ಅಕ್ಷರ ಹೊಸ ಕಾವ್ಯ.

೧.ಅ ಆ ಮತ್ತು....

ಕಣ್ಣು ಬಿಟ್ಟು ನಾನು ಕೈಕಾಲು ಆಡಿಸಿದಾಗ

ಕತ್ತಲೆ ಗೂಡಿನ ಅವ್ವನ ಕಣ್ಣೊಳಗೆ

ಒಲೆ ಉರಿಯುತ್ತಿತ್ತು

ಕಪ್ಪು ಕೈಕಾಲುಗಳ ಬೆಂಕಿಗೆ ಒಪ್ಪಿಸಿ ಕಾಯುತ್ತಾ

ಅಪ್ಪ ಮೋಟು ಬೀಡಿಯೊಂದಿಗೆ ಉಸಿರಾಡಿದ

ಕುದಿವ ಗಂಜಿಗೆ ಜೀವಗಳು ಕುದಿಯುತ್ತಿದ್ದವು

ಅವ್ವನ ಎದೆ ಗೂಡೊಳಗೆ

ತೆವಳಿ ನಿಂತು ನಡೆದಾಡಿದ ಹೆಜ್ಜೆಗಳು

ಇಸ್ಕೋಲು ಗೋಡೆಗಳ ನಡುವೆ ನಿಂತೇ ಬಿಟ್ಟಾಗ

ಕರಿ ಕೆನ್ನೆಯ ಮೇಲೆ ಹುರಿಗೊಂಡಿದ್ದ ಅಪ್ಪನ ಮೀಸೆ

ನಾಮದ ಮೇಸ್ಟರ ಕಾಲಿಗೆ ಬಿದ್ದು ನೆಲ ನೋಡಿತು.

ಕತ್ತಲೆ ಬೋರ್ಡಿನ ಮೇಲೆ ಕಲಿತ ಅ ಆ

ಅಕ್ಷರಗಳ ನಡುವೆ ಅವ್ವ ಅಪ್ಪನ ಅಶೆಗಳು ಸಿಕ್ಕಿದುವು

ನಮ್ಮೂರ ಕೇರಿ ಸಮಾಧಿಗಳು ಸಿಕ್ಕಿದುವು

ಅಸ್ಥಿ ಪಂಜರಗಳ ಪಾತಾಲದಲ್ಲಿ

ಒಂದಿಷ್ಟು ಮಾತುಗಳು ಸಿಕ್ಕಿದುವು

ಹುಡುಕುತ್ತಾ ಹುಡುಕುತ್ತಾ

ಕೆಳಕ್ಕೆ ಇಳಿದಾಗ ಎದ್ದ ಪ್ರಶ್ನೆಗಳಿಗೆ

ಕಾಕಿ ಡ್ರೇಸ್ಸಿನ ಕೈಕಾಲುಗಳು ಮೂಡಿ

ಮೀಸೆ ಬೆಳೆದು ಅಡರಿಸಿಕೊಂಡು

ಕತ್ತಲಲ್ಲಿ ಕಾಣದಾದೆ

ಆದರೆ

ಪಿತ್ರಾರ್ಜಿತ ಗುಡಿಸಲ ಹರಕು ಗೋಡೆಯ ಮೇಲೆ

ಅ ಆ ಮೂಡಿಸಿದಾಗ ಅಂದು

ಅವ್ವ ಕೊಟ್ಟ ಮುತ್ತುಗಳು ಕೆನ್ನೆ ಮೇಲೆ ಇನ್ನೂ ಇವೆ

ಅಪ್ಪ ಕೊಟ್ಟ ತೂತು ಕಾಸು ಉಡುದಾರದಲ್ಲಿ ಹಾಗೇ ಇದೆ.

- ಎಚ್ ಗೋವಿಂದಯ್ಯ.

೨.ಬೋಳುಮರ

ತಿಳಿಬೂದಿ ಮುಗಿಲಿನಲಿ ಆಗೊಮ್ಮೆ ಈಗೊಮ್ಮೆ

ತಿಳಿಗಪ್ಪು ಮೋಡಗಳ ತೆವಳುನಡೆ.

ತಿಳಿಹಸಿರ ಸೆರಗಿನಲಿ ಆ ಮೋಡಗಳ ನೆರಳ-

ಗಂಟುಗಳ ಕಟ್ಟಿ ಕಟ್ಟಿಡುವ ಭೂಮಿ.

ಭೂಮಿಯಾಳಕೆ ಕಾಲನಿಳಿಬಿಟ್ಟು ಮುಗಿಲೆಡೆಗೆ

ಬೆರಳ ಚಾಚುತ ನಿಂತ ಬೋಳುಮರ.

ಹಳ್ಳ- ಹೊಳೆ ತುಂಬಿರುವ ದೇಶದ ನಕಾಶವನು

ಹಳೆಯ ಗೋಡೆಗೆ ತೂಗು ಬಿಟ್ಟ ತೆರೆ.

ಮಳೆಯ ತುಂತುರು ಹನಿಗೆ ಮೈ ಒದ್ದೆಯಾದಾಗ

ಕೊಸದಾಗಿ ಹೊಸ ಅರಿವೆಯುಟ್ಟ ನೆನಪು

ಗಾಳಿ ಮೆಲ್ಲಗೆ ಬಂತು ಹೇಗಿರುವೆ ಎಂದಾಗ

ಮೈತುಂಬ ಹೂಗಳನೆ ಮುಡಿದ ನೆನಪು

ತುತ್ತಾನು ತುದಿಯಲ್ಲಿ ಪುಟ್ಟ ಹಕ್ಕಿಗಳೆರಡು

ಕುಳಿತಾಗ, ನೆತ್ತರವೆ ಹಾಡಿದಂತೆ.

ಹೊಸ ಜೋಡಿಯೊಂದು ಆ ಹಂಪೆಯಲ್ಲಿ ಸುಳಿದಾಗ

ತುಂಗಭದ್ರೆಯ ಸೆಳವು ಹೆಚ್ಚಿದಂತೆ.

ಹಕ್ಕಿ ಹೋಗಲು ಮತ್ತೆ ಒಣಒಣ ಭಣಭಣ.

ಗಾಯವನು ಕುಕ್ಕಿ ಹೋದಂತೆ ನೋವು.

ಮತ್ತೆ ಹಕ್ಕಳೆಗಟ್ಟಿ, ಒರಟುಗಾಳಿಯು ಅದರ

ಮೇಲಷ್ಟು ಹರಿದರೆ, ಅಷ್ಟೆ ನಲಿವು.

- ಚಂದ್ರಶೇಖರ ಪಾಟೀಲ.

೩.ನಾಟಕ

ನಾಟಕದ ಮರುದಿನ ಕಿವಿಯಲ್ಲಿ ತುಸು ಬಣ್ಣ

ಇರುತ್ತದೆ ಕಣ್ಣಲ್ಲಿ ನಿದ್ದೆ.

ಒದ್ದೆ ಕನಸುಗಳೆಲ್ಲ ಹಗಲಿಗೆ ವರ್ಗಾಯಿಸಲ್ಪಟ್ಟು

ಸೂರ್ಯಾಸ್ತಕ್ಕೆ ಕೆಲವೇ ಕ್ಷಣ ಮುನ್ನ

ಸೂರ್ಯೋದಯದ ರೋಮಾಂಚ. ಎಲ್ಲೋ

ಕಟ್ಟಿದ ಮೋಡಕ್ಕೆ ಇಲ್ಲಿ ಮಬ್ಬು ಮಳೆ ಇಬ್ಬನಿ

ಹೀಗೆ ಹವಮಾನ ಕೈಯಾಚೆ ನಡೆದು ಜಗತ್ತು

ಮುಂದುವರೆಯುತ್ತದೆ ಅಥವಾ ಹಿಂದೆ ಬೀಳುತ್ತದೆ.

ನಾಟಕದ ನಂತರವೇ ಇವೆಲ್ಲ.

ಪ್ರೇಮದ ನಂತರ ಅನ್ನುವ ಹಾಗಿಲ್ಲ

ಹುಟ್ಟಿನ ನಂತರ ಅನ್ನುವ ಹಾಗಿಲ್ಲ. ನಾಟಕದ

ನಂತರ ಅನ್ನಬಹುದು- ಏಕೆಂದರೆ ನಾಟಕ

ಮರುದಿನ ಕಿವಿಯಲ್ಲಿ ತುಸು ಬಣ್ಣ ಇದ್ದದ್ದೆ.

ಕಣ್ಣಲ್ಲಿ ನಿದ್ದೆ.

ಹಾಗೆ ನೋಡಿದರೆ ನಾಟಕದ ಮೊದಲು

ಏನಿತ್ತು? ಇದು ತೋಟದ ಮೊದಲು ಏನಿತ್ತು

ಅಂದ ಹಾಗಲ್ಲ. ಅಥವಾ ಸಂಭೋಗದ ಮೊದಲು

ಏನಿತ್ತು ಅಂದ ಹಾಗಲ್ಲ. ಇದು ಸೂರ್ಯೋದಯದ

ಮೊದಲು ಏನಿತ್ತು ಅನ್ನಲು ಹೋಗಿ ಬೆಳಕಿಗೆ

ಅವಾಕ್ಕಾದಂತೆ ಕಿರಣಗಳನ್ನು ನೀರಲ್ಲಿ ಹಿಡಿಯ

ಹೋಗಿ ಮೀನಿಗೆ ಮರಳಾದಂತೆ.

ವಿನಾಕಾರಣ ಅಂಗೈ ಮೇಲಿನ ಗಾಯ

ಮಾಯತೊಡಗಿದಂತೆ. ಏಕೆಂದರೆ ನಾಟಕದ ಮೊದಲು

ನಾಟಕವೇ ಇರಲಿಲ್ಲ. ಬೆಟ್ಟ ಇತ್ತು ನೀರಿತ್ತು ಮೀನಿತ್ತು

ನಾಟಕವೇ ಇರಲಿಲ್ಲ. ಗಾಯವಿತ್ತು ಮಣ್ಣಿತ್ತು ಕಣ್ಣಿತ್ತು

ನಾಟಕವೇ ಇರಲಿಲ್ಲ.

- ಜಯಂತ ಕಾಯ್ಕಿಣಿ.

೪.ನೋಡಬಾರದು ಚೀಲದೊಳಗನು

ವ್ಯಾನಿಟಿ ಬ್ಯಾಗಿನಲಿ ಕೈ ಹಾಕಿ ನೋಡುವುದು

ಎಂದಿಗೂ ಉಚಿತವಲ್ಲ ಪುರುಷರೇ

ವ್ಯಾನಿಟಿ ಹೆಸರಲ್ಲಿ ಏನೆಲ್ಲ ಇರಬಹುದು

ಬಯಲು ಮಾಡುವೇ?

ಒಂದು ಕನ್ನಡಿ ಹಣೆಗೆ ಕಾಡಿಗೆ ಕರಡಿಗೆ

ಪೆನ್ನು ಪೌಡರು ಕ್ಲಿಪ್ಪು ಸೆಂಟು

ಬಿಳಿ ಹಾಳೆ ಮತ್ತು ನೂಲುಂಡೆ ಇರಬಹುದು

ಗುಂಡಿ, ಸೂಜಿ ಮತ್ತು ಅಡಿಕೆ ಹೋಳೂ.

ಇರಬಹುದು ಹುಣಸೆ ಬೀಜಗಳೂ!

ವ್ಯಾನಿಟಿ ಬ್ಯಾಗಿನಲಿ ಬಟಾವಣಿಯೇ ಇರಬೇಕೆಂದು

ಉಂಟೇ ಯಾರ ರೂಲು?

ಇದ್ದೀತು ಶುಂಠಿ ಪೆಪ್ಪರಮಿಂಟೂ, ಕಂಫಿಟ್ಟೂ.

ಒಣಗಿ ರೂಹುಗಳಾದ ಎಲೆ- ಹೂಗಳಿರಬಹುದು

ಇರಬಹುದು ಯಾರದೋ ಮನೆ ದಾರಿ ನಕ್ಷೆ

ಮರದ ಮುಚ್ಚಿಗೆಯಡಿಯ ಕೆಂಪು ನೆಲದ ತಂಪು

ತೇದಷ್ಟೂ ಸವೆಯದಾ ನೆನಪು

ಟಿಕ್ಕಿ ಎಲೆ ಪರಿಮಳ

ಮರಿ ಇಡುವ ನವಿಲುಗರಿ

ಕಾಪಿಟ್ಟಿರಬಹುದು ಪುಟ್ಟ ದಿನಗಳನ್ನು

ಇರಬಹುದು ಎಲ್ಲಿನದೋ ಮರುಳು- ಮಣ್ಣು.

ಅರೆ ಬರೆದಿಟ್ಟ ಕವನ ತೆವಳುತ್ತಲಿರಬಹುದು

ಮುಗಿಯಲಾರದ ಕತ್ತಲಲ್ಲಿ

ಒಂದು ಬಿಸುಸುಯ್ಯಲು ಕರವಸ್ತ್ರದಲಿ ಅಡಗಿ

ಗುಸುಗುಟ್ಟುತಿರಬಹುದು ಗಂಟಲಲ್ಲೇ

ವಿಳಾಸ ಹೊತ್ತಿರುವ ಖಾಲಿ ಲಕೋಟೆಯಲಿ

ಕೆಂಪು ಸೂರ್ಯನ ಚಿತ್ರ ಮಾತ್ರವಿರಬಹುದು

ಬಂದ ಪತ್ರದ ಉಸಿರು ಒಗಟಾಗಿ ಇರಬಹುದು

ಚಂದದಕ್ಷರದ ಬಂಧದಲ್ಲಿ

ಚಂದದಕ್ಷರ ಸುತ್ತ ನತ್ತು ಮುತ್ತಿನ ಚಿತ್ತು

ಉತ್ಕಂಠ ರಾಗದ ಮುಟ್ಟು ಇರಬಹುದು

ಕರಿಮೀಸೆಯಡಿಯಲ್ಲಿ ಮಿರಿಮಿಂಚು ನಗೆಯಲ್ಲಿ

ಹೆಸರಿಲ್ಲ ಫೋಟೋ ಕೂಡ ಇರಬಹುದು!

ಬಾಲ್ಯಯೌವನ ವೃದ್ಧಾಪ್ಯ ನೆರಳುಗಳು

ಸೇರಿಕೊಂಡಿರಬಹುದು ಆ ಕೋಶದಲ್ಲಿ

ಗಾರ್ಹಸ್ಥ ವೇಶ್ಯಾ ಅಭಿಸಾರ ವಾಸನೆಗಳು

ಧರ್ಮ ಲಕ್ಷಣ ಅವಸ್ಥಾಂತರ ವೇಷದಲ್ಲಿ

ಒಂದಕೊಂದಕೆ ಅರ್ಥಾರ್ಥವಿಲ್ಲದೆಯೂ

ಇಲ್ಲವೇ ಹಲವು ಜೊತೆಗಳು?

ಹಾಗೆಯೇ ಈ ಚೀಲದೊಳಗಿನ ಲೋಕಗಳು!

ಚೀಲದೊಳಗಿನ ಲೋಕ ಮತ್ತು ಮನಸಿನ ಲೋಕ

ಒಂದೇ ಎಂದೀಗ ತೂಗಿ ನೋಡುವಿರೇನು?

ಬೆಪ್ಪು ಕಾಪುರುಷರೇ

ವ್ಯರ್ಥ ಕೈ ನೋವೇಕೆ?

ತೂಗಲಾರಿರಿ ತಪ್ಪು ಸಮೀಕರಣವನು.

ಮನಸಿನೊಳಗಡೆ ಎಂದೂ

ಇಣುಕಲಾರಿರಿ ನೀವು, ಹುಡುಕಿ

ತೆಗೆಯಲಾರಿರಿ ಏನನೂ

ಇಣುಕಲಾದರೂ ಹಾಗೆ ಮಾಡಲಾಗದು ನೀವು

ಚೀಲದೊಳಗಿನ ತಿರುಳನು

ಹುಡುಕಿ ತೆಗೆಯಲಾದರೂ ಹಾಗೆ

ಮಾಡಲಾಗದು ನೀವು

ನೋಡಬಾರದು ಚೀಲದೊಳಗನು.

- ವೈದೇಹಿ.

೫.ನೀನು

ಕತ್ತಲೆಯ ನಾಚಿಸುವ ಮಿರುಗು ಕೂದಲ ನುಣುವು, ಮೃಗದ ಮೇಗಾಳಿ;

ಬಳುಕಿ ಬಾಗಾಡಿ ಅಕ್ಕರೆಯ ಧಗಧಗದ ಆಹ್ವಾನ

ಮತ್ತೇರಿಸಿ ಮರುಕ್ಷಣವೆ ದಾಳಿ.

ನೀ ಕೊಡುವ ಚಪ್ಪಾಳೆಯಿಕ್ಕಿ ಕರೆವ ಮೋಹಕ ಮುತ್ತು

ಎಲ್ಲವನ್ನೂ ಹೀರಿ ಜಿಗಿದ ಕಬ್ಬನ್ನುಗಿವ ನಿನ್ನ ಸವಲತ್ತು.

ಮೈವೆತ್ತ ವೈಭವದ ನಾಶಕಾರಕ ಸೊಬಗು

ಸೂಸುತಿಹ ಗಂಧಗಳೆ ಸಿರಿವಂತಿಕೆ;

ಕೆರಳಿಸುವ ಕೋಮಲ ಗೋಣಿನಿಳಿಜಾರು,

ನಳಿದೋಳು, ಬಿಳಿಮಡಿಲ ಎದುರುಂಟೆ ಮಡಿವಂತಿಕೆ?

ಕಾಡುವ ತೂಗಾಡಿ ನಿಲ್ಲುವ, ಪರಿಮಳದ ಸೆಳವು.

ಮೆತ್ತನ್ನ ಬಾಗು ಕಂಡೆಡೆಯಲ್ಲಿ ಜಾರು ಬಂಡೆಯ ಕಣ್ಣು

ಏರಿಳಿದು ಬಳಲಿ ಕುಸಿಯುವುದುಂಟು ನಿನ್ನ ಅಡಿಗೆ.

ಮುಗುದೆ ಎಂಬರೆ ನಿನ್ನ

ನನ್ನ ಕೈಗೊಂಬೆ ಮಾಡಿರುವ ರಂಭೆ;

ನೀನು ಸುಗ್ಗಿಸಾರವೆ ಸೊಕ್ಕಿ ಹೊರಹೊಮ್ಮಿರುವ ಉದ್ರಿಕ್ತ ಪುಷ್ಪಗಳ ರೆಂಬೆ.

- ಸುಮತೀಂದ್ರ ನಾಡಿಗ.