ರಂಗದಿಂದೊಂದಷ್ಟು ದೂರ

ಬಸಳೆ - ನಾನು

ನನ್ನ ಪ್ರೀತಿಯ ಹಿತ್ತಲಲ್ಲಿ

ಅಮ್ಮ ನೆಟ್ಟು ತೊನೆಸಿದ

ಬದನೆಯ ಬಳಿಯೇ

ತಂದು ಸ್ಥಾಪಿಸಿದ್ದೇನೆ

ಬಸಳೆ ಸಾಮ್ರಾಜ್ಯ

ಚಪ್ಪರಿಸಿದ್ದೇನೆ ಬೇಗ ಬೇಗ

ಊರು ಕೊಟ್ಟಿದ್ದೇ ತಡ

ಹಬ್ಬಿದ್ದೇ ಹಬ್ಬಿದ್ದು

ತಲೆ ತಗ್ಗಿಸಿ ಮನತುಂಬಿ

ಚಪ್ಪರ ತಬ್ಬಿದೇ ತಬ್ಬಿದ್ದು

ಬಚ್ಚಲ ತೀರ್ಥವಾದರೂ ಸರಿ

ಅರಿವಿಲ್ಲದೇ ಹೀರಿ

ಹಸುರಾಗಿ ತುಂಬಿ ಕಂಗೋಳಿಸಿದ್ದು

ಕಂಡಷ್ಟೂ ಸುಖ ಪುಳಕ

ಕಡಿಸಿದಷ್ಟೂ ಚಿಗುರು

ಜೀವ ಪುಟಿತ

ಮೊಗ್ಗೆ ಗಿಣ್ಣಿನ ಸಂತೆ

ತಿಂದಷ್ಟೂ ಹಿಂಸೆ ಇತ್ತಷ್ಟೂ

ಚಕ್ರ ಕುಡಿಯೊಡೆತ

ಅಂದುಕೊಳ್ಳುತ್ತೇನೆ

ಸೊಪ್ಪು ಮೆಲುವಾಗ

ದೇಟು ಜಗಿಯುವಾಗ

ನನಗ್ಯಾಕೆ ಇಲ್ಲವೀ

ತೃಪ್ತ ಸುಖಭೋಗ

ಯಥೇಚ್ಚಯೋಗ

ಅನ್ವರ್ಥ

ಗರಿಮುರಿ

ಹಲ್ಲುಗರಿಕೆ

ಚೂಪಾಗಿ

ಸೀರಾಗಿ

ಪುಳಕಿಸಿ ನಿಂತಂತೇ

ನನ್ನ ಭಾವನೆಗಳಿಗೆಲ್ಲ

’ಹಿಟ್’-ಆಗುವ

ಆಕಾರ ತುಂಬುವ ಜಿಜ್ಙಾಸೆ

ವ್ಯರ್ಥ

ಕಂಡ

ಕೆಂಡಸಂಪಿಗೆಗೆಲ್ಲ

ನಿಗಿನಿಗೀ ಮುತ್ತಿಕ್ಕಿ

ತುಟಿಯ ಕುಡಿ ಸುಟ್ಟ

ಕಲ್ಪನೆಗೂ

ಅನುಭವದ ಅರ್ಥ

ಹೀಗೆಷ್ಟೋ

ಮಾತು,ಮನಸಿಗೂ ಮೀರಿ

ಬಾಯಿಂದ

ಫಳ್-ಎಂದು ಜಾರುವ

ಉಸಿರಿಗೆಲ್ಲ

ಜೀವ ಅನ್ವರ್ಥ

ಕನ್ನಡಿ

ನಮ್ಮ ಮನೆಯ ಕನ್ನಡಿ

ಯಲಿ ಮಾತ್ರ ನನಗೆ ನಾ ಚಂದ

ಉಳಿದಲ್ಲಿ ಪ್ರೇತ ನರಪೇತಲ

ಊದಿಕೊಂಡ ಗಲ್ಲ

ಚಿಂತೆ ತುರಿಸುವ ಮೂಗು

ಆಸೆ ಇಂದಿದ ಕಣ್ಣು ತುಟಿ ಕಿವಿ ಥೇಟು ಮಳ್ಳ

ನ ರೂಪ ಇವೆಲ್ಲ

ಅತೀ ಠಾಕು ಠೀಕಾಗಿ ಚದುರಿಕೊಂಡು ಕೂಡ್ರುತ್ತವೆ.

ನಮ್ಮೀ ಕನ್ನಡಿಯಲ್ಲಿ

ನನಗೆ ನನ್ನನ್ನೇ ಮರೆಸುತ್ತವೆ.

ಮೊನ್ನೆ ಕಟ್ಟು ಕಳಚಿತ್ತದರದು

ರಿಪೇರಿಸಿ ತಿರುಗಿ ತಂದಾಗ

ಏನೋ ಬದಲಾವಣೆ ಅಷ್ಟಷ್ಟು ಇಷ್ಟಿಷ್ಟು

ತೂಕ ತಪ್ಪಿದ ಸ್ವಭಾವ

ಇಲ್ಲಾಗದವುಗಳೆಲ್ಲ ಅಲ್ಲಾದಂತೆ

ಕೆಟ್ಟವ ಒಮ್ಮೆಗೇ ಸಾಧುವಾದಂತೆ

ಕೊನೆಗೆ ನಿರಾತಂಕ ನನ್ನ

ಅಕ್ಷರಸ್ಥ ಬದುಕು

ಶಬ್ಧಗಳಲ್ಲಿ ಒಣಗಿದಂತೆ

ಕನ್ನಡಿಯ ಅದ್ಬುತ ಡೊಂಬರಾಟ

ಗೊತ್ತಿದ್ದೂ ನಿಲುಕದ ಮಿಥ್ಯ ಪರಿಪಾಠ

ನನಗೂ ಹೆದರಿಕೆಯಿಲ್ಲ ಸೋಗಿನ ವ್ಯಕ್ತಿತ್ವಕ್ಕೆ

ಒಂದೇ ಕಳವಳವೆಂದರೆ ಆಗಾಗ

ಪ್ರಿನ್ಸಿಪಾಲರು ಮತ್ತು ದೇವಸ್ಥಾನದ ಭಟ್ಟ

ಹೀಗೆ ಇವರೆಲ್ಲ ಒಳಗೆ ಸೇರಿಕೊಂಡು ಗುಂಪಾಗಿ

ನನ್ನನ್ನೇ ಅಳಿಸತೊಡಗುತ್ತಾರೆ

ಆಗ ಆ ನಾನು

ತಡೆಯಲಾರದೆ ಗಬಕ್ಕನೆ ಹೊರಬಂದು

ಈ ನನ್ನನ್ನು ತಬ್ಬಿಕೊಳ್ಳುತ್ತೇನೆ

ತಪ್ಪಾಯಿತು ತಪ್ಪಾಯಿತು ಅನ್ನುತ್ತೇನೆ

ಅತ್ತು ಅತ್ತು ಅಸತ್ಯವಾಗುತ್ತೇನೆ

ಆದರೂ ಈ ಕನ್ನಡಿ ಅಲ್ಲೇ

ಮತ್ತು ನಾನಿಲ್ಲೇ ಇರಬೇಕು ಅದೇ ನನಗೆ ಇಷ್ಟ

ಏಕೆಂದರೆ ಅದರ ಕಣ್ಣು ತಪ್ಪಿಸಿಕೊಂಡು

ನಾನು ಬದುಕುವುದು

ತುಂಬಾ ತುಂಬಾ ಕಷ್ಟ.

ಸಾವು

ಕ್ಲಾಸಿನಲ್ಲಿ ಒತ್ತಾಗು ಕೂತಿದ್ದ

ವಿದ್ಯಾರ್ಥಿಗಳೆಲ್ಲರೂ ಒಬ್ಬೊಬ್ಬರಾಗಿ

ಯಾರೋ ಕರೆದಂತೆ

ಪಾಠದ ಮಧ್ಯಕ್ಕೇ

ಸಟ್ಟನೆ ಎದ್ದು ಹೊರಗೆ

ನಡೆದುಬಿಡುತ್ತಾರೆ.