ಇತರ ಕವನಗಳು

೧.ಅವಳ ಬೆತ್ತಲೆ ಕನಸು.

ಅವಳು ರಾತ್ರಿಯೆಲ್ಲ ದುಡಿದವಳು

ಬರುವ ಅವನಿಗಾಗಿ

ಮೈನೀಡಿ ಕಣ್ಣೀರಾಗುವಳು

ರಾತ್ರಿಯ ದುಡಿತದಲಿ ಪ್ರೀತಿಯ

ಕಡಲಪ್ಪಲು ಹಂಬಲಿಸುವಳು

ಸಂಜೆಗತ್ತಲಲಿ ಕಾಯುವಿಕೆ

ಕಣ್ಣಲ್ಲಿಕಾತರ

ರಾತ್ರಿಯಲ್ಲ ನರಳಾಟ

ನರನರಗಳ ಹುರಿಯಲ್ಲಿ ಚೀತ್ಕಾರ

ಆದರೂ, ಕಂಗಳಲಿ ಪಂಜಿನ

ಪ್ರತಾಪಗಳ ಮೊರೆತ

ಆ ರಾತ್ರಿಯಲಿ ಮೊರೆಯಿಡುವಳು

ಕಟ್ಟಿದ ಕನಸು ಮುಂಜಾವಿನಲಿ,

ಉಟ್ಟ ಸೀರೆಯಂತೆ ಕಳಚಿ

ಬೆತ್ತಲಾಗುತ್ತಿತ್ತು, ದಿನವೂ

ಸೋಲು ಜೋಲು ಮುಖ

ಮತ್ತೆ ಸಂಜೆಯಾಗುತ್ತಲೆ ಹುಡುಕಾಟ

ಅವಳದೊಂದೆ ಕನಸು

ಒಂದಗಲು ಸತಿಯಾಗಬೇಕು

ಆ ದಿನವೆಲ್ಲ ಪತಿವ್ರತೆಯಾಗಬೇಕು

ಅವಳ ಕನಸು ಸೀರೆಯುಡಬೇಕು

ರಾತ್ರಿಗಳ ಭೋರ್ಗರೆತದಲಿ

ಅವಳ ಕನಸು ಸೀರೆಯುಚ್ಚೀತಾ?

-ಆನಂದ ಪಾಟೀಲ.

ಕವನ ಸಂಕಲನ-ಕನ್ನಡಿಯಲ್ಲಿ ಕಂಡ ಮುಖ.

೨.ಸುಮ್ಮನಿರುವ ಪದಗಳು.

ಮನಃಸಾಕ್ಷಿಯ ಗೋಡೆಗಳನ್ನು ಅಳೆಯುತ್ತಿರುವ

ಒಬ್ಬ ಮನುಶ್ಯನನ್ನು ನೋಡಿದೆ

ಅವನ ಬೋಳೂತಲೆಯಂತೇ ಬಾಗಿದ

ಒಂದು ಪ್ರದೇಶದಲ್ಲಿ.(ಮನಃಸಾಕ್ಷಿಯ ಗೋಡೆಗಳು)

-----------------

ಒಂದು ಒಡೆದ ಗಾಜಿನ ಚೂರು

ಬಿಸಿಲ ಕಂಬಳಿ ಹೊದ್ದು

ಕಿಟಕಿ ಕಟ್ಟೆಯ ಮೇಲೆ

ಸದ್ದಿಲ್ಲದೆ ಸತ್ತು ಹೋಗಿತ್ತು. (ಬಿಂಬ ಪ್ರತಿಬಿಂಬ)

------------------

ಜ್ನಾನದಿಂದ ತೂಗಿದ ಅವನ ಕಣ್ಣುಗಳೂ

ಕಾಣದಂತೆ ಮುಚ್ಚಿ

ಅವುಗಳನ್ನು ಒಳಗೇ

ಭಾರವಾಗಿಸಿವೆ.(ಬೀಸುವ ಮರುಳು)

------------------

ಕತ್ತಲೆಯ ರಾಜ್ಯದಲ್ಲಿ ಒಬ್ಬ

ಬೆಳೆಕಿನಂಗಡಿಯನ್ನು ತೆರೆದ

ಆದರೆ ಜನ ಅಲ್ಲಿಗೆ ಬಂದು

ಬೆಳಕುಕೊಳ್ಳುವ ಮುಂಚೆಯೇ

ಹುಚ್ಚುದುಂಬಿಗಳು ಮುತ್ತಿ

ಅದನ್ನು ಕಾಣದಾಗಿಸಿದವು.

------------------

ನಾನು ಬಾಗಿಲು ಮುಚ್ಚಿ

ಕವಿತೆ ಬರೆಯಲು ಕುಳಿತುಕೊಂಡೆ

ಹೊರಗಡೆ ತಂಗಾಳಿ ಬೀಸುತಿತ್ತು

ಮತ್ತು ಸ್ವಲ್ಪ ಬೆಳಕಿತ್ತು

ಮಳೆಯಲ್ಲಿ ಸೈಕಲ್ಲೊಂದು ನಿಂತಿತ್ತು

ಒಂದು ಮಗು ಮನೆಗೆ ಹಿಂದಿರುಗುತಿತ್ತು.(ಹೊರಗಡೆ)

------------------

ಕೆಲವು ಪದಗಳು ಕಿರುಚುತ್ತದೆ

ಕೆಲವು ತಮ್ಮ ಬಟ್ಟೆ ಬಿಚ್ಚಿ

ಇತಿಹಾಸದೊಳಕ್ಕೆ ನುಗ್ಗುತ್ತವೆ

ಕೆಲವು ಸುಮ್ಮನಾಗುತ್ತವೆ.(ಪದಗಳು)

-ಜಯಂತ ಕಾಯ್ಕಿಣಿಯವರ ...ಚುಟುಕು ಸಾಲುಗಳು.

೩.ಯಾಕೋ ಅಕ್ಷರಗಳೆಲ್ಲ ಒದ್ದೆ.

ಪ್ರೀಯಾ

ನಮ್ಮ ಪ್ರೀತಿ

ಶಬ್ದಗಳ ಹಂಗಿಗೆ ಒಳಪಡಲಿಲ್ಲ...

ಸ್ಪರ್ಶದ ಹಂಬಲಕ್ಕೆ ಹಾತೊರೆಯಲಿಲ್ಲ...

ಆದರೂ, ನೀನು ಪ್ರತಿರಾತ್ರಿ

ನನ್ನ ಕನಸುಗಳ ದರಬಾರಿಗೆ

ಬರುವುದನ್ನ ತಡೆಯಲು

ಯಾರಿಂದಲೂ ಸಾಧ್ಯವಾಗಲಿಲ್ಲ.

ಈ ಬೆಳಗು

ಮೆಟ್ಟಿಲೇರುವಾಗ

ನಿನ್ನ ಧ್ಯಾನದಲ್ಲಿ ಕಾಲಿ ಜಾರಿ

ಮತ್ತೆ ಕಂಪಿಸಿದೆ...

ನಿನ್ನನ್ನು ಇಡಿಯಾಗಿ ಕ್ಷಣಕ್ಷಣವೂ ಪ್ರೀತಿಸಬೇಕೆಂದಿದ್ದೇನೆ

ಕಾಲನೂ ಸೋಲಬೇಕು ಹಾಗೆ

ಅವನ ನಿರ್ದಯಿ ಹೆಜ್ಜೆ

ನಮ್ಮ ಮನೆಯ ಬಾಗಿಲಿಗೆ ಬಂದರೆ

ನನ್ನ ಜೀವ ನಿನ್ನೊಳಗೆ

ನಿನ್ನ ಜೀವ ನನ್ನೊಳಗೆ ಇರುವುದ ಕಂಡು

ಕಾಲನೆ ಕಾಲು ಕಿತ್ತಬೇಕು ಹಾಗೆ.

-ಜಯಂತ ಕಾಯ್ಕಿಣಿ.

೪.ಕಣ್ಮುಚ್ಚಿ ಕಂಡ ಕವಿತೆ ನಕ್ಷತ್ರ.

ಜನ್ಮ ಜನ್ಮಾಂತರದ ಹಾಡು ಒಂದೆ ಹೂವಿನಲಿ

ಪರಿಮಳಿಸಿ, ಸಾವಿರದ ಮನಸಿನಂಗಳದಲ್ಲಿ

ತಿಂಗಳ ಬೆಳಕು ಹರಡಿ, ಚೆಲುವು ಒಲವಿಗೆ ಬಾಗಿ-

ಒಲುಮೆಯೇ ದೈವ ಬದುಕಿನ ದೀರ್ಘ ಪಯಣದಲಿ.

ದೂರದಲಿ ಕರೆವ ಸಂಧ್ಯಾರಾಗ ಕೈಮುಗಿದು

ಉದಯರಾಗದ ತೆರೆದ ಬಾಗಿಲಿನ ತೋರಣಕೆ

ಮಂಗಳವಾದ್ಯ ನುಡಿದು, ಹಕ್ಕಿಗೊರಳಿನ ಹರಕೆ

ಸಂದಿದೆ. ಮೌನದಲಿ ಮಾತ ಹುಡುಕುತ್ತ ಹೊರಟು

ಕಣ್ಮುಚ್ಚಿ ಕಂಡ ಕವಿತೆ ನೆಲಕಿಳಿದ ನಕ್ಷತ್ರ.

ಆಕಾಶಗಂಗೆಯಲಿ ಮಿಂದು, ಕುಂಕುಮ ಭೂಮಿ-

ಚಿನ್ನದದಿರನು ತೆರೆದು, ಹಸುರಿನಲಿ ಹೊರಹೊಮ್ಮಿ

ಬೆಳಗಾದ ಮೇಲೆಯೂ ಬೆಳಗ ಕಂಡ ವಿಚಿತ್ರ.

ದಾರಿಯಲಿ ಹಂಚಿದ ಬುತ್ತಿ ಸಂಸಾರ ಸಾರ.

ನೆಲಕೆ ಭಾರವೆ ಸ್ವಾಮಿ, ಆ ಮಿಗಿಲಿಗಾಧಾರ.

-ಚೆನ್ನವೀರ ಕಣವಿ.