ನದೀತೀರದಲ್ಲಿ.

೧.ಮುಗ್ಧಯೋಗಿ.

"ನೆಲಗುದ್ದಿ ಬೆವರಿಳಿಸಿ ತನ್ನ ಪಾಲಿನ ಗದ್ದೆ-

ಯುತ್ತು ಓರಣಮಾಡಿ, ಲಾಂಟಾನ ಪೊದೆಕಿತ್ತು,

ಉಪ್ಪೆಮೆಳೆ ಪಾಪಾಸು ಕಾರೆ ಕುಂಟಿಯ ಸವರಿ,

ತರಿದು ಈಚಲು, ಬೊಡ್ಡೆ ಸುಟ್ಟು, ನಾಟಿಯ ಮುಗಿಸಿ

ಮೋಡಗಳ ಜೋಡಿ ಮಾತಾಡಿ ಒಣಗು ನೆಲಕ್ಕೆ

ನಾನು ಹನಿಗಳ ಬೇಡಿ ದೈನಾಸ ಪಟ್ಟವರೇ...

ಗುಡಿಗೋಪುರದೆ ಮುಂದೆ ಕಣ್ಮುಚ್ಚಿ ನಿಲ್ಲದೆಯೆ

ಎಲ್ಲೊ ಅಳುತ್ತಿದೆ ಮಗು ಎಂದು ತಲ್ಲಣಿಸುತ್ತ

ನಟ್ಟಿರುಳಿನಲ್ಲಿ ಚೋಟುದ್ದ ಬ್ಯಾಟದಿ ಹಿಡಿದು

ಚಂದ್ರದಾಡೆಯ ಇರುಳ ಗಂಟುಮೋರೆಗೆ ವೃಥಾ

ಬೆಳಕ ದೊಣ್ಣೆಯ ತಿವಿದು ತಿವಿದು ಅಳಲಿನ ಸ್ವರಕ್ಕೆ

ಕಿವಿಯೊಡ್ಡಿ ಮುನ್ನಡೆವ ಮುಗ್ಧಯೋಗಿ...

ನಮ್ಮ ದಾರಿಗೆ ಇರಲಿ ನಿಮ್ಮ ಟಾರ್ಚಿನ ಬೆಳಕು

ಸರಿರಾತ್ರಿಗಿರುವಂತೆ ಚಂದ್ರಗಿಂಡಿಯ ತುಳುಕು !"

೨.ದಾಂಪತ್ಯದ ದೋಣಿ.

ಹಾಯಿದೋಣಿಯ ನೀರಿಗಿಳಿಸಿ ಇಪ್ಪತ್ತೈದು

ವರ್ಷವಾಯಿತು ಎಂದೆ! ಸಂತೋಷ ಗೆಳೆಯಾ!

ದೋಣಿ ಪರಿಚಿತ ನಮಗೆ. ಹರಿವ ನೀರಿನ ಮರ್ಮ

ಅರಿಯುವುದು ಬಲು ಕಷ್ಟ. ಎಲ್ಲಿ ತಲೆಮರೆಸಿರುವ

ಒಳಗಲ್ಲ ಸೀಳೊ? ಎಲ್ಲಿ ಇಡಿ ದೋಣಿಯನೆ

ಕಾಲಕೂಪಕ್ಕೆಳೆವ ಮೃತ್ಯುವರ್ತುಳದಂಥ

ಭೀಕರಾವರ್ತಗಳೋ? ಎಲ್ಲಿ ಎಳೆಯುವ ಸೆಳೆವೋ?

ಎಲ್ಲಿ ಎದೆ ಝಲ್ಲೆನಿಸುವಂಥ ಜಲಪಾತವೋ?

ಎಲ್ಲಿ ಒಮ್ಮೆಗೆ ದಿಕ್ಕು ಬದಲಿಸುವ ತಿರುವುಗಳೋ?

ಯಾವಾಗ ಕೆನ್ನೆ ಊದಿಸಿ ಗಾಳಿಯಗುಮ್ಮ

ಹಾಯಿಪಟದಲ್ಲಿ ಮುಖ ಮರೆಸಿ ಹಲ್ಕಿರಿವುದೋ?

ನಡುಗಿದಾಗೆಲ್ಲ ಹಿಡಿದೆವು ಗಪ್ಪ ದೋಣಿಯನು!

ನಾವು ಕಾಪಾಡಿದೆವು ಬಡಪಾಯಿ ದೋಣಿಯನು?

ಅಥವ ದೋಣಿಯೆ ಕಾಯಿತೋ ನಚ್ಚಿಕೊಂಡವರ?

೩.ಅರವತ್ತು ತುಂಬಿದ ಇರುಳು.

ನನ್ನ ಕಣ್ಣ ಹೊಳಪನ್ನ ನೀನು ಹಿಂದಕ್ಕೆ ಪಡೆದುದಕ್ಕೆ

ನನ್ನ ಕಿವಿಯ ಸೂಕ್ಷ್ಮವನು ನೀನು ಹಿಂದಕ್ಕೆ ಪಡೆದುದಕ್ಕೆ

ನನ್ನ ಸೆಟೆವ ತಾಖತ್ತ ನೀನು ಹಿಂದಕ್ಕೆ ಪಡೆದುದಕ್ಕೆ

ಆಕ್ಷೇಪವಿಲ್ಲ; ಬೇಸರವು ಇಲ್ಲ: ಪ್ರಶ್ನೆ ಮಾತ್ರ ಉಂಟು!

ಪಡೆದುದಕ್ಕೆ ಪ್ರತಿಯಾಗಿ ನೀನು ಹಿಂದಕ್ಕೆ ಕೊಟ್ಟದನ್ನು

ಹೇಳಿಹೋಗೆಂದು ಹಿಡಿದಲ್ಲಾಡಿಸಿ ಕೇಳಿದೆ ದೇವರನು!

ನನ್ನ ಮಾತಿಗವ ನಕ್ಕ ಖೊಕ್ಕೆಂದು ಬಳಿಗೆ ಬಂದು ನಿಂತು

ಬೆನ್ನ ತಟ್ಟಿ ಮೈ ಕುಲುಕಿ ಹೇಳಿದ: "ಗಟ್ಟಿ ಪಿಂಡ ನೀನು!

ಕಣ್ಣು ಮಂಕಾದ ಮೇಲೆ ತಾನೆ ನೋಡಿದ್ದು ನೀನು ನನ್ನ ?

ಕಿವಿಯು ಮಂದವಾದಾಗ ತಾನೆ ಕೇಳಿದ್ದು ನೀನು ನನ್ನ?

ಕಣ್ಣೇ ಇಲ್ಲದೆ ಹೇಗೆ ನೋಡಿದೆ? ಕಿವಿಯೇ ಇಲ್ಲದೆ ಹೇಗೆ ಕೇಳೀದೆ?"

ಮಹಾಕಿಲಾಡಿ ಎನ್ನುತ ಕಳಿಸಿದೆ ನಗುತ ದೇವರನ್ನು!

೪.ಹೊಣೆಗಾರಿಕೆ.

ನಾವು ಹಚ್ಚುವುದೇನೇ ಇದ್ದರು ದೀಪವನ್ನು. ಬೆಳಕನ್ನು ನೀಡುವ

ಹೊಣೆಗೆ ದೀಪವು ಬದ್ಧ; ದೀಪವ ಹಚ್ಚಿದವನಲ್ಲ.

ನಾವು ಬೆಳೆಸುವುದೇನೇ ಇದ್ದರು ಬಳ್ಳಿಯನ್ನು, ಹೂವನ್ನರಳಿಸುವ

ಹೊಣೆಗೆ ಬಳ್ಳಿಯು ಬದ್ಧ; ಬಳ್ಳಿಯ ಬೆಳೆಸಿದವನಲ್ಲ.

ನವು ಕಟ್ಟುವುದೇನೇ ಇದ್ದರು ಜೋಪಡಿಯನು. ನೆರಳನ್ನು ನೀಡುವ

ಹೊಣೆಗೆ ಜೋಪಡಿಯು ಬದ್ಧ; ಜೋಪಡಿ ಕಟ್ಟಿದವನಲ್ಲ.

ನಾವು ನೀಡುವುದೇನೇ ಇದ್ದರು ಔಷಧವ. ಬಾಧೆಯನ್ನು ನೀಗುವ

ಹೊಣೆಗೆ ಔಷಧಿ ಬದ್ಧ; ಔಷದಿ ನೀಡಿದವನಲ್ಲ.

ನಾವು ನೀಡುವುದೇನೇ ಇದ್ದರು ಆಸರವ. ಡಾವರವ ನೀಗುವ

ಹೊಣೆಗೆ ಆಸರು ಬದ್ಧ; ಆಸರು ನೀಡಿದವನಲ್ಲ,

ನಾವು ನೀಡುವುದೇನೇ ಇದ್ದರು ಅನ್ನವನ್ನ. ಹಸಿವನ್ನ ನೀಗುವ

ಹೊಣೆಗೆ ಅನ್ನವು ಬದ್ಧ; ಅನ್ನವ ನೀಡಿದವನಲ್ಲ.

ನಾವು ಮಾಡುವುದೇನೇ ಇದ್ದರು ಆಕೃತಿಯ. ಕೃತ್ಯವನ್ನು ನಡೆಸುವ

ಹೊಣೆಗೆ ಕೃತಿಯೇ ಬದ್ಧ; ಕೃತಿಯನ್ನು ಮಾಡಿದವನಲ್ಲ.

೫.ಒಂದು ಮರಿಮೀನಿಗೆ!

ಕಾರ್ಮುಗಿಲು ಆಗಸದ ತುಂಬ ಗೇರಾಯಿಸಿ

ಬೇಸಿಗೆಯ ತುದಿಗೆ ಮತ್ತೊಂದು ಉರುಬು!

ಒಣ ಧಗೆ-ಗಮ್ಮು-ಜೂಬರಿಕೆ-ಎಂಥದೊ ಜಡ್ಡು.

ತೂಗು ನಾಲಗೆ ಬಿದ್ದ ಗಂಟೆ ಕೊರಳು!

ಫಳ್ಳೆನುವ ಮಿಂಚು! ನಡು ನಡುವೆ ಸಿಡಿಮಿಡಿ ಗುಡುಗು

ಒಮ್ಮೆಗೇ ಆಹ! ತಂಗಾಳಿ ನುಗ್ಗು!

ಮೊದಲು ಹನಿ ಹನಿ ಚುಮುಕು. ಕೊನೆಗೆ ತಡಬಡವಿರದ

ಸುರಿತ. ಹೂವಾಗುವುದು ಎದೆಯ ಮೊಗ್ಗು!

ಅಂತರಾಳದ ತುಂಬ ನೆಲದ ಮಾದಕ ಗಂಧ

ನೆನೆಮಳೆಗೆ ಕಾದ ಮೈತುಂಬ ಝಳಕ

ಮಳೆಗಾಲ ಕಳೆಯಿತೋ ಮತ್ತದೇ ಒಣ ಬಾನು

ಇನ್ನೊಂದು ಮಳೆಗಾಲ ಬರುವ ತನಕ.

ಒಂದು ಮರಿಮೀನಿಗೆಷ್ಟಗಲ ಆಕಾಶ ಬಲೆ!

ಚುಕ್ಕಿ ಹುಳ ಚುಚ್ಚಿರುವ ಚಂದ್ರಗಾಳ!