ಬಸವಣ್ಣನವರ ವಚನಗಳು - ಸುನಾಥ

ಹೆಚ್ಚಿನ ಓದಿಗೆ: http://sallaap.blogspot.com/2009/01/blog-post_15.html

ವಿಚಾರಕ್ರಾಂತಿ, ಆಚಾರಕ್ರಾಂತಿ ಇವು ಕಲ್ಯಾಣದ ಶಿವಶರಣರ ಪ್ರಮುಖ ಧ್ಯೇಯಗಳಾಗಿದ್ದವು.

ಈ ಧ್ಯೇಯಗಳ ಸಾಧನೆಯ ಜೊತೆಜೊತೆಗೇ ಕನ್ನಡ ಭಾಷೆಯೂ ಸಹ ಶರಣರ ವಚನಗಳಿಂದಾಗಿ ಹೊಸ ಪ್ರಭೆಯನ್ನು ಪಡೆಯಿತು.

ಶರಣರ ಮುಖ್ಯ ಧ್ಯೇಯದ ಎದುರಿಗೆ ಇದು ಒಂದು ತರಹದ ‘ಉಪ ಉತ್ಪನ್ನ’.

ಹೀಗಾಗಿ, ಬಸವಣ್ಣನವರಿಗೆ, ಪ್ರಭುದೇವರಿಗೆ ಅಥವಾ ಅಕ್ಕಮಹಾದೇವಿಗೆ ‘ಶ್ರೇಷ್ಠ ಸಾಹಿತಿಗಳು’ ಎಂದು ಕರೆಯಲು ನಾವು ಹಿಂಜರಿಯುತ್ತೇವೆ.

ಆದರೆ ಅವರು ಶ್ರೇಷ್ಠ ಸಾಹಿತಿಗಳು ಎನ್ನುವದು ಒಂದು ವಾಸ್ತವಿಕತೆ, although secondary reality.

ಅವರು ಆಧ್ಯಾತ್ಮಿಕ ಮಹಾನುಭಾವರು ಎನ್ನುವದೇ ಮೂಲ ವಾಸ್ತವಿಕತೆ, primary reality.

“ನುಡಿದರೆ ಮುತ್ತಿನ ಹಾರದಂತಿರಬೇಕು..” ಎನ್ನುವ ಬಸವಣ್ಣನವರ ಮಾತು ಅವರ ವಚನಗಳಿಗೇ ಅನ್ವಯಿಸುತ್ತದೆ.

ಬಸವಣ್ಣನವರು ತಮ್ಮ ವಚನಗಳ ಮೂಲಕ ಸೃಷ್ಟಿಸಿದ ಸುಂದರ ಪದಪುಂಜಗಳಿಗೆ ಲೆಕ್ಕವಿಲ್ಲ.

‘ಹೊನ್ನಶೂಲ’, ‘ತಲೆದಂಡ’, ‘ಲೋಕದ ಡೊಂಕು’, ‘ಮಾನಿಸಗಳ್ಳೆ’, ‘ಚಿತ್ರದ ರೂಹು’, ‘ಕರ್ತಾರನ ಕಮ್ಮಟ’ ಇವುಗಳನ್ನು ಉದಾಹರಿಸಬಹುದು.

ಸಂಸ್ಕೃತದ ಅನೇಕ ಸುಂದರ ವಾಕ್ಯಗಳನ್ನು ಅವರು ಕನ್ನಡದಲ್ಲಿ ಇನ್ನೂ ಚೆನ್ನಾಗಿ ಹೇಳಿದ್ದಾರೆ ಅಥವಾ ಅನುವಾದಿಸಿದ್ದಾರೆ.

ಉದಾಹರಣೆಗೆ ಈ ಸಂಸ್ಕೃತ ವಾಕ್ಯವನ್ನು ನೋಡಿರಿ:

“ಮಧು ತಿಷ್ಠತಿ ಜಿಹ್ವಾಗ್ರೇ, ಹೃದಯೇತು ಹಾಲಾಹಲಮ್.”

ಬಸವಣ್ಣನವರು ಇದೇ ಮಾತನ್ನು ಕನ್ನಡದಲ್ಲಿ ಹೇಳಿದ ಬಗೆ ಹೀಗಿದೆ:

ಅವಳ ಮಾತು ಬೆಲ್ಲದಂತೆ, ಮನದಲ್ಲಿದ್ದದು ನಂಜು ಕಂಡಯ್ಯಾ.”

ಮಹಾಭಾರತದಲ್ಲಿ ಧರ್ಮರಾಯನು ಹೇಳುವ,

“ಮಾತೃವತ್ ಪರದಾರೇಷು,

ಪರದ್ರವ್ಯೇಷು ಲೋಷ್ಠವತ್”

ಎನ್ನುವ ನೀತಿಬೋಧೆಯನ್ನು ಬಸವಣ್ಣನವರು ಈ ರೀತಿಯಾಗಿ ಕನ್ನಡಿಸಿದ್ದಾರೆ:

ಛಲ ಬೇಕು ಶರಣಂಗೆ ಪರಧನವನೊಲೆನೆಂಬ,

ಛಲ ಬೇಕು ಶರಣಂಗೆ ಪರಸತಿಯನೊಲೆನೆಂಬ”.

ಭಗವದ್ಗೀತೆಯು ಸ್ಥಿತಪ್ರಜ್ಞನ ಲಕ್ಷಣಗಳನ್ನು ನಾಲ್ಕು ಶ್ಲೋಕಗಳಲ್ಲಿ ಹೇಳಿದೆ.

ಬಸವಣ್ಣನವರು ಕನ್ನಡದ ಒಂದೇ ವಾಕ್ಯದಲ್ಲಿ ಅದರ ಸಾರವನ್ನು ತಿಳಿಯಾಗಿ ತಿಳಿಸಿದ್ದಾರೆ:

ಮನೆಯೊಳಗಿನ ಕಿಚ್ಚು ಮನೆಯ ಸುಟ್ಟೀತಲ್ಲದೆ, ನೆರೆಮನೆಯ ಸುಟ್ಟೀತೆ ಅಯ್ಯಾ?

ಈ ವಾಕ್ಯದಲ್ಲಿ ಕೇವಲ ಸಂದೇಶವಷ್ಟೇ ಅಲ್ಲ, ಅದಕ್ಕಿರುವ ಮನೋವೈಜ್ಞಾನಿಕ ಆಧಾರವೂ ಸಹ ವ್ಯಕ್ತವಾಗಿದೆ.

ಇದೀಗ ನಮ್ಮ ಮನೋವಿಜ್ಞಾನಿಗಳು, corporate ಗುರುಗಳು ಇದೇ ಸಂದೇಶವನ್ನು corporate executiveಗಳಿಗೆ ***** ಹೊಟೇಲುಗಳಲ್ಲಿ ವಿವರಿಸುತ್ತಾರೆ.

ಬೇರೆಯವರ ವಿಚಾರವಾಗಿ ನಮ್ಮ ಮನದಲ್ಲಿ ಸಿಟ್ಟು, ಸೆಡವು, ಹತಾಶೆ ಉಳಿದುಕೊಂಡರೆ, acidity, BP, ಇವೆಲ್ಲ ಅಗುವದು ನಮಗೇ ಹೊರತು ಅವರಿಗಲ್ಲ ಎನ್ನುವ ಸಂದೇಶವನ್ನು ಬಸವಣ್ಣನವರು ಒಂದೇ ವಾಕ್ಯದಲ್ಲಿ ಮನಗಾಣಿಸಿದ್ದಾರೆ.

ಯಾವುದೇ ಒಂದು ಸಂದೇಶವನ್ನು ಬಸವಣ್ಣನವರಂತೆ compact ಆಗಿ ಹೇಳಿದವರು ಬಹುಶಃ ಯಾರೂ ಇರಲಿಕ್ಕಿಲ್ಲ.

ಉದಾಹರಣೆಗೆ ಈ ವಚನ ನೋಡಿರಿ:

“ಕರಿ ಘನ, ಅಂಕುಶ ಕಿರಿದೆನ್ನಬಹುದೆ? ಬಾರದಯ್ಯಾ

ಗಿರಿ ಘನ, ವಜ್ರ ಕಿರಿದೆನ್ನಬಹುದೆ? ಬಾರದಯ್ಯಾ

ತಮಂಧ ಘನ, ಜ್ಯೋತಿ ಕಿರಿದೆನ್ನಬಹುದೆ? ಬಾರದಯ್ಯಾ

ಮರಹು ಘನ, ನಿಮ್ಮ ನೆನೆವ ಮನ ಕಿರಿದೆನ್ನಬಹುದೆ?

ಬಾರದಯ್ಯಾ ಕೂಡಲಸಂಗಮ ದೇವಾ”

ಈ ವಚನವನ್ನು ನೋಡಿದಾಗ ನನಗೆ ಅಲೆಗ್ಝಾಂಡರ

ಸೋಲ್ಝೆನಿತ್ಸನ್ನನ ನಾಟಕದ ಶೀರ್ಷಿಕೆ ನೆನಪಾಗುತ್ತದೆ: “Candle in the wind”.

Candle in the wind ಅಂದರೆ ಸಂಕಷ್ಟವನ್ನು ಎದುರಿಸುತ್ತಿರುವ human spirit ಎಂದು ಸೋಲ್ಝೆನಿತ್ಸನ್ನನ ಮತ.

'ಜ್ಯೋತಿ' ಎಂದು ಬಸವಣ್ಣನವರು ಹೇಳುತ್ತಿರುವದು ದೇವರಲ್ಲಿಯ ನಂಬುಗೆ.

ಈ ಎರಡರಲ್ಲಿ ಯಾವುದೇ ವ್ಯತ್ಯಾಸವಿಲ್ಲ. ನಂಬುಗೆ ಅಥವಾ spirit ಇವು ಅನೇಕ ಅಡಚಣಿಗಳನ್ನು ಎದುರಿಸುತ್ತಿರಬಹುದು. ಆದರೆ ಅವುಗಳನ್ನು ರಕ್ಷಿಸಿಕೊಳ್ಳುವದು ನಮ್ಮ ಅವಶ್ಯಕತೆ.

ತನ್ನ ಕೊನೆಯ ದಿನಗಳಲ್ಲಿ ಬುದ್ಧನು ತನ್ನ ಶಿಷ್ಯರಿಗೆ ಕೆಲವೊಂದು rules of conduct ಹೇಳಿದ್ದ.

“ನೀವು ಭಿಕ್ಷೆ ಬೇಡಲು ಹೋದಾಗ ಯಾರನ್ನೂ ಬಯ್ಯಬೇಡಿ, ಸುಳ್ಳು ಹೇಳಬೇಡಿ” ಇತ್ಯಾದಿ.

ಇದೇ ಸಂದೇಶವು ಬಸವಣ್ಣನವರ ವಚನದಲ್ಲಿ ಎಷ್ಟು ಸುಂದರವಾಗಿ ಮೂಡಿದೆ ಎನ್ನುವದನ್ನು ನೋಡಬಹುದು.

“ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ,

ಅನ್ಯರಿಗೆ ಅಸಹ್ಯಪಡಬೇಡ, ಮುನಿಯಬೇಡ,

ತನ್ನ ಬಣ್ಣಿಸಬೇಡ, ಇದಿರು ಹಳಿಯಲು ಬೇಡ,

ಇದೇ ನಮ್ಮ ಕೂಡಲಸಂಗಮ ದೇವರನೊಲಿಸುವ ಪರಿ”

ಅನೇಕ ಮೂಲಗಳಿಂದ ಜ್ಞಾನಸಂಪಾದನೆ ಮಾಡಿದ ಬಸವಣ್ಣನವರು ಬುದ್ಧನ ಸಂದೇಶವನ್ನೇ ಕನ್ನಡದಲ್ಲಿ ಹೇಳಿದ್ದರೆ ಆಶ್ಚರ್ಯವಿಲ್ಲ.

ಇಂತಹ ವಚನಗಳಿಂದ ಬಸವಣ್ಣನವರು ಕೇವಲ ಸಮಾಜಸುಧಾರಣೆಯನ್ನಷ್ಟೇ ಮಾಡಲಿಲ್ಲ, ಕನ್ನಡ ನುಡಿಯ ಸೊಬಗನ್ನೂ ಸಹ ಹೆಚ್ಚಿಸಿದರು.

ಕನ್ನಡ ಸಾಹಿತ್ಯದ ಹಿರಿಯ ಪಟ್ಟ ಅವರದು.

ಆದರೆ ಅವರ ಶರಣಪಟ್ಟವು ಇದಕ್ಕಿಂತಲೂ ಎಷ್ಟೋ ದೊಡ್ಡದು.