ಮೂರ್ತಿ ಮತ್ತು ಕಾಮಕಸ್ತೂರಿ.

೧.ನಾವು ಬರತೇವಿನ್ನ

“ ನಾನು ” ಎನ್ನುವ ತಮ್ಮ ಕವನದಲ್ಲಿ ಬೇಂದ್ರೆ ಈ ರೀತಿ ಹೇಳುತ್ತಾರೆ:

“ವಿಶ್ವಮಾತೆಯ ಗರ್ಭಕಮಲಜಾತ-ಪರಾಗ-

ಪರಮಾಣು ಕೀರ್ತಿ ನಾನು|

ಭೂಮಿತಾಯಿಯ ಮೈಯ ಹಿಡಿಮಣ್ಣು ಗುಡಿಗಟ್ಟಿ

ನಿಂತಂಥ ಮೂರ್ತಿ ನಾನು|

ಕನ್ನಡದ ತಾಯಿ-ತಾವರೆಯ ಪರಿಮಳವುಂಡು

ಬೀರುತಿಹ ಗಾಳಿ ನಾನು|

ನನ್ನ ತಾಯಿಯ ಹಾಲು ನೆತ್ತರವ ಕುಡಿದಂಥ

ಜೀವಂತ ಮಮತೆ ನಾನು|

ಈ ಐದು ಐದೆಯರೆ ಪಂಚಪ್ರಾಣಗಳಾಗಿ

ಈ ಜೀವ ದೇಹನಿಹನು|

ಹೃದಯಾರವಿಂದದಲಿ ನಾರಾಯಣನೆ

ತಾನಾಗಿ ದತ್ತನರನು|

ವಿಶ್ವದೊಳನುಡಿಯಾಗಿ ಕನ್ನಡಿಸುತಿಹನಿಲ್ಲಿ

ಅಂಬಿಕಾತನಯನಿವನು|”

“ ನಾನು ” ಎನ್ನುವ ಕವನವೇನೊ ಚಿಕ್ಕದು ; ಆದರೆ ಇದರ ಹರಹು ವಿಸ್ತಾರವಾದದ್ದು. ವಿಶ್ವಮಾತೆ, ಭಾರತಮಾತೆ, ಕನ್ನಡ ಮಾತೆ ಅಲ್ಲದೆ ತಮ್ಮನ್ನು ಹಡೆದ ತಾಯಿ ಇವರೆಲ್ಲರಿಗೂ ತಾವು ಮಗು ಎಂದು ಬೇಂದ್ರೆ ಈ ಕವನದ ಮೂಲಕ ವ್ಯಕ್ತಪಡಿಸುತ್ತಿದ್ದಾರೆ.

ಬೇಂದ್ರೆಯವರ ಹೃದಯದಲ್ಲಿ ತಾಯಿಗೆ ಇರುವ ಮಮತೆಯ ಹಾಗು ಮಹತ್ವದ ಸ್ಥಾನವನ್ನು ಈ ಕವಿತೆ ನಿಚ್ಚಳವಾಗಿ ಪ್ರತಿಬಿಂಬಿಸುತ್ತಿದೆ. ಅಂಬಿಕಾತನಯದತ್ತನನ್ನು ರೂಪಿಸಿದವಳು ತಾಯಿ; ಅವರಿಗೆ ಶಕ್ತಿಸ್ರೋತಳಾದವಳು ತಾಯಿ.

ಬೇಂದ್ರೆ ಈ ಕವನದಲ್ಲಿ ಧಾರವಾಡದ ಮಾತೆಯನ್ನು ಪ್ರತ್ಯೇಕವಾಗಿ ಗುರುತಿಸಿಲ್ಲ. ಬಹುಶ: ಧಾರವಾಡದ ಮಾತೆ ಈ ಎಲ್ಲ ಮಾತೆಯರಲ್ಲಿ ಅಂತರ್ಗತವಾಗಿರಬೇಕು ! ಬೇಂದ್ರೆಯವರಿಗೆ ಧಾರವಾಡ ಬೇರೆ ಅಲ್ಲ, ತಮ್ಮ ಹಡೆದಮ್ಮ ಬೇರೆ ಅಲ್ಲ.

ಅನಿವಾರ್ಯ ಕಾರಣಗಳಿಂದಾಗಿ ಧಾರವಾಡವನ್ನು ಅಗಲಿ ಹೋಗುವಾಗ ಈ ಕವಿ, ತಾಯಿಯನ್ನು ಅಗಲುತ್ತಿರುವ ಮಗುವಿನಂತೆ ಪರಿತಪಿಸಿದ್ದಾರೆ.

(“ನಾವು ಬರತೇವಿನ್ನ ನೆನಪಿರಲಿ ತಾಯಿ,

ನಂ ನಮಸ್ಕಾರ ನಿಮಗ .”)

ಧಾರವಾಡಕ್ಕೆ ಮರಳಿ ಬಂದಾಗ, ತಾಯಿಯನ್ನು ಕಳೆದುಕೊಂಡ ಮಗು ಮರಳಿ ತಾಯ ಮಡಿಲಿಗೆ ಬಂದಂತೆ ಸಂಭ್ರಮಿಸಿದ್ದಾರೆ.

(“ಬಂದಿರುವೆನಿದೊ ತಾಯಿ, ಧಾರವಾಡದ ಮಾಯಿ,

ಸರ್ವಮಂಗಳೆ ನಿನ್ನ ಭಾಗ್ಯದುಡಿಗೆ.)

ಧಾರವಾಡದ ನಿಸರ್ಗವೈಭವನ್ನು ಮನಸ್ಸು ತುಂಬಿ ಹಾಡಿದ್ದಾರೆ.

(“ಬಾರೊ ಸಾಧನಕೇರಿಗೆ,

ಮರಳಿ ನಿನ್ನೀ ಊರಿಗೆ!)

ಬೇಂದ್ರೆಯವರು ಧಾರವಾಡದ ಬಗೆಗೆ ಹಾಡಿದ ಗೀತೆಗಳೆಷ್ಟು? ನಾಲ್ಕು ಕವನಗಳನ್ನು ನಾನು ಓದಿದ್ದೇನೆಂದು ನನ್ನ ನೆನಪು. ಇನ್ನೂ ಹೆಚ್ಚಿಗೆ ಕವನಗಳನ್ನು ಅವರು ಬರೆದಿರಲೂ ಬಹುದು.

ಬೇಂದ್ರೆಯವರು ಧಾರವಾಡದ ಬಗೆಗೆ ಬರೆದ ಕವನಗಳಲ್ಲಿ ನನ್ನ ಮನಸ್ಸನ್ನು ತೀವ್ರವಾಗಿ ಕಲಕಿದ ಕವನವೆಂದರೆ:

“ ನಾವು ಬರತೇವಿನ್ನ ” ಎನ್ನುವ ಕವನ.

……………………………………………………………..

ಕವನದ ಪೂರ್ತಿಪಾಠ ಹೀಗಿದೆ:

===೧===

ನಾವು ಬರತೇವಿನ್ನ ನೆನಪಿರಲಿ ತಾಯಿ

ನಂ ನಮಸ್ಕಾರ ನಿಮಗ,

ಕಾಯ್ದಿರಿ—ಕೂಸಿನ್ಹಾಂಗ ನಮಗ—

ನಾವು ಬರತೇವಿನ್ನ (ಪಲ್ಲ)

ಜಗದ ಕೂಡ ಬಂದೆವು ಜಗಳಾಡಿ

ಕೊಟ್ಟಿರಿ ನಿಮ್ಮ ತೊಡಿ

ಅಲ್ಲಿ ನಿದ್ದಿ ಮಾಡಿ—ಎದ್ದೆವೀಗ

ಯಾವುದೋ ಹೊಸಾ ನಸುಕಿನ್ಯಾಗs |

ನೀವು ತಾಯಿತನ ನಡಿಸಿದರಿ

ಹಾಲ ಕುಡಿಸಿದರಿ

ಮರಳು ಆಡಿಸಿದರಿ ಕನಸಿನ್ಯಾಗ

ಬೆಳಗು—ಆತು ಭಾಳ ಬ್ಯಾಗ

ಕಣ್ಣು ಮುಚ್ಚಿಕೊಳ್ಳತಾವ ಚಿಕ್ಕಿ

ಚಿವುಗುಡತಾವ ಹಕ್ಕಿ

ಕತ್ತಲಿ ತಲಿಕುಕ್ಕಿ—ಬಾನಮ್ಯಾಗ

ಬೆಳಕು—ಹಾರ್ಯಾವ ಮೂಡಲದಾಗ

ನಿಮ್ಮ ಸೆರಗ ಮರೀ ಮಾಡಿದಿರಿ

ಲಾಲಿ ಹಾಡಿದಿರಿ

ಆಟ ಆಡಿದಿರಿ—ಏನೋ ಹಾಂಗs

ಮರೆತೆವು—ಕಳೆದ ಜನ್ಮಧಾಂಗ

ಜೋಲಿ—ಹೋದಾಗ ಆದಿರಿ ಕೋಲು

ಹಿಡಿದಿರಿ ನಮ್ಮ ತೋಲು

ಏನು ನಿಮ್ಮ ಮೋಲು—ಲೋಕದಾಗ ?

ನಾವು -- ಮರತೇವದನ ಹ್ಯಾಂಗ ?

ಅಕ್ಕ—ತಂಗಿ—ಮಗಳು –ಹಡೆದ ತಾಯಿ…

ಕನ್ನಿ—ಗೆಳತಿ—ಮಡದಿ—ದಾಯಿ—ಸಾಕುದಾಯಿ…

ಜೋಡೆ—ಸೂಳೆ ಮತ್ತೆ ಮಾಯಿ—ವಿಧೀಮಾಯಿ…

ನೂರಾರು ವೇಷ ಕಳಿಸಿದಿರಿ

ಮಡ್ಡ ಇಳಿಸಿದಿರಿ

ಮಾನ ಬೆಳಿಸಿದಿರಿ

ಯಾಕೋ ಕರುಣ ಬಂತು ತಮಗs

ನಾವು—ಶರಣ ಬರಲಿಲ್ಲ ಸುಮಗs

ನಾವು ಬರತೇವಿನ್ನ......

===೨===

ಎಲ್ಲಿ ಹೋದಲ್ಲಿರಲಿ ನಮ್ಮ ಹತ್ರ

ನಿಮ್ಮ ಕೃಪಾ ಛತ್ರ

ಕಾರ್ಯ ಸುಸೂತ್ರ—ನಡೀತಿರಲಿ

ನಿಮ್ಮ—ಹೆಜ್ಜೆ ಜೋಡಿಗಿರಲಿ

ಹಗಲಾಗಲಿ ಧುರಂಧುರಿ ಜಾತ್ರಿ

ನಿದ್ದಿಗಿರಲಿ ರಾತ್ರಿ

ಜೀವಕ್ಕs ಖಾತ್ರಿ—ನಿಮ್ಮದಿರಲಿ

ಜನ್ಮ ಮರಣ, ಏನs ಬರಲಿ

ಮಾಡೀತೇನು ಮಣ್ಣಿನs ಗೊಂಬಿ ?

ನಿಮ್ಮ ಹೆಸರ ನಂಬಿ

ಹೊತ್ತುಕೊಂಡು ಕಂಬಿ—ಕುಣಿಯುತಿರಲಿ

ಸ್ವರ್ಗ—ನರಕ ಯಾವುದೂ ಇರಲಿ ?

ಮೂರು ಹೊತ್ತಿನ್ಯಾಗ ನಿಮ್ಮ ಧ್ಯಾನ

ಹೊತ್ತುತಿರಲಿ ಗ್ಯಾನ

ಸುಡಲಿ ಅಜ್ಞಾನ-ಪ್ರೇಮ ಮುರಲಿ

ಕಿವಿಗೆ ಅದೇ ಕೇಳಸತಿರಲಿ.

ನಿಮ್ಮ ಚಂದ್ರ ಜ್ಯೋತಿಯಾ ಬೆಳಕು

ಅದs ನಮಗ ಬೇಕು

ಸುಡೋ ಸೂರ್ಯ ಸಾಕು—ಯಾಕ ತರಲಿ ?

ಹೊತ್ತಾರ ಯಾರು ಒಣಾ ಹರಲಿ !

ಕತ್ತಲೀ ಕೆಚ್ಚ ಕೆದರೀ—ಕೆಚ್ಚಿ ಕೆದರಿ !

ಬಣ್ಣ ಬಣ್ಣ ಬಂತು ಚೆದರಿ—ಸುತ್ತ ಚೆದರಿ

ಮಕ್ಕಳಾಟ ತೋರಿಸಿದಿರಿ—ಹಾರಿಸಿದಿರಿ.

ನಿಮ್ಮ ಹೊಟ್ಟೀ ಕರುಳಿನಾ ತುಣುಕು

ಅಂತನs ಚುಣುಕು

ತೋರಿಸಿದಿರಿ ಮಿಣುಕು

ಮಿಣುಮಿಣುಕು ದೀಪದಾಗ

ಚಿಕ್ಕೀ ಮಳೀ ಸುರಿಸಿದ್ಹಾಂಗ |

ನಾವು ಬರತೇವಿನ್ನ....

-----------------------------------

ಬೇಂದ್ರೆ ಈ ಕವನವನ್ನು ಎರಡು ಭಾಗಗಳಲ್ಲಿ ಹಾಡಿದ್ದಾರೆ. ಮೊದಲ ಭಾಗದಲ್ಲಿ ಧಾರವಾಡ ತಮ್ಮನ್ನು ರೂಪಿಸಿದ ಬಗೆಯನ್ನು, ಧಾರವಾಡದ ಜೊತೆಗಿರುವ ತಮ್ಮ ಸಂಬಂಧವನ್ನು ಬೇಂದ್ರೆ ನೆನಸಿಕೊಳ್ಳುತ್ತಾರೆ.

ಕವನದ ಮೊದಲ ನುಡಿಯಲ್ಲಿ ತಮ್ಮನ್ನು ಕೂಸಿಗೆ ಹೋಲಿಸಿಕೊಂಡ ಬೇಂದ್ರೆ “ಕಾಯ್ದಿರಿ—ಕೂಸಿನ್ಹಾಂಗ ನಮಗ” ಎಂದು ಧಾರವಾಡದ ತಾಯಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಾರೆ.

ಮುಂದಿನ ನುಡಿಯಲ್ಲಿ ಪುಟ್ಟ ಬಾಲಕನೊಬ್ಬ ಸರೀಕರೊಡನೆ ಜಗಳಾಡಿ ಬಂದು, ತನ್ನ ತಾಯಿಯಿಂದ ಸಮಾಧಾನ ಪಡೆಯುತ್ತಿರುವ ಕಲ್ಪನೆ ವ್ಯಕ್ತವಾಗಿದೆ:

ಜಗದ ಕೂಡ ಬಂದೆವು ಜಗಳಾಡಿ

ಕೊಟ್ಟಿರಿ ನಿಮ್ಮ ತೊಡಿ

ಅಲ್ಲಿ ನಿದ್ದಿ ಮಾಡಿ—ಎದ್ದೆವೀಗ

ಯಾವುದೋ ಹೊಸಾ ನಸುಕಿನ್ಯಾಗs |

ಧಾರವಾಡ ಬೇಂದ್ರೆಯವರ ಕಾವ್ಯಕ್ಷೇತ್ರ. “ ಗೆಳೆಯರ ಗುಂಪು ” ಕಟ್ಟಿಕೊಂಡು ಬೇಂದ್ರೆ ನಲಿದಾಡಿದ್ದು ಇಲ್ಲಿಯೆ. ಧಾರವಾಡದ ವಾತಾವರಣ, ಸಾಹಿತ್ಯಕೃಷಿಯ ಮೊದಲ ದಿನಗಳ ಸಂಭ್ರಮ, ಇಲ್ಲಿಯ ನಲ್ಮೆಯ ಗೆಳೆಯರ ಒಡನಾಟಗಳು ಬೇಂದ್ರೆಯವರಿಗೆ ಧಾರವಾಡದ ತಾಯಿಯ ಲಾಲನೆಯಂತೆ ಭಾಸವಾಗುತ್ತದೆ. ಗೆಳೆಯರ ಜೊತೆಗಿನ ಮನಸ್ತಾಪ, ‘ಗುಂಪಿ’ನ ವಿಘಟನೆ ಅವರಿಗೆ ಹುಡುಗರ ಜಗಳಾಟದಂತೆ ಭಾಸವಾಗುತ್ತದೆ.

ಈ ಎಲ್ಲ ಆಟ, ಹುಡುಗಾಟ, ಜಗಳಾಟಗಳನ್ನು ಆಡಿ ಬಂದ ಮಗುವನ್ನು ತಾಯಿ ತನ್ನ ತೊಡೆಯ ಮೇಲೆ ಮಲಗಿಸಿಕೊಂಡು ಲಾಲಿಸುವಂತೆ, ಧಾರವಾಡದ ತಾಯಿ ಇವರನ್ನು ರಂಬಿಸಿದ್ದಾಳೆ. ಇವೆಲ್ಲ ಈಗ ಬೇಂದ್ರೆಯವರಿಗೆ ಕನಸಿನಂತೆ ಭಾಸವಾಗುತ್ತಿವೆ. ಆದರೆ, ಈಗ ನಿದ್ದೆಯನ್ನು ಬಿಟ್ಟು ಏಳುವದು ಅನಿವಾರ್ಯ. ಯಾವುದೋ ಹೊಸ ನಸುಕು ಮೂಡಿದೆ. ಬದುಕಿನ ಸತ್ಯ ಕಾಡಿದೆ. ಹೊಸ ದಿನದಲ್ಲಿ ಏನು ಕಾದಿದೆಯೋ ತಿಳಿಯದು. ಈ ನಸುಕು ಎಂತಹದೊ ಎನ್ನುವ ದುಗುಡ ಬೇಂದ್ರೆಯವರಿಗೆ !

ಧಾರವಾಡದ ತಾಯಿ ಬೇಂದ್ರೆಯವರಿಗೆ ಹಡೆದ ತಾಯಿಯಷ್ಟೇ ಪೋಷಣೆಯನ್ನು ನೀಡಿದವಳು. ಅದಕ್ಕಂತೆಯೇ ಮುಂದಿನ ನುಡಿಯಲ್ಲಿ ಬೇಂದ್ರೆಯವರು ಆಕೆಗೆ

“ನೀವು ತಾಯಿತನ ನಡೆಸಿದರಿ ,ಹಾಲು ಕುಡಿಸಿದಿರಿ ” ಎಂದು ಗೌರವ ಸೂಚಿಸುತ್ತಾರೆ. “ ಮತ್ತೆ ಮತ್ತೆ ಎತ್ತಿಕೊಂಡು ಆಡಿಸಿದಿರಿ ” ಎಂದು ಆತ್ಮೀಯವಾಗಿ ನೆನಸಿಕೊಳ್ಳುತ್ತಾರೆ.

“ನೀವು-ತಾಯಿತನ ನಡಿಸಿದರಿ

ಹಾಲ ಕುಡಿಸಿದರಿ

ಮರಳು ಆಡಿಸಿದರಿ ಕನಸಿನ್ಯಾಗ

ಬೆಳಗು—ಆತು ಭಾಳ ಬ್ಯಾಗ “

ಆದರೆ ಇದೆಲ್ಲ ಮೂರು ಗಳಿಗೆಯ ಕನಸಿನ ಆಟ. ಕನಸು ಕರಗಿತು ; ಬಹಳ ಬೇಗನೆ ಬೆಳಗು ಆಗಿ ಹೋಯಿತು. ಪ್ರಖರ ವಾಸ್ತವತೆಗೆ ಬೇಂದ್ರೆಯವರು ಕಣ್ಣು ಬಿಡಲೇ ಬೇಕಾದ ಸಂದರ್ಭ ಬಂದಿದೆ.

ಇಲ್ಲಿಯವರೆಗೆ ಆಕಾಶದಲ್ಲಿ ಮಿಣಕುತ್ತಿರುವ ಚಿಕ್ಕಿಗಳು , ಈ ಹುಡುಗನನ್ನು ಮಾಯಾಲೋಕಕ್ಕೆ ಕರೆದೊಯ್ದ ಚಿಕ್ಕಿಗಳು (ಬೇಂದ್ರೆಯವರ ಕಲ್ಪನಾಸ್ರೋತಗಳು), ಇವನ ಸಂಗಾತಿಗಳೇ ಆಗಿದ್ದ ಈ ಚಿಕ್ಕಿಗಳು ಈಗ ಕಣ್ಣು ಮುಚ್ಚಿಕೊಳ್ಳುತ್ತಿವೆ. ಬೆಳಗಾಯಿತಲ್ಲ ಎನ್ನುವ ಅನಿವಾರ್ಯತೆಯಿಂದ ಹಕ್ಕಿಗಳು ಚಿವಗುಟ್ಟುತ್ತ ಏಳುತ್ತಿವೆ.

“ ಕಣ್ಣು ಮುಚ್ಚಿಕೊಳ್ಳತಾವ ಚಿಕ್ಕಿ

ಚಿವುಗುಡತಾವ ಹಕ್ಕಿ

ಕತ್ತಲಿ ತಲಿಕುಕ್ಕಿ—ಬಾನಮ್ಯಾಗ

ಬೆಳಕು—ಹಾರ್ಯಾವ ಮೂಡಲದಾಗ. ”

ಮೂಡಲದಲ್ಲಿ ಮೂಡಿದ ಬಾನು ಕತ್ತಲೆಯ ತಲೆಯನ್ನು ಕುಕ್ಕಿ ಮೂಡುತ್ತಿದೆ. ಈ ಬೆಳಕು ಕಣ್ಣು ಕುಕ್ಕುವ ಬೆಳಕು, ದುಗುಡದ ಬೆಳಕು, ನೆಮ್ಮದಿಯ ಬೆಳಕಲ್ಲ.

“ನಿಮ್ಮ ಸೆರಗ ಮರೀ ಮಾಡಿದಿರಿ

ಲಾಲಿ ಹಾಡಿದಿರಿ

ಆಟ ಆಡಿದಿರಿ—ಏನೋ ಹಾಂಗs

ಮರೆತೆವು—ಕಳೆದ ಜನ್ಮಧಾಂಗ ”

ಇಂತಹ ಪ್ರಖರ ಬೆಳಕು ಮೂಡಿದಾಗಲೆಲ್ಲ, ದುಗುಡು, ದುಮ್ಮಾನಗಳು ಮುತ್ತಿದಾಗಲೆಲ್ಲ, ಧಾರವಾಡದ ತಾಯಿ ಬೇಂದ್ರೆಯವರಿಗೆ ತನ್ನ ಸೆರಗನ್ನು ಹೊಚ್ಚಿ ಮರೆ ಮಾಡಿದ್ದಾಳೆ ; ತನ್ನ ಕಂದನಿಗೆ ಬಿಸಿಲು ತಗಲದಂತೆ ಕಾಳಜಿ ಮಾಡಿದ್ದಾಳೆ. ಬೆಳಕನ್ನು ಮರೆಸಲು, ಇರುಳಿನ ಭ್ರಮೆಯನ್ನು ಹುಟ್ಟಿಸಲು ಲಾಲಿ ಹಾಡಿದ್ದಾಳೆ ; ತನ್ನ ಈ ಕೂಸನ್ನು ಬಗೆಬಗೆಯಾಗಿ ಆಡಿಸಿದ್ದಾಳೆ.

ಇದೆಲ್ಲ ಈಗ ಕಳೆದ ಜನ್ಮದಲ್ಲಿ ನಡೆದು ಹೋದ ಘಟನೆಗಳೇನೋ ಎಂದು ಭಾಸವಾಗುತ್ತಿದೆ. ಆ ಬದುಕು ಈಗ ವಿಸ್ಮರಣೆಯಾಗುತ್ತಿದೆ. ಆದರೆ, ಆ ಬದುಕಿನಲ್ಲಿ ತನ್ನ ತಾಯಿ ತನ್ನನ್ನು ಜಪ್ಪಿಸಿಕೊಂಡು ಹೋದದ್ದನ್ನು ಮರೆಯಲಾದೀತೆ? ಹೆಜ್ಜೆ ಹೆಜ್ಜೆಗೆ ಅವಳು ಕೊಟ್ಟ ಆಸರೆಯನ್ನು ಮರೆಯಲಾದೀತೆ? ಬೇಂದ್ರೆಯವರು ಜೋಲಿ ತಪ್ಪಿದಾಗ ಧಾರವಾಡದ ತಾಯಿ ಇವರಿಗೆ ಕೈಕೋಲು ಆಗಿ, ಇವರ ಸಮತೋಲನವನ್ನು ಕಾಯ್ದಿದ್ದನ್ನು ಮರೆಯಲಾದೀತೆ?

ಜೋಲಿ—ಹೋದಾಗ ಆದಿರಿ ಕೋಲು

ಹಿಡಿದಿರಿ ನಮ್ಮ ತೋಲು

ಏನು ನಿಮ್ಮ ಮೋಲು—ಲೋಕದಾಗ ?

ನಾವು - ಮರತೇವದನ ಹ್ಯಾಂಗ ?

ತನ್ನನ್ನು ಈ ಪರಿ ಸಂಬಾಳಿಸಿದ ತಾಯಿ ಈ ಲೋಕದಲ್ಲಿಯೇ ಅಮೂಲ್ಯಳು ಎಂದು ಬೇಂದ್ರೆ ಭಾವಿಸುತ್ತಾರೆ. ಅಂತಹ ತಾಯಿಯನ್ನು ಮರೆಯಲಾದೀತೆ?

ಹೆಣ್ಣು ಏನೆಲ್ಲ ರೂಪದಲ್ಲಿ ಗಂಡಿಗೆ ಸುಖ, ಸಖ್ಯ, ಸಮಾಧಾನ ನೀಡಬಲ್ಲಳೋ ಅದೆಲ್ಲವನ್ನು ಬೇಂದ್ರೆಯವರು ಧಾರವಾಡದಿಂದ ಪಡೆದಿದ್ದಾರೆ:

“ಅಕ್ಕ—ತಂಗಿ—ಮಗಳು –ಹಡೆದ ತಾಯಿ….

ಕನ್ನಿ—ಗೆಳತಿ—ಮಡದಿ—ದಾಯಿ—ಸಾಕುದಾಯಿ…

ಜೋಡೆ—ಸೂಳೆ ಮತ್ತೆ ಮಾಯಿ—ವಿಧೀಮಾಯಿ…”

ಈ ನುಡಿಯ ಮೊದಲ ಸಾಲಿನಲ್ಲಿ ಬರುವ ಹೆಣ್ಣುರೂಪಗಳು ರಕ್ತಸಂಬಂಧದ ರೂಪಗಳು.

ಅಕ್ಕ, ತಂಗಿ, ಮಗಳು, ಹಡೆದ ತಾಯಿ ಇವರೆಲ್ಲ ರಕ್ತಸಂಬಂಧದಿಂದ ಅತಿ ಹತ್ತಿರವಾದವರು.

ಎರಡನೆಯ ಸಾಲಿನಲ್ಲಿ ಬರುವ ‘ಕನ್ನಿ’ ಅಂದರೆ ಕನ್ಯೆ ಅರ್ಥಾತ್ ಕಾಮವಾಸನೆ ಇಲ್ಲದ ಎಳೆಯ ವಯಸ್ಸಿನ ಗೆಳತಿ. ಆನಂತರ ಬರುವವಳು ಗೆಳತಿ , ಇವಳು ಕನ್ಯೆಗಿಂತ ದೊಡ್ಡವಳು; ಚೆಲ್ಲಾಟವಾಡುವ ವಯಸ್ಸಿನವಳಿರಬಹುದು; ಬಹುಶಃ ಪ್ರಬುದ್ಧಳೂ ಇರಬಹುದು. ಇವಳ ಸ್ನೇಹದಲ್ಲಿ ಕಾಮವಾಸನೆಯು ಪ್ರಾರಂಭವಾಗುತ್ತಿರಬಹುದು.

ಬಳಿಕ ಬರುವವಳು ಮಡದಿ ;ಇವಳಂತೂ ಧರ್ಮ, ಅರ್ಥ ಹಾಗೂ ಕಾಮವೆನ್ನುವ ಮೂರು ಪುರುಷಾರ್ಥಗಳಲ್ಲಿ ಅಧಿಕಾರಯುತ ಜೊತೆಗಾತಿ.

ಈ ಸಂಬಂಧಕ್ಕಿಂತ ಕೊಂಚ ಕಡಿಮೆಯಾದ ಸಂಬಂಧ ಅಂದರೆ ದಾಯಿಯದು ; ಇವರು ಹಣಕ್ಕಾಗಿ ಶುಶ್ರೂಷೆ ಮಾಡುತ್ತಿರುವ ದಾಯಿ ಹಾಗು ಸಾಕುದಾಯಿಯರು .

ಸಂಬಂಧದ ಇನ್ನೂ ಕೆಳಗಿನ ಸ್ತರಗಳಿಗೆ ಹೋಗುತ್ತ ಬೇಂದ್ರೆ ಧಾರವಾಡವನ್ನು ಜೋಡೆ ಎಂದೂ ಕರೆಯುತ್ತಾರೆ. ಜೋಡೆ ಎಂದರೆ ದುಡ್ಡಿಗಾಗಿ ನಿಮಗೆ ಜೋಡಾದವಳು, ದೈಹಿಕ ಸೇವೆ ನೀಡುವವಳು , mistress ! ಇಷ್ಟಕ್ಕೇ ಬೇಂದ್ರೆ ನಿಲ್ಲುವದಿಲ್ಲ. ಕೊನೆಯದಾಗಿ ಸೂಳೆಯೂ ಸಹ ಇಲ್ಲಿ ಬರುತ್ತಾಳೆ.

ಆದರೆ, ಈ ನುಡಿಯ ಕೊನೆಯ ಸಾಲಿನ ಕೊನೆಯ ಭಾಗದಲ್ಲಿ ಚಿತ್ರ ಹಠಾತ್ ಬದಲಾಗುತ್ತದೆ. ಇಷ್ಟೆಲ್ಲ ರೂಪಗಳಿಂದ ಬೇಂದ್ರೆಯವರನ್ನು ರಮಿಸಿದ ಧಾರವಾಡವು ದೈವೀಕವೂ ಹೌದು .

ಇವರ ಮೇಲೆ ಮೋಡಿ ಮಾಡುತ್ತಿರುವ, ಇವರಿಗೆ ಇಂದ್ರಜಾಲ ತೋರಿಸುತ್ತಿರುವ ಮಾಯಕಾತಿ ಅವಳು. ಅಷ್ಟೇ ಅಲ್ಲ, ಇವರ ಹಣೆಬರಹವನ್ನು ಬರೆಯುತ್ತಿರುವ ವಿಧಿಮಾಯಿಯೇ ಅವಳು !

ಧಾರವಾಡವು ಬೇಂದ್ರೆಯವರ ಮನೋರಂಗದಲ್ಲಿ ಇಷ್ಟೆಲ್ಲ ರೂಪಗಳನ್ನು ತಾಳಲು ಕಾರಣವೇನಿರಬಹುದು?

ಬೇಂದ್ರೆ ಸಾಹಿತ್ಯರಂಗದಲ್ಲಿ ಇನ್ನೂ ಚಿಕ್ಕವರಿದ್ದಾಗ ಇವರಿಗಿಂತ ಹಿರಿಯರಾದ ಸಾಹಿತಿಗಳು (ಉದಾಹರಣೆಗೆ ಆಲೂರು ವೆಂಕಟರಾಯರು) ಇವರ ಬೆನ್ನು ಚಪ್ಪರಿಸಿ, ಅಕ್ಕನಂತಹ ಅಕ್ಕರತೆಯನ್ನು ತೋರಿಸಿದ್ದಾರೆ. ಇವರಿಗಿಂತ ಚಿಕ್ಕ ಗೆಳೆಯರಾದ ವಿನಾಯಕ, ರಸಿಕ ರಂಗ ಇವರೆಲ್ಲ ಬೇಂದ್ರೆಯವರಿಂದ ಮಾರ್ಗದರ್ಶನ ಬಯಸುವ ತಂಗಿಯರು. ಇವರಿಗಿಂತ ಕಿರಿಯರು, ಇವರಿಂದ ಸ್ಫೂರ್ತಿ ಪಡೆದವರು, ಇವರ ಮಾರ್ಗದರ್ಶನ ಪಡೆದವರು, ಇವರ ಮಗಳ ಸಮಾನರು. ಇವರೆಲ್ಲರಿಗೂ ಆಶ್ರಯ ಕೊಟ್ಟವಳು ಧಾರವಾಡದ ತಾಯಿ.

ಬೇಂದ್ರೆಯವರು ತಮ್ಮ ಸಾಹಿತ್ಯರಚನೆಯನ್ನು ಪ್ರಾರಂಭಿಸಿದ ಕಾಲದಲ್ಲಿ ಇವರ ಹೆಸರು ಕನ್ನಡ ನಾಡಿನಲ್ಲಿ ಸಾವಕಾಶವಾಗಿ ಹರಡಹತ್ತಿತು. ಈ ಪ್ರಸಿದ್ಧಿಯನ್ನು ವಿಮಲ ಕೀರ್ತಿ ಎನ್ನಬಹುದು. ಇದನ್ನು ಯಾವುದೇ ಕಾಮನೆಯಿಲ್ಲದ ಕನ್ಯೆಯ ಸ್ನೇಹಕ್ಕೆ ಹೋಲಿಸಬಹುದು. ಆಬಳಿಕ ಗಳಿಸುವ ಕೀರ್ತಿಯಲ್ಲಿ ಕಾಮನೆಯ ಛಾಯೆ ಇರುವದರಿಂದ ಅವಳು ಗೆಳತಿ. ಬಳಿಕ ದೊರೆತ ಪ್ರಸಿದ್ಧಿಯು rightful ; ಆದುದರಿಂದ ಅದು ಮಡದಿಯಂತೆ. ತನ್ನಂತರದ ಪ್ರಸಿದ್ಧಿಯು ಕವಿಯನ್ನು ಪೋಷಿಸುತ್ತದೆ. ಅಂತೆಲೇ ಅದು ದಾಯಿ, ಸಾಕುದಾಯಿ. ಕೀರ್ತಿಕಾಮನೆ ಪ್ರಬಲವಾದಾಗ ಅದು mistress ಇದ್ದ ಹಾಗೆ. ಕೊನೆಕೊನೆಗೆ ಅದು ಬೀದಿಸೂಳೆಯ ಮಟ್ಟಕ್ಕೂ ಇಳಿಯಬಹುದು.

ಬೇಂದ್ರೆ ಇವೆಲ್ಲಾ ಅವಸ್ಥೆಗಳಲ್ಲಿ ಹಾಯ್ದು ಹೋಗಿದ್ದಾರೆ. ಧಾರವಾಡದ ತಾಯಿ ಇವರ ಅವಸ್ಥೆಗಳನ್ನು ನೋಡಿ ನಕ್ಕಿದ್ದಾಳೆ ,--ಕೆಲವೊಮ್ಮೆ ಪ್ರೀತಿಯಿಂದ ಹಾಗು ಕೆಲವೊಮ್ಮೆ ಕರುಣೆಯಿಂದ. ಈ ಎಲ್ಲ ಅವಸ್ಥೆಗಳು ಈ ವಿಧಿಮಾಯೆಯೇ ತೊಡಿಸಿದ ವೇಷಗಳಲ್ಲವೆ?

ಇಷ್ಟೆಲ್ಲ ವೇಷ ಧರಿಸಿ, ಇಷ್ಟೆಲ್ಲ ಸೋಗು ಹಾಕಿ, ಸೋಗು ಬಿಡಿಸಿ, ಈ ಧಾರವಾಡದ ಮಾಯಿ ಸಾಧಿಸಿದ್ದೇನು ?

“ನೂರಾರು ವೇಷ ಕಳಿಸಿದಿರಿ

ಮಡ್ಡ ಇಳಿಸಿದಿರಿ

ಮಾನ ಬೆಳಿಸಿದಿರಿ ”

ಧಾರವಾಡವೆಂಬ ಈ ಮಾಯಕಾತಿ ಬೇಂದ್ರೆಯವರಿಗೆ ನೂರಾರು ವೇಷ ತೊಡಿಸಿದಳು, ಕಳಿಚಿಸಿದಳು.

ಗೆಳೆಯನಾಗಿ, ಕವಿಯಾಗಿ, ಗಂಡನಾಗಿ, ತಂದೆಯಾಗಿ ಬೇಂದ್ರೆ ಕುಣಿದರು, ಕನಲಿದರು, ಬೆಂದರು !

ಬೆಂದು ಬೇಂದ್ರೆ ಆದರು.

ಈ ಪ್ರಕ್ರಿಯೆಯಲ್ಲಿ ಅವರ ತಲೆಯಲ್ಲಿದ್ದ ಮಡ್ಡು ಇಳಿಯಿತು. ಮಡ್ಡು ಅಂದರೆ ಬುದ್ಧಿಗೇಡಿತನ. ಯಾರಿಗೇ ಆದರೂ ಇರುವ ಬುದ್ಧಿಗೇಡಿತನವೆಂದರೆ ‘ಅಹಂ ಕರ್ತಾ’ ಎನ್ನುವ ಅಹಂಕಾರ. ಆ ಅಹಂಭಾವ ಕಳೆದ ಬಳಿಕ ಮಾನ ಬೆಳೆಯುತ್ತದೆ. ಮಾನ ಅಂದರೆ ಅಳತೆ, ನಿಜವಾದ ಯೋಗ್ಯತೆ.

(ತಾನು ನವಕೋಟಿ ನಾರಾಯಣನೆನ್ನುವ ಮಡ್ಡು ಪುರಂದರದಾಸರಿಗಿತ್ತು ; ಶೂರ ನಾಯಕ ಎನ್ನುವ ಮಡ್ಡು ಕನಕದಾಸರಿಗೆ ಇತ್ತು. ಹರಿಯ ಕರುಣೆಯಿಂದ ಈ ಮಡ್ಡು ಇಳಿದ ಬಳಿಕ ಇವರ ‘ಮಾನ’ ಬೆಳೆಯಿತು.)

ಮನುಷ್ಯನ ಮಡ್ಡು ಇಳಿಸುವದೇ, ದೈವವು ಅವನ ಮೇಲೆ ತೋರಬಹುದಾದ ಕರುಣೆ. ಆ ಕರುಣೆಯ ಭರವಸೆಯಿಂದಲೇ ಬೇಂದ್ರೆಯವರು ತಮ್ಮ ದೈವವಾದ ಧಾರವಾಡದ ಆಶ್ರಯ ಪಡೆದವರು.

ಅದಕ್ಕೇ ಬೇಂದ್ರೆ ಹೇಳುತ್ತಾರೆ:

“ಯಾಕೋ ಕರುಣ ಬಂತು ತಮಗs

ನಾವು—ಶರಣ ಬರಲಿಲ್ಲ ಸುಮಗs.”

ಆದರೆ ಈ ಸಂಬಂಧಕ್ಕೆ ಈಗ ಕೊನೆ ಬರುತ್ತಿದೆ.

ಬೇಂದ್ರೆ ಧಾರವಾಡ ತಾಯಿಗೆ ವಿದಾಯ ಹೇಳುತ್ತಿದ್ದಾರೆ.

“ನಾವು ಬರತೇವಿನ್ನ ನೆನಪಿರಲಿ ತಾಯಿ

ನಂ ನಮಸ್ಕಾರ ನಿಮಗ.”

………………………………………………………….

ಎರಡನೆಯ ಭಾಗದಲ್ಲಿ ಬೇಂದ್ರೆ ತಮ್ಮ ಈ ಪರಿಸ್ಥಿತಿಗೆ resigned ಆಗಿದ್ದಾರೆ. ಆದುದರಿಂದಲೇ, ತಾವು ಎಲ್ಲಿಯೇ ಹೋದರೂ ಸಹ ಧಾರವಾಡದ ತಾಯಿಯ ಕೃಪೆ ತಮ್ಮ ಮೇಲಿರಲಿ ಎಂದು ಪ್ರಾರ್ಥಿಸುತ್ತಾರೆ.

“ಎಲ್ಲಿ ಹೋದಲ್ಲಿರಲಿ ನಮ್ಮ ಹತ್ರ

ನಿಮ್ಮ ಕೃಪಾ ಛತ್ರ

ಕಾರ್ಯ ಸುಸೂತ್ರ—ನಡೀತಿರಲಿ

ನಿಮ್ಮ—ಹೆಜ್ಜೆ ಜೋಡಿಗಿರಲಿ ”

ತಾಯಿಯ ಕೃಪೆ ತಮ್ಮ ಮೇಲಿದ್ದರೆ, ತಮ್ಮ ಎಲ್ಲ ಕಾರ್ಯಗಳೂ ಸುಸೂತ್ರವಾಗಿ ಸಾಗುತ್ತವೆ ಎನ್ನುವ ನಂಬಿಕೆ ಬೇಂದ್ರೆಯವರದು. ತಾಯಿಯ ಕಾಣದ ಹೆಜ್ಜೆ ತಮ್ಮ ಜೊತೆಗಿರಲಿ ಎಂದು ಅವರು ತಾಯಿಯನ್ನು ಬೇಡಿಕೊಳ್ಳುತ್ತಾರೆ.

ಕನಸುಗಳಿಂದ ತುಂಬಿದ ರಾತ್ರಿಯನ್ನು ತಾಯ ಮಡಿಲಿನಲ್ಲಿ ಕಳೆದ ಬೇಂದ್ರೆಯವರು, ಹಗಲನ್ನು ಬರಮಾಡಿಕೊಳ್ಳಲು ಅಂದರೆ ಕಟು ವಾಸ್ತವತೆಯನ್ನು ಎದುರಿಸಲು ಮಾನಸಿಕವಾಗಿ ಈಗ ಸಿದ್ಧರಾಗಿದ್ದಾರೆ. ಇದೆಲ್ಲ ಭಗವದಿಚ್ಛೆಯೆಂದು ಅವರಿಗೆ ಅರಿವಾಗಿದೆ. ಆದುದರಿಂದ ಭಗವಂತ ಏನು ಜಾತ್ರೆ ನಡೆಯಿಸುತ್ತಾನೊ ನಡೆಯಿಸಲಿ , ಈ ಹಗಲಿನಲ್ಲಿ ಏನೆಲ್ಲ ಧುಮಡಿ ನಡೆಯಲಿದೆಯೊ ನಡೆಯಲಿ, ಆದರೆ ತಾಯ ಮಡಿಲಿನಲ್ಲಿ ನೆಮ್ಮದಿಯ ನಿದ್ರೆಗಾದರೂ ಅವಕಾಶವಿರಲಿ, ತಮ್ಮ ಕನಸುಗಾರಿಕೆಗೆ ಕೊನೆ ಬರದಿರಲಿ ಎಂದು ಅವರು ಹಂಬಲಿಸುತ್ತಾರೆ:

“ಹಗಲಾಗಲಿ ಧುರಂಧುರಿ ಜಾತ್ರಿ

ನಿದ್ದಿಗಿರಲಿ ರಾತ್ರಿ

ಜೀವಕ್ಕs ಖಾತ್ರಿ—ನಿಮ್ಮದಿರಲಿ

ಜನ್ಮ ಮರಣ, ಏನs ಬರಲಿ ”

ಈ ಬದುಕಿನಲ್ಲಿ ತಮ್ಮ ಸ್ಥಿತಿ ಏನೇ ಆಗಲಿ, ಮರಣವೇ ಬರಲಿ, ಹೊಸ ಜನ್ಮವೇ ಬರಲಿ, ಆದರೆ ಧಾರವಾಡದ ತಾಯಿಯ ಪ್ರೀತಿ ಮಾತ್ರ ತಮ್ಮ ಕೈಬಿಡದಿರಲಿ ಎಂದು ಬೇಂದ್ರೆ ಹಾರೈಸುತ್ತಾರೆ. ಯಾಕೆಂದರೆ, ತಮ್ಮದೇನಿದ್ದರೂ ಅದು ಈ ತಾಯಿಯ ಕೃಪೆ.

“ಮಾಡೀತೇನು ಮಣ್ಣಿನs ಗೊಂಬಿ ?

ನಿಮ್ಮ ಹೆಸರ ನಂಬಿ

ಹೊತ್ತುಕೊಂಡು ಕಂಬಿ—ಕುಣಿಯುತಿರಲಿ

ಸ್ವರ್ಗ—ನರಕ ಯಾವುದೂ ಇರಲಿ ? ”

ಬೇಂದ್ರೆ ತಮ್ಮನ್ನು ಯಾವಾಗಲೂ ಮಣ್ಣಿನ ಗೊಂಬೆ ಎಂದೇ ಭಾವಿಸುತ್ತಾರೆ. ತಮ್ಮಲ್ಲಿರುವ ಮಾತೃಚೈತನ್ಯವೇ ತಮ್ಮನ್ನು ಆಡಿಸುತ್ತಿರುವದು ಎಂದು ಅವರ ನಂಬಿಕೆ.

ಭಕ್ತರು ದೇವರ ಧ್ವಜವನ್ನು ಹೊತ್ತುಕೊಂಡು, ದೈವದ ಹೆಸರು ಹೇಳುತ್ತ ಕುಣಿಯುವ ಹಾಗೇ, ತಾವೂ ಸಹ ಧಾರವಾಡದ ತಾಯಿಯ ಹೆಸರು ಹೇಳುತ್ತ, ಅವಳ ಕಂಬಿಯನ್ನು (=ಧ್ವಜವನ್ನು) ಎತ್ತಿಕೊಂಡು ಕುಣಿಯುವೆ ; ಅವಳು ಬೇಕಾದರೆ ಸ್ವರ್ಗವನ್ನೇ ದಯಪಾಲಿಸಲಿ ಅಥವಾ ನರಕವನ್ನೇ ಪ್ರಸಾದಿಸಲಿ ಎನ್ನುವದು ಅವರ ಶ್ರದ್ಧೆ.

ಬೇಂದ್ರೆಯವರಿಗೆ ತಮ್ಮ ವನವಾಸದ ರಹಸ್ಯ ಈಗ ಅರಿವಾಗುತ್ತಿದೆ. ವನವಾಸದಲ್ಲಿ ಮನುಷ್ಯನು ತಪಿಸಿ, ಬೆಂದು ದೇವರನ್ನು ಅರಿತುಕೊಳ್ಳಲಿ ಎನ್ನುವದೇ ಈ ಎಲ್ಲ ಸಂಕಟದ ಹಿಂದಿನ ದೈವೇಚ್ಛೆ. ಆ ಕಾರಣಕ್ಕಾಗಿಯೇ ಬೇಂದ್ರೆಯವರಿಗೆ ಈ ವನವಾಸ,ಈ ತಪಸ್ಸು ವಿಧಿಲಿಖಿತವಾಗಿದೆ ಎನ್ನುವ ಅರಿವಾಗಿದೆ.

ತಾವು ಮೂರೂ ಹೊತ್ತು ಈ ಮಾಯಿಯ ಧ್ಯಾನದಲ್ಲಿಯೇ ಇರುವೆ; ಆ ಧ್ಯಾನವು ತಮಗೆ ಜ್ಞಾನವನ್ನು ಪ್ರಸಾದಿಸುವದು, ಅಜ್ಞಾನವನ್ನು ಸುಡುವದು ಎನ್ನುವದು ಅವರ ನಂಬಿಕೆ. ಬೇಂದ್ರೆಯವರಿಗೆ ಜ್ಞಾನದ ಸಿದ್ಧಿ ಎಂದರೆ ದೈವೀ ಪ್ರೇಮವನ್ನು ಪಡೆಯುವದು ಮಾತ್ರ. ಆ ದೈವೀ ಪ್ರೇಮದ ಕೃಷ್ಣನ ಕೊಳಲು ತಮಗೆ ಕೇಳಿಸುತ್ತಿರಲಿ ಎಂದು ಅವರು ಬೇಡಿಕೊಳ್ಳುತ್ತಾರೆ.

ಮೂರು ಹೊತ್ತಿನ್ಯಾಗ ನಿಮ್ಮ ಧ್ಯಾನ

ಹೊತ್ತುತಿರಲಿ ಗ್ಯಾನ

ಸುಡಲಿ ಅಜ್ಞಾನ-ಪ್ರೇಮ ಮುರಲಿ

ಕಿವಿಗೆ ಅದೇ ಕೇಳಸತಿರಲಿ.

ನಿಮ್ಮ ಚಂದ್ರ ಜ್ಯೋತಿಯಾ ಬೆಳಕು

ಅದs ನಮಗ ಬೇಕು

ಸುಡೋ ಸೂರ್ಯ ಸಾಕು—ಯಾಕ ತರಲಿ ?

ಹೊತ್ತಾರ ಯಾರು ಒಣಾ ಹರಲಿ !

ತಮಗೆ ಕಟು ವಾಸ್ತವತೆಯ ಜ್ಞಾನ ಬೇಕಾಗಿಲ್ಲ, ಸುಡುವ ಸೂರ್ಯ ಬೇಕಾಗಿಲ್ಲ, ಚಂದ್ರನ ಬೆಳದಿಂಗಳಿನಂತಹ ತಾಯ ಮಮತೆ ಬೇಕು. ತನಗೆ ಗೊತ್ತಿರುವದೇ ಜ್ಞಾನವೆನ್ನುವ ಜಗಳಾಟಕ್ಕೆ ಕಾರಣವಾಗುವ ಜ್ಞಾನ ಯಾರಿಗೆ ಬೇಕು-- ಎನ್ನುವದು ಅವರ ನಿಲುವು.

ಕತ್ತಲೆಯ ಶಕ್ತಿ ಕಡಿಮೆಯೇ? (ಕತ್ತಲೆ ಅಂದರೆ ಜೀವಕ್ಕಿರುವ ಅಜ್ಞಾನ, ಮಾಯೆ.) ಕತ್ತಲೆಯ ಮಾಯಾಜಾಲದಲ್ಲಿಯೇ ಕಲ್ಪನೆಯ ಬಣ್ಣಗಳೆಲ್ಲ ಸಿಗುವವು. ಆ ಬಣ್ಣಗಳನ್ನೆಲ್ಲ ಹಾರಿಸಿ, ಮಕ್ಕಳಾಟ ತೋರಿಸಿದ್ದು ಧಾರವಾಡ ತಾಯಿಯ ಮಹಿಮೆ.(ಅಂತೆಯೇ, ಬೇಂದ್ರೆಯವರು ಧಾರವಾಡವನ್ನು ‘ಮಾಯಿ’, ‘ವಿಧೀಮಾಯಿ’ ಎಂದು ಕರೆಯುತ್ತಾರೆ.) ತನ್ನ ಮಗುವಿನ ಮೇಲಿನ ಅಪಾರ ಮಮತೆಯಿಂದಲೇ, ಧಾರವಾಡದ ತಾಯಿ ಅವರಿಗೆ ಈ ಎಲ್ಲ ಮಕ್ಕಳಾಟಗಳನ್ನು ತೋರಿಸಿದ್ದಾಳೆ. ತನ್ನ ಹೊಟ್ಟೆಯ ತುಣುಕು ಎನ್ನುವ ಮಮತೆಯಿಂದಲೇ ಧಾರವಾಡದ ತಾಯಿಯು ಬೇಂದ್ರೆಯವರಿಗೆ ಈ ಮಿಣುಕು ಬೆಳಕನ್ನು ತೋರಿಸಿದ್ದಾಳೆ. (ಪ್ರಖರ ಪ್ರಕಾಶವೆನ್ನುವ ಆತ್ಮಜ್ಞಾನವನ್ನಲ್ಲ.)

ಕತ್ತಲೀ ಕೆಚ್ಚ ಕೆದರೀ—ಕೆಚ್ಚಿ ಕೆದರಿ !

ಬಣ್ಣ ಬಣ್ಣ ಬಂತು ಚೆದರಿ—ಸುತ್ತ ಚೆದರಿ

ಮಕ್ಕಳಾಟ ತೋರಿಸಿದಿರಿ—ಹಾರಿಸಿದಿರಿ.

ನಿಮ್ಮ ಹೊಟ್ಟೀ ಕರುಳಿನಾ ತುಣುಕು

ಅಂತನs ಚುಣುಕು

ತೋರಿಸಿದಿರಿ ಮಿಣುಕು

ಮಿಣುಮಿಣುಕು ದೀಪದಾಗ

ಚಿಕ್ಕೀ ಮಳೀ ಸುರಿಸಿದ್ಹಾಂಗ |

ಕೊನೆಯ ಎರಡು ಸಾಲುಗಳಂತೂ ಅದ್ಭುತವಾಗಿವೆ. ಬೇಂದ್ರೆಯವರು ತನ್ನನ್ನು ಒಂದು ಮಿಣುಕು ದೀಪಕ್ಕೆ ಹೋಲಿಸಿಕೊಂಡು, ಧಾರವಾಡದ ತಾಯಿ ಈ ಮಿಣುಕು ದೀಪದಲ್ಲಿ ಆಕಾಶದಲ್ಲಿಯ ಚಿಕ್ಕಿಗಳ ಮಳೆಯನ್ನೇ ಸುರಿಸಿದ್ದಾಳೆ ಎಂದು ಹೇಳುತ್ತಾರೆ. ಹಾಗಾಗಿ ಈ ಮಿಣುಕು ದೀಪದಲ್ಲಿರುವ ಬೆಳಕು ಚಿಕ್ಕೆಗಳ ಬೆಳಕು, ಸಾಮಾನ್ಯ ಬೆಳಕಲ್ಲ. ಇದು ಬೇಂದ್ರೆಯವರ ತಪಸ್ಸಿನ ಸಿದ್ಧಿ.

ಧಾರವಾಡವನ್ನು ‘ಮಾಯಿ’ ಎಂದು ಕರೆಯುವಾಗ ಬೇಂದ್ರೆಯವರು ಮಾಯಕಾತಿ(=ಮಾಟಗಾತಿ) ಎನ್ನುವ ಅರ್ಥವನ್ನು ಬಳಸುವದಲ್ಲದೇ, ದೈವಮಾಯೆ, ವಿಧೀಮಾಯಿ (=ಜೀವಗಳಿಗೆ ಅಜ್ಞಾನದ ಮುಸುಕು ಹಾಕಿ ಆಟ ಆಡಿಸುವವಳು) ಎನ್ನುವ ಅರ್ಥದಲ್ಲಿಯೂ ಬಳಸುತ್ತಾರೆ. ಈ ದೈವಮಾಯೆ ಹೇಗೆ ತನ್ನನ್ನು ಕುಣಿಸಿತು, ನಲಿಸಿತು ಎನ್ನುವದನ್ನು ಬಣ್ಣಿಸುವ ಬೇಂದ್ರೆಯವರು, ಧಾರವಾಡವನ್ನು ಬಿಟ್ಟುಹೋಗುವ ಸಂದರ್ಭದಲ್ಲಿ, ಆತ್ಮಜ್ಞಾನದ ಒಂದು ಸೆಳಕನ್ನು ಕಾಣುತ್ತಾರೆ. ಆದರೆ ಆ ಬೆಳಕು ತನಗೆ ಬೇಡ, ತನಗೆ ಮಾಯೆ ಮಮತೆಯಿಂದ ತೋರಿಸುವ ಬಣ್ಣಗಳೇ ಇರಲಿ ಎಂದು ಹೇಳುತ್ತಾರೆ. ಲೋಕಚೇಷ್ಟೆಗೆ ಕಾರಣವಾದ ಆ ಮಾಯಾಶಕ್ತಿಯನ್ನು, ಆ ಜಗನ್ಮಾತೆಯನ್ನು, ಆ ಧಾರವಾಡದ ತಾಯಿಯನ್ನು ನಂಬಿ, ತಾನವಳ ಕೋಲನ್ನು(=ಧ್ವಜವನ್ನು) ಹೊತ್ತುಕೊಂಡು ಕುಣಿಯುವ ಆಳಾಗುತ್ತೇನೆ ಎಂದು ಬೇಂದ್ರೆ ತಮ್ಮ ಹಂಬಲವನ್ನು ವ್ಯಕ್ತ ಪಡಿಸುತ್ತಾರೆ.

ವೈಯಕ್ತಿಕ ಆಘಾತಗಳು ಬೇಂದ್ರೆಯವರನ್ನು ( ಅಥವಾ ಯಾವುದೇ ವ್ಯಕ್ತಿಯನ್ನು) ಆಧ್ಯಾತ್ಮದ ದಿಕ್ಕಿಗೆ ತಿರುಗಿಸುವ ಪರಿಯನ್ನು ಸಹ ಈ ಕವನದಲ್ಲಿ ನಾವು ಕಾಣಬಹುದು.

ಬೇಂದ್ರೆಯವರ ಕವನಗಳಲ್ಲಿ ಪ್ರಾಸಗಳು ಅರ್ಥದ ಆಳಾಗಿ ದುಡಿಯುವ ಉದಾಹರಣೆಯನ್ನು ಇಲ್ಲಿ ನೋಡಬಹುದು:

ಜೋಲಿ—ಹೋದಾಗ ಆದಿರಿ ಕೋಲು

ಹಿಡಿದಿರಿ ನಮ್ಮ ತೋಲು

ಏನು ನಿಮ್ಮ ಮೋಲು—ಲೋಕದಾಗ ?

ನಾವು --ಮರತೇವದನ ಹ್ಯಾಂಗ ?

“ತಮ್ಮ ಜೋಲಿ ಹೋದಾಗ, ತಾಯಿ ತನ್ನ ಕೈಯ ಕೋಲಾದಳು, ತನ್ನ ಸಮತೋಲನ ಕಾಯ್ದಳು ; ಅದು ಅವಳ ಘನತೆ.” ಈ ಅರ್ಥವನ್ನು ಹೇಳುವ ಸಾಲುಗಳು, ಅಲ್ಲಿಯ ಪದಗಳು ಎಷ್ಟು ಸರಳವಾಗಿ, ಲೀಲಾಜಾಲವಾಗಿ ಪ್ರಾಸಬದ್ಧವಾಗಿವೆ ಎನ್ನುವದನ್ನು ಗಮನಿಸಿದಾಗ ಸ್ವತಃ ಸರಸ್ವತಿಯೇ ಈ ಕವಿಯ ನಾಲಿಗೆಯ ಮೇಲಿದ್ದಾಳೊ ಎನ್ನುವ ಭಾಸವಾಗುವದು.

ಇದು ಧಾರವಾಡದ ತಾಯಿಯ ಕರುಣೆ ಎಂದು ಬೇಂದ್ರೆ ಹೇಳುತ್ತಾರೆ !

ಹೆಚ್ಚಿನ ಓದಿಗೆ :http://sallaap.blogspot.com/2008/08/blog-post_13.html

೨.ನನ್ನವಳು

ಬೇಂದ್ರೆಯವರು ರಚಿಸಿದ ಪ್ರೇಮ ಕವನಗಳಲ್ಲಿ ಅಥವಾ ದಾಂಪತ್ಯಕವನಗಳಲ್ಲಿ (--ಬೇಂದ್ರೆಯವರ ಎಲ್ಲ ಪ್ರೇಮಕವನಗಳು ದಾಂಪತ್ಯಕವನಗಳೇ ಆಗಿವೆ.--) ನನಗೆ ಅತಿ ಮೆಚ್ಚುಗೆಯಾದ ಕವನವೆಂದರೆ : “ನನ್ನವಳು ”.

ಬೇಂದ್ರೆಯವರ ಈ ಕವನದ ನಾಯಕಿ ನಿಸರ್ಗವೂ ಹೌದು, ಕವಿಯ ನಲ್ಲೆಯೂ ಹೌದು.

ಬೇಂದ್ರೆಯವರ ಈ ಕವನದಲ್ಲಿ ನಲ್ಲೆಯ ವರ್ಣನೆ ಹಾಗು ದಿನಮಾನದ ವರ್ಣನೆ ಒಂದರೊಳಗೊಂದು ಚಮತ್ಕಾರಪೂರ್ಣವಾಗಿ ಬೆಸೆದುಕೊಂಡಿವೆ.

ಕವನ ಹೀಗಿದೆ:

ನನ್ನವಳು

(ನಸುಕಿನ ಝುಳುಕು)

ತಂಬುಲದ ತುಟಿಯ ತೋರಿ

ಮಲ್ಲಿಗೆಯ ಮುಡಿದುಕೊಂಡು

ಮೆಲ್ಲಗಾಗಿ ಬರುವವಳ್ಯಾರs?

ಸಂಜಿ ಏನs?

ಮೇಲಸೆರಗು ಮೆಲ್ಲಗ ಸರಿಸಿ

ವಾರಿನೋಟ ಮೇಲಕ್ಕೆತ್ತಿ

ಮಳ್ಳಿಯಂತೆ ಮುರುಕುವಳ್ಯಾರs?

ಇರುಳು ಏನs?

ಅಲೆದುಗಿಲಿದು ಉಲಿದೂ ಉಲಿದೂ

ನೆಟ್ಟ ನೋಟಾ ಕೀಳಲಾರ್ದs

ತಣ್ಣಗಾಗಿ ನಿಂತವಳ್ಯಾರs?

ನಸುಕು ಏನs?

ಹೊತ್ತೊತ್ತಿಗೆ ಹೊಂದಿಕೆಯಾಗಿ

ಹಲವಾದಿ ಒಬ್ಬಾಕೆಯಾಗಿ

ಹೌದs ಚನ್ನಿ ಹೌದ ಚೆಲುವೀ

ನನ್ನವಳೇನs?

ಈ ಕವನದ ಮೊದಲನೆಯ ನುಡಿಯು ಪ್ರಾರಂಭವಾಗುವದು ಪ್ರೇಮಿಯು ಮಾಡುವ ನಲ್ಲೆಯ ವರ್ಣನೆಯಿಂದ :

ತಂಬುಲದ ತುಟಿಯ ತೋರಿ

ಮಲ್ಲಿಗೆಯ ಮುಡಿದುಕೊಂಡು

ಮೆಲ್ಲಗಾಗಿ ಬರುವವಳ್ಯಾರs?

ಸಂಜಿ ಏನs?

ಕವಿಯ ನಲ್ಲೆ ತಾಂಬೂಲ ಚರ್ವಣದಿಂದ ತುಟಿಗಳನ್ನು ಕೆಂಪಾಗಿಸಿಕೊಂಡು, ಮಲ್ಲಿಗೆ ಹೂವುಗಳನ್ನು ಮುಡಿದುಕೊಂಡು, ಮೆಲ್ಲಮೆಲ್ಲಗೆ ಆತನನ್ನು ಸಂಧಿಸಲು ಬರುತ್ತಿದ್ದಾಳೆ ಎನ್ನುವದು ಮೊದಲ ಮೂರು ಸಾಲುಗಳಲ್ಲಿ ತೋರುವ ಅಭಿಪ್ರಾಯ. ಆದರೆ, ಕೊನೆಯ ಸಾಲಿನಲ್ಲಿ ಬರುವ “ ಸಂಜಿ ಏನs? ” ಎನ್ನುವ ಪ್ರಶ್ನೆಯಿಂದಾಗಿ, ಈ ಕವನದ ನಾಯಕಿ ದಿನಮಾನದ ಸಂಧ್ಯಾಸಮಯವೆನ್ನುವ ಹೊಸ ಹೊಳಹು ವ್ಯಕ್ತವಾಗುತ್ತದೆ.

ತಾಂಬೂಲಚರ್ವಣದ ಕೆಂಪುವರ್ಣವು ಸಂಜೆಗೆಂಪಿನ ಬಣ್ಣ ; ಮಲ್ಲಿಗೆಯ ಹೂವುಗಳು ಒಂದೊಂದಾಗಿ ಕಾಣುತ್ತಿರುವ ತಾರೆಗಳು ; ಬೆಳಗು ಜಾರಿ ಕತ್ತಲೆ ಸಾವಕಾಶವಾಗಿ ಬರುತ್ತಿದೆ ಎನ್ನುವ ಹೊಸ ಅರ್ಥ ಮೂಡುತ್ತದೆ.

ಎರಡನೆಯ ನುಡಿಯನ್ನು ನೋಡಿರಿ:

ಮೇಲಸೆರಗು ಮೆಲ್ಲಗ ಸರಿಸಿ

ವಾರಿನೋಟ ಮೇಲಕ್ಕೆತ್ತಿ

ಮಳ್ಳಿಯಂತೆ ಮುರುಕುವಳ್ಯಾರs?

ಇರುಳು ಏನs?

ಎರಡನೆಯ ನುಡಿಯ ಮೊದಲ ಮೂರು ಸಾಲುಗಳೂ ಸಹ ನಲ್ಲೆಯ ವರ್ಣನೆಯಂತೆಯೇ ಭಾಸವಾಗುವವು.

ನಲ್ಲನನ್ನು ಸಂಧಿಸಿದ ನಲ್ಲೆ ತನ್ನ ಸೆರಗನ್ನು ಮೆಲ್ಲಗೆ ಸರಿಸಿ, ಓರೆನೋಟವನ್ನು ತುಸುವೇ ಮೇಲಕ್ಕೆತ್ತಿ, ತೋರಿಕೆಗೆ ಮಳ್ಳಿಯಂತೆ ನಟಿಸುತ್ತ, ಬಿನ್ನಾಣ ಮಾಡುತ್ತ, ನಲ್ಲನನ್ನು ರಂಬಿಸುವ ಪರಿಯನ್ನು ವರ್ಣಿಸಿದಂತೆ ಭಾಸವಾಗುವದು.

ಆದರೆ ಕೊನೆಯಲ್ಲಿರುವ “ಇರುಳು ಏನs? ” ಎನ್ನುವ ಸಾಲಿನಿಂದ ಕವನಕ್ಕೆ ಮತ್ತೊಂದು ದ್ವಂದ್ವಾರ್ಥ ಪ್ರಾಪ್ತವಾಗುವದು.

ಮೇಲಸೆರಗು ಅಂದರೆ ಮೋಡಗಳ ಸೆರಗೆ? ವಾರಿನೋಟವೆಂದರೆ ಮೋಡಗಳ ಮರೆಯಿಂದ ಆಗಾಗ ಹೊರಗಾಣುವ ಚಂದ್ರಮನೆ? ಇಂತಹ ಬೆಳದಿಂಗಳ ರಾತ್ರಿಯ ಚೆಲುವನ್ನು ಅನುಭವಿಸುತ್ತ ಕೂತಿರುವ ವ್ಯಕ್ತಿಗೆ, ಇದು ಒಯ್ಯಾರ ಮಾಡುತ್ತಿರುವ ನಾರಿಯಂತೆ ಭಾಸವಾಗುವದೆ?

ಮೂರನೆಯ ನುಡಿಯನ್ನು ಗಮನಿಸಿರಿ :

ಅಲೆದುಗಿಲಿದು ಉಲಿದೂ ಉಲಿದೂ

ನೆಟ್ಟ ನೋಟಾ ಕೀಳಲಾರ್ದs

ತಣ್ಣಗಾಗಿ ನಿಂತವಳ್ಯಾರs?

ನಸುಕು ಏನs?

ಈ ಮೂರನೆಯ ನುಡಿಯ ಸಾಲುಗಳನ್ನೂ ಸಹ ನಲ್ಲೆಯ ಪ್ರೇಮದಾಟಗಳಿಗೆ ಹೋಲಿಸುವಂತೆಯೇ, ಇರುಳಿನಿಂದ ನಸುಕಿನವರೆಗಿನ ನಿಸರ್ಗದ ಕ್ರಿಯೆಗಳಿಗೂ ಹೋಲಿಸಬಹುದು.

ನಾಲ್ಕನೆಯ ನುಡಿಯು ಅದ್ಭುತವಾದ ರೀತಿಯಲ್ಲಿ, ಕವಿಗೆ ತನ್ನ ನಲ್ಲೆಯ ಬಗೆಗಿರುವ ಪ್ರೀತಿಯನ್ನು, ಹಾಗು ದಾಂಪತ್ಯರಹಸ್ಯವನ್ನು ಹೇಳುತ್ತದೆ:

ಹೊತ್ತೊತ್ತಿಗೆ ಹೊಂದಿಕೆಯಾಗಿ

ಹಲವಾದಿ ಒಬ್ಬಾಕೆಯಾಗಿ

ಹೌದs ಚನ್ನಿ ಹೌದ ಚೆಲುವೀ

ನನ್ನವಳೇನs?

ನಿಸರ್ಗದ ದೈನಂದಿನ ವ್ಯಾಪಾರದಲ್ಲಿ, ನಿಸರ್ಗ ಹೇಗೆ ಹಲವು ಬಣ್ಣಗಳನ್ನು ತಳೆಯುತ್ತದೆ, ಇವೆಲ್ಲ ಪ್ರಕಾರಗಳು ಹೇಗೆ ನಿಸರ್ಗದ ಚೆಲುವೇ ಆಗಿವೆ, ಈ ಎಲ್ಲ ಬಗೆಗಳು ಮನುಷ್ಯನಿಗೆ ಹೇಗೆ ಸುಖವನ್ನೇ ಕೊಡುತ್ತವೆ ಎಂದು ಹೇಳುತ್ತಲೆ, ಸಮರಸ ದಾಂಪತ್ಯವೂ ಸಹ ಇದೇ ತೆರನಾಗಿರುತ್ತದೆ ಎನ್ನುವ ತನ್ನ ಭಾವನೆಯನ್ನು ಕವಿ ಹೊರಗೆಡುವುತ್ತಿದ್ದಾನೆ. ದೈನಂದಿನ ವ್ಯವಹಾರದಲ್ಲಿ ಬಳಲಿದ ಮನುಷ್ಯ ಸಂಜೆಯಾಗುತ್ತಿದ್ದಂತೆ ವಿಶ್ರಾಂತಿಯನ್ನು ಬಯಸುತ್ತಾನೆ. ಇರುಳು ಆತನ ದಣಿವನ್ನು ತೊಡೆಯುತ್ತದೆ. ಬೆಳಗಾಗುತ್ತಿದ್ದಂತೆ ಆತ ಮರುದಿನದ ವ್ಯವಹಾರಕ್ಕೆ ಹುರುಪಿನಿಂದ ಅಣಿಯಾಗುತ್ತಾನೆ. ಅವನ ನಲ್ಲೆಯೂ ಸಹ ಈ ಸಂಧ್ಯಾಕಾಲದಂತೆ, ನಿಶಾಕಾಲದಂತೆ ಹಾಗೂ ಉಷಾಕಾಲದಂತೆ ಅವನ ದಣಿವನ್ನು ಪರಿಹರಿಸುತ್ತಾಳೆ, ತಣಿಸುತ್ತಾಳೆ, ಹೊಸ ಹುರುಪನ್ನು ತುಂಬುತ್ತಾಳೆ.

ಅವಳನ್ನು ಕವಿ “ ಚನ್ನಿ ” ಎಂದು ಕರೆಯುತ್ತಾರೆ. “ ಚನ್ನಿ ”ಯಾದವಳೇ “ ಚೆಲುವಿ ” ಯಾಗಿರಬಲ್ಲಳು, ಬರಿ ನೋಟಕ್ಕೆ ಚೆಲುವಿಯಾದವಳು ಚನ್ನಿಯಾಗಿರದಿದ್ದರೆ ಅವಳು ಚೆಲುವೆಯಾಗಲಾರಳು. ನಲ್ಲನಿಗೆ ಅವಳು ಎಲ್ಲಾ ಸಂದರ್ಭಗಳಲ್ಲೂ ಹೊಂದಿಕೆಯಾಗಬೇಕು .

ಈ ಒಬ್ಬಳೇ ನಲ್ಲೆ ವಿವಿಧ ಸಂದರ್ಭಗಳಲ್ಲಿ ವಿವಿಧ ರೀತಿಗಳಲ್ಲಿ ತೋರಿಬರುತ್ತಾಳೆ ಎನ್ನುವ ಅಭಿಪ್ರಾಯವನ್ನು ಬೇಂದ್ರೆ ವ್ಯಕ್ತ ಪಡಿಸುತ್ತಾರೆ.

ಈ ಸಂದರ್ಭದಲ್ಲಿ ಹೆಣ್ಣು ಗಂಡಿಗೆ ಎಷ್ಟೆಲ್ಲಾ ಬಗೆಗಳಲ್ಲಿ ಪ್ರೀತಿಯ ಸಂಬಂಧಗಳನ್ನು ಹೊಂದುತ್ತಾಳೆ ಎನ್ನುವದನ್ನು ಅವರ ಮತ್ತೊಂದು ಕವನದಲ್ಲಿ

(--“ ಗಂಡುಸು ಹೆಂಗುಸಿಗೆ ”--) ನೋಡಬಹುದು:

“ ತಾಯೆ ಕನಿಮನೆಯೇ ನೀ ಅಕ್ಕ ಅಕ್ಕರತೆಯೇ

ಬಾಯೆನ್ನ ತಂಗಿ ಬಾ ಮುದ್ದು ಬಂಗಾರವೇ

ನೀಯೆನ್ನ ಹೆಂಡತಿಯೊ ಮೈಗೊಂಡ ನನ್ನಿಯೋ

ಮಗಳೊ ನನ್ನೆದೆಯ ಮುಗುಳೊ? ”

[ಮಾಸ್ತಿ ವೆಂಕಟೇಶ ಅಯ್ಯಂಗಾರರ ಕತೆಯೊಂದರಲ್ಲಿ ಬರುವ ವಾಕ್ಯವೊಂದನ್ನು ಇಲ್ಲಿ quote ಮಾಡುವದು ಅಪ್ರಸ್ತುತವಾಗಲಾರದು :

“ ಒಲಿಸದ ಹೆಣ್ಣು ಹೆಣ್ಣಲ್ಲ ; ನಲಿಸದ ಗಂಡು ಗಂಡಲ್ಲ. ”

ದಾಂಪತ್ಯ ಜೀವನದಲ್ಲಿ ಸಾಮರಸ್ಯ ಸಿದ್ಧಿಗೆ ಮಾಸ್ತಿಯವರು ಕಂಡ ದರ್ಶನವಿದು.]

ಬೇಂದ್ರೆಯವರ ಈ ಕವನ ಅವರ “ ಕಾಮಕಸ್ತೂರಿ ” ಕವನಸಂಗ್ರಹದಲ್ಲಿದೆ.

ಕಾಮಕಸ್ತೂರಿ ಸುಗಂಧವನ್ನು ಬೀರುವ ಒಂದು ಸಸ್ಯ. ಇದರ ಎಲೆಗಳನ್ನು ದೇವರ ಪೂಜೆಯಲ್ಲಿ ಬಳಸಲಾಗುತ್ತದೆ.

ಆದರೆ ಕಸ್ತೂರಿ ಮೃಗದಿಂದ ಪಡೆಯಲಾದ ಗಂಧವನ್ನು ಕಾಮೋದ್ದೀಪನಕ್ಕಾಗಿ ಬಳಸಲಾಗುತ್ತದೆ. ಗಂಡು ಹೆಣ್ಣಿನ ನಡುವಿರುವ ಕಾಮವೂ ಸಹ ಕಸ್ತೂರಿಯ ಗಂಧವಾಗದೆ, ಕಾಮಕಸ್ತೂರಿಯ ಸುಗಂಧವಾಗಬೇಕು ಎನ್ನುವದು ಬೇಂದ್ರೆಯವರ ಮನೀಷೆ ಎನ್ನುವದು, ಸುಪ್ರಸಿದ್ಧ ವಿಮರ್ಶಕ ‘ಸಾಕ್ಷಿ’ (ದಿವಂಗತ ಶ್ರೀ ಆರ್. ಜಿ. ಕುಲಕರ್ಣಿ) ಇವರ ಅಭಿಪ್ರಾಯವಾಗಿದೆ.

ಕೇವಲ ನಾಲ್ಕು ನುಡಿಗಳ ಈ ಕವನ, ಅತ್ಯಂತ ಸರಳ ಕನ್ನಡದಲ್ಲಿ ಬರೆದ ಈ ಕವನ, ಅತ್ಯಂತ ಚಮತ್ಕಾರಪೂರ್ಣವಾದ ಈ ಕವನ, ಅತಿ ಸುಂದರವಾದ ನಿಸರ್ಗ ಕವನವೂ ಹೌದು, ದಾಂಪತ್ಯಕವನವೂ ಹೌದು.

ಹೆಚ್ಚಿನ ಓದಿಗೆ :http://sallaap.blogspot.com/2008/07/blog-post_12.html

೩. ಕಾಮಕಸ್ತೂರಿ

ಹೆಚ್ಚಿನ ಓದಿಗೆ: http://sallaap.blogspot.com/2011/02/blog-post_21.html

ಕಾಮಕಸ್ತೂರಿ

(ಹೊಲದ ಹತ್ತರ)

ತಂದೇನಿ ನಿನಗೆಂದ

ತುಂಬಿ ತುರುಬಿನವಳ,

ಕಾಮಕಸ್ತೂರಿಯಾ

ತೆನಿಯೊಂದ.

ಅದನs ನೀ ಮುಡಿದಂದ

ಮುಡಿದಂಥ ಮುಡಿಯಿಂದ

ಗಾಳಿಯ ಸುಳಿಯೊಂದ

ಬಂದೆನಗ ತಗಲಿದಂದ

ತಣಿತಣಿತಣಿವಂದ

ಈ ಮನಕ.

ಅನ್ನೋ ಜನರು ಏನು

ಅಂತsನ ಇರತಾರ

ಹೊರತಾದೆ ನೀ ಜನಕ.

~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~

ಬೇಂದ್ರೆಯವರು ರಚಿಸಿದ ‘ಕಾಮಕಸ್ತೂರಿ’ ಕವನವು ಅದೇಹೆಸರಿನ ಸಂಕಲನದಲ್ಲಿ ಅಡಕವಾದ ಮೊದಲನೆಯ ಕವನ. ಕಾಮಕಸ್ತೂರಿ ಇದು ವಿಶಿಷ್ಟ ಸುವಾಸನೆಯ ಒಂದು ಸಸ್ಯ. ಇದರ ಸಸ್ಯಶಾಸ್ತ್ರೀಯ ಹೆಸರು Ocimum basilicum. ತುಳಸಿಯ ದಳವನ್ನು ದೇವರ ಪೂಜೆಗೆ ಬಳಸುವಂತೆಯೇ, ಈ ಸಸ್ಯದ ಹೂವನ್ನು ಸಹ ದೇವರ ಪೂಜೆಗೆ ಬಳಸುತ್ತಾರೆ.

ಗಂಡು ಹೆಣ್ಣಿನ ನಡುವಿನ ಆಕರ್ಷಣೆಯು ಕಾಮಮೂಲವಾಗಿರಬಹುದು; ಆದರೆ ಇದು ಕಾಮಕ್ಕೆ ಸೀಮಿತವಾಗಬಾರದು. ಕಸ್ತೂರಿಯಂತೆ ಇದು ಮೃಗಮಲವಾಗಬಾರದು; ಆದರೆ ಕಾಮಕಸ್ತೂರಿಯಂತೆ ಸುಗಂಧದ ಸಸ್ಯವಾಗಬೇಕು ಎನ್ನುವದು ಬೇಂದ್ರೆಯವರ ಆಶಯವಾಗಿದೆ.

ತಂದೇನಿ ನಿನಗೆಂದ

ತುಂಬಿ ತುರುಬಿನವಳ,

ಕಾಮಕಸ್ತೂರಿಯಾ

ತೆನಿಯೊಂದ.

‘ಕಾಮಕಸ್ತೂರಿ’ ಕವನದ ಮೊದಲ ನುಡಿಯಲ್ಲಿ ಹಳ್ಳಿಯ ತರುಣನೊಬ್ಬ ತನ್ನ ನಲ್ಲೆಯನ್ನು ಕಂಡಾಗ ಅವನ ಮನದಲ್ಲಿ ಮೂಡಿದ ಭಾವನೆಗಳ ವರ್ಣನೆ ಇದೆ. ಈ ತರುಣನಿಗೆ ತನ್ನ ನಲ್ಲೆಯ ಬಗೆಗೆ ಆಕರ್ಷಣೆ ಇದೆ. ಅವಳ ಚೆಲುವನ್ನು ಆತ ಗಮನಿಸುತ್ತಾನೆ. ‘ತುಂಬಿತುರುಬಿನವಳೆ’ ಎಂದು ಅವಳನ್ನು ಬಣ್ಣಿಸುತ್ತಾನೆ. ಅವಳಿಗೆ ತನ್ನ ಪ್ರಣಯದ ಸಂಕೇತವಾಗಿ ಕಾಮಕಸ್ತೂರಿಯ ತೆನೆಯೊಂದನ್ನು ತುರುಬಿನಲ್ಲಿ ಮುಡಿಯಲು ನೀಡುತ್ತಾನೆ. ದೈಹಿಕ ಆಕರ್ಷಣೆಯ ನಿರೂಪಣೆ ಇಲ್ಲಿಗೇ ಮುಗಿಯುತ್ತದೆ.

ಅದನs ನೀ ಮುಡಿದಂದ

ಮುಡಿದಂಥ ಮುಡಿಯಿಂದ

ಗಾಳಿಯ ಸುಳಿಯೊಂದ

ಬಂದೆನಗ ತಗಲಿದಂದ

ತಣಿತಣಿತಣಿವಂದ

ಈ ಮನಕ.

ಎರಡನೆಯ ನುಡಿಯಲ್ಲಿ ಆತನ ಅಪೇಕ್ಷೆಯನ್ನು ನಿರೂಪಿಸಲಾಗಿದೆ. ಕಾಮಕಸ್ತೂರಿಯನ್ನು ಮುಡಿದ ತನ್ನ ನಲ್ಲೆಯಿಂದ ಆತ ಬಯಸುವದು ಏನನ್ನು? ಅವಳ ದೈಹಿಕ ಸಾಮೀಪ್ಯವನ್ನು ಆತ ಬೇಡುತ್ತಿಲ್ಲ. ಅವಳ ಮುಡಿಯ ಮೇಲೆ ನವಿರಾಗಿ ಬೀಸಿದ ಗಾಳಿಯ ಸುಳಿಯೊಂದು, ಆ ಕಾಮಕಸ್ತೂರಿಯ ಪರಿಮಳವನ್ನು ಹೊತ್ತು ತಂದು ತನ್ನನ್ನು ತಗಲಿದರೆ ಸಾಕು ಎನ್ನುವದು ಅವನ ಹಂಬಲ. ಅಷ್ಟರಿಂದಲೇ ಅವನ ಮನಸ್ಸು ತಣಿದು ತೃಪ್ತವಾಗುವದು. ಗಂಡು ಹೆಣ್ಣುಗಳ ನಡುವೆ ದೈಹಿಕ ಆಕರ್ಷಣೆಯನ್ನು ಮೀರಿದ ಪ್ರೀತಿಯನ್ನು ಬೇಂದ್ರೆಯವರು ಈ ರೀತಿಯಲ್ಲಿ ತೋರಿಸುತ್ತಿದ್ದಾರೆ.

ಅನ್ನೋ ಜನರು ಏನು

ಅಂತsನ ಇರತಾರ

ಹೊರತಾದೆ ನೀ ಜನಕ.

ಮೂರನೆಯ ನುಡಿಯಲ್ಲಿ ಈ ಪ್ರೀತಿಯ ಗಾಢತೆಯನ್ನು, ಉದಾತ್ತತೆಯನ್ನು ಬೇಂದ್ರೆ ಹೇಳುತ್ತಿದ್ದಾರೆ. ಇವರ ಪ್ರಣಯಭಾವವನ್ನು ಕಂಡಂತಹ ಜನ ಏನೇ ಟೀಕೆಯನ್ನು ಮಾಡಲಿ, ಅದನ್ನು ಉಪೇಕ್ಷಿಸು ಎಂದು ನಾಯಕನು ತನ್ನ ನಲ್ಲೆಗೆ ಸೂಚಿಸುತ್ತಾನೆ. ತಮ್ಮ ನಡುವಿನ ಪ್ರೇಮವು ಅಸಾಮಾನ್ಯವಾಗಿದೆ. ತನ್ನ ನಲ್ಲೆಯೂ ಸಹ ಅಸಾಮಾನ್ಯಳೇ. ಅವಳು ಹಾಗು ಅವಳ ಪ್ರೀತಿ ಸಾಮಾನ್ಯ ಮಟ್ಟದ ಜನರಿಗೆ ಹೊರತಾಗಿದೆ ಎನ್ನುವದು ನಾಯಕನ ಭಾವನೆ.

~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~

ಟಿಪ್ಪಣಿ:

(೧) ಬೇಂದ್ರೆಯವರು ರಚಿಸಿದ ಪ್ರಣಯಕವನಗಳು ಹೆಚ್ಚಾಗಿ ಗ್ರಾಮೀಣ ಪರಿಸರದ ಕವನಗಳಾಗಿರುವದು ಕುತೂಹಲದ ಸಂಗತಿಯಾಗಿದೆ. ಈ ಕವನಗಳಲ್ಲಿ ಅವರು ಬಳಸುವ ಭಾಷೆಯೂ ಸಹ ಹಳ್ಳಿಯ ಮಾತಿನ ಭಾಷೆಯೇ ಆಗಿದೆ. ಇದರ ಕಾರಣವೇನಿರಬಹುದು? ಬೇಂದ್ರೆಯವರ ವೈಚಾರಿಕತೆ ಹಾಗು ಆದರ್ಶ ಇವು ನಗರ ಪರಿಸರದಿಂದ ಪ್ರಭಾವಿತವಾಗಿವೆ. ಆದರೆ ಅವರ ಎದೆಯಾಳದ ಭಾವನೆಗಳ ಪ್ರೇರಣೆ ಜಾನಪದದಲ್ಲಿದೆ. ‘ಟೊಂಕದ ಮೇಲೆ ಕೈ ಇಟಗೊಂಡು ಬಿಂಕದಾಕಿ ಯಾರ ಈಕಿ’ ಎನ್ನುವ ಅವರ ಕವನವು ಪ್ರಣಯಕವನವೇನಲ್ಲ. ಹೆಣ್ಣಿನ ಚೆಲುವನ್ನು, ಅವಳ ಒಟ್ಟು ವ್ಯಕ್ತಿತ್ವವನ್ನು ಗಮನಿಸುತ್ತ, ಆಸ್ವಾದಿಸುತ್ತ ಬೆರಗು ಪಡುತ್ತಿರುವ ವ್ಯಕ್ತಿಯೋರ್ವನ ಹಾಡು ಇದು. ಈ ಕವನವೂ ಸಹ ಗ್ರಾಮೀಣ ಧಾಟಿಯಲ್ಲಿಯೇ ಇದೆ ಎನ್ನುವದನ್ನು ಗಮನಿಸಿಬೇಕು. ಅದರಂತೆಯೆ ‘ಬೆಳದಿಂಗಳs ನೋಡ’ ಅಥವಾ ‘ಶೀಗಿ ಹುಣ್ಣಿವೆ ಮುಂದೆ ಸೋಗಿನ ಚಂದ್ರಮ’ ಕವನಗಳ ಜಾನಪದ ಧಾಟಿ ಹಾಗು ಭಾಷೆಗಳನ್ನು ಗಮನಿಸಿದಾಗ ಅವರ ಭಾವನೆಗಳ ಮೂಲದ ಕುರುಹು ಹೊಳೆದಂತಾಗುತ್ತದೆ. ಒಟ್ಟಿನಲ್ಲಿ ಶಿಷ್ಟ ಭಾಷೆ ಬೇಂದ್ರೆಯವರ ವೈಚಾರಿಕ ಭಾಷೆ ಹಾಗು ದೇಸಿ ಅಥವಾ ಜಾನಪದ ಭಾಷೆ ಅವರ ಭಾವನೆಗಳ ಭಾಷೆ ಎನ್ನಬಹುದು.

(೨) ನವೋದಯದ ಹಿರಿಯ ಸಾಹಿತಿಗಳಿಗೂ, ನವ್ಯ ಸಾಹಿತಿಗಳಿಗೂ ಇರುವ ಒಂದು ಪ್ರಮುಖ ವ್ಯತ್ಯಾಸವೆಂದರೆ ‘ಕಾಮ’ದ ಬಗೆಗೆ ಅವರಿಗಿರುವ ದೃಷ್ಟಿಕೋನ. ಗಂಡು ಹೆಣ್ಣಿನ ನಡುವೆ ಇರಬೇಕಾದ ದೈಹಿಕ ಕಾಮವು ಸೃಷ್ಟಿಗೆ ಅವಶ್ಯವಾದಂತಹ ಒಂದು ನೈಸರ್ಗಿಕ ಪ್ರಕ್ರಿಯೆ. ಇದನ್ನು ಇದ್ದಂತೆಯೆ ಒಪ್ಪಿಕೊಳ್ಳಲು ನವೋದಯ ಸಾಹಿತಿಗಳಿಗೆ ಇರಸು ಮುರಸು ಆಗುತ್ತಿತ್ತೇನೊ. ಆದುದರಿಂದ ಅವರು ‘ಕಾಮ’ಕ್ಕಿಂತ ‘ಪ್ರೇಮ’ ಉಚ್ಚವಾದದ್ದು ಎಂದು ಸಾರಿದರು. ಬೇಂದ್ರೆಯವರನ್ನು ಈ ಧೋರಣೆಯ ಲಕ್ಷಣಕವಿಗಳು ಎನ್ನಬಹುದು.

ನವೋದಯದ ಉತ್ತರಭಾಗದ ಲೇಖಕರಲ್ಲಿ ಕೆ.ಎಸ್. ನರಸಿಂಹಸ್ವಾಮಿಯವರು ಗಂಡು, ಹೆಣ್ಣಿನ ನಡುವಿನ ಕಾಮ ಹಾಗು ಪ್ರೇಮವನ್ನು ಅಭೇದವಾಗಿ ನೋಡಿದರು. ದಾಂಪತ್ಯಗೀತೆಗಳ ಗುಚ್ಛವಾದ ‘ಮೈಸೂರು ಮಲ್ಲಿಗೆ’ ಕವನಸಂಕಲನವು ಈ ಧೋರಣೆಯ ಲಕ್ಷಣಕಾವ್ಯ ಎನ್ನಬಹುದು.

ನವ್ಯ ಲೇಖಕರು ತಮ್ಮನ್ನು ಮಡಿವಂತರೆಂದು ಹೀಯಾಳಿಸುತ್ತಿದ್ದದ್ದರಿಂದ ಮನನೊಂದಂತಹ ನವೋದಯದ ಕೆಲವು ಶ್ರೇಷ್ಠ ಲೇಖಕರು ತಾವು ‘ಸಂಭಾವಿತ’ರಲ್ಲ ಎಂದು ತೋರಿಸಲೆಂದೇ ಸಣ್ಣ ಪುಟ್ಟ ಕಸರತ್ತು ಮಾಡಿದರು. ರಾಜರತ್ನಂ ಅವರ ಉದಾಹರಣೆಯನ್ನು ಇಲ್ಲಿ ಕೊಡಬಹುದು. ಬೀchiಯವರಿಗೆ ಉತ್ತರರೂಪದಲ್ಲಿ ರಚಿಸಿದ ತಮ್ಮ ಕೃತಿ `ನಿರ್ಭಯಾಗ್ರಾಫಿ’ಯಲ್ಲಿ ಅವರು ಒಂದು ಘಟನೆಯನ್ನು ಉಲ್ಲೇಖಿಸಿದ್ದಾರೆ. ಅದು ಹೀಗಿದೆ:

ಅ.ನ. ಕೃಷ್ಣರಾಯರೊಡನೆ ನಡೆದ ಒಂದು ಸಂಭಾಷಣೆಯಲ್ಲಿ ‘ಜಗನ್ನಾಥ ಪಂಡಿತ’ನ ‘ಮನೋರಮಾ ಕುಚಮರ್ದಿನೀ’ ಎನ್ನುವ ಕೃತಿಯ ಹೆಸರು ಬಂದಾಗ, ತಾವಿಬ್ಬರು ಪರಸ್ಪರ ನೋಟ ವಿನಿಮಯ ಮಾಡಿಕೊಂಡು ನಕ್ಕಿದ್ದಾಗಿ ರಾಜರತ್ನಂ ಬರೆದಿದ್ದಾರೆ. ಈ ಮೂಲಕ ತಾವು ‘ಸಂಭಾವಿತ’ರಲ್ಲವೆಂದು ರಾಜರತ್ನಂ ಸಾರ್ವಜನಿಕವಾಗಿ ತಿಳಿಸಿ ಹೇಳಿ ಸಮಾಧಾನಪಟ್ಟುಕೊಂಡರು!

ಬನ್ನಂಜೆ ಗೋವಿಂದಾಚಾರ್ಯರು ಇನ್ನೂ ಒಂದು ಹೆಜ್ಜೆ ಮುಂದು ಹೋಗಿ ತಾವು ತಮ್ಮ ಎಳವೆಯಲ್ಲಿ ‘ಪೋಲಿ’ಯಾಗಿದ್ದೆ ಎಂದು ಸಾಬೀತುಪಡಿಸಲು, ತಾವು ತಮ್ಮ ತರಗತಿಯ ಓರ್ವ ಹುಡುಗಿಗೆ ಬರೆದ ದ್ವಂದ್ವಾರ್ಥದ ಪತ್ರವೊಂದನ್ನು ತಮ್ಮ ಕೃತಿಯಲ್ಲಿ ಉಲ್ಲೇಖಿಸಿದ್ದಾರೆ. ಕನಕದಾಸರ ಕೀರ್ತನೆಗಳ ಬಗೆಗೆ ಅವರು ರಚಿಸಿದ ‘ಕನಕೋಪನಿಷತ್’ದಂತಹ ಗ್ರಂಥದಲ್ಲಿ ಈ ಅಸಭ್ಯ ಉಲ್ಲೇಖವಿರುವದು ಬೇಸರದ ಸಂಗತಿಯಾಗಿದೆ.

ಆಡಿಗರನ್ನು ಹೊರತುಪಡಿಸಿ ಇತರ ನವ್ಯ ಲೇಖಕರ ಮನೋವ್ಯಾಪಾರ ಇನ್ನೂ ವಿಚಿತ್ರವಾದದ್ದು. ತಮ್ಮ ಪೂರ್ವಜರ ಸಭ್ಯತೆಯ ವಿರುದ್ಧ ಬಂಡಾಯವೇಳುವದೇ ಮಹತ್ವದ ಸಾಹಿತ್ಯಕಾರ್ಯವೆಂದು ಭಾವಿಸಿದ ಇವರ ಸಾಹಿತ್ಯವು ಕಾಮದಿಂದ ಹೊರಬರಲಾರದೆ ತೊಳಲಾಡುವ ಸಾಹಿತ್ಯವಾಯಿತು. ಅನಂತಮೂರ್ತಿ, ಲಂಕೇಶ ಹಾಗು ರಾಮಚಂದ್ರ ಶರ್ಮರನ್ನು ಇಂತಹ ಸಾಹಿತ್ಯಕ್ಕೆ ಉದಾಹರಣೆಯಾಗಿ ತೆಗೆದುಕೊಳ್ಳಬಹುದು. ಇದು ಅವರ ಸಾಹಿತ್ಯಗುಣದ ಟೀಕೆಯಲ್ಲ. ಅವರ ಮನೋಧರ್ಮವನ್ನು ಗುರುತಿಸುವ ಪ್ರಯತ್ನವಷ್ಟೇ.

ಸುದೈವದಿಂದ ನವ್ಯೋತ್ತರ ಸಾಹಿತಿಗಳಿಗೆ ನವ್ಯಸಾಹಿತಿಗಳ ಇಂತಹ complex ಇಲ್ಲ. ಅವರು ಆರೋಗ್ಯಕರವಾದ ಸಾಮಾಜಿಕ ಹಾಗು ವೈಯಕ್ತಿಕ ನೆಲೆಯ ವಿವಿಧ ಮುಖಗಳನ್ನು ತೋರಿಸುವ ಸಾಹಿತ್ಯವನ್ನು ರಚಿಸುತ್ತಿರುವದು ಕನ್ನಡ ಸಾಹಿತ್ಯಕ್ಕೆ ಶುಭಸೂಚನೆಯಾಗಿದೆ. ಹಿರಿಯರಾದ ದೇವನೂರು ಮಹಾದೇವ ಹಾಗು ನಂತರದ ಲೇಖಕರಲ್ಲಿ ಅಮರೇಶ ನುಗಡೋಣಿ ಮತ್ತು ವಸುಧೇಂದ್ರರನ್ನು ಇಂತಹ ಸಾಹಿತ್ಯದ ಪ್ರಮುಖರೆಂದು ನೆನೆಸಿಕೊಳ್ಳಬಹುದು.

೪. ಜನುಮದ ಜಾತ್ರಿ

ಹೆಚ್ಚಿನ ಓದಿಗೆ: http://sallaap.blogspot.com/2011/07/blog-post.html

ನೇತ್ರಪಲ್ಲವಿಯಿಂದ ಸೂತ್ರಗೊಂಬೀ ಹಾಂಗ

ಪಾತ್ರ ಕುಣಿಸ್ಯಾನ ಒಲುಮೀಗೆ | ದಿನದಿನ

ಜಾತ್ರಿಯೆನಿಸಿತ್ತ ಜನುಮವು. ||೧||

ಹುಬ್ಬು ಹಾರಸಿದಾಗ ಹಬ್ಬ ಎನಿಸಿತು ನನಗ

‘ಅಬ್ಬ’ ಎನಬೇಡs ನನ ಗೆಣತಿ | ಸಾವಿರಕ

ಒಬ್ಬ ನೋಡವ್ವ ನನ ನಲ್ಲ. ||೨||

ಕಣ್ಣೆವಿ ಎತ್ತಿದರ ಹುಣ್ಣೀವಿ ತೆರಧ್ಹಾಂಗ

ಕಣ್ಣು ಏನಂತ ಬಣ್ಣಿಸಲೆ | ಚಿತ್ತಕ್ಕ

ಕಣ್ಣು ಬರೆಧ್ಹಾಂಗ ಕಂಡಿತ್ತು. ||೩||

ಹೇಸಿರಲು ಈ ಜೀವ ಆಸಿ ಹುಟ್ಟಿಸುತಿತ್ತು

ಮೀಸಿ ಮೇಲೆಳೆದ ಕಿರಿಬೆರಳು | ಕೆಂಗಯ್ಯ

ಬೀಸಿ ಕರೆದಾನ ನನಗಂತ. ||೪||

ತಂಬುಲತುಟಿ ನಗಿ ಹೊಂಬಿಸಲೆಂಬಂತೆ

ಬಿಂಬಿಸಿತವ್ವಾ ಎದಿಯಾಗ | ನಂಬೀಸಿ

ರಂಬೀಸಿತವ್ವಾ ಜೀವವ. ||೫||

‘ಒಲುಮೆಯ ಕಿಚ್ಚು’ ಕವನವು ವಿರಹದಗ್ಧ ಮುಗ್ಧೆಯ ಹಾಡಾದರೆ, ‘ಜನುಮದ ಜಾತ್ರಿ’ ಕವನವು ಪ್ರಣಯಸಂತೃಪ್ತಳಾದ ಹೊಸ ಮದುವಣಗಿತ್ತಿಯ ಹಾಡಾಗಿದೆ.

ಬೇಂದ್ರೆಯವರ ‘ಜನುಮದ ಜಾತ್ರಿ’ ಕವನದಲ್ಲಿ ತನ್ನ ನಲ್ಲನಿಗೆ ಮನಸೋತಿರುವ ಹೊಸ ಮದುವಣಗಿತ್ತಿಯ ಮನ:ಸ್ಥಿತಿಯನ್ನು ವರ್ಣಿಸಲಾಗಿದೆ. ಈ ಹೊಸ ಮದುವಣಗಿತ್ತಿಯು ತನ್ನ ಆಪ್ತಸಖಿಯ ಜೊತೆಗೆ ತನ್ನ ಹೊಸ ಸಂಸಾರದ ಸುಖವನ್ನು ಹಂಚಿಕೊಳ್ಳುತ್ತಿದ್ದಾಳೆ. ತನ್ನ ನಲ್ಲನ ಒಲವಿಗೆ ಮನಸೋತು ಅವನ ಕೈಯಲ್ಲಿಯ ಸೂತ್ರದ ಗೊಂಬೆಯಂತೆ ಆಗಿರುವದಾಗಿ ಅವಳು ಹೇಳುತ್ತಿದ್ದಾಳೆ. ಆ ನಲ್ಲನಾದರೋ ತನ್ನ ನೇತ್ರಪಲ್ಲವಿಯಿಂದಲೇ ಅಂದರೆ ಕಣ್ಸನ್ನೆಯಿಂದಲೇ ಇವಳನ್ನು ಕುಣಿಸುತ್ತಾನೆ. ಇವನು ನಿರ್ದೇಶಿಸಿದಂತೆ ಕುಣಿಯುವ ಪಾತ್ರವಾಗಿದ್ದಾಳೆ ಅವಳು. ಅವರಿಬ್ಬರನ್ನು ಜೋಡಿಸುತ್ತಿರುವ ಆ ‘ಸೂತ್ರ’ ಯಾವುದು?

ನೇತ್ರಪಲ್ಲವಿಯಿಂದ ಸೂತ್ರಗೊಂಬೀ ಹಾಂಗ

ಪಾತ್ರ ಕುಣಿಸ್ಯಾನ ಒಲುಮೀಗೆ | ದಿನದಿನ

ಜಾತ್ರಿಯೆನಿಸಿತ್ತ ಜನುಮವು.

ಅವಳಲ್ಲಿ ಇವನಿಗೆ ಇರುವ ಒಲುಮೆ ಹಾಗು ಇವನಲ್ಲಿ ಅವಳಿಗಿರುವ ಒಲುಮೆ ಇವೇ ಅವರ ಬದುಕಿನಾಟದ ಸೂತ್ರ. ಇಂತಹ ಒಲುಮೆಯನ್ನು ದಿನದಿನವೂ ಈ ಪ್ರಣಯಜೋಡಿಯು ಸೂರೆ ಮಾಡುತ್ತಿರುವಾಗ, ಹೊಸ ಬಾಳು ಹೇಗಿರುತ್ತದೆ?

‘ದಿನದಿನ ಜಾತ್ರಿಯೆನಿಸಿತ್ತ ಜನುಮವು!’

ಆಧುನಿಕ ತಲೆಮಾರಿನ ನಮ್ಮ ಯುವಕ, ಯುವತಿಯರು ಹಳ್ಳಿಯ ಜಾತ್ರೆಗಳನ್ನು ಬಹುಶಃ ನೋಡಿರಲಿಕ್ಕಿಲ್ಲ. ಅದೊಂದು ಸಡಗರದ ಸಮಾವೇಶ. ಜಾತ್ರೆಯಲ್ಲಿ ಚಿಕ್ಕ ಮಕ್ಕಳು ಆಟಿಗೆಗಳನ್ನು ಕೊಡಿಸಿಕೊಳ್ಳಲು ಬಂದಿದ್ದರೆ, ಹುಡುಗ-ಹುಡುಗಿಯರಿಗೆ ತಿರುಗು-ಗಾಲಿಗಳಲ್ಲಿ ಕೂಡುವ ಉಮೇದಿ. ಬಹುಪಾಲು ಯುವಕ-ಯುವತಿಯರು ‘ರಾಜಾ-ರಾಣಿ ದೇಖೋ’ ಅನ್ನುತ್ತ ‘ಕಣ್ಣಾಟ’ಕ್ಕಾಗಿ ಬಂದಿರುತ್ತಾರೆ. ಒಟ್ಟಿನಲ್ಲಿ ಆಬಾಲವೃದ್ಧರಿಗೆ ಇದೊಂದು ಉತ್ಸಾಹದ, ಸಂಭ್ರಮದ ಸನ್ನಿವೇಶ.

ತನ್ನ ನಲ್ಲನ ಒಲವಿನಲ್ಲಿ ನಮ್ಮ ಹೊಸ ಮದುವಣಗಿತ್ತಿಗೆ ಅವಳ ಬಾಳೆಂಬುದು ಪ್ರತಿದಿನವೂ ಇಂತಹ ಜಾತ್ರೆಯ ಸಂಭ್ರಮವಾಗಿದೆ. ನಿಸಾರ ಅಹಮದರ ಭಾಷೆಯಲ್ಲಿ ಹೇಳುವದಾದರೆ, ಜೀವನವೊಂದು ‘ನಿತ್ಯೋತ್ಸವ!’

ತನ್ನ ನಲ್ಲೆಯನ್ನು ಕಣ್ಸನ್ನೆಯಿಂದಲೇ ಆಟ ಆಡಿಸುವದು, ರಸಿಕತನದ ಪ್ರಥಮ ಸಂಕೇತವಾದರೆ, ಅವಳನ್ನು ‘ಹುಬ್ಬು ಹಾರಿಸಿ’ ಕರೆಯುವದು ರಸಿಕ ನಲ್ಲನು ಕೊಡುತ್ತಿರುವ ಎರಡನೆಯ ಸಂಕೇತ. ಇದು ಶೃಂಗಾರದಾಟಕ್ಕೆ ಆತ ನೀಡುತ್ತಿರುವ ನೇರ ಆಹ್ವಾನವೇ ಆಗಿದೆ. ಇದು ಯೌವನದ ಹಬ್ಬ, ಇದು ರಸಿಕರ ಹಬ್ಬ, ಇದು ಶೃಂಗಾರದ ಹಬ್ಬ!

ನಮ್ಮ ಹೊಸ ಮದುವಣಗಿತ್ತಿಯ ಗೆಳತಿಗೆ ಈ ಸಂಕೇತಗಳಲ್ಲಿ, ಈ ಆಟದಲ್ಲಿ ಯಾವ ವಿಶೇಷತೆಯೂ ಕಾಣಿಸಲಿಲ್ಲವೇನೋ. ಅದನ್ನು ಗ್ರಹಿಸಿದ ಈ ಹುಡುಗಿ ತನ್ನ ನಲ್ಲನು ಸಾಮಾನ್ಯನಲ್ಲವೆಂದು ಆಗ್ರಹದಿಂದ ಹೇಳುತ್ತಾಳೆ:

ಹುಬ್ಬು ಹಾರಸಿದಾಗ ಹಬ್ಬ ಎನಿಸಿತು ನನಗ

‘ಅಬ್ಬ’ ಎನಬೇಡs ನನ ಗೆಣತಿ ಸಾವಿರಕ

ಒಬ್ಬ ನೋಡವ್ವ ನನ ನಲ್ಲ.

‘ತನ್ನ ನಲ್ಲನು ಸಾವಿರದಲ್ಲಿ ಒಬ್ಬನು; ನನ್ನ ಈ ಮಾತಿಗೆ ನೀನು ‘ಅಬ್ಬಾ!’ ಎಂದು ಹಾಸ್ಯ ಮಾಡದಿರು’ ಎಂದು ತನ್ನ ಗೆಳತಿಯ ಎದುರು ಸಮರ್ಥನೆ ಮಾಡುತ್ತಾಳೆ ಈ ಹುಡುಗಿ. ಅಂತಹ ಅಸಾಮಾನ್ಯತೆ ಏನಿದೆ ಇವಳ ನಲ್ಲನಲ್ಲಿ?

ಬಹುಶ: ಹೊಸದಾಗಿ ಮದುವೆಯಾದ ಎಲ್ಲ ಹುಡುಗಿಯರೂ ತಮ್ಮ ನಲ್ಲನೆಂದರೆ ಅಸಾಮಾನ್ಯ ಎನ್ನುವ ಭಾವನೆಯನ್ನೇ ಇಟ್ಟುಕೊಂಡಿರುತ್ತಾರೊ ಏನೊ? ಈ ಹುಡುಗಿಯ ನಲ್ಲನಲ್ಲಿ ಇರುವ ವಿಶೇಷತೆ ಏನು?

ಕಣ್ಣೆವಿ ಎತ್ತಿದರ ಹುಣ್ಣೀವಿ ತೆರಧ್ಹಾಂಗ

ಕಣ್ಣು ಏನಂತ ಬಣ್ಣಿಸಲೆ | ಚಿತ್ತಕ್ಕ

ಕಣ್ಣು ಬರೆಧ್ಹಾಂಗ ಕಂಡಿತ್ತು.

ಕಣ್ಣುಗಳು ಭಾವನೆಯನ್ನು ಪ್ರದರ್ಶಿಸುವ ಅಂಗಗಳಾಗಿವೆ. ತನ್ನ ನಲ್ಲೆಯ ಬಗೆಗೆ ಆ ನಲ್ಲನಿಗೆ ಎಷ್ಟು ಪ್ರೀತಿ ಇದೆ ಎಂದರೆ ಆತ ತನ್ನ ಕಣ್ಣುರೆಪ್ಪೆಗಳನ್ನು ಎತ್ತಿ ಇವಳೆಡೆಗೆ ನೋಡಿದರೆ ಸಾಕು, ಅಲ್ಲಿ ಪೂರ್ಣಿಮೆಯ ಬೆಳದಿಂಗಳು ಹರಡುತ್ತದೆ. ಆ ಬೆಳದಿಂಗಳಿನಲ್ಲಿ ಒಂದು ಗಂಧರ್ವಲೋಕದ ಸೃಷ್ಟಿಯಾಗುತ್ತದೆ. ‘ಆ ಲೋಕದಲ್ಲಿ ತನ್ನ ಹುಡುಗಿಯನ್ನು ನಲಿಸಬೇಕು’ ಎನ್ನುವ ಅವನ ಚಿತ್ತದೊಳಗಿನ ಬಯಕೆ ಪಾರದರ್ಶಕವಾಗಿ ಅವನ ಕಣ್ಣಿನಲ್ಲಿ ಇವಳಿಗೆ ಕಾಣುತ್ತದೆ. ನಿಜ ಹೇಳಬೇಕೆಂದರೆ, ತನ್ನ ಬಯಕೆಯನ್ನೇ ಇವಳು ಅವನ ಕಣ್ಣುಗಳಲ್ಲಿ ಕಾಣುತ್ತಿದ್ದಾಳೆ. ಇದನ್ನು ಬೇಂದ್ರೆಯವರು ‘ಚಿತ್ತಕ್ಕೆ ಕಣ್ಣು ಬರೆಧ್ಹಾಂಗ ಕಂಡಿತ್ತು’ ಎಂದು ವರ್ಣಿಸುತ್ತಾರೆ.

ಜೀವನವೆಲ್ಲ ಮಾಯಾಲೋಕವಾಗಲು ಸಾಧ್ಯವೆ? ಇಲ್ಲಿ ದೈನಂದಿನ ಸಮಸ್ಯೆಗಳು ಇದ್ದೇ ಇರುತ್ತವೆ. ‘ಸಾಕಪ್ಪಾ ಈ ಬದುಕು!’ ಎಂದೆನಿಸುವದು ಸಹಜ. ಅಂತಹ ಸಮಯದಲ್ಲಿ ಇವಳ ನಲ್ಲನೇ ಇವಳಿಗೆ ಸಮಾಧಾನ ಹೇಳಿ ಬದುಕಿನಲ್ಲಿ ಆಸೆ ಹುಟ್ಟಿಸಬೇಕಲ್ಲವೆ?

ಹೇಸಿರಲು ಈ ಜೀವ ಆಸಿ ಹುಟ್ಟಿಸುತಿತ್ತು

ಮೀಸಿ ಮೇಲೆಳೆದ ಕಿರಿಬೆರಳು | ಕೆಂಗಯ್ಯ

ಬೀಸಿ ಕರೆದಾನ ನನಗಂತ.

ಸಮಸ್ಯೆಗಳಿಗೆ ಹೆದರಿದ ತನ್ನ ನಲ್ಲೆಗೆ ಈ ನಲ್ಲ ಧೈರ್ಯವನ್ನು ಕೊಡುವ ಬಗೆ ಎಂತಹದು? ತನ್ನ ಮೀಸೆಯ ಮೇಲೆ ಕಿರಿಬೆರಳನ್ನು ಎಳೆದು, ಈ ಗಂಡಸು ಅವಳಿಗೆ ಅಭಯ ಕೊಡುತ್ತಾನೆ:ನಾನಿದ್ದೇನೆ, ಹೆದರದಿರು! ಬಾ ನನ್ನ ಜೊತೆಗೆ ಬದುಕನ್ನು ಎದುರಿಸಲು!’ ಎನ್ನುವ ಧಾಟಿಯಲ್ಲಿ ತನ್ನ ಕೆಂಚನೆಯ ಕೈಯನ್ನು ಬೀಸಿ ಇವಳನ್ನು ಕರೆಯುತ್ತಾನೆ. ಬೇಂದ್ರೆಯವರು ನಲ್ಲನ ‘ಗಂಡಸುತನ’ವನ್ನು ಎತ್ತಿ ತೋರಿಸುವ ಉದ್ದೇಶದಿಂದ, ‘ಮೀಸಿ ಮೇಲೆಳೆದ ಬೆರಳು, ‘ಕೆಂಗಯ್ಯ ಬೀಸಿ ಕರೆದಾನ’ ಎನ್ನುವ ಎನ್ನುವ ವಿಶೇಷಣಗಳನ್ನು ಬಳಸಿದ್ದಾರೆ.

ರಸಿಕ ನಲ್ಲನ ಆಸರೆಯು ಇರುವಾಗ ಇವಳ ಬದುಕಿನ ಬೇಗುದಿ ಮಾಯವಾಗುತ್ತದೆ, ಆಸೆ ಮತ್ತೆ ಚಿಗುರುತ್ತದೆ, ಪ್ರಣಯ ಮತ್ತೆ ಕೊನರುತ್ತದೆ. ತಾಂಬೂಲದಿಂದ ಕೆಂಪಾದ ತುಟಿಯ ಈ ರಸಿಕನ ನಗೆಯು ಇವಳಿಗೆ ಬೆಚ್ಚನೆಯ, ಆಹ್ಲಾದಕರವಾದ ಹೊಂಬಿಸಲಂತೆ ಭಾಸವಾಗುತ್ತದೆ. ಅವಳ ಅಂತರಂಗದಲ್ಲಿ ಈ ಭಾವನೆಯು ‘ಬಿಂಬಿಸುತ್ತದೆ’ ಎಂದರೆ ಅವನ ಅಂತರಂಗದಿಂದ ಇವಳ ಅಂತರಂಗಕ್ಕೆ transfer ಆಗುತ್ತದೆ.

ತಂಬುಲತುಟಿ ನಗಿ ಹೊಂಬಿಸಲೆಂಬಂತೆ

ಬಿಂಬಿಸಿತವ್ವಾ ಎದಿಯಾಗ | ನಂಬೀಸಿ

ರಂಬೀಸಿತವ್ವಾ ಜೀವವ.

ನಿರಂತರ ಪ್ರಣಯವೊಂದೇ ಅಲ್ಲ, ಬದುಕಿಗೆ ಬೇಕಾದದ್ದು ನಿರಂತರ ವಿಶ್ವಾಸವೂ ಅಹುದು. ಇವೆರಡನ್ನೂ ಈತ ತನ್ನ ನಲ್ಲೆಗೆ ಕೊಡುತ್ತಿದ್ದಾನೆ. ಆ ಮಾತನ್ನು ‘ನಂಬೀಸಿ, ರಂಬಿಸಿತವ್ವಾ ಜೀವವ’ ಎನ್ನುವ ಮೂಲಕ ಅಭಿವ್ಯಕ್ತಿಸಲಾಗಿದೆ.

ದೇಸಿ ಪದಗಳನ್ನು ಬೇಂದ್ರೆಯವರು ಎಷ್ಟು ಸಮರ್ಥವಾಗಿ ಬಳಸಬಲ್ಲರು, ತಮಗೆ ಬೇಕಾದ ಅರ್ಥವನ್ನು ಈ ಪದಗಳ ಮೂಲಕ ಹೇಗೆ ಹಿಗ್ಗಿಸಿ ಹೊರತರಬಲ್ಲರು ಎನ್ನುವದಕ್ಕೆ ಈ ಗೀತೆಯು ಶ್ರೇಷ್ಠ ಉದಾಹರಣೆಯಾಗಿದೆ. ಪದಗಳ ಅರ್ಥವನ್ನು ಅರಿಯಬಲ್ಲವನು ಪಂಡಿತ; ಪದಗಳಲ್ಲಿ ಅರ್ಥ ತುಂಬಬಲ್ಲವನು ವರಕವಿ!