ನವ ಪಲ್ಲವ.

೧.ನನ್ನ ಹಿಡಿಯೊಳಗಿತ್ತು ನಿನ್ನ ಬೆರಳು.

ನಡೆದ ದಾರಿಯ ತಿರುಗಿ ನೋಡಬಾರದು ಏಕೆ ?

ನೋಡಿದರೆ ಆ ಹೂವೆ ನಲುಗಬಹುದು.

ಮುಂದೆ ನಡೆವಾಗಲೂ ಮಾತಾಡದಿರಬೇಕೆ ?

ಹೌದು, ತುಂಬಿದ ಮನವೆ ತುಳುಕಲಿ ಬಿಡು.

ಒಲವು ಯಾರಿಗೆ ಬೇಕು ? ನಾನು ಉಸಿರಿನ ಮೋಡ ;

ಪಚ್ಚೆ ಬಯಲಿಗೆ ಬಂದು ಮೇಯದ ಹಸು.

ಕಪ್ಪುರದ ಬೊಂಬೆ, ನನ್ನೊಡನೆ ಬರುವುದು ಬೇಡ -

ಒಳಗಿದ್ದು ಎದೆಯುರಿಗೆ ಗಾಳಿಬೀಸು.

ಸೋತ ಮಾತಿ ನೂರು ಹಸೆಗೆ ದೀಪವನಿರಿಸು ;

ಮಾತಿನಷ್ಟೇ ಮೌನ ಸಫಲವೆನಿಸು ;

ಕಳೆದಿರುಳ ಆಚೆತುದಿಯಿಂದ ನಗೆಯನು ತರಿಸು ;

ಮೊದಲ ಕನಸಿಗೆ ಮತ್ತೆ ಹೇಳಿಕಳಿಸು.

ಎದೆಯ ತಂತಿಯ ಮಿಡಿದು ಹೇಗಾದರೂ ಹಾಡು ;

ದೂಳಾಚೆಗೇನಿದೆಯೋ ಹೋಗಿ ನೋಡು.

ಹಗಲ ನೀರಿಗೆ ಬಿದ್ದ ಸಂಜೆಯಷ್ಟೂ ತಾರೆ,

ಬಂಡೆ ಬಿರುಕಿನ ಹಾಲು ಪ್ರಾಣಧಾರೆ.

ಬೆಟ್ಟಗಳ ನಡುವೆ ಸಾಗುವ ದಾರಿ ಸುಖವಲ್ಲ ;

ಸೀಗೆ ಮೆಳೆಯಲಿ ಸದ್ದು , ಹಾವು ಹರಿದು.

ಒಲವು ತುಂಬುವುದಿಲ್ಲ , ತುಂಬಿದರೆ ಒಲವಲ್ಲ -

ಎಲ್ಲಿ ಹೋಯಿತು ಹಾಲು ? ಪಾತ್ರೆ ಬರಿದು ;

ಅರೆತೆರೆದ ಮನದ ಬಾಗಿಲ ಹೂವತೆರೆಯೆಳೆದು

ನೋಡಿದರೆ, ಗೋಡೆಯಲಿ ನೂರು ನೆರಳು.

ಗೋಮೇಧಿಕದ ಕೆನ್ನೆ - ಬೆಳಕು ತಣ್ಣಗೆ ಹೊಳೆದು

ನನ್ನ ಹಿಡಿಯೊಳಗಿತ್ತು ನಿನ್ನ ಬೆರಳು.

ಎಂದೊ ಕೇಳಿದ ಹಾಡು.

ಎಂದೊ ಕೇಳಿದ ಒಂದು ಹಾಡನು

ನಾನು ವೀಣೆಗೆ ಕಲಿಸಿದೆ.

ಅದನೆ ನೆನೆಯುತ ನೀನು ಹಾಡಲು

ನಾನು ಜೊತೆಗೂ ನುಡುಸುದೆ.

ನೀನು ಹಾಡಿದೆ, ನಾನು ನುಡಿಸಿದೆ ;

ಹಾಡೆ ಹಾದಿಯ ತೋರಿತು.

ನಿನ್ನ ಕೊರಳಿಗೆ ನನ್ನ ಬೆರಳಿಗೆ

ಸಂಜೆ ಶುಭವನು ಕೋರಿತು.

ನೀನು ಹಾಡಿದ ರಾಗ ದಿಂಪಿಗೆ

ತಳಿರ ತೂಗಿತು ಮಾಮರ.

ದೂರ ದೂರಕೆ ಕೂಗಿ ಕೋಗಿಲೆ,

ನವಿಲು ಬೀಸಿತು ಚಾಮರ.

ಹಾಡು ಮೌನವ ಕಲಕಿ ಹಬ್ಬಿತು

ಮಂದಗಮನದ ಲಯದಲಿ.

ಗೆಜ್ಜೆದನಿಗಳು ಕೇಳಿ ಬಂದವು

ಹಚ್ಚಿಹಸಿರಿನ ಬಯಲಲಿ.

ಬಾಳ ನಲಿವೇ ಬಂದು ಹಾಡಿತು

ನಿನ್ನ ಬೆಳ್ಳಿಯ ದನಿಯಲಿ,

ಬಣ್ಣ ಬಣ್ಣದ ಬೆಳಕು ಮೂಡಿತು

ಮಣ್ಣ ಹಣತೆಯ ತುಟಿಯಲಿ.

ನೀನು ಹಾಡಿದೆ, ನಾನು ನುಡಿಸಿದೆ ;

ಹಾಡು ಕರಗಿತು ಮೆಲ್ಲಗೆ.

ಕಂಪ ಸೂಸಿತು ತಂಪು ಗಾಳಿಗೆ

ನಿನ್ನ ಹೆರಳಿನ ಮಲ್ಲಿಗೆ.

೨.ಕರ್ನಾಟಕ ಗೀತ.

ಪಡುವಣ ಕಡಲಿನ ನೀಲಿಯ ಬಣ್ಣ,

ಮುಡಿಯೊಳು ಸಂಜೆಯ ಅಂಚಿನ ಚಿನ್ನ,

ಹೊಳೆಗಳ ಸೆರೆಗಿನ ಪಚ್ಚೆಯ ಬಯಲು,

ಬಿರುಮಳೆಗಂಜದ ಬೆಟ್ಟದ ಸಾಲು,

ಹುಲಿ ಕಾಡನೆಗಳಲೆಯುವ ಕಾಡಿದು,

ಸಿರಿಗನ್ನಡ ನಾಡು!

ಕಲ್ಲಿಗೆ ಬಯಸಿದ ರೂಪವ ತೊಡಿಸಿ,

ಮುಗಿಲಿಗೆ ತಾಗುವ ಮೂರ್ತಿಯ ನಿಲಿಸಿ,

ದಾನ ಧರ್ಮಗಳ ಕೊಡುಗೈಯಾಗಿ,

ವೀರಾಗ್ರಣಿಗಳ ತೊಟ್ಟಿಲ ತೂಗಿ,

ಬೆಳಗಿದ ನಾಡಿದು, ಚಂದನಗಂಪಿನ

ಸಿರಿಗನ್ನಡ ನಾಡು!

ಇಲ್ಲಿ ಅರಳದಿಹ ಹೂವುಗಳಿಲ್ಲ :

ಹಾಡಲು ಬಾರದ ಹಕ್ಕಿಗಳಿಲ್ಲ -

ಸಾವಿರ ದೀಪಗಳರಮನೆಯೊಳಗೆ

ಶರಣೆನ್ನುವೆನೀ ವೀಣಾಧ್ವನಿಗೆ.

ಕನ್ನಡ ನಾಡಿದು ; ಮಿಂಚುವ ಕಂಗಳ

ಸಿರಿಗನ್ನಡ ನಾಡು.

೩.ದೀಪಾವಳಿ.

ಹೂವು ಬಳ್ಳಿಗೆ ದೀಪ ;

ಹಸಿರು ಬಯಲಿಗೆ ದೀಪ ;

ಹುಲಿಯ ಕಣ್ಣಿನ ದೀಪ ಕಾಡಿನಲ್ಲಿ ;

ಮುತ್ತು ಕಡಲಿಗೆ ದೀಪ,

ಹಕ್ಕಿ ಗಾಳಿಗೆ ದೀಪ,

ಗ್ರಹತಾರೆಗಳ ದೀಪ ಬಾನಿನಲ್ಲಿ.

ಬಲ್ಮೆ ತೋಳಿಗೆ ದೀಪ ;

ದುಡಿಮೆ ಬೆವರಿನ ದೀಪ ;

ಸಹನೆ ಅನುಭವ - ದೀಪ ಬದುಕಿನಲ್ಲಿ ;

ಮುನಿಸು ಒಲವಿಗೆ ದೀಪ ;

ಉಣಿಸು ಒಡಲಿಗೆ ದೀಪ ;

ಕರುಣೆ ನಂದಾದೀಪ ಲೋಕದಲ್ಲಿ.

ತೋರಣದ ತಳಿರಲ್ಲಿ,

ಹೊಸಿಲ ಹಣತೆಗಳಲ್ಲಿ,

ಬಾಣಬಿರುಸುಗಳಲ್ಲಿ ನಲಿವು ಮೂಡಿ,

ಕತ್ತಲೆಯ ಪುಟಗಳಲಿ

ಬೆಳಕಿನಕ್ಷರಗಳಲಿ,

ದೀಪಗಳ ಸಂದೇಶ ಥಳಥಳಿಸಲಿ !

ಬೆಳಕಿನಸ್ತಿತ್ವವನೆ

ಅಣಕಿಸುವ ಕತ್ತಲೆಗೆ

ತಕ್ಕ ಉತ್ತರವಲ್ಲಿ ಕೇಳಿಬರಲಿ !

ದೀಪಾವಳಿಯ ಜ್ಯೋತಿ

ಅಭಯ ಹಸ್ತವನೆತ್ತಿ

ಎಲ್ಲರಿಗೆ ಎಲ್ಲಕ್ಕೆ ಶುಭಕೋರಲಿ !

೪.ಮೆರವಣಿಗೆ.

ಹೊಸಿಲ ಹಸೆಯನು ದಾಟಿ, ಗೆಜ್ಜೆಗಳ ಕುಣಿಸಿ

ಒಳಗೆ ಬಂದಳು ನಾಲ್ಕು ತುಂಬಿರದ ಹುಡುಗಿ;

'ಮಾವ ಮೇಜಿನ ಮೇಲೆ ಇರುವುದೇನೆ'ಂದು

ಓರೆಗಣ್ಣಿನಲವಳು ನನ್ನ ಕೇಳಿದಳು.

"ಅದೊಂದು ಹಳೆಯ ಕಥೆ ; ಹೆಸರು ಮೆರವಣಿಗೆ.

ಓದುವೆನು ಕೇಳೆ"ಂದು ಪುಸ್ತಕವನು ತೆರೆದೆ :

"ಹಸಿರು ದೀಪದ ಒಂಟೆ ಕಾಣಿಸಿತು ಮೊದಲು,

ಬೀದಿಯುದ್ದಕು ದೀಪಮಾಲೆಗಳು ಹೊಳೆದು.

ನೌಪತ್ತು ಕೇಳಿಸಿತು, ಗುಡುಗಿತು ನಗಾರಿ

ಕಿಕ್ಕಿರಿದ ಇಕ್ಕೆಲದ ಚಪ್ಪಾಳೆಗಳಲಿ;

ಬಳಿಕ ಆನೆಯ ಬಂಡಿ, ಕುದುರೆ, ಕಾಲಾಳು,

ಹಾಡುತ್ತ ಮುನ್ನಡೆದ ಗಾಯಕರ ಸಾಲು.

ಬಂತು ಓಲಗದೊಡನೆ ಬಳಕುತ್ತ ಮೇನ ;

ತಂಗಾಳಿಯಲಿ ತೇಲಿಬಂತು ತಿಲ್ಲಾನ."

'ಮುಂದೇನು ಬಂತೆ'ಂದು ಕೇಳಿದಳು ಚೆಲುವೆ ;

"ಒಂದೆರಡು ಮಳೆಯ ಹನಿ ಬಿತ್ತೆ"ಂದು ನುಡಿದೆ.

"ಸೊಂಡಿಲಾಡಿಸಿ ಬಂತು ಸಿಂಗರಿಸಿದಾನೆ ;

ಮಹಡಿಯಂಚಿಗೆ ಸರಿದು ನೋಡಿದೆನು ನಾನೆ.

ಚಿನ್ನದಂಬಾರಿಯಲಿ ದೊರೆ ಬಂದ, ಬಂದ!-

ಉಕ್ಕಿದುದು ಎಲ್ಲರೆದೆಯೊಳಗೆ ಆನಂದ.

ಇಲ್ಲಿಗಿದು ಮುಗಿತೆಂ"ದವನೆ ವಿರಮಿಸಿದೆ ;

ಅರ್ಥವಾಯಿತೆ ಇವಳಿಗೆಂದು ಶಂಕಿಸಿದೆ.

ಒಂಟೆ, ಆನೆ, ಕುದುರೆ - ಇವಳಿಗೂ ಗೊತ್ತು;

ನಮ್ಮೂರಿಗೊಮ್ಮೆ ಸರ್ಕಸ್ಸು ಬಂದಿತ್ತು.

ಇವಳಿಗೋಲಗ ಕೂಡ ಅಪರಿಚಿತವಲ್ಲ ;

ಅಕ್ಕನ ಮದುವೆಗಿವಳು ಹೋಗಿದ್ದಳಲ್ಲ!

ಗೊತ್ತಿರದ ಪದಗಳಿವು : ಗಾಯಕ, ನಗಾರಿ,

ನೌಪತ್ತು, ಮೇನ, ತಿಲ್ಲಾನ, ಅಂಬಾರಿ.

ಪದಗಳ ಬಿಡಿಸಿ ಅರ್ಥವನು ವಿವರಿಸಿದೆ ;

ಸ್ಪಷ್ಟವಾಗಿರಬಹುದು ಎಂದು ಭಾವಿಸಿದೆ ;

ಇವಳ ಹಿಂದೆಯೆ ನಡೆದೆ ಬಾಗಿಲಿನವರೆಗೆ.-

'ದೊರೆ' ಎಂದರೇನೆಂದು ಕೇಳಿದಳು ಕಡೆಗೆ.

೫.ತೊಟ್ಟಿಲು.

ಕೀಲಿಗೆಣ್ಣಿಯ ಬಿಟ್ಟು ಎಷ್ಟು ದಿನವಾಯಿತೋ !-

ತೊಟ್ಟಿಲಿನ ಕಿರಿಚು ಅಲ್ಲಿಂದಿಲ್ಲಿಗೆ.

ಅದೆ ತಾಯ ದನಿಯೆಂದು ಯಾರಿದಕೆ ಹೇಳಿದರೊ ?-

ಕಣ್ಣ ಚಾವಣಿ ಬಿತ್ತು ನಿದ್ದೆ - ಮಳೆಗೆ ;

ಮಗುವಿಗೆ ನಿದ್ದೆ ಬಂತು. ಇನ್ನೇಕೆ ತೂಗುವುದು ?

ಕಾರಣವ ಕೊಡಲಿಲ್ಲ ಹೆತ್ತ ಕರುಣೆ.

ಇಲ್ಲ, ತಗುಲಿದ ಗೋಡೆ ಇದನು ತಳ್ಳುವುದೆನಲು,

ಇಟ್ಟಿಗೆಗೆ ಬಂತು ಚಿನ್ನದ ಧಾರಣೆ.

ಕೊಂಡಿ ಕುಣಿಕೆ ಸುಭದ್ರ : ಸರಪಳಿಗಳಿದಬೇಕು,

ಇವೆಯಂತೆ ! ನಾಗೋಸ ನೀಲಗಗನ.

ಮಗು ಮಗ್ಗಲಾಗಿ ನಿದ್ದೆಯಲಿ ಅತ್ತಿರಬೇಕು,

ತೆರೆಯ ನೇವರಿಸುತಿದೆ ಮಂದ ಪವನ.

೬.ನಿನ್ನ ನೆನೆವೆ.

ಬಿರಿದ ಹೂವ ಮೆಲೆ ಗಾಳಿ

ಸುಳಿದು ಬರುವ ಸಮಯದಲ್ಲಿ

ತೆರೆಯ ಹಿಂದೆ ತೆರೆಗಳೋಡಿ

ಕೆರೆಯ ಕವಿತೆಯಾಗುವಲ್ಲಿ

ನಿನ್ನ ನೆನವೆ, ನಿನ್ನ ನೆನೆವೆ

ನ್ನೊಲವಿನ ಸ್ಪೂರ್ತಿಯೆ !

ದೂರ ದೂರ ತಾರೆ ತಾರೆ

ಕಣ್ಣ ಮುಚ್ಚಿ ತೆರೆಯುತಿರಲು,

ನೀನಿಯೊಳಗೆ ನಿನ್ನ ದನಿಯೆ

ನನ್ನ ದನಿಯ ಕೊಡುವಲ್ಲಿ

ನಿನ್ನ ನೆನವೆ, ನಿನ್ನ ನೆನೆವೆ

ನನ್ನೊಲವಿನ ಮೂರ್ತಿಯೆ !

ಹಸಿರು ನಲಿವ ತಾಣದಲ್ಲಿ

ಬಿಸಿಲು ಮಿಡಿದ ಪ್ರಾಣದಲ್ಲಿ

ಜೋಡಿ ಹಕ್ಕಿ ಹಾಡುವಲ್ಲಿ

ಮುಂದೆ ದಾರಿ ಕಾಣದಲ್ಲಿ

ನಿನ್ನ ನೆನೆವೆ, ನಿನ್ನ ನೆನೆವೆ

ನನ್ನೊಲವಿನ ಕೀರ್ತಿಯೆ !

೬.ನಮ್ಮ ಹಾಡು.

ಆಕಾಶಕ್ಕೆದ್ದು ನಿಂತ ಪರ್ವತ ಹಿಮ ಮೌನದಲ್ಲಿ

ಕರಾವಳಿಗೆ ಮುತ್ತನಿಡುವ ಪೆರ್ದೆರೆಗಳ ಗಾನದಲ್ಲಿ

ಬಯಲು ತುಂಬ ಹಸಿರ ದೀಪ ಹಚ್ಚಿ ಹರಿವ ನದಿಗಳಲ್ಲಿ

ನೀಲಿಯಲ್ಲಿ ಹೊಗೆಯ ಚಲ್ಲಿ ಯಂತ್ರ ಘೋಷವೇಳುವಲ್ಲಿ

ಕಣ್ಣು ಬೇರೆ, ನೋಟವೊಂದು-

ನಾವು ಭಾರತೀಯರು.

ನಾಡಿನೆಲ್ಲ ಗಡಿಗಳಲ್ಲಿ ಬಾನಿನಲ್ಲಿ ಕಡಲಿನಲ್ಲಿ

ನಮ್ಮ ಯೋಧರೆತ್ತಿ ಹಿಡಿದ ನಮ್ಮ ಧ್ವಜದ ನೆರಳಿನಲ್ಲಿ

ಒಂದೆ ನೆಲದ ತೊಟ್ಟಿಲಲ್ಲಿ ಬೆಳೆದ ನಮ್ಮ ಕೊರಲಿನಲ್ಲಿ

ನಮ್ಮ ಯುಗದ ದನಿಗಳಾಗಿ ಮೂಡಿದೆಲ್ಲ ಹಾಡಿನಲ್ಲಿ

ಭಾಷೆ ಬೇರೆ, ಭಾವವೊಂದು-

ನಾವು ಭಾರತೀಯರು.

ನಾಡಿಗಾಗಿ ತನುವ ತೆತ್ತ ಹುತಾತ್ಮರ ಸ್ಮರಣೆಯಲ್ಲಿ

ನಮ್ಮ ಕಷ್ಟದಲ್ಲು ನೆರೆಗೆ ನೆರೆಳನೀವ ಕರುಣೆಯಲ್ಲಿ

ದಾರಿ ಬಳಸಿ ಏರುವಲ್ಲಿ ಬಿರುಗಾಳಿಯೆ ಮೊಳಗುವಲ್ಲಿ

ನಮ್ಮ ಗುರಿಯ ಬೆಳಕಿನೆಡೆಗೆ ನಡೆವ ಧೀರ ಪಯಣದಲ್ಲಿ

ಎಲ್ಲೆ ಇರಲಿ, ನಾವು ಒಂದು-

ನಾವು ಭಾರತೀಯರು.