ಗಂಗಾವತರಣ.

೧.ಜೋಗಿ

ಬೇಂದ್ರೆಯವರ “ಗಂಗಾವತರಣ” ಕವನಸಂಕಲನವು ೧೯೫೧ರಲ್ಲಿ ಪ್ರಕಟವಾಯಿತು. ಈ ಸಂಕಲನದಲ್ಲಿರುವ ’ಜೋಗಿ’ ಕವನವು ಅಧ್ಯಾತ್ಮ ಸಾಧಕನ ಸಾಧನಾಪಥದಲ್ಲಿಯ ಒಂದು ವಿಶೇಷ ಘಟ್ಟದಲ್ಲಿ, ಆತನ ಮನೋಸ್ಥಿತಿಯನ್ನು ವರ್ಣಿಸುವ ಕವಿತೆ.

ಬೇಂದ್ರೆಯವರ ತಾಯಿಯೂ ಸಹ ಗುರೂಪದೇಶ ಪಡೆದವರು. ಈ ಕವನವನ್ನು ಅವರ ಬಗೆಗೆ ಬರೆಯಲಾಗಿದೆ ಎಂದು ಸ್ವತಃ ಬೇಂದ್ರೆಯವರೇ ಹೇಳಿದ್ದಾರೆ. ಆದರೆ ಯಾವುದೇ ಸಾಧಕನ ಜೀವನದಲ್ಲಿಯೂ ಇಲ್ಲಿ ವರ್ಣಿಸಲಾದಂತಹ ಘಟ್ಟ ಬರಬಹುದು.

ಕವನದ ಪೂರ್ತಿಪಾಠವನ್ನು ಕೆಳಗೆ ಕೊಡಲಾಗಿದೆ:

ಊರ ತುದಿಯ ಆ ಮೂರ ಬಟ್ಟೆ ಮುಗಿದಲ್ಲಿ ಕೊಳ್ಳವೆಲ್ಲಿ

ಹಳ್ಳ ಅಲ್ಲಿ ಹರಿದಲ್ಲಿ, ತುಡುಗು-ದನ ತೊಂಡು ಮೇಯುವಲ್ಲಿ

ದಿಕ್ಕು ತಪ್ಪತಾರ ತಪ್ಪಿ ಹೊಕ್ಕರs ಕಕ್ಕಾವಿಕ್ಕಿಯಾಗಿ

ಇರುಳು ಅಂತನs ಹಗಲs ಗೂಗತಾವ ಅಲ್ಲಿ ಜೋಡಗೂಗಿ.

ಅದನ ದಾಟಿ ಆ ಮಸಣವಾಟಿ, ಎಡಕಾಗಿ ಅದರ ಆಚಿ

ಕಾಮ ತನ್ನ ಹಚ್ಚಂಗಿ ಹಾಸಿಧಾಂಗೆಲ್ಲಿ ನೀರ ಪಾಚಿ

ಹೊಚ್ಚಿ ಹೊಂಡವನು ಮೆಚ್ಚ ಮಾಡತಾವೊ ಕಂಡ ಕಣ್ಣುಗಳಿಗೆ.

ಪಾಚಿ ಸರಿಸಿದಾಗ ಕಪ್ಪು ನೀರು ಕರಿತಾವ ಒಳಗ ಬಳಿಗೆ.

ಅದರ ಮುಂದ ಗವಿಗುಡ್ಡ ಅಡ್ಡ ಬರತsದ ನಮ್ಮ ಬಲಕ

ಅತ್ತತ್ತ ಹರುಹಿ ಹತ್ತೊತ್ತಿ ಬಂದ ಕಾಳಮ್ಮಗಿರುವ ಹೊಲಕ

ಆ ಹೊಲದ ನಟ್ಟ ನಡುವಿರುವ ಹುಣಸಿಮರ ಏರಿ ನೋಡಿದಾಗ

ಹತ್ತ ಗಿಡದ ಗುಂಪೊಂದು ಕಾಣತದ ಸಣ್ಣ ಏರಿ ಮ್ಯಾಗ.

ಅಲ್ಲಿ ತೊಗಲಬಾವಲೀ ಚೀರತಾವ ಭರತಿ ಹಗಲಿನೊಳಗ

ಹಿಂಡು ಪಾರಿವಾಳ ಹೊಕ್ಕ ಹೊರಡತಾವ ಮತ್ತ ಒಳಗ ಹೊರಗ

ಅಲ್ಲಿ ಹಬ್ಬಿ ಹರುಹ್ಯsದ ಬೇವಿಗೇ ಸುತ್ತ ಅಮೃತಬಳ್ಳಿ

ಹಾಲ ಸುರವತಾವ ಆಲ ಅಲ್ಲಿ ಅಲ್ಲಾಡತಾವ ಅಳ್ಳಿ.

ಅತ್ತಿ ಗಿಡಕ ಹತ್ಯಾವ ಹಲಸಿನ್ಹಂಗ ಬುಡುಕು ಕೆಂಪು ಹಣ್ಣು

ಜೇನು ತುಂಬಿ ತೊಟಗುಟ್ಟತಾವ ಅದ ಬಯಸತಾವ ಕಣ್ಣು

ಈ ತೋಪಿನ್ಯಾಗ ಬೆಳೆದsದ ಹ್ಯಾಂಗೋ ಮೂಲ್ಯಾಗ ತಪ್ಪಿ ಮಾವು

ಅದರಡಿಗೆ ಹುತ್ತ ಅದರಾಗ ಐತೆ ಒಂದೇಳ ಹೆಡೆಯ ಹಾವು.

ಆ ಮಾವಿನೊಳಗ ಈ ಸುಗ್ಗಿಯೊಳಗ ಬಂದsದ ಕೋಗಿಲೊಂದು

ತನ್ನ ಜೋಡಿ ಕರೆಧಾಂಗ ಕರಿತsದ ನನ್ನ ಬಾರs ಅಂದು

ಕೂಗೇ ಕೂಗತದ ಕೂಗೇ ಕೂಗತsದ ಗಿರಣಿ ಕರೆಯೊ ಹಾಂಗ

ತೆರಪು ಇಲ್ಲ ಒಂದಳತಿ ಕೂಗತsದ ಬ್ಯಾಸರಿಲ್ಲಧಾಂಗ.

ತಿಳಿಯದಾವದೋ ಕಂಪು ಎಳೀತsದ ತುಂಬಿ ಹುಚ್ಚು ಆಗಿ

ಎಚ್ಚರಿಲ್ಲದs ಎತ್ತೊ ತಿರಗತಾವ ದಿಕ್ಕು ತೋರದಾಗಿ

ಬಂತು ಸುಗ್ಗಿ ಬಂದsದ ಸುಗ್ಗಿ ಬರತsದ ಸುಗ್ಗಿ ಎಂದು

ಕುಹೂ ಅನ್ನತದ ಕುಹೂ ಅನ್ನತದ ಕುಹುಕ್ಕುಹೂ ಅಂದು.

ತಾರ ಪಂಚಮದಾಗ ಕೋಗಿಲಾ ಕೂಗತsದೊ ಜೋಗಿ

ಯಾವ ಬಣ್ಣ ಅದಕಾವ ಕಣ್ಣು ನಾ ನೋಡಲೇನು ಹೋಗಿ?

ತೋಟವೆಲ್ಲ ಹೂವಾಗಿ ನಿಂತು ತೊಂಗೆಲ್ಲ ಗೊಂಚಲಾಗಿ

ಪಾಡು ಆಗತಾವ, ಹಣ್ಣು ಆಗತಾವ ಅದರ ಲಯಕೆ ತೂಗಿ.

ಮುಂಜಾವತೊಟ್ಟು ಇರು ಹಂಗು ಬಿಟ್ಟು ಬರಿ ಹಾಂಗ ತೂಗತsದೋ

ತಲಿ ಕಾವಿನೊಳಗ ಇಮ್ಮಾವಿನೊಳಗ ಬಿಸಿಗಾಲ ನೂಗತsದೋ

ಕೊಳಲ ನುಡಿಸಿಧಾಂಗ ಕುಹೂಹುಹೂಹೂ ಉಲಿತsದೊ ಜೋಗಿ

ಬೇರೆ ಕೆಲಸದಾಗ ಮನಸು ತೊಡಗದೊ ನೋಡಲೇನು ಹೋಗಿ?

ಬಂದೆ ಜೋಗಿ ಬಾ, ಬಾರೊ ಜೋಗಿ ಬಾ, ಏನು ಹೊತ್ತು ಬಂದಿ

ನೀನೆ ಹೇಳಿದಾ ನಾಮ ಜಪಿಸುವಾಗ ಬಂತೊ ಸುಗ್ಗಿ ಸಂಧಿ.

ತಲೆಯ ಯಾವುದೊ ನಾಡಿಯೊಳಗ ಸುರುವಾತು ಸುಗ್ಗಿ ಸೊಲ್ಲು

ಮುಂದೆ ಕೇಳಿದರ ಅದs ತುಂಬಿತೋ ಮೂಲೆ ಮೂಲೆಯಲ್ಲು.

ಗುಡಿಗೆ ನಾನು ಹೊರಟಾಗ ಕರೀತದ ಕುಹುಕ್ಕುಹೂ ಎಂದು

ಮನದ ಜಪದ ನಡುನಡುವೆ ನಡೀsತsದ ಓಂ ಕುಹೂ ಎಂದು

ಕನಸಿನೊಳಗ ನಾ ಸ್ವರಾ ಕೇಳಿ ಮಾಮರಾ ಆಗತೇನೊ

ಅಂತ ಭ್ರಮಾ ಆಗ್ಯsದ ಮನಕ ನೀ ಬಂದೆ ಜೋಗಿ ಏನೋ!

ಯಾವ ಸ್ವರಾ ಇದು ಯಾವ ಕೋಗಿಲಾ ಯಾವ ಮರವೊ ಏನೋ

ಯಾಕ ಹಿಂಗ ಅಸರಂತ ಕೂಗತದ ಏನು ಇದಕೆ ಬ್ಯಾನ್ಯೊ

ಸುತ್ತು ಗುಡ್ಡ ನುಗ್ಗಾಗಿ ಹೋದವೋ ಓಗೊಟ್ಟು ಇದಕs

ಬಿಸಿಲು ಕುಣಿದು ಬೆವತsದ ಈಗ ಬಂದsದ ಮಳಿಯ ಹದಕs.

***************************************************************************************************************************************************

ಈ ಕವನ ಪ್ರಾರಂಭವಾಗುವದು ಊರ ಹೊರವಲಯದ ಕಾಡಿನ ವರ್ಣನೆಯಿಂದ.

“ಊರ ತುದಿಯ ಆ ಮೂರ ಬಟ್ಟೆ ಮುಗಿದಲ್ಲಿ ಕೊಳ್ಳವೆಲ್ಲಿ

ಹಳ್ಳ ಅಲ್ಲಿ ಹರಿದಲ್ಲಿ, ತುಡುಗು-ದನ ತೊಂಡು ಮೇಯುವಲ್ಲಿ

ದಿಕ್ಕು ತಪ್ಪತಾರ ತಪ್ಪಿ ಹೊಕ್ಕರs ಕಕ್ಕಾವಿಕ್ಕಿಯಾಗಿ

ಇರುಳು ಅಂತನs ಹಗಲs ಗೂಗತಾವ ಅಲ್ಲಿ ಜೋಡಗೂಗಿ.”

ವಸ್ತುತಃ ಇದು ಆ ಕಾಲದಲ್ಲಿ ಧಾರವಾಡದ ಆಗ್ನೇಯ ದಿಕ್ಕಿನ ಕಾಡಿನಲ್ಲಿದ್ದ ಸೋಮೇಶ್ವರ ಗುಡಿಗೆ ಹೋಗುವ ದಾರಿಯ ವರ್ಣನೆ. (ಈ ಪ್ರದೇಶದಲ್ಲಿ ಈಗ ಭವ್ಯವಾದ ’ಶ್ರೀ ಧರ್ಮಸ್ಥಳ ಮಂಜುನಾಥ ತಾಂತ್ರಿಕ ಮಹಾವಿದ್ಯಾಲಯ’ ತಲೆ ಎತ್ತಿ ನಿಂತಿದೆ.) ಧಾರವಾಡದಲ್ಲಿಯ ಕಾಮನಕಟ್ಟಿಯಿಂದ ಕಾಲುದಾರಿಯಲ್ಲಿ ಸಾಗಿದಾಗ, ಹುಬ್ಬಳ್ಳಿಗೆ ಹೋಗುವ ರಸ್ತೆ, ಕಲಘಟಗಿಗೆ ಹೋಗುವ ರಸ್ತೆ ಹಾಗು ಸೋಮೇಶ್ವರಕ್ಕೆ ಟಿಸಿಲು ಒಡೆಯುವ ದಾರಿ ಈ ರೀತಿಯಾಗಿ ಮೂರು ದಾರಿಗಳು (=ಬಟ್ಟೆಗಳು) ಸಿಗುವವು. ಇವು ಮುಗಿಯುವಲ್ಲಿ ಅತ್ತಿಕೊಳ್ಳವೆಂಬ ಕೊಳ್ಳವು ಪ್ರಾರಂಭವಾಗುತ್ತದೆ. ಅಲ್ಲಿ ಶಾಲ್ಮಲಾ ನದಿ ಗುಪ್ತಗಾಮಿನಿಯಾಗಿ ಹರಿದು, ಉತ್ತರ ಕನ್ನಡ ಜಿಲ್ಲೆಯಲ್ಲಿ ಬೇಡ್ತಿ ಹಳ್ಳ ಹಾಗು ಗಂಗಾವಳಿ ನದಿ ಎಂದು ಕರೆಯಿಸಿಕೊಳ್ಳುತ್ತಾಳೆ. ಗೌಳಿ ಜನರು ದನ ಮೇಯಿಸಲೆಂದು ಈ ಸೀಮೆಯವರೆಗೆ ಬರುತ್ತಿದ್ದರು. ಆದರೆ ಅದೇ ಅವರ limit ! ಯಾಕೆಂದರೆ, ಅಲ್ಲಿಂದ ಮುಂದೆ ಹೋದರೆ, ’ದಿಕ್ಕು ತಪ್ಪತಾರ ತಪ್ಪಿ ಹೊಕ್ಕರs ಕಕ್ಕಾವಿಕ್ಕಿಯಾಗಿ’. ಅಲ್ಲಿರುವ ಕಾಡಿನಲ್ಲಿ ಹಗಲಿನಲ್ಲಿಯೂ ಸಹ ಸೂರ್ಯಕಿರಣಗಳಿಗೆ ಪ್ರವೇಶ ಸಿಗುತ್ತಿರಲಿಲ್ಲ. ಅಲ್ಲಿ ದಿನವೂ ಸಹ ರಾತ್ರಿಯಂತೆ ಭಾಸವಾಗುತ್ತದೆ. ಹೀಗಾಗಿ ಅಲ್ಲಿ ಹಗಲಿನಲ್ಲಿಯೂ ಸಹ ಗೂಗಿಗಳು ಕೂಗುತ್ತವೆ.

ಆದರೆ ಇದು ಕೇವಲ ನಿಸರ್ಗವರ್ಣನೆಯಾಗಿರದೆ, ಸಾಧಕನ ಯೋಗಸಾಧನೆಯ ಪ್ರಾರಂಭಾವಸ್ಥೆಯನ್ನು ಸೂಚಿಸುವ ವರ್ಣನೆಯೂ ಆಗಿದೆ. ಇಲ್ಲಿ ಬರುವ ಪ್ರತಿಮೆಗಳೆಲ್ಲ ಅಧ್ಯಾತ್ಮಿಕ ಪ್ರತಿಮೆಗಳೇ. ಮೂರು ಬಟ್ಟೆ ಎಂದರೆ ಮೂರು ಅವಸ್ಥೆಗಳು: ಜಾಗೃತ, ಸುಷುಪ್ತ, ಸ್ವಪ್ನಾವಸ್ಥೆ ಎಂದು ಭಾವಿಸಬಹುದು. ಈ ಮೂರು ಅವಸ್ಥೆಗಳನ್ನು ದಾಟಿ, ಮುಂದಿನ ಅವಸ್ಥೆಯಲ್ಲಿ ಹೋಗುವ ಸಾಧಕನು, ಗುರುವಿನ ಸಹಾಯವಿಲ್ಲದಿದ್ದಾಗ ಕಕ್ಕಾವಿಕ್ಕಿಯಾಗುತ್ತಾನೆ. ಅಲ್ಲಿ ತುಡುಗು ದನ ಅಂದರೆ ಮರೆಮಾಚಿ ಮುನ್ನುಗ್ಗುವ ಇಂದ್ರಿಯಗಳು, ತೊಂಡು ಮೇಯುವಲ್ಲಿ ಅಂದರೆ, ಎಷ್ಟು ಪ್ರಯತ್ನಿಸಿದರೂ ನಿಯಂತ್ರಣಕ್ಕೆ ಬರದೆ ವಿಷಯಭೋಗದಲ್ಲಿ ತೊಡುಗುತ್ತವೆ. ಇರುಳಲ್ಲಿ ಕೂಗಬೇಕಾದ ಜೋಡುಗೂಗಿಗಳು ಅಲ್ಲಿ ಹಗಲೇ ಗೂಗುತ್ತವೆ.

(ಬೇಂದ್ರೆಯವರ ಅರ್ಥಸಾಧನ ಇಲ್ಲಿ ಕಾಣುತ್ತದೆ. ’ಕೂಗುತ್ತವೆ’ ಅನ್ನುವದರ ಬದಲಾಗಿ ಅವರು ಗೂಗುತ್ತವೆ ಎಂದು ಬರೆಯುತ್ತಾರೆ).

ಈಗ ಭಗವದ್ಗೀತೆಯಲ್ಲಿ ಬರುವ ಸಾಲುಗಳನ್ನು ನೆನಪಿಸಿಕೊಳ್ಳಿ: ’ಯಾ ನಿಶಾ ಸರ್ವಭೂತಾನಾಮ್, ತಸ್ಯಾಮ್ ಜಾಗರ್ತಿ ಸಂಯಮೀ’.

(ಜೋಡು ಗೂಗಿಗಳು ಬಹುಶಃ, ಹಗಲು ಮತ್ತು ರಾತ್ರಿಯನ್ನು ಪ್ರತಿನಿಧಿಸುತ್ತಿವೆಯೆ?)

ಇದರ ಮುಂದಿನ ನುಡಿಯಲ್ಲಿ ಭೀತಿ ಹುಟ್ಟಿಸುವ ನಿಸರ್ಗ ವರ್ಣನೆಯಿದೆ.

“ಅದನ ದಾಟಿ ಆ ಮಸಣವಾಟಿ, ಎಡಕಾಗಿ ಅದರ ಆಚಿ

ಕಾಮ ತನ್ನ ಹಚ್ಚಂಗಿ ಹಾಸಿಧಾಂಗೆಲ್ಲಿ ನೀರ ಪಾಚಿ

ಹೊಚ್ಚಿ ಹೊಂಡವನು ಮೆಚ್ಚ ಮಾಡತಾವೊ ಕಂಡ ಕಣ್ಣುಗಳಿಗೆ.

ಪಾಚಿ ಸರಿಸಿದಾಗ ಕಪ್ಪು ನೀರು ಕರಿತಾವ ಒಳಗ ಬಳಿಗೆ.”

ಇಲ್ಲಿ ಸಾಧಕನಿಗೆ ಮೊದಲು ಸಿಗುವದು ಸ್ಮಶಾನಭೂಮಿ. ಅಲ್ಲಿ ಆತ ತನ್ನ ವಿಷಯವಾಸನೆಗಳನ್ನು ಸುಟ್ಟು ಮುಂದುವರಿಯಬೇಕು. ಆದರೆ ಕಾಮ ಇಲ್ಲಿ ತನ್ನ ಹಚ್ಚಂಗಿ(=ಹಸಿರು ಅಂಗಿ)ಯನ್ನು ಹಾಸಿ ನೀರ ಹೊಂಡಗಳನ್ನು ಮುಚ್ಚಿಹಾಕಿದ್ದಾನೆ. ಆದುದರಿಂದ ಈ ನೀರಹೊಂಡ ಕಣ್ಣಿಗೆ ರಮಣೀಯವಾಗಿ ಕಾಣುವದು. ಹಾಗೆಂದು ತೃಷಿತರು(=ವಿಷಯಾಸಕ್ತರು) ನೀರು ಕುಡಿಯಲು ಮುಂದುವರೆದರೆ, ಅವರನ್ನು ಈ ಕಪ್ಪು ನೀರಿನ (=deep waters=) ಪಾತಾಳವು ಮಾಯೆಯಿಂದ ಒಳಗೆ ಸೆಳೆದುಕೊಳ್ಳುವದು. (=ಕಪ್ಪು ನೀರು ಕರಿತಾವ ಒಳಗ ಬಳಿಗೆ).

ಈ trap ಅನ್ನು ದಾಟಿ ಸಾಧಕನು ಮುಂದುವರೆದರೆ, ಅಲ್ಲಿ ಅವನಿಗೆ ಕ್ಷೇತ್ರದೇವತೆಗೆ(=ಕಾಳಮ್ಮನಿಗೆ) ಬಿಟ್ಟ ಹೊಲವೊಂದು ಕಾಣಿಸುವದು. (ದೇಹವೇ ಒಂದು ಕ್ಷೇತ್ರ.) ಅಲ್ಲಿರುವ ಕೈಮರವನ್ನು ಹತ್ತಿ ನೋಡಿದರೆ, ಅವನಿಗೆ ಭಯಂಕರವಾದ ನೋಟವೊಂದು ಕಾಣುವದು.

“ಅದರ ಮುಂದ ಗವಿಗುಡ್ಡ ಅಡ್ಡ ಬರತsದ ನಮ್ಮ ಬಲಕ

ಅತ್ತತ್ತ ಹರುಹಿ ಹತ್ತೊತ್ತಿ ಬಂದ ಕಾಳಮ್ಮಗಿರುವ ಹೊಲಕ

ಆ ಹೊಲದ ನಟ್ಟ ನಡುವಿರುವ ಹುಣಸಿಮರ ಏರಿ ನೋಡಿದಾಗ

ಹತ್ತ ಗಿಡದ ಗುಂಪೊಂದು ಕಾಣತದ ಸಣ್ಣ ಏರಿ ಮ್ಯಾಗ.”

ಈ ಹತ್ತು ಗಿಡಗಳ ಗುಂಪೆಂದರೆ ಪಂಚ ಕರ್ಮೇಂದ್ರಿಯಗಳ ಹಾಗು ಪಂಚ ಜ್ಞಾನೇಂದ್ರಿಯಗಳ ಸಮೂಹ. ಈ ಇಂದ್ರಿಯಸಂಕುಲವೇ ನಮ್ಮನ್ನು ಕೊನೆಯಿಲ್ಲದ ಸಂಸಾರದಲ್ಲಿ ಸಿಲುಕಿಸುವ mechanism.

ಅಲ್ಲಿ ಅವನಿಗೆ ಮೃತ್ಯು ಹಾಗು ಜೀವನಗಳ ಸಂಕೇತಗಳಾದ ತೊಗಲಬಾವಲಿ ಹಾಗೂ ಪಾರಿವಾಳಗಳ ಎಡಬಿಡದ ಗಮನಾಗಮನ ಕಾಣುತ್ತದೆ.

“ಅಲ್ಲಿ ತೊಗಲಬಾವಲೀ ಚೀರತಾವ ಭರತಿ ಹಗಲಿನೊಳಗ

ಹಿಂಡು ಪಾರಿವಾಳ ಹೊಕ್ಕ ಹೊರಡತಾವ ಮತ್ತ ಒಳಗ ಹೊರಗ

ಅಲ್ಲಿ ಹಬ್ಬಿ ಹರುಹ್ಯsದ ಬೇವಿಗೇ ಸುತ್ತ ಅಮೃತಬಳ್ಳಿ

ಹಾಲ ಸುರವತಾವ ಆಲ ಅಲ್ಲಿ ಅಲ್ಲಾಡತಾವ ಅಳ್ಳಿ.”

ಆಲದ ಮರವೆಂದರೆ ಜ್ಞಾನೋದಯವನ್ನು ಸಂಕೇತಿಸುವ ಮರ. ಆಲದ ಮರದ ಕೆಳಗೆ ಬುದ್ಧನಿಗೆ ಜ್ಞಾನೋದಯವಾಯಿತು. ಅದು ಸುರಿಸುವ ಹಾಲು ಜೀವನಕ್ಷೀರ. ಆದರೆ ಅರಳಿ ಮರದಲ್ಲಿ ಬ್ರಹ್ಮರಾಕ್ಷಸವಿರುವದೆಂಬುದು ಪೌರಾಣಿಕ ಪ್ರತೀತಿ. ಜೊತೆಜೊತೆಗೇ ಸಂಸಾರವನ್ನು ಪ್ರತಿನಿಧಿಸುವ ಬೇವಿನ ಮರ ಹಾಗು ಅತ್ತಿ ಮರಗಳು ಅಲ್ಲಿ ಕಾಣಿಸುತ್ತವೆ. ಬೇವಿನ ಮರದ ಹಣ್ಣು ಕಹಿಯಾದರೂ ಅದರ ಸುತ್ತಲೂ ಹಬ್ಬಿರುವದು ಅಮೃತದ ಬಳ್ಳಿ.

“ಅತ್ತಿ ಗಿಡಕ ಹತ್ಯಾವ ಹಲಸಿನ್ಹಂಗ ಬುಡುಕು ಕೆಂಪು ಹಣ್ಣು

ಜೇನು ತುಂಬಿ ತೊಟಗುಟ್ಟತಾವ ಅದ ಬಯಸತಾವ ಕಣ್ಣು”

ಹಲಸಿನ ಮರಕ್ಕೆ ಕೈಗೆ ಸಿಲುಕುವ ಎತ್ತರದಲ್ಲಿಯೇ ಹಣ್ಣುಗಳು ಬಿಡುವಂತೆ, ಇಲ್ಲಿರುವ ಅತ್ತಿಯ ಮರಕ್ಕೂ ಸಹ ಕೈಗೆಟುಕುವಂತೆ, ಬುಡದಲ್ಲಿಯೇ ಮನಸ್ಸು ಸೆಳೆಯುವ ಹಣ್ಣುಗಳಾಗಿವೆ. (ಆದರೆ ಅತ್ತಿಯ ಹಣ್ಣುಗಳು ನೋಡಲಿಕ್ಕಷ್ಟೇ ಚಂದ, ತಿನ್ನಲು ಅಲ್ಲ.) ಅಲ್ಲಿ ಜೇನು ತುಂಬಿ ತೊಟ್ಟಿಕ್ಕುತ್ತಿರುತ್ತದೆ. ಅದನ್ನು ಸವಿಯುವ ಬಯಕೆಯನ್ನು ತಪ್ಪಿಸುವದು ಸಾಧಕನಿಗೆ ಸಾಧ್ಯವಾದೀತೆ?

ಈ ಸಂದರ್ಭದಲ್ಲಿ ಇದೇ ಅರ್ಥವನ್ನು ಸೂಚಿಸುವ ಸಾಮತಿಯೊಂದನ್ನು ನೆನಪಿಸಿಕೊಳ್ಳಬಹುದು. ಸಂಸಾರದಲ್ಲಿ ಸಿಲುಕಿದ ಮನುಷ್ಯನೆಂದರೆ, ಹಾಳು ಬಾವಿಯಲ್ಲಿರುವ ಮುಳ್ಳಿನ ಮರಕ್ಕೆ ಜೋತಾಡುತ್ತ, ಆ ಮುಳ್ಳಿನ ಕೊನೆಯಿಂದ ತೊಟಕುವ ಜೇನಹನಿಯನ್ನು ತಿನ್ನಲು ಬಯಸುವ ಮನುಷ್ಯನಂತೆ. ಈ ಮರದ ಟೊಂಗೆಗೆ ಹಾವು ಸುತ್ತಿಕೊಂಡಿದೆಯಂತೆ ಹಾಗು ಬಾವಿಯ ಕೆಳಗೆ ಹುಲಿ ಬಾಯಿ ತೆಗೆದುಕೊಂಡು ನಿಂತಿದೆಯಂತೆ.(ಈ ಸಾಮತಿ ’ಭಾಗವತ’ದಲ್ಲಿ ಇದೆಯೆ?)

ಆದರೆ ಈ ತೋಪಿನ ಮೂಲೆಯಲ್ಲಿ ಬೆಳೆದ ಮಾವಿನ ಮರವೊಂದನ್ನು ಕಂಡು ಸಾಧಕನಿಗೆ ಅಚ್ಚರಿಯಾಗುತ್ತದೆ.

“ಈ ತೋಪಿನ್ಯಾಗ ಬೆಳೆದsದ ಹ್ಯಾಂಗೋ ಮೂಲ್ಯಾಗ ತಪ್ಪಿ ಮಾವು

ಅದರಡಿಗೆ ಹುತ್ತ ಅದರಾಗ ಐತೆ ಒಂದೇಳ ಹೆಡೆಯ ಹಾವು.”

ಇಲ್ಲಿಯವರೆಗಿನ ಭಯಾನಕ ನೋಟ ಈಗ ಬದಲಾಗುತ್ತದೆ. ಈ ಮಾವಿನ ಮರ ಮನಸ್ಸಿಗೆ ಚೈತನ್ಯ ಕೊಡುವ ಪರಮಾರ್ಥದ ಸಂಕೇತವಾಗಿ ತೋರುತ್ತದೆ. ಯಾಕೆಂದರೆ ಇದರ ಅಡಿಯಲ್ಲಿರುವದು ಏಳು ಹೆಡೆಯ ಹಾವು (=ಕುಂಡಲಿನಿ ಶಕ್ತಿ.)

(ಟಿಪ್ಪಣಿ: ವಿಷಯಾಂತರವಾದರೂ ಸಹ ಇಲ್ಲಿ ಒಂದು ಮಾತನ್ನು ಹೇಳಲೇ ಬೇಕು. ಭಾರತೀಯ ಸಂಪ್ರದಾಯವು ಸರ್ಪವನ್ನು ಮೂಲಾಧಾರದಲ್ಲಿ ನಿದ್ರಿಸುತ್ತಿರುವ ಕುಂಡಲಿನಿ ಶಕ್ತಿಗೆ ಹೋಲಿಸುತ್ತ ಬಂದಿದೆ. ಆದರೆ, ಈ ಹೋಲಿಕೆಗೆ ತದ್ವಿರುದ್ಧವಾದ ಹೋಲಿಕೆಯನ್ನು ನೀಡಿದವರು ನಮ್ಮವರೇ ಆದ ಬಸವೇಶ್ವರರು. ಇವರದು ಧೈರ್ಯ ಹಾಗು ಕಲ್ಪನಾಶಕ್ತಿಯ ಉಚ್ಚ ಉದಾಹರಣೆ.

“ಹುತ್ತವ ಬಡಿದರೆ ಹಾವು ಸಾಯಬಲ್ಲುದೆ ಅಯ್ಯಾ?”

ಭಾರತೀಯ ಸಂಪ್ರದಾಯಕ್ಕೆ ವಿರುದ್ಧವಾಗಿ ಮೊದಲ ಬಾರಿಗೆ, ಹಾವನ್ನು ಕಾಮನೆಗಳ ಪ್ರತೀಕವಾಗಿ(Freudian Lust ಆಗಿ) ಬಸವಣ್ಣನವರು ವರ್ಣಿಸಿದರು. ಹುತ್ತವೆಂದರೆ ದೇಹ. ಕೇವಲ ದೇಹದಂಡನೆಯಿಂದ ಕಾಮವನ್ನು ಗೆಲ್ಲುವದು ಅಸಾಧ್ಯ ಎನ್ನುತ್ತಾರೆ ಬಸವಣ್ಣನವರು).

ಕೋಗಿಲೆ ಕನ್ನಡದ ಅನುಭಾವಿಗಳಿಗೆ ನೆಚ್ಚಿನ ಪ್ರತಿಮೆ. ಕೋಗಿಲೆ ಹಾಡುವದೇ ಮಾವಿನ ಮರದಲ್ಲಿ. ನಿಜಗುಣಿ ಶಿವಯೋಗಿಗಳು ’ಕೋಗಿಲೆ’ಯನ್ನು ಮನಸ್ಸಿಗೆ ಹೋಲಿಸಿ ಬರೆದ ಗೀತೆ ಹೀಗಿದೆ:

(’ಕೋಗಿಲೆ, ಚೆಲ್ವ ಕೋಗಿಲೆ,

ಮುದ್ದು ಕೋಗಿಲೆ, ಜಾಣ ಕೋಗಿಲೆ’).

ಬೇಂದ್ರೆಯವರೂ ಸಹ ಅದೇ ಪಲ್ಲವನ್ನು ಬಳಸಿ, ಅದೇ ಧಾಟಿಯಲ್ಲಿ ಕವನವೊಂದನ್ನು ರಚಿಸಿದ್ದಾರೆ. (’ಗರಿ’ ಕವನಸಂಕಲನ). ನಿಜಗುಣಿ ಶಿವಯೋಗಿಗಳ ಈ ಗೀತೆ ಬೇಂದ್ರೆಯವರ ’ಕೋಗಿಲೆ’ ಕವನಕ್ಕೆ form model ಆಗಿದೆ.

ಆದರೆ, ನಿಜಗುಣಿ ಶಿವಯೋಗಿಗಳು ರಚಿಸಿದ ಮತ್ತೊಂದು ಗೀತೆಯಲ್ಲಿ ಬರುವ ಮಾಮರ ಹಾಗು ಕೋಗಿಲೆ ಇವು, ಬೇಂದ್ರೆಯವರ ’ಜೋಗಿ’ ಕವನದಲ್ಲಿರುವ ಮಾಮರ ಹಾಗು ಕೋಗಿಲೆಗೆ concept-model ಆಗಿವೆ ಎನ್ನಬಹುದು.

(ನಿಜಗುಣಿ ಶಿವಯೋಗಿಗಳ ಆ ಗೀತೆಯ ಕೆಲವು ಸಾಲು ಈ ರೀತಿಯಾಗಿವೆ:

“ಸುಳಿವ ಸರಸ್ವತಿ ಗಂಗೆ ಯಮುನೆಯೆಂದೆಂಬ ನದಿ-

ಗಳ ನಡುವೆ ಚೌಕ ಮಧ್ಯದಲಿ| ಕೋಗಿಲೆ||

ನಳನಳಿಸಿ ಬೆಳೆದು ಬೆಳಗುವ ಬಿಂದುವೆಂಬನಿದು

ದಳೆವ ಮಾಮರದ ಮೇಲಿರ್ದು| ಕೋಗಿಲೆ||)

(Incidentally, ನವ್ಯಕವಿ ನಿಸಾರ್ ಅಹಮದ್ ಅವರು ’ಕಾಗೆ’ಯನ್ನು ಕೋಗಿಲೆಗೆ counterಪ್ರತಿಮೆಯಾಗಿ ಬಳಸಿ, ’ಕಾಗೆ ಕೂಗದ ಮುನ್ನ ಏನಿತ್ತಣ್ಣ ಇಲ್ಲಿ?’ ಎಂದು ಕೇಳಿದ್ದಾರೆ.)

ಈ ಮಾವಿನ ಮರದ ಮೇಲೆ ಕೋಗಿಲೆಯೊಂದು ಬಂದು ಕೂತಿದೆ. ಕೋಗಿಲೆ ಮಾವಿನ ಮರಕ್ಕೆ ಬರುವದು ಸುಗ್ಗಿಯ ಕಾಲದಲ್ಲಿ ಮಾತ್ರ. ಕೋಗಿಲೆಯ ಪ್ರತಿಮೆ ಏನನ್ನು ಸೂಚಿಸುತ್ತದೆ? ಇದು ದೈವಿ ಚೈತನ್ಯದ ಪ್ರತೀಕ; ಸಾಧಕನ ಆಧ್ಯಾತ್ಮಿಕ ಸುಗ್ಗಿಯ ಕಾಲದ ಸೂಚನೆಯಾಗಿ ಈ ಕೋಗಿಲೆ ಬಂದಿದೆ. (ಸಾಧಕನಿಗೆ ಈಗಲೇ ಇದರ ಸ್ಪಷ್ಟ ಕಲ್ಪನೆ ಇಲ್ಲ.) ಹಾಗು ಈ ಸಾಧಕನನ್ನು ತನ್ನ ಜೋಡಿಹಕ್ಕಿಯನ್ನು ಕರೆದಂತೆ ಈ ಕೋಗಿಲೆ ಕರೆಯುತ್ತಿದೆ. (’ತನ್ನ ಜೋಡಿ ಕರೆಧಾಂಗ ಕರಿತsದ ನನ್ನ ಬಾರs ಅಂದು’). ಇದರ ದನಿ ಎಷ್ಟು ಜೋರಾಗಿದೆಯೆಂದರೆ ಅದು ಗಿರಣಿಯ ದನಿಯಂತಿದೆ. (ವಿದ್ಯುತ್ ಗಿರಣಿಗಳು ಬರುವದಕ್ಕೂ ಮೊದಲು ಇದ್ದ ಗಿರಣಿಗಳು ಡೀಜೆಲ್(?) ಬಳಸುತ್ತಿದ್ದವು. ಅವು ಪ್ರಾರಂಭವಾಗುವಾಗ ಬಹಳ ಹೊತ್ತಿನವರೆಗೆ ಜೋರಾದ ಸೀಟಿಯನ್ನು ಹೊಡೆಯುತ್ತಿದ್ದವು.)

ಈ ಕೋಗಿಲೆ ಸಾಧಕನನ್ನು ಕರೆಯುವದನ್ನು ನಿಲ್ಲಿಸುತ್ತಲೇ ಇಲ್ಲ(=’ತೆರಪು ಇಲ್ಲ ಒಂದಳತಿ ಕೂಗತsದ’).

“ಆ ಮಾವಿನೊಳಗ ಈ ಸುಗ್ಗಿಯೊಳಗ ಬಂದsದ ಕೋಗಿಲೊಂದು

ತನ್ನ ಜೋಡಿ ಕರೆಧಾಂಗ ಕರಿತsದ ನನ್ನ ಬಾರs ಅಂದು

ಕೂಗೇ ಕೂಗತದ ಕೂಗೇ ಕೂಗತsದ ಗಿರಣಿ ಕರೆಯೊ ಹಾಂಗ

ತೆರಪು ಇಲ್ಲ ಒಂದಳತಿ ಕೂಗತsದ ಬ್ಯಾಸರಿಲ್ಲಧಾಂಗ.”

ಇನ್ನು ಸಾಧಕನ ಮನೋಸ್ಥಿತಿ ಹೇಗಿದೆ?

“ತಿಳಿಯದಾವದೋ ಕಂಪು ಎಳೀತsದ ತುಂಬಿ ಹುಚ್ಚು ಆಗಿ

ಎಚ್ಚರಿಲ್ಲದs ಎತ್ತೊ ತಿರಗತಾವ ದಿಕ್ಕು ತೋರದಾಗಿ

ಬಂತು ಸುಗ್ಗಿ ಬಂದsದ ಸುಗ್ಗಿ ಬರತsದ ಸುಗ್ಗಿ ಎಂದು

ಕುಹೂ ಅನ್ನತದ ಕುಹೂ ಅನ್ನತದ ಕುಹುಕ್ಕುಹೂ ಅಂದು.”

ತುಂಬಿಯನ್ನು ಹುಚ್ಚು ಮಾಡುವಂತಹ ಕಂಪು ವಾತಾವರಣದಲ್ಲಿ ತುಂಬಿದೆ. ಅದು ಎಂತಹ ಕಂಪು ಅನ್ನುವದು ಸಾಧಕನಿಗೆ ತಿಳಿಯದು. ಇಲ್ಲಿಯವರೆಗೂ ಅವನು ಅಂತಹ ಕಂಪನ್ನು ಮೂಸಿಲ್ಲ. ಅವನಿಗೆ ಎಚ್ಚರ ತಪ್ಪಿದಂತಾಗಿದೆ, ದಿಕ್ಕು ತೋರದಂತಾಗಿದೆ. ಅದರ ಜೊತೆಗೇ ಕೋಗಿಲೆಯ ಹಾಡು ಬೇರೆ: ’ಬಂತು ಸುಗ್ಗಿ, ಬಂದsದ ಸುಗ್ಗಿ, ಬರತsದ ಸುಗ್ಗಿ’ ಎಂದು.

ಅಂದರೆ ಇಂತಹ ಸುಗ್ಗಿ ಈ ಮೊದಲೂ ಬಂದಿತ್ತು, ಈಗ ಇಲ್ಲಿ ಬಂದಿದೆ ಹಾಗೂ ಭವಿಷ್ಯದಲ್ಲೂ ಬರುವದು ಎಂದು ಈ ಕೋಗಿಲೆಯ ಕರೆ ಸೂಚಿಸುತ್ತಿದೆ. (ಅರ್ಥಾತ್, ಸುಗ್ಗಿಯೇ ನಿರಂತರ; ಸಂಸಾರವೆಂಬ ಬವಣೆ ತಾತ್ಪೂರ್ತಿಕ. ಈ ಮಾತು ಸಾಧಕನಿಗೆ ನಿಸ್ಸಂಶಯವಾಗಿ ಹೊಳೆದಿದೆ.)

ಈಗ ಮೊದಲ ಬಾರಿ ಸಾಧಕನು ತನ್ನ ಗುರುವಿನ(=ಜೋಗಿಯ) ನೆರವನ್ನು ಬಯಸುತ್ತಾನೆ. ಅವನಿಗೆ ತಾರ ಪಂಚಮದಲ್ಲಿ ಕರೆ ನೀಡುತ್ತಿರುವ ಈ ಕೋಗಿಲೆಯನ್ನು ನೋಡಬಹುದೊ, ಬೇಡವೊ ಎನ್ನುವ ಅನುಮಾನವಿದೆ. ಸಾಧಕನಿಗೆ ಸಿದ್ಧಿಗಳು ಬರುವ ಕಾಲ ಗಂಡಾಂತರದ ಕಾಲ. ಅವು ಅವನ ಹಾದಿಯನ್ನು ತಪ್ಪಿಸಬಹುದು, ಅಥವಾ ಉನ್ನತಿಗೆ ಕರೆದೊಯ್ಯಬಹುದು. ಈ ಕೋಗಿಲೆಯ ಸ್ವರಕ್ಕೆ ಸೋತು, ಅದರಲ್ಲಿ ಲಯವಾಗಿ (ಸಾಧಕನ ಮನಸ್ಸೆಂಬ) ತೋಟವೆಲ್ಲ ಹೂವಾಗಿದೆ, ಹಣ್ಣಾಗಿದೆ. ಬೇರೆ ಕೆಲಸದಲ್ಲಿ ಸಾಧಕನಿಗೆ ಮನಸ್ಸು ತೊಡಗದಂತಾಗಿದೆ. ಕೊಳಲು ನುಡಿಸಿಧಾಂಗ ಕೋಗಿಲೆ ಉಲಿಯುತ್ತದೆ ಎಂದು ಹೇಳುವಲ್ಲಿ, ಈ ಕೋಗಿಲೆಯು ದೈವಿ ಚೈತನ್ಯವೆನ್ನುವ ಸೂಚನೆಯನ್ನು ಬೇಂದ್ರೆ ನೀಡುತ್ತಿದ್ದಾರೆ.

“ತಾರ ಪಂಚಮದಾಗ ಕೋಗಿಲಾ ಕೂಗತsದೊ ಜೋಗಿ

ಯಾವ ಬಣ್ಣ ಅದಕಾವ ಕಣ್ಣು ನಾ ನೋಡಲೇನು ಹೋಗಿ?

ತೋಟವೆಲ್ಲ ಹೂವಾಗಿ ನಿಂತು ತೊಂಗೆಲ್ಲ ಗೊಂಚಲಾಗಿ

ಪಾಡು ಆಗತಾವ, ಹಣ್ಣು ಆಗತಾವ ಅದರ ಲಯಕೆ ತೂಗಿ.”

ಇನ್ನು ಕೋಗಿಲೆಯ ಸ್ಥಿತಿ? ಸಾಧಕನನ್ನು ಕರೆಯುವ ಭರದಲ್ಲಿ ಅದು ಮುಂಜಾವತೊಟ್ಟನ್ನು ಅಂದರೆ ಮುಂಜಾವಿನಲ್ಲಿ ಮೂಡುವ ನೀರತೊಟ್ಟನ್ನು, ಅರ್ಥಾತ್ ಇಬ್ಬನಿಯನ್ನು ಕುಡಿಯುವದನ್ನು (--ಇದು ಕವಿ ಸಮಯ--) ಬಿಟ್ಟುಕೊಟ್ಟು, ತನ್ನ ಕರೆಯ ಸ್ವರವನ್ನು ತೂಗುತ್ತಿದೆ. (ಉಯ್ಯಾಲೆಯಾಡುತ್ತಿರುವ ಸ್ವರ! Pulsating Tune ಎನ್ನಬಹುದೆ?)

“ಮುಂಜಾವತೊಟ್ಟು ಇರು ಹಂಗು ಬಿಟ್ಟು ಬರಿ ಹಾಂಗ ತೂಗತsದೋ

ತಲಿ ಕಾವಿನೊಳಗ ಇಮ್ಮಾವಿನೊಳಗ ಬಿಸಿಗಾಲ ನೂಗತsದೋ

ಕೊಳಲ ನುಡಿಸಿಧಾಂಗ ಕುಹೂಹುಹೂಹೂ ಉಲಿತsದೊ ಜೋಗಿ

ಬೇರೆ ಕೆಲಸದಾಗ ಮನಸು ತೊಡಗದೊ ನೋಡಲೇನು ಹೋಗಿ?”

ಸಿಹಿಯಾದ ಮಾವಿನ ಹಣ್ಣು(ಇಮ್ಮಾವು=ಇನಿದು ಮಾವು) ಅಲ್ಲಿದ್ದರೂ ಸಹ ಅದು ತನ್ನ ತಲೆಯ ಕಾವಿನಲ್ಲಿಯೇ (=ತನ್ನ ಉದ್ದೇಶದಲ್ಲಿಯೇ ಲಕ್ಷವಿಟ್ಟು), ಬಿಸಿಲು ಕಾಲವನ್ನು (in fact ವಸಂತ ಮಾಸವನ್ನು) ಕಳೆಯುತ್ತಿದೆ.

ಈ ಸಮಯದಲ್ಲಿ ತನ್ನ ಶಿಷ್ಯನಿಗೆ ಆಲಂಬನ ನೀಡಲು ಗುರು ಬಂದಿದ್ದಾನೆ. (’ಬಂದೆ ಜೋಗಿ ಬಾ, ಬಾರೊ ಜೋಗಿ ಬಾ, ಏನು ಹೊತ್ತು ಬಂದಿ’, ಅರ್ಥಾತ್ ಅತಿ ಒಳ್ಳೆ ಸಮಯದಲ್ಲಿ ಬಂದಿ. ಏಕೆಂದರೆ), ನೀನು ಉಪದೇಶಿಸಿದ ನಾಮವನ್ನು ಜಪಿಸುವಾಗ ಈ ಸುಗ್ಗಿ ಪ್ರಾರಂಭವಾಗಿದೆ. ತಲೆಯ ಯಾವುದೊ ನಾಡಿಯಲ್ಲಿ ನಾಮದ ಈ ನಾದ ತುಂಬಿ ಮೈಯ ಮೂಲೆ ಮೂಲೆಯನ್ನು ಇದು ಈಗ ವ್ಯಾಪಿಸಿದೆ. ಅರ್ಥಾತ್, ಸಾಧಕನ ಮನಸ್ಸೇ ತೋಟ; ಅಲ್ಲಿಯೇ ದೈವಿ ಸುಗ್ಗಿ ಪ್ರಾರಂಭವಾಗಿದೆ. ಅದರ ಸೂಚನೆಯಾಗಿ ಕೋಗಿಲೆ ಬಂದಿದೆ. ಅದರ ದನಿಯು ಸಾಧಕನ ಮನಸ್ಸನ್ನೆಲ್ಲ ತುಂಬಿ ಬಿಟ್ಟಿದೆ. (ಬೇಂದ್ರೆಯವರ ಮತ್ತೊಂದು ಕವನವನ್ನು ನೆನಪಿಸಿಕೊಳ್ಳಿರಿ:

“ತುಮ್ ತುಮ್ ತುಮ್ ತುಮ್ ತುಮ್ ತುಮ್ ತುಮ್ ತುಮ್ ತುಂಬಿ ಬಂದಿತ್ತs”)

“ಬಂದೆ ಜೋಗಿ ಬಾ, ಬಾರೊ ಜೋಗಿ ಬಾ, ಏನು ಹೊತ್ತು ಬಂದಿ

ನೀನೆ ಹೇಳಿದಾ ನಾಮ ಜಪಿಸುವಾಗ ಬಂತೊ ಸುಗ್ಗಿ ಸಂಧಿ.

ತಲೆಯ ಯಾವುದೊ ನಾಡಿಯೊಳಗ ಸುರುವಾತು ಸುಗ್ಗಿ ಸೊಲ್ಲು

ಮುಂದೆ ಕೇಳಿದರ ಅದs ತುಂಬಿತೋ ಮೂಲೆ ಮೂಲೆಯಲ್ಲು.”

ಬೇಂದ್ರೆಯವರು ಯೋಗಶಾಸ್ತ್ರದ ಅಭ್ಯಾಸಿಗಳು. ಇಡಾ, ಪಿಂಗಲಾ ಮತ್ತು ಸುಷುಮ್ನಾ ನಾಡಿಗಳಲ್ಲಿ ಶಕ್ತಿಸಂಚಲನೆಯಾಗುವದನ್ನು ಬಲ್ಲವರು. ಅವರು “ಗುರು ನೆನೆದರೆ” ಎನ್ನುವ ತಮ್ಮ ಕವಿತೆಯೊಂದರಲ್ಲಿ ಈ ಶಕ್ತಿ ಸಂಚಲನೆಯನ್ನು “ಅಮೃತಾನಾಡಿಯ ಸೂತ್ರಕೆ ಕುಣಿಯುವ ನಿನ್ನಡಿಗೊ” ಎಂದು ಬಣ್ಣಿಸಿದ್ದಾರೆ.

ಸಾಧಕ ಪ್ರಾಪಂಚಿಕ ಮೋಹಕ್ಕಾಗಲೀ, ಸಿದ್ಧಿಗಳ ಹಿಂದೆ ಆಗಲೀ ಬಿದ್ದವನಲ್ಲ. ಅವನಿಗೆ ಕೋಗಿಲೆಯ ಪರಮಾರ್ಥ ಸ್ವರೂಪ ತಿಳಿದಿದೆ. ಅಂತಲೇ, “ಗುಡಿಗೆ ನಾನು ಹೊರಟಾಗ ಕರೀತದ ಕುಹುಕ್ಕುಹೂ ಎಂದು, ಮನದ ಜಪದ ನಡುನಡುವೆ ನಡೀsತsದ ಓಂ ಕುಹೂ ಎಂದು” ಎಂದು ಸಾಧಕ ಹೇಳುತ್ತಾನೆ. ಈ ಕೋಗಿಲೆಯ ಆವಾಸಸ್ಥಾನವಾಗಲು ತಾನೇ ಮಾಮರವಾಗಿ ಬಿಡುವೆನೇನೊ ಎಂದು ಸಾಧಕನಿಗೆ ಭಾಸವಾಗುತ್ತದೆ. ಈ ತನ್ನ ಭ್ರಮೆಯ ಸಂದರ್ಭದಲ್ಲಿ ತನಗೆ ದಾರಿ ತೋರಬಲ್ಲವನಾದ ಗುರು ಬಂದಿರುವದು ಸಾಧಕನನ್ನು ನಿರಾಳನನ್ನಾಗಿ ಮಾಡಿದೆ.

“ಗುಡಿಗೆ ನಾನು ಹೊರಟಾಗ ಕರೀತದ ಕುಹುಕ್ಕುಹೂ ಎಂದು

ಮನದ ಜಪದ ನಡುನಡುವೆ ನಡೀsತsದ ಓಂ ಕುಹೂ ಎಂದು

ಕನಸಿನೊಳಗ ನಾ ಸ್ವರಾ ಕೇಳಿ ಮಾಮರಾ ಆಗತೇನೊ

ಅಂತ ಭ್ರಮಾ ಆಗ್ಯsದ ಮನಕ ನೀ ಬಂದೆ ಜೋಗಿ ಏನೋ!”

ಅಂತೆಯೇ, ತನ್ನ ಸಂಶಯವನ್ನು ಗುರುವಿನ ಮುಂದಿಟ್ಟು ಸಾಧಕ ಬೆಳಕನ್ನು ಬಯಸುತ್ತಾನೆ. ತನ್ನನ್ನು ಸೆಳೆಯುತ್ತಿರುವ ಈ ಕೋಗಿಲೆ ಪರಮಾರ್ಥ ಸಾಧನೆಗೆ ಸಹಾಯಕವಾಗಿದೆಯೆ? ತನ್ನನ್ನು ಇದು ಯಾಕೆ ಬಿಡದಂತೆ ಕರೆಯುತ್ತಿದೆ. ಯಾವ ಬಾಧೆ(=ಬ್ಯಾನಿ) ಇದನ್ನು ಈ ರೀತಿಯಾಗಿ ಪೀಡಿಸುತ್ತಿದೆ? ಇವು ಸಾಧಕನನ್ನು ಕೊರೆಯುತ್ತಿರುವ ವಿಚಾರಗಳು. ಇದರ ಕರೆಯನ್ನು ಕೇಳಿ ಸುತ್ತಲಿನ ಗುಡ್ಡಗಳು ನುಗ್ಗಾಗಿ ಹೋದವು; ಅಂದರೆ, ಪ್ರಕೃತಿ ಕೋಗಿಲೆಯ ದನಿಗೆ ಸ್ಪಂದಿಸುತ್ತದೆ ಎಂದರ್ಥ.

“ಯಾವ ಸ್ವರಾ ಇದು ಯಾವ ಕೋಗಿಲಾ ಯಾವ ಮರವೊ ಏನೋ

ಯಾಕ ಹಿಂಗ ಅಸರಂತ ಕೂಗತದ ಏನು ಇದಕೆ ಬ್ಯಾನ್ಯೊ

ಸುತ್ತು ಗುಡ್ಡ ನುಗ್ಗಾಗಿ ಹೋದವೋ ಓಗೊಟ್ಟು ಇದಕs

ಬಿಸಿಲು ಕುಣಿದು ಬೆವತsದ ಈಗ ಬಂದsದ ಮಳಿಯ ಹದಕs.”

ಇಂತಹ ಎಲ್ಲ ಭ್ರಮೆಗಳ ನಡುವೆಯೂ ಸಾಧಕನ ಮನಸ್ಸಿನಲ್ಲಿ ಒಂದು ಸಂಗತಿ ನಿಚ್ಚಳವಾಗಿ ಕಾಣುತ್ತದೆ. ಅದಕ್ಕೆಂತಲೇ ಆತ ಹೇಳುತ್ತಾನೆ:

“ಬಿಸಿಲು ಕುಣಿದು ಬೆವತsದ ಈಗ ಬಂದsದ ಮಳಿಯ ಹದಕs’.

ಭೂಮಿಯು ಮಳೆಯನ್ನು ಪಡೆಯಲು ಹದವಾಗಿದೆ. ಅದರಂತೆ ತನ್ನ ಮನೋಭೂಮಿಕೆ ಸಹ ಮುಂದಿನ ಸಾಧನೆಗಾಗಿ ಹದವಾಗಿದೆ.

ಕವನ ಇಲ್ಲಿಗೆ ಮುಕ್ತಾಯವಾಗುತ್ತದೆ. ಸಾಧಕನು ಬಹುಶಃ ತನ್ನ ಸಾಧನಾಪಥದಲ್ಲಿ ಮುಂದುವರೆಯುವಬಹುದೆಂದು ಭಾಸವಾಗುತ್ತದೆ.

ಈ ಕವನದಲ್ಲಿ ಮೂರು ಭಾಗಗಳಿರುವದನ್ನು ಕಾಣಬಹುದು. ಮೊದಲನೆಯ ಭಾಗದಲ್ಲಿ ಸಾಧಕನಿಗೆ ಎದುರಾಗುವ ಭಯಂಕರ ಆಮಿಶಗಳು. (ಬುದ್ಧನ ಕತೆಗಳಲ್ಲಿಯೂ ಸಹ, ಆತನು ಜ್ಞಾನೋದಯದ ಸಮಯದಲ್ಲಿ ’ಮಾರ’ನೊಡನೆ ಹೋರಾಡಿದ ವರ್ಣನೆ ಬರುತ್ತದೆ). ಎರಡನೆಯ ಭಾಗದಲ್ಲಿ ಕೋಗಿಲೆಯ ಆಗಮನದಿಂದಾಗುವ ಬದಲಾಗುವ ವಾತಾವರಣ. ಮೂರನೆಯ ಭಾಗದಲ್ಲಿ ಸಾಧಕನ ತಿಳಿಯಾಗುತ್ತಿರುವ ಮನಸ್ಸು. ಈ ಅಲೌಕಿಕ ವ್ಯಾಪಾರವರ್ಣನೆಯನ್ನು, ಬೇಂದ್ರೆ ಲೌಕಿಕ ಪ್ರತಿಮೆಗಳ ಮೂಲಕ ಸಮರ್ಥವಾಗಿ ಚಿತ್ರಿಸಿದ್ದಾರೆ. ಇಷ್ಟು ದಟ್ಟವಾದ ವಾತಾವರಣದ ಸೃಷ್ಟಿಯನ್ನು ಮಾಡಿದ ಕವಿತೆಗಳು ವಿರಳ. ಬಹುಶ: ಬೇಂದ್ರೆಯವರದೇ ಇನ್ನೆರಡು ಕವಿತೆಗಳು (’ಸಣ್ಣ ಸೋಮವಾರ’ ಹಾಗು ’ದೇಮವ್ವನ ಮೆರವಣಿಗೆ’) ಇಂತಹ ಯಶ ಪಡೆದ ಕವಿತೆಗಳು.

ಬೇಂದ್ರೆಯವರು ಈ ಕವಿತೆಗೆ ’ಜೋಗಿ’ ಎನ್ನುವ ಶೀರ್ಷಿಕೆಯನ್ನು ಯಾಕೆ ಕೊಟ್ಟಿರಬಹುದು? In fact, ಜೋಗಿ ಇಲ್ಲಿ ಅಪ್ರತ್ಯಕ್ಷನಾಗಿ ಇದ್ದಾನೆ. ಸಾಧಕನ ತಳಮಳ, ಕೋಗಿಲೆಯ ಮೋಹಕ ಕರೆ, ಕೋಗಿಲೆಯ ಬಗೆಗೆ ಅವನಿಗೆ ಇರುವ ಪ್ರಾಥಮಿಕ ಸಂಶಯ ಹಾಗು ತನ್ನಂತರದ ಭರವಸೆ ಇವೇ ಈ ಕವನದಲ್ಲಿಯ ಪ್ರತ್ಯಕ್ಷ ವಿಷಯಗಳು.

ಜೋಗಿ ಇಲ್ಲದಿದ್ದರೆ, ಇವು ಯಾವೂ ಇರುತ್ತಲೆ ಇರಲಿಲ್ಲ; ಸಾಧಕನಿಗೆ ಜೋಗಿ ಕೊಟ್ಟ ನಾಮದೀಕ್ಷೆಯಿಂದಲೇ ಇದೆಲ್ಲ ಪ್ರಾರಂಭವಾಯಿತು ಎನ್ನುವ ಕಾರಣಕ್ಕಾಗಿ ಈ ಶೀರ್ಷಿಕೆ ಕೊಟ್ಟಿರಬಹುದೆ?

ಅಡ್ಡ ಟಿಪ್ಪಣಿಗಳು:

೧). ಕೋಗಿಲೆ ಕನ್ನಡ ಕವಿಗಳಿಗೆ ಪ್ರಿಯವಾದ ಹಕ್ಕಿ. ಆದಿಕವಿ ಪಂಪ ತನ್ನ ಮಹಾಕಾವ್ಯ ’ವಿಕ್ರಮಾರ್ಜುನ ವಿಜಯ’ದಲ್ಲಿ ಕೋಗಿಲೆಯಾಗಿ ಮರುಹುಟ್ಟು ಪಡೆಯಲು ಬಯಸಿದ್ದಾನೆ:

“ಮರಿದುಂಬಿಯಾಗಿ ಮೇಣ್ ಕೋಗಿಲೆಯಾಗಿ ಪುಟ್ಟುವದು ನಂದನದೊಳ್ ಬನವಾಸಿ ದೇಶದೊಳ್”.

೨). ಕನ್ನಡ ಚಲನಚಿತ್ರ ಕವಿಗಳೂ ಸಹ ಕೋಗಿಲೆಯನ್ನು ತಮ್ಮ ಚಿತ್ರಗೀತೆಯಲ್ಲಿ ಬಳಸಿಕೊಂಡಿದ್ದಾರೆ:

(ಇದನ್ನು ಬರೆದವರು ಕು. ರಾ. ಸೀತಾರಾಮ ಶಾಸ್ತ್ರಿಗಳು ಆಗಿರಬಹುದೆ?)

“ಇನಿಯ ಕೋಗಿಲೆಯ ಪಂಚಮದಿಂಚರ

ಮೊಳಗಿತು, ಮರಳಿತು ಮಧುಮಾಸ.

ಓ ಎನ್ನ ಕೋಗಿಲೆ, ಬಾ ಎನ್ನ ಕೋಗಿಲೆ,

ಇನ್ನೇಕೆ ಕಣ್ಣಾಮುಚ್ಚಾಲೆ?”

ಹೆಚ್ಚಿನ ಓದಿಗೆ : http://sallaap.blogspot.com/2008/04/blog-post_15.html

೨.ಏಲಾಗೀತ

’ಏಲಾಗೀತ’ ಕವನವು ಬೇಂದ್ರೆಯವರ ’ಗಂಗಾವತರಣ’ ಕವನಸಂಕಲನದಲ್ಲಿ ಸೇರ್ಪಡೆಯಾಗಿದೆ. ಕವನದ ಪೂರ್ತಿಪಾಠ ಹೀಗಿದೆ:

ಏಲಾವನ ಲವಲೀಬನ ಲವಂಗ ಬನಗಳಲಿs

ನಾಗಲತಾ ಸಂಕುಲ ಬನವಾಸಿಯ ಜನಗಳಲಿsss

ಲೀಲಾಂದೋಲಿತ ದೋಲಾ ಲಲನಾ ಮಣಿಗಳಲಿss | ಏಲಾವನ

ಏಲಾಪದ ಲೀಲಾಪದ ಆಲಾಪದ ಸರಣಿs

ಸಖಸಖಿಯರ ಮೇಳಾಪದೆ ತೆರೆದಿರೆ ಎದೆ ಭರಣಿs

ಆಲಿಸುತಿವೆ ಮಾಲಿಸುತಿವೆ ಹರಿಣದ ಜತೆ ಹರಿಣಿs | ಏಲಾವನ

ಙಂ ಞಣನಮಾ, ಅಂ ಜ್ಞ ಓಂ, ಜಂ ಸಂ ಶಂ ಎಂಬಾ

ಅಂಬಾಗರೆವುದು ವಾಣಿಯ ವೀಣೆಯು ಬಾಯ್ತುಂಬಾ

ಬಾ ಅಮ್ಮಾ ಅಮ್ಮಾ ಬಾ ಬಾರೇ ಜಗದಂಬಾ. | ಏಲಾವನ

ಉಸಿರುಸಿರಲಿ ಸರಿವರಿದೂ ಊದೂದುತ ನಲಿದು

ದನಿಯೆ ನದಿಯೊಲು ಚಲಿಸಿತು ಕೊಂಕೊಂಕೆನೆ ಒಲೆದು

ಅಲೆಯಾಯಿತು ಬಲೆಯಾಯಿತು ಜಗದಗಲಕೆ ಸೆಲೆದು. | ಏಲಾವನ

ಕಿನ್ನರಕಿನ್ನರಿ ಮಿಥುನವು ಅರೆಅರೆ ಮೈಗೂಡಿ

ನುಡಿಯಲಿ ಹುದುಗಿದ ಹುರುಳೊಳು ಹದುಳದೊಳೊಡಮೂಡಿ

ನಾಲಿಗೆ ನಾಡಿಯನಾಡಿಸಿ ಸ್ವರಮೂರ್ತಿಯ ಮಾಡಿ. | ಏಲಾವನ

ನರಗಳಲಿಂಗಿಂಗೀ ನರನಾಳದೆ ತಂಗಿs

ಲಾಸ್ಯದಿ ಹಾಸ್ಯವ ಮಿಂಚಿಸಿ ಪರಶಿವನರ್ಧಾಂಗಿss

ತಾಲದಿ ಕಾಲವ ಸೊಲ್ಲಿಸುವಂತಿದೆ ಈ ಭಂಗಿss. | ಏಲಾವನ

ನೆಲೆಗೆಡಿಸುವ ವಾಸನೆಗಳ ಎದೆಬೀಜವ ಸೀಳಿ

ರತಿರಮಣನ ನಿಜಜನಕನ ಎದೆಯಾಳವನಾಳಿ

ಹೃದಯಾಕೂತಿಯ ಅನುಪಮ ಲಾವಣ್ಯವ ತಾಳಿ. | ಏಲಾವನ

ಸ್ವಾದದ ನಾದದ ಮೋದದ ಒಳಬಸಿರನೆ ಬಗೆದು

ಹುಂಕಾರದ ಒಳನೂಲನು ಮೆಲ್ಲನೆ ಹೊರದೆಗೆದು

ಶಬ್ದಕೆ ಹಾಸಿಗೆಯಾಗಿಹ ತನಿಮೌನದಿ ಮುಗಿದು. | ಏಲಾವನ

ಯಾಳದ ಜತಿ, ಏಳೆಯ ಗತಿ ಏಳೇಳೇಳೆಂದು

ಎಬ್ಬಿಸಿ, ಮಬ್ಬನು ಚೆದರಿಸಿ ಬಾಳ್ ಬಾಳ್ ಬಾಳೆಂದು

ತಂತಿಯ ತಾಳಕೆ ಮಿಡಿದಿರೆ, ಎಲ್ಲಾಯಿತು ಒಂದು. | ಏಲಾವನ

ಏಳೆಯ ಬಸಿರೊಳು ಮಲಗಿದ ಯಾವುದೊ ಗತಿ ಚಿತ್ರ

ದನಿ ಪಡೆದಿತು, ತಿಳಿದೆದ್ದಿತು ಕಣ್ಬಡೆದು ವಿಚಿತ್ರ

ಆಕ್ಷಣವನು ಈಕ್ಷಣವನು ಮಾಡಿತು ಸುಪವಿತ್ರ. | ಏಲಾವನ

……………………………………………………..

…………………………………………………….

ಕಾವ್ಯೋದ್ಯೋಗವು ಅನೇಕ ಕವಿಗಳಿಗೆ ಶಬ್ದ-ಯೋಗ ; ಆದರೆ ಬೇಂದ್ರೆಯವರಿಗೆ ಅದು ನಾದ-ಯೋಗ. ನವ್ಯಕವಿಗಳಿಗಂತೂ ಅದು ಒಂದು intellectual exercise. ಶ್ರೀ ಏ.ಕೆ ರಾಮಾನುಜನ್ ಅವರು ಬರೆದ ಕವಿತೆಯ ಈ ಸಾಲುಗಳು ಇಂತಹ ಧೋರಣೆಗೆ ಒಳ್ಳೆಯ ಉದಾಹರಣೆ ಆಗಿವೆ:

“ಕವಿತೆ ಬರೆಯುವದು ಕಷ್ಟವೆ, ಸ್ವಾಮಿ?

ಬರೆಯದಿರುವದೆ ಕಷ್ಟ.”

ಕವಿತೆ ಇವರಿಗೆ ಕೇವಲ ’ಬರೆಯುವ’ ವಸ್ತುವಾಗಿದೆ. ಬೇಂದ್ರೆಯವರ ಮನಸ್ಸಿನಲ್ಲಿ ಕವನವು ಬಹುತೇಕವಾಗಿ ನಾದರೂಪದಿಂದ ಮೂಡುತ್ತಿತ್ತು ಎನ್ನುವ ಮಾತನ್ನು ಅವರು ತಮ್ಮ ಅನೇಕ ಕವನಗಳಲ್ಲಿ ವ್ಯಕ್ತಪಡಿಸಿದ್ದಾರೆ. ಉದಾಹರಣೆಗೆ ’ಗಂಗಾವತರಣ’ ಕವನಸಂಕಲನದಲ್ಲಿಯ ’ “ಗಾಳಿಗಡಲಿನಲ್ಲಿ” ಕವನದ ಮೊದಲ ನುಡಿಯನ್ನು ನೋಡಿರಿ:

“ಗಾಳಿಗಡಲಿನಲ್ಲಿ ತೇಲಿ ಬರುತಲಿಹವು ನಾದಾ

ಭಂಡವಾಳದಂತೆ ತುಂಬಿ ವಿವಿಧ ಭಾವ ಮೋದಾ

ಯಾವ ಗೆಳೆಯ ಗುರುವಿನಿಂದ ಬಂದಿತೋ ಪ್ರಸಾದಾ

ಎನುವೆ ಹೈ ಹಸಾದಾ ||”

ಅಥವಾ ಅದೇ ಕವನಸಂಕಲನದ “ಕಣ್ಣ ಕಾಣಿಕೆ” ಕವನದ ಮೊದಲ ನುಡಿಯನ್ನು ನೋಡಿರಿ:

“ ಅಂತರಂಗದಾ ಮೃದಂಗ ಅಂತು ತೋಂ ತನಾನಾ |

ಚಿತ್ತ ತಾಳ ಬಾರಿಸುತ್ತಲಿತ್ತು ಝಂಝಣಾಣಾ |

ನೆನವು ತಂತಿ ಮೀಟುತಿತ್ತು ತಂತನನ ತಾನಾ ||

ಅಂತರಂಗದಾ……..”

‘ಏಲಾಗೀತ ’ ಸಹ ಕಾವ್ಯ-ಸೃಷ್ಟಿಯನ್ನು ವರ್ಣಿಸುವ ಒಂದು ಅದ್ಭುತವಾದ ಕವನ. ಕವನ ಪ್ರಾರಂಭವಾಗುವದು ಬನವಾಸಿಯ ವರ್ಣನೆಯಿಂದ. ಈ ಕವನಕ್ಕೆ ಬನವಾಸಿಯದೇನು relevance ಎನ್ನುವ ಪ್ರಶ್ನೆ ಬರಬಹುದು. ‘ಏಲಾಗೀತ’ವು ಎಲ್ಲಿಯೋ ಹುಟ್ಟುವಂತಹ ಕವನವಲ್ಲ. ಈ ಗೀತೆಗೆ ಮನೋಹರವಾದ ನಿಸರ್ಗ ಹಾಗು ಅಷ್ಟೇ ಧೀಮಂತರಾದ ಜನರು ಬೇಕು. ಇವರು ವನವಾಸಿ ಜನರು ಅನ್ನುವ ಒಂದು ಅರ್ಥಸಾಧ್ಯತೆ ಇದೆ. ಆದರೆ ಎಲೆ, ಲವಂಗ ಮೊದಲಾದ ಪದಾರ್ಥಗಳು ಬೆಳೆಯುವ ದೇಶವೆಂದರೆ ಘಟ್ಟದ ಪ್ರದೇಶವಾದ ಬನವಾಸಿ ಹಾಗು ನಮ್ಮ ಬನವಾಸಿಯಲ್ಲಿರುವ ಜನರು ಸಂಸ್ಕಾರಸಂಪನ್ನರೆಂದು ಕನ್ನಡದ ಆದಿಕವಿ ಪಂಪ ಪ್ರಮಾಣಪತ್ರವನ್ನೆ ಕೊಟ್ಟಿದ್ದಾನೆ.

“ಚಾಗದ ಭೋಗದಕ್ಕರದ ಗೇಯದ ಗೊಟ್ಟಿ

ಯಲಂಪಿನಿಂಪಿಗಳ್ಗಾರವಾದ ಮಾನಸರೆ ಮಾನಸರ್

…………………………..

……………………………

ಮರಿದುಂಬಿಯಾಗಿ ಮೇಣ್ ಕೋಗಿಲೆಯಾಗಿ

ಪುಟ್ಟುವದು ನಂದನದೊಳ್ ಬನವಾಸಿ ದೇಶದೊಳ್

…………………………………………….

…………………………………………..

‘ಏಲಾಗೀತ’ ಕವನದ ಮೊದಲನೆಯ ನುಡಿಯನ್ನು ನೋಡಿರಿ:

“ಏಲಾವನ ಲವಲೀಬನ ಲವಂಗ ಬನಗಳಲಿs

ನಾಗಲತಾ ಸಂಕುಲ ಬನವಾಸಿಯ ಜನಗಳಲಿsss

ಲೀಲಾಂದೋಲಿತ ದೋಲಾ ಲಲನಾ ಮಣಿಗಳಲಿss | ಏಲಾವನ”

ಏಲಾ ಇದು ವಿರಳವಾಗಿ ದೊರೆಯುವ ಒಂದು ಆಯುರ್ವೇದೀಯ ಸಸ್ಯ. ಇದರ ಸಸ್ಯಶಾಸ್ತ್ರೀಯ ಹೆಸರು: mimosa octandra. ಸಂಸ್ಕೃತದಲ್ಲಿ ಇದಕ್ಕೆ ‘ರಸ್ನಾ’ ಎಂದೂ ಅನ್ನುತ್ತಾರೆ. ಇದರ ಇತರ ಭಾರತೀಯ ಹೆಸರುಗಳು ವಲ್ಲಗ ಹಾಗೂ ಬದರಾ. ಲವಲೀವನ ಅಂದರೆ ಅರೆನೆಲ್ಲಿಯ ವನ; ಲವಂಗವಂತೂ ನಮಗೆಲ್ಲರಿಗೂ ಗೊತ್ತಿದ್ದದ್ದೆ. ನಾಗಲತೆ ಅಂದರೆ ಒಂದು ಜಾತಿಯ ವೀಳ್ಯದೆಲೆ.

ಇಂತಹ ಸಸ್ಯಗಳಿಂದ ತುಂಬಿರುವ ಬನವಾಸಿಯ ತೋಟಗಳಲ್ಲಿ ಹೆಣ್ಣು ಮಕ್ಕಳು ಉಯ್ಯಾಲೆಗಳಲ್ಲಿ (=ದೋಲಾ) ನಿರಾಯಾಸ ಕ್ರಮದಲ್ಲಿ (=ಲೀಲಾಂದೋಲಿತ), ತಮ್ಮನ್ನು ತೂಗಿಕೊಳ್ಳುತ್ತ, ಗೆಳೆಯ ಗೆಳೆತಿಯರ ಜೊತೆಗೆ ಹಾಡುತ್ತ ಕಾಲ ಕಳೆಯುವರು. ಗೆಳೆಯ- ಗೆಳತಿಯರ ಗೀತಾಲಾಪನೆಯ ವರ್ಣನೆ ಈ ಮುಂದಿನ ನುಡಿಯಲ್ಲಿದೆ:

“ಏಲಾಪದ ಲೀಲಾಪದ ಆಲಾಪದ ಸರಣಿs

ಸಖಸಖಿಯರ ಮೇಳಾಪದೆ ತೆರೆದಿರೆ ಎದೆ ಭರಣಿs

ಆಲಿಸುತಿವೆ ಮಾಲಿಸುತಿವೆ ಹರಿಣದ ಜತೆ ಹರಿಣಿs | ಏಲಾವನ ”

ಸಖ ಸಖಿಯರು ಜೊತೆಗೂಡಿ (=ಮೇಳಾಪಿಸಿ), ಪರಸ್ಪರ ಸ್ನೇಹದಲ್ಲಿ ಅವರು ಮುಕ್ತಮನಸ್ಕರಾದಾಗ (=ತೆರೆದಿರೆ ಎದೆ ಭರಣಿ), ಹಾಡುವ ಗೀತೆಗಳನ್ನು ಗಂಡು ಹಾಗು ಹೆಣ್ಣು ಚಿಗರೆಗಳು ಆಲಿಸುತ್ತ ಹಾಗು ಪರಸ್ಪರರನ್ನು ತಿಕ್ಕುತ್ತ (ಮಾಲಿಸು=bend), ಆನಂದಭರಿತವಾಗಿ ನಿಂತುಕೊಂಡಿವೆ. ಅಂದರೆ ತೋಟಗಳಲ್ಲಿ ಗೆಳೆಯ ಗೆಳತಿಯರು ತೂಗಿಕೊಳ್ಳುತ್ತ ಗೀತೆಗಳನ್ನು ಹಾಡುತ್ತಿದ್ದರೆ, ಮೃಗಗಳೂ ಸಹ ಈ ಗೀತೆಗಳನ್ನು ಕೇಳುತ್ತಿವೆ. ಅಷ್ಟು ಸಮ್ಮೋಹಕವಾದ ಗಾಯನವಿದು. ಅಂತಹ ಯಾವ ಗೀತೆ ಅಥವಾ ಸಂಗೀತವಿರಬಹುದು ಇದು ಎನ್ನುವ ಪ್ರಶ್ನೆಗೆ ಉತ್ತರ ಈ ನುಡಿಯ ಮೊದಲ ಸಾಲಿನಲ್ಲಿಯೇ ಇದೆ: “ಏಲಾಪದ ಲೀಲಾಪದ ಆಲಾಪದ ಸರಣಿs”

ಈ ’ಏಲಾಪದ’ ಅಂದರೆ ಏನು? ಏಲಾಪದ= ಏಲಾ+ಪದ. ಕನ್ನಡದಲ್ಲಿ ಏಲಾ ಅನ್ನುವ ತ್ರಿಪದಿ ವರ್ಗದ ಒಂದು ಛಂದಸ್ಸಿದೆ. ಆ ಛಂದಸ್ಸಿನ, ತ್ರಿಪದಿವರ್ಗದ ಗೀತೆಗಳನ್ನು ಸಹಜ ಸರಳತೆಯಿಂದ (=ಲೀಲಾ-ಪದ) ಇವರು ಆಲಾಪಿಸುತ್ತಿದ್ದಾರೆ. ಗೀತೆಗಳು ಸಹಜವಾಗಿ ನಿರಾಯಾಸವಾಗಿ ಬರುತ್ತಿರುವದರಿಂದ ಅವು ಲೀಲಾ-ಪದಗಳ ಸರಣಿಯಾಗಿವೆ.

ಮೃಗಗಳನ್ನು ಸಹ ಮೈಮರೆಸುವಂತಹ ಈ ಸಂಗೀತವು ಕೇವಲ ಮಾನುಷಿಕ ಸಂಗೀತವಾಗಿರಲಾರದು. ಈ ಸಂಗೀತದ ಮೂಲವು ದೇವಿ ಸರಸ್ವತಿಯ ವೀಣೆಯಲ್ಲಿದೆ :

“ಙಂ ಞಣನಮಾ, ಅಂ ಜ್ಞ ಓಂ, ಜಂ ಸಂ ಶಂ ಎಂಬಾ

ಅಂಬಾಗರೆವುದು ವಾಣಿಯ ವೀಣೆಯು ಬಾಯ್ತುಂಬಾ

ಬಾ ಅಮ್ಮಾ ಅಮ್ಮಾ ಬಾ ಬಾರೇ ಜಗದಂಬಾ. | ಏಲಾವನ”

ಈ ವೀಣೆಯ ಧ್ವನಿಯನ್ನು ನೋಡಿರಿ (ಅಥವಾ ಕೇಳಿರಿ): “ಙಂ ಞಣನಮಾ, ಅಂ ಜ್ಞ ಓಂ, ಜಂ ಸಂ ಶಂ”.

‘ಙಂ ಞ ಣ ನ ಮಾ’ ಇವು ವರ್ಗೀಯ ವ್ಯಂಜನಗಳ ಕೊನೆಯ ಅನುನಾಸಿಕಗಳು : ಇವು ಕೆಳಗಿನಂತಿವೆ:

ಕ ಖ ಗ ಘ ಙ

ಚ ಛ ಜ ಝ ಞ

ಟ ಠ ಡ ಡ ಣ

ತ ಥ ದ ಧ ನ

ಪ ಫ ಬ ಭ ಮ

ಈ ನುಡಿಯ ಮೊದಲ ಸಾಲಿನಲ್ಲಿಯ ‘ಅಂ ಜ್ಞ ಓಂ ಜಂ ಸಂ ಶಂ’ ಏನನ್ನು ಸೂಚಿಸುತ್ತವೆ ಎನ್ನುವದು ನನಗೆ ತಿಳಿಯದು. ‘ಅಂ’ ಎನ್ನುವದು ಸ್ವರಗಳ ಕೊನೆಯಲ್ಲಿ ಬರುವ ಪ್ರಥಮ ಅನುನಾಸಿಕ ಹಾಗು ‘ಶಂ’ ಎನ್ನುವ ಪದವನ್ನು ನಮ್ಮ ಮಠಾಧೀಶರು ತಮ್ಮ ಓಲೆಗಳ ಕೊನೆಯಲ್ಲಿ ಬಳಸುತ್ತಾರೆ ಎನ್ನುವ ಕಾರಣವಿರಬಹುದು.

( ‘ಇತಿ ಶಮ್’=ಇತಿ ಮಂಗಳಮ್.) ಬೇಂದ್ರೆಯವರಿಗೇ ಗೊತ್ತಿರುವ ಕೆಲವು ಮಂತ್ರಗಳ ಬೀಜಾಕ್ಷರಗಳೂ ಇರಬಹುದು. ಅಥವಾ ಸಂಗೀತದ ಮೂರು ಗ್ರಾಮಗಳ ( ಷಡ್ಜ, ಮಧ್ಯಮ ಹಾಗು ಗಾಂಧರ್ವ) ಸಂಕೇತಗಳಾಗಿರಬಹುದು. ಅಥವಾ ಬೇಂದ್ರೆಯವರಿಗೆ ತಮ್ಮ ನಾದ-ಯೋಗ-ಸ್ಥಿತಿಯಲ್ಲಿ ಹೀಗೆ ಕೇಳಿಸಿರಬಹುದು.

ಒಟ್ಟಿನಲ್ಲಿ ದೇವಿ ಸರಸ್ವತಿಯ (=ವಾಣಿಯ) ವೀಣೆಯು ಹೊರಡಿಸುವ ಸ್ವರವು ಅನುನಾಸಿಕಗಳ ಧ್ವನಿಯಂತೆ ಸೂಕ್ಷ್ಮ ಹಾಗು ಮಧುರವಾಗಿದೆ ಎನ್ನಬಹುದು. ಅಷ್ಟೆ ಅಲ್ಲ, ಬಾಯ್ತುಂಬಾ “ಅಂಬಾ, ಜಗದಂಬಾ, ಬಾ ಅಮ್ಮಾ” ಎಂದು ಕರುವು ತನ್ನ ತಾಯಿಯನ್ನು ಕರೆಯುವಂತೆ ಈ ವೀಣೆ ಸ್ಫುರಿಸುತ್ತಿದೆ. ಅಂದರೆ ಇದು ದೈವಿಕವಾದ ಸಂಗೀತ. ಇದರಲ್ಲಿ ಸಂಪೂರ್ಣ ವಿಶ್ವದ ಬಗೆಗೆ ವಾತ್ಸಲ್ಯ ತುಂಬಿದೆ. ಈ ವಾತ್ಸಲ್ಯದ, ಪ್ರೀತಿಯ, ಭಕ್ತಿಯ ಸ್ವರ ಇಡೀ ವಿಶ್ವವನ್ನೆ ವ್ಯಾಪಿಸುವ ಪರಿಯನ್ನು ಬೇಂದ್ರೆ ಮುಂದಿನ ನುಡಿಯಲ್ಲಿ ವರ್ಣಿಸಿದ್ದಾರೆ:

“ ಉಸಿರುಸಿರಲಿ ಸರಿವರಿದೂ ಊದೂದುತ ನಲಿದು

ದನಿಯೆ ನದಿಯೊಲು ಚಲಿಸಿತು ಕೊಂಕೊಂಕೆನೆ ಒಲೆದು

ಅಲೆಯಾಯಿತು ಬಲೆಯಾಯಿತು ಜಗದಗಲಕೆ ಸೆಲೆದು. | ಏಲಾವನ ”

ಈ ಸಖ ಸಖಿಯರ ಗೀತೆಯ, ಸರಸ್ವತಿಯ ಈ ಸಂಗೀತದ ‘ದನಿ’ಯೇ ಸೆಲೆಯೊಡೆದು (=ಹೊರಹೊಮ್ಮಿ) ‘ನದಿ’ಯಾಯಿತು !

(ಬೇಂದ್ರೆಯವರು ಪದಗಳೊಡನೆ ಆಟವಾಡುವ ರೀತಿಯಿದು. ಇಂತಹ ಮತ್ತೊಂದು ಉದಾಹರಣೆ: ‘ದೇವಕಾಮವೆ ಕಾಮದೇವನಾಗಿ’ ). ನಾದದ ಈ ನದಿ ಬನವಾಸಿಯ ಘಟ್ಟಪ್ರದೇಶದಲ್ಲಿ ವಕ್ರವಾಗಿಯೇ (=ಕೊಂಕೊಂಕೆನೆ) ಹರಿಯಬೇಕಲ್ಲವೆ? ಹಾಗೆ ಹರಿಯುತ್ತಲೆ, ಅದು ಅಲೆಯಾಯಿತು ಹಾಗು ಇಡೀ ವಿಶ್ವವನ್ನೇ ಸೆರೆ ಹಿಡಿಯುವ ಬಲೆಯಾಯಿತು !

ಇಂತಹ ದೈವೀ ಸಂಗೀತವನ್ನು ಮನುಷ್ಯರು ಹಾಡುವದು ಸಾಧ್ಯವೆ? ಕಿನ್ನರ ಲೋಕದಲ್ಲಿರುವ ಕಿನ್ನರಕಿನ್ನರಿ ಮಿಥುನವೇ ಬನವಾಸಿಯಲ್ಲಿಯ ಗೆಳೆಯ-ಗೆಳೆತಿಯರಿಂದ ಈ ಸ್ವರವನ್ನು ಹೊರಡಿಸುತ್ತಿದೆ. ಕಿನ್ನರ ಹಾಗು ಕಿನ್ನರಿ ಈ ಪದಗಳನ್ನು ಬೇಂದ್ರೆಯವರು ಜೊಡಿಸಿಯೇ ಬರೆದಿದ್ದಾರೆ ಎನ್ನುವದನ್ನು ಗಮನಿಸಬೇಕು. ಅಶ್ವದೇಹ ಹಾಗು ಮನುಷ್ಯಮುಖವುಳ್ಳ ಈ ‘ಕಿನ್ನರ’ ಎನ್ನುವ ಜೀವಿ ಒಂದು ರೀತಿಯಲ್ಲಿ ಅರ್ಧನಾರೀ ನಟೇಶ್ವರ. ಏಕೆಂದರೆ ಕಿನ್ನರ ಹಾಗು ಕಿನ್ನರಿ ಬೆಸೆದುಕೊಂಡಿರುತ್ತಾರೆ ಎನ್ನುವದು ಪೌರಾಣಿಕ ಆಖ್ಯಾನ. (=ಅರೆ ಅರೆ ಮೈಗೂಡಿ). ಅವರು ನಾಲಿಗೆಯ ನಾಡಿಯನ್ನು (=ಸೂಕ್ಷ್ಮದೇಹದ ನಾಲಿಗೆಯನ್ನು) ಆಡಿಸಿ, ಸ್ವರದ ಮೂರ್ತಿಯನ್ನು ನಿರ್ಮಿಸುತ್ತಾರೆ. {ದೈವೀ ವೀಣೆಯಲ್ಲಿಂದ ಹೊಮ್ಮಿದ ಪರಾ(=ಅನುಭವದ ಆಚೆಗಿನ) ನಾದವು ಕಿನ್ನರಮಿಥುನದಿಂದ ಹೊಮ್ಮುವಾಗ ಪಶ್ಯಂತೀ(=ಕಾಣಬಹುದಾದ) ನಾದವಾಗುತ್ತದೆ.} ಈ ಸ್ವರಮೂರ್ತಿ ಹೇಗಿರುವದೆಂದರೆ ‘ನುಡಿಯಲ್ಲಿ ಹುದುಗಿದ ಹುರುಳಿನಂತೆ’.

“ ಕಿನ್ನರಕಿನ್ನರಿ ಮಿಥುನವು ಅರೆಅರೆ ಮೈಗೂಡಿ

ನುಡಿಯಲಿ ಹುದುಗಿದ ಹುರುಳೊಳು ಹದುಳದೊಳೊಡಮೂಡಿ

ನಾಲಿಗೆ ನಾಡಿಯನಾಡಿಸಿ ಸ್ವರಮೂರ್ತಿಯ ಮಾಡಿ. | ಏಲಾವನ”

ಬೇಂದ್ರೆಯವರು ಇಲ್ಲಿ ಮತ್ತೊಂದು ವಿಷಯವನ್ನು ಈಗ ಸೇರಿಸಿದ್ದಾರೆ. ಸ್ವರಮೂರ್ತಿಯಂದರೆ ಒಂದು ಶರೀರ ತಾನೆ? ಈ ಶರೀರಕ್ಕೆ ಹಾಗು ಅದರ ಜೀವಕ್ಕೆ (= ಹುರುಳಿಗೆ =ಅರ್ಥಕ್ಕೆ) ಇರುವದು ಅನ್ಯೋನ್ಯ ಸಂಬಂಧ. ಅದು ಬಹು ಚೆನ್ನಾಗಿ (=ಹದುಳದೊಳು) ಅಭಿವ್ಯಕ್ತವಾಗುತ್ತಿದೆ (=ಒಡಮೂಡಿ). ಇಲ್ಲಿ ಕವಿ ಕಾಳಿದಾಸನ ವಿಖ್ಯಾತ ಲಕ್ಷಣಕಾವ್ಯವನ್ನು ಬೇಂದ್ರೆ ಕನ್ನಡಿಸಿ ಬಳಸಿಕೊಂಡಿದ್ದಾರೆ:

“ವಾಗರ್ಥಾವಿವ ಸಂಪೃಕ್ತೌ ವಾಗರ್ಥಪ್ರತಿಪತ್ತಯೆ

ಜಗತಃ ಪಿತರೌ ವಂದೇ ಪಾರ್ವತೀಪರಮೇಶ್ವರೌ”.

ಈ ಶ್ಲೋಕದಲ್ಲಿರುವ “ವಾಗರ್ಥಾವಿವ ಸಂಪೃಕ್ತೌ” ಇದು “ನುಡಿಯಲಿ ಹುದುಗಿದ ಹುರುಳು” ಆಗಿದೆ.

ನಾಲಿಗೆಯ ನಾಡಿಯಲ್ಲಿ ಹುಟ್ಟಿದ ಈ ಸ್ವರವು ನರನರಗಳಲಿ ಪೂರ್ಣವಾಗಿ ಇಂಗಿ, ನರಗಳ ನಾಳದಲ್ಲಿ ಸ್ಥಾಯಿಯಾಗುವದೆಂದು (=ತಂಗು) ಬೇಂದ್ರೆ ಮುಂದಿನ ನುಡಿಯಲ್ಲಿ ಹೇಳುತ್ತಾರೆ:

“ ನರಗಳಲಿಂಗಿಂಗೀ ನರನಾಳದೆ ತಂಗಿs

ಲಾಸ್ಯದಿ ಹಾಸ್ಯವ ಮಿಂಚಿಸಿ ಪರಶಿವನರ್ಧಾಂಗಿss

ತಾಲದಿ ಕಾಲವ ಸೊಲ್ಲಿಸುವಂತಿದೆ ಈ ಭಂಗಿss. | ಏಲಾವನ ”

ಈ ಸ್ವರವು ನಾಡಿಗಳಲ್ಲಿ ಸಂಚರಿಸುವ ಭಂಗಿಯು ಹೇಗಿದೆಯೆಂದರೆ:

“ಲಾಸ್ಯದಿ ಹಾಸ್ಯವ ಮಿಂಚಿಸಿ ಪರಶಿವನರ್ಧಾಂಗಿss

ತಾಲದಿ ಕಾಲವ ಸೊಲ್ಲಿಸುವಂತಿದೆ ಈ ಭಂಗಿss.”

ಪರಶಿವನ ನೃತ್ಯಕ್ಕೆ ’ತಾಂಡವ ನೃತ್ಯ’ ಎನ್ನುತ್ತಾರೆ. ಪಾರ್ವತಿಯದು ‘ಲಾಸ್ಯ ನೃತ್ಯ’, ಅಂದರೆ ಸುಕೋಮಲ ನೃತ್ಯ. ಈ ಲಾಸ್ಯದಲ್ಲಿ ಹಾಸ್ಯವನ್ನು ಅಂದರೆ ಆಹ್ಲಾದದ ನಗುವನ್ನು ಮಿಂಚಿಸಿದಂತೆ ಹಾಗು ಕಾಲವೇ ತಾಲವನ್ನು ಹಾಕುತ್ತಿರುವಂತೆ ( ಸೊಲ್ಲಿಸು=ಧ್ವನಿಗೈಯು), ಈ ಸ್ವರಸಂಚಾರದಿಂದ ಭಾಸವಾಗುತ್ತಿದೆ.

ಇಂತಹ ದೈವಿಕ ಸಂಗೀತದ ಸ್ವರಸಂಚಾರದ ಪರಿಣಾಮವನ್ನು ಹೇಳಬೇಕಷ್ಟೆ. ಅದು ಮುಂದಿನ ನುಡಿಯಲ್ಲಿದೆ:

“ ನೆಲೆಗೆಡಿಸುವ ವಾಸನೆಗಳ ಎದೆಬೀಜವ ಸೀಳಿ

ರತಿರಮಣನ ನಿಜಜನಕನ ಎದೆಯಾಳವನಾಳಿ

ಹೃದಯಾಕೂತಿಯ ಅನುಪಮ ಲಾವಣ್ಯವ ತಾಳಿ. | ಏಲಾವನ ”

ನೆಲೆಯನ್ನು ಅಂದರೆ ಮನುಷ್ಯನ ಅಂತರಂಗವನ್ನು ಕೆಡಿಸುವಂತಹ ವಾಸನೆಗಳ (=ಕಾಮ, ಕ್ರೋಧ ಇತ್ಯಾದಿ) ಹುಟ್ಟನ್ನು ಸೀಳಿ ಒಗೆಯುವದು ಈ ದೈವಿ ಸಂಗೀತದ ಮೊದಲ ಪರಿಣಾಮ. ಅದರ ನಂತರ, ರತಿರಮಣನ ಅಂದರೆ ಕಾಮದೇವನ ತಂದೆಯಾದ ವಿಷ್ಣುವಿನ (=ನಿಜಜನಕನ) ಎದೆಯ ಆಳವನ್ನು ಆಳುವದು ಅಂದರೆ ಆ ವಿಶ್ವಚೈತನ್ಯನಲ್ಲಿ ಭಕ್ತಿಯನ್ನು ಹುಟ್ಟಿಸುವದು ಇದರ ಮುಂದಿನ ಪರಿಣಾಮ. ಇದು ಸಾಧಿಸಿದಾಗ ಹೃದಯಾಕೂತಿಯು ಅನುಪಮ ಲಾವಣ್ಯವನ್ನು ತಾಳುವದು. ಆಕೂತಿ ಎಂದರೆ ಉದ್ದೇಶ. ಹೃದಯಾಕೂತಿ ಎಂದರೆ ಅಂತರಂಗದ ಹಂಬಲ. ಋಗ್ವೇದದಲ್ಲಿ ಈ ರೀತಿಯಾಗಿ ಹೇಳಲಾಗಿದೆ:

“ ಸಮಾನೀವ ಆಕೂತಿ ಸಮಾನಾ ಹೃದಯಾನಿವ” (=ನಿಮ್ಮ ಉದ್ದೇಶಗಳು ಒಂದೇ ಆಗಿರಲಿ, ನಿಮ್ಮ ಮನಸ್ಸು ಒಂದುಗೂಡಿರಲಿ).

‘ಆಕೂತಿ’ ಪದಕ್ಕೆ ಮತ್ತೂ ಒಂದು ಅರ್ಥವಿದೆ:

ಆಕೂತಿ ಇವಳು ಸ್ವಯಂಭೂ ಮನು ಹಾಗು ಶತರೂಪಾ ಇವರ ಮಗಳು; ರುಚಿಪ್ರಜಾಪತಿಯನ್ನು ಮದುವೆಯಾದವಳು. ಇವರೆಲ್ಲ ದೇವರಿಂದ ಆದಿಷ್ಟರಾಗಿ ಪ್ರಜೋತ್ಪತ್ತಿಯನ್ನು ಮಾಡುವವರು ತಾನೆ? ಆ ಪ್ರಕಾರವಾಗಿ ಈ ಸಂಗೀತವೂ ಸಹ ದೇವೋದ್ದೇಶಕ್ಕಾಗಿ ಅನುಪಮ ಲಾವಣ್ಯವನ್ನು ತಳೆದಿದೆ.

ಸೂಕ್ಷ್ಮ ಶರೀರದಲ್ಲಿರುವ ಈ ಸುಮಧುರ ನಾದ ಹೊರಬರಬೇಕಲ್ಲವೆ? (ಅನಾಹತ ಚಕ್ರದಲ್ಲಿರುವದು ಪರಾ ನಾದ. ಅದು ಪಶ್ಯಂತಿಯಾಗಿ ಬದಲಾಗಿ, ಕೊನೆಗೆ ವೈಖರೀ ರೂಪದಲ್ಲಿ ಹೊರಬರುವದು.) ಅದನ್ನು ಹೇಗೆ ಸಾವಧಾನವಾಗಿ ಹೊರಗೆಳೆಯಬೇಕೆಂದು ಮುಂದಿನ ನುಡಿಯಲ್ಲಿ ಬೇಂದ್ರೆ ವರ್ಣಿಸುತ್ತಾರೆ:

“ ಸ್ವಾದದ ನಾದದ ಮೋದದ ಒಳಬಸಿರನೆ ಬಗೆದು

ಹುಂಕಾರದ ಒಳನೂಲನು ಮೆಲ್ಲನೆ ಹೊರದೆಗೆದು

ಶಬ್ದಕೆ ಹಾಸಿಗೆಯಾಗಿಹ ತನಿಮೌನದಿ ಮುಗಿದು. | ಏಲಾವನ “

ಸ್ವಾದಪೂರ್ಣವಾದ ನಾದದ ಸಂತೋಷದ ಗರ್ಭವನ್ನು ಬಗೆದು, ಅದರಲ್ಲಿರುವ ಹುಂಕಾರವನ್ನು ನೂಲಿನಂತೆ ಎಳೆಯಬೇಕು. ತಕಲಿಯಿಂದ ಅಥವಾ ರಾಟಿಯಿಂದ ನೂಲು ತೆಗೆದ ಅಭ್ಯಾಸ ಬಹುಶಃ ನಮಗಾರಿಗೂ ಇರಲಿಕ್ಕಿಲ್ಲ. ಹಾಗಾದರೆ, ರಾಟಿಯಿಂದ ನೂಲು ತೆಗೆಯುತ್ತಿರುವ ಮಹಾತ್ಮಾ ಗಾಂಧೀಜಿಯವರ ಚಿತ್ರವನ್ನು ನೋಡಿರಿ. ನೂಲು ತೆಗೆಯುವದರಲ್ಲಿ ಅವರು ತನ್ಮಯರಾಗಿರುವದನ್ನು ಕಾಣುವಿರಿ. ಅಂತಹ ತನ್ಮಯತೆ ಹಾಗು ತಾಳ್ಮೆಯಿಂದ ಈ ಸ್ವರದ ಒಳನೂಲನ್ನು ಮೆಲ್ಲನೆ ಹೊರತೆಗೆಯಬೇಕಾಗುತ್ತದೆ. ಆ ಸ್ವರವು ಕೊನೆಗೊಳ್ಳುವದು ‘ತನಿಮೌನದಲ್ಲಿ’ (=sweet silence). ಈ ತನಿಮೌನವೇ ಮುಂದೆ ಮೂಡುವ ಶಬ್ದಕ್ಕೆ ಹಾಸಿಗೆ.

(ಈ ಸಂದರ್ಭದಲ್ಲಿ ಬೇಂದ್ರೆಯವರು ತಮ್ಮ ಅತ್ಯಂತ ಪ್ರೀತಿಯ ಗೆಳೆಯರಾದ ಮಧುರಚೆನ್ನರನ್ನು (=ಹಲಸಂಗಿ ಚೆನ್ನಮಲ್ಲಪ್ಪನವರನ್ನು) ಉದ್ದೇಶಿಸಿ ಬರೆದ ಕವನವೊಂದನ್ನು ನೆನಸಿಕೊಳ್ಳಬಹುದು:

“ಮಾತಾಡೊ ಮಾತಾಡೊ ಲಿಂಗವೇ |ನೀ|

ಮಾತಾಡಲೊಲ್ಲೇಕೊ ಲಿಂಗವೇ ||

ಮಾತಿನ ತಾಯಾದ ಮೌನದ ಬಸುರಲಿ |

ಹೂತೆಯೊ ಹೇ ಚೆನ್ನಲಿಂಗವೇ .” )

So, ಈ ತನಿಮೌನದ ಶಯ್ಯೆಯಲ್ಲಿ ಪವಡಿಸಿರುವ ಗೀತೆಯನ್ನು ಏಳಿಸುವದು ಹೇಗೆ? ಆ ಕ್ರಿಯೆ ಮುಂದಿನ ನುಡಿಯಲ್ಲಿದೆ:

“ ಯಾಳದ ಜತಿ, ಏಳೆಯ ಗತಿ ಏಳೇಳೇಳೆಂದು

ಎಬ್ಬಿಸಿ, ಮಬ್ಬನು ಚೆದರಿಸಿ ಬಾಳ್ ಬಾಳ್ ಬಾಳೆಂದು

ತಂತಿಯ ತಾಳಕೆ ಮಿಡಿದಿರೆ, ಎಲ್ಲಾಯಿತು ಒಂದು. | ಏಲಾವನ “

‘ಯಾಳ’ ಅಂದರೆ ಒಂದು ಬಗೆಯ ವಾದ್ಯ. ಈ ವಾದ್ಯದ ಜೊತೆಗೆ ಏಳೆಯ ಅಂದರೆ ಈ ತ್ರಿಪದಿ ಛಂದಸ್ಸಿನ ಗೀತೆಯ ಗತಿಯನ್ನು ಸೇರಿಸುವದು ಒಂದು ಅರ್ಥ. ಸಂಗೀತದಲ್ಲಿ ’ಜತಿ’ ಎನ್ನುವದಕ್ಕೆ ಒಂದು ವಿಶಿಷ್ಟ ಅರ್ಥವಿದೆ. ಆ ಜತಿಯಲ್ಲಿ ಏಳಾ ಛಂದಸ್ಸಿನ ಗತಿಯನ್ನು (=ಸಂಚಲನ ವೇಗವನ್ನು) ಸೇರಿಸುವದು ಇನ್ನೊಂದು ಅರ್ಥ. ಈ ಜತಿ-ಗತಿ ಸೇರಿದಾಗ , ಅದು ಹೇಳುವದು : ಏಳ್, ಏಳ್ ಎಂದು. ಅಲ್ಲದೆ ಇದು ಸಪ್ತಸ್ವರಗಳನ್ನೂ ಸೂಚಿಸಬಹುದು. ಈ ರೀತಿಯಾಗಿ ಸ್ವರಗಳನ್ನು ಎಬ್ಬಿಸಿ, ಕೇಳುಗರ ಮಬ್ಬನ್ನು ಚೆದುರಿಸಿ, ಅವರಿಗೆ “ ಬಾಳ್ ” ಎನ್ನುವ ಒಸಗೆಯನ್ನು ಕೊಡುವದು ಈ ಏಲಾಗೀತೆ. ಈ ಸಂದೇಶದೊಡನೆ, ಈ ಗೀತೆ ಈ ರೀತಿಯಾಗಿ ಹೊಮ್ಮುತ್ತಿರಲು “ಎಲ್ಲಾಯಿತು ಒಂದು” ! ಅಂದರೆ, ಬನವಾಸಿಯ ಗೆಳೆಯ ಗೆಳೆತಿಯರು, ಅಲ್ಲಿಯ ಹರಿಣ ಮಿಥುನಗಳು, ಕಿನ್ನರ ಲೋಕದ ಕಿನ್ನರಕಿನ್ನರಿಯರು ,ದೇವಲೋಕದಲ್ಲಿರುವ ಸರಸ್ವತಿಯ ವೀಣೆ, ವೀಣಾನಾದ , ನಾದದ ಸುಖ ಎಲ್ಲವೂ ಒಂದಾದವು ಎನ್ನುತ್ತಾರೆ ಬೇಂದ್ರೆ.

ಕೊನೆಯ ನುಡಿ ಹೀಗಿದೆ:

“ಏಳೆಯ ಬಸಿರೊಳು ಮಲಗಿದ ಯಾವುದೊ ಗತಿ ಚಿತ್ರ

ದನಿ ಪಡೆದಿತು, ತಿಳಿದೆದ್ದಿತು ಕಣ್ಬಡೆದು ವಿಚಿತ್ರ

ಆಕ್ಷಣವನು ಈಕ್ಷಣವನು ಮಾಡಿತು ಸುಪವಿತ್ರ. | ಏಲಾವನ”

ಈ ರೀತಿಯಾಗಿ ಏಲಾಛಂದಸ್ಸಿನ ಬಗೆಗಿರುವ ಗೀತೆಯೊಂದು ಬೇಂದ್ರೆಯವರ ಮನದಲ್ಲಿ ಮೂಡಿ ದನಿ ಪಡೆದು, ಕಣ್ಣು ಪಡೆದು ಕವನವಾಗಿದ್ದು ಒಂದು ವಿಚಿತ್ರವೆನ್ನುತ್ತಾರೆ ಬೇಂದ್ರೆ. ಈ ಕವನವು ಸಹ ಏಲಾ ಛಂದಸ್ಸಿನಲ್ಲಿಯೇ ಇರುವ ತ್ರಿಪದಿಯಾಗಿರಬಹುದು. ಆದರೆ ಕನ್ನಡ ಛಂದಸ್ಸಿನ ಜ್ಞಾನವಿಲ್ಲದ ನಾನು ‘ಇದಮಿತ್ಥಮ್ ’ ಎಂದು ಹೇಳುಲಾರೆ.

ಕನ್ನಡದ ಒಂದು ತ್ರಿಪದಿ ಛಂದಸ್ಸನ್ನು ಧ್ಯಾನಿಸಿ, ಅದರ ನಾದವನ್ನು ಮನದಲ್ಲಿ ಅನುಭವಿಸಿ, ವರಕವಿಗಳು ಒಂದು ಗೀತೆಗೆ ಜನ್ಮ ನೀಡಿದ್ದಾರೆ. ಈ ಅನುಭವವು ತಮ್ಮಲ್ಲಿ ಪವಿತ್ರ ಭಾವನೆಯನ್ನು ಮೂಡಿಸಿತು ಎಂದು ಬೇಂದ್ರೆ ಹೇಳುತ್ತಾರೆ.

ಆಶ್ಚರ್ಯವಲ್ಲ ; ನಾದ-ಕಾವ್ಯ-ಯೋಗಿಗೆ ನಾದವೇ ಅನುಭಾವವಾಗುತ್ತದೆ.

ಹೆಚ್ಚಿನ ಓದಿಗೆ: http://sallaap.blogspot.com/2008/04/blog-post_25.html

೩.ಗಂಗಾವತರಣ

ಭಗೀರಥನ ಕಠಿಣ ಪ್ರಯತ್ನದಿಂದ ಸ್ವರ್ಗದಲ್ಲಿರುವ ಗಂಗಾನದಿ ಧರೆಗಿಳಿದಳು. ಹಿಮಾಲಯದಲ್ಲಿ ಧುಮ್ಮಿಕ್ಕಿ, ಬಯಲಲ್ಲಿ ಭೋರ್ಗರೆದು, ಭಗೀರಥನ ಪೂರ್ವಜರಿಗೆ ಪ್ರೇತಲೋಕದಿಂದ ಮುಕ್ತಿ ನೀಡಿದಳು.

ಗಂಗಾನದಿಯ ದರ್ಶನವು ಬೇಂದ್ರೆಯವರಿಗೆ ಕಾಶಿಯಲ್ಲಿ ಆಯಿತು.

ಅಂಬಿಕಾತನಯದತ್ತರು ಪ್ರಕೃತಿಯ ಆ ಮಹಾಚೈತನ್ಯದೆದುರಿಗೆ ಮೂಕವಿಸ್ಮಿತರಾದರು. ಬೇಂದ್ರೆಯವರ ಮನೋಲೋಕದಲ್ಲಿ ಧುಮ್ಮಿಕ್ಕಿದ ಈ ಗಂಗೆಯನ್ನು , ಸ್ವರ್ಗದಿಂದ ಧರೆಗಿಳಿಯಲು ಅವರು ಮತ್ತೊಮ್ಮೆ ಆಹ್ವಾನಿಸುತ್ತಾರೆ.

ಗಂಗಾದೇವಿಯನ್ನು ಆಹ್ವಾನಿಸುವ ಈ ಪ್ರಾರ್ಥನೆಯು ಸಂಕೀರ್ಣವಾದ ಕವಿತೆಯಾಗಿದೆ.

ಮೊದಲನೆಯದಾಗಿ, ೧೯೪೩ರಲ್ಲಿ ಬಿದ್ದ ಬರಗಾಲದಿಂದ ಭಾರತ ದೇಶವು ವಿಶೇಷತಃ ಬಂಗಾಲವು ಕಂಗೆಟ್ಟಿತ್ತು. ೧೯೪೪ರಲ್ಲಿ ಬೇಂದ್ರೆ ಈ ಕವನವನ್ನು ರಚಿಸಿದರು.

ಗಂಗೆ ಭಾರತದ ಎಲ್ಲ ನದಿಗಳ ಪ್ರಾತಿನಿಧಿಕ ನದಿ. ಭಾರತದಲ್ಲಿ ಕಾಲಕಾಲಕ್ಕೆ ಮಳೆಯಾಗಿ, ಎಲ್ಲ ನದಿಗಳು ತುಂಬಿ ಹರಿಯಲಿ, ಭಾರತ ಸಸ್ಯಶ್ಯಾಮಲೆಯಾಗಲಿ ಎನ್ನುವದು ಈ ಪ್ರಾರ್ಥನೆಯ ಒಂದು ಉದ್ದೇಶ.

ಎರಡನೆಯದಾಗಿ, ಗಂಗೆ ಕೇವಲ ಭೌತಿಕ ಪ್ರವಾಹವಲ್ಲ. ಅವಳು ಪುಣ್ಯವಾಹಿನಿ, ಜ್ಞಾನದಾಯಿನಿ. ಅವಳು ತನಗೆ ಹಾಗು ತನ್ನ ನಾಡಿಗರಿಗೆ ಜ್ಞಾನವನ್ನು , ಸುಜ್ಞಾನವನ್ನು ಪ್ರಸಾದಿಸಲಿ ಎನ್ನುವದು ಈ ಪ್ರಾರ್ಥನೆಯ ಎರಡನೆಯ ಉದ್ದೇಶ.

ಕವನದ ಪೂರ್ತಿಪಾಠ ಹೀಗಿದೆ :

……………………………………………………….

ಇಳಿದು ಬಾ ತಾಯಿ

ಇಳಿದು ಬಾ

ಹರನ ಜಡೆಯಿಂದ

ಹರಿಯ ಅಡಿಯಿಂದ

ಋಷಿಯ ತೊಡೆಯಿಂದ

ನುಸುಳಿ ಬಾ

ದೇವದೇವರನು ತಣಿಸಿ ಬಾ

ದಿಗ್ದಿಗಂತದಲಿ ಹಣಿಸಿ ಬಾ

ಚರಾಚರಗಳಿಗೆ ಉಣಿಸಿ ಬಾ

ಇಳಿದು ಬಾ ತಾಯಿ

ಇಳಿದು ಬಾ.

ನಿನಗೆ ಪೊಡಮಡುವೆ

ನಿನ್ನನುಡುತೊಡುವೆ

ಏಕೆ ಎಡೆತಡೆವೆ

ಸುರಿದು ಬಾ

ಸ್ವರ್ಗ ತೊರೆದು ಬಾ

ಬಯಲ ಜರೆದು ಬಾ

ನೆಲದಿ ಹರಿದು ಬಾ

ಬಾರೆ ಬಾ ತಾಯಿ ಇಳಿದು ಬಾ

ಇಳಿದು ಬಾ ತಾಯಿ

ಇಳಿದು ಬಾ.

ನನ್ನ ತಲೆಯೊಳಗೆ

ನನ್ನ ಬೆಂಬಳಿಗೆ

ನನ್ನ ಒಳಕೆಳಗೆ

ನುಗ್ಗಿ ಬಾ

ಕಣ್ಣ ಕಣ ತೊಳಿಸಿ

ಉಸಿರ ಎಳೆ ಎಳಸಿ

ನುಡಿಯ ಸಸಿ ಮೊಳೆಸಿ

ಹಿಗ್ಗಿ ಬಾ

ಎದೆಯ ನೆಲೆಯಲ್ಲಿ ನೆಲಿಸಿ ಬಾ

ಜೀವ ಜಲದಲ್ಲಿ ಚಲಿಸಿ ಬಾ

ಮೂಲ ಹೊಲದಲ್ಲಿ ನೆಲಿಸಿ ಬಾ

ಇಳಿದು ಬಾ ತಾಯಿ

ಇಳಿದು ಬಾ.

ಕಂಚು ಮಿಂಚಾಗಿ ತೆರಳಿ ಬಾ

ನೀರು ನೀರಾಗಿ ಉರುಳಿ ಬಾ

ಮತ್ತೆ ಹೊಡೆಮರಳಿ ಹೊರಳಿ ಬಾ

ದಯೆಯಿರದ ದೀನ

ಹರೆಯಳಿದ ಹೀನ

ನೀರಿರದ ಮೀನ

ಕರೆಕರೆವ ಬಾ

ಇಳಿದು ಬಾ ತಾಯಿ

ಇಳಿದು ಬಾ.

ಕರು ಕಂಡ ಕರುಳೆ

ಮನ ಉಂಡ ಮರುಳೆ

ಉದ್ದಂಡ ಅರುಳೆ

ಸುಳಿಸುಳಿದು ಬಾ

ಶಿವಶುಭ್ರ ಕರುಣೆ

ಅತಿಕಿಂಚಿದರುಣೆ

ವಾತ್ಸಲ್ಯವರಣೆ

ಇಳಿ ಇಳಿದು ಬಾ

ಇಳಿದು ಬಾ ತಾಯಿ

ಇಳಿದು ಬಾ.

ಕೊಳೆಯ ತೊಳೆವವರು ಇಲ್ಲ ಬಾ

ಬೇರೆ ಶಕ್ತಿಗಳು ಹೊಲ್ಲ ಬಾ

ಹೀಗೆ ಮಾಡದಿರು , ಅಲ್ಲ ಬಾ

ನಾಡಿ ನಾಡಿಯನು ತುತ್ತ ಬಾ

ನಮ್ಮ ನಾಡನ್ನೆ ಸುತ್ತ ಬಾ

ಸತ್ತ ಜನರನ್ನು ಎತ್ತ ಬಾ

ಸುರಸ್ವಪ್ನವಿದ್ದ ಪ್ರತಿಬಿಂಬ ಬಿದ್ದ

ಉದ್ಬುದ್ಧ ಶುದ್ಧ ನೀರೇ

ಎಚ್ಚತ್ತು ಎದ್ದ ಆಕಾಶದುದ್ದ

ಧರೆಗಿಳಿಯಲಿದ್ದ ಧೀರೇ

ಸಿರಿವಾರಿಜಾತ ವರಪಾರಿಜಾತ

ತಾರಾ-ಕುಸುಮದಿಂದೆ.

ವೃಂದಾರವಂದ್ಯೆ ಮಂದಾರಗಂಧೆ

ನೀನೆ ತಾಯಿ ತಂದೆ

ರಸಪೂರಜನ್ಯೆ ನೀನಲ್ಲ ಅನ್ಯೆ

ಸಚ್ಚಿದಾನಂದ ಕನ್ಯೆ

ಬಂದಾರ ಬಾರೆ, ಒಂದಾರೆ ಸಾರೆ

ಕಣ್ಧಾರೆ ತಡೆವರೇನೇ?

ಅವತಾರವೆಂದೆ ಎಂದಾರೆ ತಾಯಿ, ಈ ಅಧ:ಪಾತವನ್ನೇ

ಹರಕೆ ಸಂದಂತೆ

ಮಮತೆ ಮಿಂದಂತೆ

ತುಂಬಿ ಬಂದಂತೆ

ದುಮ್‌ದುಮ್ ಎಂದಂತೆ

ದುಡುಕಿ ಬಾ

ನಿನ್ನ ಕಂದನ್ನ ಹುಡುಕಿ ಬಾ

ಹುಡುಕಿ ಬಾ ತಾಯಿ

ದುಡುಕಿ ಬಾ.

ಹರಣ ಹೊಸದಾಗೆ ಹೊಳೆದು ಬಾ

ಬಾಳು ಬೆಳಕಾಗೆ ಬೆಳೆದು ಬಾ

ಮೈ ತಳೆದು ಬಾ

ಕೈ ತೊಳೆದು ಬಾ

ಇಳೆಗಿಳಿದು ಬಾ ತಾಯೀ

ಇಳಿದು ಬಾ ತಾಯಿ

ಇಳಿದು ಬಾ.

ಶಂಭು-ಶಿವ-ಹರನ ಚಿತ್ತೆ ಬಾ

ದತ್ತ ನರಹರಿಯ ಮುತ್ತೆ ಬಾ

ಅಂಬಿಕಾತನಯದತ್ತನತ್ತೆ ಬಾ

ಇಳಿದು ಬಾ ತಾಯಿ

ಇಳಿದು ಬಾ.

……………………………………………………………………

ಗಂಗಾನದಿ ಹುಟ್ಟಿದ್ದು ಹರಿಯ ಪಾದಗಳಲ್ಲಿ. ಆದರೆ ‘ಗಂಗಾ’ ಎಂದೊಡನೆ ನಮಗೆಲ್ಲರಿಗೂ ನೆನಪಾಗುವದು ಶಿವ-ಜಟಾ-ಬಂಧನ. ಇದೊಂದು ರೋಮಾಂಚಕ ಪ್ರಸಂಗ. ಪ್ರಳಯದೇವಿಯಂತೆ ಧುಮ್ಮಿಕ್ಕುತ್ತಿರುವ ಗಂಗೆಯನ್ನು ಶಿವ ತನ್ನ ಜಟೆಯಲ್ಲಿ ಬಂಧಿಸಿ ಇಟ್ಟ ಬಳಿಕ, ಭಗೀರಥ ಶಿವನನ್ನು ಮತ್ತೆ ಪ್ರಾರ್ಥಿಸಿ ಅವಳನ್ನು ಬಿಡುಗಡೆಗೊಳಿಸುತ್ತಾನೆ.

ಅವಳು ಆರು ಚಿಕ್ಕ ಧಾರೆಗಳಲ್ಲಿ ಹರಿಯುತ್ತ ಮುಂದುವರೆಯುತ್ತಾಳೆ. ತನ್ನ ಕುಟೀರದತ್ತ ಧಾವಿಸುತ್ತಿರುವ ಈ ಗಂಗೆಯನ್ನು ಜಹ್ನು ಋಷಿ ಆಪೋಶನ ತೆಗೆದುಕೊಳ್ಳುತ್ತಾನೆ. ಭಗೀರಥ ಮತ್ತೆ ಪ್ರಾರ್ಥಿಸಿದ ಬಳಿಕ, ಆತ ಗಂಗಾನದಿಯನ್ನು ತನ್ನ ತೊಡೆಯ ಮೂಲಕ ಹೊರಬಿಡುತ್ತಾನೆ. ಹೀಗಾಗಿ ಗಂಗಾನದಿ ಜಹ್ನು ಋಷಿಯ ಮಗಳಾದಳು ; ‘ಜಾಹ್ನವಿ’ ಎನ್ನುವ ಹೆಸರು ಪಡೆದಳು.

ಸಕಲ ಜೀವಿಗಳಿಗೆ ಪೋಷಣೆ ಕೊಡುವ ಇವಳು ನಮ್ಮೆಲ್ಲರ ತಾಯಿ.

ಅಂತೆಯೇ ಬೇಂದ್ರೆಯವರು ಈ ಮಾತೃರೂಪಿಣಿಯನ್ನು ಧರೆಗಿಳಿಯಲು ಭಕ್ತಿಯಿಂದ ಪ್ರಾರ್ಥಿಸುತ್ತಾರೆ :

ಇಳಿದು ಬಾ ತಾಯಿ

ಇಳಿದು ಬಾ

ಹರನ ಜಡೆಯಿಂದ

ಹರಿಯ ಅಡಿಯಿಂದ

ಋಷಿಯ ತೊಡೆಯಿಂದ

ನುಸುಳಿ ಬಾ

………………………………………….

ದೇವದೇವರನು ತಣಿಸಿ ಬಾ

ದಿಗ್ದಿಗಂತದಲಿ ಹಣಿಸಿ ಬಾ

ಚರಾಚರಗಳಿಗೆ ಉಣಿಸಿ ಬಾ

ಇಳಿದು ಬಾ ತಾಯಿ

ಇಳಿದು ಬಾ.

‘ಸುರನದಿಯಾದ ನೀನು ದೇವತೆಗಳ ಬಾಯಾರಿಕೆಯನ್ನೂ ತಣಿಸಿ ಬಾ’. ಎಂದು ಬೇಂದ್ರೆ ಗಂಗೆಯನ್ನು ಕೇಳಿಕೊಳ್ಳುತ್ತಾರೆ. ದೇವತೆಗಳಿಗೆಂತಹ ಬಾಯಾರಿಕೆ ಎನ್ನುವ ಸಂದೇಹ ನಮ್ಮಲ್ಲಿ ಮೂಡಬಹುದು. ಭಗವಚ್ಚಿಂತನೆಯೊಂದೇ ದೇವತೆಗಳಿಗಿರುವ ಬಾಯಾರಿಕೆ. ಹರಿಯ ಅಡಿಯಲ್ಲಿ ಜನಿಸಿದ ಗಂಗೆಯ ತೀರ್ಥವನ್ನು ಬಾಯಲ್ಲಿ ಹಾಕಿಕೊಂಡಾಗ, ದೇವತೆಗಳಲ್ಲಿರುವ ಭಗವಚ್ಚಿಂತನೆಯ ಬಾಯಾರಿಕೆಯು ತಣಿಯುವದು ಸಹಜವೇ. (ಮರಣಸಮಯದಲ್ಲಿ,ಗಂಗೋದಕವನ್ನು ಬಾಯಲ್ಲಿ ಹಾಕುವದು ಇದೇ ಕಾರಣಕ್ಕಾಗಿ ; ಮರಣಾಸನ್ನನಿಗೆ ಭಗವಂತನ ಸನ್ನಿಧಿಯು ದೊರೆಯಲು.)

ಸ್ವರ್ಗದಿಂದ ಕೆಳಗಿಳಿಯುತ್ತಿರುವಾಗ, ಈ ವ್ಯೋಮವ್ಯಾಪಿ ಗಂಗಾ ಅಷ್ಟದಿಕ್ಕುಗಳಿಗೆ ನೀರಿನ ಸೇಚನೆ ಮಾಡದಿರುವಳೆ? ಅದು ಮಳೆಯ ರೂಪದಲ್ಲೂ ಇರಬಹುದು. ಈ ಸೇಚನೆಯಿಂದಾಗಿ ಸಕಲ ಪ್ರಕೃತಿಯು ನೀರುಣ್ಣುವದು. ಬೇಂದ್ರೆಯವರು ಹೇಳುತ್ತಿರುವದು ಸಲಹೆ-ಸೂಚನೆ ಅಲ್ಲ. ಅದು ಗಂಗೆಯ ಕಾರ್ಯ, her mission. ಅದನ್ನೆ ಅವರು ‘ಚರಾಚರಗಳಿಗೆ ಉಣಿಸಿ ಬಾ’ ಎಂದು ಬಣ್ಣಿಸುತ್ತಿದ್ದಾರೆ.

ಸಕಲ ಚರಾಚರಗಳಲ್ಲಿ ಈ ಕವಿಯೂ ಇದ್ದಾರೆ. ಗಂಗೆಯ ದೈವಿಕತೆ ಇವರಿಗೆ ಗೊತ್ತು. ಅದಕ್ಕೇ ಇವರು ಧರೆಗಿಳಿಯುತ್ತಿರುವ ಈ ಗಂಗೆಯನ್ನು ಪೊಡಮಟ್ಟು ಅಂದರೆ ಸಾಷ್ಟಾಂಗ ನಮಸ್ಕಾರದೊಂದಿಗೆ ಬರಮಾಡಿಕೊಳ್ಳುತ್ತಾರೆ.

ಈ ಗಂಗೆಯನ್ನೇ ತಮ್ಮ ಉಡುಗೆಯನ್ನಾಗಿ ಮಾಡಿಕೊಳ್ಳಲು ಅವರು ಬಯಸುತ್ತಾರೆ. ಏನು ಹಾಗೆಂದರೆ?

ಓರ್ವ ಮನುಷ್ಯನ ಬೆಲೆಯನ್ನು ಕಟ್ಟುವದು ಅವನ ಉಡುಗೆಯಿಂದ. ಆದರೆ ಕವಿಗೆ ಇಂತಹ false dressing ಬೇಕಾಗಿಲ್ಲ. ಲೌಕಿಕದ ಈ ವಸ್ತ್ರವಿಲಾಸವನ್ನು ಬಿಸಾಕಿ, ಅವರು ಗಂಗೆಯಲ್ಲಿ ಮೀಯಬಯಸುತ್ತಾರೆ. ಪವಿತ್ರ ಗಂಗೆಯನ್ನೇ ತನ್ನ ಉಡುಗೆಯನ್ನಾಗಿ ಮಾಡಬಯಸುತ್ತಾರೆ.

ತನ್ನ ವ್ಯಕ್ತಿತ್ವವನ್ನು ಆವರಿಸುವ ಉಡುಗೆ ಶುದ್ಧವಾಗಿರಲಿ, ನಿಷ್ಕಲ್ಮಶವಾಗಿರಲಿ, ಪುಣ್ಯಕರವಾಗಿರಲಿ ಎನ್ನುವದು ಅವರ ಬಯಕೆ. ಯಾಕೆಂದರೆ ಇಂತಹ ನಿರ್ಮಲ ವ್ಯಕ್ತಿಯೇ ತಾನಾಗಲು ಅವರು ಬಯಸುತ್ತಾರೆ.

ಇದು ‘ಗಂಗಾಂಬರ’ವೆನ್ನುವ ‘ಪುಣ್ಯಾಂಬರ’ವನ್ನು ಉಟ್ಟುಕೊಳ್ಳಲು ಬಯಸುವ ಬೇಂದ್ರೆಯವರ ಒಳಮನದ ಹಾರೈಕೆ.

ಅದಕ್ಕೇ ಬೇಂದ್ರೆ ಹೇಳುತ್ತಾರೆ :

ನಿನಗೆ ಪೊಡಮಡುವೆ

ನಿನ್ನನುಡುತೊಡುವೆ

ಏಕೆ ಎಡೆತಡೆವೆ

ಸುರಿದು ಬಾ

ಅವಳು ಉದಾರಳಾಗಿ ತನ್ನ ಮೇಲೆ ಸುರಿಯಲಿ, ಈ ಚರಾಚರ ಪ್ರಕೃತಿಯ ಯಾವುದೇ ಕಣವೂ ಅವಳಿಂದ deprive ಆಗದಿರಲಿ ಎನ್ನುವ ಉದ್ದೇಶದಿಂದ ಕವಿ ಹೇಳುತ್ತಾರೆ :

ಏಕೆ ಎಡೆತಡೆವೆ

ಸುರಿದು ಬಾ

ಕವಿ ಇರುವದು ಭೂಮಿಯ ಮೇಲೆ. ಆ ಸುರನದಿ ಗಂಗಾದೇವಿ ಭೂಮಿಗೆ ಬಂದಾಳೆ? ಕವಿಯನ್ನು oblige ಮಾಡಿಯಾಳೆ? ಹೀಗೆಂದು ಅವನೇನೂ ಸಂಶಯ ಪಡುತ್ತಿಲ್ಲ. ಆದರೂ ಸಹ ಮೇಲ್ಮಟ್ಟದಲ್ಲಿರುವ ಪುಣ್ಯಗಂಗೆಯನ್ನು ಕೆಳಮಟ್ಟದಲ್ಲಿರುವ ನಮ್ಮ ಉದ್ಧಾರಕ್ಕೆ ಇಳಿ ಎಂದು ಹೇಳಬೇಕಾದರೆ, implore ಮಾಡುವ ಅವಶ್ಯಕತೆ ಇದೆ, ಅಲ್ಲವೆ? ಅದಕ್ಕೆ ಕವಿ ಹೇಳುತ್ತಾರೆ :

ಸ್ವರ್ಗ ತೊರೆದು ಬಾ

ಬಯಲ ಜರೆದು ಬಾ

ನೆಲದಿ ಹರಿದು ಬಾ

ಬಾರೆ ಬಾ ತಾಯಿ ಇಳಿದು ಬಾ

ಇಳಿದು ಬಾ ತಾಯಿ

ಇಳಿದು ಬಾ.

(ಸ್ವರ್ಗಲೋಕವನ್ನು ತೊರೆದ ಮೇಲೆ ಅವಳು ಬಯಲಲ್ಲಿ ಅಂದರೆ ಅವಕಾಶದಲ್ಲಿ ಜರೆಯ(=slip)ಬೇಕಾಗುತ್ತದೆ. ಯಾಕೆಂದರೆ ಇಲ್ಲಿ ಅವಳ ಅವತರಣಕ್ಕೆ ಯಾವುದೇ ಘರ್ಷಣೆ ಇರುವದಿಲ್ಲ. ನೆಲವನ್ನು ತಲುಪಿದ ಬಳಿಕ ಅವಳು ಹರಿಯಬೇಕಾಗುತ್ತದೆ.

ಜರೆ ಎನ್ನುವ ಪದಕ್ಕೆ ನಿಂದಿಸು ಎನ್ನುವ ಅರ್ಥವೂ ಇದೆ. ಸ್ವರ್ಗವನ್ನೇ ತೊರೆದ ಗಂಗೆ, ಆಕಾಶದಲ್ಲಿ ನಿಂತಾಳೆಯೆ? ಧರೆಯೇ ಅವಳ ಗಮ್ಯ. ಆದುದರಿಂದ ಆಕಾಶವನ್ನು ಜರೆದು ಅಂದರೆ ತಿರಸ್ಕರಿಸಿ ಅವಳು ಭೂಮಿಗಿಳಿಯುವಳು ಎನ್ನುವ implication ಸಹ ಇಲ್ಲಿದೆ.)

ಇಲ್ಲಿಯವರೆಗೆ ಗಂಗಾದೇವಿಯನ್ನು ಭೌತಿಕರೂಪದಲ್ಲಿ, ಪ್ರವಾಹರೂಪದಲ್ಲಿ ಆಹ್ವಾನಿಸಿದ ಕವಿ, ಈಗ ಅವಳ ಅಂತರ್-ರೂಪವನ್ನು ನೋಡುತ್ತಿದ್ದಾನೆ. ಅವಳು ಜ್ಞಾನಗಂಗೆಯೂ ಹೌದು, ಆಧ್ಯಾತ್ಮಗಂಗೆಯೂ ಹೌದು. ಅವಳಿಂದಲೇ ತನ್ನ ಉದ್ಧಾರ ಆಗಬೇಕು. ಬ್ರಹ್ಮಾಂಡದಲ್ಲಿ ಇಳಿದ ಅವಳು ಈಗ ಈ ಪಿಂಡಾಂಡದಲ್ಲಿ ಇಳಿಯಬೇಕು:

ನನ್ನ ತಲೆಯೊಳಗೆ

ನನ್ನ ಬೆಂಬಳಿಗೆ

ನನ್ನ ಒಳಕೆಳಗೆ

ನುಗ್ಗಿ ಬಾ

ಕಣ್ಣ ಕಣ ತೊಳಿಸಿ

ಉಸಿರ ಎಳೆ ಎಳಸಿ

ನುಡಿಯ ಸಸಿ ಮೊಳೆಸಿ

ಹಿಗ್ಗಿ ಬಾ

ತಾಯೆ, ಗಂಗಾದೇವಿ, ನಿನ್ನ ಎದುರಿಗೆ ನಾನು ತಲೆಬಾಗಿ ನಿಂತಿದ್ದೇನೆ. ನನ್ನ ತಲೆಯೊಳಗೆ ಅಂದರೆ ನನ್ನ ಚಿತ್ತದೊಳಗೆ, ನನ್ನ ಬುದ್ಧಿಯೊಳಗೆ ಇಳಿದು ಶುದ್ಧಗೊಳಿಸು. ಮಸ್ತಕದಿಂದ ಕೆಳಗಿಳಿದು, ನನ್ನ ಬೆನ್ನಹುರಿಯಲ್ಲಿ ಹರಿದು, ನನ್ನ ಒಳ್ಳೆಯ ಕಾರ್ಯಗಳಿಗೆ ಬೆಂಬಲವಾಗಿ ನಿಲ್ಲು. ನನ್ನ ಒಳಗೆ, ನನ್ನ ಕೆಳಗೆ ಇಳಿ. ಅಂದರೆ ನನ್ನ basic urgesಗಳನ್ನು, ನನ್ನ primitive urgesಗಳನ್ನು ತೊಳೆದು ಹಾಕು. ನನ್ನಲ್ಲಿ ಆಧ್ಯಾತ್ಮಿಕ ಬಯಕೆಗಳೇ ಉದ್ದೀಪನವಾಗಲಿ. ನನ್ನ ಕಣ್ಣ ಕಣವನ್ನು ತೊಳೆ ಅಂದರೆ ನನ್ನ ನೋಟವನ್ನು ಸ್ವಚ್ಛಗೊಳಿಸು, ನನ್ನ ಒಳ ಉಸಿರನ್ನು ಎಳೆದು ಪ್ರಾಣಾಯಾಮದಲ್ಲಿ ವಿಲೀನಗೊಳಿಸು. ನನ್ನಲ್ಲಿ ನುಡಿಯ ಅಂದರೆ ಓಂಕಾರದ ಸಸಿಯನ್ನು ನೀರುಣ್ಣಿಸಿ ಮೊಳೆಯಿಸು.

(ನುಡಿಯ ಸಸಿ ಅಂದರೆ ಕಾವ್ಯಸಸಿ ಎನ್ನುವ ಅರ್ಥವೂ ಬರುತ್ತದೆ.)

ಬೇಂದ್ರೆ ಇಲ್ಲಿ ಯೋಗದ ಪರಿಭಾಷೆಯನ್ನು ಉಪಯೋಗಿಸಿಕೊಂಡಿದ್ದಾರೆ.

‘ನನ್ನ ತಲೆಯೊಳಗೆ ಅಂದರೆ ಸಹಸ್ರಾರ ಚಕ್ರದೊಳಗೆ ;

ನನ್ನ ಬೆಂಬಳಿಗೆ ಅಂದರೆ ಸಹಸ್ರಾರ ಹಾಗು ಇತರ ಆರು ಚಕ್ರಗಳಲ್ಲಿ ಹಾಯ್ದು ಹೋಗುವ ಸುಷುಮ್ನಾ ನಾಡಿಯೊಳಗೆ ;

ನನ್ನ ಒಳಕೆಳಗೆ ಅಂದರೆ ಮೂಲಾಧಾರ ಚಕ್ರದೊಳಗೆ ;

ದೇವಗಂಗೆಯೆ ಅಂದರೆ ಕುಂಡಲಿನಿ ಶಕ್ತಿಯೆ ನುಗ್ಗಿ ಬಾ’ ಎಂದು ಬೇಂದ್ರೆ ಪ್ರಾರ್ಥಿಸುತ್ತಾರೆ.

(ಬ್ರಹ್ಮಾಂಡದಲ್ಲಿರುವ ಚೈತನ್ಯ ಹಾಗೂ ಪಿಂಡಾಂಡದಲ್ಲಿರುವ ಚೈತನ್ಯ ಎರಡೂ ಒಂದೇ. ಆದುದರಿಂದ ಸುರಗಂಗೆ ಹಾಗು ಕುಂಡಲಿನಿ ಬೇರೆ ಬೇರೆ ಅಲ್ಲ.)

‘ಹಿಗ್ಗಿ ಬಾ’ ಅಂದರೆ ‘ದೈವೀ ಆನಂದವನ್ನು ನೀಡುತ್ತ ಬಾ’ ಎಂದು ಬೇಂದ್ರೆ ಪ್ರಾರ್ಥಿಸುತ್ತಾರೆ.

ಎದೆಯ ನೆಲೆಯಲ್ಲಿ ನೆಲಿಸಿ ಬಾ

ಜೀವ ಜಲದಲ್ಲಿ ಚಲಿಸಿ ಬಾ

ಮೂಲ ಹೊಲದಲ್ಲಿ ನೆಲಿಸಿ ಬಾ

ಇಳಿದು ಬಾ ತಾಯಿ

ಇಳಿದು ಬಾ.

ಯೋಗದ ಭಾಷೆಯಲ್ಲಿ ಎದೆಯ ನೆಲೆ ಅಂದರೆ ಅನಾಹತ ಚಕ್ರ,

ಜೀವಜಲ ಅಂದರೆ ಮಣಿಪೂರ ಚಕ್ರ ಹಾಗೂ

ಮೂಲಹೊಲ ಅಂದರೆ ಮೂಲಾಧಾರ ಚಕ್ರ ಎನ್ನುವ ಅರ್ಥವಾಗುತ್ತದೆ.

ಹೃದಯದಲ್ಲಿ ರವಿ ಇರುತ್ತಾನೆ. ಆದುದರಿಂದ ಎದೆ ಅಂದರೆ ತೇಜ, ಜೀವಜಲ ಅಂದರೆ ಅಪ್, ಮೂಲಹೊಲ ಅಂದರೆ ಪೃಥ್ವಿ ;

ಆದುದರಿಂದ ಪಂಚಮಹಾಭೂತಗಳಲ್ಲಿಯ ಮೂರು ಮಹಾಭೂತಗಳಾದ ಪೃಥ್ವಿ, ಅಪ್ ಹಾಗೂ ತೇಜಗಳನ್ನು ಇಲ್ಲಿ ನಿರ್ದೇಶಿಸಿ, ಪಿಂಡಾಂಡದಲ್ಲಿರುವ ಈ ಮೂರು ಮಹಾಭೂತಗಳನ್ನು (ಹಾಗು by indirect implication ಎಲ್ಲ ಪಂಚಮಹಾಭೂತಗಳನ್ನು) ಶುದ್ಧೀಕರಿಸು ಎಂದು ಕವಿ ಬಿನ್ನವಿಸುತ್ತಾನೆ.

ಅಲ್ಲದೆ, ಎದೆಯ ನೆಲೆ ಎನ್ನುವದು ಕವಿಯ ವೈಯಕ್ತಿಕ ಆಕಾಂಕ್ಷೆಗಳನ್ನು, ಜೀವ ಜಲ ಎನ್ನುವದು ಕವಿಯ primaeval ಆಕಾಂಕ್ಷೆಗಳನ್ನು ಹಾಗೂ ಮೂಲ ಹೊಲ ಎನ್ನುವದು ಕವಿಯ basic ಆಕಾಂಕ್ಷೆಗಳನ್ನು ಸೂಚಿಸುತ್ತವೆ.

ಒಮ್ಮೆ ಧರೆಗಿಳಿದ ಗಂಗೆ ನಿರಂತರವಾಗಿ ಪ್ರವಹಿಸುತ್ತಿರಲು ಏನು ಮಾಡಬೇಕು? ಅವಳೇ ಮೋಡವಾಗಿ, ಆಕಾಶಕ್ಕೇರಿ, ಮತ್ತೆ ಮಳೆಯ ರೂಪದಲ್ಲಿ ಧರೆಗಿಳಿಯಬೇಕಲ್ಲವೆ?

ಕವಿ ಅದನ್ನು ಹೀಗೆ ಬಣ್ಣಿಸುತ್ತಾರೆ :

ಕಂಚು ಮಿಂಚಾಗಿ ತೆರಳಿ ಬಾ

ನೀರು ನೀರಾಗಿ ಉರುಳಿ ಬಾ

ಮತ್ತೆ ಹೊಡೆಮರಳಿ ಹೊರಳಿ ಬಾ

ಕಂಚುಮಿಂಚಾಗಿ ಕಾಣುವದು ಅಂದರೆ to appear suddenly in a flash. ಗಂಗಾದೇವಿ ಮತ್ತೆ ಮತ್ತೆ ಈ hydrological cycle ಮೂಲಕ ಧರೆಯ ಮೇಲಿರುವ ಚರಾಚರಗಳನ್ನು ತಣಿಸುತ್ತಿರಬೇಕು. ಅವಳ ಕರುಣೆಯಿಲ್ಲದೇ ಹೋದರೆ, ಈ ಭೂಜೀವಿಗಳು ದಯೆಯನ್ನು ಕಾಣದ ದೀನರಾಗುವರು, ಪ್ರಾಯದ ಚೈತನ್ಯವಿಲ್ಲದ ಹೀನರಾಗುವರು, ನೀರಿಲ್ಲದ ಮೀನಿನಂತಾಗುವರು.

ದಯೆಯಿರದ ದೀನ

ಹರೆಯಳಿದ ಹೀನ

ನೀರಿರದ ಮೀನ

ಕರೆಕರೆವ ಬಾ

ಇಳಿದು ಬಾ ತಾಯಿ

ಇಳಿದು ಬಾ.

(ಈ ಕವನರಚನೆಯನ್ನು ಮಾಡುವ ಸಮಯದಲ್ಲಿ ಬೇಂದ್ರೆಯವರು ಮಧ್ಯವಯಸ್ಕರಾಗಿದ್ದರು. ಆ ಕಾರಣಕ್ಕಾಗಿಯೇ ಅವರು ಹರೆಯಳಿದ ಹೀನ ಎಂದು ತಮ್ಮನ್ನು ಬಣ್ಣಿಸಿಕೊಳ್ಳುತ್ತಾರೆ. ಅಲ್ಲದೆ, ಆ ಅವಧಿಯಲ್ಲಿ ಭಾರತೀಯರೂ ಸಹ, ಶಕ್ತಿಹೀನರಾಗಿ, ದಯೆಯನ್ನು ಅಪೇಕ್ಷಿಸುವ ದೀನರಾಗಿ ತೋರುತ್ತಿದ್ದರು. )

ತಮ್ಮ ಮರುಕದ ಸ್ಥಿತಿಯನ್ನು ಬಣ್ಣಿಸಿದ ಕವಿ, ಗಂಗಾದೇವಿಯ ಮಮತೆಯ ಘನತೆಯನ್ನು ಬಣ್ಣಿಸುತ್ತಾರೆ.

ತಾಯಿಗೆ ತನ್ನ ಮಕ್ಕಳ ಬಗೆಗಿನ ಮಾತೃವಾತ್ಸಲ್ಯದ ಬಗೆಗೆ ಸಂದೇಹವೇ ಬೇಡ :

ಕರು ಕಂಡ ಕರುಳೆ

ಮನ ಉಂಡ ಮರುಳೆ

ಉದ್ದಂಡ ಅರುಳೆ

ಸುಳಿಸುಳಿದು ಬಾ

ತಾನು ಸಲಹುವ ಜೀವಿಗಳ ಪೋಷಣೆ ಮಾಡುವಲ್ಲಿ, ಗಂಗಾದೇವಿಯು ವಹಿಸುವ ಮೂರು ಹಂತಗಳನ್ನು ಬೇಂದ್ರೆ ಸೂಚಿಸಿದ್ದಾರೆ. ಮೊದಲನೆಯ ಹಂತದಲ್ಲಿ ಅವಳು ತನ್ನ ಕರುವನ್ನು ಕಂಡ ಗೋವಿನಂತೆ ಅಂತಃಕರಣ ಪೂರಿತಳಾಗುವಳು.

ಎರಡನೆಯ ಹಂತದಲ್ಲಿ ಮಗುವಿನ ಮನಸ್ಸನ್ನು ತಿಳಿದು ಮಗುವಿಗೆ ಮುದ್ದು ಮಾಡುವ ಮರುಳ ತಾಯಿ ಅವಳು. ಮೂರನೆಯ ಹಂತದಲ್ಲಿ ಅವಳು ಉದ್ದಂಡ ಅರುಳೆ ; ಅಂದರೆ ಸ್ವತಃ ಪೂರ್ಣ ಜ್ಞಾನವನ್ನು ಹೊಂದಿದ, ಮಗುವಿಗೆ ಶಿಕ್ಷೆ ಕೊಡುತ್ತಲೇ ಶಿಕ್ಷಣ ನೀಡಬಲ್ಲ ಶಿಕ್ಷಕಿ.

ಈ ದೇವಿಯನ್ನು ಬೇಂದ್ರೆ ‘ಸುಳಿ ಸುಳಿದು ಬಾ’, ಅಂದರೆ ದೂರ ಹೋಗದಿರು, ಸುತ್ತಲೇ ಸುತ್ತುತ್ತ ಇರು ಎಂದು ಬೇಡಿಕೊಳ್ಳುತ್ತಾರೆ.

ಈ ರೀತಿಯಾಗಿ ಜೀವಿಗಳ ಉದ್ಧಾರ ಮಾಡುವ ಕೃಪಾಭಾವ ಗಂಗಾದೇವಿಗೆ ಇರುವ ಕಾರಣವೇನು? ಇಲ್ಲಿ ಗಂಗಾದೇವಿಯ ಪಾರಮಾರ್ಥಿಕ ಸ್ವರೂಪವನ್ನು ಬೇಂದ್ರೆ ಬಣ್ಣಿಸುತ್ತಾರೆ. ಅವಳು ಸಾಕ್ಷಾತ್ ಶಿವನ ಶುಭ್ರ ಕರುಣಾಭಾವ.

ಈ ಏಕೈಕ ಕರುಣಾಭಾವದಲ್ಲಿ ಬೇರೆ ಭಾವಗಳು ಎಳ್ಳಷ್ಟೂ ಮಿಳಿತವಾಗಿಲ್ಲ. ಅವಳು ವಾತ್ಸಲ್ಯಭಾವದಿಂದ ಮಾತ್ರ ಆವರಿಸಲ್ಪಟ್ಟವಳು.(ವಾತ್ಸಲ್ಯವರಣೆ). ಆದುದರಿಂದಲೇ ಅವಳು ಜೀವಿಗಳ ಉದ್ಧಾರದಲ್ಲಿ ತಾರತಮ್ಯವಿಲ್ಲದೇ ಸದಾ ಮಗ್ನಳಾಗಿರುವವಳು.

ಶಿವಶುಭ್ರ ಕರುಣೆ

ಅತಿಕಿಂಚಿದರುಣೆ

ವಾತ್ಸಲ್ಯವರಣೆ

ಇಳಿ ಇಳಿದು ಬಾ

ಇಳಿದು ಬಾ ತಾಯಿ

ಇಳಿದು ಬಾ.

[ಹಾಗಿದ್ದರೆ ಈ ಶುಭ್ರಕರುಣೆಯು ಕಿಂಚಿತ್ ಅರುಣೆಯಾಗಿ ಕಾಣುವದೇಕೆ? ಈ ಅತಿ ಸ್ವಲ್ಪ ಕೆಂಪು tinge ಎಲ್ಲಿಂದ ಬಂದಿತು? ಅದಕ್ಕೆ ಉತ್ತರವು ಶ್ರೀ ಶಂಕರಾಚಾರ್ಯರ “ಸೌಂದರ್ಯಲಹರಿ” ಯಲ್ಲಿದೆ.

ಶಿವನು ಕೇವಲ ಆತ್ಮಸ್ವರೂಪನು ; ಅವನಲ್ಲಿ ಯಾವುದೇ ಗುಣಗಳಿಲ್ಲ. ಆದರೆ ಅವನ ಶಕ್ತಿಯು ಸಕಲಗುಣಗಳನ್ನು ಒಳಗೊಂಡ ಅರುಣರೂಪದವಳು. ಅವನ ಕರುಣಾಭಾವವೂ ಅವಳೇ. ಆದುದರಿಂದ ಅವನ ಕರುಣಾಭಾವವೂ ಸಹ ಕೆಂಪು tinge ಹೊಂದಿರುವಂತೆ ಭಾಸವಾಗುತ್ತದೆ.

“ಜಗತ್ತ್ರಾತುಂ ಶಂಭೋರ್ಜಯತಿ ಕರುಣಾ ಕಾಚಿದರುಣಾ”]

ಇಂತಹ ಗಂಗಾದೇವಿಯನ್ನು ಬಿಟ್ಟರೆ ತಮ್ಮ ಉದ್ಧಾರಕರು ಬೇರೆ ಯಾರೂ ಇಲ್ಲ ಎಂದು ಬೇಂದ್ರೆ ಆಕೆಗೆ ಹೇಳುತ್ತಾರೆ :

ಕೊಳೆಯ ತೊಳೆವವರು ಇಲ್ಲ ಬಾ

ಬೇರೆ ಶಕ್ತಿಗಳು ಹೊಲ್ಲ ಬಾ

ಹೀಗೆ ಮಾಡದಿರು , ಅಲ್ಲ ಬಾ

ತನ್ನಲ್ಲಿಯೇ ಆಗಲಿ, ತನ್ನ ನಾಡಿನಲ್ಲಿಯೇ ಆಗಲಿ, ಕೊಳೆಯನ್ನು ತೊಳೆಯುವವರು ಯಾರೂ ಇಲ್ಲ. ಭೌತಿಕ ಕೊಳೆಯೇ ಆಗಲಿ, ಅಜ್ಞಾನದ ಕೊಳೆಯೇ ಆಗಲಿ ಅಥವಾ ನೈತಿಕ ಕೊಳೆಯೇ ಆಗಲಿ, ಇವೆಲ್ಲವನ್ನು ತೊಳೆಯಲು ಗಂಗಾದೇವಿಗೆ ಮಾತ್ರ ಸಾಧ್ಯ. ಬೇರೆ ಶಕ್ತಿಗಳಿಂದ ಅದು ಸಾಧ್ಯವಿಲ್ಲ. ಏಕೆಂದರೆ, ಇತರ ಶಕ್ತಿಗಳೆಂದರೆ ಮಾನವ ಶಕ್ತಿಗಳು, ಉದಾಹರಣೆಗೆ ಧನಶಕ್ತಿ. ಈ ಇತರ ಶಕ್ತಿಗಳು ‘ಹೊಲ್ಲ’ ಅಂದರೆ ಮಲಿನಗೊಂಡ ಶಕ್ತಿಗಳು. ಆದುದರಿಂದ ಈ ನಿನ್ನ ಕರ್ತವ್ಯವನ್ನು ಮಾಡದಿರುವದು ನಿನಗೆ ತಕ್ಕದ್ದಲ್ಲ.

ಇಲ್ಲಿಯವರೆಗೆ ಮಾನವನ ವೈಯಕ್ತಿಕ ಉದ್ಧಾರವನ್ನು ಕೋರಿದ ಕವಿ ಈಗ ನಾಡಿನ ಉದ್ಧಾರಕ್ಕಾಗಿ ಪ್ರಾರ್ಥಿಸುತ್ತಾರೆ.

ನಾಡಿ ನಾಡಿಯನು ತುತ್ತ ಬಾ

ನಮ್ಮ ನಾಡನ್ನೆ ಸುತ್ತ ಬಾ

ಸತ್ತ ಜನರನ್ನು ಎತ್ತ ಬಾ

ನಮ್ಮ ನಾಡಿನಾಡಿಯಲ್ಲಿ ನಿನ್ನ ತುತ್ತನ್ನು ನೀಡು, ನಮ್ಮ ನಾಡನ್ನೆಲ್ಲ ಸುತ್ತಿ ನೀರುಣ್ಣಿಸು ಹಾಗು ಸತ್ತ ಜನರನ್ನು ಮೇಲೆತ್ತು. ನಿನ್ನ ಕರುಣೆಯಿಂದ ಈ ನಾಡು ಮತ್ತೆ ಹಸಿರು ಹಸಿರಾಗಲಿ, ಜನರಲ್ಲಿ ಮತ್ತೆ ಜೀವ ತುಂಬಲಿ ಎಂದು ಬೇಂದ್ರೆಯವರು ಗಂಗಾದೇವಿಯನ್ನು ಪ್ರಾರ್ಥಿಸುತ್ತಾರೆ. ಆದುದರಿಂದ ಗಂಗಾದೇವಿ ಕೇವಲ ಹಿಮಾಲಯದಿಂದ ಹರಿದು ಬಂಗಾಲ ಉಪಸಾಗರವನ್ನು ಸೇರುತ್ತಿರುವ ನದಿಯಾಗಿ ಉಳಿಯದೆ, ಭಾರತದಲ್ಲೆಲ್ಲ ಹರಿಯುವ ಪ್ರವಾಹಗಳ ಪ್ರತಿನಿಧಿಯಾಗುತ್ತಾಳೆ.

(ಭಾರತದಲ್ಲಿ ಹರಿಯುವ ನದಿಗಳೆಲ್ಲ ಭಾರತೀಯರ ಪಾಲಿಗೆ ಪುಣ್ಯನದಿಗಳೇ. ಗುರುಗ್ರಹವು ಪ್ರತಿ ಹದಿಮೂರು ತಿಂಗಳಿಗೊಮ್ಮೆ ರಾಶ್ಯಂತರ ಮಾಡುವಾಗ, ಗಂಗೆಯೂ ಸಹ ಒಂದೊಂದು ನದಿಯಲ್ಲಿ ಸಮಾವೇಶಗೊಳ್ಳುತ್ತಾಳೆ ಎನ್ನುವದು ಭಾರತೀಯರ ನಂಬಿಕೆ. ಉದಾಹರಣೆಗೆ, ಗುರು ಕನ್ಯಾ ರಾಶಿಯಲ್ಲಿ ಪ್ರವೇಶಿಸಿದಾಗ, ಗಂಗಾದೇವಿಯು ಕೃಷ್ಣಾ ನದಿಯಲ್ಲಿ ಸಮಾವಿಷ್ಟಳಾಗಿರುತ್ತಾಳೆ. ಆದುದರಿಂದ, ಆ ಕಾಲದಲ್ಲಿ ಪಿತೃಗಳಿಗೆ ಪಿಂಡಪ್ರದಾನವನ್ನು

ಕೃಷ್ಣಾನದಿಯಲ್ಲಿ ಮಾಡುವದು, ಗಂಗಾನದಿಯಲ್ಲಿ ಮಾಡುವಷ್ಟೇ ಫಲದಾಯಕವಾದದ್ದು.)

ಇಂತಹ ಪುಣ್ಯನದಿಯಾದ ಗಂಗಾದೇವಿಯ ಮನಸ್ಸಿನ ರೂಪವೆಂತಹದು? ದೇವತೆಗಳ ಕನಸುಗಳ ಪ್ರತಿಬಿಂಬವು ಈ ಸುರನದಿಯಲ್ಲಿ ಬಿದ್ದಿತಂತೆ. ಆ ದಿವ್ಯಸ್ವಪ್ನದಿಂದ ಶುದ್ಧಜ್ಞಾನ ಪಡೆದ ನೀರೆ ಈ ಗಂಗಾದೇವಿ. ಅವಳೀಗ ಆಕಾಶದುದ್ದವನ್ನು ತುಂಬಿಕೊಂಡು ಧರೆಗಿಳಿಯಲಿದ್ದಾಳೆ.

ಸುರಸ್ವಪ್ನವಿದ್ದ ಪ್ರತಿಬಿಂಬ ಬಿದ್ದ

ಉದ್ಬುದ್ಧ ಶುದ್ಧ ನೀರೇ

ಎಚ್ಚತ್ತು ಎದ್ದ ಆಕಾಶದುದ್ದ

ಧರೆಗಿಳಿಯಲಿದ್ದ ಧೀರೇ

ಸಿರಿವಾರಿಜಾತ ವರಪಾರಿಜಾತ

ತಾರಾ-ಕುಸುಮದಿಂದೆ.

ಸಿರಿವಾರಿ ಅಂದರೆ ಗಂಗಾದೇವಿ; ಅವಳ ನೀರುಂಡು ಬೆಳೆದದ್ದು ಪಾರಿಜಾತ ವೃಕ್ಷ. ಪಾರಿಜಾತದಲ್ಲಿ ಹುಟ್ಟಿದ ಹೂವುಗಳೇ ಆಕಾಶವನ್ನು ತುಂಬಿಕೊಂಡ ತಾರೆಗಳು. ಈ ತಾರೆಗಳ ಮಧ್ಯದಿಂದ ಕೆಳಗಿಳಿದು ಬರುತ್ತಿದ್ದಾಳೆ ಗಂಗಾದೇವಿ.

ಈ ರೀತಿಯಾಗಿ ಆಕಾಶದಿಂದ ಇಳಿಯುತ್ತಿರುವ ಗಂಗಾದೇವಿಯನ್ನು ಕವಿ ಭಕ್ತಿಯಿಂದ ವಂದಿಸುತ್ತಾರೆ:

ವೃಂದಾರವಂದ್ಯೆ ಮಂದಾರಗಂಧೆ

ನೀನೆ ತಾಯಿ ತಂದೆ

ರಸಪೂರಜನ್ಯೆ ನೀನಲ್ಲ ಅನ್ಯೆ

ಸಚ್ಚಿದಾನಂದ ಕನ್ಯೆ

ಬಂದಾರ ಬಾರೆ, ಒಂದಾರೆ ಸಾರೆ

ಕಣ್ಧಾರೆ ತಡೆವರೇನೇ?

ಅವತಾರವೆಂದೆ ಎಂದಾರೆ ತಾಯಿ, ಈ ಅಧ:ಪಾತವನ್ನೇ.

ವೃಂದಾರವೆಂದರೆ ವೃಂದಾಹಾರ (=ತುಳಸಿಮಾಲೆ). ತುಳಸಿ ಭೂಮಿಯ ಮೇಲೆ ಬೆಳೆಯುವ ಪವಿತ್ರ ಸಸ್ಯ. ಮಂದಾರವೆಂದರೆ ಸ್ವರ್ಗದಲ್ಲಿ ಬೆಳೆಯುವ ವೃಕ್ಷ. ಗಂಗಾದೇವಿಯು ಭೂಮಿಯಲ್ಲಿ ಪವಿತ್ರಸಸ್ಯ ತುಳಸಿಯಿಂದ ಪೂಜಿಸಲ್ಪಡಬೇಕಾದವಳು. ಸ್ವರ್ಗದಲ್ಲಿ ಮಂದಾರಪುಷ್ಪಗಳಿಂದ ಪೂಜಿತಳಾಗಿ, ಆ ಸುವಾಸನೆಯನ್ನು ಹೊಂದಿದವಳು. ಈ ರೀತಿಯಾಗಿ ಭೂಮಿ ಹಾಗು ಸ್ವರ್ಗದಲ್ಲಿ ನೀನು ಪೂಜಿತಳಾಗಿದ್ದೀಯೆ. ಈ ಮಕ್ಕಳನ್ನು ವಾತ್ಸಲ್ಯದಿಂದ ಪೋಷಿಸಬೇಕಾದ ತಾಯಿ ಹಾಗು ತಂದೆ ನೀನೇ ಎಂದು ಕವಿ ಹೇಳುತ್ತಾನೆ.

ಇಂತಹ ಗಂಗಾದೇವಿಯನ್ನು ಕವಿ ಭಕ್ತಿಯಿಂದಲೇ ಆಹ್ವಾನಿಸುತ್ತಿದ್ದಾನೆ.

‘ನೀನು ಭಗವಂತಹ ಆನಂದರಸದಲ್ಲಿ ಜನಿಸಿದವಳು; ಆದುದರಿಂದ ನೀನು ಸತ್-ಚಿತ್-ಆನಂದ ಬ್ರಹ್ಮನ ಕನ್ಯೆ. ನಾವೂ ಸಹ ಆ ಸಚ್ಚಿದಾನಂದ ಬ್ರಹ್ಮನ ಸೃಷ್ಟಿಯೇ. ಆದುದರಿಂದ ನೀನು ನನಗೆ ಬೇರೆಯವಳಾಗಲು ಹೇಗೆ ಸಾಧ್ಯ?’

‘ಒಂದೇ ಒಂದು ಸಲ ನೀನು ಕೆಳಗಿಳಿದು ಬಾ. ನಿನ್ನನ್ನು ಕಾಣುತ್ತಿರುವ ನನ್ನ ಆನಂದದ ಅಶ್ರುಧಾರೆಯನ್ನು ತಡೆಯಬೇಡ’ ಎಂದು ಅವಳಿಗೆ implore ಮಾಡುತ್ತಾನೆ.

“ನೀನು ಕೆಳಗಿಳಿದು ಬಾ ತಾಯಿ, ಇದು ಅಧ:ಪತನವಲ್ಲ, ಇದು ಅಧ:ಪಾತ, ಇದು ಅವತರಣ” ಎಂದು ಬೇಂದ್ರೆ ಹೇಳುತ್ತಾರೆ. ಪತನವೆಂದರೆ ಅಧೋಗತಿಗೆ ಇಳಿಯುವದು. ಆದುದರಿಂದ ಧಬಧಬೆಗೆ ಜಲಪತನವೆನ್ನುವದಿಲ್ಲ, ಜಲಪಾತವೆನ್ನುತ್ತಾರೆ.

ಅದೇ ರೀತಿಯಾಗಿ ಗಂಗೆ ಧರೆಗಿಳಿಯುವದು ಗಂಗಾಪತನವಲ್ಲ ; ಇದು ಗಂಗಾಪಾತ, ಇದು ಗಂಗಾವತರಣ !

ಇಲ್ಲಿ ಮತ್ತೊಂದು ಹೆಚ್ಚುಗಾರಿಕೆ ಇದೆ.

ಭಗವಂತನು ಭಕ್ತರ ಉದ್ಧಾರಕ್ಕಾಗಿ ಒಂಬತ್ತು ಅವತಾರಗಳನ್ನು ಎತ್ತಿದ್ದಾನೆ ಎಂದು ಹೇಳುತ್ತಾರೆ.

ಈ ಯಾವ ಅವತಾರಗಳಲ್ಲಿಯೂ ಆತ ತನ್ನ ಸ್ವಸ್ವರೂಪವನ್ನು ತೋರಿಸಿಲ್ಲ. ಮತ್ಸ್ಯ, ಕೂರ್ಮ, ವರಾಹ….ರಾಮ, ಕೃಷ್ಣ ಮೊದಲಾದ ರೂಪಗಳನ್ನು ಧರಿಸಿದ್ದಾನೆ.

ಆದರೆ ಗಂಗಾದೇವಿ ತನ್ನ ಸ್ವಸ್ವರೂಪದಲ್ಲಿಯೇ ಧರೆಗಿಳಿದಿದ್ದಾಳೆ. ಆದುದರಿಂದ ಇದು ಬರಿಯ ಅವತಾರವಲ್ಲ ; ಇದು ಸ್ವಸ್ವರೂಪದ ಅವತರಣ ! ಇದು ಗಂಗಾವತರಣ !

ಹರಕೆ ಸಂದಂತೆ

ಮಮತೆ ಮಿಂದಂತೆ

ತುಂಬಿ ಬಂದಂತೆ

ದುಮ್‌ದುಮ್ ಎಂದಂತೆ

ದುಡುಕಿ ಬಾ

ನಿನ್ನ ಕಂದನ್ನ ಹುಡುಕಿ ಬಾ

ಹುಡುಕಿ ಬಾ ತಾಯಿ

ದುಡುಕಿ ಬಾ.

ಬೇಂದ್ರೆಯವರದು ಏನಾದರೂ ವೈಯಕ್ತಿಕ ಹರಕೆ ಇತ್ತೊ ಗೊತ್ತಿಲ್ಲ. ಆದರೆ ಭಗೀರಥನಿಗೆ ತನ್ನ ಪೂರ್ವಜರನ್ನು ಪ್ರೇತಲೋಕದಿಂದ ಬಿಡಿಸಬೇಕಾಗಿತ್ತು. ಗಂಗಾವತರಣದಿಂದ ಆ ಹರಕೆ ಪೂರ್ಣವಾಯಿತು. ಮತ್ತೊಮ್ಮೆ ಇದೀಗ ಗಂಗಾದೇವಿ ಮಮತಾಪೂರದಲ್ಲಿ ಮಿಂದವಳಂತೆ, ಮಹಾಪೂರದಲ್ಲಿ ಮೈ ತುಂಬಿಕೊಂಡು , ತಡ ಮಾಡದಂತೆ ದುಡುಕುತ್ತ(=recklessly) ಮುನ್ನುಗ್ಗಬೇಕು. ತನ್ನ ಕಂದನ್ನ ಹುಡುಕಿಕೊಂಡು ಹೋಗಬೇಕು. ಇದು ಅವಳ ವಾತ್ಸಲ್ಯದ ಕರ್ತವ್ಯ!

ಅವಳು ಹರಿದಲ್ಲೆಲ್ಲ ಚರಾಚರಗಳು ಹೊಸವಾಗುತ್ತವೆ, ಹಸಿರಾಗುತ್ತವೆ. ಜೀವಕ್ಕಂಟಿಕೊಂಡ ಕಲ್ಮಶಗಳೆಲ್ಲ ತೊಳೆದು ಹೋಗಿ, ಬಾಳಿನಲ್ಲಿ ಹೊಸ ಬೆಳಕು ಮೂಡುತ್ತದೆ. ಆದುದರಿಂದ ‘ತಾಯಿ, ಮೈ ತುಂಬಿಕೊಂಡು ಬಾ’ ಎಂದು ಬೇಂದ್ರೆ ಪ್ರಾರ್ಥಿಸುತ್ತಾರೆ:

ಹರಣ ಹೊಸದಾಗೆ ಹೊಳೆದು ಬಾ

ಬಾಳು ಬೆಳಕಾಗೆ ಬೆಳೆದು ಬಾ

ಮೈ ತಳೆದು ಬಾ

ಕೈ ತೊಳೆದು ಬಾ

ಇಳೆಗಿಳಿದು ಬಾ ತಾಯೀ

ಇಳಿದು ಬಾ ತಾಯಿ

ಇಳಿದು ಬಾ.

ಶಂಭು-ಶಿವ-ಹರನ ಚಿತ್ತೆ ಬಾ

ದತ್ತ ನರಹರಿಯ ಮುತ್ತೆ ಬಾ

ಅಂಬಿಕಾತನಯದತ್ತನತ್ತೆ ಬಾ

ಇಳಿದು ಬಾ ತಾಯಿ

ಇಳಿದು ಬಾ.

ಶಿವನು ಕೇವಲ ಸತ್-ರೂಪನು ; ಶಕ್ತಿ ಅವನ ಚಿತ್-ರೂಪಳು. (ಬೇಂದ್ರೆಯವರು ಗಂಗಾದೇವಿಯನ್ನೆ ಶಕ್ತಿರೂಪೆಯಾಗಿ ಗ್ರಹಿಸಿ ಬರೆದಿದ್ದಾರೆ). ಆದುದರಿಂದ ಗಂಗೆಗೆ ಅವರು ಶಿವನ ಚಿತ್ತೆ ಎಂದು ಕರೆಯುತ್ತಾರೆ.

ಗಂಗಾದೇವಿಯು ದತ್ತ ನರಹರಿಗೆ ಮುತ್ತಜ್ಜಿಯಾಗಬೇಕು.

ಇಂತಹ ಗಂಗಾದೇವಿಯು ಅಂಬಿಕಾತನಯದತ್ತನತ್ತ ಬರಲಿ ಎಂದು ಕವಿ ಪ್ರಾರ್ಥಿಸುತ್ತಾರೆ.

ಬೇಂದ್ರೆಯವರು ಗಂಗಾದೇವಿಯನ್ನು ತಾವೊಬ್ಬರೇ ಪ್ರಾರ್ಥಿಸುತ್ತಿರುವಂತೆ ಕವನವನ್ನು ರಚಿಸಿದ್ದರೂ ಸಹ ಇದು ನಮ್ಮ ನಾಡಿನ ಕರೆ. ನಮ್ಮ ನಾಡು ಸಮೃದ್ಧವಾಗಬೇಕು, ಈ ನಾಡವರೆಲ್ಲರೂ ಜ್ಞಾನಸಂಪನ್ನರಾಗಬೇಕು, ಪವಿತ್ರರಾಗಬೇಕು ಎನ್ನುವದು ಈ ಕವನದ ಭಾವನೆ.

ಕವನವು ಬೆಳೆದ ಬಗೆಯನ್ನು ಓದುಗರು ಗಮನಿಸಬೇಕು:

ಕವನದ ಮೊದಲ ನಾಲ್ಕು ನುಡಿಗಳಲ್ಲಿ ಗಂಗಾನದಿಗೆ ಪ್ರಾರ್ಥನೆ ಇದೆ. ನಂತರದ ಎರಡು ನುಡಿಗಳಲ್ಲಿ ಗಂಗೆಯ ಮಮತೆಯ ವರ್ಣನೆ, ಅವಳ ಶಕ್ತಿವರ್ಣನೆ ಇವೆ. ಮೂರನೆಯ ನುಡಿಯಲ್ಲಿ ಅವಳ ದೈವತ್ವದ ವರ್ಣನೆ ಇದೆ. ಕೊನೆಯ ಎರಡು ನುಡಿಗಳಲ್ಲಿ ಗಂಗಾವತರಣದಿಂದ ಈ ಪ್ರಕೃತಿ ಹೊಸ ಜೀವದಿಂದ ತುಂಬಿಕೊಳ್ಳುವದೆನ್ನುವ ಭರವಸೆ ಇದೆ.

ಟಿಪ್ಪಣಿ:

ಶ್ರೀಮತಿ ಶ್ರೀದೇವಿ ಕಳಸದ ಇವರು ‘ಗಂಗಾವತರಣ’ದ ಬಗೆಗೆ ಒಂದು ನಗೆಹನಿ ತಿಳಿಸಿದ್ದಾರೆ:

ವರಕವಿ ಬೇಂದ್ರೆಯವರು ಮನೆಯಲ್ಲಿ ಸ್ನಾನಗೈಯುತ್ತಿರುವಾಗ, ನಲ್ಲಿಯಲ್ಲಿ ನೀರು ನಿಂತುಹೋಯಿತು. ಆಗ ಅವರಿಂದ ಹೊರಹೊಮ್ಮಿದ ಕವನ:

“ಇಳಿದು ಬಾ ತಾಯಿ

ಇಳಿದು ಬಾ”.

ಹೆಚ್ಚಿನ ಓದಿಗೆ:http://sallaap.blogspot.com/2008/08/blog-post_29.html

೪. ಪ್ರಾರ್ಥನೆ

ಕೂಡಿ ಓದಿ, ಕೂಡಾದಿ, ಕೂಡಿ

ಅರಿಯೋಣ ಕೂಡಿ ಕೂಡಿ

ಕೂಡಿ ತಿಂದು ಕೂಡುಂಡು ಕುಡಿದು

ದುಡಿಯೋಣ ಕೂಡಿ ಕೂಡಿ

ಕೂಡಿ ನಡೆದು, ಒಡಗೂಡಿ ಪಡೆದು

ನುಡಿ ಹೇಳಿ ಕೇಳಿ ಕೂಡಿ

ಕೂಡಿ ಬೆಳೆದು ಬೆಳಗೋಣ

ದೇವರೊಲು ಕೂಡಿ ಕೂಡಿ ಕೂಡಿ.

೫. ಬಾರೊ ಸಾಧನಕೇರಿಗೆ

ಬಾರೊ ಸಾಧನಕೇರಿಗೆ

ಮರಳಿ ನಿನ್ನೀ ಊರಿಗೆ

ಮಳೆಯು ಎಳೆಯುವ ತೇರಿಗೆ

ಹಸಿರು ಏರಿದೆ ಏರಿಗೆ

ಹಸಿರು ಸೇರಿದೆ ಊರಿಗೆ

ಹಸಿರು ಚಾಚಿದೆ ದಾರಿಗೆ

ನಂದನದ ತುಣುಕೊಂದು ಬಿದ್ದಿದೆ

ನೋಟ ಸೇರದು ಯಾರಿಗೆ?

ಮಲೆಯ ಮೊಗವೇ ಹೊರಳಿದೆ

ಕೋಕಿಲಕೆ ಸವಿ ಕೊರಳಿದೆ

ಬೇಲಿಗೂ ಹೂ ಬೆರಳಿದೆ

ನೆಲಕೆ ಹರೆಯವು ಮರಳಿದೆ

ಭೂಮಿತಾಯ್ ಒಡಮುರಿದು ಎದ್ದಳೊ

ಶ್ರಾವಣದ ಸಿರಿ ಬರಲಿದೆ

ಮೋಡಗಳ ನೆರಳಾಟವು

ಅಡವಿ ಹೂಗಳ ಕೂಟವು

ಕೋಟಿ ಜೆನ್ನೊಣಕೂಟವು

ಯಕ್ಷಿ ಮಾಡಿದ ಮಾಟವು

ನೋಡು ಬಾ ಗುಂಪಾಗಿ ಪಾತರ-

ಗಿತ್ತಿ ಕುಣಿಯುವ ತೋಟವು

ಮರವು ಮುಗಿಲಿಗೆ ನೀಡಿದೆ.

ಗಿಡದ ಹೊದರೊಳು ಹಾಡಿದೆ

ಗಾಳಿ ಎಲ್ಲೂ ಆಡಿದೆ

ದುಗುಡ ಇಲ್ಲಿಂದೋಡಿದೆ

ಹೇಳು ಗೆಳೆಯಾ ಬೇರೆ ಎಲ್ಲೀ

ತರದ ನೋಟವ ನೋಡಿದೆ?

೬. ಗಮಗಮಾ ಗಮಾಡಿಸತಾವ ಮಲ್ಲಿಗಿ

ಗಮಗಮಾ ಗಮಾಡಿಸತಾವ ಮಲ್ಲಿಗಿ| ನೀವು ಹೊರಟಿದ್ದೀಗ ಎಲ್ಲಿಗೆ?

ತುಳುಕ್ಯಾಡತಾವ ತೂಕಡಿಕಿ

ಎವಿ ಅಪ್ಪತಾವ ಕಣ್ಣ ದುಡುಕಿ

ಕನಸು ತೇಲಿ ಬರತಾವ ಹುಡುಕಿ

ನೀವು ಹೊರಟಿದ್ದೀಗ ಎಲ್ಲೆಗೆ?

ಚಿಕ್ಕಿ ತೋರಸ್ತಾನ ಚಾಚಿ ಬೆರಳ

ಚಂದ್ರಾಮ ಕನ್ನಡಿ ಹರಳ

ಮನಸೋತು ಆಯಿತು ಮರುಳ

ನೀವು ಹೊರಟಿದ್ದೀಗ ಎಲ್ಲೆಗೆ?

ಗಾಳಿತಬ್ಬತಾವ ಹೂಗಂಪು

ಚಂದ್ರನ ತೆಕ್ಕಿಗಿದೆ ತಂಪು

ನಿಮ ಕಂಡರ ಕವದಾವ ಜೊಂಪು

ನೀವು ಹೊರಟಿದ್ದೀಗ ಎಲ್ಲಿಗೆ?

ನೆರಳಲ್ಲಾಡತಾವ ಮರದ ಬುಡಕs

ಕೆರಿ ತೆರಿ ನೂಗತಾವ ದಡsಕ

ಹೀಂಗೆ ಬಿಟ್ಟು ಇಲ್ಲಿ ನನ್ನ ನಡsಕ

ನೀವು ಹೊರಟಿದ್ದೀಗ ಎಲ್ಲಿಗೆ?

ನಮ್ಮ ನಿಮ್ಮ ಒಂದತನದಾಗ

ಹಾಡು ಹುಟ್ಟಿ ಒಂದು ಮನದಾಗ

ಬೆಳದಿಂಗಳಾತು ಬನದಾಗ ನೀವು ಹೊರಟಿದ್ದೀಗ ಎಲ್ಲಿಗೆ?

ನಾವು ಬಂದೆವದಿಲ್ಲಿದಿಲ್ಲಿಗೆ

ಬಾಯಿ ಬಿಟ್ಟವಲ್ಲ ಮಲ್ಲಿಗೆ

ನೀರೊಡೆಡಿತಲ್ಲ ಕಲ್ಲಿಗೆ

ನೀವು ಹೊರಟಿದ್ದೀಗ ಎಲ್ಲಿಗೆ?

ಬಂತ್ಯಾಕ ನಿಮಗೆ ಇಂದ ಮುನಿಸು

ಬೀಳಲಿಲ್ಲ ನಮಗೆ ಇದರ ಕನಸು

ರಾಯ ತಿಳಿಯಲಿಲ್ಲ ನಿಮ್ಮ ಮನಸು

ನೀವು ಹೊರಟಿದ್ದೀಗ ಎಲ್ಲಿಗೆ?