ಸಂಜೆ ಹಾಡು.

೧.ಸಂಜೆ ಪಯಣ.

ಸಂಜೆ ಬೆಳಕಿನ ನಡುವೆ ಒಂಟಿ ದೀಪವ ಹಿಡಿದು

ನಾನು ಹೊರಟಿದ್ದೆನೆ ನಿನ್ನ ಮನೆಗೆ;

ದೊರ ಪಯಣ ನೋವು ನನ್ನನಾವರಿಸಿಹುದು

ಗವಿಯ ಇನ್ನೋಂದು ಮುಖ ಕಾಣಲಿಲ್ಲ.

ಅದರಾಚೆಗೊಂದು ಉದ್ಯಾನವಿಹುದೆನ್ನುವರು

ಪನ್ನೀರ ಚಿಲುಮೆಗಳ ಬಳಸಿನಲ್ಲಿ;

ಹೆಜ್ಜೆಯಿಕ್ಕಿದೆ ನಾನು ಬರಿದೆ ಗೋಳಡುವೆನು

ಬೆಳ್ಳಿ ಬೆಳಕನು ಕಾಣುವಾಸೆಯಿಂದ.

ಒಣಮರದ ಮೇಲೊಂದು ಕಪ್ಪು ಹಕ್ಕಿಯು ಕುಳಿತು

ಹಳೆಯ ಹಾಡನು ಮತ್ತೆ ತೆರೆಯುತಿಹುದು;

ಪಯಣವನು ನಿಲ್ಲಿಸಲು ಐದಾರು ಸಲ ನಾನು

ಗುಹೆಯ ನಡುವಣ ಹಾದಿಯಲ್ಲಿ ನಿಂತೆ.

ಇನ್ನೊಂದು ಜೀವ ಕೈ ಹಿಡಿದು ಜೊತೆಗೊ ಬಂದು

ಬೆಳಕ ತೋರುವೆನೆಂದು ಹೇಳುತಿಹುದು;

ಹೊರ ಬಂದೆ, ಮಳೆಬಿಲ್ಲ ಕಂಡೆ ಬಲುದೂರದಲಿ

ಈ ಲೋಕ ಹೀಗೆಯೇ ಎಂದುಕೊಂಡೆ.

೨.ಕಾಯುವೆನು ಅವರಿಗಾಗಿ.

ನಕ್ಕ ನಿಮಿಷಗಳಿಂದ ನಾನು ಮೌನಕೆ ಬಂದೆ,

ದೂರ ದೂರದ ಕನಸ ತುಂಬಿಕೊಂಡು;

ಯಾರೊ ಬಂದರು ಎಂದು ನನಗಿವಳು ಹೇಳೀದಳು,

ಮುತ್ತುಸಂಜೆಯ ಕಡೆಯ ನಿಮಿಷದಲ್ಲಿ.

ಯಾರು ಬಂದರು ಎಂದು ನನಗೆ ಹೊಳೆಯುತ್ತಿಲ್ಲ,

ಇವಳು ನಕ್ಕಳು ನನ್ನ ಕಡೆಗೆ ನೋಡಿ;

ನನ್ನನ್ನು ಬಲ್ಲ ಜನ ನನಗುಂಟು ಊರಿನಲಿ,

ತಿಳಿದಿಲ್ಲ ನನಗವರ ಇಂಗಿತಗಳು.

ಬಂದವರು ನನ್ನವರು ಎಂದು ತಿಳೀದಿದ್ದೇನೆ,

ದೂರದಲಿ ಹಲವು ದನಿ ಕಿವಿಗೆ ಬಿತ್ತು;

ಅವರು ಯಾರೇ ಇರಲಿ, ಅವರಿಗೊಳಿತನು ಬಯಸಿ,

ಕಾಯುವೆನು ಇದ್ದಲ್ಲೆ ಅವರಿಗಾಗಿ.

೩.ಬದುಕು ಮತ್ತು ಹಾಡು.

ಎಲ್ಲಿ ಕತ್ತಲೆಯಿತ್ತೊ ಅಲ್ಲಿ ತನ್ನಿರಿ ಬೆಳಕ

ಹಸಿದ ಹೊಟ್ಟೆಯ ಮೇಲೆ ಬೆಳ್ದಿಂಗಳನು ಚೆಲ್ಲಿ

ಮುಂಬರಿವ ನಮಗೆ ಶುಭವನ್ನು ತರಲಿ;

ಮಲಗಿದರೆ ಕನಸು, ಎದ್ದರೆ ಪಯಣ : ಹೀಗಿದೆ ಬದುಕು

ಹಾದಿಯುದ್ದಕು ಹೂವ ಚಲ್ಲುತಿರಲಿ.

ತುಟಿ ಒಣದವರ ಹಾಡನ್ನು ಕೇಳುವಿರೇನು ?

ಆದರೂ ಹಾಡು ಬರುವುದು ಸಂಜೆಯೊಳಗಾಗಿ

ಕನಸಿನ ಪರಂಪರೆಯ ನೆಯ್ದು ;

ಹಾದಿಬೀದಿಗಳಲ್ಲಿ ಬತ್ತಲೆ ಮಗು ಅತ್ತು

ಸಂಜೆಯಾಯಿತು ಎಂಬ ಚಿಂತನೆಯಲಿ.

ಕೆರೆ ಬತ್ತಿದಾಗ ಕಣ್ಣಲ್ಲಿ ನೀರು ಬರುವುದು

ರೊಕ್ಕವನು ಕೊಟ್ಟು ಕೊಳ್ಳುವ ಸರಕೆ ಸಂತೋಷ ?

ಸಂಗೀತಕ್ಕೆ ಬೇಕು ಶ್ರುತಿ, ಲಯ, ಆಲಾಪನೆ

ಹಸಿವ ಹಾಡುವುದೆಂತು, ತಾಳವೆಲ್ಲಿವೆ ಅದಕೆ ?

ಬೀದಿ ದೀಪದ ಕೆಳಗೆ ಸತ್ತ ನಾಯಿಯ ಸುತ್ತ

ಹತ್ತಾರು ಮಕ್ಕಳು ಮರಿ ;

ಬೀದಿನಲ್ಲಿಯ ತುಟಿಗೆ ಭೃಂಗ ಮುತ್ತಿಕ್ಕುವುದು.

ಕುಡಿವ ನೀರಿಗೆ ಸಹಿತ ಕಷ್ಟವಾಗಿರುವಾಗ

ಯಾವ ರಾಗದಿ ಹಾಡಿದರೆ ಕೊಡ ತುಂಬುವುದು ?

ಬಾಯಿ ತುಂಬುವ ತನಕ ಹಾಡು ತುಂಬುವುದಿಲ್ಲ.

ದೇಗುಲ ಬಾಗಿಲಲಿ ಮಂತ್ರಾಕ್ಷತೆಯ ಚೆಲ್ಲಿ

ಹೊರಟು ಹೋಗಿದ್ದಾರೆ ನಂಬುವ ಜನ;

ಧಾತು - ಈಶ್ವರಗಳಲಿ ಕ್ಷಾಮ ಬಂದಿತ್ತೆಂದು

ಅಜ್ಜಯ್ಯ ಹಾಡುವನು ಮರಿಮಗನಿಗೆ.

ಈಗ ಎಲ್ಲೆಲ್ಲು ಹಾಹಾಕಾರವೆದ್ದಿಹುದು,

ಈ ಅಶಾಂತಿಯೇ ನಿಮಗೆ ಎಲ್ಲ ಹಾಡು.

ಯಾವ ಹಾಡನು ನೀವು ಕೇಳಬಯಸುತ್ತೀರಿ,

ಹಾಡು ಕೇಳುವುದಷ್ಟೆ ಸಂತೋಷವೆ ?

ಹಾಡು, ಗೋಡೆಗೆ ಒರಗು, ಕಣ್ಣು ಮುಚ್ಚಿಕೊ

ಆಗ ಬರುವುದು ಬುದ್ದಿ!

ಕೆಲವರಿಗೆ ಹಾಡು ಬೇಕಂತೆ, ಕೇಳದ ಒಡನೆ

ನಿದ್ದೆ ಬರಬೇಕಂತೆ! ಅದು ಎಲ್ಲಿ ಸಿಕ್ಕುವುದು ?

ಬಾಂದಳದ ತನಕ ಕ್ಯೂ ಬೆಳೆದಿರುವುದು,

ತಂತಿಗಳ ಕಿತ್ತ ತಂಬೂರಿಯಾಯಿತು ಹಾಡು!

ನೊಂದ ಜೀವಕ್ಕೆ ಬೇಕಾದ್ದು ಸಿರಿಹಾಡು. ಇಂಪಾದ ಹಾಡು

ಚೆಲುವು ಸೂಸುವ ಹಾಡು, ಭಾವಪೂರ್ಣ ಹಾಡು;

ದುರ್ಭಿಕ್ಷದಲಿ ನಾವದನು ಪಡೆಯುವುದು ಹೇಗೆ ?

ಯಾರೊ ಅತ್ತಂತಾಯ್ತು ಹಾಡು ಮುಗಿದು.

೪.ಆಹ್ವಾನ.

ಹೂವ ಚೆಲ್ಲಿದ ಹಾದಿಯಲ್ಲಿ ನಾನಿದ್ದೇನೆ

ಸಂಪಿಗೆಯ ನರುಗಂಪು ಅರಳುತಿಹುದು ;

ಹಳೆಯ ನೆನೆಪುಗಳಲ್ಲಿ ಚೆಲುವ ಕಂಡಿದ್ದೇನೆ

ಹೂವ ಮೇಗಣ ಗಾಳಿ ಬೀಸುತಿಹುದು.

ವರುಷ ಕಳೆದರೆ ವರುಷ ಹೊಸ ದನಿಯ ಪುಟಗಳಲಿ

ನಲಿವು ತೆರೆಯುತ್ತಿಹುದು ಪ್ರೀತಿಯಿಂದ ;

ಮಾಘ ಮಾಸದ ಸಂಜೆ ನೀನು ಸಿಕ್ಕಿದ್ದೀಯೆ

ಹೊಸತು ಏನಾದರೂ ಬೇಕೆನ್ನುವೆ.

ನನ್ನ ಕನ್ನಡಿ ಹಳತು, ಮುಖ ಹೊಸತು, ಓ ಗೆಳೆಯ

ನೀನು ಬಂದಿದ್ದೀಗ ಸರಿಹೋಯಿತು ;

ಚಿತ್ರ ಮರುಕೊಳಿಸುವುದು, ಚೆಲುವು ಸರಿವುದು ಬಲಕೆ

ಗೆಲವು ಬಾವುಟವೆತ್ತಿ ಕಾಯುವುದು.

ಹೊಸ ಕಾಣ್ಕೆ, ಹೊಸ ಕಣ್ಣು ಕೈ ಬೀಸಿ ಕರೆಯುತಿದೆ

ಸಂಗೀತ ಹರಿಯುತಿದೆ ಕಣೆವೆಯಲ್ಲಿ;

ಕೆಲವು ಹಾಡುಗಳಂತು ಕಣ್ಣೀರ ಸುರಿಸುತ್ತ

ಮುಂದೆ ನಡೆವುವು ಮುತ್ತುಸಂಜೆಯಲ್ಲಿ.

ಬಾ ಗೆಳೆಯ, ಗೋಧೂಳಿಯಲ್ಲಿ ಚಾಟಿಯನೆಸೆದು

ನೋವು ನಲಿವುಗಳನ್ನು ನೆನೆಯುತ್ತ ಬಾ;

ಹಳತು ಹೊಸತಾಗುವುದು ನಮ್ಮೂರ ಬೀದಿಯಲಿ,

ನಕ್ಷತ್ರಗಳ ಕೆಳಗೆ ದಾರಿ ಸುಗಮ.

೫.ಕೈಮರದ ಬಳಿ.

ಕೆಲವು ಹೂ ರಾತ್ರಿಯಲ್ಲರಳಿ ಕಂಪನು ಬೀರಿ ನೆಲಕೆ ಬೀಳುವುವು;

ಮುಂಬೆಳಗಿನಲ್ಲಿ ಹಕ್ಕಿಯ ಹಾಡು ಪರಿಮಳಿಸಿ ಮುಗಿದು ಬಿಡುವುದು;

ಕೆಲವು ಮಕ್ಕಳು ಉಂಡೊ ಉಣ್ಣದೆಯೊ ಹೋಗುವುವು ತಂತಮ್ಮ ಶಾಲೆಗಳಿಗೆ;

ಬಸಿರಿ ಭಾವಿಗೆ ಬಂದು ಬಿಂದಿಗೆಯ ನೂಕುವಳು ತಳದ ನೀರಿಗೆ;

ಅಂಗಡಿಯ ತೆರೆದು ಧೂಳನು ಹೊಡೆದು ಕೂರುವರು ನಮ್ಮೂರ ವರ್ತಕರು;

ಊರ ದೇಗುಲದಲ್ಲಿ ಕೇಳಿ ಬರುವುದು ಭಜನೆ, ಅಜ್ನಾತ ಸಂಗೀತ;

ಚೈತ್ರಚಿತ್ರೋದಯದ ಗುಂಗಿನಲಿ ನಾನಿದ್ದು ಹೂವಿನಂತಹ ಮಾತು ಬಿಡಿಸುವೆನು ಪ್ರೀತಿಯಲಿ.

ಎಲ್ಲದರ ಆಚೆಗಿನ್ನೊಂದಿಹುದು ಎನ್ನುವರು ಎಲ್ಲತಿಳಿದವರು, ಜೊತೆಗೂ ಬರುವ ಸ್ನೇಹಿತರು;

ನೀರು ತಿಳಿಯುವ ತನಕ ಕಾದು ನಿಲ್ಲುವುದಷ್ಟೆ ನಮ್ಮ ಕರ್ತವ್ಯ;

ಯಾರು ಕೇಳಲಿ ನಾನು ಗುಡಿಯೊಳಗೆ ಇರುವುದೆ ನಮ್ಮ ದೇವರು ಎಂದು?

ಕೈಮರದ ನೆರಳಿನಲಿ ಸರದಿಯಲಿ ಬಂದೆ ಬರುವರು ಎಂದು ನಾನು ನಂಬಿದ್ದೆನೆ;

ಹೆಜ್ಜೆಗಂಟಿದ ನೆರಳ ದಾಟಲಾರದೆ ನಾನು ಹಳೆಯ ಹಾಡೊಂದನ್ನು ಹಾಡುತ್ತಲಿದ್ದೇನೆ;

ಬಿಸಿಲಕಾವಿಗೆ ನೊಂದು ಸುಖದುಃಖಗಳ ನಡುವೆ ಹಾಡಿಕೊಂಡಿದ್ದೇನೆ.

೬.ನನ್ನ ಮನೆಗೇ ನಾನು ಅತಿಥಿ.

ಕತ್ತಲೆಯ ಕೋಣೆಯಿಂದೆದ್ದು ಬಣ್ದವ ನಾನು

ಬಾಗಿಲನು ತೆರೆದು ಹುಣ್ಣಿಮೆಯ ಸಿರಿಗೆ ;

ದೂರ ಯಾವುದೊ ಹಕ್ಕಿ ಹೆಮ್ಮರದ ಕೊಂಬೆಯಲಿ

ರೆಕ್ಕೆ ಬಡಿಯಿತು ಇರುಳ ಸಂಭ್ರಮದಲಿ.

ಬೆಳಕು ಹರಿಯಿತು, ಹಕ್ಕಿಹಾಡು ಮೊದಲಾಗಿತ್ತು

ಕೊಂಬೆ ತುದಿಯಲಿ ಇದ್ದ ಹಣ್ಣ ಕೆಡವಿ ;

ಬೆಳಗಾಗ ಕಡಲ ತಡಿಗೋಡಿದೆನು ಆತುರದಿ

ಕಂಡೆ ನಾ ಮುನ್ನೀರಿನದ್ಭುತವನು.

ದೋಣಿ ಒಂದೊಂದಾಗಿ ಕಡಲೆದೆಗೆ ನುಗ್ಗಿದವು

ಸಂತಸದಿ ಹಾಡಿದಳು ಕಪ್ಪುಹುಡುಗಿ ;

ಕಣ್ಣು ಕಪ್ಪೆಯ ಚಿಪ್ಪಿನಗಲದ ದೋಣಿ, ಅದಕ್ಕೆ

ಕಂಡ ನೋಟ ಸಮುದ್ರದಂಥ ಪ್ರಾಣಿ.

ಮುನ್ನೀರ ಘೋಷದಲಿ ಬಾಳ ಹಾದಿಯ ಕಂಡೆ,

ನಾ ಕಂಡೆ ದೋಣಿಗರ ಸಾಹಸವನು ;

ದೂರದೂರದ ದೋಣಿ ಹಾಡ ಕೇಳಿದೆ ನಾನು,

ಎದೆ ತುಂಬ ಪ್ರೀತಿಯನು ತುಂಬಿಕೊಂಡೆ.

ನಾನು ಚುಂಬಿಸಲಾರೆ, ಚುಂಬಿಸದೆ ಇರಲಾರೆ

ಅಡ್ದ ಗೋಡೆಯ ಮೇಲೆ ದೀಪ ನಾನು ;

ನನ್ನ ನಿರ್ಧಾರವನು ಕಡಲ ನೀರಿಗೆ ಬಿಟ್ಟೆ,

ಕಪ್ಪೆಚಿಪ್ಪುಗಳನ್ನು ನೀರಿಗೆಸೆದೆ.

ಹಬ್ಬದೂಟಕ್ಕೆಂದು ಮನೆಗೆ ಬಂದರೆ ನಾನು

ಕೋಣೆಯೊಳಿರಲಿಲ್ಲ ಅಡುಗೆಯವನು ;

ಊಟಕ್ಕೆ ಕರೆದವನು ನಾನೆ, ಬಂದವ ನಾನೆ

ನನ್ನ ಮನೆಗೇ ನಾನು ಒಬ್ಬ ಅತಿಥಿ!.

೭.ನನಗೆ ನಂಬಿಕೆ.

ಹಣ್ಣು ಹೂವುಗಳಿಂದ ನಿನ್ನನರ್ಚಿಸಲರಿಯೆ,

ಕ್ಷೀರಾಭಿಷೇಕವನು ಮಾಡಲಾರೆ;

ಸಂಜೆ ಮುಂಜಾನೆಯಲಿ ನಿನ್ನ ನೆನೆಯುವುದೊಂದೆ

ಕರ್ತವ್ಯವೆಂಬುದನು ನಾನು ಬಲ್ಲೆ.

ಶಂಖಗಳ ನಾನೂದೆ, ಜಾಗಟೆಯಾ ಬಾಜಿಸೆನು

ಮಂಗಳಾರತಿಯ ನಾ ಬೆಳಗಲರಿಯೆ;

ನಿನ್ನ ನೆತ್ತಿಯ ಮೇಲೆ ಸೀಯಾಳವನು ಸುರಿದು

ಕರವಸ್ತ್ರದಿಂದದನು ಒರೆಸೆ ನಾನು.

ಶಾಲ್ಯಾನ್ನ ಭೋಜನವ ನಾನು ಒದಗಿಸಲಾರೆ,

ನಿನ್ನ ಪ್ರಸಾದವನು ಹಂಚಲಾರೆ;

ಬತ್ತಲೆಯ ಮೂಲ ಮೂರ್ತಿಯನು ಕಾಣುವೆ ನಾನು,

ಉತ್ಸವದ ಮೂರ್ತಿಯನು ಹೊಗಳಲಾರೆ.

ಹೊರಗಣ್ಣ ಮುಚ್ಚಿದರೆ ಒಳಗಣ್ಣು ತೆರೆಯುವುದು,

ಕಾಣುವುದು ಎಲ್ಲೆಲ್ಲು ವಿಶ್ವರೂಪ;

ಕಷ್ಟದಲಿ ನೀನೆನ್ನ ಕೈಬಿಟ್ಟೆನೆನ್ನದೆಯೆ

ಭಜಿಸುವೆನು, ನನಗಿಲ್ಲ ಇಷ್ಟು ಕೋಪ.

ಕೊನೆಯಿರದ ದಾರಿಯಲಿ ನಾನು ಮುಂಬರಿಯುತ್ತ

ನಿನ್ನ ನೆನೆಯುತ್ತೇನೆ ಭಕ್ತಿಯಲ್ಲಿ;

ನಿನ್ನೊಲವು ನನ್ನ ಸಂರಕ್ಷಿಸುತ ಬರುತಿಹುದು,

ನನಗೆ ನಂಬಿಕೆ ನಿನ್ನ ಶಕ್ತಿಯಲ್ಲಿ.

೮.ಮಳೆ ನಿಂತಿತ್ತು.

ಮಳಿ ನಿಂತಿತ್ತು. ಹೂ ಅರಳಿತ್ತು

ತಣ್ಣಗೆ ಬೀಸಿತು ಗಾಳಿ ;

ಎಲ್ಲರ ಎದೆಯಲಿ ಸಂತಸವಿತ್ತು

ಪ್ರೇಮಗೀತೆಯನು ಕೇಳಿ.

ದಾರಿಯ ಉದ್ದಕು ಶಾಲೆಯ ಮಕ್ಕಳು

ಬಂದರು ನಗುನಗುತ ;

ತಣ್ಣನೆ ನೆರಳಲಿ ನಡೆಯುತ್ತಿತ್ತು

ಸುಂದರಾಂಗಿಯರ ಕುಣಿತ.

ಕಬ್ಬಿನ ಗದ್ದೆಯ ಒಳಗೂ ಹೊರಗೂ

ಕುಣಿಯುವ ನವಿಲಿನ ಕೇಕೆ ;

ನಕ್ಕರು ಎಲ್ಲರು, ಈಕೆ ಕೇಳಿದಳು

'ಎಲ್ಲರು ನಗುವುದು ಏಕೆ?'

ಗುಡಿಗೋಪುರಗಳ ಎತ್ತರದಲ್ಲಿ

'ಕೃಷ್ಣಾ' ಎಂದಿತು ಗರುಡ ;

ಮೆಟ್ಟಿಲಿನುದ್ದಕು ಕೈಯ ಚಾಚಿದನು

ಕಾಸಿನ ಭಿಕ್ಷಕೆ ಕುರುಡ.

ಇರುಳೂ ಮುಗಿಯಿತು, ಬೆಳಕೂ ಹರಿಯಿತು

ಇದು ಭಗವಂತನ ಕರುಣೆ ;

ದೇವರ ಮನೆಯಲಿ ನಡೆಯುತ್ತಿತ್ತು

ಭಗವನ್ನಾಮ ಸ್ಮರಣೆ.

ತಾವರೆ ಅದಳಿದೆ, ನೈದಿಲೆ ಬಾಡಿದೆ

ಭಟ್ಟರ ತೋಟದ ಕೊಳದಲ್ಲಿ ;

ಸಿರಿಸಂತೋಷವು ಹಬ್ಬುತ್ತಲೆ ಇದೆ

ಚೆಲುವು ಚಿಮ್ಮುತಿಹ ನೆಲದಲ್ಲಿ.

ಬೀದಿ ಬೀದಿಯಲು ಶಾಂತಿಯು ನೆಲಸಿದೆ

ನೆಮ್ಮದಿ ಕಂಡಿದೆ ಬದುಕು ;

ಬಾಗಿಲ ಬಳಿ ಕವಿ ಕೈಯನು ಮುಗಿಯುವೆ

ಆದಕೂ ಇದಕೂ ಎದಕು.

೯.ಗೆಳೆಯನಿಗೆ.

ನೂರು ಕನಸುಗಳಲ್ಲಿ ನಿನ್ನ ಕಂಡೆನು ನಾನು

ನನ್ನೆದೆಯೊಳಚ್ಚಾಯ್ತು ನಿನ್ನ ಹೆಸರು;

ನನ್ನೆಲ್ಲ ಒಲವು ಹೂವಾಗಿ ಅರಳಿತು, ನಕ್ಕೆ -

ಅರಿಹೋಯಿತು ದೂರ ದೂರ ದೀಪ!

ಓ ಗೆಳೆಯ, ನಾ ನಿನ್ನ ಹುಡುಕುತ್ತಲಿದ್ದೇನೆ

ಎಲ್ಲ ಅನುಭವಗಳಲಿ ಒಂಟಿಯಾಗಿ;

ಹೋದುದೆಲ್ಲಿಗೆ ನೀನು ತುಂಬಿದ ಜಗತ್ತಿನಲಿ

ಹೂಗಳಲಿ ಹಣ್ಗಳಲಿ ಹಾಡಿನಲ್ಲಿ?

ದೂರದರ್ಶನದಲ್ಲಿ ಕೇಳಿ ಬಂದಿತು ಹಾಡು

ತಂಪಾಗಿ ಇಂಪಾಗಿ ಮಧುರವಾಗಿ;

ಕೆಲವರು ಬಂದರು ಸಭೆಗೆ, ಎದ್ದು ಹೋದರು ಕೆಲರು

ಈ ಜಗತ್ತಿನ ಚೆಲುವು ಕಣ್ತುಂಬಿತು.

ನೀನೆಂದು ಬರುವೆ, ಓ ಗೆಳೆಯ, ಉದ್ಯಾನದಲಿ

ನೀ ಬರುವ ತನಕ ನಾ ಕಾದಿರುವೆನು.