲವ್ವಾ ಹುಬ್ಬಳ್ಳಿಯಾಂವಾ

ವಾರದಾಗ ಮೂರಸರತಿ ಬಂದು ಹೋದಾಂವಾ”

ಎಂದು ಹಪಹಪಿಸುವ ವಿರಹಿಣಿಯ ವರ್ಣನೆಯಿಂದ ಕವನ ಪ್ರಾರಂಭವಾಗುತ್ತದೆ.

ವಿರಹಿಣಿಯ ಒಳಗಣ್ಣಿಗೆ ಮೊದಲು ಕಾಣುವದು ಅವನ physical appearance.

“ಭಾರಿ ಜರದ ವಾರಿ ರುಮ್ಮಾಲಾ ಸುತ್ತಿಕೊಂಡಾಂವಾ

ತುಂಬು-ಮೀಸಿ ತೀಡಿಕೋತ ಹುಬ್ಬು ಹಾರಸಾಂವಾ”

ಈ ಸಾಲುಗಳು ಆ ಸೆಟ್ಟರ ಹುಡುಗನ ಡೌಲನ್ನು , ಅವನ ರಸಿಕತೆಯ ಬಾಹ್ಯಲಕ್ಷಣಗಳನ್ನು ತೋರಿಸುವವು.

ಆದರೆ ಅವನ ರಸಿಕತೆ ಕೇವಲ ಬಾಹ್ಯಲಕ್ಷಣಗಳಿಗೆ ಸೀಮಿತವಾಗಿಲ್ಲ. ಅವನಲ್ಲಿ ರಸಿಕಹೃದಯವಿದೆ. ಈ ಹೆಣ್ಣು ಅವನ ಪಾಲಿಗೆ ಕೇವಲ ಸೂಳೆಯಲ್ಲ. ಅವಳೊಡನೆ ಆತ ಚೇಷ್ಟೆಯಿಂದ ಮಾತನಾಡುತ್ತಾನೆ ; ಹಾಡು ಕಟ್ಟುತ್ತಾನೆ.

“ಮಾತು ಮಾತಿಗೆ ನಕ್ಕ ನಗಿಸಿ ಆಡಿಸ್ಯಾಡಾಂವಾ

ಏನೋ ಅಂದರ ಏನೋ ಕಟ್ಟಿ ಹಾಡ ಹಾಡಾಂವಾ”

ಒಬ್ಬ ಸೂಳೆಯ aspirations ಎಷ್ಟಿರಲು ಸಾಧ್ಯ?

ಈ ಕವನದ ನಾಯಕಿಯು ಸಾದಾ ಸೂಳೆಯೇನಲ್ಲ ; ಇವಳು “ಯಲ್ಲಮ್ಮನ ಜೋಗತಿ”. ಆದರೆ ಇವಳು ಯಾರ ಹೆಂಡತಿಯೂ ಆಗಲಾರಳು. ಇಂಥವಳಿಗೆ ಈ ರಸಿಕ ಕಟ್ಟಿ ಕೊಡುವ ಕನಸನ್ನು ಅವಳು ಎರಡನೆಯ ನುಡಿಯಲ್ಲಿ ಹಾಡಿಕೊಂಡಿದ್ದಾಳೆ :

“ತಾಳೀಮಣೀಗೆ ಬ್ಯಾಳಿಮಣಿ ನಿನಗ ಬೇಕೆನಂದಾಂವಾ

ಬಂಗಾರ-ಹುಡೀಲೇ ಭಂಡಾರಾನ ಬೆಳೆಸೇನಂದಾಂವಾ”

ಜೋಗತಿಯರು ಎಲ್ಲಮ್ಮನ ಹೆಸರಿನಲ್ಲಿ ತಾಳಿಯನ್ನು ಕಟ್ಟಿಕೊಳ್ಳುತ್ತಾರೆ. (ಬಹುಶಃ ಅರಿಸಿಣದ ಬೇರಿನ ತುಂಡು ಮಾತ್ರ.). ತಾಳಿಯ ಮಧ್ಯದಲ್ಲಿರುವ ಎರಡು ಬೇಳೆಗಳು ಕೇವಲ ಮದುವೆಯಾದ ಗರತಿಯ ಸೊತ್ತು. ಗರತಿಯಾಗುವ ಈ ಅಸಾಧ್ಯ ಕನಸನ್ನು—ಹಾಸ್ಯದಲ್ಲಿಯೇ ಆಗಲಿ—ಆತ ಅವಳಿಗೆ ಕಟ್ಟಿಕೊಡುತ್ತಾನೆ.

“ತಾಳೀಮಣೀಗೆ ಬ್ಯಾಳಿಮಣಿ ನಿನಗ ಬೇಕೆನಂದಾಂವಾ

ಬಂಗಾರ-ಹುಡೀಲೇ ಭಂಡಾರಾನ ಬೆಳೆಸೇನಂದಾಂವಾ”

ಈ ಜೋಗತಿಯರ ಸಂಪತ್ತೆಂದರೆ ಯಲ್ಲಮ್ಮನ ಗುಡಿಯಿಂದ ತಂದ ಭಂಡಾರ. (ಅರಿಶಿಣ, ಕುಂಕುಮಗಳು). ಆ ಭಂಡಾರವನ್ನು ಬಂಗಾರದ ಹುಡಿಯಿಂದ ತುಂಬುತ್ತೇನೆನ್ನುವ ಔದಾರ್ಯವನ್ನು ಆತ ತೋರುತ್ತಾನೆ. ಈ ಮಾತು ಚೇಷ್ಟೆಯಲ್ಲಿ ಆಡಿದ ಮಾತೇ ಆಗಿರಬಹುದು. ಆದರೆ ಅವಳಲ್ಲಿರುವ ಅವನ ಪ್ರೀತಿ ಬರಿ ಚೇಷ್ಟೆಯದಲ್ಲ. ಮುಂದಿನ ಎರಡು ಸಾಲುಗಳಲ್ಲಿ ಇದು ವ್ಯಕ್ತವಾಗುತ್ತದೆ :

“ಕಸಬೇರ ಕಳೆದು ಬಸವೇರ ಬಿಟ್ಟು ದಾಟಿ ಬಂದಾಂವಾ

ಜೋಗತೇರಿಗೆ ಮೂಗುತಿ ಅಂತ ನನsಗ ಅಂದಾಂವಾ”

ತನ್ನ ಮೊದಲ ಹೆಜ್ಜೆಗಳನ್ನು ಈ ಸಿರಿವಂತ ತರುಣನು ಕಸುಬಿನವರ (=professional prostitutes) ಮನೆಗಳಲ್ಲಿ ಹಾಕಿದ್ದಾನೆ ; ಅವರಾದ ಮೇಲೆ ಅದಕ್ಕೂ ಹೆಚ್ಚಿನ ಸ್ತರದ ಬಸವಿಯರ (=ದೇವರಿಗೆ ಬಿಟ್ಟವರು) ತಾಣಗಳನ್ನು ದಾಟಿ ಬಂದಿದ್ದಾನೆ. ಇದೀಗ ಬಸವಿಯರಿಗಿಂತ ಹೆಚ್ಚಿನ ಸ್ತರದಲ್ಲಿರುವ ಜೋಗತಿಯರ ಜೊತೆಗೆ ಇವನ ಸಂಬಂಧ.

ಅಂತಹ ಜೋಗತಿಯರೆಲ್ಲರಲ್ಲಿ ಇವಳೇ ಶ್ರೇಷ್ಠಳು ಎಂದು ಆತ ಇವಳನ್ನು ಉಬ್ಬಿಸುತ್ತಾನೆ. ಈ ರಸಿಕನಿಗೆ ಹೆಣ್ಣನ್ನು ಹೊಗಳಿ ಮರಳು ಮಾಡುವ ಕಲೆ ಚೆನ್ನಾಗಿ ಸಿದ್ಧಿಸಿದ ಹಾಗೆ ಕಾಣುತ್ತದೆ.

ಇಷ್ಟೆಲ್ಲ ಹೊಗಳುವ ಗಂಡಸಿನ ಮೇಲೆ (--ಆತ ಬರೇ ಗಿರಾಕಿಯಾಗಿದ್ದರೂ ಸಹ--) ಯಾವ ಹೆಣ್ಣಿಗೆ ಒಲುಮೆ ಮೂಡಲಿಕ್ಕಿಲ್ಲ? ಅಂತಲೇ ಅವಳು ಈತನನ್ನು “ಇನ್ನೂ ಇರು, ಯಾತಕ್ಕೆ ಇಷ್ಟು ಬೇಗನೇ ಹೊರಡುತ್ತೀಯಾ?” ಅಂತ ಜುಲುಮೆ ಮಾಡುತ್ತಾಳೆ.

ಆತ ಘಾಟಿ ಹುಡುಗ ! ಇವಳ ಬಲುಮೆಗೆ care ಮಾಡದೆ ಎದ್ದು ಬಿಡುತ್ತಾನೆ. (ಅಥವಾ ಹಾಗೆ ನಟಿಸುತ್ತಾನೆ). ಅವಳು ಖಿನ್ನಳಾಗಿ ಅವನತ ಮುಖಳಾದ ಕ್ಷಣವೇ ಈತ ತನ್ನ ನಿರ್ಧಾರವನ್ನು ಬದಲಿಸಿ ಅವಳನ್ನು ಪ್ರಸನ್ನಗೊಳಿಸುತ್ತಾನೆ.

“ಇರು ಅಂದರ ಬರತೇನಂತ ಎದ್ದು ಹೊರಡಾಂವಾ

ಮಾರೀ ತೆಳಗ ಹಾಕಿತಂದರ ಇದ್ದು ಬಿಡಾಂವಾ”

ಮುಂದಿನ ಸಾಲುಗಳಲ್ಲಿ ನಾಯಕಿಯು ಆತನ ರಸಿಕ ಚೇಷ್ಟೆಗಳನ್ನು ನೆನಪಿಸಿಕೊಳ್ಳುತ್ತಾಳೆ :

“ಹಿಡಿ ಹಿಡೀಲೆ ರೊಕ್ಕಾ ತಗದು ಹಿಡಿ ಹಿಡಿ ಅನ್ನಾಂವಾ

ಖರೇ ಅಂತ ಕೈಮಾಡಿದರ ಹಿಡsದ ಬಿಡಾಂವಾ”.

ಬೇಂದ್ರೆ ಇಲ್ಲಿ ತಮ್ಮ ಅನ್ಯಾದೃಶ ಚಮತ್ಕಾರೋಕ್ತಿಯನ್ನು ತೋರಿಸಿದ್ದಾರೆ.

ತನ್ನ ಬಗಲಬಂಡಿಯ ಕಿಸೆಯಲ್ಲಿ ಕೈಹಾಕಿ ಹಿಡಿಗಟ್ಟಲೆ ರೊಕ್ಕ ತಗದಂತೆ ನಟಿಸುವ ನಾಯಕ, ಈ ಅಮಾಯಕ ಹೆಣ್ಣು ಕೈಮುಂದೆ ಮಾಡಿದಾಗ ತಟ್ಟನೆ ಅವಳ ಕೈಯನ್ನು ಹಿಡಿದುಕೊಳ್ಳುತ್ತಾನೆ.

ಬರೀ ಶಬ್ದಚಮತ್ಕಾರ ಮಾತ್ರವಲ್ಲ ; ಇದು ಕಲ್ಪನಾಚಮತ್ಕಾರದ ಪರಾಕಾಷ್ಠೆಯೂ ಹೌದು.

ಒಬ್ಬ ಸೂಳೆ ಮತ್ತು ಅವಳ ಗಿರಾಕಿಯ ನಡುವೆ ನಡೆಯುವ ಇಂತಹ ಪ್ರಣಯದೃಶ್ಯ ಯಾವ ಕವಿಯ ಕಲ್ಪನೆಗೆ ಹೊಳೆಯಲು ಸಾಧ್ಯ ?

ಏನೇ ಮಾಡಿದರೂ, ಏನೇ ಹೇಳಿದರೂ ಈಕೆ ಅವನಿಗೆಷ್ಟರವಳು? ಅವಳು ಕೇವಲ ವಿನೋದವಸ್ತು ಮಾತ್ರ ಎನ್ನುವದೆ ವಾಸ್ತವತೆ ಅಲ್ಲವೆ? ಈ ವಾಸ್ತವತೆಯನ್ನೆ ಆತ ಎಷ್ಟು ವಿನೋದದಿಂದ ಹೇಳುತ್ತಾನೆ !

“ಚಹಾದ ಜೋಡಿ ಚೂಡಾಧಾಂಗ ನೀ ನನಗಂದಾಂವಾ”.

ಹೀಗೆಂದರೆ ಅವಳಿಗೆ ಸಿಟ್ಟು ಬರದಿದ್ದೀತೆ?

ಮುನಿಸಿಕೊಂಡ ಇವಳನ್ನು ರಮಿಸುವದು ಅವನಿಗೊಂದು ಆಟ.

“ಚೌಡಿಯಲ್ಲ ನೀ ಚೂಡಾಮಣಿಯಂತ ರಮಿsಸ ಬಂದಾಂವಾ”.

ಆದರೆ ಇಷ್ಟಕ್ಕೆಲ್ಲ ಇವಳು ಒಲಿಯುವವಳಲ್ಲ. ಆಗ ಆತ ಅವಳಿಗೆ ಕೊಡುವದು , ಸೂಳೆಯೊಬ್ಬಳಿಗೆ ಸಿಗಬಹುದಾದ ಅತಿ ಹೆಚ್ಚಿನ ಬೆಲೆ :-

“ಬೆರಳಿಗುಂಗರಾ ಮೂಗಿನಾಗ ಮೂಗಬಟ್ಟಿಟ್ಟಾಂವಾ”

ಹೆಣ್ಣಿನ ಬೆರಳಿಗೆ ಉಂಗುರ ತೊಡಸುವದು ಅವಳ ಮದುವೆ ನಿಶ್ಚಯವಾಗುವಾಗ. ಅವಳಿಗೆ ಮೂಗುತಿ ತೊಡಿಸುವದು ಅವಳ ಮದುವೆಯ ಸಮಯದಲ್ಲಿ.

ಆತ ಅವಳಿಗೆ ಇವನ್ನೇ ಕೊಡುತ್ತಾನೆ. ಅವಳಿಗೆ ಗೊತ್ತು : ಈ ಉಂಗುರ, ಈ ಮೂಗುತಿ ಅವಳ status ಅನ್ನು ಬದಲಾಯಿಸುವದಿಲ್ಲ. ಅವಳು ಸಾಯುವವರೆಗೂ ಸೂಳೆಯೇ.

ಆದರೂ ಸಹ, ಈ token ಅವನ ಬಗೆಗಿರುವ ಅವಳ ಒಲುಮೆಯನ್ನು ಗಾಢವಾಗಿಸುತ್ತದೆ.

ಅವನೀಗ ಅವಳ ಅತ್ಯಂತ ಪ್ರೀತಿಪಾತ್ರ ವ್ಯಕ್ತಿ :

“ಕಣ್ಣಿನಾಗಿನ ಗೊಂಬೀಹಾಂಗ ಎದ್ಯಾಗ ನಟ್ಟಾಂವಾ”

ಈ ಭಾವನೆಗಳು ಈ ಮುಂದಿನ ನುಡಿಯಲ್ಲಿ ವ್ಯಕ್ತವಾಗುತ್ತವೆ :

“ಹುಟ್ಟಾ ಯಾಂವಾ ನಗಿಕ್ಯಾದಗೀ ಮುಡಿಸಿಕೊಂಡಾಂವಾ

ಕಂಡ ಹೆಣ್ಣಿಲೆ ಪ್ರೀತಿ ವೀಳ್ಯೆ ಮಡಿಚಿಕೊಂಡಾಂವಾ

ಜಲ್ಮ ಜಲ್ಮಕ ಗೆಣ್ಯಾ ಆಗಿ ಬರತೇನಂದಾಂವಾ

ಎದಿ ಮ್ಯಾಗಿನ ಗೆಣತೀನ ಮಾಡಿ ಇಟ್ಟಕೊಂಡಾಂವಾ”

ಈತ ಹುಟ್ಟುತ್ತಲೆ ನಗಿಕ್ಯಾದಗಿ ಮುಡಿಸಿಕೊಂಡು ಬಂದಂಥವನು, ಸತತ ನಗೆಮೊಗದವನು. ಹೆಣ್ಣುಗಳ ಪ್ರೀತಿ ಸಂಪಾದಿಸುವದು ಇವನಿಗೊಂದು ಆಟ.ಯಾಕೆಂದರೆ ಹೆಣ್ಣುಗಳೇ ಇವನ ಮೇಲೆ ಮುಗಿ ಬೀಳುತ್ತವೆ. ಇಂಥವನಿಂದ ಇಷ್ಟೊಂದು ಪ್ರೀತಿ ಪಡೆದದ್ದೇ ತನ್ನದೊಂದು ದೊಡ್ಡ ಭಾಗ್ಯ.

ಇವನ ಹೆಂಡತಿಯಾಗುವ ಭಾಗ್ಯ ತನಗೆ ಯಾವ ಜನ್ಮದಲ್ಲೂ ಸಾಧ್ಯವಿಲ್ಲ.

ಹಾಗಿದ್ದರೆ, next best?

ತನ್ನೆಲ್ಲ ಜನ್ಮಗಳಲ್ಲಿಯೂ ಈತನೇ ತನಗೆ “ಗೆಣೆಯ” ನಾಗಿ ಸಿಕ್ಕರೆ ಸಾಕು.

ಅದು ಆತ ಕೊಡುತ್ತಿರುವ ವಚನ !

ತನ್ನ ಅತ್ಯಂತ ಪ್ರೀತಿಯ “ಗೆಣತಿ”ಯ ಪಟ್ಟ ಇವಳಿಗೇ !

(ಶರೀರದ ಮೇಲಿನ ಕೆಂಪು ಅಥವಾ ಕಪ್ಪು moleಗೆ ‘ಗೆಳತಿ’ ಎಂದು ಕರೆಯುತ್ತಾರೆ).

ಇಂತಹ ನೆಚ್ಚಿನ ಗೆಣೆಯನೊಡನೆ ಯಾವ ಕಾರಣಕ್ಕಾಗಿ ಮನಸ್ತಾಪ ಬಂತೊ ಏನೊ? ಆತ ಇವಳ ಕಡೆಗೆ ಬೆನ್ನು ತಿರುಗಿಸಿದ್ದಾನೆ. ಅವನ ದರುಶನವೇ ಇಲ್ಲ. ತನ್ನೆಲ್ಲ ಹ್ಯಾಂವ ಬಿಟ್ಟು ಅವಳು ಇವನಿಗಾಗಿ ಹಲಬುತ್ತಾಳೆ, ಹಂಬಲಿಸುತ್ತಾಳೆ. ಹುಚ್ಚಿಯಂತೆ ಹಾಡಿಕೊಳ್ಳುತ್ತ ಹಾದಿ-ಬೀದಿಗಳಲ್ಲಿ ತಿರುಗುತ್ತಾಳೆ :

“ಸೆಟ್ಟರ ಹುಡುಗ ಸೆಟಗೊಂಡ್ಹೋದಾ ಅಂತ ನನ್ನ ಜೀಂವಾ

ಹಾದಿ ಬೀದಿ ಹುಡುಕತೈತರೇ ಬಿಟ್ಟು ಎಲ್ಲ ಹ್ಯಾಂವಾ

ಎಲ್ಲೀ ! ಮಲ್ಲೀ ! ತಾರೀ ! ಪಾರೀ ! ನೋಡೀರೇನವ್ವಾ?

ನಿಂಗೀ ! ಸಂಗೀ ! ಸಾವಂತರೀ ! ಎಲ್ಹಾನ ನನ್ನಾಂವಾ ?

ಇನ್ನೂ ಯಾಕ ಬರಲಿಲ್ಲಾ ?”

ಆತ ತನ್ನ ಮೇಲಿನ ಸಿಟ್ಟನ್ನು ಮರೆತು ಬಂದಾನೇ?

ಇಲ್ಲಿ ಮತ್ತೊಂದು ವ್ಯಂಗ್ಯವನ್ನು ಗುರುತಿಸಬೇಕು. ಈತ ಸೆಟ್ಟರ ಹುಡುಗ. ಈತ ಸೆಡುವು ಮಾಡಿಕೊಂಡು ಹೋದರೆ ಈಕೆಯ ಬದುಕು ನಡೆಯುವದು ಹೇಗೆ? ಅದು ಕಟು ವಾಸ್ತವ.

ಬೇಂದ್ರೆಯವರ ಕಲ್ಪನೆ ಅಗಾಧವಾಗಿದ್ದರೂ ಸಹ, ಅವರ ಕವನಗಳು ಯಾವಾಗಲೂ ವಾಸ್ತವತೆಯ ಅಂಚನ್ನು ದಾಟುವದಿಲ್ಲ. ಹೀಗಾಗಿ ಅವರ ಅನೇಕ ಕವನಗಳಿಗೆ documentary value ಬರುತ್ತದೆ. “ಹುಬ್ಬಳ್ಳಿಯಾಂವಾ” ಕವನದಲ್ಲಿ ವಾಸ್ತವತೆಯ ಇಂತಹ ನೋಟಗಳನ್ನು ಕಾಣಬಹುದು. ಉದಾಹರಣೆಗೆ ಸೂಳೆಯರ ಶ್ರೇಣೀಕರಣ:

ಮೊದಲಲ್ಲಿ ಕಸಬೆಯರು, ಅವರ ಮೇಲೆ ಬಸವಿಯರು, ಅವರಿಗಿಂತಲೂ ಮೇಲಿನ ಸ್ಥಾನದಲ್ಲಿ ಜೋಗತಿಯರು.

[ಇಂತಹದೇ ಒಂದು ಉದಾಹರಣೆಯನ್ನು ಅವರ ಮತ್ತೊಂದು ಕವನ “ಬಾರೊ ಸಾಧನಕೇರಿಗೆ “ ಕವನದಲ್ಲಿ ಕಾಣಬಹುದು. ಆ ಕವನದ “ಬೇಲಿಗೂ ಹೂಬೆರಳಿದೆ ” ಎನ್ನುವ ಸಾಲು ಆ ಕಾಲದಲ್ಲಿ ಧಾರವಾಡದಲ್ಲಿಯ ಅನೇಕ ಮನೆಗಳಿಗಿದ್ದ blue-bell ಬಳ್ಳಿಯ ಬೇಲಿಯ ವಾಸ್ತವದ ಚಿತ್ರಣ. ಈ fence ಮಾಡಬೇಕಾದ ಕೆಲಸ defence ; ಆದರೆ ಇದು ಮಾಡುತ್ತಿರುವದು ಸ್ವಾಗತಕಾರನ ಕೆಲಸ (--ಹೂ ಬೆರಳಿದೆ--). ಇದೊಂದು ಚಮತ್ಕಾರೋಕ್ತಿಯೂ ಆಗಿದೆ.

ಎರಡನೆಯ ಉದಾಹರಣೆ ಎಂದರೆ, “ಹಕ್ಕಿ ಹಾರುತಿದೆ” ಕವನದ “ಎವೆ ತೆರೆದಿಕ್ಕುವ ಹೊತ್ತಿನ ಒಳಗೆ” ಎನ್ನುವ ಸಾಲು. ‘ನಿಮಿಷ’ ಅನ್ನುವದರ ಅಳತೆ ಎವೆ ತೆರೆದಿಕ್ಕುವ ಹೊತ್ತು ಎನ್ನುವದು ವಾಸ್ತವತೆ.

ಮೂರನೆಯದಾಗಿ “ಕುಣಿ ಕುಣಿ ನವಿಲೆ” ಕವನದ “ಬೇಸಗೆ ಬಿಸಿಲಿಗೆ ಬಾಯ್ಬಿಡುತಿದೆ ಧರೆ “ ಎನ್ನುವ ಸಾಲನ್ನು ಉದಾಹರಿಸಬಹುದು. ಬೇಸಿಗೆಯಲ್ಲಿ ಎರೆ ಮಣ್ಣಿನ ಭೂಮಿಯಲ್ಲಿ ಆದಂತಹ cracksಗಳನ್ನು ಕಂಡಾಗ ಕಲ್ಪಕತೆ ಹಾಗು ವಾಸ್ತವತೆಯನ್ನು ಒಂದೇ ಸಾಲಿನಲ್ಲಿ ಜೋಡಿಸಿದ ಬೇಂದ್ರೆ ಪ್ರತಿಭೆ ಅರಿವಾಗುತ್ತದೆ.]

ಬೇಂದ್ರೆಯವರ ಕವನಗಳಲ್ಲಿ ಬರುವ ಆಡುನುಡಿಯ ಪದಪುಂಜಗಳು, ಅವರ ಕವನಗಳಿಗೆ ಹೆಚ್ಚಿನ ಸೊಬಗನ್ನು ಕೊಡುತ್ತವೆ. ಇದೇ ಕವನದಲ್ಲಿಯ ಕೆಲವು ಸಾಲುಗಳನ್ನು ಉದಾಹರಣೆಗಳೆಂದು ನೋಡಬಹುದು :

“ಎದಿ ಮ್ಯಾಗಿನ ಗೆಣತೀನ ಮಾಡಿ ಇಟ್ಟಕೊಂಡಾಂವಾ”

“ಕಣ್ಣಿನಾಗಿನ ಗೊಂಬೀಹಾಂಗ ಎದ್ಯಾಗ ನಟ್ಟಾಂವಾ”

ಇಂತಹದೇ ಇನ್ನೊಂದು ಉದಾಹರಣೆಯನ್ನು ಅವರ “ಪಾತರಗಿತ್ತಿ ಪಕ್ಕಾ” ಕವನದಲ್ಲಿ ನೋಡಬಹುದು :

“ಹೂವಿಗೆ ಹೋಗತಾವ

ಗಲ್ಲಾ ತಿವೀತಾವ. ”

ಹೆಚ್ಚಿನ ಓದಿಗೆ : http://sallaap.blogspot.com/2008/07/blog-post_24.html

‘ಸಖೀಗೀತ’ದಲ್ಲಿ ಬೇಂದ್ರೆಯವರು ತಮ್ಮ ಹೆಂಡತಿಯನ್ನು ‘ವಿಧಿ ತಂದ ವಧು’ ಎಂದು ಬಣ್ಣಿಸಿದ್ದಾರೆ. ಅದೇ ರೀತಿಯಲ್ಲಿ ಅವರ ಹೆಂಡತಿ ಲಕ್ಷ್ಮೀಬಾಯಿಯವರಿಗೆ ಬೇಂದ್ರೆ ‘ವಿಧಿ ತಂದ ವರ’ ಆಗಿರಲಿಕ್ಕೆ ಸಾಕು. ಮದುವೆಯಾದಾಗ ಬೇಂದ್ರೆಯವರಿಗೆ ೨೩ ವರ್ಷ ವಯಸ್ಸು. ಲಕ್ಷ್ಮೀಬಾಯಿ ಕೇವಲ ಹದಿಮೂರು ವರ್ಷದ ಹುಡುಗಿ.ಇತರ ಹುಡುಗಿಯರಿಗೆ ಇರುವಂತೆ ಈ ಹುಡುಗಿಗೂ ತನ್ನ ಸಂಸಾರದ ಬಗೆಗೆ ಬಣ್ಣ ಬಣ್ಣದ ಕನಸುಗಳು ಇದ್ದಿರಬಹುದು.

ಬೇಂದ್ರೆಯವರು ೧೯೨೬ರಲ್ಲಿ ‘ಸ್ವಧರ್ಮ’ ಪತ್ರಿಕೆಯ ಹಾಗೂ ೧೯೨೯ರಲ್ಲಿ ‘ಜಯ ಕರ್ನಾಟಕ’ ಪತ್ರಿಕೆಯ ಸಂಪಾದಕರಾಗಿದ್ದರು. ಇವರು ಬರೆದ ‘ನರಬಲಿ’ ಕವನಕ್ಕಾಗಿ ಬ್ರಿಟಿಶ್ ಸರಕಾರವು ಇವರನ್ನು ೧೯೩೨ರಲ್ಲಿ ಹಿಂಡಲಗಿಯ ಜೇಲಿಗೆ ಕಳುಹಿಸಿತು. ಕೆಲ ಕಾಲ ಮುಗದ ಎನ್ನುವ ಹಳ್ಳಿಯಲ್ಲಿ ದಿಗ್ಬಂಧನದಲ್ಲಿರಿಸಿತು. ಆರು ವರ್ಷಗಳ ವರೆಗೆ ಇವರಿಗೆ ಯಾರೂ ಯಾವುದೇ ನೌಕರಿಯನ್ನು ಕೊಡಕೂಡದೆಂದು ನ್ಯಾಯಾಲಯವು ಆಜ್ಞೆ ಹೊರಡಿಸಿತ್ತು. ಆರು ವರ್ಷಗಳವರೆಗೆ ಬೇಂದ್ರೆಯವರು ನಿರುದ್ಯೋಗಿಯಾಗಿ ಉಳಿಯಬೇಕಾಯಿತು. ಬಳಿಕ ೧೯೩೮ರಲ್ಲಿ ಮಾಸ್ತಿಯವರು ಬೇಂದ್ರೆಯವರನ್ನು ‘ಜೀವನ’ ಪತ್ರಿಕೆಯ ಸಂಪಾದಕರನ್ನಾಗಿ ಮಾಡಿದರು.

ಈ ನಡುವಿನ ಅವಧಿಯಲ್ಲಿ ಬೇಂದ್ರೆಯವರು ಪುಣೆಯಲ್ಲಿ ಎಮ್. ಏ. ಪದವಿಯನ್ನು ಪಡೆದರು. ‘ಗರಿ’ ,‘ಮೂರ್ತಿ’, ’ಕಾಮಕಸ್ತೂರಿ’, ‘ಸಖೀಗೀತ’, ‘ನಾದಲೀಲೆ’ ಹಾಗೂ ‘ಉಯ್ಯಾಲೆ’ ಕವನಸಂಕಲನಗಳನ್ನು ಪ್ರಕಟಿಸಿದರು. ಸಾಹಿತ್ಯಸಮ್ಮೇಳನಗಳಲ್ಲಿ ಭಾಗವಹಿಸಿದರು. ಅವರ ಕೀರ್ತಿಸೂರ್ಯನು ನಡುನೆತ್ತಿಗೇರಿದನು. ಆದರೆ ಸಂಸಾರತಾಪದಲ್ಲಿ ಬೆಂದವರು ಇವರ ಧರ್ಮಪತ್ನಿ.

ಇಂತಹ ಸಹನಾಲಕ್ಷ್ಮಿಯ ಬಗೆಗೂ ಬೇಂದ್ರೆಯವರಿಗೆ ಸಹನೆ ಇರಲಿಲ್ಲ.

ಎಲ್ಲ ಹೆಂಡತಿಯರು ಅಪೇಕ್ಷಿಸುವಂತೆ ಇವಳೂ ಸಹ ಒಡವೆ ಕೊಡಿಸಲು ಬೇಂದ್ರೆಯವರನ್ನು ಯಾವಾಗಲೋ ಕೇಳಿದ್ದಾಳು. ಈ ಕವಿಪುಂಗವರು ಅವಳಿಗೆ ಕೇವಲ ಕವನಗಳ ಒಡವೆಗಳನ್ನಷ್ಟೇ ತೊಡಿಸಿದರು !

“ಆತ ಕೊಟ್ಟ ವಸ್ತು, ಒಡವೆ

ನನಗೆ ಅವಗೆ ಗೊತ್ತು

ತೋಳುಗಳಿಗೆ ತೋಳಬಂದಿ

ಕೆನ್ನೆತುಂಬ ಮುತ್ತು.”

ಬೇಂದ್ರೆಯವರಿಗೆ ತನ್ನ ಕಾವ್ಯಾಲಂಕಾರದ ಮಿತಿ ಗೊತ್ತಿರಲಿಲ್ಲ ಎಂದಲ್ಲ.

ಅವರೇ ತಮ್ಮ ಮತ್ತೊಂದು ಕವನದಲ್ಲಿ

“ ನೀನು ಕೊಡುವೆ ನನಗೆ ದವನ

ನಾನು ಕೊಡುವೆ ನಿನಗೆ ಕವನ

……………………..”

ಎಂದೆಲ್ಲ ಹೇಳುತ್ತ ತಮ್ಮ ಕವನಕ್ಕೆ

“ಬರಿಯ ಮಾತಿನ ಪೋಣಿಕೆ” ಎಂದು ಬಣ್ಣಿಸಿದ್ದಾರೆ.

ಬಹುಶ: ‘ಒಂದು ಮುತ್ತಿನ ಸರವನ್ನಾದರೂ ಕೊಡಿಸಿ’ ಎಂದು ಹೆಂಡತಿ ಆಗ್ರಹಪಡಿಸಿದಾಗ, ಈ ಕವಿ ಒಂದು ಉದ್ದವಾದ ಕವನವನ್ನೇ ಹೊಸೆದು ಹೆಂಡತಿಗೆ ಕೊಟ್ಟರು. ಬೇಂದ್ರೆಯವರಿಗೆ ದುಡ್ಡಿನ ಅಭಾವ ಇದ್ದಿರಬಹುದು , ಆದರೆ ಕಲ್ಪನೆಯ ಅಭಾವ ಎಂದೂ ಇರಲಿಲ್ಲ. ಅನಂತ ಕಲ್ಪನಾಸಾಮ್ರಾಜ್ಯದ ಸಾರ್ವಭೌಮರವರು.

‘ಪ್ರೀತಿಯನ್ನು (ಒಡವೆಗಳಿಂದ) ಅಳೆಯಬೇಡ’ ಎಂದು ಹೇಳುವ ಬೇಂದ್ರೆಯವರ ಕವನದ ಪೂರ್ಣಪಾಠ ಹೀಗಿದೆ:

ಅಷ್ಟು ಪ್ರೀತಿ ಇಷ್ಟು ಪ್ರೀತಿ--

ಎಣಿಸಿ ಕಷ್ಟಬಡದಿರು

ಒಲೆದು ಒಲಿಸಿ ಸುಖವಿರು

ಎಷ್ಟೆಯಿರಲಿ ಅಷ್ಟೆ ಮಿಗಿಲು---ತಮ್ಮ ಕಿರಣ ತಮಗೆ ಹಗಲು ;

ಉಳಿದ ಬೆಳಕು ಕತ್ತಲು.

ಬಿಟ್ಟಲ್ಲಿಯೆ ಬೀಡು ಮತ್ತೆ ಆಡಿದಲ್ಲಿ ಅಂಗಳು

ಉಳಿದ ಲೋಕ ಹಿತ್ತಲು.

ಮುತ್ತಿನೆಕ್ಕಸರವನಿಕ್ಕೆ

ಮುದ್ದಿಗೆ ಕಳೆಕಟ್ಟಿತೆ ?

ತೊಯ್ದ ಎವೆಗೆ ಮುದ್ದನಿಡಲು

ಮುದ್ದಿಗೆ ಅದು ತಟ್ಟಿತೆ ?

ಕುದಿದ ಬಂದ ಕಂಬನಿಯಲು

ಕಂಪು ಬರದೆ ಬಿಟ್ಟಿತೆ ?

ಮುತ್ತು ರತುನ ಹೊನ್ನು ಎಲ್ಲ

ಕಲ್ಲು ಮಣ್ಣ ವೈಭವಾ

ಎಲವೊ ಹುಚ್ಚು ಮಾನವಾ

ಒಂದು ಷೋಕು---ಬರಿಯ ಝೋಕು

ಬದುಕಿನೊಂದು ಜಂಬವು

ಒಲವೆ ಮೂಲ ಬಿಂಬವು.

ಸಪ್ತ ನಾಕ ಸಪ್ತ ನರಕ

ಅದರ ಬೆಳಕು ಕತ್ತಲು

ಮನ್ವಂತರ ತನ್ವಂತರ

ಅದರ ಕೋಟೆ ಕೊತ್ತಲು

ಸಿಂಹಾಸನವನೇರಿ ಕುಳಿತೆ ;

ತೊಡೆಗೆ ತೊಡೆಯ ಹಚ್ಚಿದೆ

ಸರಿಯೆ, ಒಲಿದ ತೋಳಿಗಿಂತ

ಅದರೊಳೇನು ಹೆಚ್ಚಿದೆ?

ಎದೆಯ ಕಣ್ಣ ಮುಚ್ಚಿಕೊಂಡು

ಏಕೊ ಏನೊ ಮೆಚ್ಚಿದೆ

ಮರದ ಅಡಿಗೆ ಗುಡಿಸಲಿರಲಿ

ಅಲ್ಲೆ ಒಲವು ಮೆರೆಯದೇ

ನಲಿವು ಮೇರೆವರಿಯದೇ?

................................................

ಬೇಂದ್ರೆಯವರ ಹೆಂಡತಿ ಒಂದು ಲೌಕಿಕ ವಸ್ತುವನ್ನು ಆಸೆಪಟ್ಟು ಕೇಳಿದಾಗ, ಬೇಂದ್ರೆಯವರು ಅದಕ್ಕೊಂದು philosophic ಸಂದೇಶವನ್ನು ನೀಡುತ್ತಿದ್ದಾರೆ. ಮೊದಲನೆಯ ನುಡಿಯನ್ನು ನೋಡಿರಿ :

ಅಷ್ಟು ಪ್ರೀತಿ ಇಷ್ಟು ಪ್ರೀತಿ--

ಎಣಿಸಿ ಕಷ್ಟಬಡದಿರು

ಒಲೆದು ಒಲಿಸಿ ಸುಖವಿರು

ಎಷ್ಟೆಯಿರಲಿ ಅಷ್ಟೆ ಮಿಗಿಲು---ತಮ್ಮ ಕಿರಣ ತಮಗೆ ಹಗಲು ;

ಉಳಿದ ಬೆಳಕು ಕತ್ತಲು.

ಬಿಟ್ಟಲ್ಲಿಯೆ ಬೀಡು ಮತ್ತೆ ಆಡಿದಲ್ಲಿ ಅಂಗಳು

ಉಳಿದ ಲೋಕ ಹಿತ್ತಲು.

ಪ್ರೀತಿಯ ಮಡದಿಯೆ, ನನಗೆ ನಿನ್ನಲ್ಲಿರುವ ಪ್ರೀತಿಯನ್ನು ಇಷ್ಟು , ಇಷ್ಟೇ ಎಂದು ಎಣಿಸಿ ಕಷ್ಟಪಡಬೇಡ. (ಇಲ್ಲಿ ಎಣಿಸು ಎನ್ನುವದಕ್ಕೆ ಎರಡು ಅರ್ಥಗಳಿವೆ. ಎಣಿಸು=counting ಎನ್ನುವದು ಒಂದು ಅರ್ಥವಾದರೆ , ಎಣಿಸು=ಭಾವಿಸುವದು ಎನ್ನುವದು ಎರಡನೆಯ ಅರ್ಥ.)

ನನಗೆ ಒಲೆದು ಎಂದರೆ ನನ್ನಲ್ಲಿ ಅನುರಕ್ತಳಾಗು ; ಒಲಿಸಿ ಎಂದರೆ ನನ್ನನ್ನು ಒಲಿಸಿಕೊಳ್ಳು ಅರ್ಥಾತ್ ನನ್ನ ಒಲವನ್ನು (ಕಷ್ಟಪಟ್ಟು) ಸಂಪಾದಿಸಿಕೊ , ಹಾಗೂ ಸುಖದಿಂದಿರು !

ಕವಿಯು ಪ್ರೀತಿಯ ಈ ವ್ಯಾಪಾರದ ಎಲ್ಲಾ ಭಾರವನ್ನು ಹೆಂಡತಿಯ ಮೇಲೆ ಹಾಕುತ್ತಿದ್ದಾನೆ. ನೀನು ಒಡವೆಯನ್ನು ಕೇಳದೇ ನನ್ನ ಪ್ರೀತಿಯನ್ನು ಪಡೆಯಲು ನೀನೇ ಪ್ರಯತ್ನ ಮಾಡು (!) ಎನ್ನುವದು ಈ ಕವಿಯ ಸಂದೇಶ.

ಇಂತಹ ಸಂದೇಶಕ್ಕೆ ಕವಿ ಕೊಡುವ ತಾತ್ವಿಕ support ಈ ರೀತಿಯಾಗಿದೆ :

“ಎಷ್ಟೆಯಿರಲಿ ಅಷ್ಟೆ ಮಿಗಿಲು ,

ತಮ್ಮ ಕಿರಣ ತಮಗೆ ಹಗಲು ;ಉಳಿದ ಬೆಳಕು ಕತ್ತಲು.”

ಪಾಲಿಗೆ ಬಂದದ್ದು ಪಂಚಾಮೃತ. ನಮ್ಮ ಹಣೆಯಲ್ಲಿ ಎಷ್ಟೇ ಸ್ವಲ್ಪವಿದ್ದರೂ ಅದನ್ನೇ ಬಹಳ ಎಂದು ತಿಳಿಯಬೇಕು. ಯಾಕೆಂದರೆ, “ತಮ್ಮ ಕಿರಣ ತಮಗೆ ಹಗಲು ;ಉಳಿದ ಬೆಳಕು ಕತ್ತಲು.”

ನಮ್ಮ ಮನೆಯ ಕಿಡಕಿಯಿಂದ ಒಳಗೆ ತೂರಿದ ಸೂರ್ಯನ ಒಂದೇ ಕಿರಣವು ನಮ್ಮ ಕತ್ತಲೆ ಕೋಣೆಗೆ ಬೆಳಕು ನೀಡುವದೇ ಹೊರತು, ಇತರ ನಕ್ಷತ್ರಗಳ ಕಿರಣಗಳಿಂದ ನಮ್ಮ ಮನೆಗೆ ಹಗಲು ಸಿಗಲಾರದು. ಆ ಬೆಳಕು ನಮ್ಮ ಮಟ್ಟಿಗೆ ಕತ್ತಲೆಯೇ ಸೈ!

(ನಿನ್ನ ಜೀವನದಲ್ಲಿ ಪ್ರೀತಿಯ ಬೆಳಕನ್ನು ಕಾಣಬೇಕಾಗಿದ್ದರೆ ಹುಚ್ಚು ಹಂಬಲಗಳನ್ನು ಬಿಟ್ಟುಬಿಟ್ಟು, ನಿನ್ನ ಕವೀಶ್ವರ ಪತಿ ಕೊಡುವ ಪ್ರೀತಿಯನ್ನಷ್ಟೇ ನೆಚ್ಚಿಕೊ!)

ವರಕವಿಗಳು ತಮ್ಮ ಕಲ್ಪನಾಶಕ್ತಿಯ ಬಲದಿಂದ ಇನ್ನಿಷ್ಟು ಉದಾಹರಣೆಗಳನ್ನು ಸೃಷ್ಟಿಸುತ್ತಾರೆ:

“ಬಿಟ್ಟಲ್ಲಿಯೆ ಬೀಡು

ಮತ್ತೆ ಆಡಿದಲ್ಲಿ ಅಂಗಳು

ಉಳಿದ ಲೋಕ ಹಿತ್ತಲು.”

ಬೇರೆಯವರ ಅನುಕರಣೆ, ಅನುಸರಣೆ ಬೇಡ ; ನಾವು ಎಲ್ಲಿ ನಿಲ್ಲುತ್ತೇವೆಯೊ ಅದೇ ನಮ್ಮ ಬೀಡು , ಅದೇ ನಮ್ಮ ನೆಲೆ. ನಾವು ಎಲ್ಲಿ ಆಡುತ್ತೇವೊ ಅದೇ ನಮ್ಮ ಮನೆಯ ಅಂಗಳು.

“ ಅಲ್ಲಾ, ಉಳಿದವರು ಎಷ್ಟು ಚೆನ್ನಾಗಿರೊ ಬೀಡಿನಲ್ಲಿ ಇದ್ದಾರಲ್ಲಾ” ಎಂದು ಅವರ ಹೆಂಡತಿ ಏನಾದರೂ ಅನುಮಾನ ವ್ಯಕ್ತ ಪಡಿಸಿದರೆ, ವರಕವಿಗಳ ಉತ್ತರ ಅದಕ್ಕೂ ಸಿದ್ಧವಾಗಿದೆ :

“ಉಳಿದ ಲೋಕ ಹಿತ್ತಲು.”

(=ಅದೆಲ್ಲಾ ನಮ್ಮ ಹಿಂದೆ ಇರೋದು, ನಾವು ಅದನ್ನೆಲ್ಲ ನೋಡೋದು ಬೇಡ !)

ಈ ರೀತಿಯಾಗಿ ಹೆಂಡತಿಗೆ general philosophyಯನ್ನು ಹೇಳಿ ಮುಗಿಸಿದ ಕವಿ, ತನ್ನ ಮಾತುಗಳಿಂದ ತಾನೇ ಕಸಿವಿಸಿಗೊಳ್ಳುತ್ತಾನೆ. ಆತನಿಗೆ ಗೊತ್ತು: ತನ್ನ ಹೆಂಡತಿಯ ಒಂದೇ ಒಂದು ಸಣ್ಣ ಹಂಬಲವನ್ನು ತಾನು ಪೂರೈಸುತ್ತಿಲ್ಲ ಎಂದು. ತನ್ನ ಮೇಲೆ ತನಗೇ ಬರುತ್ತಿರುವ ಕೋಪವನ್ನು ಈಗ ಆತ ಅವಳ ಮೆಲೆ ತಿರುಗಿಸುತ್ತಾನೆ. ಹತಾಶನಾದ ಗಂಡ ಹೆಂಡತಿಯ ಮೇಲೆ ಹರಿಹಾಯುವದು ಒಂದು ಸಾಮಾನ್ಯ ಸಂಗತಿ. ‘ಒಂದು ಮುತ್ತಿನ ಸರವನ್ನು ಪಡೆದು, ನೀನು ಏನು ಮಹಾ ಸಾಧಿಸಿಕೊಂಡಂತಾಯ್ತು’ ಎಂದು ಆತ ಅವಳ ಮೇಲೆ ಹಾರಾಡುತ್ತಾನೆ :

ಮುತ್ತಿನೆಕ್ಕಸರವನಿಕ್ಕೆ

ಮುದ್ದಿಗೆ ಕಳೆಕಟ್ಟಿತೆ ?

ತೊಯ್ದ ಎವೆಗೆ ಮುದ್ದನಿಡಲು

ಮುದ್ದಿಗೆ ಅದು ತಟ್ಟಿತೆ ?

ಕುದಿದ ಬಂದ ಕಂಬನಿಯಲು

ಕಂಪು ಬರದೆ ಬಿಟ್ಟಿತೆ ?

ಮುತ್ತಿನ ಸರ ತೊಡಿಸುವದರಿಂದ ಮಾತ್ರ ಪ್ರೀತಿಗೆ ಕಳೆ ಬರುವದೆ? ನಿನ್ನ ಕಣ್ಣೀರಿನಿಂದ ತೊಯ್ದ ರೆಪ್ಪೆಗಳಿಗೆ ನಾನು ಮುತ್ತು ಕೊಟ್ಟರೆ, ಅದು ನಿನ್ನ ಪ್ರೀತಿಗೆ ತಟ್ಟಲಾರದೆ? ನಿನ್ನ ಕುದಿಯುತ್ತಿರುವ ಮನಸ್ಸು ಹೊರಚೆಲ್ಲಿದ ಕಂಬನಿಗಳಲ್ಲಿ ಸಹ ಒಲವಿನ ಕಂಪು ಇಲ್ಲವೆ? ಗಂಡ ಹೆಂಡಿರಲ್ಲಿ ಪರಸ್ಪರ ಒಲವಿನ ಭಾವನೆಗಳೆ ಮುಖ್ಯವಲ್ಲವೆ?

ಇದು ಕವಿಯು ದಾಂಪತ್ಯದ ನೆಲೆಗಟ್ಟಿನಲ್ಲಿ ಮಾಡುತ್ತಿರುವ argument.

ಆದರೆ ಹೆಂಡತಿ ಮುಖವನ್ನು ಬೇರೆಡೆಗೆ ಹೊರಳಿಸಿ ಬಿಟ್ಟಿದ್ದಾಳೆ. Exasperated ಆದ ಕವಿ ಮಾನವ ಕುಲದ ಮೂರ್ಖತನಕ್ಕೆ ಬೇಸತ್ತು , ವ್ಯಥೆಪಟ್ಟು ಉದ್ಗರಿಸುತ್ತಾನೆ:

ಮುತ್ತು ರತುನ ಹೊನ್ನು ಎಲ್ಲ

ಕಲ್ಲು ಮಣ್ಣ ವೈಭವಾ

ಎಲವೊ ಹುಚ್ಚು ಮಾನವಾ

ಒಂದು ಷೋಕು---ಬರಿಯ ಝೋಕು

ಬದುಕಿನೊಂದು ಜಂಬವು

ಒಲವೆ ಮೂಲ ಬಿಂಬವು.

ಈ precious stonesಗಳೆಲ್ಲ earthly glory ಮಾತ್ರ. ಅವು ಸತ್ಯವಲ್ಲ.

(ಟಿಪ್ಪಣಿ : ರತ್ನಗಳು ಭೂಮಿಯ ಒಳಗಡೆ ಸಿಗುವದರಿಂದ ಅವುಗಳಿಗೆ “ಕಲ್ಲು ಮಣ್ಣ ವೈಭವಾ” ಎಂದು ಕರೆಯುವದು ಒಂದು ವ್ಯಂಗ್ಯೋಕ್ತಿ.)

ಇದೆಲ್ಲ ಬರಿಯ ಶೋಕಿ, ಬರಿಯ ಡೌಲು , vanity of life.

ಪ್ರೀತಿಯೇ ಸತ್ಯ, ಬೇರೆ ಎಲ್ಲ ಮಿಥ್ಯ.

ಕವಿ ಮುಂದುವರಿದು ಸಂಪತ್ತಿನ ಸಂಭ್ರಮವನ್ನಷ್ಟೇ ಅಲ್ಲ, ಅಧಿಕಾರದ ವೈಭವವನ್ನೂ ಸಹ ತುಚ್ಛೀಕರಿಸುತ್ತಾನೆ. ಕೇವಲ ಭೂಮಿಯ ಒಡೆತನವಲ್ಲ, ಸಪ್ತಸ್ವರ್ಗ ಹಾಗೂ ಸಪ್ತನರಕಗಳನ್ನು ಒಳಗೊಂಡ ಇಂದ್ರಾಧಿಕಾರದ ವೈಭೋಗಕ್ಕೂ ಸಹ ಏನು ಬೆಲೆಯಿದೆ?

ಸಪ್ತ ನಾಕ ಸಪ್ತ ನರಕ

ಅದರ ಬೆಳಕು ಕತ್ತಲು

ಮನ್ವಂತರ ತನ್ವಂತರ

ಅದರ ಕೋಟೆ ಕೊತ್ತಲು

ಸಿಂಹಾಸನವನೇರಿ ಕುಳಿತೆ ;

ತೊಡೆಗೆ ತೊಡೆಯ ಹಚ್ಚಿದೆ

ಸರಿಯೆ, ಒಲಿದ ತೋಳಿಗಿಂತ

ಅದರೊಳೇನು ಹೆಚ್ಚಿದೆ?

ಕವಿ ತಮ್ಮ ಹೆಂಡತಿಗೆ ಆಹ್ವಾನ ನೀಡುತ್ತಿದ್ದಾರೆ. ಇಂತಹ ಲೋಕಾಧಿಪತಿಯ ಹೆಂಡತಿಯಾಗಿ ನೀನೂ ಸಹ ಸಿಂಹಾಸನವನ್ನೇರಬಹುದು. ಸಾಮ್ರಾಟನ ತೊಡೆಗೆ ತೊಡೆ ಹಚ್ಚಿ ಕುಳಿತುಕೊಳ್ಳಬಹುದು. ಅವನ pomp and powerದಲ್ಲಿ ನೀನೂ ಭಾಗಿಯಾಗಬಹುದು. ಇದೆಲ್ಲ ಸರಿ, ಒಲಿದ ತೋಳುಗಳ ಅಪ್ಪುಗೆಗಿಂತ ಇದೆಲ್ಲ ಹೆಚ್ಚಿನದೆ?

ಕವಿ ತನ್ನೆಲ್ಲ argumentಗಳನ್ನು ತನ್ನ ಅರ್ಧಾಂಗಿಗೆ ಹೇಳಿದ್ದಾನೆ.

ಮುತ್ತಿನ ಹಾರಕ್ಕಿಂತ ಪತಿಯ ಪ್ರೇಮವೇ ಹೆಚ್ಚಿನದು ಎಂದು ಅವಳಿಗೆ ತಿಳಿಸಿದ್ದಾನೆ.

ತನ್ನ ಹತಾಶೆ, ತನ್ನ ಅಸಹಾಯಕತೆಯನ್ನೆಲ್ಲ ಹೊರಕಕ್ಕಿ, ಆತನೀಗ ನಿರುಮ್ಮಳನಾಗಿದ್ದಾನೆ.

ಇಂತಹ ಸಮಾಧಾನದ ಸ್ಥಿತಿಯಲ್ಲಿ ಆತ ಅಂತರ್ಮುಖಿಯಾಗಿ ಏನನ್ನೊ ಧ್ಯಾನಿಸುತ್ತಾನೆ :

ಎದೆಯ ಕಣ್ಣ ಮುಚ್ಚಿಕೊಂಡು

ಏಕೊ ಏನೊ ಮೆಚ್ಚಿದೆ

ಮರದ ಅಡಿಗೆ ಗುಡಿಸಲಿರಲಿ

ಅಲ್ಲೆ ಒಲವು ಮೆರೆಯದೇ

ನಲಿವು ಮೇರೆವರಿಯದೇ?

ನಿಜ, ಒಲವಿನ ವೈಭವಕ್ಕೆ ಲೌಕಿಕ ಸಂಪತ್ತು ಬೇಕಾಗಿಲ್ಲ. ಪುಟ್ಟ ಗುಡಿಸಲಿನಲ್ಲಿಯೂ ಸಹ ಒಲವು ಹಾಗೂ ನಲಿವು ಮಹಾಪೂರದಂತೆ ಹರಿಯಬಲ್ಲವು !

ಹೆಂಡತಿಯ ಆಸೆಯನ್ನು ಪೂರೈಸಲಾಗದ ಬಡ ಕವಿಯು ಕಂಡ ಸತ್ಯವಿದು !

ತೊದಲು ಮಾತಿನ ಶ್ರೀ ಕೇಶವ ಕುಲಕರ್ಣಿಯವರು ಈ ಕವನದ ಕೆಲವು ವೈಶಿಷ್ಟ್ಯಗಳನ್ನು ವಿವರಿಸಿದ್ದಾರೆ. ಅವು ಇಂತಿವೆ:

೧:

ಕವಿತೆ ಮೊದಲಿನಿಂದ ಕೊನೆಯವರೆಗೆ ನೋಡಲು ಒಂದೇ ತರಹದ ಛಂದಸ್ಸಿನಲ್ಲಿ ಬರೆಯಲ್ಪಟ್ಟಂತೆ ಕಂಡರೂ ನುಡಿಯಿಂದ ನುಡಿಗೆ ಶಬ್ದಗಳ ಬಳಕೆಯಲ್ಲಿ ಅದ್ಭುತ ಬದಲಾವಣೆಯಿದೆ. ಮೊದಲ ನುಡಿಯಲ್ಲಿ

"ತಮ್ಮ ಕಿರಣ ತಮಗೆ ಹಗಲು ;

ಉಳಿದ ಬೆಳಕು ಕತ್ತಲು.

ಬಿಟ್ಟಲ್ಲಿಯೆ ಬೀಡು ಮತ್ತೆ ಆಡಿದಲ್ಲಿ ಅಂಗಳು

ಉಳಿದ ಲೋಕ ಹಿತ್ತಲು."

ಎಂಬ ಹೊಸ ರೂಪಕಗಳನ್ನು ಶಬ್ದಗಾರುಡಿಗ ಆರಾಮವಾಗಿ ತಂದು ನಿಲ್ಲಿಸುತ್ತಾರೆ.

ಮುಂದಿನ ನುಡಿ ಬರೀ ಉತ್ತರಗಳನ್ನೇ ಹೇಳುವ ಪ್ರಶ್ನೆಗಳ ನುಡಿ.

ಮೂರನೇ ನುಡಿಯ ಶಬ್ದ ಮತ್ತು ಭಾವಗಳಲ್ಲಿ ಬರೀ ಲೌಕಿಕತೆಯೇ ಇದೆ. ಶೋಕು, ಝೋಕು ಎಂಬ ಹೊಸಕನ್ನಡ ಪದಗಳು ಬರುತ್ತವೆ.

ನಾಕನೇ ನುಡಿಯಲ್ಲಿ ಇದ್ದಕ್ಕಿದ್ದಂತೆ ಶಬ್ದಗಳೆಲ್ಲ ಪುರಾಣದ್ದಾಗುತ್ತವೆ. ಆದರೆ ತಟ್ಟನೇ "ತೊಡೆಗೆ ತೊಡೆಯ ಹಚ್ಚಿದೆ" ಎಂದು ಶುದ್ಧ ಕನ್ನಡ ಬಂದು ಆ ನುಡಿಯಲ್ಲಿ ಶಾಕ್ ಕೊಡುತ್ತದೆ.

ಐದನೇ ನುಡಿ ಧ್ಯಾನದ ಸ್ಥಿತಿಯನ್ನು ತಲುಪುತ್ತದೆ.

೨. "ತೊಡೆಗೆ ತೊಡೆಯ ಹಚ್ಚಿದೆ, ಸರಿಯೆ," ನನಗೆ ಎರಡು ಅರ್ಥ ಕೊಟ್ಟಿತು. ಒಂದು, ನೀವು ಬರೆದಂತೆ "ಸಾಮ್ರಾಟನ ತೊಡೆಗೆ ತೊಡೆ ಹಚ್ಚಿ ಕುಳಿತುಕೊಳ್ಳಬಹುದು.", ಇನ್ನೊಂದು ನನಗನಿಸಿದ್ದು, "ಕಾಮದ ಮದ (ತೊಡೆಗೆ ತೊಡೆ)ಕ್ಕಿಂತ ಪ್ರೀತಿ (ಒಲಿದ ತೋಳು) ಕವಿಗೆ ಮುಖ್ಯವಾಗುತ್ತದೆ.

ಬೇಂದ್ರೆಯವರ ಕವನಗಳು ತಿಳಿದುಕೊಂಡಷ್ಟೂ ಹಿಗ್ಗುತ್ತಲೇ ಹೋಗುತ್ತವೆ! ಜೊತೆಗೆ ನಮ್ಮ ಹಿಗ್ಗೂ ಹೆಚ್ಚುತ್ತಲೇ ಹೋಗುತ್ತದೆ!

*****************************************************

[ ಟಿಪ್ಪಣಿ:

ಕವಿಯ ಲಂಬಿತ ಉದಾಸ ಭಾವಕ್ಕೆ ತಕ್ಕಂತೆ ಹಾಗೂ ಅವನ ಲಂಬಿತ argumentಗಳಿಗೆ ಹೊಂದುವಂತೆ, ಕವನವು ಲಂಬಿತ ಛಂದಸ್ಸಿನಲ್ಲಿ ಇರುವದನ್ನು ಗಮನಿಸಬಹುದು.

ಬೇಂದ್ರೆಯವರು ೧೯೪೩ರಲ್ಲಿ ಕಾಳಿದಾಸನ ‘ಮೇಘದೂತ ’ವನ್ನು ಕನ್ನಡಕ್ಕೆ ಅನುವಾದಿಸಿದರು. ಆ ಅನುವಾದದ ರಾಜಧನದಿಂದ ತಮ್ಮ ಹೆಂಡತಿಗೆ ಮುತ್ತಿನ ಏಕಾಕ್ಷಿ ಸರವನ್ನು ಕೊಡಿಸಿ ಅವಳ ಹಂಬಲವನ್ನು ಪೂರೈಸಿದರು.]

ಹೆಚ್ಚಿನ ಓದಿಗೆ: http://sallaap.blogspot.com/2009/05/blog-post.html

೫.‘ಹೂತsದ ಹುಣಸಿ’

ಹೆಚ್ಚಿನ ಓದಿಗೆ: http://sallaap.blogspot.com/2010/12/s.html

ಆಧುನಿಕ ನಾಗರಿಕತೆಯು ಬಕಾಸುರನೂ ಹೌದು , ಭಸ್ಮಾಸುರನೂ ಹೌದು. ನಿಸರ್ಗದ ಸಂಪತ್ತನ್ನೆಲ್ಲ ಬಕಾಸುರನಂತೆ ನುಂಗುತ್ತಿರುವ ಈ ನಾಗರಿಕತೆಯು ಭಸ್ಮಾಸುರನಂತೆ ಸಾಂಸ್ಕೃತಿಕ ವಿನಾಶವನ್ನು ಮಾಡುತ್ತ ನಡೆದಿದೆ. ಇಂತಹ (ಅ)ನಾಗರಿಕ ವಾತಾವರಣದಲ್ಲಿ ಬದುಕುವ ಜೀವಿಯು ಪ್ರತಿ ದಿನವೂ ಉದ್ವಿಗ್ನತೆಯಲ್ಲಿ ಹಪಹಪಿಸುವದನ್ನು ನಾವು ಕಾಣುತ್ತಲೇ ಇದ್ದೇವೆ. ಈಗಿನ ನಗರಜೀವನವು ತನ್ನ ನಿವಾಸಿಗಳನ್ನು ಅನೇಕ ಮನೋವಿಕಾರಗಳಿಗೆ ಈಡು ಮಾಡಿದೆ ಎಂದು ಹೇಳಿದರ ತಪ್ಪಾಗಲಿಕ್ಕಿಲ್ಲ.

ಔದ್ಯೋಗೀಕರಣದ ಹಾಗು ನಗರೀಕರಣದ ಮೊದಲಿನ ಪರಿಸ್ಥಿತಿ ಹೀಗಿರಲಿಲ್ಲ. ಗ್ರಾಮೀಣ ಜೀವನವು ಪ್ರಶಾಂತವಾಗಿರುತ್ತಿತ್ತು. ಹಳ್ಳಿಗರು ಸುತ್ತಲಿನ ಪ್ರಕೃತಿಯೊಡನೆ ತಾದಾತ್ಮ್ಯತೆಯನ್ನು ಅನುಭವಿಸುತ್ತಿದ್ದರು. ವರಕವಿ ಬೇಂದ್ರೆಯವರು ತಮ್ಮ ‘ಹೂತsದ ಹುಣಸಿ’ ಕವನದಲ್ಲಿ ಇಂತಹ ನೆಮ್ಮದಿಯ ಬದುಕಿನ ಒಂದು ಮುಖವನ್ನು ತೋರಿಸಿದ್ದಾರೆ.

‘ಹೂತsದ ಹುಣಸಿ’ ಕವನವು ‘ಸಖೀಗೀತ’ ಸಂಕಲನದಲ್ಲಿ ಅಡಕವಾಗಿದೆ. ‘ಸಖೀಗೀತ’ವು ೧೯೩೭ರಲ್ಲಿ ಪ್ರಕಟವಾಯಿತು. ಆ ಸಮಯದಲ್ಲಿ ಔದ್ಯೋಗಿಕ ನಾಗರಿಕತೆಯು ಭಾರತದಲ್ಲಿ ಇನ್ನೂ ಕಾಲಿಟ್ಟಿರಲಿಲ್ಲ. ವಿಶೇಷತಃ ಹಳ್ಳಿಯ ಜನರು ನಿರುಮ್ಮಳವಾದ ಬದುಕನ್ನು ನಡೆಯಿಸುತ್ತಿದ್ದರು. ಹಳ್ಳಿಯ ಹಾಡುಹಸೆಗಳು, ಪುರಾಣ ಪುಣ್ಯಕತೆಗಳು ಹಾಗು ಬಯಲಾಟದಂತಹ ಸಂಗತಿಗಳು ಅವರ ಮನರಂಜನೆಗೆ ಹಾಗು ಕಲಾಭಿವೃದ್ಧಿಗೆ ಪೂರಕವಾಗಿದ್ದವು. ಇಂತಹ ವಾತಾವರಣದಲ್ಲಿಬದುಕುತ್ತಿರುವ ಹಳ್ಳಿಗರ ದೈನಂದಿನ ಜೀವನವು ಪ್ರಕೃತಿಯೊಡನೆ ಸಮರಸವಾಗಿ ಸ್ಪಂದಿಸುತ್ತಿತ್ತು.

‘ಹೂತsದ ಹುಣಸಿ’ ಕವನವು ಇಂತಹ ಹಳ್ಳಿಯ ವ್ಯಕ್ತಿಯೊಬ್ಬನ ಚಿತ್ರವನ್ನು ಕೊಡುತ್ತದೆ. ಕಡುಬೇಸಿಗೆಯಲ್ಲಿ ತನ್ನ ಹೊಲದ ಕಡೆಗೆ ತೆರಳುತ್ತಿದ್ದ ಹಳ್ಳಿಗನೊಬ್ಬನು ಹೂವು ಬಿಟ್ಟಂತಹ ಹುಣಸಿಯ ಮರವನ್ನು ನೋಡಿದಾಗ, ಅದರಲ್ಲಿ ಚೆಲುವಿಕೆಯನ್ನು ಗುರುತಿಸುವ, ಆ ಚೆಲುವಿನಲ್ಲೇ ಪರವಶನಾಗುವ, ಹಾಗು ಹಗಲುಗನಸಿನಲ್ಲಿ ತೇಲಿ ಹೋಗುವ ಚಿತ್ರವನ್ನು ಈ ಕವನದಲ್ಲಿ ನೀಡಲಾಗಿದೆ.

-------------------------------------------------------

ಕವನದ ಪೂರ್ಣಪಾಠವು ಹೀಗಿದೆ:

ಹೂತsದ ಹುಣಸಿಯಾ ಚಿಗುರು

ಮದರಂಗಿ ಬಣ್ಣದುಗುರು

ರುಚಿಗೆ ಹುಳಿಯೊಗರು

ನೋಡ್ಯೆ ಜೀವಕ್ಕನಿಸಿತs ಹಗುರು ||ಹೂತsದ || ಪಲ್ಲ ||

ಉಗುರ್ಗೆಂಪು ಹಸಿರು ಬಿಳಿನಿಂಬಿ

ಹುಣಸಿಯಾ ರೆಂಬಿ

ಚಿಗತೀತೇನೊ ಎಂಬಿ

ಕಾಮsನ ಬಿಲ್ಲಿನಾ ಕೊಂಬಿ ||ಹೂತsದ

ಬ್ಯಾಸಿಗಿ ಹೊಡೆದsದ ಬಿಸಿಲಿನಾ ಡೇರೆ

ಮಧ್ಯಾಹ್ನದಾ ಪಾಹರೆ

ಯಾರಿಗಿಲ್ಲ ಹ್ವಾರೆ

ಸದ್ದು ಸುಳಿವು ಇಲ್ಲ ಬ್ಯಾರೆ ||ಹೂತsದ

ಸುಳ್ಳ ಸುಳ್ಳ ಗಾಳಿ ಹಾಕಿತ ಸಿಳ್ಳು

ಕಾಗಿ ಚುಂಚಿನ ಹಳ್ಳು

ಬಿದ್ದು ಆಂತ್ಯು “ಹೊಳ್ಳು”

ಮೈಚಾಚ್ಯsದ ಹುಣಸಿಯ ನೆಳ್ಳು ||ಹೂತsದ

ಅಡ್ಡಾಗತೇನಿ ನೆಳ್ಳಾಗ ಹೀಂಗ

ಹೂವು ಚಿಗುರು ಹ್ಯಾಂಗ

ಅವs ಹಾಸಿಧಾಂಗ

ಹುಳಿ ಚಿಗುರು ನುರಿಸಿ ನಾ ದಂಗ ||ಹೂತsದ

ಬಿಸಿಲ್ಗುದರಿ ಕುಣಿಯಲಿ ದೂರ

ಯಾರಿಗೆ ಬೇಕು ನೀರ

ಹೀಂಗ ನನ್ನಿದಿರ

ಕಣ್ಣಳತಿಯೊಳಗ ನೀ ಬಾರ ||ಹೂತsದ

ಹಾರತಿರಲಿ ಗಾಳಿಗೆ ಬಿಚ್ಚಿದ್ಹೆರಳು

ವಾರಿಯಿರಲಿ ಕೊರಳು

ಬಾಚತಿರಲಿ ಬೆರಳು

ನೋಡ್ತೇನಿ ನಿನ್ನ ಕವಿನೆರಳು ||ಹೂತsದ

ಕಣಕಣ್ಣ ಚಕಮಕಿ ಇತ್ತ

ಕುಡಿಗಣ್ಣಿನತ್ತ

ತಾಕಿ ಹಾರಿತ್ತ

ಗಾಳಿಸವಾರಿಗ್ಹೊರಟಿತ್ತ ಚಿತ್ತ ||ಹೂತsದ

ಅಗೊ ಗಾಳಿ ಧೂಳಿಯಾ ಬಂಬಾ

ನಿಂತ್ಹಾಂಗ ಅದ ಖಂಬಾ

ಅಲ್ಲಿ ರೌದಿ ತುಂಬಾ

ಗಣಿ ಕುಣಿಧಾಂಗ ಡೊಂಬರ ರಂಭಾ ||ಹೂತsದ

ಮ್ಯಾಲೆ ಅಲ್ಲಿ ಪಾರಿವಾಳ ಜೋಡಿ

ಒಂದಕ್ಕೊಂದ ನೋಡಿ

ಬಿಸಿಲ ತೆರೆ ದೂಡಿ

ಹಾರ್ತsದ ನೀಲಿಮುಗಿಲ್ಕೂಡಿ ||ಹೂತsದ

೧೦

ಕಂಡಂಗಾತು ನೀರಿನ ಕೊಳ

ನೀಲಿ ಮುಗಿಲ ಜಳಾ

ಎಂಥ ಝಳ ಝಳಾ

ಮುಳುಮುಳುಗಿ ಹೋತು ಮನದ ಧೂಳಾ ||ಹೂತsದ

೧೧

ಕಾಲ ಹೋಗತಿತ್ತ ಹಿಂದ ಸರಿದು

ಮನಸು ಆತ ಬರಿದು

ಮಧ್ಯಾನ ಬ್ಯಾಸರ ಮುರಿದು

ಬಿಸಿಲ ತಾನs ಹೋಗತಿತ್ತ ಹರಿದು ||ಹೂತsದ

೧೨

ಕವಿ ಜೀವದ ಬ್ಯಾಸರ ಹರಿಸಾಕ

ಹಾಡ ನುಡಿಸಾಕ

ಹೆಚ್ಚಿಗೇನು ಬೇಕ?

ಒಂದು ಹೂತ ಹುಣಸಿಮರ ಸಾಕ ||ಹೂತsದ

------------------------------------------------------------

ಹುಣಸಿ ಮರವು ಚಿಗುರುವ ಕಾಲದಲ್ಲಿ ಅಂದರೆ ಬಹುಶಃ ವೈಶಾಖ ಮಾಸದಲ್ಲಿ ಈ ಹಳ್ಳಿಗನು ತನ್ನ ಹೊಲಕ್ಕೆ ಹೊರಟಿದ್ದಾನೆ. ಈ ಕಾಲದಲ್ಲಿ ಹೊಲದಲ್ಲಿ ಕೃಷಿ ಕೆಲಸವೇನೂ ಇರುವದಿಲ್ಲ. ಬಹಳವಾದರೆ ಸಣ್ಣ ಪುಟ್ಟ ದುರಸ್ತಿ ಕೆಲಸಗಳು, ನಟ್ಟು ಕಡಿಯುವದು, ಕಳೆ ಕೀಳುವದು ನಡೆಯುತ್ತಿರುತ್ತವೆ. ನಮ್ಮ ನಾಯಕನು ಹೀಗೇ ತನ್ನ ಹೊಲದ ಕಡೆಗೆ ನಡೆದಾಗ ಹೊಲದ ಒಂದು ಭಾಗದಲ್ಲಿ ಇರಬಹುದಾದ ಹುಣಸಿಯ ಮರವು ಇವನ ಕಣ್ಣಿಗೆ ಬೀಳುತ್ತದೆ. ಖಾಲಿಯಾದ ಹೊಲದಂತೆಯೇ ಖಾಲಿಯಾದ ಇವನ ಮನಸ್ಸು ಈಗಷ್ಟೇ ಹೂವು ಬಿಡುತ್ತಿರುವ ಹುಣಸಿಯ ಮರವನ್ನು ಕಂಡು ಬೆರಗಾಗುತ್ತದೆ. ಆಗ ಇವನ ಮನಸ್ಸಿನಲ್ಲಿ ಉಕ್ಕುವ ಭಾವ ಹೀಗಿದೆ:

ಹೂತsದ ಹುಣಸಿಯಾ ಚಿಗುರು

ಮದರಂಗಿ ಬಣ್ಣದುಗುರು

ರುಚಿಗೆ ಹುಳಿಯೊಗರು

ನೋಡ್ಯೆ ಜೀವಕ್ಕನಿಸಿತs ಹಗುರು ||ಹೂತsದ

ಭಾರತದ ಆದಿಕವಿ ವಾಲ್ಮೀಕಿಗೆ ಕಾವ್ಯಸ್ಫುರಣವಾಗಲು ಕ್ರೌಂಚವಧೆಯು ಕಾರಣವಾಯಿತು. ಬೇಂದ್ರೆಯವರ ಕವನದ ನಾಯಕನಾದರೊ ಒಬ್ಬ ಅತಿ ಸಾಮಾನ್ಯ ಗ್ರಾಮೀಣ ವ್ಯಕ್ತಿ. ಈತನು ನಗರಜೀವಿ ಅಲ್ಲದ್ದರಿಂದಲೇ ಇವನ ಪ್ರಕೃತಿ-ಸಂವೇದನೆ ಇನ್ನೂ ಸುಸ್ಥಿತಿಯಲ್ಲಿದೆ ! ಆದುದರಿಂದ ಈಗತಾನೆ ಹೂವು ಬಿಡುತ್ತಿರುವ ಹುಣಸಿಯ ಮರವನ್ನು ಕಂಡಾಗ ಇವನಿಗೆ ಸುಖವೆನಿಸುತ್ತದೆ. ಈ ಸಂಗತಿಯೇ ಇವನ ಭಾವಸ್ಫುರಣಕ್ಕೆ ಕಾರಣವಾಗುತ್ತದೆ.

ಹುಣಸಿಯ ಚಿಗುರು ನಮ್ಮ ನಾಯಕನಿಗೆ ಮದರಂಗಿ ಬಣ್ಣ ಹಚ್ಚಿದ ಉಗುರಿನಂತೆ ಕಾಣುವದಂತೆ. ಇದರ ಕಾರಣವೇನು? ಮನುಷ್ಯರ ಅಗ್ರಭಾಗದಲ್ಲಿ ಉಗುರುಗಳು ಇದ್ದಂತೆ, ಮರಗಳ ಅಗ್ರಭಾಗದಲ್ಲಿ ಚಿಗುರುಗಳು ಇರುತ್ತವೆ. ಆದುದರಿಂದ ಹಸಿರು ಎಲೆಗಳಿಂದ ತುಂಬಿದ ಹುಣಸಿಯ ಮರದಲ್ಲಿ ಮೂಡುತ್ತಿರುವಂತಹ ಕೆಂಪು ಚಿಗುರುಗಳು ಇವನ ಕಣ್ಣಿಗೆ ಮೊದಲು ಬೀಳುತ್ತವೆ. ಇವುಗಳನ್ನು ಕಂಡಾಗಲೇ ಅವನಿಗೆ ಹುಣಸಿಯ ಮರವು ಹೂವು ಬಿಡುತ್ತಿರುವ ಅರಿವು ಆಗುತ್ತದೆ.

ಹಳ್ಳಿಯ ವ್ಯಕ್ತಿಯಾದ ಈತನಿಗೆ ಈ ಕೆಂಪು ಬಣ್ಣವು ಹಳ್ಳಿಯ ಹೆಣ್ಣುಗಳು ತಮ್ಮ ಉಗುರುಗಳಿಗೆ ಹಚ್ಚಿಕೊಂಡಂತಹ ಮದರಂಗಿಯ ಕೆಂಪು ಬಣ್ಣವನ್ನು ಸ್ಮರಣೆಯಲ್ಲಿ ತರುತ್ತವೆ. ಅಂದರೆ ಈತ ಬದುಕನ್ನು ತೆರೆದ ಕಣ್ಣುಗಳಿಂದ ನೋಡಬಲ್ಲ ಹಾಗು ಅನುಭವಿಸಬಲ್ಲ ರಸಿಕ ಮನುಷ್ಯ ಎನ್ನುವದು ಸ್ಪಷ್ಟವಾಗುತ್ತದೆ.

(ಬೇಂದ್ರೆಯವರು ಉಪಮೆಗಳನ್ನು ಬಳಸುವಾಗಲೂ ಸಹ, ವಾಸ್ತವತೆಯನ್ನು ಲಕ್ಷದಲ್ಲಿಟ್ಟಿರುತ್ತಿದ್ದರು ಹಾಗು ಆ ಉಪಮೆಯ ಅನೇಕ ಪ್ರಯೋಜನಗಳನ್ನು ಪಡೆಯುವ ಪ್ರತಿಭೆ ಉಳ್ಳವರು ಎನ್ನುವದು ಇದರಿಂದ ವೇದ್ಯವಾಗುತ್ತದೆ!)

ಇಂತಹ ರಸಿಕ ಮನುಷ್ಯ ಆ ಚಿಗುರನ್ನು ನೋಡಿ ಸುಮ್ಮನೆ ಹೋಗುತ್ತಾನೆಯೆ? ಮುಂದಿನ ಕ್ರಮವೆಂದರೆ, ಆ ಚಿಗುರು ಇವನ ಬಾಯಿಗೆ ಇಳಿಯುತ್ತದೆ ! ಆ ಚಿಗುರಿನ ರುಚಿಯನ್ನು ಈತ ಹುಳಿ ಹಾಗು ಒಗರು ಎಂದು ಅನುಭವಿಸುತ್ತಾನೆ. ಆದರೆ ಇಂತಹ ಕಡುರುಚಿಯಿಂದ ಅವನ ಸುಖ ಹೆಚ್ಚುತ್ತದೆಯೇ ಹೊರತು ಕಡಿಮೆಯಾಗುವದಿಲ್ಲ. ಯಾಕೆಂದರೆ ಪ್ರಕೃತಿಧರ್ಮವನ್ನು ಅನುಸರಿಸುತ್ತಿರುವ ಹುಣಸಿಯ ಮರದ ಚಿಗುರು ಇರಬೇಕಾದದ್ದೇ ಹೀಗೆ! ಅದು ಹೀಗಿದ್ದರೇನೆ ಆತನಿಗೆ ಸಮಾಧಾನ ಸಿಗುವದು. ಆದುದರಿಂದಲೇ ಆತ ಹೇಳುವದು: ‘ನೋಡ್ಯೆ ಜೀವಕ್ಕನಿಸಿತs ಹಗುರು’.

ಋತುಧರ್ಮವು ಸರಿಯಾಗಿ ಕ್ರಮಿಸುತ್ತಿದ್ದರೆ ಮಾತ್ರ ಹಳ್ಳಿಗನ ಮನಸ್ಸಿಗೆ ನೆಮ್ಮದಿಯಿರುತ್ತದೆ.

ಹುಣಸಿಯ ಚಿಗುರನ್ನು ನೋಡಿದ ಬಳಿಕ ಹಾಗು ಮೆಲ್ಲಿದ ಬಳಿಕ ಈತನ ನೋಟವು ಸಹಜವಾಗಿ, ಮುಂದಿನ ಮಜಲಿಗೆ ಅಂದರೆ ಹುಣಸಿಮರದ ರೆಂಬೆಗಳ ಕಡೆಗೆ ಹರಿಯುತ್ತದೆ. ಆ ರೆಂಬೆಗಳು ಈತನಿಗೆ ಕಾಣುವ ಪರಿ ಹೀಗಿದೆ:

ಉಗುರ್ಗೆಂಪು ಹಸಿರು ಬಿಳಿನಿಂಬಿ

ಹುಣಸಿಯಾ ರೆಂಬಿ

ಚಿಗತೀತೇನೊ ಎಂಬಿ

ಕಾಮsನ ಬಿಲ್ಲಿನಾ ಕೊಂಬಿ ||ಹೂತsದ

ಹುಣಸಿ ಮರದ ರೆಂಬೆಯ ಬಣ್ಣಗಳನ್ನು ಈತ ಎಷ್ಟು ಸೂಕ್ಷ್ಮ ವಿವರಗಳೊಡನೆ ಲಕ್ಷಿಸುತ್ತಾನೆ ಎನ್ನುವದನ್ನು ನೋಡಿರಿ. ಈ ರೆಂಬೆಗೆ ಉಗುರಿನ ಕೆಂಪಿದೆ ಹಾಗು ಇನ್ನೂ ಹಣ್ಣಾಗದಿರುವ ಬಿಳಿ-ಹಸಿರು ನಿಂಬಿಯ ಬಣ್ಣವಿದೆ. ಕಾಮನ ಬಿಲ್ಲಿನ ತುದಿಯು ಚಿಗಿತಂತೆ ಇವನಿಗೆ ಅದು ಭಾಸವಾಗುತ್ತದೆ. (ಈ ಬಿಲ್ಲು ಬಾನಿನಲ್ಲಿ ಮೂಡುವ ಕಾಮನ ಬಿಲ್ಲೂ ಹೌದು ; ಕಾಮದೇವನ ಬಿಲ್ಲೂ ಹೌದು !) ಕೆಂಪು, ಹಳದಿ ಹಾಗು ನೀಲಿ ಬಣ್ಣಗಳಿಂದ ಕೂಡಿದ ಕಾಮನ ಬಿಲ್ಲಿನ ವರ್ಣವ್ಯವಸ್ಥೆಯು ಈತನಿಗೆ ಹುಣಸಿಮರದ ರೆಂಬೆಯಲ್ಲಿ ಕಂಡರೆ ಆಶ್ಚರ್ಯವಿಲ್ಲ.

ಇಲ್ಲಿ ಅಡಗಿರುವ ಮತ್ತೊಂದು ಸೂಚನೆ ಎಂದರೆ, ಕಾಮದೇವನ ಬಿಲ್ಲು ಸೃಷ್ಟಿ ಸಂಕೇತವಾಗಿರುವದು. ಚಿಗುರಿನ ನಂತರ ಬರುವದು ಹೂವು, ಹೂವಿನ ನಂತರ ಬರುವದು ಹಣ್ಣು. ಇದು ಕಾಮದೇವನ ಸೃಷ್ಟಿಕ್ರಮ.

ಹುಣಸಿಯ ಮರವು ಹೂವು ಬಿಟ್ಟು ಚೆಲುವಾಗಿದ್ದನ್ನು ಗ್ರಹಿಸಿದ ಇವನ ನೇತ್ರೇಂದ್ರಿಯಕ್ಕೆ ಖುಶಿಯಾಯಿತು. ಚಿಗುರನ್ನು ತಿಂದ ಇವನ ಜಿಹ್ವೇಂದ್ರಿಯಕ್ಕೆ ಖುಶಿಯಾಯಿತು. ಹುಣಸಿಯ ಚೆಲುವಿನಲ್ಲಿ ಪರವಶನಾಗಿದ್ದ ಈತನೀಗ ಬಹಿರ್ಮುಖನಾಗುತ್ತಾನೆ ಹಾಗೂ ಇವನ ಸ್ಪರ್ಶೇಂದ್ರಿಯಕ್ಕೆ ತನ್ನ ಸುತ್ತಲಿನ ಪ್ರಕೃತಿಯ ವಾಸ್ತವ ಮುಖದ ಅಂದರೆ ಬಿಸಿಲಿನ ಅನುಭವವಾಗುತ್ತದೆ :

ಬ್ಯಾಸಿಗಿ ಹೊಡೆದsದ ಬಿಸಿಲಿನಾ ಡೇರೆ

ಮಧ್ಯಾಹ್ನದಾ ಪಾಹರೆ

ಯಾರಿಗಿಲ್ಲ ಹ್ವಾರೆ

ಸದ್ದು ಸುಳಿವು ಇಲ್ಲ ಬ್ಯಾರೆ ||ಹೂತsದ

ವೈಶಾಖ ಮಾಸವೆಂದರೆ ಬಿರುಬೇಸಿಗೆಯ ಕಾಲ. (‘ಬೇಸಿಗೆ’ ಇದು ‘ವೈಶಾಖ’ದ ತದ್ಭವ ಎನ್ನುವದನ್ನು ಗಮನಿಸಬೇಕು.) ಇದೇನು ಕಡೆತನಕ ಇರುವಂತಹ ಋತು ಅಲ್ಲ. ಎಲ್ಲ ಅಲೆಮಾರಿಗಳಂತೆ ಬೇಸಿಗೆಯೂ ಸಹ ಈತನ ಊರಿನಲ್ಲಿಇದೀಗ ಡೇರೆ ಹೊಡೆದುಕೊಂಡು ಕೂತಿದೆ.

ಗಮನಿಸತಕ್ಕ ಅಂಶವೆಂದರೆ ಡೇರೆಯನ್ನು ಹೊಡೆಯುವದು ಸಮತಟ್ಟಾದ ಬಯಲಿನಲ್ಲಿ. ಅಂದರೆ ಈ ವ್ಯಕ್ತಿಯ ಊರು ಬಯಲಸೀಮೆಯಲ್ಲಿರುವ ಹಳ್ಳಿ. ಅಲ್ಲೊ ಇಲ್ಲೊ ಇರುವ ಬೇವಿನ ಅಥವಾ ಹುಣಸಿಯ ಗಿಡಗಳನ್ನು ಮಾತ್ರ ಇಲ್ಲಿ ಕಾಣಬಹುದು.

ಡೇರೆಯನ್ನು ಹೊಡೆದಿರುವವರು ಇಂದಿಲ್ಲ ನಾಳೆ ಕಿತ್ತುಕೊಂಡು ಹೋಗುತ್ತಾರೆ. ಬೇಸಿಗೆಯೂ ಹೋಗುವಂತಹದೇ. ಈ ವ್ಯಕ್ತಿಯೂ ಆ ಕಾಲಕ್ಕಾಗಿ ಕಾಯುತ್ತಿದ್ದಾನೆ. ಆದರೆ ಬಿಸಿಲು ಮಾತ್ರ ಸದ್ಯದ ಗಳಿಗೆಯಲ್ಲಿ ತನ್ನ ಡೇರೆಯ ಹೊರಗೆ ಮಧ್ಯಾಹ್ನದ ಪಾಳಿಯ ಕಾವಲುಗಾರನಂತೆ ಪಹರೆ ಮಾಡುತ್ತಿದೆ ! ಬೇಸಿಗೆಯ ಬಿಸಿಲಿಗಾದರೊ ಪಹರೆ ಕಾಯುವ ಕೆಲಸವಿದೆ. ಆದರೆ ಈ ಸುಡುಬೇಸಿಗೆಯಲ್ಲಿ ಹಳ್ಳಿಯ ಜನರಿಗೇನು ಕೆಲಸ ? ಬಹುತೇಕ ಜನರು ಎಳೆಬಿಸಿಲಿನಲ್ಲಿಯೇ ಸಣ್ಣ ಪುಟ್ಟ ದುರಸ್ತಿ ಕೆಲಸಗಳನ್ನು ಮುಗಿಸಿಕೊಂಡು ಮನೆಗೆ ಹೋಗಿ ಬಿಟ್ಟಿರುತ್ತಾರೆ. ಯಾರಿಗೂ ಈಗ ಹ್ವಾರೆ(=ಕೆಲಸ) ಇಲ್ಲ. ಆದುದರಿಂದಲೇ ಇಲ್ಲಿ ಯಾವುದೇ ಸದ್ದಿಲ್ಲ ; ಯಾತರದೂ ಸುಳಿವೂ ಇಲ್ಲ.

ಸುಳ್ಳ ಸುಳ್ಳ ಗಾಳಿ ಹಾಕಿತ ಸಿಳ್ಳು

ಕಾಗಿ ಚುಂಚಿನ ಹಳ್ಳು

ಬಿದ್ದು ಆಂತ್ಯು “ಹೊಳ್ಳು”

ಮೈಚಾಚ್ಯsದ ಹುಣಸಿಯ ನೆಳ್ಳು ||ಹೂತsದ

ಪಂಚೇಂದ್ರಿಯಗಳಲ್ಲಿ ನಾಲ್ಕಾದ ನೇತ್ರ,ಜಿಹ್ವೆ, ಘ್ರಾಣ ಹಾಗು ಸ್ಪರ್ಶದ ನಂತರ ಇದೀಗ ಐದನೆಯದಾದ ಕರ್ಣೇಂದ್ರಿಯದ ಸರದಿ. ಇಲ್ಲಿಯ ವರೆಗೆ ಸ್ತಬ್ಧವಾಗಿದ್ದ ವಾತಾವರಣದಲ್ಲಿ ಇದೀಗ ಗಾಳಿಯಿಂದ ಚಲನೆ ಮೂಡುತ್ತದೆ. ಎಲ್ಲರೂ ಊಟ ಮುಗಿಸಿಕೊಂಡು ಮಲಗಿರುವಾಗ, ಈ ಗಾಳಿ ಮಾತ್ರ ಹರಿದಾಡುತ್ತ ಸಿಳ್ಳು ಹಾಕುತ್ತಿದೆ. ಹುಣಸಿಮರದ ಎಲೆಗಳಲ್ಲಿ ಹಾಯ್ದು ಹೋಗುವಾಗ ಅದರಿಂದ ಉಂಟಾಗುವ ಧ್ವನಿ ಸಿಳ್ಳಿನಂತೆ ಕೇಳಿಸುತ್ತದೆ. ಇದು ಕೆಲಸವಿಲ್ಲದ ಉಂಡಾಡಿ ತರುಣನ ನಿಶ್ಚಿಂತ, ವಿನಾಕಾರಣ ಸಿಳ್ಳು ; ಯಾಕೆಂದರೆ ಸಿಳ್ಳು ಹಾಕುವಂತಹ ಯಾವ ಕಾರಣವೂ ಗಾಳಿಗಿಲ್ಲ. ಆದುದರಿಂದ ಬೇಂದ್ರೆ ಇದನ್ನು ‘ಸುಳ್ಳ ಸುಳ್ಳ ಸಿಳ್ಳು’ ಎಂದು ಬಣ್ಣಿಸುತ್ತಾರೆ.

ಈ ಸಿಳ್ಳಿನ ಪರಿಣಾಮವಾಗಿ ಮರದ ಟೊಂಗೆಯ ಮೇಲೆ ಕುಳಿತ ಕಾಗೆಯೊಂದು ಬೆಚ್ಚಿ ಬೀಳುತ್ತದೆ. ಅದು ಚುಂಚಿನಲ್ಲಿ ಹಿಡಿದುಕೊಂಡಂತಹ ಸಣ್ಣ ಹಳ್ಳೊಂದು ದೊಪ್ಪನೆ ಕೆಳಗೆ ಬೀಳುತ್ತದೆ. ಬಿದ್ದ ಹಳ್ಳು (=ಕಲ್ಲಿನ ಸಣ್ಣ ತುಣುಕು) ನೆಟ್ಟಗೆ ನಿಲ್ಲಲಾರದೆ ಹೊರಳುತ್ತದೆ. ಇಂತಹ ಸಣ್ಣ ಘಟನೆಯೂ ಸಹ ನಮ್ಮ ನಾಯಕನ ಅರಿವಿನಲ್ಲಿ ಮೂಡುತ್ತದೆ. ಇಂತಹದೇ ಮತ್ತೊಂದು ವಿಷಯವನ್ನೂ ಅವನು ಗಮನಿಸುತ್ತಾನೆ. ಅದೇನೆಂದರೆ, ಹುಣಸಿ ಮರದ ನೆರಳೂ ಸಹ ಮೈ ಚಾಚಿ ಮಲಗಿಕೊಂಡಿದೆ! ಅಂದರೆ, ಸಚರಾಚರ ಜಗತ್ತೆಲ್ಲ, ಬಿಸಿಲಿನ ಧಗೆಯನ್ನು ಪರಿಹರಿಸಿಕೊಳ್ಳಲು ಒರಗಿಕೊಂಡಿದೆ. ಇನ್ನು ನಾಯಕನಿಗೇನು ಕೆಲಸ? ಅವನೂ ಸ್ವಗತವೆಂಬಂತೆ ನುಡಿಯುತ್ತಾನೆ:

ಅಡ್ಡಾಗತೇನಿ ನೆಳ್ಳಾಗ ಹೀಂಗ

ಹೂವು ಚಿಗುರು ಹ್ಯಾಂಗ

ಅವs ಹಾಸಿಧಾಂಗ

ಹುಳಿ ಚಿಗುರು ನುರಿಸಿ ನಾ ದಂಗ ||ಹೂತsದ

ಇದೇ ಹುಣಸಿಯ ಮರದ ನೆರಳಿನ ಕೆಳಗೆ ತಾನೂ ಅಡ್ಡಾಗಬೇಕೆನ್ನುವ ಯೋಚನೆ ಅವನಲ್ಲಿ ಬರುತ್ತದೆ. ಮರದ ಕೆಳಗೆ ಒರಗಿದಾಗ, ಅವನಿಗೆ ಮೇಲೆ ಕಾಣುವದೇನು? ಮರದ ತುಂಬೆಲ್ಲ ಹರಡಿದ ಹೂವು ಹಾಗು ಚಿಗುರು ತನ್ನ ಮೇಲೆಯೇ ಹಾಸಿದಂತೆ ಅವನಿಗೆ ಕಾಣುತ್ತದೆ. ಅಲ್ಲಿ ಒರಗಿದಂತೆಯೇ, ಹುಳಿ ಹುಳಿ ಚಿಗುರನ್ನು ನುರಿಸುತ್ತ, ಆ ಕಡುರುಚಿಗೆ ಆತ ಮರುಳಾಗುತ್ತಾನೆ.

ಈಗ ಅವನ ದೃಷ್ಟಿ ಕೆಳಗೆ ಸರಿಯುತ್ತ ಬಯಲಿನ ಕಡೆಗೆ ಹೋಗುತ್ತದೆ. ಕಣ್ಣ ನೋಟವೇ ಮಿತಿಯಾಗಿರುವಂತಹ ವಿಶಾಲವಾದ ಈ ಬಯಲು ಪ್ರದೇಶದಲ್ಲಿ, ಈ ಬಿಸಿಲಿನ ಝಳಕ್ಕೆ ದೂರದಲ್ಲಿ ಮೃಗಜಲದ ಆಭಾಸವಾಗುವದು ಸಹಜ. ನಮ್ಮ ಕವನದ ನಾಯಕನ ಕಣ್ಣಿಗೂ ಇದು ಬೀಳುತ್ತದೆ. ಆದರೆ ಆರಾಮಾಗಿ ಮಲಗಿಕೊಂಡಿರುವ ನಮ್ಮ ನಾಯಕನು ಈ ಮೃಗಜಲಕ್ಕೆ ಗಮನ ಹರಿಸುವದಿಲ್ಲ. ಭ್ರಮೆಯಲ್ಲಿ ಕಾಣಿಸುವ ನೀರು ಆತನಿಗೆ ಬೇಕಾಗಿಲ್ಲ. ಆತನಿಗೆ ಬೇಕಾದದ್ದು ಪ್ರೀತಿಯ ನೀರು. ಬಿಸಿಲುಕುದುರಿ ಬೇಕಾದಷ್ಟು ಕುಣಿಯಲಿ, ಅದಕ್ಕೆ ಅವನು ಲಕ್ಷ್ಯ ಕೊಡಲಾರ. ಅವನನ್ನು ತಣಿಸುವಂತಹದು ಅವನ ಕೆಳದಿಯ ಒಲವಿನ ಒಡನಾಟ ಮಾತ್ರ. ಆದರೆ ನಮ್ಮ ರಸಿಕ ನಾಯಕನ ಕೆಳದಿ ಇಲ್ಲಿಲ್ಲ. ಹೊಲದಲ್ಲಿ ಏನೂ ಕೆಲಸವಿಲ್ಲದಾಗ, ತನ್ನ ಗಂಡನಿಗೆ ಬುತ್ತಿಯನ್ನು ಕಟ್ಟಿಕೊಂಡು ಬರುವ ಪ್ರಸಂಗವು ಹೆಂಡತಿಗೆ ಬರುವದಿಲ್ಲ.ಅದಕ್ಕಾಗಿ ಆಕೆಯನ್ನು ಆತ ಕರೆಯುವದು ಹೀಗೆ :

ಬಿಸಿಲ್ಗುದರಿ ಕುಣಿಯಲಿ ದೂರ

ಯಾರಿಗೆ ಬೇಕು ನೀರ

ಹೀಂಗ ನನ್ನಿದಿರ

ಕಣ್ಣಳತಿಯೊಳಗ ನೀ ಬಾರ ||ಹೂತsದ

ನಾಯಕ ತನ್ನ ಕೆಳದಿಯನ್ನು ‘ಕಣ್ಣಳತಿಯೊಳಗೆ ಬಾ’ ಎಂದು ಕರೆಯುತ್ತಾನೆಯೇ ಹೊರತು, ಮೈಗೆ ಮೈ ಹಚ್ಚಿ ಕೂಡುವಷ್ಟು ಹತ್ತಿರ ಕರೆಯುತ್ತಿಲ್ಲ. ಯಾಕೆಂದರೆ ಈ ರಸಿಕನಿಗೆ ಅವಳ ಚೆಲುವನ್ನು ಅಲ್ಪದೂರದಿಂದಲೇ ಕಂಡು ಸುಖಿಸಬೇಕಾಗಿದೆ. ಅದು ಯಾವ ರೀತಿಯ ಚೆಲುವು ಎನ್ನುವದು ಈ ನುಡಿಯಲ್ಲಿ ವ್ಯಕ್ತವಾಗಿದೆ :

ಹಾರತಿರಲಿ ಗಾಳಿಗೆ ಬಿಚ್ಚಿದ್ಹೆರಳು

ವಾರಿಯಿರಲಿ ಕೊರಳು

ಬಾಚತಿರಲಿ ಬೆರಳು

ನೋಡ್ತೇನಿ ನಿನ್ನ ಕವಿನೆರಳು ||ಹೂತsದ

ಬಿಸಿಲಿನಿಂದಾಗಿ ಏಳುತ್ತಿರುವ ಬಯಲಸೀಮೆಯ ಗಾಳಿಗೆ ಅವಳ ಬಿಚ್ಚಿದ ಹೆರಳು ಹಾರಾಡುತ್ತಿರುವದನ್ನು ಈತ ಕಲ್ಪಿಸಿಕೊಳ್ಳುತ್ತಾನೆ. ಆ ಹಾರುತ್ತಿರುವ ಕೂದಲನ್ನು ಸರಿಪಡಿಸಿಕೊಳ್ಳಲು ಅವಳು ಕೊರಳನ್ನು ಕೊಂಕಿಸಿ, ತನ್ನ ಬೆರಳುಗಳಿಂದ ಬಾಚಿಕೊಳ್ಳುವದನ್ನು ಆತ ಮನದಲ್ಲಿಯೇ ಚಿತ್ರಿಸಿಕೊಳ್ಳುತ್ತಾನೆ. ಅವಳಿಗಿಂತ ಮೊದಲೇ ಅವಳ ನೆರಳು ಇವನ ಹತ್ತಿರಕ್ಕೆ ಬರುವದರಿಂದ, ಅವಳ ಕವಿಯುತ್ತಿರುವ ನೆರಳಿನಿಂದಲೇ ಅವಳು ತನ್ನ ಸನಿಹಕ್ಕೆ ಬಂದದ್ದನ್ನು ಈತ ಊಹಿಸಿಕೊಳ್ಳುತ್ತಾನೆ. ಎಂತಹ ಕಲ್ಪನಾಚತುರನಾಗಿದ್ದಾನೆ ನಮ್ಮ ರಸಿಕ ನಾಯಕ! ಅವನ ಮುಂದಿನ ಕಲ್ಪನೆಯು ಇನ್ನಿಷ್ಟು ಪ್ರಣಯಮಧುರವಾಗಿದೆ.

ಕಣಕಣ್ಣ ಚಕಮಕಿ ಇತ್ತ

ಕುಡಿಗಣ್ಣಿನತ್ತ

ತಾಕಿ ಹಾರಿತ್ತ

ಗಾಳಿಸವಾರಿಗ್ಹೊರಟಿತ್ತ ಚಿತ್ತ ||ಹೂತsದ

ಈ ರಸಿಕ ನಾಯಕನ ರಸಿಕ ಕೆಳದಿಯು ತನ್ನ ನಲ್ಲನನ್ನು ಸಮೀಪಿಸುವದಿಲ್ಲ , ನೇರವಾಗಿ ನೋಡುವದಿಲ್ಲ. ಕೇವಲ ಕುಡಿಗಣ್ಣಿನ ನೋಟವನ್ನು ಬೀರುತ್ತಾಳೆ, ಮತ್ತೆ ನೋಟವನ್ನು ಹೊರಳಿಸುತ್ತಾಳೆ, ಮತ್ತೆ ಅವನೊಡನೆ ಕಣ್ಣುಗಳನ್ನು ಕೂಡಿಸುತ್ತಾಳೆ. ಅವನೂ ಅಷ್ಟೇ! ಬೇಂದ್ರೆಯವರು ಇದನ್ನು ‘ಕಣಕಣ್ಣ ಚಕಮಕಿ’ ಎಂದು ಬಣ್ಣಿಸುತ್ತಾರೆ. ಬೆಣಚುಕಲ್ಲುಗಳ ಚಕಮಕಿಯಲ್ಲಿ ಕಿಡಿ ಹಾರುವಂತೆ ಈ ಕಣ್ಣುಗಳ ಚಕಮಕಿಯಲ್ಲಿಯೂ ಸಹ ‘ತಾಕಿ ಹಾರಿತ್ತ’. ಆದರೆ ಇಲ್ಲಿ ಹಾರಿದ್ದು ತುಂಟ ಪ್ರಣಯದ ಕಿಡಿ!

ಈ ರೀತಿಯಲ್ಲಿ ನಮ್ಮ ನಾಯಕನ ಚಿತ್ತವು ಗಾಳಿಸವಾರಿಯನ್ನು ಮಾಡುತ್ತಿದೆ. ಅಂದರೆ ಗಾಳಿ ಹೇಗೆ ಎತ್ತೆತ್ತಲೊ ಬೀಸುವದೋ, ಅದೇ ತೆರದಲ್ಲಿ ಈತನ ಚಿತ್ತವೂ ಸಹ ಹಗಲುಗನಸಿನಲ್ಲಿ ಎತ್ತೆತ್ತಲೊ ಹರಿಯುತ್ತಿದೆ.

ಕವನದ ನಾಯಕನು ಈಗ ಹಗಲುಗನಸಿನಿಂದ ಹೊರಬಂದು ವಾಸ್ತವ ಜಗತ್ತನ್ನು ನೋಡುತ್ತಾನೆ. ಆತನ ದೃಷ್ಟಿಯು ಸಮೀಪದಿಂದ ಸ್ವಲ್ಪ ದೂರದೆಡೆಗೆ ಸಾಗುತ್ತದೆ. ಅಲ್ಲಿ ಅವನಿಗೆ ಕಾಣುವದೇನು?

ಅಗೊ ಗಾಳಿ ಧೂಳಿಯಾ ಬಂಬಾ

ನಿಂತ್ಹಾಂಗ ಅದ ಖಂಬಾ

ಅಲ್ಲಿ ರೌದಿ ತುಂಬಾ

ಗಣಿ ಕುಣಿಧಾಂಗ ಡೊಂಬರ ರಂಭಾ ||ಹೂತsದ

ಸುಂಟರಗಾಳಿಯು ಸೃಷ್ಟಿಸಿದ ಧೂಳಿಯ ಬಂಬು (=bumb, ಪೊಳ್ಳಾಗಿರುವ ಸಿಲಿಂಡರಾಕಾರದ ರಚನೆ) ನಾಯಕನ ಕಣ್ಣಿಗೆ ಗಾಳಿಯ ಕಂಬವೊಂದು ನಿಂತುಕೊಂಡಂತೆ ಕಾಣುತ್ತದೆ. ಅದರ ಒಳಗೆಲ್ಲ ರವದಿಯಂತಹ (=ದಂಟಿನ ಸಿಪ್ಪೆ , ಕಸದಂತಹ) ಕ್ಷುಲ್ಲಕ ವಸ್ತು ತುಂಬಿಕೊಂಡಿದೆ. ಆದರೆ ಇಂತಹ ಸಾಮಾನ್ಯ ನೋಟವೂ ಸಹ ನಮ್ಮ ರಸಿಕ ನಾಯಕನಲ್ಲಿ ಕೌತುಕವನ್ನು ಹುಟ್ಟಿಸಬಲ್ಲದು. ಈ ಗಾಳಿಗಂಬದ ತಿರುಗುವಿಕೆಯು ಇವನ ಕಣ್ಣಿಗೆ ‘ಡೊಂಬರ ರಂಭೆ’ ಕುಣಿದಂತೆ ಕಾಣುವದು. ಹಳ್ಳಿಯಲ್ಲಿ ಕಸರತ್ತು ಮಾಡಿ ಮನರಂಜನೆ ನೀಡುವ ಕೆಲಸವನ್ನು ಡೊಂಬರು ಮಾಡುತ್ತಿದ್ದರು. ಆ ಕಸರತ್ತಿನಲ್ಲಿ ಕುಣಿಯುವ ಹುಡುಗಿ, ಈ ಹಳ್ಳಿಗರ ಪಾಲಿಗೆ ರಂಭೆ! ಈ ರೀತಿಯಾಗಿ ಗಾಳಿಯ ಬಂಬು ಕುಣಿಯುವ ರಂಭೆಯಾಗಿದೆ. ಇದು ರಸಿಕನ ಮನೋಧರ್ಮ.

ಈ ರೀತಿಯಾಗಿ ದೂರಕ್ಕೆ ಹರಿದ ಇವನ ದೃಷ್ಟಿಯು ಅಲ್ಲಲ್ಲಿ ಹರಿದಾಡುತ್ತ ಮತ್ತೆ ತನ್ನ ಸನಿಹದ ಹುಣಿಸೆ ಮರದ ಸನಿಹಕ್ಕೇ ಬರುವದು. ಅಲ್ಲಿ ಮರದ ಮೇಲುಭಾಗದಲ್ಲಿ ಇವನಿಗೆ ಪಾರಿವಾಳದ ಜೋಡಿಯೊಂದು ಕಾಣುವದು. ಬಿಸಿಲು, ಮಳೆ, ಚಳಿ ಇವೆಲ್ಲ ಮನುಷ್ಯಮಾತ್ರರಿಗೆ ಸಹನೀಯವಾಗದಿರಬಹುದು. ಆದರೆ ನಿಸರ್ಗದ ಶಿಶುಗಳಾದ ಪಕ್ಷಿ, ಪ್ರಾಣಿಗಳಿಗೆ ಈ ವೈಪರೀತ್ಯದ ಪರಿವೆಯೇ ಇಲ್ಲ.

ಮ್ಯಾಲೆ ಅಲ್ಲಿ ಪಾರಿವಾಳ ಜೋಡಿ

ಒಂದಕ್ಕೊಂದ ನೋಡಿ

ಬಿಸಿಲ ತೆರೆ ದೂಡಿ

ಹಾರ್ತsದ ನೀಲಿಮುಗಿಲ್ಕೂಡಿ ||ಹೂತsದ

ಪಾರಿವಾಳದ ಜೋಡಿಯು ಪ್ರೇಮದ ಸಂಕೇತವೇ ಆಗಿದೆ. ಇವುಗಳ ಕೆಳೆತನವನ್ನು ನೋಡಿರಿ. ಅವು ಕ್ಷಣ ಬಿಟ್ಟು ಕ್ಷಣ, ಗೋಣು ಹೊರಳಿಸುತ್ತ ಒಂದನ್ನೊಂದು ನೋಡುತ್ತಲೇ ಇರುತ್ತವೆ. ಈ ಬಿಸಿಲಿನ ಬಾಧೆ ತಮಗೆ ಏನೂ ಅಲ್ಲ ಎಂಬಂತೆ, ಬಿಸಿಲಿನ ತೆರೆಯನ್ನು ದೂಡಿ ಹಾರುತ್ತವೆ. ಎಲ್ಲಿಗೆ?... ಬೇಸಿಗೆಯ ನಿರಭ್ರ, ನೀಲಿ ಆಕಾಶಕ್ಕೆ!

ಅವು ಎಷ್ಟು ಸಮರೂಪವಾಗಿ ಹಾರುತ್ತಿವೆ ಎಂದರೆ, ಅವುಗಳ ಹಾರಾಟವನ್ನು ಪ್ರತ್ಯೇಕಿಸದೆ, ‘ಹಾರುತ್ತಿದೆ ಜೋಡಿ…..ಕೂಡಿ’ ಎಂದು ಬಣ್ಣಿಸಲಾಗಿದೆ ! ಹಾರುತ್ತಿರುವ ಈ ಜೋಡಿಯನ್ನು ಕಂಡಾಗ, ನಮ್ಮ ನಾಯಕನೂ ಸಹ ಮುಗಿಲನ್ನು ನಿಟ್ಟಿಸುತ್ತಾನೆ. ನೀಲಿ ಬಣ್ಣದ ಆಕಾಶದ ಆ ಡುಬರಿಯು ಆತನಿಗೆ ನೀರಿನ ಕೊಳದಂತೆ ಕಾಣುವದು.

ಕಂಡಂಗಾತು ನೀರಿನ ಕೊಳ

ನೀಲಿ ಮುಗಿಲ ಜಳಾ

ಎಂಥ ಝಳ ಝಳಾ

ಮುಳುಮುಳುಗಿ ಹೋತು ಮನದ ಧೂಳಾ ||ಹೂತsದ

ಡುಬರಿಬಿದ್ದ ನೀಲಿ ಆಕಾಶವು ಇವನಿಗೆ ‘ಜಳಾ’ ಅಂದರೆ ‘ಜಲ’ದಿಂದ (=ನೀರಿನಿಂದ) ತುಂಬಿದ ಕೊಳದಂತೆ ಕಾಣುವದು. ಜಳ ಪದಕ್ಕೆ ಸ್ವಚ್ಛ ಎನ್ನುವ ಅರ್ಥವೂ ಇದೆ. ಈ ನೀಲಾಕಾಶವೂ ಸಹ ಸ್ವಚ್ಛವಾದ ನೀರಿನ ಕೊಳದಂತೆ, ‘ಜಳಜಳ’ (=ಸ್ವಚ್ಛ)ವಾಗಿ ಆತನಿಗೆ ತೋರುವದು.

( ‘ಜಳ’ ಅಂದರೆ ಸ್ವಚ್ಛ ; ‘ಜಲ’ ಅಂದರೆ ನೀರು. ಈ ಪದಕ್ಕೆ ಇರುವ ಎರಡೂ ಅರ್ಥಗಳನ್ನು ಬೇಂದ್ರೆಯವರು ಇಲ್ಲಿ ಬಳಸಿಕೊಂಡಿದ್ದಾರೆ.) ಸ್ವಚ್ಛವಾದ ಮುಗಿಲು ಹಾಗು ಅದು ಸೂಸುವ ತಾಪ ಎರಡೂ ಅವನ ಅನುಭವಕ್ಕೆ ಬಂದಾಗ, ಆತ ‘ಎಂಥ ಝಳ ಝಳಾ’ ಎಂದು ಉದ್ಗರಿಸುತ್ತಾನೆ! (ಝಳ ಎಂದರೆ ತಾಪ, ಸೆಕೆ ; ಝಳಝಳ ಎಂದರೆ ಸ್ವಚ್ಛ !)

‘ಶುದ್ಧವಾದ ವಸ್ತುವನ್ನು ನೋಡಿದಾಗ ನಾವೂ ಶುದ್ಧವಾಗುತ್ತೇವೆ’ ಎಂದು ಶಾಸ್ತ್ರ ಹೇಳುತ್ತದೆ. ಹಳ್ಳಿಯ ಈ ಸಾಮಾನ್ಯ ವ್ಯಕ್ತಿಗೆ ಶಾಸ್ತ್ರ ಗೊತ್ತಿಲ್ಲ. ಆದರೆ ಝಳಝಳ ಆಕಾಶದಲ್ಲಿ ಅವನ ನೋಟ ನೆಟ್ಟಾಗ, ಅವನ ಮನಸ್ಸಿನಲ್ಲಿರಬಹುದಾದ ಧೂಳೆಲ್ಲ ಹೊರಟು ಹೋಗಿ ಅವನು ನಿರ್ಮಲ ಚಿತ್ತನಾಗುತ್ತಾನೆ. ಈ ರೀತಿಯಾಗಿ ಸಮಯ ಸಾಗುತ್ತಿರಲು, ಮನಸ್ಸಿನ ಎಲ್ಲ ಉಪಾಧಿಗಳು ಮಾಯವಾಗಿ ಋಷಿಗಳು ಹೇಳುವ ‘ಶೂನ್ಯಮನೋಸ್ಥಿತಿ’ಯನ್ನು ಈತ ಮುಟ್ಟುತ್ತಾನೆ.

ಕಾಲ ಹೋಗತಿತ್ತ ಹಿಂದ ಸರಿದು

ಮನಸು ಆತ ಬರಿದು

ಮಧ್ಯಾನ ಬ್ಯಾಸರ ಮುರಿದು

ಬಿಸಿಲ ತಾನs ಹೋಗತಿತ್ತ ಹರಿದು ||ಹೂತsದ

ಬಿಸಿಲುಕಾಲದ ಮಧ್ಯಾಹ್ನದಲ್ಲಿ ಏನೂ ಕೆಲಸವಿಲ್ಲದೆ, ರಣರಣ ಹೊಡೆಯುವ ಬಿಸಿಲಿನಿಂದ ಬೇಸರಗೊಂಡ ಈತನ ಮನಸ್ಸು ಹೂತ ಹುಣಸಿಯ ಮರವನ್ನು ಕಂಡ ಬಳಿಕ, ಚಿತ್ತವಿಲಾಸದಲ್ಲಿ ತೊಡಗಿ, ಕೊನೆಗೆ ಅಲೆಗಳಿಲ್ಲದ ಸರೋವರದಂತಹ ನಿರ್ಭಾವವನ್ನು ಮುಟ್ಟುತ್ತದೆ. (ನಿರ್ವಾಣ ಸ್ಥಿತಿ ಎನ್ನೋಣವೆ?) ಇದೇ ರೀತಿ ಕಾಲ ಸರಿದು ಹೋಗುತ್ತಿದೆ, ಬಿಸಿಲು ಹರಿದು ಹೋಗುತ್ತಿದೆ. ಮನಸ್ಸು ನಿರಾಳಸುಖವನ್ನು ಅನುಭವಿಸುತ್ತಿದೆ.

ಪ್ರಕೃತಿಯಲ್ಲಿ ಭಾವಸಮಾಧಿ ಹೊಂದುವ ಇಂತಹ ಮನೋಸ್ಥಿತಿಯು ಸಮಾಧಾನ ಚಿತ್ತವುಳ್ಳ ವ್ಯಕ್ತಿಗೆ ಮಾತ್ರ ಸಾಧ್ಯ! ಇವನೇ ನಿಜವಾದ ಕವಿಹೃದಯ ಉಳ್ಳವನು. ಈತ ಪಂಡಿತನಿರಬೇಕಿಲ್ಲ, ನಾಗರಿಕನಿರಬೇಕಿಲ್ಲ. (ಇರದಿರುವದೇ ಉತ್ತಮ!?) ಅದಕ್ಕೆಂದೇ ಈ ಕವನದ ಕೊನೆಯ ಭರತವಾಕ್ಯವನ್ನು ಬೇಂದ್ರೆ ಈ ರೀತಿ ಹೇಳುತ್ತಾರೆ :

ಕವಿ ಜೀವದ ಬ್ಯಾಸರ ಹರಿಸಾಕ

ಹಾಡ ನುಡಿಸಾಕ

ಹೆಚ್ಚಿಗೇನು ಬೇಕ?

ಒಂದು ಹೂತ ಹುಣಸಿಮರ ಸಾಕ ||ಹೂತsದ

ಕವಿಜೀವದ ಬೇಸರವು ಹರಿದ ಬಳಿಕ, ಕವಿಯ ಸುಖವು ಹಾಡಿನ ರೂಪದಲ್ಲಿಯೇ ಹೊರಹೊಮ್ಮಬೇಕಲ್ಲವೆ? ಆಗ ಆತನು ಹಾಡಿದ ಹಾಡು ಕವಿಗೆ ಸುಖ ನೀಡುವಂತೆಯೆ ಕೇಳುಗರಿಗೂ ಸುಖ ನೀಡುವದು. ಕವಿಗೆ ಹಾಗು ರಸಿಕರಿಗೆ ಸುಖ ನೀಡಲು ಹೂವು ಬಿಟ್ಟ ಹುಣಸಿ ಮರವೇ ಸಾಕು!

-------------------------------------------------------------

ಕವನದ ವೈಶಿಷ್ಟ್ಯಗಳು:

ಕವನಕ್ಕೆ ಸಮರ್ಪಕವಾದ ಛಂದಸ್ಸನ್ನು ಬಳಸುವದರಲ್ಲಿ ಬೇಂದ್ರೆಯವರನ್ನು ಸರಿಗಟ್ಟಬಲ್ಲವರಿಲ್ಲ. ‘ಪಾತರಗಿತ್ತಿ ಪಕ್ಕಾ’ ಕವನದಲ್ಲಿ ಅವರು brief and fluttering ಛಂದಸ್ಸನ್ನು ಬಳಸಿ, ಪಾತರಗಿತ್ತಿಯ ಹಿಂದೆಯೇ ಹಾರುತ್ತಾರೆ. ‘ಹೂತದ ಹುಣಸಿ’ ಕವನದ ಛಂದಸ್ಸನ್ನು ನೋಡಿರಿ. ಹಳ್ಳಿಯ ಸಾಮಾನ್ಯ ವ್ಯಕ್ತಿಯೊಬ್ಬನು ತನ್ನಷ್ಟಕ್ಕೆ ರಾಗವಾಗಿ ಮಾತನಾಡಿಕೊಳ್ಳುತ್ತಿರುವ ಛಂದಸ್ಸು ಈ ಕವನಕ್ಕಿದೆ. ಇಲ್ಲಿ ಬಳಸಲಾದ ಎಲ್ಲ ಪದಗಳೂ ಹಳ್ಳಿಗರು ಬಳಸುವ ದೇಸಿ ಪದಗಳೇ ಆಗಿವೆ. ಅಂತಹ ಪದಗಳಲ್ಲಿಯೇ ವಿವಿಧಾರ್ಥಗಳನ್ನು (pun) ಹೊರಡಿಸಬಲ್ಲ ಸಾಮರ್ಥ್ಯವನ್ನು ಬೇಂದ್ರೆ ತೋರಿಸಿದ್ದಾರೆ.

ಬೇಂದ್ರೆಯವರ ಚಿತ್ರಕ ಶಕ್ತಿಯೂ ಅದ್ಭುತವಾದದ್ದು. ಕವನವನ್ನು ಓದುತ್ತಿದ್ದಂತೆಯೇ ಹೂವು ಬಿಟ್ಟ ಹುಣಸಿ ಮರವು ಕಣ್ಣಿಗೆ ಕಟ್ಟುತ್ತದೆ. ಅಷ್ಟೇ ಏಕೆ, ಬಿಸಿಲು ಹಾಗು ಗಾಳಿಯಂತಹ ನಿರ್ಜೀವ ವಸ್ತುಗಳಿಗೆ ಬೇಂದ್ರೆ ಇಲ್ಲಿ ಜೀವ ಕೊಟ್ಟಿದ್ದಾರೆ. ಡೇರೆಯನ್ನು ಹೊಡೆದುಕೊಂಡು ಪಹರೆ ಮಾಡುವ ಕಾವಲುಗಾರನ ರೂಪವನ್ನು ಬಿಸಿಲು ತಾಳುತ್ತದೆ. ದಿಕ್ಕು ನೋಡದೆ ಹರಿಯುವ ಗಾಳಿಯು ಸಿಳ್ಳು ಹಾಕುವ ನಿಶ್ಚಿಂತ ತರುಣನ ವ್ಯಕ್ತಿತ್ವವನ್ನು ಪಡೆಯುತ್ತದೆ. ಸುಂಟರಗಾಳಿಯ ಬಂಬನ್ನು ಅವರು ಬಣ್ಣಿಸುವಾಗ, ಆ ಬಂಬು ಕಣ್ಣೆದುರಿಗೇ ನಿಲ್ಲುತ್ತದೆ. ನಾಯಕನ ಕೆಳದಿಯು ಒನಪು-ವೈಯಾರದ, ಹಳ್ಳಿಯ ಬೆಡಗಿಯಾಗಿ ನಮ್ಮ ಮನದಲ್ಲಿ ನಿಲ್ಲುತ್ತಾಳೆ.

‘ಉಪಮಾ ಕಾಲಿದಾಸಸ್ಯ’ ಎಂದು ಹೇಳುತ್ತಾರೆ. ಉಪಮೆಗಳನ್ನು ಕೊಡುವದರಲ್ಲಿ ಬೇಂದ್ರೆಯವರು ಕಾಲಿದಾಸನಿಗೆ ಸರಿಸಾಟಿ ಎನ್ನಬಹುದು. ಹುಣಸಿಯ ಚಿಗುರುಗಳನ್ನು ಮದರಂಗಿ ಹಚ್ಚಿದ ಉಗುರುಗಳಿಗೆ ಹೋಲಿಸುವದರಲ್ಲಿ , ಹುಣಸಿಯ ರೆಂಬೆಯನ್ನು ಕಾಮನಬಿಲ್ಲಿನ ತುದಿಗಳಿಗೆ ಹೋಲಿಸುವದರಲ್ಲಿ ಅಥವಾ ಸುಂಟರಗಾಳಿಯ ಕುಣಿತವನ್ನು ಡೊಂಬರ ರಂಭೆಯ ಕುಣಿತಕ್ಕೆ ಹೋಲಿಸುವದರಲ್ಲಿ ಇವರ ವಾಸ್ತವಪ್ರಜ್ಞೆ ಹಾಗು ಉಪಮಾ ಪ್ರತಿಭೆ ವ್ಯಕ್ತವಾಗುತ್ತವೆ. ಆದರೆ ನಮ್ಮ ನಾಯಕನ ರಸಿಕ ವ್ಯಕ್ತಿತ್ವವನ್ನು ಬಯಲುಗೊಳಿಸುವದೇ ಈ ಉಪಮೆಗಳ ನೈಜ ಉದ್ದೇಶವಾಗಿದೆ.

ಇಲ್ಲಿ ಮತ್ತೊಂದು ಸಾಮ್ಯವನ್ನು ಗಮನಿಸಬೇಕು. ಚಿಗುರು ಬಿಟ್ಟ ಹುಣಸಿಯ ಮರವು ಫಲಿತವಾಗಲು ದುಂಬಿಗಾಗಿ ಕಾಯುತ್ತದೆ. ಅದರಂತೆಯೇ, ಉಗುರಿಗೆ ಮದರಂಗಿಯನ್ನು ಹಚ್ಚಿಕೊಂಡ ಹುಡುಗಿಯು ತನ್ನ ನಲ್ಲನಿಗಾಗಿ ಕಾತರಿಸುತ್ತಾಳೆ. ಈ ಎರಡೂ ಕ್ರಿಯೆಗಳು ಸೃಷ್ಟಿಗಾಗಿ ಇವೆ. ಆದುದರಿಂದಲೇ, ನಮ್ಮ ನಾಯಕನು ತನ್ನ ಕೆಳದಿಯ ಹಗಲುಗನಸು ಕಾಣುವ ವರ್ಣನೆ ಮುಂದಿನ ನುಡಿಗಳಲ್ಲಿ ಬರುತ್ತದೆ.

ಉಮರ ಖಯ್ಯಾಮನ ‘ರುಬಾಯತ್’ ಕಾವ್ಯವು ಜೀವನಪ್ರೀತಿಯ ತತ್ವಕ್ಕಾಗಿ ತುಂಬ ಪ್ರಸಿದ್ಧವಾಗಿದೆ. ಆ ಕಾವ್ಯದಲ್ಲಿ ಬರುವ ‘Come, fill the cup ಎನ್ನುವ ಸಾಲಂತೂ ಎಲ್ಲೆಲ್ಲೂ ಉದ್ಧೃತವಾಗಿದೆ:

ನಮ್ಮ ಹಳ್ಳಿಯ ಗೃಹಸ್ಥನಿಗೆ ಇದಕ್ಕಿಂತ ಹೆಚ್ಚಿನ ತತ್ವಜ್ಞಾನವು ತನ್ನ ಗ್ರಾಮೀಣ ಸಂಸ್ಕೃತಿಯ ಮೂಲಕವೇ ಅರಿವಾಗಿದೆ. ಅದಕ್ಕೆಂದೇ ಆತ ತನ್ನ ಕೆಳದಿಯನ್ನು ಒಲವಿನಿಂದ ನೋಡಬಯಸುವದು ಹೀಗೆ:

ಹಾರತಿರಲಿ ಗಾಳಿಗೆ ಬಿಚ್ಚಿದ್ಹೆರಳು

ವಾರಿಯಿರಲಿ ಕೊರಳು

ಬಾಚತಿರಲಿ ಬೆರಳು

ನೋಡ್ತೇನಿ ನಿನ್ನ ಕವಿನೆರಳು ||ಹೂತsದ

ರಚನೆಯ ವೈಶಿಷ್ಟ್ಯ:

ಹೂವು ಬಿಟ್ಟ ಹುಣಸಿಯ ಮರವು ಎಂತಹ ಮನೋವಿಲಾಸಕ್ಕೆ, ಎಂತಹ ನೆಮ್ಮದಿಗೆ ಕಾರಣವಾಗಬಹುದು ಎನ್ನುವದನ್ನು ಬೇಂದ್ರೆಯವರು ನುಡಿಗೆ ನುಡಿ ಜೋಡಿಸುತ್ತ ಅತ್ಯಂತ ಕ್ರಮಬದ್ಧವಾಗಿ ತೋರಿಸುತ್ತ ಹೋಗಿದ್ದಾರೆ. ನಿರುದ್ದಿಶ್ಯವಾಗಿ ಚಲಿಸುತ್ತಿರುವ ಮನಸ್ಸಿನ ವಿಲಾಸವನ್ನು ಚಿತ್ರಿಸುವ ಕಲ್ಪನಾಸಾಮರ್ಥ್ಯವು ಬೇಂದ್ರೆಯವರ ಪ್ರತಿಭೆಯ ಫಲವಾದರೆ, ಉದ್ದೇಶಪೂರ್ಣ ಕ್ರಮಬದ್ಧತೆಯು ಅವರ ಪಾಂಡಿತ್ಯದ ಫಲವಾಗಿದೆ. ಪ್ರತಿಭೆ ಹಾಗು ಪಾಂಡಿತ್ಯ ಇವೆರಡೂ ಬೇಂದ್ರೆಯವರಲ್ಲಿ ಸಮರಸವಾಗಿ ಮೇಳವಿಸಿರುವದರಿಂದಲೇ ‘ಹೂತದ ಹುಣಸಿ’ಯಂತಹ ಶ್ರೇಷ್ಠ ಕವನವು ಅವರ ಮನದಲ್ಲಿ ಮೂಡಲು ಸಾಧ್ಯವಾಗಿದೆ ಎನ್ನಬಹುದು.

‘ಒಂದು ಹೂತ ಹುಣಸಿಮರವನ್ನು ಕಂಡರೂ ಸಾಕು, ಪ್ರಕೃತಿಯಲ್ಲಿ ಭಾವಸಮಾಧಿ ಹೊಂದಬಲ್ಲ ಸಾಮರ್ಥ್ಯ ಕವಿಜೀವಕ್ಕೆ ಇದೆ’, ಎಂದು ಬೇಂದ್ರೆ ಕೊನೆಯ ನುಡಿಯಲ್ಲಿ ಹೇಳುತ್ತಾರೆ. ಇಂತಹ ಕಾವ್ಯರಚನೆಯನ್ನು ಮಾಡುವ ಸಾಮರ್ಥ್ಯವು ಕಾವ್ಯದಲ್ಲಿ ಸಮಾಧಿಸ್ಥನಾಗಬಲ್ಲ ವರಕವಿಗೆ ಮಾತ್ರ ಸಾಧ್ಯ, ಅಲ್ಲವೆ!

------------------------------------------------------------

[ಟಿಪ್ಪಣಿ:

‘ಹೂತsದ ಹುಣಸಿ’ ಕವನದಲ್ಲಿ ಬೇಂದ್ರೆಯವರು ‘ಪ್ರಕೃತಿಸಮಾಧಿ’ಯನ್ನು ಬಣ್ಣಿಸಿದ್ದಾರೆ. ನಗರದ ವಾತಾವರಣದಿಂದಾಗಿ ಇಂತಹ ಪ್ರಕೃತಿಸಾಮರಸ್ಯಸುಖವು ಪಾಶ್ಚಾತ್ಯರಿಗೆ ಅಲಭ್ಯವಾಗಿದೆ. ಇದನ್ನು ಕೆಲವು ಪಾಶ್ಚಾತ್ಯ ಕವಿಗಳು ತಮ್ಮ ಕವನಗಳಲ್ಲಿ ಅಭಿವ್ಯಕ್ತಿಸಿದ್ದಾರೆ.

ಉದಾಹರಣೆಗೆಂದು W.H.Davies ಇವರು ಬರೆದ ಕವನವೊಂದರ ಮೊದಲ ನುಡಿಯನ್ನು ಗಮನಿಸಬಹುದು :

What is this life if full of care,

There is no time to stand and stare?

No time to stand beneath the boughs

And stare as long as sheep and cows.

ಎರಡನೆಯ ಉದಾಹರಣೆ ಎಂದರೆ ಪ್ರಸಿದ್ಧ ಇಂಗ್ಲಿಶ್ ಕವಿ ಯೇಟ್ಸನ ಸುಪ್ರಸಿದ್ಧ ಕವನ:

‘The Lake isle of Innisfree’.

I will arise and go now, and go to Innisfree,

And a small cabin build there, of clay and wattles made:

Nine bean-rows will I have there, a hive for the honey-bee,

And live alone in the bee-loud glade.

And I shall have some peace there, for peace comes dropping slow,

Dropping from the veils of the morning to where the cricket sings;

There midnight's all a glimmer, and noon a purple glow,

And evening full of the linnet's wings.

I will arise and go now, for always night and day

I hear lake water lapping with low sounds by the shore;

While I stand on the roadway, or on the pavements grey,

I hear it in the deep heart's core.

ಈ ಇಬ್ಬರೂ ಇಂಗ್ಲಿಶ್ ಕವಿಗಳು ಆಧುನಿಕ ನಾಗರಿಕತೆಯು ಕಳೆದುಕೊಂಡ ಪ್ರಕೃತಿಯ ಕೆಳೆತನಕ್ಕಾಗಿ ಹಲಬುವ ಕವನಗಳನ್ನು ಬರೆದಿದ್ದಾರೆ. ಬೇಂದ್ರೆಯವರು ಆ ಕೆಳೆತನವು ಹೇಗೆ ಇರುವದು ಎನ್ನುವದನ್ನು ತೋರಿಸಿದ್ದಾರೆ.]

------------------------------------------------------------

ಒಂದು ಘಟನೆ:

ಈ ಘಟನೆಯನ್ನು ನನಗೆ ಶ್ರೀ ವ್ಯಾಸ ದೇಶಪಾಂಡೆ ಹೇಳಿದರು :

ಗದಗಿನಲ್ಲಿ (?) ನಡೆಯುತ್ತಿದ್ದ ಒಂದು ಸಾಹಿತ್ಯಸಮಾರಂಭದ ವೇದಿಕೆಯ ಮೇಲೆ ಶ್ರೀ ಬೇಂದ್ರೆ, ಶ್ರೀ ಆರ್.ಸಿ. ಹಿರೇಮಠ ಹಾಗು ಶ್ರೀ ಧಾರವಾಡಕರ ಉಪಸ್ಥಿತರಿದ್ದರು. ಶ್ರೀ ಆರ್.ಸಿ.ಹಿರೇಮಠರು ಬೇಂದ್ರೆಯವರಿಗೆ ಚೇಷ್ಟೆ ಮಾಡುವ ಉದ್ದೇಶದಿಂದ, “ಬೇಂದ್ರೆ ಅವರು ಬೇಕಾದ್ದರ ಮ್ಯಾಲೆ ಕವನಾ ಬರೀತಾರ; ಇಕಾ ನೋಡರಿ, ಆ ಎದುರಿಗಿರೋ ಹುಣಸಿ ಮರದ ಮ್ಯಾಲೂ ಒಂದ ಕವನಾ ಕಟ್ಟತಾರ ಅವರು” ಎಂದು ಅಂದರಂತೆ. ತಕ್ಷಣವೇ ಬೇಂದ್ರೆಯವರು ಎದ್ದು ನಿಂತು, ಕೈ ಮೇಲೆತ್ತಿ, ಹಸ್ತಚಲನೆ ಮಾಡುತ್ತ ಉದ್ಗರಿಸಿದರಂತೆ :

“ಕವಿಗೇನು ಬೇಕs

ಹೂತ ಹುಣಸಿ ಮರ ಸಾಕs”

೬. ದೀಪ

ಬಂತಿದೊ ಸೃಂಗಾರ ಮಾಸ

ಕಂತು ನಕ್ಕ ಚಂದ್ರಹಾಸ

ಎಂತು ತುಂಬಿತಾsಕಾಶ

ಕಂಡವರನು ಹರಸಲು.

ಕಿರಿಬೆರಳಲಿ ಬೆಳ್ಳಿ ಹರಳು

ಕರಿ ಕುರುಳೊಳೊ ಚಿಕ್ಕೆ ಅರಳು

ತೆರದಳಿದೊ ತರಳೆ ಇವಳು

ತನ್ನರಸನನರುಸಲು.

ಹಂಗೆ ಯಮುನೆ ಕೂಡಿ ಹರಿದು

ಸಂಗಮ ಜಲ ಬಿಳಿದು ಕರಿದು

ತಿಂಗಳ ನಗೆ ಮೇರೆವರಿದು

ಬೇರೆ ಮಿರುಗು ನೀರಿಗು.

ಪಂಥದಿಂದ ಮನೆಯ ತೊರೆದು

ಪಾಂಥ ನೆನೆದನತ್ತು ಕರೆದು;

ಇಂಥ ಸಮಯ ಬೇರೆ ಬರದು

ದಂಪತಿಗಳಿಗಾರಿಗು!

ನಾನು ನೀನು ಜೊತೆಗೆ ಬಂದು

ಈ ನದಿಗಳ ತಡಿಗೆ ನಿಂದು

ಸಾನುರಾಗದಿಂದ ಇಂದು

ದೀಪ ತೇಲಿ ಬಿಟ್ಟೆವೇ?

ದೀಪ ತೇಲಿ ಬಿಟ್ಟೆವು.