ಅರುಣಗೀತ.

೧.ಸಹಜವಾದದ್ದು ಸರಿಯಾಗೂ ಇದ್ದೀತು.

ಹೂ ಬಿಡುತ್ತದೆ ಹಣ್ಣುಕೊಡುತ್ತದೆ

ಸಸ್ಯಶಾಸ್ತ್ರ ಓದದೆಯೇ ಮರ;

ಮೊಟ್ಟೆಯಿಡುತ್ತದೆ ಮರಿ ಮಾಡುತ್ತದೆ

ಜೀವಶಾಸ್ತ್ರ ಓದದೆಯೇ ಖಗ

ವ್ಯಾಕರಣ ಯಾಕೆ, ಅಲಂಕಾರ ಬೇಕೆ

ಮಾತಿನ ಮರ್ಮ ಬಲ್ಲ ವಾಗ್ಮಿಗೆ?

ವಾತ್ಸಾಯನನ ಸೂತ್ರ ಪಾಠವಾಗಿರಬೇಕೆ

ನಲ್ಲೆಗೆ ಬೇಯುತ್ತಿರುವ ಪ್ರೇಮಿಗೆ?

ಫಲಿಸುವ ಮರಕ್ಕೆ ಬೇಲಿ ಯಾತಕ್ಕೆ?

ಸಾಕು ಬೀಜದ ಪುಣ್ಯ;

ಬೆಳಕಿಗೆ, ಮಳೆಗೆ, ಬಿಸಿಲಿಗೆ

ಎಲ್ಲಿದೆ ಯಾರ ದಾಕ್ಷಿಣ್ಯ?

ಬಾಟಲಿಯ ಹಂಗು ಯಾಕೆ ಮಗುವಿಗೆ?

ಉಕ್ಕುತ್ತಿದೆ ಧಾರೆ ತಾಯ ಎದೆಯಿಂದ;

ಲಕ್ಷ್ಯವೆ ಪಂಡಿತನ ಅಂಕೆ? ಅವನನ್ನೇ

ಶಿಕ್ಷಸುತ್ತದೆ ಪ್ರತಿಭೆ ಹೊಸ ಚಲನೆಗಳಿಂದ.

ತಪ್ಪಿಲ್ಲ ಕಟ್ಟಾದರೆ ಕೂದಲು

ಕ್ರಾಪ್, ಬಾಬ್, ಕುಣಿಸುವ ಪೋನೀಟೈಲಾಗಿ,

ಬಾಧಕವೇನಲ್ಲ ಚಿನ್ನದ ಡಾಬು,

ತಬ್ಬಿದ್ದರೆ ಹೂ ಸೊಂಟವನ್ನು ಹಗುರಾಗಿ,

ಕಿವಿಗೆ ಲೋಲಕ್, ಹಣೆಗೆ ತಿಲಕ,

ಶೃಂಖಲೆಯಲ್ಲ ಕೈಗೆ ಬಳೆ, ಅಲಂಕಾರ ಮಾತ್ರ.

ಸಹಜವಾಗಿದ್ದದ್ದು ಸರಿಯಾಗೂ ಇದ್ದೀತು,

ತಾನೇ ನಿರ್ಮಿಸಿಕೊಂಡಂತೆ ನದಿ ಪಾತ್ರ.

೨.ಬೆಂಗಳೂರು.

ಇದು ಚಕ್ರವ್ಯೂಹ

ಒಳಗೆ ಬರಬಹುದು

ಒಮ್ಮೆ ಬಂದಿರೊ ಒಳಗೆ

ಹಿಂದೆ ಹೋಗುವ ದಾರಿ ಬಂದಾಗ ಹಾಗೇಯೇ!

ಕರೆತಂದ ದೈವಗಳು ಕೈಬಿಟ್ಟ ಹಾಗೆಯೇ!

ಸ್ವಾಮಿ, ಇದು ನಗರ;

ಸಿಕ್ಕಿ ಜೀವವನ್ನೆಲ್ಲ ನುಂಗಿ ಸೊಕ್ಕಿರುವ

ಹೆಬ್ಬಾವಿನಂಥ ಜಡ ಅಜಗರ;

ದಿಕ್ಕು ದಿಕ್ಕಿನಿಂದಲೂ ಉಕ್ಕಿ ಧಾವಿಸುತ್ತಿರುವ

ಲಕ್ಷವಾಹಿನಿ ಮಲೆತ ಜನಸಾಗರ;

ಏನೆಲ್ಲ ಭಾಷೆ, ಎಷ್ಟೆಲ್ಲ ಆಸೆ

ನೂರೆಂಟು ರುಚಿ ಕಲಸುಮೇಲೋಗರ,

ಬಂದವರಿಗೆಲ್ಲ ಇಲ್ಲಿ ಭವಿಷ್ಯ ಇರದಿದ್ದರೂ

ಆಟಬಲ್ಲ ಖದೀಮ ಮಾತ್ರ ಹಾಕಿಯೆಬಿಡುವ

ಕೇಳಿದ ಗರ!

ಎಲ್ಲ ಸಮೃದ್ಧ ಇಲ್ಲಿ

ಕೆಲವು ಜಾಗಗಳಲ್ಲಿ.

ನೀರಿಲ್ಲದಿದ್ದರೂ ನಲ್ಲಿಯಲ್ಲಿ

ಗಲ್ಲಿ ಗಲ್ಲಿಗಳಲ್ಲಿ

ಹೆಜ್ಜೆ ಹೆಜ್ಜೆಗು ತೀರ್ಥ

ಅಂಗಡಿಯ ತುಂಬ ಬಾಟಲಲ್ಲಿ!

ಎಣ್ಣೆ ಇದೆ ಕಾಳಲ್ಲಿ,

ಬೆಣ್ಣೆ, ಹಳೆಕಥೆಯಲ್ಲಿ

ಅಕ್ಕಿ ಸಕ್ಕರೆ ಬೇಳೆ ಕೆಲಸವಿಲ್ಲದೆ ಪಾಪ

ಗೊರಕೆ ಹೊಡೆಯುತ್ತಿವೆ ನೆಲಮಾಳಿಗೆಯ ಒಳಗೆ

ಕತ್ತಲಲ್ಲಿ!

ಓಡುವುದು ಇಲ್ಲಿ, ಎಲ್ಲಂದರಲ್ಲಿ

ಸಿಟೀ ಬಸ್ಸು

ಕೂತುಕೊಂಡೋ, ಇಲ್ಲ ನಿಂತುಕೊಂಡೋ

ಅಥವಾ ಫುಟ್ ಬೋರ್ಡ್ ಮೇಲೆ ಮುಂಗಾಲನ್ನೂರಿ

ಹವೆಯಲ್ಲಿ ಮೈತೂರಿ ತೂಗಿಕೊಂಡೋ

ಹೇಗೆ ಬೇಕಾದರೂ ಹೋಗಬದುದು

ಅದೃಷ್ಟವಿದ್ದರೆ ಸ್ಟಾಪು ಸೇರಬಹುದು!

ಹಿಂದೆ ಒಂದಾನೊಂದು ಕಾಲದಲ್ಲಿ

ಇತ್ತಂತೆ ಪೂರ ಕನ್ನಡವೆ ಇಲ್ಲಿ!

ಈಗ ಮಾತ್ರ ಎಲ್ಲೊ ಸಂದಿಗೊಂದಿಗಳಲ್ಲಿ

ಮಿಡುಕುತಿದೆ ಜೀವ ಬಾಲದಲ್ಲಿ.

ಅಕ್ಕಪಕ್ಕದ ಮನೆಯ ಸೋದರರು ದಯಮಾಡಿ

ಮೇಲೆಬ್ಬಿಸಿರುವ ಗಾಳಿಯಲ್ಲಿ

ಹೊಯ್ದಾಡುತ್ತಿದೆ ಪುಟ್ಟ ಕನ್ನಡದ ಹಣತೆ

ಗುಡ್ ಬೈ ಹೇಳವ ಧಾಟಿಯಲ್ಲಿ.

೩.ಬೆಳಕು ಕತ್ತಲ ನಡುವೆ.

ಬೆಳಕು ನುಗ್ಗುತ್ತದೆ

ತೆರೆದ ರೂಮಿನೊಳಕ್ಕೆ

ಮೌನದ ಅಲೆಗಳಂತೆ.

ಕೆಂಪು ಕ್ಯಾಕ್ಟಸ್ ಹೂವು ಎಲ್ಲಕಡೆ ಚೆಲ್ಲಿವೆ,

ನಾಚುತ್ತ ನೋಡಿವೆ

ನುಗ್ಗುತ್ತಿರುವ ಬೆಳಕಿನತ್ತ

ಏನೋ ನಿರೀಕ್ಷಿಸುತ್ತ

ಹಸಿರು ಎಳೆಗಳ ನಡುವೆ

ಹೆಪ್ಪುಗಟ್ಟಿವೆ ಈಗ

ಆನಂದ ಪಾವಿತ್ರ್ಯ.

ಮುಂದೆ ಬರುತ್ತದೆ ರಾತ್ರಿ

ಮೆಲ್ಲಗೆ ಹಾಡಿಕೊಳ್ಳುತ್ತ

ಏನೋ ಪ್ರತೀಕ್ಷೆಯಲ್ಲಿ ಕಾದಿರುವ ಹೂವುಗಳ

ಕಣ್ಣಿಗೆ ಮುತ್ತಿಡುತ್ತ

ಕಂಪಿಸುತ್ತಿವೆ ಹೂವು

ಕಣ್ಣು ಮುಚ್ಚುತ್ತ.

ಕಿಟಕಿಯಾಚೆಗೆ ಮೇಲೆ

ನೀಲಿಯಾಳಗಳಲ್ಲಿ

ಶಾಂತವಾಗಿ

ಜಾರಿ ಸಾಗುತ್ತಿವೆ ಕಪ್ಪು ಮುಗಿಲು

ಉದ್ದ ಮೆರವಣಿಗೆಯಲ್ಲಿ

ಶವದ ಪೆಟ್ಟಿಗೆಯ ಹಿಂದೆ

ನಡೆವ ವೃದ್ಧರ ಹಾಗೆ

ಭಯವಿರದೆ, ವ್ಯಥೆಯಿರದೆ

ಸಂಧ್ಯಾಶಾಂತಿಯ ತುಂಬಿಕೊಂಡು ಒಳಗೆ.

ಮೂಲ - ಗನ್ವರ್(ನಾರ್ವೆಯನ್ ಕವಿ)