ಸುಬ್ಬಾಭಟ್ಟರ ಮಗಳೇ.

೧.ಸಹನೆ.

ಬಾಳ ದಾರಿ ಸಹನೆಯಲ್ಲಿ ನಾನು ಕಂಡೆನು

ದುಃಖಿಯು ಒಬ್ಬಂಟಿಯೆಂದು ಅರಿತುಕೊಂಡೆನು

ದುಖಿಃದ ಹೊರೆ ಅಳುವಿನಿಂದ ನೀಗಬಲ್ಲದೆ?

ನಗುತ ನಗುತ ದುಃಖವನ್ನು ನುಂಗುಕೊಂಡೆನು

ಮನದ ಚಿಪ್ಪಿನಲ್ಲಿ ದುಃಖ ಅದುಮಿ ಅಡಗಿಸಿ

ಮುತ್ತಿನಂಥ ಕವಿತೆಗಳನು ಪಡೆದುಕೊಂಡೆನು

ಯಾರೋ ಏಕೆ ನನ್ನ ದುಃಖ ಹಂಚಿಕೊಳ್ಳಲು?

ಹಾಡಿನಲ್ಲಿ ನನಗೆ ನಾನೇ ತೋಡಿಕೊಂಡೆನು.

೨.ಮರವಾಗು.

ಮರವಗೆಲೆ, ಓ ಜೀವವೇ, ಮರವಾಗು

ಹಲ ಬಗೆಯಲಿ ಈ ಲೋಕಕೆ ನೆರವಾಗು

ಅಲೆದಾಡುವ ಜೀವಕ್ಕೆಲ್ಲಿ ಯಾವ ನೆಲೆ?

ನೆಲದಾಳಕೆ ಬೇರನೂರಿ ಸ್ಥಿರವಾಗು

ಭೂಸಾರವ ನೀ ಹೀರಿ ತೊಡು ಹಸಿರನ್ನು

ಪರಿಸರಕೆ ನೀಡು ನಿರ್ಮಲ ಉಸಿರನ್ನು

ರೆಂಬೆಯಲ್ಲೂ ತುಂಬಲಿ ಹೂ ಹಣ್ಣು

ತಂಪು ನೆರಳ ಕೊಡುವ ಚಪ್ಪರವಾಗು

ಹಲವು ಜೀವಗಳಿಗೆ ಆಗು ನೀನು ನೆಲೆ

ಕಾರ್ಮುಗಿಲನು ಇಳೆಗೆ ಸೆಳೆದು ಸುರಿದು ಮಳೆ

ಪ್ರತಿ ಚೈತ್ರ ನಿನಗೆ ತರಲಿ ಹೊಸ ಜೀವಕಳೆ

ಹಡೆದ ನೆಲತಾಯಿಗೆ ನೀ ವರವಾಗು.

೩.ನಲ್ಲೆ, ನಿನ್ನ ಮರೆಯಲು.

ನಲ್ಲೆ, ನಿನ್ನ ಮರೆಯಲು ಏನೆಲ್ಲ ಮಾಡಿದೆ

ಆದರೆ ಎಲ್ಲೆಲ್ಲೂ ನಿನ್ನ ನೆನಪೇ ಕಾಡಿದೆ

ಅರಳಿ ನಿಂತ ಮಲ್ಲಿಗೆಯಲಿ ನಿನ್ನದೆ ನಗೆ

ಹೂವಿನ ಮಕರಂದ ನಿನ್ನ ತುಟಿಯದೇ ಬಗೆ

ಸುಳಿದು ಬಂದ ಗಾಳಿಯಲ್ಲಿ ನಿನ್ನ ಪರಿಮಳ

ಮಾಮರದಲಿ ನಿನ್ನದೇ ಗಾನ ಮಂಜುಳ

ಮರಗಳು ಮೈತುಂಬ ನಮ್ಮ ಹೆಸರು ತೊಟ್ಟಿವೆ

ಪೊದೆಪೊದೆಗಳ ಮರೆಗಳಲ್ಲೂ ನಮ್ಮ ಗುಟ್ಟಿವೆ

ಬಳ್ಳಿ ಬಳ್ಳಿ ಗೆಳತಿ ಎಲ್ಲಿ ಎಂದು ಕೇಲಿವೆ

ದುಃಖದ ಮಡು ಮಾತಿಲ್ಲದೆ ಮೌನ ತಾಳೀದೆ.

೪.ಮರು ವಸಂತ.

ಬಂದಂತೆ ಮರು ವಸಂತ

ನೀ ಬಂದೆ ಬಾಳಿಗೆ

ಅನುರಾಗ, ಆಮೋದ

ಎದೆಯಲ್ಲಿ ತುಂಬಿದೆ

ಕೈ ಸೋಕಿ, ನಿನ್ನ ಬಿಸಿ ತಾಕಿ,

ಚಿಮ್ಮಿದೆ ಹೊಸ ಚಿಗುರು;

ನಗೆಯಂತೆ, ನಿನ್ನ ಬಗೆಯಂತೆ

ಅರಳಿದೆ ಹೂವುಗಳು;

ನಿನ್ನ ಪ್ರೀತಿಯ ಪ್ರಖರತೆಗೆ

ಮಾಗಿಯ ಮಂಜು ತೆರೆ

ಕರಗಿ, ಸೊರಗಿ, ಮರೆಯಾಗಲು

ಜಗವೇ ಝಗಝಗಿಸಿದೆ.

ಕಂದಿದ್ದ ಕಣ್ಣಿಗೆ ಹೊಸ ಹೊಳಪು

ನೀ ತಂದೆ ಹೊಸ ನೋಟವ,

ಎಂದೆಂದೂ ಜೋಡಿ ನಾನೆಂದು

ನೀಡಿದೆ ಒಡನಾಟವ;

ನಿನ್ನ ಒಲವೆಂಬ ಸಂಜೀವಿನಿ

ಹೊಸ ಶಕ್ತಿ ತೋಳಿಗೆ,

ಧೃತಿಯ ತಂದಿಹುದು ಹೆಜ್ಜೆಗೆ,

ಭರವಸೆಯ ಬದುಕಿಗೆ.

೫.ನಗರ ವಿಹಾರ.

ಬಾರೇ ರಾಜಕುಮಾರಿ

ನಾವು ಹೋಗೋಣ ಜಂಬೂಸವಾರಿ

ಹೋಗೋಣ ಜಂಬೂಸವಾರಿ

ನಮ್ಮ ಹಳೆಯ ಸ್ಕೂಟರನ್ನೇರಿ

ಬಾರೋ ರಾಜಕೂಮಾರ

ನಿನ್ನ ಹಣದ ಥೈಲಿಯನು ತಾರ

ಹಣದ ಥೈಲಿಯನು ತಾರ

ಕೊಂಡು ತರೋಣ ಇಡೀ ಬಜಾರ

ಬಸ್ಸು ಕಾರುಗಳ ಧೂಪ

ಆಟೋಗಳ ಆಟಾಟೋಪ

ಎಲ್ಲೆಡೆ ಹಾರನ್ ಅಬ್ಬರ

ಸ್ವಾಗತಿಸುವೆ ನಮ್ಮಿಬ್ಬರ

ಕೊಳ್ಳೋಣವೆ ಹಸಿರು ಬಟಾಣೆ ?

ದುಬಾರಿಯಲ್ಲವೆ, ರಾಣಿ ?

ಒಗ್ಗರಣೆಗೂ ತುಪ್ಪವಿಲ್ಲ

ಪಾಮಾಯಿಯಲ್ ಇದೆಯಲ್ಲ

ಸೇಬು ನನಗೆ ಬಲು ಇಷ್ಟ

ಅದು ಬರೀ ಸಕ್ಕರೆ ಪಿಷ್ಟ

ಆಹಾ, ಸೀಡಲೆಸ್ ದ್ರಾಕ್ಷಿ!

ಹುಳಿ ಗೊಜ್ಜು ಕಣೆ, ನಳಿನಾಕ್ಷಿ

ಕೊಳ್ಳಲೆ ರೇಷಿಮೆ ಸೀರೆ?

ತಕ್ಕೊಳ್ಳಲೆ ಚಿನ್ನದ ಒಡವೆ?

ರೇಷಿಮೆ ನನಗೆ ಅಲರ್ಜಿ

ನಮಗೇಕೆ ಚಿನ್ನದ ಮರ್ಜಿ?

ಬೇಡವೆ ಬಣ್ಣದ ಟೀವಿ?

ಅದು ಮೂರ್ಖರ ಪೆಟ್ಟಿಗೆ, ದೇವಿ,

ಹೋಗಲಿ ನೋಡೋಣ ಸಿನಿಮ!

ಕ್ಯೂ ನಿಲ್ಲುವುದೆಲ್ಲಿಯ ಕರ್ಮ

ಎಂದು ಕಟ್ಟೋದು ಬಂಗಲೆ?

ಲಾಟರಿ ಹೊಡೆಯಲಿ ಕೂಡಲೆ

ಎಂದು ಹಾರೋದು ಪ್ಲೇನ್ ನಲ್ಲಿ?

ತಪ್ಪಲಿ ಹೈಜಾಕ್ ಹಾವಳಿ

ಏನದು ಗುಂಡಿನ ಸದ್ದು?

ಯಾರು ಹಾಗೆ ಚೀರಿದ್ದು?

ಎಲ್ಲೊ ಗಲಭೆ ಸ್ಟ್ರೈಕು!

ಬೇಗ ಇಲ್ಲಿಂದ ಪಾರಾಗಬೇಕು

ಸಾದಾ ದೋಸೆಯ ತಿಂದು

ಬೈಟೂ ಕಾಫಿಯ ಕುಡಿದು

ಮುಗಿಯಿತು ಜಂಬೂಸವಾರಿ

ಇನ್ನು ಬಾಡಿಗೆ ಮನೆ ಕಡೆ ದರಿ

ಬಾರೋ ರಾಜಕುಮಾರ

ಅಹ, ಬಾರೋ ನನ್ನ ಕುಬೇರ

ಬಾರೇ ರಾಜಕುಮಾರಿ

ಐ ಆಮ್ ರೀಯಲಿ ವೆರಿ ವೆರಿ ಸಾರಿ!

೬.ಈ ಕಂಗಳು.

ಈ ಕಂಗಳೇನೋ ನನ್ನವು

ನೋಟ ನಿನ್ನದು

ಈ ನೆಲವ ಹಸಿರು ಹೊಲವ ಗೈದ

ಮಾಟ ನಿನ್ನದು

ನಿನ್ನ ಕನಸುಗಣ್ಣಿನಲ್ಲಿ

ನನ್ನ ಕನಸಿದೆ

ನನ್ನ ಮನದ ದೇಗುಲದಲಿ

ನಿನ್ನ ಮನಸಿದೆ

ನನ್ನ ಹೆಜ್ಜೆ, ನಿನ್ನ ಹಾದಿ

ಪ್ರೇಮದೂರಿಗೆ

ನಿಂತ ಕಡೆಯೆ ನಮ್ಮ ತಾಣ

ಗಗನ ಸೂರಿಗೆ

ಎಲ್ಲ ಬಂಧ ಬಿಡಿಸಿ, ನೀನು

ನನ್ನ ಬಂಧಿಸಿದೆ

ಈಗ ನನಗಿದೊಂದೇ ಸಾಕು

ನಿನ್ನ ಪ್ರೇಮಸುಧೆ..

೭.ಬಾ, ಮಳೆಯೇ ಬಾ.

ಬಾ, ಮಳೆಯೇ ಬಾ, ಅಷ್ಟು ಬಿರುಸಾಗಿ ಬಾರದಿರು

ನಲ್ಲೆ ಬರಲಾಗದಂತೆ

ಅವಳಿಲ್ಲಿ ಬಂದೊಡನೆ ಬಿಡದೆ ಬಿರುಸಾಗಿ ಸುರಿ

ಹಿಂತಿರುಗಿ ಹೋಗದಂತೆ

ನಲ್ಲೆ, ಹಿಂತಿರುಗಿ ಹೋಗ ದಂತೆ

ಓಡು, ಕಾಲವೇ,ಓಡು, ಬೇಗ ಕವಿಯಲಿ ಇರುಳು

ಕಾದಿಹಳು ಅಭಿಸಾರಿಕೆ

ಅವಳಿಲ್ಲಿ ಬಂದೊಡನೆ ನಿಲ್ಲು, ಕಾಲವೇ ನಿಲ್ಲು

ತೆಕ್ಕೆ ಸಡಿಲಾಗದಂತೆ

ನಮ್ಮ ತೆಕ್ಕೆ ಸಡಿಲಾಗದಂತೆ

ಬೀಸು, ಗಾಳಿಯೇ, ಬೀಸು, ನನ್ನದೆಯ ಆಸೆಗಳ

ನಲ್ಲೆ ಹೃದಯಕೆ ತಲುಪಿಸು

ಹಾಸು, ಹೂಗಳ ಹಾಸು, ಸಖಿ ಬರುವ ದಾರಿಯಲಿ

ಕಲ್ಲುಗಳ ತಾಗದಂತೆ

ಪಾದ ಕಲ್ಲುಗಳ ತಾಗದಂತೆ

ಬೀರು, ದೀಪವೇ, ಬೀರು, ನಿನ್ನ ಹೊಂಬಳಕಲ್ಲಿ

ನೋಡುವೆನು ನಲ್ಲೆ ರೂಪ

ಆರು, ಬೇಗನೆ ಆರು, ಶೃಂಗಾರ ಶಯ್ಯೆಯಲಿ

ನಾಚಿ ನೀರಾಗದಂತೆ

ನಲ್ಲೆ ನಾಚಿ ನೀರಾಗದಂತೆ

ಹೋಗು, ನಿದ್ದೆಯೇ, ಹೋಗು, ನಿನಗಿಲ್ಲಿ ಎಡೆಯಿಲ್ಲಿ

ಪ್ರೇಮಿಗಳ ಸೀಮೆಯಲ್ಲಿ;

ನಾವೀಗ ಅನಿಮಿಷರು, ನಮ್ಮ ಈ ಮಿಲನ

ಗಂಧರ್ವ ವೈಭೋಗದಂತೆ

ಮಿಲನ, ಗಂಧರ್ವ ವೈಭೋಗದಂತೆ.

೮.ಒಡೆಯದ ಒಡಪೇ.

ಒಡೆಯದ ಒಡಪೇ, ಒಲವಿನ ಮುಡಿಪೇ

ಸನಿಹಕೆ ಸೆಳೆದವಳೇ

ಕಾಡುವ ಕನಸೇ, ಕನ್ನಡಿ ತಿನಿಸೇ

ದೂರವೇ ಉಳಿದವಳೇ

ಬಾರೇ ಬಾ ಬಳಿಗೆ

ಇಂದೇ ಈ ಗಳಿಗೆ

ಮಾಯಾಜಿಂಕೆಯ ನಡೆಯವಳೇ

ಬೆಡಗಿನ ನಿಗೂಢ ನುಡಿಯವಳೇ

ನೋಟದ ತುಂಬ ನಿನ್ನದೇ ಬಿಂಬ

ನನ್ನೀ ಕಂಗಳಗೆ

ಕಿನ್ನರ ಲೋಕದ ಕನ್ನಿಕೆಯೇ

ನಿಜವನು ಮರೆಸುವ ಜವನಿಕೆಯೇ

ಕವಿದರೂ ಇರುಳ, ನೀ ಬಳಿ ಇರಲು

ಉಜ್ವಲ ದೀವಳಿಗೆ

ಕಲ್ಪಯಲ್ಲೇ ಎಷ್ಟು ದಿನ

ಕಾಡುವೆ ಹೀಗೆ ಪ್ರ್‍ಇಯಕರನ?

ಬಾ ಕನಿಕರಿಸಿ, ನನ್ನನು ವರಿಸಿ

ಬಾಳಿನ ಪಾತಳಿಗೆ.

೯.ಫೋಟೋಗ್ರಾಫರ್.

ಮದುವೆ ಫೋಟೋ ತೆಗೆಯಲು ಹೋಗುತ್ತೇನೆ

ದುಡ್ಡಿಗಾಗಿ,ಖುಷಿಗಾಗಿ;

ಸೀರೆ ಸರಭರ; ಡೋಲು ಢಮಢಮ;

ತಿಂಡಿ ಕಾಫಿ ಸರಬರಾಯಿ.

ನನ್ನನ್ನು ತಿಂಡಿಕಾಫಿಗೆ

ಯಾರೂ ಕರೆಯುವುದಿಲ್ಲ.

ಒಂದು ಮೂಲೆಯ ಖಾಲಿಕುರ್ಚಿಯಲ್ಲಿ ಕೂಡುತ್ತೇನೆ

ನೋಡುತ್ತಾ:

ಬಾಗುಮುದುಕರ ಒಣಹರಟೆ;

ಮೊಲೆತ ಯುವತಿಯರ ಚಿಲಿಪಿಲಿ ಧಿಮಾಕು;

ಗಂಡಸರ ಆತಂಕ.

ಕಾಶೀಯಾತ್ರೆ, ಜೀರಿಗೆ ಬೆಲ್ಲ, ಧಾರೆ, ಮಾಂಗಲ್ಯಧಾರಣೆ,ಇತ್ಯಾದಿ

ಮುಗಿಯುವ ಹೊತ್ತಿಗೆ

ಹಲವು ಲಲನಾಮಣಿಯರ ವದನಾರವಿಂದಗಳು,

ನೋಟ, ನಗೆ, ನಾಟಕಗಳು,

ನಾಮಧೇಯಗಳು,

ಪರವಿತವಾಗುತ್ತವೆ.

ನನ್ನ ಸೈಡ್ ವಿಸ್ಕರ್ಸ್, ಗಾಗಲ್ಸ್, ರೇಷ್ಮೆ ಜುಬ್ಬ,

ಬಿಗಿ ಪ್ಯಾಂಟ್ಸ್, ಮೊನಚು ಶೂಸ್,

ಟೋನಿ ಕರ್ಟಿಸ್ ನಗೆ

ಹಲವು ತರುಣಿಯರ ಕುತೂಹಲ, ಮೆಚ್ಚಿಗೆಗೆ,

ತರುಣರ ಗುಮಾನಿ ಉರಿಗೆ

ಗುರುಯಾಗುತ್ತವೆ.

ತಲೆಯೆತ್ತಿದರೆ,

ಮಹಡಿಕಟ್ಟೆಗೆ ಬಿನ್ನೊರಗಿ,

ಮೈಮರೆತು,

ಕಾಲೆತ್ತಿದ ಯುವತಿಯ ಬೆತ್ತಲೆ

ಬಿಳಿ ಮೀನಖಂಡದವರೆಗೆ

ಏರಿ,

ಎಲ್ಲೋ ಝಲ್ಲೆನಿಸಿ

ನಿಲ್ಲುತ್ತದೆ

ನನ್ನ ಕ್ಯಾಮರಾಕಣ್ಣು.

ಊಟಕ್ಕೆ ಕರೆದಾಗ ಸಭ್ಯತೆಗೆ

ಒಲ್ಲೆನೆನ್ನುತ್ತೇನೆ.

ಸಂಜೆ,

ಆರತಕ್ಷತೆ ದೊಂಬಿಯಲ್ಲಿ,

ಗಾನಕೂಟದ ಕೋಲಾಹಲದಲ್ಲಿ,

ಸುತ್ತ ನೆರೆಯುತ್ತಾರೆ,

ಲಲ್ಲೆಗೆರೆಯುತ್ತಾರೆ,

ಬಯಕೆ ಉರಿಯುತ್ತಾರೆ,

ಬೆಡಗು ಮೆರೆಯುತ್ತಾರೆ,

ಪರಿಚಯದ ಸಿಹಿ ನಕ್ಕು,

ಕುಡಿನೋಟದ ಹುಡಿ ಹಾರಿಸಿ,

ಜೀವನ ಸಾರ್ಥಕವೆನಿಸುತ್ತಾರೆ

ರೂಪಸಿ ರಜಸ್ವಲೆಯರು.

ಅವರ ಅಂಚುಅಂಚಿಗೂ

ಮಿಂಚು ಹಾರಿಸಿ,

ಅವರ ರೂಪ ಹೀರುತ್ತೇನೆ

ಕ್ಯಾಮರಾದೊಳಕ್ಕೆ.

ರಾತ್ರಿ, ನಿದ್ರೆಗೆ ಮುಂಚೆ,

ಅವರೆಲ್ಲರ ಚಹರೆಗಳನ್ನೂ,

ಒಂದೊಂದಾಗಿ ಮೆಲುಕಾಡಿಸಿ,

ರಾಧಾ... ಪದ್ಮಾ... ಪಂಕಜಾ... ಮಾಲಾ... ವಿಶಾಲಾ... ಸುನೀತಾ...

ಕನಸ ಕರೆಯುತ್ತೇನೆ;

ವ್ಯರ್ಥ ! ವ್ಯರ್ಥ !

ಕೊನೆಗೆ,

ಮಾರನೆ ಸಂಜೆ,

ಅವರವರ ಫೋಟೋಗಳನ್ನು ಅವರವರಿಗೆ

ಒಪ್ಪಿಸಿ,

ಮೆಚ್ಚಿಗೆಯ ಕಣ್ಣಾಡಿ ಪರಸ್ಪರ,

ಬಿಕ್ಕಿ, ನಕ್ಕು,

ಅವರವರ ಊರುಗಳಿಗೆ ಅವರೆಲ್ಲಾ ಹೊರಟು

ಬಿಟ್ಟಮೇಲೆ,

ನನ್ನ ಬಳಿ ಉಳಿಯುವುದು

ಅದರೆಲ್ಲರ ಮಾಸುವ ನೆನಪು

ನೆಗೆಟಿವ್ ಗಳು

ಮಾತ್ರ.

೧೦.ನೀನಿರಲು.

ಕಣ್ಣಿಗೆಲ್ಲವೂ ಅಂದ

ಮನಸಿಗೆಲ್ಲ ಆನಂದ

ನೀ ಬರಲು, ನನ್ನ ಜೊತೆಗಿರಲು

ಬೆಸರದ ಹೆಸರಿಲ್ಲ

ಖಿನ್ನತೆಯ ನಿಟ್ಟುಸಿರಿಲ್ಲ

ನೀ ಬರಲು, ನನ್ನ ಜೊತೆಗಿರಲು

ಇಡೀ ಪರಿಸರಕೆ ಏನೋ ಸಡಗರ ಲಾವಣ್ಯ

ಬೇಲಿ ಹೂವಿಗು ಸುಗಂಧ

ಗಿಡ ಮರ ಬಳ್ಳಿಗು ಹೊದರಿಗು ಹುಲ್ಲಿಗು ಉಲ್ಲಾಸ

ಬಂಡೆಗಲ್ಲಿಗೂ ಸ್ಪಂದ

ನೀ ಬರಲು, ನನ್ನ ಜೊತೆಗಿರಲು

ಕುಣಿದಿವೆ ಅಲೆ ಅಲೆ, ನುಡಿಸಿದೆ ಮದ್ದಲೆ ಜಲಪಾತ

ತಿಲ್ಲಾನ ಹಕ್ಕಿಗಳಿಂದ

ಚಿಮ್ಮಿದೆ ಚಿಲುಮೆ, ಹೊಮ್ಮಿದೆ ಒಲುಮೆಯ ಜೀವನದಿ

ಬಂಧುರ ಜಗದ ಸಂಬಂಧ

ನೀ ಬರಲು, ನನ್ನ ಜೊತೆಗಿರಲು.

೧೧.ನನ್ನವಳು.

ನಾನಿಂದು ಕಂಡೆ ಆ ಹೆಣ್ಣನು

ನಾ ಕಂಡುಕೊಂಡೆ ನನ್ನವಳನು

ಆ ಬೊಗಸೆ ಕಣ್ಣುಗಳನ್ನು ಏನೆನ್ನಲಿ ?

ಜೋಡಿ ನಂದಾದೀಪ ದೇಗುಲದಲಿ

ಹಣೆಯಲ್ಲಿ ಕುಂಕುಮಬೊಟ್ಟು ಉದಯರವಿಯು

ಮೂಗಲ್ಲಿ ಮುತ್ತಿನ ನತ್ತು ಚಂದ್ರಾಮನು

ನಕ್ಕಾಗ ಕೆನ್ನೆಗಳಲ್ಲಿ ಎಂಥಾ ಗುಳಿ !

ಚುಂಬನದ ಆಸೆಗೆ ಸೆಳೆವ ಸುಂದರ ಸುಳಿ

ಅವಳ ದನಿಯೋ ಮಂಜುಳ ರಾಗಮಾಲಿಕೆ

ಅಂಗಾಂಗದ ಬಣ್ಣನೆಯೇಕೆ ? ಶಿಲಾಬಾಲಿಕೆ

ಅವಳ ಹೃದಯ ವಿಶಾಲ ಕಡಲಿನ ಹಾಗೆ

ಅದರಲ್ಲಿ ಮುಳುಗಿದೆ ನಾನು ನಿಧಿ ಶೋಧಕೆ

ಹವಳವೆ? ಮುತ್ತೆ? ಅಲ್ಲಿ, ತಳದಲೇನಿದೆ ?

ಅಲ್ಲುಂಟು ಭಾಗ್ಯಶಾಲಿಗೆ ಪ್ರೀತಿಯ ಸುಧೆ.

೧೨.ಆಟ.

ಬಣ್ಣಿಸಲೇ, ಹೆಣ್ಣೇ ?

ಏನು ಬಣ್ಣಿಸಲೇ, ಹೆಣ್ಣೇ,

ನಿನ್ನ ಮಹಿಮೆಯನು ?

ಏನೆಂದು ಬಣ್ಣೆಸಲಿ ?

ಗೋಲು ಹೊಡೆದಂತೆ ಮರಡೋನ

ತಪ್ಪಿಸಿ ಎಲ್ಲರನು

ಮಿಂಚು ನೋಟದಲ್ಲೆ

ನನ್ನೆದೆಯ ಹೊಕ್ಕೆಯಲ್ಲೆ!

ಕಪಿಲನ ಸಿಕ್ಸರಿನಂತೆ

ನಮ್ಮ ಪ್ರೇಮ ಕೂಡ

ದಾಟಿ ಹಾರಿತಲ್ಲೆ

ಈ ಜಗದ ಎಲ್ಲ ಎಲ್ಲೆ!

ಸೋತಳು ನಿನಗೆ ಪಿ.ಟಿ.ಉಷಾ

ಅಡೆ ತಡೆಗಳ ದಾಟಿ

ಓಡವ ವೇಗದಲಿ

ನನ್ನ ಕೂಡುವ ತವಕದಲಿ!

ಮೀರಿದೆ ನಾನು ಗವಾಸ್ಕರನ

ನೂರುಗಳ ದಾಖಲೆ

ನಿನಗಿತ್ತ ಮುತ್ತಿನಲ್ಲಿ

ಪಡೆದ ಸಿರಿ ಸಂಪತ್ತಿನಲಿ

ಎಲ್ಲ ಆಟಗಳೂ ತೀರಿದವು

ಈಗ ಕಣ್ಣಾಮುಚ್ಚಾಲೆ

ಎಲ್ಲಡಗಿದೆ, ನಲ್ಲೆ ?

ಇನ್ಯಾರ ತೆಕ್ಕೆಯಲ್ಲೆ ?

ಉಳಿಸಿ ಹೋದೆಯಾ ನನಗೆ

ಮುಗಿಯದ ಹುಡುಕಾಟ!

ಒಲವೇ, ನೀನೆಲ್ಲಿ ?

ಇನ್ಯಾರ ಹೆಣ್ಣಿನಲ್ಲಿ?

೧೩.ಹದಿಹರೆಯದ ಹಾಡು.

ಈ ಬೀದಿಯಲ್ಲಿ ನಾ ಓಡಾಡಿದ್ದೆ

ಬೇಕಾದಷ್ಟು ಸಲ

ಈ ನಗರದ ಎಲ್ಲಾ ಬೀದಿಗಳಂತೆ

ಧೂಳು, ಹೊಗೆ, ಗದ್ದಲ

ನಲ್ಲೆ, ನಿನ್ನ ಮನೆ

ಇಲ್ಲೇ ಇರುವುದು ತಿಳಿದೊಡನೆ

ಎಂಥಾ ಚೆಲುವು ಬಂತು ಬೀದಿಗೆ!

ಎಂಥಾ ಪರಿಮಳ!

ಧೂಳು ಈಗ ಧೂಳಲ್ಲ, ನನಗದೇ

ಪುಷ್ಪ ಪರಾಗ ರೇಣು

ಕಿವಿ ಗಡಚಿಕ್ಕುವ ಹಾರನ್ನುಗಳೇ

ಈಗ ಇಂಪಾದ ವೇಣು

ಬಸ್ಸು ಲಾರಿಯ ಹೊಗೆ

ಆಗರು ಧೂಪ ನನಗೆ

ನೀನಿರುವೆಡೆಯೇ ನನಗೆ ನಂದನ

ನೀನೇ ಕಾಮಧೇನು

ನೀನ್ನ ಮನೆಯೆ ದೇವಾಲಯ, ದೇವಿ

ನಾನು ನಿನ್ನ ಭಕ್ತ

ಯಾರೇ ನಕ್ಕರೂ ಕೇರು ಮಾಡದೆ

ನಿಂತಿರುವೆನು ಅನುರಕ್ತ

ನಿನ್ನ ಮನೆಯ ಮುಂದೆ

ನೆಟ್ಟ ಗರುಡಗಂಬದಂತೆ

ನಲ್ಲೆ, ನಿನ್ನ ದರ್ಶನಕ್ಕಾಗಿ

ನಾ ಹಂಬಲಿಸುತ್ತ

ಕರುಣಿಸಿ ನಿನ್ನ ಭಕ್ತನ ಮೇಲೆ

ಬಾರೇ ನೀ ಹೊರಗೆ

ಕಿಟಕಿಯನ್ನು ತೆರೆದಾದರೂ ಒಮ್ಮೆ

ನೋಡೇ ಈ ಕಡೆಗೆ

ಪ್ರೀತಿಯ ಒಂದು ನಗೆ

ಸಿಕ್ಕರೆ,ಅದೇ ಸಾಕು ನನಗೆ

ಬದುಕಿ ಉಳಿಯುವೆನು ಭರವಸೆಯಲ್ಲಿ

ನಾನು ನಾಳೆವರೆಗೆ.

೧೪.ಕ್ಯಾಬರೆ.

ಜಾಲಿಬಾರಿನಲ್ಲಿ ಕೂತು ಪೋಲಿ ಗೆಳೆಯರು

ಗೋಪಿಯನ್ನು ಪಾಪ ಗೇಲಿ ಮಾಡುತಿದ್ದರು

'ಗುಂಡು ಹಾಕೊ ಗೋಪಿ'

'ನಂಗ್ ಸಾಕಪ್ಪ ಕಾಫಿ'

'ಚಿಕ್ಕನ್ ಬಿರಿಯಾನೀ'

'ಏಕ್ ಲೋಟ ಥಂಡಾ ಪಾನಿ'

ಜಾಸ್ ಗಾನದ ಹೊಳೆಗೆ ತೇಲಿ ಬಂದಳು ಕ್ಯಾಬರಿ

ಬಾಂಗೋತಾನದ ಅಲೆಗೆ ತೂಗಿ ಅರೆ ದಿಗಂಬರಿ

ಗಾಂಡಲೀನಳು

ಮಧುಭಾಂಡದಂಥವಳು

ಬಿಟ್ಟ ಕಣ್ಣು ಬಾಯಿ ಗೋಪಿ ಗುಮ್ಮಾದನು

ಅವಳು ಜಗಿಯುತ್ತಿದ್ದ ಚ್ಯೂಯಿಂಗ್ ಗಮ್ಮಾದನು

ಗುಂಡು ಗುಂಡು ಗಾಂಡಲೀನ ಕ್ಯಾಬರಿಸುತ್ತಾ

ತನ್ನ ಅಂಗೋಪಾಂಗಗಳ ತಾನೇ ನೇವರಿಸುತ್ತಾ

ನಿಧ- ನಿಧಾನವಾಗಿ

ವಿಧ- ವಿಧಾನವಾಗಿ

ಬತ್ತಲಾಗುತ್ತಿರಲು ಗೋಪಿ ಕಲ್ಲಾದನು

ರಂಭೆಯನ್ನು ಕಂಡ ಋಷಿಯ ಸ್ವಿಲ್ಲಾದನು

ಗಾಂಡಲೀನ ಗೋಪಿಯ ಬಳಿ ತೊನೆದು ಬಂದಳು

ಅವನ ಹಂಡೆ ಹೊಟ್ಟೆಯನ್ನು ಬಳಸಿ ನಿಂದಳು

ಚೊಂಬು ಕೆನ್ನೆ ಮೇಲೆ

ತುಟಿ ಬಿಂಬಿಸಿದಳು ಬಾಲೆ

ಬುರ ಬುರ ಬುರ ಊದಿ ಗೋಪಿ ಬೋಂಡವಾದನು

ಮಾದ್ರಿ ಅಪ್ಪಿದಾಗಿನಂಥ ಪಾಂಡುವಾದನು

ಕಟ್ಟ ಕಡೆಯ ತುಟ್ಟ ತುದಿಯ ಶಿಖರ ನೋಟದಲ್ಲಿ

ನಡುವಿನ ಗಡಿ ಮೀರಿ ಮಾನ ಜಾರುವಷ್ಟರಲ್ಲಿ

ಹಾ, ವೆಂಕಟಸುಬ್ಬಿ!

ಹೆಂಡತಿ ನೆನಪು ದಬ್ಬಿ

ಗಾಂಡಲೀನಳ ಪಾದಪದ್ಮಕಡ್ಡಬಿದ್ದನೋ?

ಪರನಾರೀ ಸಹೋದರನು ಕಾಮ ಗೆದ್ದನೋ?

೧೫.ಅಮ್ಮ.

ಅಮ್ಮ, ನಿನ್ನ ಎದೆಯಾಳದಲ್ಲಿ

ಗಾಳಕ್ಕೆ ಸಿಕ್ಕ ಮೀನು

ಮಿಡುಕಾಡುತಿರುವೆ ನಾನು

ಕಡಿಯಲೋಲ್ಲೆ ನೀ ಕರುಳಬಳ್ಳಿ

ಒಲವೂಡುತಿರುವ ತಾಯೆ,

ಬಿಡದ ಬುವಿಯ ಮಾಯೆ

ನಿನ್ನ ರಕ್ಷೆಗೂಡಲ್ಲಿ ಬೆಚ್ಚಗೆ

ಆಡಗಲಿ ಎಷ್ಟು ದಿನ ?

ದೂಡು ಹೊರಗೆ ನನ್ನ

ಓಟ ಕಲಿವೆ, ಒಳನೋಟ ಕಲಿವೆ, ನಾ

ಕಲಿವೆ ಊರ್ಧ್ವ ಗಮನ,

ಓ ಆಗಾಧ ಗಗನ

ಮೇಲೆ ಹಾರಿ, ನಿನ್ನ ಸೆಳೆತ ಮೀರಿ,

ನಿರ್ಭಾರಸ್ಥಿತಿಗೆ ತಲುಪಿ

ಬ್ರಹ್ಮಾಂಡವನ್ನೇ ಬೆದಕಿ

ಇಂಧನ ತೀರಲು, ಬಂದೇ ಬರುವೆನು

ಮತ್ತೆ ನಿನ್ನ ತೊಡೆಗೆ,

ಮೂರ್ತ ಪ್ರೇಮದೆಡೆಗೆ

೧೬.ಕಾರಣ.

ಹೇಳಿ ಹೋಗು ಕಾರಣ ಹೋಗುವ ಮೊದಲು

ನನ್ನ ಬಾಳಿನಿಂದ ದೂರಾಗುವ ಮೊದಲು

ಒಲವೆಂಬ ಹಣತೆ ಎದೆಯಲ್ಲಿ ಬೆಳಗಿ

ಬೆಳಕಾದೆ ಬಾಳಿಗೆ

ಇಂದೇಕೆ ಹೀಗೆ ಬೆಳಕನ್ನು ತೊರೆದು

ನೀ ಸರಿದೆ ನೆರಳಿಗೆ ?

ಇಂದ್ಯಾವ ಬಂಧ ತೊಡರಿದೆ

ನಿನ್ನ ಕಾಲಿಗೆ ?

ಸುಡುಬೆಂಕಿ ಬೆಳಕು ಉಳಿಯಿತೆ

ನನ್ನ ಪಾಲಿಗೆ ?

ಸವಿಭಾವಗಳಿಗೆ ನೀ ನಾದ ನೀಡಿ

ಜೊತೆಗೂಡಿ ಹಾಡಿದೆ

ಇಂದ್ಯಾವ ಅಳಲು ? ಸೆರೆಯುಬ್ಬಿ ಕೊರಳು

ನೀ ಮೌನ ತಾಳಿದೆ

ನೀ ನೆಟ್ಟು ಬೆಳೆಸಿದ ಈ ಮರ

ಫಲ ತೊಟ್ಟ ವೇಳೆಗೆ

ಹೀಗೇಕೆ ಮುರಿದು ಊರುಳಿದೆ

ಯಾವ ದಾಳಿಗೆ ?

೧೭.ಮಳೆ.

ಸುರಿಯಲಿ ತಂಪೆರೆಯಲಿ

ಜೀವನ ಪ್ರೀತಿಯ ಮಳೆ ;

ಹರಿಯಲಿ ಭೋರ್ಗರೆಯಲಿ

ಬತ್ತಿದೆದೆಗಳಲಿ ಹೊಳೆ ;

ಕೊಚ್ಚಿ ಹೋಗಲಿ ಸ್ವಾರ್ಥ , ದುರಾಸೆ ;

ಸ್ವಚ್ಛವಾಗಲೀ ಇಳೆ.

ಚಿಮ್ಮಲಿ ಹಚ್ಚನೆ ಹಸಿರು,

ನಿರ್ಮಲವಾಗಲಿ ಉಸಿರು,

ಮತ್ತೆ ಆಗಲೀ ವಸುಂಧರೆ

ಸಕಲ ಜೀವಿಗಳಿಗಾಸರೆ.

ಧುಮ್ಮಿಕ್ಕಿ ಧುಮುಕಿ ಜಲಪಾತ

ನೀಡಿ ಜಡತೆಗಾಘಾತ

ಹೊಮ್ಮಿಸಲಿ ಹೊಸ ಚೇತನ,

ಕ್ರಿಯಾಶೀಲತೆಗೆ ಇಂಧನ.

ತೊನೆಯಲಿ ತೆನೆ ಹೊಂದೇರು,

ಅಡಗಲಿ ಹಸಿವಿನ ಚೀರು,

ಅರಳಲಿ ಎಲ್ಲೆಡೆ ಹೂನಗೆ,

ಹಾಯೆನಿಸಲಿ ಭೂತಾಯಿಗೆ.

೧೮.ಕನಸು.

ಏಕೆ ಬಂದೆ ನೀ ನಟ್ಟಿರುಳು

ಕನಸಿನ ಕದ ತೆರೆದು ?

ಏಕೆ ನಿಂತೆ ನೀ ಒಲಿದಂತೆ

ಬಿಗುಮಾನವ ತೊರೆದು ?

ನಗುವೆಯೇಕೆ ಹೊಸ ಹಗಲಂತೆ

ಹೊಂಬೆಳಕನು ಸೂಸಿ ?

ಕರೆವೆಯೇಕೆ ಹಾದಿಯ ತುಂಬ

ಹೂಗಳ ನೀ ಹಾಸಿ ?

ಕೈಗಳಲ್ಲಿ ನೀ ಹಿಡಿದಿರುವೆ

ಒಲವಿನ ಹೂಮಾಲೆ

ಕಂಗಳು ತಿಳಿಸಿವೆ ಇಂಗಿತವ:

"ನಿನ್ನವಳೀ ಬಾಲೆ"

ನಾ ಬಲ್ಲೆನು ಇದು ಕನಸೆಂದು

ಆದರೂ ನಾ ಬರುವೆ

ನೀ ಕರೆದರೆ ನಾ ಬರದಿರಲು

ಸಾಧ್ಯವೇ, ಓ ಚೆಲುವೆ ?

೧೯.ಕಣ್ಣು.

ಯಾವ ಕಣ್ಣೂ ಹೀಗೆ ನೋಡಲಿಲ್ಲ

ಕುಡಿನೋಟದಲ್ಲೇ

ನಿನ್ನಂತೆ,ನಲ್ಲೆ

ಯಾವ ಹೆಣ್ಣೂ ನನ್ನ ಕಾಡಲಿಲ್ಲ

ಒಮ್ಮೆ ಮೋಹಕ ನೋಟ ಹಾಯಿಸಿ

ಇನ್ನೊಮ್ಮೆ ನೋಡದೆ ನೋಯಿಸಿ

ಕನಸಲ್ಲೂ ಬಿಡದೆ ಸತಾಯಿಸಿ

ಕಣ್ಣಾಮುಚ್ಚಾಲೆಯನಾಡಲಿಲ್ಲ

ಏನೇನೋ ಸನ್ನೆಯ ಮಾಡಿ

ಬಳಿ ಬಂದು, ದೂರಕ್ಕೆ ಓಡಿ

ತಬ್ಬಿಬ್ಬಿನಲಿ, ನನ್ನ ದೂಡಿ

ಕ್ಷಣಕೊಂದು ಅಸ್ತ್ರವ ಹೂಡಲಿಲ್ಲ

ಹೃದಯದ ತಂತಿಯ ಮಿಡಿದು

ಪ್ರೀತಿಯ ಶೃತಿಯನ್ನು ಹಿಡಿದು

ತನ್ನ ಗುಟ್ಟನು ತಾನೇ ಒಡೆದು

ಅನುರಾಗ ಗೀತೆಯ ಹಾಡಲಿಲ್ಲ.

೨೦.ಮನದ ಹಂಬಲದ.

ಮನದ ಹಂಬಲದ ಕನಸೆಲ್ಲವೂ

ಮಂಜಂತೆ ಕರಗಿ ಮರೆಯಾಯಿತೆ?

ಸೆಲೆ ಬತ್ತಿದೆ ಆ ಪ್ರೀತಿಯ ಹೊಳೆ?

ಜೊಳ್ಳಾಯಿತೆ ಆ ಸ್ನೇಹದ ಬೆಳೆ?

ಏಕಾಂತವೇ ಈ ಬಾಳಿನ ನೆಲೆ?

ಮನಸು ವಿಷಾದಕೆ ಸೆರೆಯಾಯಿತೆ?

ಎರಗಿ ಬಿರುಗಾಳಿ, ಬಿಡಿದು ಸಿಡಿಲು,

ನಡುಗಡಲಿನಲ್ಲಿ ಒಡದ ಹಡಗು,

ನೆರವಿರದೆ ಸೋತು, ತೇಲು ಮುಳುಗು,

ಬದುಕು ಹತಾಶೆಗೆ ವಶವಾಯಿತೆ?

ಈ ಬಾಳಿಗುಂಟೆ ಮರುವಸಂತ?

ಈ ಪಯಣಕುಂಟೆ ಹೊಸ ದಿಗಂತ?

ಬೆಳಕು ಮೂಡೀತೆ ಇರುಳ ಕಳೆದು?

ಹೊಸ ಅಂಕಕಾಗಿ ತೆರೆ ಸರಿವುದೆ?

೨೧.ನಿರಂತ.

ಪ್ರೇಮಕಥೆಗಳಿಗೆ ಕೊನೆಯುಂಟೆ

ರಾಧಾ ಮಾಧವರಿರೊ ತನಕ?

ಪ್ರೇಮಪ್ರವಾಹಕೆ ಯಾವ ತಡೆ

ಜಾತಿ ಅಂತಸ್ತು ಧನ ಕನಕ?

ಪ್ರಕೃತಿಯಂತೆಯೇ ಪ್ರೇಮ ಸಹ

ನಿತ್ಯ ವಿನೂತನ;

ಹೊಸ ಹೊಸ ಬಣ್ಣ, ಹೊಸ ಬಿನ್ನಾಣ

ಅದಮ್ಯ ಚೇತನ.

ಕೆಲವರ ಪ್ರೇಮ ಹುಚ್ಚುಹೊಳೆ,

ಕೆಲವರಿಗೋ ಅದು ಮುಳ್ಳು ಮಳೆ,

ಎಲ್ಲೋ ಕೆಲವರ ಪಾಲಿಗೆ ಪ್ರ್‍ಏಮ

ಬತ್ತದ ಒಳಸೆಲೆ.

ಪ್ರೇಮಿಗಳಲ್ಲಿ ಹಲವು ಥರ,

ಪ್ರೇಮಕ್ಕುಂಟು ಹಲವು ಥರ,

ದುರಂತವಿರಲಿ, ಸುಖಾಂತವಿರಲಿ,

ಪ್ರೇಮ ನಿರಂತರ.

೨೨.ವಾಸಂತಿ.

ಕವಿದಂತೆ ಮಂಜು ಈ ಹಗಲಿಗೆ

ಕವಿದಂತೆ ವಿಷಾದ ಈ ಮನಸಿಗೆ

ಹಸಿರ ಹೆಸರಿಲ್ಲ ಗಿಡಮರದಲಿ

ಹಕ್ಕಿದನಿಯಿಲ್ಲ ಪರಿಸರದಲಿ

ಜೀವಕಳೆಯಿಲ್ಲ ಬಾನ ರವಿಗೆ

ನಲ್ಲೆ, ನೀನಿಲ್ಲ ನನ್ನ ಜೊತೆಗೆ

ಹೇಮಂತಗಾನ ನಿನ್ನಗಲಿಕೆ

ಎಷ್ಟುದಿನ ಇನ್ನೂ ಈ ಬಳಲಿಕೆ?

ವಾಸಂತಿ, ಬಾರೆ ಮರಳಿ ಮನೆಗೆ

ಚೇತನವ ತಾರೆ ಜಡ ಹೃದಯಕೆ...

೨೩. ಸುಬ್ಬಾಭಟ್ಟರ ಮಗಳೇ.

ಸುಬ್ಬಾಭಟ್ಟರ ಮಗಳೇ ಇದೆಲ್ಲ ನಂದೆ ತಗೊಳ್ಳೇ

ನೀಲಿ ನೈಲೆಕ್ಸಿನ ಮೇಘವಿನ್ಯಾಸದ ಆಕಾಶದ ಸೀರೆ

ದಿಗಂತಗಳೇ ಮೇರೆ

ಮುಂಜಾವಿನ ಬಂಗಾರದ ಬೆಟ್ಟ ಬೆಳದಿಂಗಳ ಬೆಳ್ಳಿ

ನಿನ್ನ ಭಾಗ್ಯಕೆ ಎಣೆಯೆಲ್ಲಿ?

ರಾತ್ರಿ ತೆರೆಯುವುದು ಅದೂ ನನ್ನದೇ

ಜಿಗಿ ಜಿಗಿ ಒಡವೆ ದುಕಾನು

ಆರಿಸಿಕೋ ಬೇಕೇನು?

ಚಿಕ್ಕೆ ಮೂಗುತಿ ಚಂದ್ರ ಪದಕಕ್ಕೆ

ನೀಹಾರಿಕೆ ಹಾರ

ನನ್ನ ಸಂಪತ್ತೆಷ್ಟು ಅಪಾರ!

ನಸುಕಲಿ ಹಿತ್ತಿಲ ಹುಲ್ಲಿನ ಮೇಲೆ

ರಾಶಿ ರಾಶಿ ಮುತ್ತು

ಎಂದೂ ನಿನ್ನ ಸೊತ್ತು

ಸುಗಂಧ ತೀಡುವ ವಸಂತ ಪವನ

ಸಪ್ತವರ್ಣದ ಕಮಾನು

ನಿನಗೇ ಹೌದು!

ಪಾತರಗಿತ್ತಿಯ ಪಕ್ಕವನೇರಿ

ಧೂಪಡ ಕಾನಿಗೆ ಹಾರಿ

ಪ್ರಾಯದ ಮಧು ಹೀರಿ

ಜುಳು ಜುಳು ಹರಿಯುವ ಕಾಲದ ಹೊಳೆಯಲ್ಲಿ...