ಐರಾವತ.

೧.ಮಳೆಯೊಳಗೆ ಮನೆಗೆ ಬಂದಳು.

ಮಳೆಯೊಳಗೆ ಬಂದುದೇಕೆನಲು ಮಾತಾಡಿದಳೆ ?-

ಮಿಂಚುಗಳು ದಾರಿದಾರಿಯಲಿ.

ಮತ್ತೊಮ್ಮೆ ಏಕೆಂದು ಕೇಳಿದರೆ ನುಡಿದಳೆ ?-

ದೀಪವಿತ್ತೊಂದು - ಮೂಲೆಯಲಿ.

ತಾಯಿದ್ದು ತಬ್ಬಲಿಯೆ ? ಪಾಪಿಗಳು ! ಇವರೇಕೆ

ಹಬ್ಬದಲಿ ಕಳುಹಿದರು ಹೆಣ್ಣುಮಗಳ ?

ಓಡಿಬಂದಳೊ ಕಾಣೆ ! ಹೇಳಿಬಂದಳೊ ಕಾಣೆ !

ಹೀಗೆ ಫಲಿಸಿತೆ ನನ್ನ - ಅವರ ಜಗಳ ?

ಒಂದಾಗಿ ಎರಡಾಗಿ ಮುಂಗುರುಳ ಬಲೆಯಿಂದ

ಮಳೆಯ ಹನಿ ಕೆಳಗುರುಳುತಿರಲು ;

ಕಂಡರೂ ಕಾಣದೆಯೆ ಒಂದು ಮಾತಾಡದೆಯೆ

ಒಳಗೆ ಬಂದಳು ; ಹೊರಗೆ ಸೋನೆಯಿರುಳು.

ಹತ್ತಿರವೆ ಬಂದಳು ; ಒತ್ತಿನಲೆ ಕುಳಿತಳು

ದೊಡ್ದ ಕಣ್ಗಳ ದೊಡ್ಡದಾಗಿ ತೆರೆದು ;

ಕಣ್ಣಿನಲಿ ಮಿಂಚಿನೊಲು ಬಂದ ಕಾರಣವಿರಲು

ಮಾತಾಡದೆ ಹೆಣ್ಣು ಸುಮ್ಮನಿಹಳು.

ನೂರು ಮಾತಿಗೆ ತಾನು 'ಅಹುದು' ಎಂದಳು ಚೆನ್ನೆ

ಒಡನೆಯೇ ಕೊರಲೆತ್ತಿ 'ಇಲ್ಲ' ಎಂದು ;

ದುಂಡು ಕಂಬನಿಯೊಂದನಿಳಿಸಿದಳು ಕೆನ್ನೆಯಲಿ

ತುಟಿಯ ಮೇಲೊಂದೆರಡು ಮುತ್ತನಿಡಲು.

ಮಳೆಯೊಳಗೆ ಬಂದುದೇಕೆನಲು ಮಾತಾಡಿದಳೆ ?-

ಮಿಂಚುಗಳು ದಾರಿದಾರಿಯಲಿ.

ಮತ್ತೊಮ್ಮೆ ಏಕೆಂದು ಕೇಲಿದರೆ ನುಡಿದಳೆ ?-

ಪ್ರೇಮ ಅರಳಿತ್ತು ಮೌನದಲಿ.

೨.ನೀವಲ್ಲವೆ ?

ಹತ್ತು ವರುಷದ ಹಿಂದೆ ಮುತ್ತೂರ ತೇರಿನಲಿ

ಅತ್ತಿತ್ತ ಸುಳಿದವರು ನೀವಲ್ಲವೆ ?

ಹತ್ತಿರದ ಹೆಣ್ಣೆಂದು ಮತ್ತೆ ಮುತ್ತೂರಿನಲಿ

ಒಪ್ಪಿ ಕೈಹಿಡಿದವರು ನೀವಲ್ಲವೆ ?

ಬೆಟ್ಟಗಳ ಬೆನ್ನಿನಲಿ ಬೆಟ್ಟಗಲ ದಾರಿಯಲಿ,

ಕಟ್ಟಿಕೊಂಡಲೆದವರು ನೀವಲ್ಲವೆ ?

ತಿಟ್ಟಿನಲಿ ಮುಂದಾಗಿ, ಕಣಿವೆಯಲಿ ಹಿಂದಾಗಿ,

ನಗುನಗುತ ನಡೆದವರು ನೀವಲ್ಲವೆ ?

ಬಾಗಿಲಿಗೆ ಬಂದವರು, ಬೇಗ ಬಾ ಎಂದವರು,

ಬಂದುದೇಕೆಂದವರು ನೀವಲ್ಲವೆ ?

ನೋಡು ಬಾ ಎಂದವರು, ಬೇಡ ಹೋಗೆಂದವರು,

ಎಂದಿಗೂ ಬಿಡಗಿನ ಹಡಗು ನೀವಲ್ಲವೆ ?

ಸೆರೆಗೆಳೆದು ನಿಲ್ಲಿಸಿದ, ಜಡೆಯೆಳೆದು ನೋಯಿಸಿದ,

ಬಯಲು ಸೀಮೆಯ ಜಾಣ ನೀವಲ್ಲವೆ ?

ಮೊದಲಿರುಳು ಹೊಂಗನಸ ಮುನ್ನೀರ ದಾಟಿಸಿದ

ಬೆಳಕು ಬೆಡಗಿನ ಹಡಗು ನೀವಲ್ಲವೆ?

ತೊತ್ತೆಂದು ಜರೆದವರು, ಮುತ್ತೆಂದು ಕರೆದವರು,

ಎತ್ತರದ ಮನೆಯವರು ನೀವಲ್ಲವೆ ?

ನೀನೆ ಸಾಕೆಂದವರು ನೀನೆ ಬೇಕೆಂದವರು,

ಚಿತ್ತದಲಿ ನಿಂತವರು ನೀವಲ್ಲವೆ ?

ಕೈಗೆ ಬಳೆಯೇರದೆಯೆ, ಅಯ್ಯೊ ! ನೋವೆಂದಾಗ

ಮಹಡಿಯಿಂದಿಳಿದವರು ನೀವಲ್ಲವೆ ?

ಬಳೆಗಾರ ಸೆಟ್ಟಯನು ಗದ್ದರಿಸಿಕೊಂಡವರು,

ಬತ್ತವನು ತಂದವನು ನೀವಲ್ಲವೆ ?

ಹೊನ್ನುಹೊಳೆ ನೀವೆಂದು, ಮುತ್ತುಮಳೆ ನಾನೆಂದು,

ಹಾಡುತ್ತ ಕುಣಿದವರು ನೀವಲ್ಲವೆ ?

ಮಲೆನಾಡ ಹೆಣ್ಣಿಂದು, ಒಲವಿತ್ತ ಹಣ್ಣೆಂದು

ಏನೇನೊ ಬರೆದವರು ನೀವಲ್ಲವೆ ?

ಚಂದಿರನ ಮಗಳೆಂದು, ಚಂದ್ರಮುಖಿ ನೀನೆಂದು,

ಹೊಸ ಹೆಸರನಿಟ್ಟವರು ನೀವಲ್ಲವೆ ?

ಮಲ್ಲಿಗೆಯ ದಂಡೆಯನು ತುರುಬಿನಲಿ ಗಿಡಿದವರು,

ತುಟಿಗೆ ತುಟಿಯ ತಂದವರು ನೀವಲ್ಲವೆ ?

ಬಡತನವೊ, ಸಿರಿತನವೊ, ಯಾರಿರಲಿ, ಎಲ್ಲಿರಲಿ,

ದೊರೆಯಾಗಿ ಮರೆವವರು ನೀವಲ್ಲವೆ ?

ಗಂಡನಿಗೆ ಒಪ್ಪಾಗಿ, ಕಂದನಿಗೆ ದಿಕ್ಕಾಗಿ,

ಪಯಣದಲಿ ಜೊತೆಯಾಗಿ ನಾನಿನಿಲ್ಲವೆ ?