ಭಾವ ಸಂಗಮ.

೧.ಹಾಡು ಹಕ್ಕಿಗಳೆ ಹಾರಿ ಬಾನಿಗೆ.

ಹಾಡು ಹಕ್ಕಿಗಳೆ ಹಾರಿ ಬಾನಿಗೆ

ಮರದ ಗೂಡಿನಿಂದ ;

ಹೋಗಿ ಚೆಲ್ಲಿರಿ ದಿಕ್ಕು ದಿಕ್ಕಿಗೂ

ಒಳಗಿನ ಆನಂದ.

ಕಣ್ಣ ಪಡೆದಿರಿ ಬಣ್ಣ ಪಡೆದಿರಿ

ರೆಕ್ಕೆ ಪುಕ್ಕ ಮಾಟ ;

ಕಾಲು ಬಲಿಯಿತು ಕಾಲ ಸಂದಿತು

ಇನ್ನು ಹಾರುವಾಟ.

ದಾರಿ ದಾರಿಯಲಿ ರೆಂಬೆ ರೆಂಬೆಯಲಿ

ಕುತೂ ರಾಗ ಹಾಡಿ ;

ದಾರಿ ಸಾಗುವಾ ದಣಿದ ಜೀವಕೆ

ಕೊಂಚ ಮುದವ ನೀಡಿ.

ನಿಮ್ಮ ದನಿಯ ಆನಂದ ಚಿಮ್ಮಲಿ

ಕೇಳಿದವರ ಎದೆಗೆ ;

ಯಾವ ಹಕ್ಕಿ ಇವು, ಬಂದುದೆಲ್ಲಿಂದ

ಎಂಬ ಬೆರಗು ಕವಿಯೆ.

೨.ನಾನೆನುವುದು ಏನಿದೆ.

ನಾನೆನುವುದು ಏನಿದೆ

ನೀ ಎನುವುದು ಇರದೆ ?

ನನ್ನಿಂದಲೆ ನಾ ಎನ್ನುವುದು

ಸುಳ್ಳಲ್ಲದೆ ಬರಿದೆ ?

ಮರವಿದ್ದೂ ಒಳಗೆ

ಕೊಡಲಾರದು ಬೀಜ

ಜೊತೆಗೂಡದೆ ನೀರು ಮಣ್ಣು

ಗಾಳಿ ಸೂರ್ಯತೇಜ

ಕಡಲ ಹಂಡೆ ಕಾಯದೆ

ಮೈ ಪಡೆಯಿತೆ ಮುಗಿಲು ?

ನೆಲಕಿಳಿಯದೆ ಮುಗಿಲು

ತಲೆದೂಗಿತೆ ಪಯಿರು ?

ತಿರುಗುತ್ತಿವೆ ಗ್ರಹಗಳು

ಉರಿಯುತ್ತಿವೆ ತಾರೆ

ನಿಂತರೊಂದು ಗಳಿಗೆ

ಸಾವೇ ಈ ತಿರೆಗೆ

ಋಣ ತುಂಬಿದ ಗಣಿಯೊ

ನಮ್ಮದೆನ್ನುವ ಬಾಳು

ಸ್ಮರಿಸಿ ಎಲ್ಲ ಸಾಲ

ಕೃತಜ್ನತೆಯ ಹೇಳು.

೩.ಉಸಿರಿಲ್ಲದ ಬಾನಿನಲ್ಲಿ.

ಉಸಿರಿಲ್ಲದ ಬಾನಿನಲ್ಲಿ

ನಿಶೆಯೇರಿದೆ ಬಿಸಿಲು,

ಕೆಂಡದಂತೆ ಸುಡುತಿದೆ

ನಡು ಹಗಲಿನ ನೊಸಲು.

ಒಂದೊಂದು ತೊರೆಯೂ

ಒಣಗಿ ಬಿರಿದ ಪಾತ್ರ

ಪ್ರತಿಯೊಂದೂ ಮರವೂ

ಎಳೆ ಕಳಚಿದ ಗಾತ್ರ.

ಮುಗಿಲಿಲ್ಲದ ಬಾನಿನಲ್ಲಿ

ಭುಗಿಲೆನ್ನುವ ಗಾಳಿಯಲ್ಲಿ

ಧಗಧಗಿಸಿತೊ ಎಂಬಂತಿದೆ

ಮುಕ್ಕಣ್ಣನ ನೇತ್ರ

ಬಿಸಿಲಲ್ಲೂ ಅಲೆಯುತ್ತಿವೆ

ಕೊಬ್ಬಿದ ಮರಿಗೂಳಿ

ಎಮ್ಮೆ ಹಿಂಡು ಸಾಗಿದೆ

ಮೇಲೆಬ್ಬಿಸಿ ಧೂಳಿ.

ದಾರಿ ಬದಿಯ ಬೇಲಿ

ಮಾಡುತ್ತಿದೆ ಗೇಲಿ

ನೋಡುತ್ತಿದೆ ಸಾಕ್ಷಿಯಾಗಿ

ಆಕಾಶದ ನೀಲಿ.

೪.ಹರಿವ ನದಿಯು ನೀನು.

ಹರಿವ ನದಿಯು ನೀನು

ಸುರಿವ ಮಳೆಯು ನೀನು

ನೆಲದಿ ಬಿದ್ದ ಬೀಜ ಮೊಳೆಸಿ

ಫಲದಿ ಬಂದೆ ನೀನು

ಹೂವು ಹಣ್ಣ ಮೈಯೊಳು

ಹೊತ್ತ ಬಳ್ಳಿ ನೀನು

ತಾರೆಗಳಿಗೆ ತೀರವಾಗಿ

ನಿಂತ ಬಾನು ನೀನು

ಭಾರ ತಾಳಿ ನಗುವೆ

ನೋವ ಹೂಳಿ ನಲಿವೆ

ಲೋಕವನೇ ಸಾಕಲು

ನಿನ್ನ ಬಾಳ ಸುಡುವೆ

ಮರೆಯ ಬಾಳು ನಿನ್ನದು

ಹೊರುವ ಬಾಳು ನಿನ್ನದು

ಆನಂದದಿ ಇರಲು ನಾವು

ತೆರುವ ಬಾಳು ನಿನ್ನದು.

೫.ಎಲ್ಲಿಗೆ ಕರೆದೊಯ್ಯುವೆ ನೀ.

ಎಲ್ಲಿಗೆ ಕರೆದೊಯ್ಯುವೆ ನೀ

ಹೇಳು ಕನ್ನಯ್ಯಾ ?

ಬೃಂದಾವನ ಬೀದಿಗಳಲಿ

ಹೂ ಚೆಲ್ಲಿದ ಹಾದಿಗಳಲಿ

ಎಳೆದೊಯ್ಯುವೆ ಎಲ್ಲಿಗೆ

ಹೇಳು ಕನ್ನಯ್ಯಾ ?

ಮಡಿಕೆ ಒಡೆದು ಮೊಸರ ಕುಡಿದೆ

ನನ್ನ ಭಂಗಿಸಿ

ಬೆಣ್ಣೆ ಸವಿದು ನಡೆದೆ ಪುಂಡ

ನನ್ನ ನಂಬಿಸಿ !

ಮೋಡಿ ಮಾಡಿ ಕೂಡಿ ಮುಂದೆ

ಎಲ್ಲಿ ಹೋದೆಯೋ ?

ಅರಿಯದಂಥ ಹಾದಿಗೆಳೆದು

ಹೇಗೆ ತೊರೆದೆಯೋ ?

ನಂಬಿ ಬಂದ ಹೆಣ್ಣ ಭಂಡ

ಹಾಗೆ ತೊರೆವುದೇ ?

ಎಂದೋ ನೆನಪು ಬಂದು ಹೀಗೆ

ಒಮ್ಮೆ ಬರುವುದೇ !

ನಾನು ಮಾತ್ರ ನಿನ್ನ ನೆನೆದೆ

ಬಾಳುತಿರುವೆನೋ

ನೀನಿಲ್ಲದೆ ಗಿರಿಧಾರಿ

ಹೇಗೆ ಉಳಿವೆನೋ ?

೬.ನೀ ಸಿಗದ ಬಾಳೊಂದು ಬಾಳೇ ಕೃಷ್ಣ.

ನೀ ಸಿಗದೆ ಬಾಳೊಂದು ಬಾಳೇ ಕೃಷ್ಣ?

ನಾ ತಾಳಲಾರೆ ಈ ವಿರಹ ಕೃಷ್ಣಾ

ಕಮಲವಿಲ್ಲದ ಕೆರೆ ನನ್ನ ಬಾಳು

ಚಂದ್ರ ಇಲ್ಲದ ರಾತ್ರಿ, ಬೀಳು ಬೀಳು

ನೀ ಸಿಗದೆ ಉರಿ ಉರೀ ಕಳೆದೆ ಇರುಳ

ಮಾತಿಲ್ಲ ಬಿಗಿದಿದೆ ದುಖಃ ಕೊರಳ

ಅನ್ನ ಸೇರದು ನಿದ್ದೆ ಬಂದುದೆಂದು?

ಕುದಿದೆ ಒಂದೇ ಸಮ ಕೃಷ್ಣಾ ಎಂದು

ಯಾರು ಅರಿವರು ಹೇಳು ನನ್ನ ನೋವ?

ತಲ್ಲಣಿಸಿ ಕೂಗುತಿದೆ ದಾಸಿ ಜೀವ

ಒಳಗಿರುವ ಗಿರಿಧರನೆ ಹೊರಗೆ ಬಾರೋ

ಕಣ್ಣಿದುರು ನಿಂತು ಆ ರೂಪ ತೋರೋ

ಜನುಮ ಜನುಮದ ರಾಗ ನನ್ನ ಪ್ರೀತಿ

ನಿನ್ನೊಳಗೆ ಹರಿವುದೇ ಅದರ ರೀತಿ.

೭.ಮಾನವನೆದೆಯಲಿ ಅರದೆ ಉರಿಯಲಿ.

ಮಾನವನೆದೆಯಲಿ ಆರದೆ ಉರಿಯಲಿ

ದೇವರು ಹೆಚ್ಚಿದ ದೀಪ

ರೇಗುವ ದನಿಗೂ ರಾಗವು ಒಲಿಯಲಿ

ಮೂಡಲಿ ಮಧುರಾಲಾಪ

ಕೊಲ್ಲಲ್ಲು ಎತ್ತಿದ ಕೈಗೂ ಗೊತ್ತಿದೆ

ಕೆನ್ನೆಯ ಸವರುವ ಪ್ರೀತಿ

ಇರಿಯುವ ಮುಳ್ಳಿನ ನಡುವೆಯೆ ನಗುವುದು

ಗುಲಾಬಿ ಹೂವಿನ ರೀತಿ

ಉರಿಯನು ಕಾರುವ ಆಗಸ ತಾರದೆ

ತಂಪನು ತೀಡುವ ಮಳೆಯ?

ಲಾವಾರಸವನು ಕಾರುವ ಧರೆಯೇ?

ನೀಡದೆ ಅನ್ನದ ಬೆಳೆಯ?

ಹಮ್ಮು ಬಿಮ್ಮುಗಳ ಮರುಳುಗಾಡಿನಲಿ

ಎಲ್ಲೋ ಥಣ್ಣನೆ ಚಿಲುಮೆ

ತಾಪವ ಹರಿಸಿ ಕಾಪಾಡುವುದು

ಒಳಗೇ ಸಣ್ಣಗೆ ಒಲುಮೆ.

೮.ನೀ ಸಿಗದೆ ನಾನೆಂತು ಅರಿವೆನೇ ನನ್ನ.

ನೀ ಸಿಗದೆ ನಾನೆಂತು ಅರಿವೆನೇ ನನ್ನ

ಸಾಣೆ ಗೆರೆ ಮಿಂಚದೆ ತಿಳಿವರೇ ಹೊನ್ನ ?

ನೂರಾರು ಕೊಪ್ಪರಿಗೆ ನಿಧಿ ಹುಗಿದ ಗವಿಯು

ಆತ್ಮ ಸೆರೆಯಾಗಿದ್ದು ತಿಳಿಯದಾ ಭವಿಯು

ನಾನೊಂದು ಕಗ್ಗಾಡು ನನ್ನ ನಾ ಅರಿಯೆ

ಬೆಳಕಾಗಿ ಒಳಗಿಳಿದು ದಾರಿಗಳ ತೆರೆಯೆ

ನನ್ನ ಗೂಢಗಳಲ್ಲಿ ಇಳಿಯುವಾ ಹೆಣ್ಣೆ

ಸೋಕಿದಲ್ಲೆಲ್ಲ ರಸ ಮಿಡಿಯುವಂಥ ಹಣ್ಣೆ

ಸಂಗಮಿಸಿ ಎಲ್ಲ ಹೂ ಗಂಧ ಮಕರಂದ

ನಿನ್ನಲ್ಲಿ ಸಿಕ್ಕಿತೇ ನನ್ನಂತರಂಗ

ಅಂತರಂಗದ ಸ್ವರವ ಮಿಡಿದು ಶೃತಿರಾಗ

ಕೋಟಿ ಕನಸಿಗೆ ಬಾಳು ನಿನ್ನಿಂದ ಭೋಗ

ನೀ ತೆರೆವ ಪಾತ್ರದಲಿ ನಾ ನಂಬಿ ಹರಿವೆ

ದಕ್ಕಿತೋ ಗುರಿ ಭಾರಿ ಕಡಲಲ್ಲಿ ನೆರೆವೆ.

೯.ರಾತ್ರಿಯ ತಣ್ಣನೆ ತೋಳಿನಲಿ.

ರಾತ್ರಿಯ ತಣ್ಣನೆ ತೋಳಿನಲಿ

ಮಲಗಿದೆ ಲೋಕವೆ ಮೌನದಲಿ

ಯಾರೋ ಬಂದು, ಹೊಸಿಲಲಿ ನಿಂದು

ಸಣ್ಣಗೆ ಕೊಳಲಿನ ದನಿಯಲ್ಲಿ

ಕರೆದರಂತಲ್ಲೆ ಹೆಸರನ್ನ

----- ಕರೆದವರಾರೇ ನನ್ನನ್ನು?

ಬೇಗೆಗಳೆಲ್ಲಾ ಆರಿರಲು

ಗಾಳಿಯು ಒಯ್ಯುನೆ ಸಾಗಿರಲು

ಒಳಗೂ ಹೊರಗೂ ಹುಣ್ಣಿಮೆ ಚಂದಿರ

ತಣ್ಣನೆ ಹಾಲನು ತುಳುಕಿರಲು

ಕರೆದರಂತಲ್ಲೆ ಹೆಸರನ್ನು

----- ಕರೆದವರಾರೇ ನನ್ನನ್ನು?

ಮರಗಳ ಎಲೆಗಳ ಗೂಡಿನಲಿ

ಮೆಚ್ಚಿನ ಬೆಚ್ಚಿನ ಗೂಡಿನಲಿ

ರೆಕ್ಕೆಯ ಹೊಚ್ಚಿ ಮರಿಗಳ ಮುಚ್ಚಿ

ಮಲಗಿರೆ ಹಕ್ಕಿ ಪ್ರೀತಿಯಲಿ

ಕರೆದರಂತಲ್ಲೆ ಹೆಸರನ್ನು

----- ಕರೆದವರಾರೇ ನನ್ನನ್ನು?

೧೦.ಬಣ್ಣದ ಬೆಳಗಿನ ಹೂಬಿಸಿಲಿಳಿದಿದೆ.

ಬಣ್ಣದ ಬೆಳಗಿನ ಹೂಬಿಸಿಲಿಳಿದಿದೆ ಹಸಿರಿನ ಬೋಗುಣಿಗೆ

ಕತ್ತಲೆ ಮೆತ್ತಿದ ಕಪ್ಪನ್ನು ತೊಳೆದಿದೆ ಸೃಷ್ಟಿಯ ಸಿರಿಮೊಗಕೆ

ಮರಮರದಿಂದ ಥರಥರ ದನಿಗಳ ಚಿಲಿಪಿಲಿ ಮಣಿಮಾಲೆ

ಹನಿ ಹನಿ ಏರಿ ತೆರೆಸಿದೆ ದಾರಿ ಇಂದ್ರನ ನಂದನಕೆ

ಗಾಳಿಯ ಸರಸಕೆ ಚಿಮ್ಮಿದ ಹೂ ಎಲೆ ಚೆಲ್ಲಿದೆ ದಾರಿಯಲಿ

ಸಾರಣೆ ಕಾರಣೆ ಮಾಡಿದಂತೆ ಮರ ಉದ್ದಕು ಬೀದಿಯಲಿ

ಡೊಂಕು ರಸ್ತೆಗೆ ಸಾಲ್ಮರ ಹಾಸಿದೆ ಚಿಗುರಿನ ರೇಶಿಮೆಯ

ಮರೆತಳೊ ಊರ್ವಶಿ ತಾನೇ ಒಣಗಲು ಹಾಕಿದ ಪತ್ತಲವ !

ಪಗಡೆ ಚೌಕುಗಳ ಗದ್ದೆಯಂಚಿಗೆ ಅಡಕೆ ಈಟಿ ಸಾಲು

ತೂಗುವ ಗಾಳಿಗೆ ಬೀಗುವ ಫಲವತಿ ಬಾಗಿದ ತೆನೆಕಾಳು

ಹತ್ತಿರದಲ್ಲೇ ಸುತ್ತವ ತುಂಗೆ ತುಡಿವಳು ರಾಗಕ್ಕೆ

ವಾಸವದತ್ತೆಯ ಘೋಷವತಿಗೆ ಸಮ ಎನ್ನಲು ನಾದಕ್ಕೆ

ಹಕ್ಕಿಯ ಹಿಂಡು ಹಾಡುತ ಬಂದು ಹಾಲುಪಯಿರ ಕಂಡು

ಬೀಸಿದ ಕವಣಿಯ ಮೋಸದಿ ತಪ್ಪಿಸಿ ಓಡಿತು ತೆನೆಯುಂಡು

ಕವಣಿ ಬೀಸಿದ ಹೈದನ ಮೂತಿಯ ತಿವಿದಳು ಸಂಗಾತಿ

'ಹಕ್ಕಿಯ ಹೊಡೆವುದ ಏನು ಬಲ್ಲೆ ನೀ ಅದಕೂ ಬೇಕು ಛಾತಿ!'

ಏರುವ ಬಿಸಿಲಿಗೆ ಬೆನ್ನಲಿ ಬಗಲಲಿ ಕೆನ್ನೆಯಲ್ಲಿ ಬೆವರು

ಬಾನೊಳು ಜಾರುವ ಬಿಳಿಮುಗಿಲೋಳಿಗೆ ಹೋಲಿಕೆಯೇ ಅರಳು?

ಮಾವಿನ ಅಡಿಯಲಿ ಬಾವಿಯ ಬದಿಯಲಿ ತಂದ ಬುತ್ತಿ ಬಿಚ್ಚಿ

ಹರಟೆ ಕೊಚ್ಚುವುವು ಹೆಣ್ಣು ಗಂಡುಗಳು ಮಾವಿನ ಸವಿ ಹೆಚ್ಚಿ.

೧೧.ಎಲ್ಲಿ ಹೋಗಲೆ.

ಎಲ್ಲಿ ಹೋಗಲೆ ಹೇಗೆ ಕಾಣಲೆ ನನ್ನ ಗಿರಿಧರನ?

ನನ್ನ ಬೀಡಿಗೆ ತಾನೇ ಬಂದು ಕಾದು ನಿಂತವನ

ಹೇಗೆ ಕಾಣದ ಹೋದೆನೇ ಹೇಗೆ ತರಲವನ ?

ಈಗ ದಿನವೂ ದಾರಿಬದಿಗೇ ನಿಂತು ಕಾಯುವೆನೆ

ಮತ್ತೆ ಬಾರನೆ ಸ್ವಾಮಿ ಎಂದು ಹಲುಬಿ ನೋಯುವೆನೆ

ತಾನೆ ಒಪ್ಪಿ ಬಂದ ಗಳಿಗೆ ಹೇಗೆ ತಪ್ಪಿದೆನೇ ?

ಯಾವ ಮಾಯೆಗೆ ಬಿದ್ದು ನಾನು ನಿದ್ದೆ ಹೋದೆನೇ ?

ಬಾರೊ ನನ್ನ ಗಿರಿಧರ ಓ ಬಾರೊ ಇನ್ನೊಮ್ಮೆ

ಬಂದರೀ ಸಲ ಪ್ರೇಮದಲ್ಲಿ ಬಿಗಿವೆ ನಿನ್ನನ್ನೆ.

೧೨.ಕಾಳೂ ಇರಲಿ ಹಾಳೂ ಇರಲಿ.

ಕಾಳೂ ಇರಲಿ ಹಾಳೂ ಇರಲಿ

ತೆನೆಗಳ ಭಾರದಲಿ

ಮಾವಿನ ನೆರೆಗೇ ಬೇವೂ ಇರಲಿ

ತೋರಣ ದಾರದಲಿ

ಆಸೆಯೆ ಚಲನೆಗೆ ನೆಪವಾಗಿ

ಸಿಹಿ ಕಹಿ ಜೂಟಾಟ

ಭಯವೇ ಆಚೆಯ ಗಡಿಯಾಗಿ

ನಿಯಂತ್ರಿಸಿದೆ ಓಟ

ನೋವಿನ ಭಯವೇ ಇರದವರೋ

ಜಿಗಿವರು ಬೇಲಿಗಳ

ಬೇಲಿಯ ಆಚೆಯ ಬಯಲಿನಲಿ

ಇಡುವರು ದಾಳಿಗಳ

ತೆರಳಲಿ ಕ್ಷಣ ದಿನ ಮಾಸಗಳು

ಉರುಳಲಿ ದಾಳಗಳು

ಗರಕ್ಕೆ ಮೂಡುವ ಮೇಳಗಳ

ತಾಳಲಿ ಜೀವಗಳು.

೧೩.ಕರಗುವ ಇರುಳಿನ ಹಣಿಯಲ್ಲಿ.

ಕರಗುವ ಇರುಳಿನ ಹಣೆಯಲ್ಲಿ

ಮೂಡಲ ಗಿರಿಯ ಮಣೆಯಲ್ಲಿ

ಹೊಳೆಯುವ ಮಣ್ಣಿನ ಹಣತೆಯನು

ಹಚ್ಚುವರಾರು ಮರೆಯಲ್ಲಿ ?

ಬೆಟ್ಟವು ಬಾನಿನ ಕಡೆಗೇಕೆ

ತೊರೆಗಳು ತಗ್ಗಿನ ಕಡೆಗೇಕೆ

ನಭದಲಿ ತೇಲುವ ನೀಲಿ ಹಂಡೆಗಳು

ಮಣ್ಣಿಗೆ ಉರುಳುವುದೇತಕ್ಕೆ ?

ಹೂವನು ಚಿಮ್ಮುವ ಮುದವೇನು

ಬಾಡಿಸಿ ಕೊಲ್ಲುವ ಕುದಿ ಏನು ?

ಹಗಲನು ಬಿಚ್ಚಿ ಇರುಳಲಿ ಮುಚ್ಚುವ

ಕಣ್ಣುಮುಚ್ಚಾಲೆ ಕಥೆಯೇನು ?

ಯಾರು,ಏನು, ಯಾತಕ್ಕೆ,

ತಿಳಿಸದ ಮಾಯಾವ್ಯೂಹಕ್ಕೆ

ಎಲ್ಲಿದೆ ಆದಿ ಅಂತ್ಯಗಳು

ಉತ್ತರ ಸಿಗದಾ ಗೂಢಕ್ಕೆ?

೧೪.ಬಾನಿನ ಹಣೆಯಲಿ ಕುಂಕುಮಬಿಂದು.

ಬಾನಿನ ಹಣೆಯಲಿ ಕುಂಕುಮಬಿಂದು

ಚಂದಿರ ಎಂಬಂತೆ

ಕಡಲಿನ ಮೇಲೆ ಹರಡಿದೆ ಗಾನ

ತೆರೆಸಾಲೆನುವಂತೆ

ಕಾಡಿಗೆ ಕಾಡೇ ಹಾಡಲು ಹಿಗ್ಗಿಗೆ

ಹಕ್ಕಿಯ ದನಿಯಾಗಿ

ಕೇಳಿವೆ ಆಲಿಸಿ ಸುತ್ತ ಮರಗಳು

ಕಿವಿಗಳೆ ಎಲೆಯಾಗಿ

ಸ್ವರ್ಗವು ಸುರಿಸಲು ಸಂತಸ ಬಾಷ್ಪದ

ಹನಿಗಳೆ ಮಳೆಯಾಗಿ

ಸ್ಮರಿಸಿದೆ ಈ ನೆಲ ಹಸಿರಿನ ರೂಪದ

ರೋಮಾಂಚನ ತಾಳಿ

ವಿಶ್ವದ ಕ್ರಿಯೆಗಳು ರೂಪಕವಾಗಿವೆ

ಸೃಷ್ಟಿಯ ಕಾವ್ಯದಲಿ

ಕಣ್ಣನು ಉಜ್ಜಿ ನೋಡಲು ಕಾಣುವ

ಕವಿಯೇ ಅದರಲ್ಲಿ.

೧೫.ನನ್ನ ಇನಿಯನ ನೆಲೆಯ ಬಲ್ಲೆಯೇನೆ ?

ನನ್ನ ಇನಿಯನ ನೆಲೆಯ ಬಲ್ಲೆಯೇನೆ ?

ಹೇಗೆ ತಿಳಿಯಲಿ ಅದನು ಹೇಳೇ ನೀನೇ

ಇರುವೆ ಹರಿಯುವ ಸದ್ದು

ಮೊಗ್ಗು ತೆರೆಯುವ ಸದ್ದು

ಮಂಜು ಸುರಿಯುವ ಸದ್ದು ಕೇಳುವವನು,

ನನ್ನ ಮೊರೆಯನ್ನೇಕೆ ಕೇಳನವನು ?

ಗಿರಿಯ ಎತ್ತಲು ಬಲ್ಲ

ಶರಧಿ ಬತ್ತಿಸಬಲ್ಲ

ಗಾಳಿಯುಸಿರನೆ ಕಟ್ಟಿ ನಿಲ್ಲಿಸಬಲ್ಲ

ನನ್ನ ಸೆರೆಯಿಂದೇಕೆ ಬಿಡಿಸಲೊಲ್ಲ ?

ನೀರು ಮುಗಿಲಾದವನು

ಮುಗಿಲು ಮಳೆಯಾದವನು

ಮಳೆ ಬಿದ್ದು ಬೆಳೆ ಎದ್ದು ತೂಗುವವನು,

ನಲ್ಲೆಯಳನಲನ್ನೇಕೆ ಅರಿಯನವನು ?

೧೬.ಕೆಸರಲಿ ಕಾಯುವ ಕಮಲದ ಕೆನ್ನೆಗೆ.

ಕೆಸರಲಿ ಕಾಯುವ ಕಮಲದ ಕೆನ್ನೆಗೆ

ಬಾನಿನ ಹನಿಮುತ್ತು

ಮಿಸುಕಲು ಬಾರದ ಬೆಟ್ಟದ ನೆತ್ತಿಗು

ಹೂಬಿಸಿಲಿನ ಸುತ್ತು

ಬಿರಿಯಲು ಕಾದಿಹ ಮೊಗ್ಗಿನ ಬದಿಗೇ

ದುಂಬಿಯ ದನಿ ಹೊರಳು

ಕಾಯಿಯ ನೆತ್ತಿಯ ತಾಯಿಯ ಹಾಗೆ

ಕಾಯುವ ಎಲೆ ನೆರಳು

ಕಾಡಿನ ಮಡಿಲಲಿ ಸಾವಿರ ಜೀವ

ಎಲ್ಲಕು ಆಹಾರ

ಯಾರೂ ಹಣಿಕದ ಜಾಗದಲಿದ್ದರು

ಅವಕೂ ಸಿಂಗಾರ

ನನಗೂ ನಿನಗೂ ಏನೋ ಗೊತ್ತಿದೆ

ಈ ಸೃಷ್ಟಿಯ ಮರ್ಮ ?

ನೀರಿಗು ಗಾಳಿಗು ಬಾನಿಗು

ಉಸಿರಾಗಿಹ ಧರ್ಮ ?

೧೭.ಕಾಗದದ ದೋಣಿಗಳು.

ಕಾಗದದ ದೋಣಿಗಳು ತೇಲಿದರು ಏನಂತೆ

ಮಿನುಗದೇ ಮರಿ ಬೆಳಕು ಮಡಿಲಿನಲ್ಲಿ ?

ತೆವಳಿದರು ಏನಂತೆ ಕಾಲು ಇಲ್ಲದ ಗಾಳಿ

ಚೆಲ್ಲದೇ ಕಂಪನ್ನು ದಾರಿಯಲ್ಲಿ ?

ನಾರುತಿಹ ಗೊಬ್ಬರವು ಜೀವರಸವಾಗಿ

ಊರದೇ ಪರಿಮಳವ ಮಲ್ಲಿಗೆಯಲಿ ?

ತಿಂದೆಸೆದ ಓಟೆಯೂ ಮರವಾಗಿ ಹರವಾಗಿ

ವರವಾಗದೇ ಹೇಳು ಹಣ್ಣಿನಲ್ಲಿ ?

ಉಪ್ಪಾದರೂ ಕಡಲು ನೀರ ಒಡಲಲ್ಲಿಟ್ಟು

ಸೀನೀರ ಮೋಡಗಳ ತಾರದೇನು ?

ಸಾಗರಕೆ ಬಿದ್ದ ಜಲ ಕೂಡಿಟ್ಟ ಅನ್ನ ಬಲ,

ಕಾಯುವುದು ಸಮಯದಲಿ ಲೋಕವನ್ನು

ಒಂದೊಂದು ವಸ್ತುವಿಗೂ ಒಂದೊಂದು ಮಾಯೆ

ಒಂದೊಂದಕೂ ಸ್ವಂತ ಧಾಟಿ ನಡಿಗೆ

ಹಗುರಾದ ಬಾಳಿಗೂ ಹಿರಿದಾದ ಧ್ಯೇಯವಿದೆ

ನಗೆಗೀಡು ಏನಿಲ್ಲ ಸೃಷ್ಟಿಯೊಳಗೆ.

೧೮.ಎಲ್ಲಿ ಹೋದ ನಲ್ಲ.

ಎಲ್ಲಿ ಹೋದೆ ನಲ್ಲ ? - ಚಿತ್ತವ

ಚೆಲ್ಲಿ ಹೋದನಲ್ಲ

ಮೊಲ್ಲೆ ವನದಲಿ ಮೆಲ್ಲಗೆ ಗಾಳಿ

ಸಿಳ್ಳು ಹಾಕಿತಲ್ಲ !

ಹರಿಯುವ ಹೊಳೆಯಲ್ಲಿ- ಫಕ್ಕನೆ

ಸುಳಿಯು ಮೂಡಿತಲ್ಲೆ

ಜಲ ತುಂಬುವ ಮುಂಚೆ - ಕಟಿಯ

ಕೊಡವೆ ಜಾರಿತಲ್ಲೆ !

ಹಾಗೇ ಇದೆ ಹೊರಗೆ - ಸುತ್ತ

ಹಾಕಿದ ಬಿಗಿ ಬೇಲಿ

ಕಳುವಾದುದು ಹೇಗೆ ಬಾಳೇ

ಗೊನೆಯೆ ಹಿತ್ತಿಲಲ್ಲಿ ?

೧೯.ಎಂಥ ಬೆರಗಿನಾಟ.

ಎಂಥ ಬೆರಗಿನಾಟ

ಬಾಳೆನ್ನುವ ಮಾಟ

ಸವರಿದಷ್ಟೂ ತೀರದಿದೆ

ಬೆಳೆದೇ ಇದೆ ತೋಟ

ಬಂದ ಮೂಲ ತಿಳಿಯದು

ತಲುಪುವಗುರಿ ತೋರದು

ಕತ್ತಲುಗಳ ನಡುವಿನ ಈ

ಬೆಳಕಿನರ್ಥ ಆಗದು

ಮೋಜಿನೊಂದು ಜಾತ್ರೆಯೇ?

ಇರಂತರ ಯಾತ್ರೆಯೇ?

ಬಾಳು ಅನುಭವಕ್ಕೆ ತೆರೆದ

ಹಿರಿ ಅಕ್ಷಯ ಪಾತ್ರೆಯೇ?

೨೦.ನನ್ನ ಮನದಾಳಕ್ಕೆ.

ನನ್ನ ಮನದಾಳಕ್ಕೆ ನೀನು ಇಳಿದುದೆ ಚಂದ

ಸುಳಿದಂತೆ ಮಲೆನಾಡ ಗಾಳಿ ಗಂಧ

ಎಳೆಗರಿಕೆ ಮೇಲೇಳುವಂತೆ ಸುಡುನೆಲದಿಂದ

ಸಂಜೆ ಹಣ್ಣಾದಂತೆ ಬಾನ ತುಂಬ

ನೀ ಸುಳಿದ ಗಳಿಗೆ ಪ್ರೀತಿಯ ಹೊಳೆಗೆ ನೆರೆ ಬಂತು

ಬಣ್ಣ ಬದಲಾಗಿತ್ತು ಪೂರ ಇಳೆಗೆ

ಮಣ್ಣು ಹೊನ್ನಾಗಿತ್ತು ಮೌನ ಹೂ ಬಿಡುತಿತ್ತು

ಕಣ್ಣಾಟವಾಡಿತ್ತು ಚಿಕ್ಕೆ ಜೊತೆಗೆ

ಜೀವ ಎಡ ಜನಿಸಿದ್ದ ಕೋಟಿ ಮಣಿಗಳ ತೊಟ್ಟ

ಸೂತ್ರದಲಿ ಮೂಡಿತ್ತು ದಿವ್ಯಮಾಲೆ

ಕಣ್ಣ ಶಾಪವು ಕಳೆದು ಕಂಗೊಳಿಪ ಶ್ರೀಮೂರ್ತಿ

ತಿಳಿಯಿತೀ ವಿಶ್ವವೇ ನಿನ್ನ ಲೀಲೆ

ಹಾಳೂರಿಗೊಬ್ಬ ಆಳುವ ಒಡೆಯ ಬಂದಂತೆ

ಬೀಳು ಭೂಮಿಯ ಮಳೆಯು ವರಿಸಿದಂತೆ

ಗುಡಿಸಿ ಹಾಕಿದ ಮಾತು ಕವಿತೆಯಲಿ ಹೊಳೆದಂತೆ

ಹನಿಯ ಬದುಕಿಗೆ ಕಡಲ ಹಿರಿಮೆ ತಂದೆ

೨೧.ಕತ್ತಲೆ ಎನ್ನುವುದು ಎಲ್ಲಿ ಇದೆ?

ಕತ್ತಲೆ ಎನ್ನುವುದು ಎಲ್ಲಿ ಇದೆ?

ಇರುವುದೆಲ್ಲ ಬೆಳಕು,

ರಾತ್ರಿಯೆನುವುದೇ ಬರಿಯ ಭ್ರಮೆ

ಅರಿವ ಕವಿದ ಮುಸುಕು.

ಎಂದೂ ಆರದ ಸೂರ್ಯನಿಗೆ

ಇರುಳೆನುವುದೆ ಇಲ್ಲ,

ಊರಿಯೇ ಆಕೃತಿಯಾದವಗೆ

ನೇರಳೆನುವುದೆ ಸಲ್ಲ.

ಸೂರ್ಯನ ಸುತ್ತ ಭ್ರಮಿಸುತ್ತ

ಭೂಮಿಗಾಯ್ತುಇರುಳು,

ಬೆಳಕಿಗೆ ಬೆನ್ನನು ಕೊಟ್ಟಾಗ

ಹುಟ್ಟಿ ಬಂತು ನೆರಳು.

ಭ್ರಮಿಸುವ ವಸ್ತುವಿಗಷ್ಟೆ ಇದೆ

ಕತ್ತಲೆ ರಾತ್ರಿಗಳು,

ಭ್ರಮಿಸದ ಜೀವಕೆ ಎಂದೆಂದೂ

ನಿತ್ಯವಾದ ಹಗಲು....

೨೨.ನೀ ಸಿಗದೆ ನಾನೆಂತು ಅರಿವೆನೇ ನನ್ನ.

ನೀ ಸಿಗದೆ ನಾನೆಂತು ಅರಿವೆನೇ ನನ್ನ

ಸಮೆ ಗೆರೆ ಮಿಂಚದೆ ತಿಳ್ವರೆ ಹೊನ್ನ?

ನೂರಾರು ಕೊಪ್ಪರಿಗೆ ನಿಧಿ ಹುಗಿದು ಗವಿಯು

ಆತ್ಮ ಸೆರೆಯಾಗಿದ್ದು ತಿಳಿಯದಾ ಭವಿಯು

ನಾನೊಂದು ಕಗ್ಗಾಡು ನನ್ನ ನಾ ಅರಿಯೆ

ಬೆಳಕಾಗಿ ಒಳಗಿಳಿದು ದಾರಿಗಳ ತೆರೆಯೆ

ನನ್ನ ಗೂಢಗಳಲ್ಲಿ ಇಳಿಯುವಾ ಹೆಣ್ಣೆ

ಸೋಕಿದಲ್ಲೆಲ್ಲ ರಸ ಮಿಡಿಯುವಂಥ ಹಣ್ಣೆ

ಸಂಗಮಿಸಿ ಎಲ್ಲ ಹೂ ಗಂಥ ಮಕರಂದ

ನಿನ್ನಲ್ಲಿ ಸಿಕ್ಕಿತೇ ನನ್ನಂತರಂಗ

ಅಂತರಂಗ ಸ್ವರವ ಮಿಡಿವ ಶ್ರೀರಾಗ

ಕೋಟಿ ಕನಸಿಗೆ ಬಾಳು ನಿನ್ನಿಂದ ಭೋಗ

ನೀ ತೆರೆವ ಪಾತ್ರದಲಿ ನಾ ನಂಬಿ ಹರಿವೆ

ದಕ್ಕಿತೋ ಗುರಿ ಭಾರಿ ನೆರೆವೆ

೨೩.ಸಂಜೆ ಹಣ್ಣಾಗಿ.

ಸಂಜೆ ಹಣ್ಣಾಗಿ ಬಿಸಿಲು ಹೊನ್ನಾಗಿ

ಕರಿಮುಗಿಲು ತುದಿ ಮಿಂಚಿ ಜರಿಸೀರೆಯಾಗಿ

ನೀಲಿ ನೀರಲಿ ತೇಲಿ ಚಂದ್ರಾಮ ಬಂದ

ಬಸವಳಿದ ಲೋಕಕ್ಕೆ ಹೊಸ ಚೆಲುವ ತಂದ

ಕಣ್ಣುಕುಣಿಸಿದರೊಲ್ಮೆ ಕೆಚ್ಚು ಕೆರಳಿ.

ಹುಟ್ಟಿದಾರಭ್ಯ ಹಿಡಿದೊಂದು ಹೆಗ್ಗುರಿಯ

ಮುಟ್ಟಲದನೆಡೆಬಿಡದೆ ತುಯ್ದ ಜನರು;

ಕ್ರೌರ್ಯಗಳ ಕುದುಗೋಲು ಕೊಚ್ಚುತಿದ್ದರು ಕೊರಳ

ಸತ್ಯಕಲ್ಲದೆ ಬಾಯಿ ಬಿಡದ ಘನರು.

೨೪.ನಾನೆಂಬ ಮಬ್ಬಿಳಿದು.

ನಾನೆಂಬ ಮಬ್ಬಿಳಿದು ನೀ ಹಬ್ಬುತಿರುವಾಗ

ಬಂದ ಗಾಳಿಯಲಿತ್ತು ದಿವ್ಯಗಂಧ

ನಿನ್ನ ಕಣ್ಣಿನ ಮಿಂಚು ನನ್ನ ಒಳಗೂ ಹರಿದು

ಮೂಡಿದರು ಅಲ್ಲಿಯೇ ಸೂರ್ಯಚಂದ್ರ

ಕಾಡಿದರೆ ಏನಂತೆ, ಕೂಡಿದರೆ ಏನಂತೆ

ಹಾಡುಗಳೆ ಪಾಡಳಿದು ಹೋಗಿಲ್ಲವೆ ?

ಒಂದು ಸೇರಿದ್ದೆಲ್ಲ ನಂದೆನುವ ಭ್ರಮೆ ಯಾಕೆ

ಒಂದೊಂದಕೂ ದಾರಿ ಬೇರಲ್ಲವೆ ?

ಮಣ್ಣನ್ನು ಹಿಡಿದೆತ್ತಿ ಮಣ್ಣಿಗೇ ಬಿಡುವಾಗ

ಕಣ್ಣಲ್ಲಿ ನೀರೇಕೆ, ಪ್ರೀತಿ ಮರುಳು

ಪಡೆದ ಗಳಿಗೆಯ ಚೆಲುವು ನಿತ್ಯ ನೆನಪಿಗೆ ವರವು

ವಸ್ತುವನೆ ಬೇಡುವುದು ಏನು ಹುರುಳು ?

ಬೆಟ್ಟ ಕೈಯನು ಸುಟ್ಟ ಕೊರಡೆನಲಿ ವ್ಯಥೆಯಿಲ್ಲ

ಮರ್ತ್ಯಲೋಕದ ಮಿತಿಗೆ ಮಾನ ಬರಲಿ

ಎಲ್ಲಿದ್ದರೂ ಪ್ರೀತಿ, ರೀತಿಗಳ ಋಣ ಸಲಿಸಿ

ಇದ್ದಲ್ಲೆ ಅರಳಿ ಪರಿಮಳ ಬೀರಲಿ.

೨೫.ಶಾಂತಮಧುರ ದನಿಗಳೇ.

ಮನಸಿನಾಳಕಿಳಿದು ನಿಂತ ಶಾಂತ ಮಧುರ ದನಿಗಳೇ

ಕಾಲಜಲದ ತಳಕಿಳಿದೂ ಮಿನುಗುತಿರುವ ಮಣಿಗಳೇ

ಹೇಗೆ ಅಲ್ಲಿಗಿಳಿದಿರಿ

ಯಾಕೆ ಅಲ್ಲಿ ಉಳಿದಿರಿ?

ಎಂದೊ ಮರೆಯಲಾಗದಂತೆ ಹಾಗೆ ಹೇಗೆ ಇರುವಿರಿ?

ಅದುದೆಲ್ಲ ಮುಗಿಯಿತೆಂಬ ಮಾತು ಬರೀ ಸುಳ್ಳು

ಈಗಿರುವುದೆ ನಿಜವೆನ್ನುವ ಮಾತೂ ಸಹ ಜೊಳ್ಳು

ಭಾವವೊಂದೆ ಸತ್ಯ

ಕಾಲ ಬರೀ ಮಿಥ್ಯ

ನಿಜವಾದುದೆ ಎಲ್ಲ ಕಾಲ ಉಳಿಯುವಂಥ ನಿತ್ಯ

ಸ್ನೇಹ ಪ್ರೀತಿ ಇತ್ತ ಜೀವ ಹೇಗೆ ಬದಿಗೆ ಸರಿವುದು ?

ದೇಹ ಮರೆಗೆ ಸರಿದರೂ ನೆನಪು ಹೇಗೆ ಅಳಿವುದು?

ಎದುರಿಗಿರುವ ಏನೇನೋ

ಕಸ ಮನಸಿಗೆ ಬಾರದು

ಆಗಿ ಹೋದ ರಸಗಳಿಗೆಯೆ ಸದಾ ಮನವನಾಳ್ವುದು.

೨೬.ನಿನ್ನ ಚೆಲುವನ್ನೆಲ್ಲ ಹೀಗೆ ಹಂಚುವುದೇನೆ.

ನಿನ್ನ ಚೆಲುವನ್ನೆಲ್ಲ ಹೀಗೆ ಹಂಚುವುದೇನೆ

ಕಂಡವರಿಗೆ ?

ಪಡೆದ ಚೆಲುವಿಗೆ ತಕ್ಕ ಘನತೆ ಉಂಟೇನೆ

ಕೊಂಡವರಿಗೆ ?

ಮಲ್ಲಿಗೆಗೆ ನೀಡಿದೆ ನಿನ್ನ ಉಸಿರಾಟದಾ

ಪರಿಮಳವನು,

ಹೂ ಗುಲಾಬಿಗೆ ಕೊಟ್ಟೆ ನಿನ್ನ ಕೆನ್ನೆಯ ಹೊನ್ನ

ಸಂಜೆಯನ್ನು,

ಪುಟ್ಟ ಕನಕಾಂಬರಿಗೆ ಮೈಯೆಲ್ಲ ಸವರಿದೆ

ತುಟಿಯ ರಂಗು,

ನಿನ್ನ ಸಂಪತ್ತನ್ನು ತೂರುವುದೆ ಹೀಗೆ

ಏನು ದುಂದು ?

ನಿನ್ನೆದೆಯ ಸವಿಜೇನು ತುಂಬಿ ತುಳುಕಿದೆ ಮಾವು-

ಕಿತ್ತಳೆಯಲಿ.

ಥಣ್ಣನೆಯ ರಾತ್ರಿಯಲಿ ನಿನ್ನ ಕಣ್ಣಿನ ಕಾಂತಿ

ಚಿಕ್ಕೆಯಲ್ಲಿ,

ನಿನ್ನ ಹೆರಳಿನ ಕಪ್ಪು ಮಿಂಚುತಿದೆ ಕಾರ್ಮುಗಿಲ

ಮಾಲೆಯಲ್ಲಿ

ನಿನ್ನ ಕಾಣಿಕೆ ಹೊರತು ಏನಿದೆಯೆ ಸಂಪತ್ತು

ಪ್ರಕೃತಿಯಲ್ಲಿ ?

೨೭.ಹಾಡುಗಳ ನಾಡು.

ಹಾಡುಗಳ ನಾಡು

ನಿನ್ನ ಮೈ ಬೀಡು,

ರಾಗಕ್ಕೆ ಎಡೆ ನೀಡಲಿ

ಆ ರಾಗ ನನ್ನದಿರಲಿ.

ಅಂಕೆಗಳು ನೂರು

ಸಿಗಲು ನಿನ್ನೂರು,

ಅದನು ಭಾಗಿಸಿ ಕೂಡಲಿ - ಆ

ಲೆಕ್ಕಿಗನು ನಾನಾಗಲಿ.

ಮುತ್ತುಗಳ ಮೇಳ

ನಿನ್ನೊಲವಿನಾಳ,

ಶೃಂಗಾರಕದು ಒದಗಲಿ - ಆ

ಸಿಂಗರಿಗ ನಾನಾಗಲಿ.

ನಿನ್ನ ಮಲೆನಾಡು

ಗಿರಿ ಕಣೆವೆ ಕಾಡು,

ಅಲೆದಾಟ ನನಗಾಗಲಿ - ಅಲ್ಲಿ

ಏರಿಳಿದು ದಣೆವಾಗಲಿ.