ಡಾ.ಕೆ.ಎಸ್.ನರಸಿಂಹಸ್ವಾಮಿ.

ಕೆ.ಎಸ್.ನರಸಿಂಹಸ್ವಾಮಿ (ಜನವರಿ ೨೬ ೧೯೧೫ - ಡಿಸೆಂಬರ್ ೨೮ ೨೦೦೩)

ಮಂಡ್ಯ ಜಿಲ್ಲೆಯ ಕಿಕ್ಕೇರಿಯಲ್ಲಿ ಜನಿಸಿದ ಕೆಎಸ್‌ನ, ಮೈಸೂರಿನಲ್ಲಿ ಇಂಟರ್ ಮೀಡಿಯಟ್ ಹಾಗೂ ಬೆಂಗಳೂರಿನಲ್ಲಿ ಸೆಂಟ್ರಲ್ ಕಾಲೇಜಿನಲ್ಲಿ ಬಿ. ಎ. (ಅಪೂರ್ಣ) ವ್ಯಾಸಾಂಗ ಮಾಡಿದರು ೧೯೩೭ರಲ್ಲಿ ಸರಕಾರಿ ಸೇವೆಗೆ ಸೇರಿ ೧೯೭೦ರಲ್ಲಿ ನಿವೃತ್ತರಾದರು.

ಮೈಸೂರು ಮಲ್ಲಿಗೆ ಕೆ. ಎಸ್. ನರಸಿಂಹಸ್ವಾಮಿ ಅವರ ಮೊದಲ ಕವನ ಸಂಕಲನ. ಇದು ಮನೆ ಮನೆಯ ಮಾತಾಗಿ, ಕಾವ್ಯವಾಗಿ, ಹಾಡಾಗಿ ಹರಿದಿದೆ. ಇದುವರೆವಿಗೂ ಇಪ್ಪತ್ತೈದಕ್ಕೂ ಮಿಕ್ಕಿ ಮುದ್ರಣ ಭಾಗ್ಯ ಪಡೆದಿದೆ. ಕನ್ನಡದ ಕೆಲವೇ ಕೃತಿಗಳಿಗೆ ಇಂಥ ಮರುಮುದ್ರಣದ ಭಾಗ್ಯ- ಅಧುನಿಕ ಕನ್ನಡ ಕಾವ್ಯ ಹಲವು ರೂಪಗಳನ್ನು ಪಡೆಯುತ್ತಾ ಬಂದಿದೆ. ಹಲವು ಸಾಹಿತ್ಯ ಚಳುವಳಿಗಳು ಬಂದುಹೋಗಿವೆ. ಕೆಎಸ್‌ನ ಎಲ್ಲ ಕಾಲಕ್ಕೂ ಸಲ್ಲುವ ಜನಪ್ರೀತಿಯ ಕಾವ್ಯ ಕೃಷಿಗೆ ದೊಡ್ಡ ಹೆಸರು. ಕವಿ ವಿಮರ್ಶಕ ಡಾ. ಎಚ್. ಎಸ್. ವೆಂಕಟೇಶಮೂರ್ತಿ ಅವರು ಕೆಎಸ್‌ನ ಬಗ್ಗೆ ಬರೆಯುತ್ತ ``ನವೋದಯದ ಕಾವ್ಯ ಸಂದರ್ಭದಲ್ಲಿ ಹೆಸರು ಮಾಡಿದ್ದ ಈ ಕವಿ ತಮ್ಮ ಸುಕುಮಾರ ಜಗತ್ತಿನಿಂದ, ನಿಷ್ಠುರವಾದ ಬದುಕಿನ ಸಂದರ್ಭಕ್ಕೆ ಹೊರಳಿದ್ದು `ಶಿಲಾಲತೆ'ಯಲ್ಲಿ. ಆದ್ದರಿಂದ ಸಂಗ್ರಹಕ್ಕೆ ಒಂದು ಐತಿಹಾಸಿಕ ಮಹತ್ವವಿದೆ" -ಎಂದು ದಾಖಲಿಸಿದ್ದಾರೆ. ಜೊತೆಗೆ ಮೈಸೂರು ಮಲ್ಲಿಗೆಯ ಕವಿತೆಯ ಭಾಷೆ, ವಸ್ತು, ಲಯಗಳ ಮೇಲೆ ಇಂಗ್ಲಿಷ್ ಗೀತೆಗಳ ಪ್ರಭಾವವನ್ನು ಗುರುತಿಸಬಹುದು ಎಂದು ಹೆಚ್. ಎಸ್. ವಿ. ಗುರ್ತಿಸಿದ್ದಾರೆ.

ಮೈಸೂರು ಮಲ್ಲಿಗೆಯ ಕವಿತೆಗಳನ್ನು ಭಾವಗೀತೆಗಳ ಮೂಲಕ ಹಾಡಿ ಜನಪ್ರಿಯ ಮಾಡಿದಂತೆ ಆ ಕೃತಿಯನ್ನು ಅಪಾರ ಸಂಖ್ಯೆಯ ಓದುಗರೂ ಕೊಂಡು ಓದಿರುವುದು ಹೆಗ್ಗಳಿಕೆ. ಕೆಲವು ವರ್ಷಗಳ ಹಿಂದೆ ಇದೇ ಹೆಸರಿನಿಂದ ಚಲನಚಿತ್ರವೂ ನಿರ್ಮಾಣವಾಗಿದೆ. ತಮ್ಮವು ಪ್ರೇಮ ಕವಿತೆಗಳಲ್ಲ, ದಾಂಪತ್ಯ ಕವಿತೆಗಳೆಂದು ಕೆಎಸ್‌ನ ಹೇಳಿಕೊಂಡಿದ್ದಾರೆ. ಮೈಸೂರು ಮಲ್ಲಿಗೆಯಲ್ಲಿ ಬಹುತೇಕ ಕವಿತೆಗಳು ದಾಂಪತ್ಯಗೀತೆಗಳೇ ಆಗಿವೆ. ನವಿಲೂರು, ಹೊನ್ನೂರು ಮೊದಲಾದವು ಗ್ರಾಮ ಬದುಕಿನ ನೆಲೆಗಳು. ಮಣ್ಣಿನ ವಾಸನೆಯ ಅಪ್ಪಟ ಕವಿತೆಗಳನ್ನು ಕೆಎಸ್‌ನ ನೀಡಿದ್ದಾರೆ. ಐರಾವತ, ದೀಪದ ಮಲ್ಲಿ, ಉಂಗುರ, ಇರುವಂತಿಗೆ, ಶಿಲಾಲತೆ, ಮನೆಯಿಂದ ಮನೆಗೆ, ತೆರೆದ ಬಾಗಿಲು, ನವಪಲ್ಲವ ಮುಂತಾದ ಕವನಗಳು ಹೊರಬಂದಿವೆ. ``ಮಲ್ಲಿಗೆಯ ಮಾಲೆ" ಸಮಗ್ರ ಕವಿತೆಯ ಸಂಕಲನ. ಸಮಗ್ರ ಸಂಕಲನ ಬಂದರೂ ಈಚೆಗೆ `ಸಂಜೆ ಹಾಡು' ಎಂಬ ಹೊಸ ಕಾವ್ಯ ಹೊರಬಂದಿದೆ.

ಕಾವ್ಯ ಇವರ ಪ್ರಮುಖ ಕೃಷಿ ಆದರೂ ಗದ್ಯದಲ್ಲೂ ಕೃಷಿ ಮಾಡಿದ್ದಾರೆ. ಮಾರಿಯಕಲ್ಲು, ಉಪವನ, ದಮಯಂತಿ ಪ್ರಮುಖ ಕೃತಿಗಳು. ಅಲ್ಲದೆ ಹಲವು ಅನುವಾದಿತ ಕೃತಿಗಳೂ ಬಂದಿವೆ. ಮೋಹನ ಮಾಲೆ, ನನ್ನ ಕನಸಿನ ಭಾರತ, ಪ್ರಪಂಚದ ಬಾಲ್ಯದಲ್ಲಿ, ಮೀಡಿಯಾ, ಸುಬ್ರಮಣ್ಯ ಭಾರತಿ, ಮಾಯಾಶಂಖ ಮತ್ತು ಇತರ ಕತೆಗಳು, ಅನುವಾದಿತ ಕೃತಿಗಳು. ೧೯೫೭ರಲ್ಲಿ `ಶಿಲಾಲತೆ'ಗೆ ರಾಜ್ಯ ಸಂಸ್ಕೃತಿ ಇಲಾಖೆ ಪ್ರಶಸ್ತಿ, ೧೯೭೭ರಲ್ಲಿ ತೆರೆದ ಬಾಗಿಲು ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಫೆಲೋಶಿಪ್ ಕೆಎಸ್‌ನ ಅವರಿಗೆ ೧೯೯೯ರಲ್ಲಿ ಕೊಟ್ಟು ಗೌರವಿಸಿದೆ.

ಕವನ ಸಂಕಲನಗಳು

  1. ಮೈಸೂರು ಮಲ್ಲಿಗೆ (೧೯೪೨).

  2. ಐರಾವತ (೧೯೪೫).

  3. ದೀಪದ ಮಲ್ಲಿ (೧೯೪೭).

  4. ಉಂಗುರ (೧೯೪೯).

  5. ಇರುವಂತಿಗೆ (೧೯೫೨).

  6. ಶಿಲಾಲತೆ (೧೯೫೮).

  7. ಮನೆಯಿಂದ ಮನೆಗೆ (೧೯೬೦).

  8. ತೆರೆದ ಬಾಗಿಲು (೧೯೭೯).

  9. ನವ ಪಲ್ಲವ (೧೯೮೯).

  10. ದುಂಡುಮಲ್ಲಿಗೆ (೧೯೯೩).

  11. ನವಿಲದನಿ (೧೯೯೯).

  12. ಸಂಜೆ ಹಾಡು (೨೦೦೦).

  13. ಕೈಮರದ ನೆಳಲಲ್ಲಿ (೨೦೦೧).

  14. ಎದೆ ತುಂಬ ನಕ್ಷತ್ರ (೨೦೦೨).

  15. ಮೌನದಲಿ ಮಾತ ಹುಡುಕುತ್ತ (೨೦೦೩).

  16. ದೀಪ ಸಾಲಿನ ನಡುವೆ ೨೦೦೩).

  17. ಮಲ್ಲಿಗೆಯ ಮಾಲೆ (೨೦೦೩) ಕೆ ಎಸ್ ನ ಅವರ ಸಮಗ್ರ ಕಾವ್ಯ.

  18. ಹಾಡು-ಹಸೆ (೨೦೦೩) ಆಯ್ದ ಕವನಗಳ ಸಂಗ್ರಹ.

ಚಿತ್ರಕೃಪೆ: http://www.kamat.com/