ನಡೆದಿದೆ ಪೂಜಾರತಿ.

೧.ದಣಿದ ಜೀವಕೆ ಮತ್ತೆ ಕನಸನುಣಿಸಿ.

ದಣಿದ ಜೀವಕೆ ಮತ್ತೆ ಕನಸನುಣಿಸಿ

ಕುಣಿಸಿರುವ ನೀರೆ ನೀನು ಯಾರೆ ?

ಯಾರೆ ಚದುರೆ, ನೀನು ಯಾರೆ ಚದುರೆ ?

ಬಗೆಗಣ್ಣ ತೆರೆಸಿದ ಭಾವಮದಿರೆ

ಉರಿವ ಬಿಸಿಲಿಗೆ ತಂಪು ಗಾಳಿ ಸುಳಿಸಿ

ಮಣ್ಣಿನಲಿ ಮಳೆಬಿಲ್ಲ ಬಣ್ಣ ಕಲೆಸಿ,

ಮಾತಿನಾಳಕೆ ಸಿಗದ ಉರಿಯ ಚಿಗುರ

ಬೊಗಸೆಗಣ್ಣಿನ ಪಾತಿಯಲ್ಲಿ ಬೆಳೆಸಿ,

ಏಕೆ ಕಾಡುವೆ ನೀನು ಯಾರೆ ಚದುರೆ

ನಿನ್ನ ಚೆಲುವಿಗೆ ಎಷ್ಟು ಸ್ವರ್ಗ ಇದಿರೆ ?

ದಾರಿ ಹುಡುಕಿದೆ ಹೇಗೆ ಚೆಲುವೆ ಈ ಮನೆಗೆ

ನೂರು ಕಳವಳ ಕಾಲು ಕಚ್ಚುವೆಡೆಗೆ ?

ಕಾರಿರುಳು ಕವಿದಿರಲು ಬಂದೆ ಹೇಗೆ

ಮೈತುಂಬ ಪ್ರೀತಿಯನು ತಂದೆ ಹೇಗೆ ?

೨.ಯಾಕೆ ಕಾಡುತಿದೆ ಸುಮ್ಮನೆ ನನ್ನನು?

ಯಾಕೆ ಕಾಡುತಿದೆ ಸುಮ್ಮನೆ ನನ್ನನು

ಯಾವುದು ಈ ರಾಗ ?

ಒಂದೆ ಸಮನೆ ಹಾಯುತಲಿದೆ ಅರಿವಿಗೆ

ಗುರುತೆ ತಪ್ಪಿದಾಗ.

ಯಾವುದೊ ವಸಂತ ರಾತ್ರಿಯಲಿ

ಹೊಳೆದ ತಾರೆ ನೆನಪಾಗುತಿದೆ,

ಮುಸುಕು ನೆನಪುಗಳ ಮಳೆಯಲ್ಲಿ

ಮನಸು ಒಂದೇ ಸಮ ತೋಯುತಿದೆ.

ಕರುಳ ಕೊರೆವ ಚಳಿಯಿರುಳಿನಲಿ

ಪ್ರಾಣಕೆ ಮೊಳೆಯುವ ನೋವಿನಲಿ,

ಅರಸಿ ಅಲೆವೆ ನಾ ಸುರಿಸುತ ಕಂಬನಿ

ಕಳೆದ ರಾಗಗಳ ಕೊರಗಿನಲಿ.

ಕರಗಿದ ಪ್ರೀತಿಯ ಸ್ಮರಣೆಯಲಿ

ಕುದಿಯುವ ಭಾವದ ಬೇಗೆಯಲಿ,

ತೋಯುವೆ ಬೇಯುವೆ ರೇಸಿಮೆ ಎಳೆಗಳ-

ನೀಯುವೆ ಮುಗಿಯುವೆ ಹಾಡಿನಲಿ.

೩.ಏಕೆ ಹೀಗೆ?

ಏಕೆ ಹೀಗೆ

ನಮ್ಮ ನಡುವೆ

ಮಾತು ಬೆಳೆದಿದೆ ?

ಕುರುಡು ಹಮ್ಮು

ಬೇಟೆಯಾಡಿ

ಪ್ರೀತಿ ನರಳಿದೆ ?

ಭೂಮಿ ಬಾಯ

ತೆರೆಯುತಿದೆ,

ಬಾನು ಬೆಂಕಿ

ಸುರಿಯುತಿದೆ,

ಧಾರೆ ಒಣಗಿ

ಚೀರುತಿದೆ

ಚಿಲುಮೆ ಎದೆಯಲಿ.

ಮುಗಿಲು ಬರುವ

ಕಾಯುತಿದೆ,

ಮಳೆಯ ಕನಸ

ನೇಯುತಿದೆ,

ನಿನ್ನ ಬಯಸಿ

ಬೇಯುತಿದೆ

ನನ್ನ ಹೃದಯವು.

೪.ಬಾರೆ ನನ್ನ ದೀಪಿಕಾ.

ಬಾರೆ ನನ್ನ ದೀಪಿಕಾ

ಮಧುರ ಕಾವ್ಯರೂಪಕ

ಕಣ್ಣ ಮುಂದೆ ಸುಳಿಯೆ ನೀನು

ಕಾಲದ ತೆರೆ ಸರಿದು ತಾನು

ಜನುಮ ಜನುಮ ಜ್ಞಾಪಕ.

ನಿನ್ನ ಬೊಗಸೆಗಣ್ಣಿಗೆ

ಸಮ ಯಾವುದೆ ಚೆನ್ನೆ ನಿನ್ನ

ಜಡೆ ಹರಡಿದ ಬೆನ್ನಿಗೆ ?

ನಿನ್ನ ಕನಸು ಬಾಳಿಗೆ

ಧೂಪದಂತೆ ಗಾಳಿಗೆ

ಬೀಸಿ ಬರಲು, ಜೀವ ಹಿಗ್ಗಿ

ವಶವಾಯಿತೆ ಧಾಳಿಗೆ.

ಮುಗಿಲ ಮಾಲೆ ನಭದಲಿ

ಹಾಲುಪಯಿರು ಹೊಲದಲಿ,

ರೂಪಿಸುತಿದೆ ನಿನ್ನ ಪ್ರೀತಿ

ಕವಿತೆಯೊಂದ ಎದೆಯಲಿ.

೫.ಯಾವುದೀ ಹೊಸ ಸಂಚು?

ಯಾವುದೀ ಹೊಸ ಸಂಚು

ಎದೆಯಂಚಿನಲಿ ಮಿಂಚಿ

ಮನಸು ಕನಸುಗಳನ್ನು ಕಲೆಸಿರುವುದು ?

ಗಿರಿಕಮರಿಯಾಳದಲಿ

ತೆವಳಿದ್ದ ಭಾವಗಳ

ಮುಗಿಲ ಮಂಚದೊಳಿಟ್ಟು ತೂಗುತಿಹುದು ?

ಸತ್ತ ಬಾಳಿಗೆ ಮತ್ತೆ ಅಮೃತವೆರೆದು

ಕತ್ತಲಾಳಗಳಲ್ಲಿ ದೀಪವುರಿದು,

ಬಾಳ ಕೊನೆಯೇರುತಿದೆ ಬೆಳಕಿನುತ್ಸವದಲ್ಲಿ

ಮೈಯ ಕಣಕಣದಲ್ಲು ಹಿಗ್ಗು ಉರಿದು.

ಹೇಗೆ ತಾಳಲಿ ಹೇಳೆ ಈ ಮಧುರ ಅನುಭವವ

ಕಲ್ಪವೃಕ್ಷ ಹಣ್ಣು ಹಿಳಿದ ರುಚಿಯ ?

ಹೇಗೆ ತಾಳಲಿ ಹೇಳೆ ಇಂಥ ಭಾವವೆ ನಾಳೆ

ಉಳಿಯದೆಯೆ ಸರಿದೀತು ಎಂಬ ವ್ಯಥೆಯ ?

೬.ತೊರೆದು ಹೋಗದಿರೊ ಜೋಗಿ.

ತೊರೆದು ಹೋಗದಿರೊ ಜೋಗಿ,

ಅಡಿಗೆರಗಿದ ಈ ದೀನಳ ಮರೆತು

ಸಾಗುವೆ ಏಕೆ ವಿರಾಗಿ?

ಪ್ರೇಮಹೋಮದ ಪರಿಮಳ ಪಥದಲಿ

ಸಲಿಸು ದೀಕ್ಷೆಯೆನಗೆ;

ನಿನ್ನ ವಿರಹದಲೆ ಉರಿದು ಹೋಗಲೂ

ಸಿದ್ಧಳಿರುವ ನನಗೆ.

ಹೂಡುವೆ ಗಂಧದ ಚಿತೆಯ

ನಡುವೆ ನಿಲುವೆ ನಾನೇ;

ಉರಿ ಸೋಕಿಸು ಪ್ರಭುವೇ ಚಿತೆಗೆ

ಪ್ರೀತಿಯಿಂದ ನೀನೇ.

ಉರಿದೂ ಉಳಿವೆನು ಬೂದಿಯಲಿ

ಲೇಪಿಸಿಕೋ ಅದ ಮೈಗೆ,

ಮೀರಾಪ್ರಭು ಗಿರಿಧರನೆ, ಜ್ಯೋತಿಯು

ಜ್ಯೋತಿಯ ಸೇರಲಿ ಹೀಗೆ.

೭.ಏಳುವುವು ಚಿಂತೆಗಳು.

ಏಳುವುವು ಚಿಂತೆಗಳು ಸುಖವ ಒಮ್ಮೆಗೆ ಹೂಳಿ

ಗಾಳಿ ಬೀಸಲು ಏಳುವಂತೆ ಧೂಳಿ,

ಕಣ್ಣೀರ ಮೇಘಗಳೆ ಸುರಿದು ಹೋದವು ಶೋಕ-

ವಾದ್ಯದಲಿ ಮಲ್ಹಾರ ಭಾವದಾಳಿ.

ಪ್ರೀತಿ ತೋಯಿಸಿತೆನ್ನ ಕರುಣೆಯಲ್ಲಿ

ನುಡಿಸಿ ವಿರಹವ ಹೃದಯವೀಣೆಯಲ್ಲಿ,

ನಿನ್ನ ನೆನಪಿನ ಅಲೆಯು ತಾಗಿದೊಡನೆ

ದನಿ ಹಬ್ಬುವುದು ಸುಖಕೆ ಇಂಪಿನಲ್ಲಿ

ಬಾನಿನಲ್ಲೇನೊ ಆತಂಕ ಮರೆಗೆ

ಕಣ್ಣೀರ ಸುರಿಸುತಿದೆ ಮುಗಿಲು ಅದಕೆ

ಕಾದಿರಲು ನಾ ದೀನ, ಮರದ ಕೆಳಗೆ

ಹಾರಿತೇ ಕೋಗಿಲೆ ಬೇರೆ ಮರಕೆ !

( ಆಧಾರ : ಲಾಲ್ ಮೆಹ್ತಾಬ್ ರಾಮ್ ಸಬಖತ್ ಅವರ ಒಂದು ಕವಿತೆ)

೮.ನಿನ್ನ ಗಾನದ ಸವಿಗೆ.

ನಿನ್ನ ಗಾನದ ಸವಿಗೆ

ನನ್ನೆದೆಯ ಬಾನಿನಲಿ

ಆಡುವುವು ಮುಸ್ಸಂಜೆ ಮುಗಿಲು;

ಹೊಂಬಿಸಿಲ ಕಾಂತಿಯಲಿ

ಹಾಯುವುವು ಹಕ್ಕಿಗಳು

ಬೆರೆಸುತ್ತ ಮುಗಿಲಲ್ಲಿ ನೆರಳು.

ಎದೆಯ ಗಾಯಗಳೆಲ್ಲ

ಉರಿಯಾರಿ ಮಾಯುವುವು,

ಹಾಯೆನಿಸಿ ತಂಪಾಗಿ ಜೀವ

ಕನಸುಗಳ ಆಕಾಶ-

ಗಂಗೆಯಲಿ ಮೀಯುವುದು

ಮರೆತು ಈ ಲೋಕದ ನೋವ.

ಭೋರೆಂದು ಸುರಿಯುವುವು

ಭಾವನೆಯ ಧಾರೆಗಳು

ತುಳುಕುವುದು ತಿಂಗಳಿನ ಕಾಂತಿ;

ತಾಯಿ ಮರಿಯನು ತಬ್ಬಿ

ಪ್ರೇಮ ಎಲ್ಲೆಡೆ ಹಬ್ಬಿ

ಹರಿವುದು ಅಲೌಕಿಕದ ಶಾಂತಿ.

೯.ಹಿಂದೆ ಹೇಗೆ ಚಿಮ್ಮುತಿತ್ತು!

ಹಿಂದೆ ಹೇಗೆ ಚಿಮ್ಮುತಿತ್ತು

ಕಣ್ಣ ತುಂಬ ಪ್ರೀತಿ !

ಈಗ ಯಾಕೆ ಜ್ವಲಿಸುತಿದೆ

ಏನೊ ಶಂಕೆ ಭೀತಿ !

ಜೇನು ಸುರುಯುತಿತ್ತು ನಿನ್ನ

ದನಿಯ ಧಾರೆಯಲ್ಲಿ,

ಕುದಿಯುತಿದೆ ಈಗ ವಿಷ

ಮಾತು ಮಾತಿನಲ್ಲಿ

ಒಂದು ಸಣ್ಣ ಮಾತಿನಿರಿತ

ತಾಳದಾಯ್ತೆ ಪ್ರೇಮ?

ಜೀವವೆರಡು ಕೂಡಿ ಉಂಡ

ಸ್ನೇಹವಾಯ್ತೆ ಹೋಮ?

ಹಮ್ಮು ಬೆಳೆದು ನಮ್ಮ ಬಾಳು

ಆಯ್ತು ಎರಡು ಸೀಳು,

ಕೂಡಿಕೊಳಲಿ ಮತ್ತೆ ಪ್ರೀತಿ

ತಬ್ಬಿಕೊಳಲಿ ತೋಳು.

೧೦.ನಿನ್ನ ಕನಸುಗಳಲ್ಲಿ ಮುಳುಗಿ ಹೋದೆನು.

ನಿನ್ನ ಕನಸುಗಳಲ್ಲಿ

ಮುಳುಗಿ ಹೋದೆನು ನಾನು

ಎತ್ತಿ ಕಾಪಾಡುವರು ಯಾರು ?

ಸವಿನೆನಪಿನಾಳದಲಿ

ಹುದುಗಿ ಹೋಗಿರುವೆನು

ಅಗೆದು ತೆಗೆಯುವರಿಲ್ಲವೇನು ?

ನಿನ್ನ ಬಯಕೆಯ ಗಾಳಿ ಹಾರಿಸಿತು ನನ್ನ

ಹಿಡಿದು ನಿಲ್ಲಿಸುವವರು ಯಾರು ?

ಕ್ರೂರ ವಿರಹಾಗ್ನಿಯಲಿ

ಬೇಯುತಲೆ ಇರುವೆ

ನೀರೆರೆದು ಉಳಿಸುವವರಾರು ?

ಬಾ ಚಿನ್ನ, ನೀ ನನ್ನ

ಪ್ರೀತಿಯಾಳಗಳಲ್ಲಿ

ಇಳಿದು ತಳಮುಟ್ಟು ನೋಡೋಣ ?

ಬಾ ಚಿನ್ನ, ನೀ ನನ್ನ

ಪ್ರೀತಿಗಿರಿ ಶಿಖರಗಳ

ತುದಿತನಕ ಹತ್ತು ನೋಡೋಣ ?

ಹಗೆ ತೋರುವಾತನಿಗೆ

ಶಿಕ್ಷೆ ನೀಡುವುದು ಸರಿ.

ಮನ ಮೆಚ್ಚಿ ಬಂದವನ ಹೀಗೆ

ವಿರಹದಲಿ ಕಾಯಿಸಿ

ನೋವಿನಲಿ ಹಾಯಿಸಿ

ದುಖಃದಲಿ ತೋಯಿಸಲು ಹೇಗೆ?

೧೧.ಹೇಳದಿದ್ದರೂ ನೀನು.

ಹೇಳದಿದ್ದರೂ ನೀನು

ಎಲ್ಲ ಬಲ್ಲೆನು ನಾನು

ಏನಿದೆ ಎಂದು ಎದೆಯಾಳದಲ್ಲಿ

ನಿನ್ನ ಕಣ್ಣಿನೊಳೇನೊ

ನೋವು ತೇಲುತ್ತಿಹುದು

ಕರಿಮೋಡ ಸುಳಿದಂತೆ ಬಾನಿನಲ್ಲಿ

ನೂರು ಹಳೆ ನೆನಪುಗಳು

ಚೀರಿ ಚಿಮ್ಮುತ್ತಲಿವೆ

ಮರೆವೆಯಲಿ ಹುಗಿದರೂ ಮೇಲಕ್ಕೆದ್ದು

ನಮ್ಮ ಮೇಲೆ ಏಕೆ

ವಿಧಿಗೆ ಈ ಬಗೆ ಜಿದ್ದು

ಬೆಂದವರ ಬೆನ್ನಿಗೇ ಗುದ್ದು?

ಬಾಗುವುದು ಏಗುವುದು

ಸಹನೆಯಲಿ ಸಾಗುವುದು

ಇಷ್ಟಕೇ ಮುಗಿಯಿತೆ ನಮ್ಮ ಬಾಳು

ಕಾಣಬಾರದ್ದೆಲ್ಲ

ಕಂಡರೂ ಕಹಿಬೇಡ

ಕನಸಿನಲಿ ಹುಗಿಯೋಣ ನಮ್ಮ ಗೋಳು

೧೨.ನಿನ್ನ ನೀತಿ ಅದಾವ ದೇವರಿಗೆ ಪ್ರೀತಿ.

ನಿನ್ನ ನೀತಿ ಅದಾವ ದೇವರಿಗೆ ಪ್ರೀತಿಯೋ!

ನೀನೆ ಸರಿ ಅನ್ನಬೇಕು

ಪ್ರೀತಿಗಾಗಿಯೆ ಎಲ್ಲ ತೆತ್ತ ಜೀವವ ಹೀಗೆ

ಆಡಿ ಕಾಡಿಸುವುದು ಸಾಕು.

ಏಕಾಂತವೆನ್ನುವುದೆ ಇಲ್ಲ ನನಗೀಗ

ಎದೆಯಲೆ ಬಿಡಾರ ಹೂಡಿರುವೆ:

ಶಾಂತಿ ನೆಮ್ಮದಿ ಈಗ ಯಾವ ಊರಾಚೆಗೋ

ನಿನ್ನದೇ ನಾಮಜಪ ನನಗೆ.

ನಿನ್ನ ಕಾಣುವ ಮುನ್ನ ಏನೆಲ್ಲ ಆಸೆಗಳು

ಏನೆಲ್ಲ ಕನಸಿತ್ತು ನನಗೆ:

ಎಲ್ಲ ತೀರಿತು ನಿನ್ನ ದ್ಯಾನವೊಂದೆ ಈಗ

ಕಿಚ್ಚಾಗಿ ಹಬ್ಬುತಿದೆ ಒಳಗೆ.

ಕಲ್ಲ ದೇವರ ಹಾಗೆ ನಿಲ್ಲಬಾರದು ಹೀಗೆ

ಕ್ರೂರವಾದರೆ ಹೇಗೆ ಚೆಲುವು?

ಶರಣಾದ ಜೀವಕ್ಕೆ ಮರುಗು ಸಂತೈಸದೇ

ದೂರವಾದರೆ ಹೇಗೆ ಒಲವು?

೧೩.ಹೇಗೆ ಬರಲಿ ಇನಿಯ ನಿನ್ನ ಬಳಿಗೆ.

ಧೋ ಎಂದು ಸುರಿಯುತಿದೆ ಭಾರಿ ಮಳೆ ಇಲ್ಲಿ

ಗಾಳಿ ಚೀರುತ್ತಲಿದೆ ಎಲ್ಲ ದಿಕ್ಕಲ್ಲಿ

ನಿನ್ನ ಬಿಟ್ಟಿರಲಾರೆ ಇಂಥ ಹೊತ್ತಲ್ಲಿ

ಹೇಗೆ ಬರಲಿ ನಿನ್ನ ಬಳಿಗೆ ಇನಿಯ?

ಕೇಳಬೇಕಿದೆ ನಿನ್ನ ಜೇನದನಿಯ.

ಇಂಗಿ ಹೋಯಿತು ಸಂಜೆ ಇರುಳ ಸೆರಗಲ್ಲಿ,

ಭಂಗಪಡುತಿವೆ ತಾರೆ ಮುಗಿಲ ಮರೆಯಲ್ಲಿ,

ನಿನ್ನ ಬಿಟ್ಟಿರಲಾರೆ ಇಂತ ಹೊತ್ತಲ್ಲಿ.

ಹೇಗೆ ತಲುಪಲಿ ಹೇಳು ನಿನ್ನ ಮನೆಯ?

ಹೇಗೆ ಸೇರಲಿ ಪ್ರೀತಿಪಥದ ಕೊನೆಯ?

ಹಳ್ಳ ಕೂಗುತ್ತಲಿದೆ ತುಂಬಿ ಮಳೆಯಲ್ಲಿ,

ಮನವೊ ಕುದಿಯುತ್ತಲಿದೆ ನಿನ್ನ ನೆನಪಲ್ಲಿ,

ನಿನ್ನ ಬಿಟ್ಟಿರಲಾರೆ ಇಂಥ ಹೊತ್ತಲ್ಲಿ.

ಹೇಗೆ ಬರಲಿ ಇನಿಯ ನಿನ್ನ ಬಳಿಗೆ?

ಕರಗಬೇಕೊ ನಿನ್ನ ಪ್ರೀತಿಯೊಳಗೆ!