ಮನೆಯಿಂದ ಮನೆಗೆ.

೧.ನಿನ್ನ ಪ್ರೀತಿಗೆ.

ನಿನ್ನ ಪ್ರೀತಿಗೆ, ಅದರ ರೀತಿಗೆ

ಕಣ್ಣ ಹನಿಗಳೆ ಕಾಣಿಕೆ ?

ಹೊನ್ನ ಚಂದಿರ, ನೀಲಿ ತಾರಗೆ

ಹೊಂದಲಾರದ ಹೋಲಿಕೆ.

ನಿನ್ನ ಪ್ರೀತಿಗೆ, ಅದರ ರೀತೆಗೆ

ಚೆಲುವು ಕನಸಿನ ಜವನಿಕೆ ;

ಬೆಳ್ಳಿನಿದ್ದೆಯ ತುಟಿಗಳಂಚಿಗೆ

ಸುಳಿದ ಕಿರುನಗೆ ತೋರಿಕೆ.

ತುಂಬಿ ಕೊರೆದಿಹ ಹೂವಿನೆದೆಯಲಿ

ನೋವು ಗಾಳಿಗೆ ಹಾಸಿಗೆ ;

ಜೇನು ಜೀವದ ನೆಳಲ ಪೊದೆಯಲಿ

ಗೂಡುಕಟ್ಟಿದೆ ಆಸೆಗೆ.

ತಂತಿಯಾಚೆಗೆ ವೀಣೆ ಮಿಂಚಿದೆ

ಬೆಂಕಿಬೆರಳಿನ ಹಾಡಿಗೆ ;

ನಿಟ್ಟುಸಿರ ಪಲ್ಲವಿ ಬೇಲಿಯಾಗಿದೆ

ಚಿಂತೆಯಾಳುವ ಕಾಡಿಗೆ.

ನಗುವ ಮುಖಗಳ ನೋಡಿಬಂದೆನು

ಹಾದಿ ಬೀದಿಯ ಕೆಲದಲಿ ;

ನಗದ ಒಂದೇ ಮುಖವ ಕಂಡೆನು

ನನ್ನ ಮನೆಯಂಗಳದಲಿ.

ನೂರು ಕನ್ನಡಿಗಳಲಿ ಕಂಡೆನು

ನೋಡಬಾರದ ಮುಖವನು ;

ಇಳಿದ ಮುಖದಿಂಗಿತವನರಿತೆನು

ಅಸುಖ ಮುದ್ರಿತ ಸುಖವನು.

ನಗದ ಮುಖದಲಿ ನಿನ್ನ ಕಂಡೆನು

ತಿಳಿದ ಬಾನಿನ ಹರಹನು,

ಮೊದಲ ಮೋಹದ ಮಂಜು ಕದಲಲು

ಬದುಕು ತುಂಬಿದ ಹಗಲನು.

ನಿನ್ನ ಪ್ರೀತಿಗೆ, ಅದರ ರೀತೆಗೆ

ನೀಡಬಲ್ಲೆನೆ ಕಾಣಿಕೆ ?

ಕಾಲವಳಿಸದ ನೆಲದ ಚೆಲುವಿಗೆ

ನಿನ್ನ ಪ್ರೀತಿಯೆ ಹೋಲಿಕೆ.

೨.ಹುಚ್ಚು ಹಾಡು.

ಬಿರುಗಾಳಿ ಗೋಳಿಡುತಿದೆ,

ಇರುಳ ಚಳಿ ಕೊರೆಯುತಿದೆ ;

ನಿದ್ದೆ, ಬಾರಾ ಬಳಿಗೆ

ನನ್ನಳಲ ತೆರೆಯೆ.

ಆದರೂ ನೋಡಲ್ಲಿ ಮುಂಬೆಳಗಿನಿಣಿಕು

ಕಡಿದಾದ ಮೂಡಲಿನ ಕಣಿವೆಗಳಲಿ

ಈ ನೆಲವ ಹಳಿಯುತಿದೆ, ಹಣ್ಣೆಲೆಗಳುದುರಿ

ಸರಿವ ಹೂಗಳ ಹಾಸು ತೋಟಗಳಲಿ.

ನೋಡಲ್ಲಿ ! ಓ ಅಲ್ಲಿಗೆ

ಬಾನ ಕಳಸದ ಕಡೆಗೆ

ಅಳಲು ತುಳುಕುವ ನನ್ನ

ಇನಿದನಿಗಳೇಳುತಿವೆ;

ಇರುಳ ಕಿವಿಯಲಿ ಮುಳುಗಿ

ಹಗಲ ಕಣ್ಣನು ಅಳಿಸಿ

ಮೊರೆವ ಗಾಳಿಗೆ ಹುಚ್ಚು ಹಿಡಿಸಿ

ಬಿರುಗಾಳಿಯೊಡನೆ ಆಡಿ

ಅಬ್ಬರಿಸುವಳಲಿನಲಿ ಮುಗಿಲ ನಡುವೆ

ನಿಂತ ರಕ್ಕಸನಂತೆ ನಾನು

ಇರುಳ ಕಳೆದರೆ ನುಗ್ಗಿ

ಇರುಳಿನೊಂದಿಗೆ ಹೋಗಿ

ಎಲ್ಲ ಸುಖಗಳು ಬೆಳೆವ ಮೂಡಲಿನ ಕಡೆಗೆ

ಬೆನ್ನ ತಿರುಗಿಸಿ ಬಿಡುವೆನು.

ಆ ಬೆಳಕು ಮುನಿದು ನೋವಿನ ಬಲೆಯ ಬೀಸಿ

ಈ ನನ್ನ ಸೆರೆಗೊಳ್ಳುವುದು.

-ಮೂಲ ಡಬ್ಲೂ ಎಂ. ಬ್ಲಾಕ್ : "ದಿ ಮ್ಯಾಡ್ ಸಾಂಗ್"

೩.ಮನೆಯಿಂದ ಮನೆಗೆ.

ವರುಷ ತುಂಬಿದರೆ ಹೊರಮನೆಯಿಂದ ಹೊರಮನೆಗೆ

ವರ್ಗ. ವರ್ಗವೆಂದರೆ ಮತ್ತೆ

ಗಂಟು ಮೂಟೆಯ ಬಿಗಿತ, ಇನ್ನಷ್ಟು ಆಯಾಸ.

ತಿರುಪಿರದ ಲಾಂದ್ರಗಳು, ತಳವಿರದ ಗೂಡೆಗಳು,

ಜರಡಿ, ತೊಟ್ಟಿಲು, ಒನಕೆ - ಇವುಗಳದೆ ಮೆರವಣಿಗೆ!

ಸರಕು ಸುಮ್ಮನೆ ಭಾರ, ಎಸೆಯಬಾರದೆ ಹೇಳು.

’ಎಸೆದರಾಯಿತೆ, ಹೇಳಿ ? - ಮೊದಲು ಹೊಸತನು ತನ್ನಿ’

ಸ್ಥಳವಿಲ್ಲ ಬಂಡಿಯಲಿ, ’ಹೊತ್ತು ಸಾಗಿಸಬೇಕು’ ;

ಹೊತ್ತು ಸಾಗಿಸಬೇಕು ? ಅದಕೆ ಕತ್ತಲೆ ಬೇಕು !

’ಕತ್ತಲೆಗೆ ಕಾಯೋಣ!’

(ಏಳು ಮಕ್ಕಳ ತಾಯಿ, ಸ್ನೇಹಮಯಿ, ನಕ್ಕಳು)

ನಗೆ ಕೊಲ್ಲುವಂತೆ ಅಗೆ ಕೊಲ್ಲಲಾರದು; ಏಳು,

ಹೊಸಮನೆಗೆ ಹೋಗೋಣ ಮೊದಲು ; ಸಂಜೆಗೆ ಬಂದು

ಸಾಗಿಸುವ ಕೆಲಸ ನನಗಿರಲಿ.

ಕಂಬನಿಗೊಳವ

ಕೆಂಗರಿಯ ಮೀನು ಕಲಕಿತ್ತು. ಗೆದ್ದಳು ಹೆಣ್ಣು !

ನಗಬಹುದು ಹೀಗೆ ಒಂದೊಂದು ಸಲ ಬದುಕಿನಲಿ.

ಒಂದೊಂದು ಮನೆಯ ಬಿಡಲೊಂದೊಂದು ಕಾರಣ.

ಈ ಸಲದ ಅನುಭವ : ಮನೆವಂತ ಒಳ್ಳೆಯವ ;

ಅವನ ಹೆಂಡತಿ, ಮಗಳು ? - ಒಳ್ಳೆಯವರಿರಬೇಕು !

"ಮನೆಯ ಬಿಡಿ" ಎಂದವರು ನಮಗೆ ಹೇಳಿರಲಿಲ್ಲ,

ಅವರು ಮಾಡಿದ ಕೆಲಸ ಬೇರೆ!

ಓದು ಹತ್ತದ ಮಗಳ ದನಿಯಾದರು ಕುದುರಿ

ಮದುವೆ ಹತ್ತಿರವಾಗಲೆನುವ ಹಂಬಲಿನಿಂದ

ಸಂಗೀತ ಪಾಠವನು ಗೋತ್ತುಮಾಡಿದರಷ್ಟೆ !

ಆ ಎಂಟು ತಿಂಗಳೂ ಮಳೆಗಾಲ, ಕಪ್ಪೆಗಳು.

ಮೊದಲು, ಕೊನೆ - ಆ ಹುಡುಗಿ ಕಲಿತ ಒಂದೇ ಚರಣ :-

"ಕೆರೆಯ ನೀರನು ಕೆರೆಗೆ ಚೆಲ್ಲಿ,"

ಎಲ್ಲ ಮಾಡುವ ಕೆಲಸವಿಷ್ಟೆ ಇಲ್ಲಿ !

ಕೆರೆಯ ನೀನು ಕೆರೆಗೆ ಚೆಲ್ಲಿ

ಬೆಳಗಿನಲ್ಲಿ, ಮಧ್ಯಾಹ್ನದಲ್ಲಿ, ಸಂಜೆಯಲ್ಲಿ

ನೀರ ತುಂಬಲು ಇನ್ನು ಸ್ಥಳವಿರದೆ ಮನೆಯಲ್ಲಿ

ಬಂದು ನಿಂತರೆ ನಾವು ನಡುಬೀದಿಯಲ್ಲಿ

’ನೀರ ಚೆಲ್ಲಿದ ಮಂದಿ ನೀವೆಂದು’ ಮನೆವಂತ

ಒಟ್ಟು ತೆರಿಗೆಯ ಬಿಗಿದ ನನ್ನ ತಲೆಗೆ !

ನೀರಳೆಯುವ ಯಂತ್ರ ನಿಜವನ್ನೆ ನುಡಿದಿತ್ತು ;

ಇನ್ನೊಂದು ಮನೆಯ ಕದ ನಮಗಾಗಿ ತೆರೆದಿತ್ತು.

ಇದ್ದವರಿಗೊಂದು ಮನೆ, ಇಲ್ಲದವರಿಗೆ ನೂರು.

ಇಲ್ಲಿ ಹಿಂದಿದ್ದವರಿಗೆಷ್ಟು ಮಕ್ಕಳೊ ಕಾಣೆ!

ಎಲ್ಲೆಲ್ಲು ನೆಲವ ಕೆತ್ತಿವೆ ;

ನಲ್ಲಿಗಳ ಮುರಿದಿವೆ ;

ದೀಪಗಳ ಕೆಡಿಸಿವೆ ;

ಹೂಗಿಡಗಳ ಕಿತ್ತೆಸೆದಿವೆ ;

ಎಲ್ಲ ಬಾಗಿಲಮೇಲೆ ಸೊನ್ನೆಗಳ ಬರೆದಿವೆ.

ನಾಳೆ ಈ ಹುಡುಗರಿನ್ನೇನು !

ಇಲ್ಲಿ ಹೊಸತನವೆಲ್ಲಿ? ಯಾರೋ ಇದ್ದ ಮನೆಗೆ

ನಾವು ಬಂದಿದ್ದೇವೆ. ನಾವು ಹೊಸಬರೆ ? ಅಲ್ಲ.

ಕಂದು ಗೋಡೆಯ ಮೇಲೆ ಇಲ್ಲಣದ ತೆರೆಬಿದ್ದು

ಕಾದಿರುವ ನಾಟಕದ ಹೆಸರು ’ಹೊಸತು’.

ಈ ಮನೆಗೆ ಬಂದೆವೀ ದಿನ -

ಗಾಜೊಡೆದ ಪಠಗಳ ರಿಪೇರಿಗವಸರವಿಲ್ಲ ;

ಪಾತ್ರೆಗಳಿಗಾಗಬೇಕಾದರೆ ಕಲಾಯ

ತಳ್ಳಬಹುದಿನ್ನೊಂದು ವಾರ.

ಹೊಸಚಾಪೆ, ಕಾಲೊರಸಿ - ನಾಳೆ ತರಬಹುದಲ್ಲ ?

"ಈಗೇನು ಮಾಡೋಣ ? " ಮತ್ತೆ ಕೇಳುವೆಯಲ್ಲ !

ಹೊಕ್ಕ ಮನೆಯೆಲ್ಲ ಹೊಸಮನೆಯೆಂದೆ ಕರೆಯೋಣ ;

ಹಳೆಯ ಬಾಗಿಲಿಗೆ ಹೊಸತೋರಣ ಕಟ್ಟೋಣ ;

ಶಾಲೆಮಕ್ಕಳ ಹಾಗೆ ಹೊಸತನವ ಕಲಿಯುತ್ತ

ಇನ್ನೊಂದು ವರುಷ ಕಳೆಯೋಣ !

ಒಂದೊಂದು ಮನೆಗೆ ಒಂದೊಂದು ವರುಷದ ಸರದಿ ;

ಅಷ್ಟು ಹೊಸತೇನಲ್ಲ ನಾಳೆಯೋದುವ ವರದಿ.

ಸ್ಮೃತಿಪಥದ ಬೆಳ್ಳಿದಾರದ ಸುರುಳಿ ಬಿಚ್ಚುತಿದೆ ;

ಬೆಲೆಯಿರದ ಸರಕ ಸಾಗಿಸಿದೆ ಬಾಗಿದೆ ಬೆನ್ನು ;

ಕೆರೆಯ ನೀರನು ಕೆರೆಗೆ ಚೆಲ್ಲಿ ಬಿಳಿಚಿದೆ ಕಣ್ಣು ;

ಮಗು ಬರೆದ ಸೊನ್ನೆ ; ಮನೆವಂತರ್‍ಆಡಿದ ಮಾತು ;

ನಕ್ಕನಗೆ ; ಕಣ್ಣೀರು -

ಒಂದಲ್ಲ, ಎರಡಲ್ಲ, ನಮ್ಮ ಪಾಲಿನ ಪುಣ್ಯ !

ಬಂಡಿಯಲಿ ಸ್ಥಳವಿಲ್ಲ, ಹೊತ್ತು ಸಾಗಿಸಬೇಕು ;

ಅದಕೆ ಕತ್ತಲೆ ಬೇಕು.

ಕತ್ತಲೆಗೆ ಕಾಯೋಣ !

ಮನೆಯಿಂದ ಮನೆಗೆ, ಹೊರಮನೆಯಿಂದ ಹೊರಮನೆಗೆ

ಮೊದಲ ಮನೆಯಿಂದ

ಆದರವಿರದ, ಕದವಿರದ, ಹೆಸರಿರದ ಇನ್ನೊಂದು ಮನೆಗೆ

ಹೊಸತು ಹಳೆಯದು ಎಲ್ಲ ಯಾತ್ರೆಗೆ ಹೊರಟಿದ್ದೇವೆ.

ಅಲ್ಲಿ ತಡೆಯುವರಿಲ್ಲ ;

ಒಳಗೆ ಕರೆಯುವರಿಲ್ಲ ;

ಇನ್ನೊಂದು ಮನೆಯಿಲ್ಲ ;

ಹೊರಮನೆಯ ನೆರಳಿಲ್ಲ ;

ಹೊದವರು ಹಿಂದಿರುಗಿ ಬರಲು ಹಾದಿಗಳಿಲ್ಲ ;

ಅದೇ ಕಡೆಯ ಮನೆ !

ಬಾಂದಳದ ತಾರೆಗಳ ಓರೆಗಣ್ಣಿನ ಕೆಳಗೆ ಆಗಾಗ ಬೀಸುವುದು ಬಯಲ ಗಾಳಿ.