ಒಂದು ಜಿಲೇಬಿ

೧.ಅವರ ಕಂಗಳ ಹಾಗೆ

ಕಣ್ಣು ತುಸು ಮಲಗಿದವರನ್ನು ಹಾಗೆ

ಗೇಲಿಯಲ್ಲಿ ಎಬ್ಬಿಸಬೇಡಿ.ಅವರ ಕಂಗಳೆ ಹಾಗೆ

ಲೂಟಿಯಾದ ಪೇಟೆಯಂತೆ

ಸಪ್ಪೆ ಕಿರಣವೊಂದು ದಾರದಂತೆ ತೆರೆದ ಕಣ್ಣಿಂದ

ಹೊರಬರುತ್ತಲೇ ಇದೆ ಸಿಕ್ಕ ಗಿಡಮರ ಕಂಬ

ಸೈಕಲ್ಲುಗಳ ಕಟ್ಟಿ ಹೆಡೆಮುರಿ ಬೀಳಿಸುತ್ತ

ದಣಿಯದ ಅಭಯಹಸ್ತಗಳೂ ಇದರಲ್ಲಿ

ಸಿಕ್ಕುಬಿದ್ದಿವೆ.ಹೂಗಳ ಕತ್ತನ್ನೆ ಕುಯ್ದೀತು ಎಚ್ಚರ

ಬಗ್ಗಿಸಿ ಹಿಡಿಯಿರಿ ಹಾಗೆ

ಇವರ ಹುರುಬುರುಕು ಅಂಗಾಂಗುಗಳ ತಪ್ಪಿಸಿಯೇ

ಅಡ್ಡಾಡುವನು ದಿನಮಣಿ.ಉಪಖಂಡದಿಂದೆದ್ದ ಕಂಬನಿಯ ಮೋಡ

ಸದ್ದಿಲ್ಲದೆ ನೆತ್ತಿಗೆ ಬಂದ ಕರಿಗಟ್ಟಿವೆ

ಚಹಾ ತಿಂಡಿ ಆದವರು ಅಲ್ಲಲ್ಲೆ ನಿಂತುಕೊಳ್ಳಿ.

ಹೀಗೆ ನೋಡಿ.ತಟತಟ ಉಪ್ಪುಮಳೆಗೂ ಎವೆಯಿಕ್ಕದ ಆ ಕಂಗಳಲ್ಲಿ

ಎಲ್ಲಾ ಕಾಣುತ್ತಿದೆ

ರಾತ್ರಿಯೊಂದನ್ನು ಕಾಲಲ್ಲಿ ಅಳಿಸಿ ಹಾಕುತ್ತಿದೆ ನಸುಕಿದ ಪೇಟೆ

ಮೊಲೆಗಳ ಎಲ್ಲೆಲ್ಲೋ ಅಡವಿಟ್ಟು ಬಂದ ಯಾರ್ಯಾರದೋ ಅಕ್ಕ ತಂಗಿ

ಸಾಲಾಗಿ ನೀಲಿ ವ್ಯಾನಿನಲ್ಲಿ ಹತ್ತುತ್ತುದ್ದಾರೆ

೨.ಹೆಸರು

ಬಂದ ಕೆಲಸ ಮುಗಿಸಿ ಹೋದರಾಗದೆ

ಸುಮ್ಮನೆ ಕೇಳುತ್ತಾರೆ

ಪಂಜರದ ಹುಡುಗಿಯ ಹೆಸರ

ಗೊತ್ತು ಅವಳಿಗೆ ಇದೆಲ್ಲ

ಹಾಗೆಂದೇ ಇಟ್ಟುಕೊಂಡಿದ್ದಾಳೆ

ಎರಡೇ ಗುಂಡಿಯ ಬ್ಲೌಸಿನೊಳಗೆ

ಎಷ್ಟೊಂದು ಬಗೆಯ ಹೆಸರ

ಕೇಳಿದವನ ವಯ ತೂಕ ಬಣ್ಣ ನೋಡಿ

ತೆಗೆಯುತ್ತಾಳೆ

ನಂತರ ಅವರು ನಂಬಿದವರಂತೆ

ಆ ಸುಳ್ಳು ಹೆಸರಿಂದ ಅವಳ ಕರೆಯುತ್ತ

ಒಂದು ಸಣ್ಣ ಆಟ ನಡೆಸುತ್ತಾರೆ

ತಿಳಿದವಳಂತೆ ನಕ್ಕರೆ ಯಾಕೆ ನಗುತ್ತೀ

ಎಂದು ಕೆರಳಿಯಾರು

ಟಿಪ್ಸ್ ಸಮಯ ಹಾಗೆಲ್ಲ ಕೆರಳಿಸಿದರೆ ತರವಲ್ಲ

ರಸ್ತೇಯಲ್ಲಿ ಹೆಸರುಗಳಿಗೇನೂ ಬರವಿಲ್ಲ

ಬೇಕಾದ್ದು ಬೇಕಾದಲ್ಲಿಂದ ಹೆಕ್ಕಬಹುದು

ಚ್ಯೂಯಿಂಗ್ ಗಮ್ಮಿನಂತೆ ಜಗೆದು ಜಗೆದು

ನಂತರ ಗುಪ್ತವಾಗಿ ಎಲ್ಲೋ ಅಂಟಿಸಿ

ಹೋಗಿ ಬಿಡಬಹುದು

ಹೇಳು ಪಾರ್ಟನರ್

ಒಂದೇ ಹೆಸರಿನ ಅದೆಷ್ಟು ಜನ ಒರಗಿದ್ದಾರೀ ಉಪಗ್ರಹದಲ್ಲಿ

ಹೆಸರು ಪಾಪಿಗಳದ್ದಲ್ಲ

ಪಾಪದ್ದು

ಅದಕ್ಕೆ ಮತ್ತೆ,

ಗುಂಡಿ ಹಾಕುತ್ತ ಸಂಭಾವಿತ ಲೋಕಕ್ಕೆ

ಹೊರಟು ನಿಂತವರನ್ನೆಂದೂ ಅವಳು

ಹಿಂದೆ ಕರೆದು ಹೆಸರು ಕೇಳುವುದಿಲ್ಲ.