ನಾದಲೀಲೆ.

೧.ನೀ ಹೀಂಗ ನೋಡಬ್ಯಾಡ ನನ್ನ

ಪುತ್ರಶೋಕ ನಿರಂತರ ಎಂದು ಹೇಳುತ್ತಾರೆ. ಬೇಂದ್ರೆ ದಂಪತಿಗಳು ತಮಗೆ ಜನಿಸಿದ ೯ ಮಕ್ಕಳಲ್ಲಿ ೬ ಮಕ್ಕಳನ್ನು ಕಳೆದುಕೊಂಡ ದುರ್ದೈವಿಗಳು. ಮೇಲಿಂದ ಮೇಲೆ ಎರಗಿದ ಈ ಆಘಾತಗಳನ್ನು ಸಹಿಸಿದ ಬೇಂದ್ರೆಯವರು ತಮ್ಮ ಸಹೃದಯ ಓದುಗರಿಗೆ ಹೇಳುವದು ಹೀಗೆ:

“ಎನ್ನ ಪಾಡೆನೆಗಿರಲಿ ಅದರ ಹಾಡನ್ನಷ್ಟೆ

ನೀಡುವೆನು ರಸಿಕ ನಿನಗೆ !

ಕಲ್ಲುಸಕ್ಕರೆಯಂಥ ನಿನ್ನೆದೆಯು ಕರಗಿದರೆ

ಆ ಸವಿಯ ಹಣಿಸು ನನಗೆ !”

………………………………………………………………………

“ ನೀ ಹೀಂಗ ನೋಡಬ್ಯಾಡ ನನ್ನ ” ಕವನದಲ್ಲಿಯೂ ಸಹ ಶಿಶುವಿನ ಮರಣದ ಸಂದರ್ಭ ವರ್ಣಿತವಾಗಿದೆ. ಅದನ್ನು ಕವಿ ಹೀಗೆ ಸೂಚಿಸಿದ್ದಾರೆ:

“ ಆಪತ್ಯಗಳನ್ನು ಕಳೆದುಕೊಂಡ ಸತಿಯೊಬ್ಬಳು ಆಸನ್ನಮರಣ ಶಿಶುವನ್ನು ನೋಡಲು ಬಂದ ಪತಿಯನ್ನು ಕುರಿತು ಅನಿರ್ವಚನೀಯ ದುಃಖದಿಂದ ಅರ್ಥಪೂರ್ಣವಾಗಿ ನೋಡಿದಾಗ, ಅವನ ಎದೆಯಲ್ಲಿ ಹುಟ್ಟಿದ ಹಾಡು ಇದು…”

ಬೇಂದ್ರೆಯವರು ಈ ಕಾಲ್ಪನಿಕ ಕವನವನ್ನು ಬರೆದ ಬಳಿಕ, ಅವರು ನಿಜಜೀವನದಲ್ಲಿಯೂ ಇಂತಹದೇ ಆಘಾತವನ್ನು ಎದುರಿಸಿದರು. ಅವರ ಒಂದೂವರೆ ತಿಂಗಳ ಹೆಣ್ಣುಕೂಸು ‘ಲಲಿತಾ’ ಮರಣವನ್ನಪ್ಪಿದಳು. ಆ ಸಂದರ್ಭದಲ್ಲಿ ಅವರು ಬರೆದ ಶೋಕಗೀತೆ ‘ಲಲಿತಾ’.

………………………………………………………………

“ ನೀ ಹೀಂಗ ನೋಡಬ್ಯಾಡ ನನ್ನ ” ಕವನದ ಪೂರ್ತಿಪಾಠ ಹೀಗಿದೆ :

ನೀ ಹೀಂಗ ನೋಡಬ್ಯಾಡ ನನ್ನ

ನೀ ಹೀಂಗ ನೋಡಿದರ ನನ್ನ,

ತಿರುಗಿ ನಾ ಹ್ಯಾಂಗ ನೋಡಲೇ ನಿನ್ನ ? ||ಪಲ್ಲ||

ಸಂಸಾರಸಾಗರದಾಗ, ಲೆಕ್ಕವಿರದಷ್ಟು ದುಃಖದ ಬಂಡಿ

ನಾ ಬಲ್ಲೆ ನನಗ ಗೊತ್ತಿಲ್ಲದಿದ್ದರು ಎಲ್ಲಿ ಆಚೆಯಾ ದಂಡಿ

ಮಲಗಿರುವ ಕೂಸು ಮಲಗಿರಲಿ ಅಲ್ಲಿ, ಮುಂದಿನದು ದೇವರ ಚಿತ್ತ

ನಾ ತಡೀಲಾರೆ ಅದು, ಯಾಕ ನೋಡತೀ ಮತ್ತ ಮತ್ತ ನೀ ಇತ್ತ ?

ತಂಬಲs ಹಾಕದs ತುಂಬ ಕೆಂಪು ಗಿಣಿಗಡಕ ಹಣ್ಣಿನ ಹಾಂಗ

ಇದ್ದಂಥ ತುಟಿಯ ಬಣ್ಣೆತ್ತ ಹಾರಿತು ? ಯಾವ ಗಾಳಿಗೆ ಹೀಂಗ

ಈ ಗದ್ದ, ಗಲ್ಲ, ಹಣಿ, ಕಣ್ಣು, ಕಂಡು ಮಾರೀಗೆ ಮಾರಿsಯಾ ರೀತಿ

ಸಾವನs ತನ್ನ ಕೈ ಸವರಿತಿಲ್ಲಿ, ಬಂತೆನಗ ಇಲ್ಲದ ಭೀತಿ.

ಧಾರೀಲೆ ನೆನೆದ ಕೈ ಹಿಡಿದೆ ನೀನು, ತಣ್ಣsಗ ಅಂತನ ತಿಳಿದು

ಬಿಡಲೊಲ್ಲಿ ಇನ್ನುನೂ, ಬೂದಿ ಮುಚ್ಚಿದ ಕೆಂಡ ಇದಂತ ಹೊಳೆದು

ಮುಗಿಲsನ ಕಪ್ಪರಿಸಿ ನೆಲಕ ಬಿದ್ದರ ನೆಲಕ ನೆಲಿ ಎಲ್ಲಿನ್ನs

ಆ ಗಾದಿ ಮಾತು ನಂಬಿ, ನಾನು ದೇವರಂತ ತಿಳಿದಿಯೇನ ನೀ ನನ್ನ ?

ಇಬ್ಬನ್ನಿ ತೊಳೆದರೂ ಹಾಲು ಮೆತ್ತಿದಾ ಕವಳಿಕಂಟಿಯಾ ಹಣ್ಣು

ಹೊಳೆಹೊಳೆವ ಹಾಂಗ ಕಣ್ಣಿರುವ ಹೆಣ್ಣ, ಹೇಳು ನಿನ್ನವೇನ ಈ ಕಣ್ಣು?

ದಿಗಿಲಾಗಿ ಅನ್ನತದ ಜೀವ ನಿನ್ನ ಕಣ್ಣಾರೆ ಕಂಡ ಒಮ್ಮಿಗಿಲs

ಹುಣ್ಣವೀ ಚಂದಿರನ ಹೆಣಾ ಬಂತೊ ಮುಗಿಲಾಗ ತೇಲತs ಹಗಲ !

ನಿನ ಕಣ್ಣಿನ್ಯಾಗ ಕಾಲೂರಿ ಮಳೆಯು, ನಡನಡಕ ಹುಚ್ಚನಗಿ ಯಾಕ

ಹನಿ ಒಡೆಯಲಿಕ್ಕೆ ಬಂದಂಥ ಮೋಡ ತಡಧಾಂಗ ಗಾಳಿಯ ನೆವಕ

ಅತ್ತಾರೆ ಅತ್ತು ಬಿಡು, ಹೊನಲು ಬರಲಿ, ನಕ್ಕ್ಯಾಕ ಮರಸತೀ ದುಕ್ಕ ?

ಎವೆ ಬಡಸಿ ಕೆಡವು, ಬಿರಿಗಣ್ಣು ಬ್ಯಾಡ, ತುಟಿಕಚ್ಚಿ ಹಿಡಿಯದಿರು ಬಿಕ್ಕ.

………………………………………………………………..

ಕಣ್ಣೆದುರಿನಲ್ಲಿಯೇ ಕೊನೆಯುಸಿರನ್ನು ಎಳೆಯುತ್ತಿರುವ ಕೂಸನ್ನು ತನ್ನ ತೊಡೆಯ ಮೇಲಿರಿಸಿಕೊಂಡಿರುವ ತಾಯಿ ತನ್ನ ಪತಿಯ ಕಡೆಗೆ ನೋಡುತ್ತಾಳೆ. ಆ ನೋಟದಲ್ಲಿ ಏನೆಲ್ಲ ಭಾವನೆಗಳು ಅಡಗಿವೆ? ಸಾಯುತ್ತಿರುವ ಕೂಸಿನ ಬಗೆಗಿನ ದುಃಖ, ತನ್ನ ಪತಿ ಏನಾದರೂ ಮಾಡಿ ಆ ದುರಂತವನ್ನು ತಪ್ಪಿಸಬಹುದೇನೊ ಎನ್ನುವ ಆಸೆ, ತನ್ನ ಹಾಗೂ ತನ್ನ ಪತಿಯ ಅಸಹಾಯಕತೆ ಹಾಗು ಅವನ ದುಃಖದ ಅರಿವು ಇವೆಲ್ಲ ಅವಳ ನೋಟದಲ್ಲಿವೆ.

ಕೂಸು ಜೀವ ಬಿಡುತ್ತಿರುವ ಈ ಗಳಿಗೆಯಲ್ಲಿ, ಅವಳ ಪತಿಯೂ ಅಸಹಾಯಕ. ಅವಳ ಶೋಕದ ಉಪಶಮನಕ್ಕಾಗಿ, ಅವಳ ಕೂಸನ್ನು ಬದುಕಿಸುವ ಭರವಸೆ ಕೊಡಲು ಗಂಡನಾದ ಆತ ಏನೂ ಮಾಡಲಾರ. ಅವಳ ನೋಟವನ್ನು ಎದುರಿಸಲಾರ. ಇದು ಪತಿಯಾದವನ ಸಂಕಟದ ಪರಾಕಾಷ್ಠೆ.

“ ನೀನು ಈ ರೀತಿಯಾಗಿ ನನ್ನನ್ನು ನೋಡಿದರೆ, ನಾನು ನಿನ್ನ ನೋಟವನ್ನು ಎದುರಿಸಲಾರೆ, ನಿನ್ನ ಕಣ್ಣಲ್ಲಿ ಕಣ್ಣಿಡಲಾರೆ, ನಿನಗೆ ಸಾಂತ್ವನ ಹೇಳಲಿಕ್ಕಾದರೂ ನಿನ್ನ ಮುಖ ಹೇಗೆ ನೋಡಲಿ ?” ಎನ್ನುವ ಭಾವನೆ ಕವನದ ಪಲ್ಲದಲ್ಲಿ ಮೂಡಿದೆ :

“ನೀ ಹೀಂಗ ನೋಡಬ್ಯಾಡ ನನ್ನ

ನೀ ಹೀಂಗ ನೋಡಿದರ ನನ್ನ,

ತಿರುಗಿ ನಾ ಹ್ಯಾಂಗ ನೋಡಲೇ ನಿನ್ನ ?”

ಗಂಡನ ಅಸಹಾಯಕತೆ ಏನೇ ಇದ್ದರೂ, ಹೆಂಡತಿಗೆ ಅವನೇ ಆಸರೆ ಅಲ್ಲವೆ? ಇವನು ತನ್ನ ನೋಟವನ್ನು ಹೊರಳಿಸಿದರೂ ಸಹ ಅವಳು ಮತ್ತೆ ಮತ್ತೆ ಇವನ ಕಡೆಗೆ ನೋಡುತ್ತಾಳೆ. ಅದಕ್ಕವನು ತನ್ನ ಅಸಹಾಯಕತೆಯನ್ನು ಅವಳೆದುರಿಗೆ ವ್ಯಕ್ತಪಡಿಸಲೇ ಬೇಕು, ಅವಳಿಗೆ ಸಮಾಧಾನ ಹೇಳಲೇ ಬೇಕು.

“ಈ ಸಂಸಾರದಲ್ಲಿ ಎಣಿಸಲಾರದಷ್ಟು ದುಃಖವಿದೆ. ಇದನ್ನು ಸಹಿಸುವದು ಅನಿವಾರ್ಯ. ಈ ಸಂಸಾರವೆನ್ನುವ ದುಃಖಸಾಗರದ ಆಚೆಯ ದಂಡೆ ಎಲ್ಲಿದೆಯೊ ತನಗೂ ತಿಳಿಯದು. ತಮ್ಮೆಲ್ಲಾ ಭಾರವನ್ನು ದೇವರ ಮೇಲೆ ಹೊರಿಸಿ ಬಿಡೋಣ. ಈ ಕೂಸು ಸಾಯುವದೇ ದೈವೇಚ್ಛೆಯಾಗಿದ್ದರೆ, ಅದನ್ನು ತಡೆಯುವದು ತನ್ನಿಂದ ಸಾಧ್ಯವೆ? ಸುಮ್ಮನೆ ಯಾಕೆ ನನ್ನ ಕಡೆಗೆ ಆಸೆಯಿಂದ, ಸಂಕಟದಿಂದ ನೋಡುತ್ತೀ?” ಎನ್ನುವ ಭಾವವು ಮೊದಲನೆಯ ನುಡಿಯಲ್ಲಿ ವ್ಯಕ್ತವಾಗಿದೆ.

“ಸಂಸಾರಸಾಗರದಾಗ, ಲೆಕ್ಕವಿರದಷ್ಟು ದುಃಖದ ಬಂಡಿ

ನಾ ಬಲ್ಲೆ ನನಗ ಗೊತ್ತಿಲ್ಲದಿದ್ದರೂ ಎಲ್ಲಿ ಆಚೆಯಾ ದಂಡಿ

ಮಲಗಿರುವ ಕೂಸು ಮಲಗಿರಲಿ ಅಲ್ಲಿ, ಮುಂದಿನದು ದೇವರ ಚಿತ್ತ

ನಾ ತಡೀಲಾರೆ ಅದು, ಯಾಕ ನೋಡತೀ ಮತ್ತ ಮತ್ತ ನೀ ಇತ್ತ ?”

ತಾನೇನೊ ಅವಳಿಗೆ ಸಾಂತ್ವನವನ್ನು ಹೇಳಿದೆ. ಆದರೆ ಶೋಕತಪ್ತಳಾದ ಅವಳನ್ನು ಇಂತಹ ಮಾತುಗಳಿಂದ ಸಂತೈಸಬಹುದೆ? ಅವಳ ಪರಿಸ್ಥಿತಿ ಹೇಗಿದೆ?

ಮನಸ್ಸು ವ್ಯಸ್ತವಾದಾಗ ದೇಹದ ಚೆಲುವೂ ಅಸ್ತವಾಗುತ್ತದೆ.

ಕೆಂಪು ಚುಂಚು ಇರುವ ಗಿಳಿ, ಕೆಂಪು ಹಣ್ಣನ್ನು ಅರ್ಧ ತಿಂದಾಗ ಕಾಣುವ ಕೆಂಬಣ್ಣದ ಓಕುಳಿಯಂತೆ ಇವಳ ತುಟಿಗಳು ಕೆಂಪಾಗಿ ಇರುತ್ತಿದ್ದವು. ತುಟಿಗಳನ್ನು ಕೆಂಪಾಗಿಸಲು ಅವಳಿಗೆ ತಾಂಬೂಲ ಬೇಕಾಗಿರಲಿಲ್ಲ.

ಇಂತಹ ತುಟಿಗಳು ಈಗ ಬಣ್ಣಗೆಟ್ಟಿವೆ. ಮುಖದ ಕಳೆಯೇ ಬದಲಾಗಿದೆ. ಇವಳಿಗೆ ಯಾವುದೊ ಗಾಳಿ (=evil spirit) ತಾಕಿರಬಹುದೆ? ಇವಳ ಮೋರೆಯ ಮೇಲೆ ಮಾರಿಯ (=ಭಯಾನಕ ದೇವಿಯ) ಕಳೆ ಕಾಣುತ್ತಿದೆ. ಸಾವಿನ ಕೈ ಇವಳ ಮುಖದ ಮೇಲೆ ಆಡಿತೊ ಎನ್ನುವಂತೆ ಮುಖ ರಾವು ಹೊಡೆದಿದೆ. ಅವಳ ಈ ಭಯಾನಕ ಚೆಹರೆಯನ್ನು ಕಂಡು ಗಂಡನಿಗೆ “ಮುಂದೇನು ಪರಿಸ್ಥಿತಿ ಕಾದಿದೆಯೊ?” ಎನ್ನುವ ಭಯ ಆವರಿಸುತ್ತದೆ. ಈ ಭಾವನೆಯು ಎರಡನೆಯ ನುಡಿಯಲ್ಲಿ ವ್ಯಕ್ತವಾಗಿದೆ :

“ತಂಬಲs ಹಾಕದs ತುಂಬ ಕೆಂಪು ಗಿಣಿಗಡಕ ಹಣ್ಣಿನ ಹಾಂಗ

ಇದ್ದಂಥ ತುಟಿಯ ಬಣ್ಣೆತ್ತ ಹಾರಿತು ? ಯಾವ ಗಾಳಿಗೆ ಹೀಂಗ

ಈ ಗದ್ದ, ಗಲ್ಲ, ಹಣಿ, ಕಣ್ಣು, ಕಂಡು ಮಾರೀಗೆ ಮಾರಿsಯಾ ರೀತಿ

ಸಾವನs ತನ್ನ ಕೈ ಸವರಿತಿಲ್ಲಿ, ಬಂತೆನಗ ಇಲ್ಲದ ಭೀತಿ.”

ಈ ಆಘಾತಕ್ಕಿಂತ ಮೊದಲಲ್ಲಿ ಅವರ ಸಂಸಾರವು ಸರಸಮಯವಾಗಿತ್ತು ಎನ್ನುವ ಸೂಚನೆಯನ್ನು ತಾಂಬೂಲ ಹಾಗೂ ಗಿಣಿ ಕಚ್ಚಿದ ಹಣ್ಣಿನ ಮೂಲಕ ಬೇಂದ್ರೆ ನೀಡುತ್ತಾರೆ. ಆದರೆ ಆ ಸರಸಮಯ ಸಂಸಾರದಲ್ಲಿ ಶಿಶುಮರಣದ ವಿಷದ ಹನಿ ಬಿದ್ದಿದೆ.

ಅವನಿಗೆ ಈಗ self-remorse ಆವರಿಸುತ್ತದೆ. ತನ್ನ ಹೆಂಡತಿಯ ಈ ಸ್ಥಿತಿಗೆ ತಾನೇ ಕಾರಣ. ತನ್ನ ಕೈ ಹಿಡಿದದ್ದರಿಂದಲೇ ಅವಳಿಗೆ ಇಂತಹ ಸ್ಥಿತಿ ಬಂದಿದೆ. ಮದುವೆಯಾಗುವಾಗ ಅವಳಿಗೆ ಏನೆಲ್ಲ ಆಕಾಂಕ್ಷೆಗಳಿದ್ದವೊ ಏನೊ? ಮದುವೆಯಲ್ಲಿ ಧಾರೆ ಎರೆದು ಕೊಡುವಾಗ ತಾನು ಹಿಡಿದ ಕೈ ತನಗೆ ತಂಪು ನೀಡುವದು ಎಂದವಳು ಭಾವಿಸಿದ್ದಳು. ಆದರೆ ಈ ಕೈ ಬೂದಿ ಮುಚ್ಚಿದ ಕೆಂಡವಾಗಿದೆ ! ಅದು ತಿಳಿದ ಮೇಲೂ ಅವನ ಕೈಯನ್ನು ಆಕೆ ಬಿಡುತ್ತಿಲ್ಲವಲ್ಲ !

“ಧಾರೀಲೆ ನೆನೆದ ಕೈ ಹಿಡಿದೆ ನೀನು, ತಣ್ಣsಗ ಅಂತನ ತಿಳಿದು

ಬಿಡಲೊಲ್ಲಿ ಇನ್ನುನೂ, ಬೂದಿ ಮುಚ್ಚಿದ ಕೆಂಡ ಇದಂತ ಹೊಳೆದು

ಮುಗಿಲsನ ಕಪ್ಪರಿಸಿ ನೆಲಕ ಬಿದ್ದರ ನೆಲಕ ನೆಲಿ ಎಲ್ಲಿನ್ನs

ಆ ಗಾದಿ ಮಾತು ನಂಬಿ, ನಾನು ದೇವರಂತ ತಿಳಿದಿಯೇನ ನೀ ನನ್ನ ?”

ಆತ ಆಕಾಶ ,ಇವಳು ಭೂಮಿ. ಭೂಮಿಯೇ ಎಲ್ಲ ಜೀವರಿಗೂ ನೆಲೆ ಕೊಡುವದು. ಆಕಾಶವೇ ಕಪ್ಪರಿಸಿದಾಗ, ಆತನೇ ಧೃತಿಗೆಟ್ಟಾಗ, ನೆಲವೇ ಕುಸಿದು ಹೋಗುತ್ತದೆ. ಆಕಾಶ ಕುಸಿಯಲಾರದು ಎನ್ನುವ ನೀತಿಯಲ್ಲಿ ನಂಬಿಕೆ ಇಟ್ಟ ಈ ಹುಚ್ಚು ಹೆಣ್ಣು ಆತನೇ ತನ್ನ ಬಾಳಿನ ಭರವಸೆ ಎಂದು ತಿಳಿದಿದ್ದಾಳೆಯೆ? ಅವಳಿಗೆ ಭರವಸೆ ಕೊಡಲಾದರೂ ಏನು ಉಳಿದಿದೆ ಅವಳಲ್ಲಿ ?

ಅವಳಲ್ಲಿರುವ ಬಾಳು ಬತ್ತಿ ಹೋಗಿದೆ. ಅವಳ ಕಣ್ಣುಗಳ ಹೊಳಪು ಮಾಸಿ ಹೋಗಿದೆ.

ಅವಳನ್ನು ನೋಡಿದರೆ ಅಲ್ಲಿ ಕಾಣುವದು ಒಂದು ನಿರ್ಜೀವ ದೇಹ.

“ಇಬ್ಬನ್ನಿ ತೊಳೆದರೂ ಹಾಲು ಮೆತ್ತಿದಾ ಕವಳಿಕಂಟಿಯಾ ಹಣ್ಣು

ಹೊಳೆಹೊಳೆವ ಹಾಂಗ ಕಣ್ಣಿರುವ ಹೆಣ್ಣ, ಹೇಳು ನಿನ್ನವೇನ ಈ ಕಣ್ಣು?

ದಿಗಿಲಾಗಿ ಅನ್ನತದ ಜೀವ ನಿನ್ನ ಕಣ್ಣಾರೆ ಕಂಡ ಒಮ್ಮಿಗಿಲs

ಹುಣ್ಣವೀ ಚಂದಿರನ ಹೆಣಾ ಬಂತೊ ಮುಗಿಲಾಗ ತೇಲತs ಹಗಲ !”

ಕನ್ನಡ ಕಾವ್ಯದಲ್ಲಿಯೇ ಅತ್ಯಂತ ಸಂವೇದನಾಪೂರ್ಣವಾದ ಎರಡು ಉಪಮೆಗಳನ್ನು ಈ ನುಡಿಯಲ್ಲಿ ನೋಡುತ್ತೇವೆ. ಕವಳಿ ಹಣ್ಣುಗಳನ್ನು ನೋಡಿದವರು (--ಈಗ ಕವಳಿ ಹಣ್ಣುಗಳೇ ಅಪರೂಪವಾಗಿವೆ--) ಅವು ಎಷ್ಟು ನೀಲಿಕಪ್ಪಾಗಿರುತ್ತವೆ ಎನ್ನುವದನ್ನು ಬಲ್ಲರು. ಕವಳಿಕಂಟಿಯ ದಪ್ಪವಾದ ಬಿಳಿ ಹಾಲು ಈ ಹಣ್ಣುಗಳಿಗೆ ಅಂಟಿಕೊಂಡಿರುತ್ತದೆ. ಚಳಿಗಾಲದಲ್ಲಿ ಈ ಕವಳಿ ಹಣ್ಣುಗಳ ಮೇಲೆ ಇಬ್ಬನಿ ಸಂಗ್ರಹವಾಗುವದರಿಂದ, ಹಣ್ಣುಗಳು ತೊಳೆದಂತಾಗಿರುತ್ತವೆ. ಇವಳ ಕಣ್ಣುಗಳ ಬಿಳಿಭಾಗ ಆ ಹಾಲಿನಂತೆ ; ಇವಳ ಕಣ್ಣ ಪಾಪೆಗಳು ಅಷ್ಟು ನೀಲಿಕಪ್ಪು ; ಕಣ್ಣುಗಳ ತೇಜ ಇಬ್ಬನಿಯ ಹೊಳಪಿನಂತೆ ಎಂದು ಆತನಿಗೆ ತೋರುತ್ತಿತ್ತು. ಆದರೆ ಈಗ ಆ ಕಣ್ಣುಗಳಲ್ಲಿಯ ಜೀವವೇ ಹೋಗಿ ಬಿಟ್ಟಿದೆ. ಈ ನಿಸ್ತೇಜ ಕಣ್ಣುಗಳು ಅವಳ ಕಣ್ಣುಗಳೆ ಎಂದು ಆತ ಕೇಳುತ್ತಾನೆ.

ಮೊದಲಲ್ಲಿ ಅವಳ ಮುಖವು ಹುಣ್ಣಿವೆಯ ಚಂದಿರನ ಹಾಗೆ ಪ್ರಕಾಶಮಾನವಾಗಿತ್ತು.

ಈಗ ನೋಡಿದರೆ ಅವನಿಗೆ ಅಲ್ಲಿ ಕಾಣುವದು ಪ್ರೇತಕಳೆ:

“ಹುಣ್ಣವೀ ಚಂದಿರನ ಹೆಣಾ ಬಂತೊ ಮುಗಿಲಾಗ ತೇಲತs ಹಗಲ !”

ಓದುಗನಲ್ಲಿ ದಿಗ್ಭ್ರಮೆ ಹುಟ್ಟಿಸುವ ಉಪಮೆ ಇದು. ಹುಣ್ಣಿಮೆಯ ಚಂದ್ರ ಹಗಲಿನಲ್ಲಿ ಕಾಣುವದಿಲ್ಲ. ಕಂಡರೆ ಅದು ಅನೈಸರ್ಗಿಕ ; ಅದು ಚಂದ್ರನ ಹೆಣ. ಅವನ ಹೆಂಡತಿಯೂ ಸಹ ಮಾನಸಿಕವಾಗಿ ಹೆಣವೇ ಆಗಿದ್ದಾಳೆ. ಅವಳ ಮುಖವು ಈಗ ಹಗಲಿನಲ್ಲಿ ತೇಲಿದ ಚಂದ್ರನ ಹೆಣದಂತೆ ಕಾಣುತ್ತಿದೆ.

ಸಾವಿನ ಎದುರಿಗೆ ಇಬ್ಬರೂ ಅಸಹಾಯಕರು. ಇಬ್ಬರಿಗೂ ಇದರ ಅರಿವಾಗುತ್ತಿದೆ. ಒಬ್ಬರನ್ನೊಬ್ಬರು ಸಮಾಧಾನಿಸಲು ಏನೇನೊ ಪ್ರಯತ್ನಿಸುತ್ತಿದ್ದಾರೆ. ಅವಳು ತನ್ನ ದುಃಖವನ್ನು ಹತ್ತಿಕ್ಕಿ ಇವನಿಗೆ ಸಾಂತ್ವನ ನೀಡಲು ಬಯಸುತ್ತಾಳೆ. ಇವನನ್ನು ನೋಡಿ, ನಕ್ಕಂತೆ ಮಾಡಿ, ತನ್ನ ದುಃಖವನ್ನು ಮರೆಮಾಚಲು ಪ್ರಯತ್ನಿಸುತ್ತಿದ್ದಾಳೆ. ಆದರೆ ಅದು ಹುಚ್ಚು ಪ್ರಯತ್ನ , ಹುಚ್ಚರ ಪ್ರಯತ್ನ.

ಅವಳ ಒಳಗೆ ತುಂಬಿಕೊಂಡ ಶೋಕ ಹೊರಗೆ ಬರಬೇಕು.

ಶುಷ್ಕ ಸಾಂತ್ವನ ನೀಡಿದ ಆತ ಈಗ “ಸಮಾಧಾನದ ಈ ಸುಳ್ಳು ರೂಪ ಸಾಕು; ಅತ್ತು ಬಿಡು, ದುಃಖವನ್ನು ಹೊರಹಾಕು” ಎಂದು ಹೇಳುತ್ತಾನೆ :

“ನಿನ ಕಣ್ಣಿನ್ಯಾಗ ಕಾಲೂರಿ ಮಳೆಯು, ನಡನಡಕ ಹುಚ್ಚನಗಿ ಯಾಕ

ಹನಿ ಒಡೆಯಲಿಕ್ಕೆ ಬಂದಂಥ ಮೋಡ ತಡಧಾಂಗ ಗಾಳಿಯ ನೆವಕ

ಅತ್ತಾರೆ ಅತ್ತು ಬಿಡು, ಹೊನಲು ಬರಲಿ, ನಕ್ಕ್ಯಾಕ ಮರಸತೀ ದುಕ್ಕ ?

ಎವೆ ಬಡಸಿ ಕೆಡವು, ಬಿರಿಗಣ್ಣು ಬ್ಯಾಡ, ತುಟಿಕಚ್ಚಿ ಹಿಡಿಯದಿರು ಬಿಕ್ಕ.”

ಕಣ್ಣೀರ-ಮಳೆ ಹೊಡೆಯಲು ಸಿದ್ಧವಾಗಿ ನಿಂತಿದೆ. ಈಗೋ ಇನ್ನೊಂದು ಕ್ಷಣಕ್ಕೊ ಅದು ಸುರಿಯಬೇಕು. ಅವನಿಗೆ ತನ್ನ ಶೋಕ ತಿಳಿಯದಿರಲು ಅವಳು ಅದನ್ನು ತಡೆ ಹಿಡಿದಿದ್ದಾಳೆ, ನಡುನಡುವೆ ಹುಚ್ಚುನಗೆ ನಗುತ್ತಾಳೆ. ಆದರೆ ಅದು ತಿಳಿಯದಿರಲು ಆತ ಹುಚ್ಚನೆ?

“ನಿನ್ನ ದುಃಖ ಹೊರ ಬರಲಿ, ಪ್ರವಾಹ ಬಂದಂತೆ ಬರಲಿ ; ರೆಪ್ಪೆ ಬಡಿದರೆ ಕಣ್ಣೀರು ಹೊರಗೆ ಬಂದೀತೆಂದು ರೆಪ್ಪೆ ಬಡಿಯದೆ ಇದ್ದೀಯಾ. ಆದರೆ ನಿನ್ನ ಈ ಬಿರಿಗಣ್ಣು ನನ್ನನ್ನು ಹೆದರಿಸುತ್ತದೆ. ನಿನ್ನ ಅಳುವನ್ನು ಹೊರಗೆ ಹಾಕು, ತುಟಿಕಚ್ಚಿ ಹಿಡಿದು ಅದನ್ನು ಒಳಗೇ ಇಟ್ಟುಕೊಳ್ಳಬೇಡ” ಎಂದು ಆತ ಹೇಳುತ್ತಾನೆ.

ತನ್ನ ಕೈಹಿಡಿದಾಕೆಗೆ ಆತ ಬೇರೇನು ಸಮಾಧಾನ ಹೇಳಬಲ್ಲ?

........................................

ವಾಲ್ಮೀಕಿಗಾದ ದುಃಖದಿಂದ “ರಾಮಾಯಣ” ಮಹಾಕಾವ್ಯ ಹುಟ್ಟಿತು. ಭರ್ತೃಹರಿಯು ತನ್ನ ಉತ್ತರ ರಾಮಾಯಣ ನಾಟಕದಲ್ಲಿ “ದುಃಖವನ್ನು ಸಹಿಸಲೆಂದೇ ರಾಮನಲ್ಲಿ ಚೈತನ್ಯವನ್ನು ತುಂಬಲಾಯಿತು” ಎಂದು ಹೇಳಿದ್ದಾನೆ. ಬೇಂದ್ರೆಯವರು ಸಹ ತಮ್ಮೆಲ್ಲ ದುಃಖಗಳಲ್ಲಿ ಬೆಂದು, ತಮ್ಮ ಪಾಡನ್ನು ಹಾಡಾಗಿಸಿ ನಮಗೆ ನೀಡಿದ್ದಾರೆ, “ಸಖೀಗೀತ”ದಲ್ಲಿ ಅವರು ಹೇಳುವಂತೆ:

“ ಇರುಳು-ತಾರೆಗಳಂತೆ ಬೆಳಕೊಂದು ಮಿನುಗುವದು

ಕಳೆದ ದುಃಖಗಳಲ್ಲಿ ನೆನೆದಂತೆಯೆ

ಪಟ್ಟ ಪಾಡೆಲ್ಲವು ಹುಟ್ಟು-ಹಾಡಾಗುತ

ಹೊಸವಾಗಿ ರಸವಾಗಿ ಹರಿಯುತಿವೆ.”

ಹೆಚ್ಚಿನ ಓದಿಗೆ :http://sallaap.blogspot.com/2008/08/blog-post_20.html

೨.ಅನಂತ ಪ್ರಣಯ

ನಿಸರ್ಗಪ್ರೇಮವು ನವೋದಯ ಕಾವ್ಯದ ಪ್ರಧಾನ ಲಕ್ಷಣವಾಗಿದೆ. ನಿಸರ್ಗಗೀತೆಗಳನ್ನು ನೇರವಾಗಿ ಬರೆಯದಂತಹ ನವೋದಯ ಕವಿಗಳ ಕವನಗಳಲ್ಲಿ ಸಹ, ನಿಸರ್ಗವರ್ಣನೆ backdrop ಆಗಿ ಬಂದೇ ಬಂದಿದೆ. ಪ್ರಕೃತಿಯ ಚೆಲುವನ್ನು ವರ್ಣಿಸಿದ ನವೋದಯ ಕವಿಗಳಲ್ಲಿ ಬೇಂದ್ರೆ ಅಗ್ರಸ್ಥಾನವನ್ನು ಪಡೆದಿದ್ದಾರೆ. ಪ್ರಕೃತಿವರ್ಣನೆಯಲ್ಲಿ ಇವರಿಗೂ ಇತರ ಕವಿಗಳಿಗೂ ಇರುವ ವ್ಯತ್ಯಾಸವೆಂದರೆ, ಬೇಂದ್ರೆಯವರ ಕವನಗಳಲ್ಲಿ ಪ್ರಕೃತಿ ಕೇವಲ ಭೌತಿಕ ವಸ್ತುವಲ್ಲ, ಅದು ಚೈತನ್ಯದ ಒಂದು ರೂಪವಾಗಿದೆ.

ಬೇಂದ್ರೆಯವರ ಸುಪ್ರಸಿದ್ಧ ಕವನ “ಬೆಳಗು” ಇದಕ್ಕೊಂದು ಉತ್ತಮ ಉದಾಹರಣೆ. “ಶಾಂತಿರಸವೆ ಪ್ರೀತಿಯಿಂದ ಮೈದೋರಿತಣ್ಣ, ಇದು ಬರಿ ಬೆಳಗಲ್ಲೊ ಅಣ್ಣ” ಎಂದು ಹೇಳುವ ಮೂಲಕ ಬೇಂದ್ರೆಯವರು ಭೌತಿಕ ವಸ್ತುವಿನ ಹಿಂದೆ ಅಡಗಿರುವ ಅಭೌತಿಕ ಚೈತನ್ಯವನ್ನು ಓದುಗರಿಗೆ ತೋರಿಸುತ್ತಿದ್ದಾರೆ.

ಬೇಂದ್ರೆಯವರ ಮತ್ತೊಂದು ಕವನ “ಅನಂತ ಪ್ರಣಯ”ದಲ್ಲಿ, ಅವರು ಇದಕ್ಕೂ ಹತ್ತು ಹೆಜ್ಜೆ ಮುಂದೆ ಹೋಗಿದ್ದಾರೆ. ಇಲ್ಲಿ ಸೂರ್ಯ, ಚಂದ್ರ ಹಾಗು ಭೂಮಿ ಇವು ಚೈತನ್ಯದ ಭೌತಿಕ ರೂಪಗಳು. ಇಷ್ಟೇ ಅಲ್ಲ, ಈ ಚೈತನ್ಯದ ರೂಪಗಳಲ್ಲಿ ಪರಸ್ಪರ ಪ್ರೇಮಾಕರ್ಷಣೆ ಇದೆ. ಈ ಪ್ರೇಮಾಕರ್ಷಣೆಯು ಭಗವತ್ಪ್ರೇಮದ ಭಾಗವೇ ಆಗಿದೆ. ಭಗವಂತನ ಪ್ರೇಮವೇ ಸೃಷ್ಟಿರೂಪವಾಯಿತು ಎಂದು ಭಾರತೀಯ ದರ್ಶನಗಳಲ್ಲಿ ಹೇಳಲಾಗುತ್ತಿದೆ.

“ಮೇಘದೂತ”ದ ಕನ್ನಡಾನುವಾದದ ಪೀಠಿಕೆಯಲ್ಲಿ, ಬೇಂದ್ರೆಯವರು ಭಾರತೀಯ ದರ್ಶನದಲ್ಲಿ ಸೃಷ್ಟಿ ರೂಪುಗೊಂಡ ಬಗೆಯನ್ನು ವರ್ಣಿಸುತ್ತ ಹೀಗೆ ಬರೆದಿದ್ದಾರೆ:

“ ಬ್ರಹ್ಮ ಹೃದಯದಲಿ ಜನಿಸಿದಿಚ್ಛೆ ಕೊನೆಗಾಣಲೆಂದು ಬಾಳಿ

ಕಂಡ ಕಡೆಗು ಶತರೂಪೆಯಲ್ಲಿ ಮಧು-ರೂಪ-ರೂಪತಾಳಿ

ಜಗದ ತಂದೆ-ತಾಯಿಯರ ಕಂದ ಅವತರಿಸೆ ಜೀವನಾಗಿ

ಬಂತು ಪೂರ್ವದಲಿ ದೇವ-ಕಾಮವೇ ಕಾಮ-ದೇವನಾಗಿ ”

ಈ ರೀತಿಯಾಗಿ ದೇವಕಾಮವೇ ಕಾಮದೇವನಾಗಿ ರೂಪ ತಾಳಿ, ಸೃಷ್ಟಿಲೀಲೆಯಲ್ಲಿ ತೊಡಗಿದ್ದಾನೆ. ಈ ವಿಶ್ವದ ಎಲ್ಲ ಚರಾಚರ ವಸ್ತುಗಳು ಪ್ರೇಮಾಕರ್ಷಣೆಯಲ್ಲಿ ಬಂಧಿತವಾಗಿವೆ.

…………………………………………………………………

“ಅನಂತ ಪ್ರಣಯ”ವು ವಿಶ್ವವ್ಯಾಪ್ತಿಯುಳ್ಳ ತ್ರಿಕೋಣಪ್ರೇಮದ ಕತೆ. ಸೂರ್ಯ ಹಾಗು ಚಂದ್ರರು ಮಿತ್ರರು. ಚಂದ್ರನಿಗೆ ಭೂಮಿಯಲ್ಲಿ ಆಕರ್ಷಣೆ. ಆದರೆ ಭೂಮಿ ಹಾಗು ಸೂರ್ಯ ಪರಸ್ಪರ ಪ್ರಣಯಿಗಳು. ಇದೊಂದು ಕೊನೆಯಿಲ್ಲದ ಪ್ರಣಯಕತೆ. ಅಂತೆಯೇ ಈ ಕವನಕ್ಕೆ “ಅನಂತ ಪ್ರಣಯ” ಎನ್ನುವ ಶೀರ್ಷಿಕೆ ಕೊಡಲಾಗಿದೆ.

ಕವನದ ಪೂರ್ತಿಪಾಠ ಹೀಗಿದೆ:

ಉತ್ತರಧ್ರುವದಿಂ ದಕ್ಷಿಣಧ್ರುವಕೂ

ಚುಂಬಕ ಗಾಳಿಯು ಬೀಸುತಿದೆ.

ಸೂರ್ಯನ ಬಿಂಬಕೆ ಚಂದ್ರನ ಬಿಂಬವು

ರಂಬಿಸಿ ನಗೆಯಲಿ ಮೀಸುತಿದೆ.

ಭೂರಂಗಕೆ ಅಭಿಸಾರಕೆ ಕರೆಯುತ

ತಿಂಗಳು ತಿಂಗಳು ನವೆಯುತಿದೆ

ತುಂಬುತ ತುಳುಕುತ ತೀರುತ ತನ್ನೊಳು

ತಾನೇ ಸವಿಯನು ಸವಿಯುತಿದೆ.

ಭೂವನ ಕುಸುಮಿಸಿ ಪುಲಕಿಸಿ ಮರಳಿಸಿ

ಕೋಟಿ ಕೋಟಿ ಸಲ ಹೊಸಯಿಸಿತು.

ಮಿತ್ರನ ಮೈತ್ರಿಯ ಒಸಗೆ ಮಸಗದಿದೆ

ಮರುಕದ ಧಾರೆಯ ಮಸೆಯಿಸಿತು.

ಅಕ್ಷಿನಿಮೀಲನ ಮಾಡದ ನಕ್ಷ-

ತ್ರದ ಗಣ ಗಗನದಿ ಹಾರದಿದೆ

ಬಿದಿಗೆಯ ಬಿಂಬಾಧರನಲಿ ಇಂದಿಗು

ಮಿಲನದ ಚಿಹ್ನವು ತೋರದಿದೆ.

………………………………………………………………………

ಮೊದಲ ನುಡಿ:

“ಉತ್ತರಧ್ರುವದಿಂ ದಕ್ಷಿಣಧ್ರುವಕೂ

ಚುಂಬಕ ಗಾಳಿಯು ಬೀಸುತಿದೆ.

ಸೂರ್ಯನ ಬಿಂಬಕೆ ಚಂದ್ರನ ಬಿಂಬವು

ರಂಬಿಸಿ ನಗೆಯಲಿ ಮೀಸುತಿದೆ.”

ಕವನದ ಮೊದಲ ನುಡಿಯ ಮೊದಲೆರಡು ಸಾಲುಗಳಲ್ಲಿಯೇ, ಬೇಂದ್ರೆಯವರು ಭೂಮಿಯಲ್ಲಿ ತುಂಬಿರುವ ಪ್ರಣಯಭಾವದ ಗುರುತುಗಳನ್ನು ಸೂಚಿಸಿದ್ದಾರೆ.

ಭೂಮಿಯ ಉತ್ತರ ಧ್ರುವ ಹಾಗು ದಕ್ಷಿಣ ಧ್ರುವಗಳಲ್ಲಿ polar magnets ಇವೆ ಎನ್ನುವದು ಒಂದು ವೈಜ್ಞಾನಿಕ ಸತ್ಯ. ವಿರುದ್ಧ ಬಗೆಯ ಚುಂಬಕಗಳು (=magnets) ಪರಸ್ಪರ ಆಕರ್ಷಿಸುತ್ತವೆ ಎನ್ನುವದೂ ಸಹ ವೈಜ್ಞಾನಿಕ ಸತ್ಯವೇ. ಆದರೆ ಈ ವಾಸ್ತವತೆ ಬೇಂದ್ರೆಯವರ ಅನುಪಮ ಕಲ್ಪನೆಯಲ್ಲಿ ತಾಳುವ ಸುಂದರ ರೂಪವೇ ಬೇರೆ:

Magnetic force ಎನ್ನುವ ಭೌತಿಕ ಆಕರ್ಷಣೆ ಈ ಕವನದಲ್ಲಿ ಪ್ರಣಯಭಾವವಾಗಿದೆ.

ಭೂಮಿಯಲ್ಲಿರುವ ಪ್ರಣಯಭಾವವು ಜಾಗೃತವಾಗಿದ್ದಂತೆಯೇ, ಇನ್ನೆರಡು ಚೈತನ್ಯರೂಪಿಗಳಾದ ಸೂರ್ಯ ಹಾಗು ಚಂದ್ರರಲ್ಲಿಯೂ ಸಹ ಗೆಳೆತನದ ಒಲುಮೆ ಇದೆ.

“ಸೂರ್ಯನ ಬಿಂಬಕೆ ಚಂದ್ರನ ಬಿಂಬವು

ರಂಬಿಸಿ ನಗೆಯಲಿ ಮೀಸುತಿದೆ.”

ಈ ಗೆಳೆಯರಲ್ಲಿ ಒಬ್ಬನು, ಅಂದರೆ ಚಂದ್ರನು ಭೂಮಿಯಲ್ಲಿ ಪ್ರಣಯಾಸಕ್ತನಾಗಿದ್ದಾನೆ. ಭೂಮಿಗಾಗಿ ಅವನು ಹಲಬುವದನ್ನು ಬೇಂದ್ರೆಯವರು ಎರಡನೆಯ ನುಡಿಯಲ್ಲಿ ಈ ರೀತಿಯಾಗಿ ಬಣ್ಣಿಸುತ್ತಾರೆ:

“ಭೂರಂಗಕೆ ಅಭಿಸಾರಕೆ ಕರೆಯುತ

ತಿಂಗಳು ತಿಂಗಳು ನವೆಯುತಿದೆ

ತುಂಬುತ ತುಳುಕುತ ತೀರುತ ತನ್ನೊಳು

ತಾನೇ ಸವಿಯನು ಸವಿಯುತಿದೆ.”

ಚಂದ್ರನೇನೋ ಭೂಯಾಮಿನಿಯನ್ನು ಪ್ರಣಯಕ್ರೀಡೆಗೆ ಕರೆಯುತ್ತಿದ್ದಾನೆ. ಆದರೆ ಈ ಭೂಯಾಮಿನಿ ಅವನ ಯಾಚನೆಯನ್ನು ಒಪ್ಪಿಲ್ಲ. ಹೀಗಾಗಿ ಚಂದ್ರನು (=ತಿಂಗಳು), ಪ್ರತಿತಿಂಗಳೂ ಕ್ಷೀಣಿಸುತ್ತಿದ್ದಾನೆ; ಅವಳು ತನ್ನ ಬೇಟಕ್ಕೆ ಒಪ್ಪಿಕೊಳ್ಳಬಹುದೆನ್ನುವ ಆಸೆಯಲ್ಲಿ ಮತ್ತೆ ಮತ್ತೆ ಮೈತುಂಬಿಕೊಳ್ಳುತ್ತಾನೆ. ಪೂರ್ಣಿಮೆಯಂದು ತನ್ನ ಪ್ರೇಮದ ಬೆಳದಿಂಗಳನ್ನು ಹೊರಸೂಸಿ ಭೂಮಿಯ ಮೇಲೆ ತುಳುಕಿಸುತ್ತಾನೆ. ಈ ಯಾಚನೆ ಹಾಗು ಯಾತನೆಯ ಸವಿಯನ್ನು ಚಂದ್ರನು ತನ್ನೊಳಗೇ ಸವಿಯುತ್ತಿದ್ದಾನೆ.

ವಿಪ್ರಲಂಭ ಶೃಂಗಾರಕ್ಕೆ ಈ ನುಡಿಯು ಒಂದು ಅತ್ಯುತ್ತಮ ಉದಾಹರಣೆ ಎನ್ನಬಹುದು.

ಆದರೆ ಇತ್ತ ಭೂಮಿ ಹಾಗು ಸೂರ್ಯರ ಪ್ರಣಯ ಅಬಾಧಿತವಾಗಿ ಸಾಗಿದೆ.

ಭೂವನ ಕುಸುಮಿಸಿ ಪುಲಕಿಸಿ ಮರಳಿಸಿ

ಕೋಟಿ ಕೋಟಿ ಸಲ ಹೊಸಯಿಸಿತು.

ಮಿತ್ರನ ಮೈತ್ರಿಯ ಒಸಗೆ ಮಸಗದಿದೆ

ಮರುಕದ ಧಾರೆಯ ಮಸೆಯಿಸಿತು.

ಭೂಮಿಯ ಚಲನೆಯಿಂದಾಗಿ ಋತುಗಳು ಬದಲಾಗುತ್ತಿವೆ. ಪ್ರತಿ ವಸಂತಕ್ಕೂ ಭೂಮಿಯ ಮೇಲೆ ಹೂಗಳು ಮತ್ತೆ ಮತ್ತೆ ಅರಳುತ್ತವೆ. ಇದು ಎಷ್ಟು ಕೋಟಿ ವರ್ಷದಿಂದ ನಡೆದಿದೆಯೊ ಬಲ್ಲವರಾರು? ಬೇಂದ್ರೆಯವರ ಕವಿ ಕಣ್ಣಿಗೆ ಇದು ಕಾಣುವ ಬಗೆ ಬೇರೆ. ಸೂರ್ಯನ ಕಿರಣಸ್ಪರ್ಷದಿಂದ ಪುಲಕಿತಳಾದ ಭೂಮಿ ಮರಳಿ ಮರಳಿ ಕುಸುಮಿಸುತ್ತಾಳೆ; ಕೋಟಿ ಕೋಟಿ ಸಲ ಅವಳು ಹೊಸತನ ಪಡೆಯುತ್ತಾಳೆ ಎಂದು ಬೇಂದ್ರೆ ಹೇಳುತ್ತಾರೆ.

ಭೂಮಿಯ ಪ್ರಣಯವೇನೋ ನವಯೌವನದಿಂದಲೇ ತುಂಬಿದೆ. ಸೂರ್ಯನೂ ಸಹ ಅಷ್ಟೇ ಪ್ರೇಮದಿಂದ ತುಂಬಿಕೊಂಡಿದ್ದಾನೆ. ಮಿತ್ರನ (=ಸೂರ್ಯನ) ಮೈತ್ರಿಯ (=ಒಲವಿನ) ಒಸಗೆ(=ಸಂದೇಶ) ಮಸಗದಿದೆ(=ಕಳೆಗುಂದಿಲ್ಲ); ಬದಲಾಗಿ ಅದು ಹೆಚ್ಚಾಗುತ್ತಲೆ ಇದೆ. (=ಮಸೆಯಿಸಿತು.)

ಆಕಾಶದೇವತೆಗಳ ಈ ಪ್ರಣಯಕ್ಕೆ ಬೇಂದ್ರೆಯವರು ಆಕಾಶದಲ್ಲಿರುವ ನಕ್ಷತ್ರಪುಂಜಗಳನ್ನೇ ಸಾಕ್ಷಿಯಾಗಿ ಮಾಡುತ್ತಾರೆ. ಕಣ್ಣು ತೆರೆದುಕೊಂಡೇ ಇರುವ (=ಅಕ್ಷಿನಿಮೀಲನ ಮಾಡದ) ನಕ್ಷತ್ರಗಳಿವು.

ದೇವತೆಗಳು ಅಕ್ಷಿನಿಮೀಲನ ಮಾಡುವದಿಲ್ಲವೆನ್ನುವದನ್ನು ನೆನಪಿಸಿಕೊಂಡರೆ, ಈ ನಕ್ಷತ್ರಗಳೂ ಸಹ ದೇವತಾಸಮೂಹವೇ ಎನ್ನುವ ಕಲ್ಪನೆ ಬರುವದು. ಆದರೆ ಈ ತಾರಾಸಮೂಹವು ಗಗನದಲ್ಲಿ ಶೋಭಿಸುತ್ತಿರುವ ಹಾರದಂತೆ ಕಾಣುತ್ತದೆ ಎಂದು ಬೇಂದ್ರೆಯವರು ಕಲ್ಪಿಸುತ್ತಾರೆ.

ಅಕ್ಷಿನಿಮೀಲನ ಮಾಡದ ನಕ್ಷ-

ತ್ರದ ಗಣ ಗಗನದಿ ಹಾರದಿದೆ

ಬಿದಿಗೆಯ ಬಿಂಬಾಧರನಲಿ ಇಂದಿಗು

ಮಿಲನದ ಚಿಹ್ನವು ತೋರದಿದೆ.

ಇತ್ತ ಚಂದ್ರನ ಗತಿ ಏನು? ಆತ ತನ್ನ ಹಂಬಲವನ್ನು ಜೀವಂತವಾಗಿ ಇಟ್ಟುಕೊಂಡ ಭಗ್ನಪ್ರಣಯಿ.

ಅಂತೆಯೇ,

“ಬಿದಿಗೆಯ ಬಿಂಬಾಧರನಲಿ ಇಂದಿಗು

ಮಿಲನದ ಚಿಹ್ನವು ತೋರದಿದೆ”!

ಭೂಮಿ ಹಾಗು ಸೂರ್ಯರ ಕೂಟ ನಿರಂತರವಾಗಿದೆ. ಭೂಮಿಗಾಗಿ ಚಂದ್ರನ ಬೇಟ ನಿರಂತರವಾಗಿದೆ.

ಇದು ನಿರಂತರವಾದ ಅನಂತ ಪ್ರಣಯ.

ಬೇಂದ್ರೆಯವರ ಕಲ್ಪನಾಪ್ರತಿಭೆಯು ಸಮಗ್ರ ವಿಶ್ವವನ್ನೇ ಆವರಿಸಿಕೊಳ್ಳಬಲ್ಲದು ಎನ್ನುವದಕ್ಕೆ ಈ ಕವಿತೆ ಸಾಕ್ಷಿಯಾಗಿದೆ.

(ಈ ಗೀತೆಯನ್ನು ದಿವಂಗತ ಪುಟ್ಟಣ್ಣ ಕಣಗಾಲ ಅವರು ತಮ್ಮ “ಶರಪಂಜರ” ಚಲನಚಿತ್ರದಲ್ಲಿ ಬಳಸಿಕೊಂಡಿದ್ದಾರೆ.)

ಹೆಚ್ಚಿನ ಓದಿಗೆ :http://sallaap.blogspot.com/2008/08/blog-post.html

ಯುಗಾದಿಯು ಋತುಚಕ್ರದ ಆದಿಬಿಂದು. ಇದು ವಸಂತ ಋತುವಿನ, ಚೈತ್ರಮಾಸದ ಪ್ರಾರಂಭವಾಗಿದೆ. ಮನುಜನು ತನ್ನ ಬುದ್ಧಿಶಕ್ತಿಯ ಆಧಾರದಿಂದ, ಪೃಥ್ವಿ ಹಾಗು ಚಂದ್ರರ ಚಲನೆಯನ್ನು ಗುಣಿಸಿ, ಯುಗಾದಿಯ ಆರಂಭವನ್ನು ಕ್ಷಣದವರೆಗೂ ನಿರ್ಧರಿಸುತ್ತಾನೆ.

ಮನುಜನ ಹೊರತಾದ ನಿಸರ್ಗಕ್ಕೆ ಮನುಜನಂತಹ ಬುದ್ಧಿಶಕ್ತಿಗಿಂತ ಬೇರೊಂದು ರೂಪದ ಬುದ್ಧಿಶಕ್ತಿ ಇದೆ. ಮನುಜನ ಬುದ್ಧಿಶಕ್ತಿಗೆ conscious intelligence ಎಂದು ಕರೆಯಬಹುದಾದರೆ, ನಿಸರ್ಗದ ಬುದ್ಧಿಶಕ್ತಿಗೆ unconscious intelligence ಎಂದು ಕರೆಯಬಹುದು.(?) ನಿಸರ್ಗದ unconscious intelligence ಎದುರಿಗೆ ಮನುಜನ conscious intelligence ನಗಣ್ಯ. ನಿಸರ್ಗವು ಯುಗಾದಿಯನ್ನು ಗುರುತಿಸುವ ಬಗೆಯೇ ಬೇರೆ. ಅದು ಮನುಜನ ಬುದ್ಧಿಗೆ ನಿಲುಕಲಾರದು.

ಅಂಬಿಕಾತನಯದತ್ತರು ತಮ್ಮ ‘ಯುಗಾದಿ’ ಕವನದಲ್ಲಿ ಸೃಷ್ಟಿಕ್ರಮವು ಪುನರಾವರ್ತಿಸುವ ಬಗೆಯನ್ನು ಬಣ್ಣಿಸುತ್ತಿದ್ದಾರೆ. ಯುಗಾದಿಯೊಡನೆ ನಿಸರ್ಗವು ಹೊಸ ರೂಪವನ್ನು ತಾಳುವ ರೀತಿಯನ್ನು ವರ್ಣಿಸುತ್ತಾರೆ. ಅವರು ಬಣ್ಣಿಸುವ ಯುಗಾದಿಯು ಪ್ರಕೃತಿಯ ಯುಗಾದಿ, ಇದು ಮನುಜರ ಯುಗಾದಿಯಲ್ಲ.

‘ಯುಗಾದಿ’ ಕವನದ ಪೂರ್ಣಪಾಠ ಹೀಗಿದೆ:

ಯುಗಯುಗಾದಿ ಕಳೆದರೂ

ಯುಗಾದಿ ಮರಳಿ ಬರುತಿದೆ.

ಹೊಸ ವರುಷಕೆ ಹೊಸ ಹರುಷವ

ಹೊಸತು ಹೊಸತು ತರುತಿದೆ.

ಹೊಂಗೆ ಹೂವ ತೊಂಗಲಲ್ಲಿ

ಭೃಂಗದ ಸಂಗೀತ ಕೇಲಿ

ಮತ್ತೆ ಕೇಳಬರುತಿದೆ.

ಬೇವಿನ ಕಹಿ ಬಾಳಿನಲ್ಲಿ

ಹೂವಿನ ನಸುಗಂಪು ಸೂಸಿ

ಜೀವಕಳೆಯ ತರುತಿದೆ.

ಕಮ್ಮನೆ ಬಾಣಕ್ಕೆ ಸೋತು

ಜುಮ್ಮನೆ ಮಾಮರವು ಹೂತು

ಕಾಮಗಾಗಿ ಕಾದಿದೆ.

ಸುಗ್ಗಿ ಸುಗ್ಗಿ ಸುಗ್ಗಿ ಎಂದು

ಹಿಗ್ಗಿ ಗಿಳಿಯ ಸಾಲು ಸಾಲು

ತೋರಣದೊಲು ಕೋದಿದೆ.

ವರುಷಕೊಂದು ಹೊಸತು ಜನ್ಮ

ಹರುಷಕೊಂದು ಹೊಸತು ನೆಲೆಯು

ಅಖಿಲ ಜೀವಜಾತಕೆ!

ಒಂದೆ ಒಂದು ಜನ್ಮದಲ್ಲಿ

ಒಂದೆ ಬಾಲ್ಯ ಒಂದೆ ಹರೆಯ

ನಮಗದಷ್ಟೆ ಏತಕೆ?

ನಿದ್ದೆಗೊಮ್ಮೆ ನಿತ್ಯ ಮರಣ

ಎದ್ದ ಸಲ ನವೀನ ಜನನ

ನಮಗೆ ಏಕೆ ಬಾರದೊ?

ಎಲೆ ಸನತ್ಕುಮಾರದೇವ!

ಸಲೆ ಸಾಹಸಿ ಚಿರಂಜೀವ!

ನಿನಗೆ ಲೀಲೆ ಸೇರದೋ?

ಯುಗಯುಗಾದಿ ಕಳೆದರೂ

ಯುಗಾದಿ ಮರಳಿ ಬರುತಿದೆ.

ಹೊಸ ವರುಷಕೆ ಹೊಸ ಹರುಷವ

ಹೊಸತು ಹೊಸತು ತರುತಿದೆ.

ನಮ್ಮನಷ್ಟೆ ಮರೆತಿದೆ!

. . . . . . . . . .. . . . . . .. . . . . . . . .. . . . . . . . . . . . . . .

ಸೂರ್ಯ,ಭೂಮಿ ಹಾಗು ಚಂದ್ರರ ಸೃಷ್ಟಿಯಾದ ನಂತರ ಅನೇಕ ಕೋಟಿ ಯುಗಗಳು ಕಳೆದು ಹೋಗಿವೆ. ಪ್ರತಿ ವರ್ಷದ ಆದಿಯಲ್ಲಿ ನಾವು ಯುಗಾದಿ ಎಂದು ಕರೆಯುವ ದಿನವು ಪುನರಾವರ್ತನೆಗೊಳ್ಳುತ್ತದೆ. ಪ್ರತಿ ಸಲವೂ ಈ ವರ್ಷಾರಂಭವು ನಿಸರ್ಗದಲ್ಲಿ ಹೊಸ ಹರ್ಷವನ್ನು ತರುತ್ತದೆ. ಅದನ್ನು ಬೇಂದ್ರೆ ಹೀಗೆ ಹೇಳುತ್ತಾರೆ:

ಯುಗಯುಗಾದಿ ಕಳೆದರೂ

ಯುಗಾದಿ ಮರಳಿ ಬರುತಿದೆ.

ಹೊಸ ವರುಷಕೆ ಹೊಸ ಹರುಷವ

ಹೊಸತು ಹೊಸತು ತರುತಿದೆ.

ವಸಂತ ಋತುವಿನ ಪ್ರಕೃತಿಯನ್ನು ಗಮನಿಸಿ:

ಸಸ್ಯಸಂಕುಲವೆಲ್ಲ ಬಣ್ಣ ಬಣ್ಣದ,ಬಗೆಬಗೆಯ ಸುವಾಸನೆಯ ಹೊಸ ಹೂವುಗಳಿಂದ ಶೋಭಿಸತೊಡಗುತ್ತದೆ. ಪ್ರಕೃತಿಯು ಹೊಸ ಉಲ್ಲಾಸದಿಂದ ತುಂಬುತ್ತದೆ. ನಿಸರ್ಗದಲ್ಲಿ ಹೊಸ ಸಂಭ್ರಮವಿದೆ. ಈ ನವೋಲ್ಲಾಸಕ್ಕೊಂದು ಕಾರಣವಿರಬೇಕಲ್ಲವೆ? ಈ ಕಾರಣವೆಂದರೆ ನಿಸರ್ಗದ ಮೂಲ ಬಯಕೆ ಅರ್ಥಾತ್ ಹೊಸ ಸಂತಾನದ ಉತ್ಪತ್ತಿ.

ಚಿಕ್ಕ ಕೂಸನ್ನು ನೋಡಿದಾಗ ಎಲ್ಲರಿಗೂ ಆ ಕೂಸಿನ ಮೇಲೆ ಪ್ರೀತಿ ಹುಟ್ಟುತ್ತದೆ. ಈ ಕೂಸೇ ‘ಹೊಸ ಹರುಷ’! ನಿಸರ್ಗದಲ್ಲಿಯ ಸಸ್ಯಸಂಕುಲವು ಹೊಸ ಹೂವನ್ನು ಬಿಡುವುದರೊಂದಿಗೆ ಸಂತಾನೋತ್ಪತ್ತಿಯನ್ನು ಪ್ರಾರಂಭಿಸುತ್ತವೆ. ಆದುದರಿಂದ ಇದು ಹೊಸ ಹರುಷ!

ಬೇಂದ್ರೆ ಈ ಮಾತನ್ನು ಮುಂದಿನ ನುಡಿಯಲ್ಲಿ ಹೀಗೆ ಹೇಳಿದ್ದಾರೆ:

ಹೊಂಗೆ ಹೂವ ತೊಂಗಲಲ್ಲಿ

ಭೃಂಗದ ಸಂಗೀತ ಕೇಲಿ

ಮತ್ತೆ ಕೇಳಬರುತಿದೆ.

ಬೇವಿನ ಕಹಿ ಬಾಳಿನಲ್ಲಿ

ಹೂವಿನ ನಸುಗಂಪು ಸೂಸಿ

ಜೀವಕಳೆಯ ತರುತಿದೆ.

ಪರಾಗಸ್ಪರ್ಷಕ್ಕಾಗಿ ಭೃಂಗಗಳನ್ನು ಆಹ್ವಾನಿಸಲು ಹೊಂಗೆ ಹೂವು ಗೊಂಚಲು ಗೊಂಚಲಾಗಿ ಹೂವುಗಳನ್ನು ಸುರಿಸುತ್ತದೆ. ದುಂಬಿಗಳ ಗುಂಗುಂಗಾನ ಈ ವರುಷವೂ ಪುನರಾವರ್ತಿಸುತ್ತಿದೆ. ಇಡೀ ವರುಷವೆಲ್ಲ ಕಹಿಯಾದ ಎಲೆ ಹಾಗೂ ಕಹಿಯಾದ ಕಾಯಿಗಳನ್ನೇ ಇಟ್ಟುಕೊಂಡ ಬೇವಿನ ಮರವು ಯುಗಾದಿಯಂದು ನಸುಕಂಪಿನ ಹೂವನ್ನು ಪಡೆದಿದೆ. ಹೀಗಾಗಿ ಅದಕ್ಕೂ ಸಹ ಒಂದು ಹೊಸ ಜೀವಕಳೆ ಬಂದಿದೆ!

ಈ ಸಂದರ್ಭದಲ್ಲಿ ಮತ್ತೊಂದು ಮಾತನ್ನು ಗಮನಿಸಬೇಕು. ಕವಿ ಎಂದು ಯಾರನ್ನು ಕರೆಯಬೇಕು? ಚೆಲುವನ್ನು ಕಾಣುವವನೇ ಕವಿ. ಆತ ಚರಾಚರ ಸೃಷ್ಟಿಯಲ್ಲಿಯ ಎಂಥಾ ಸಣ್ಣ ಕಣದಲ್ಲಿಯ ಚೆಲುವನ್ನೂ ಗಮನಿಸಿ ಸಂತೋಷಪಡುತ್ತಾನೆ. ಬೇಂದ್ರೆಯವರಿಗೆ ತಮ್ಮ ಹಿತ್ತಲಿನ, ತಮ್ಮ ಸುತ್ತಲಿನ ಹೊಂಗೆ, ಬೇವು, ಹುಣಸಿಯ ಮರ ಎಲ್ಲವೂ ಸಂತೋಷವನ್ನು ನೀಡುತ್ತವೆ. ಹುಣಸಿಯ ಮರವನ್ನು ನೆವ ಮಾಡಿ ಅವರು ಹೇಳಿದ ಕವನದ ಪ್ರಸಿದ್ಧ ಸಾಲುಗಳು ಹೀಗಿವೆ:

“ಕವಿಗೇನು ಬೇಕs?

ಹೂತ ಹುಣಸಿಮರ ಸಾಕs!”

ವಸಂತ ಋತುವಿನ ಆದಿಯಲ್ಲಿ ಗಿಡ, ಮರ, ಬಳ್ಳಿಗಳು ಹೂವುಗಳಿಂದ ಕಂಗೊಳಿಸುವ ಕಾರಣವನ್ನು ಕವಿ ಹೀಗೆ ಹೇಳುತ್ತಾರೆ:

ಕಮ್ಮನೆ ಬಾಣಕ್ಕೆ ಸೋತು

ಜುಮ್ಮನೆ ಮಾಮರವು ಹೂತು

ಕಾಮಗಾಗಿ ಕಾದಿದೆ.

ಈ ಮೇಲಿನ ಮೂರು ಸಾಲುಗಳು ಕವಿಯ ಅಸಾಮಾನ್ಯ ಕಲ್ಪನೆಯಯಿಂದಾಗಿ ಹೊರಹೊಮ್ಮಿವೆ.

ಕಾಮದೇವನ ಬಿಲ್ಲಿಗೆ ಕಬ್ಬಿನ ದಂಡ ಹಾಗು ದುಂಬಿಗಳ ಹೆದೆ ಇರುತ್ತದೆ. ಅವನು ಉಪಯೋಗಿಸುವದು ಐದು ತರಹದ ಹೂವಿನ ಬಾಣಗಳನ್ನು. ಇಂತಹ ಕಮ್ಮನೆಯ (=sweet) ಬಾಣಕ್ಕೆ ಸೋಲದ ಜೀವಿ ಉಂಟೆ?

ಇಲ್ಲಿ ಕಾಮದೇವನು ನಿಸರ್ಗವನ್ನು ಸೋಲಿಸಿಲ್ಲ ; ನಿಸರ್ಗವು ತಾನಾಗಿಯೆ ಕಾಮದೇವನಿಗೆ ಸೋತಿದೆ ; ಕಾಮದೇವನ ಬಾಣ ತಗುಲಿದೊಡನೆಯೆ, ಮಾವಿನ ಮರವು ಪುಳಕಗೊಂಡಿದೆ ; ಆ ಪುಳಕವು ಹೂವುಗಳಾಗಿ ಹೊರಹೊಮ್ಮಿದೆ.

ಈ ಕಲ್ಪನೆಗೆ ಅದ್ಭುತ ಕಲ್ಪನೆ ಎನ್ನಲೇ ಬೇಕು.

On the touch of Cupid’s arrow, the captive mango tree thrilled into flowers ಎನ್ನುವ ಸಾಲುಗಳನ್ನು ಜಗತ್ತಿನ ಯಾವ ಕವಿಯೂ ಹೇಳಿರಲಿಕ್ಕಿಲ್ಲ!

ಈ ರೀತಿಯಾಗಿ ಬೇಂದ್ರೆಯವರು ಬೇವು ಮಾವುಗಳೆಲ್ಲ (--ಅಹಾ! ಕಹಿ ಹಾಗೂ ಸಿಹಿಯಾದ ಮರಗಳ ಜೊತೆಯೆ!--) ಪುಷ್ಪವತಿಯರಾಗಿ ಕಾಮದೇವನಿಗಾಗಿ ಕಾಯುತ್ತಿರುವದನ್ನು ಹೇಳುತ್ತಾರೆ.

ಪುಷ್ಪವತಿಯಾದ ಸಸ್ಯಸಂಕುಲವು ಫಲವತಿಯಾಗಿ ಸಾರ್ಥಕ್ಯವನ್ನು ಪಡೆಯಬೇಕಾದರೆ ಪಕ್ಷಿಸಂಕುಲದ ನೆರವು ಬೇಕು. ಹಣ್ಣುಗಳ ಸುಗ್ಗಿಯ ಮುನ್ಸೂಚನೆಯನ್ನು ಪಡೆದ ಪಕ್ಷಿಸಂಕುಲವು ಗಿಡಮರಗಳಿಗೆ ಮುಗಿಬೀಳುತ್ತವೆ.

ಸುಗ್ಗಿ ಸುಗ್ಗಿ ಸುಗ್ಗಿ ಎಂದು

ಹಿಗ್ಗಿ ಗಿಳಿಯ ಸಾಲು ಸಾಲು

ತೋರಣದೊಲು ಕೋದಿದೆ.

ಮಾಮರವು ಇನ್ನೂ ಹಣ್ಣು ಬಿಟ್ಟಿಲ್ಲ. ಆದರೆ ಹಣ್ಣಿನ ಸುಗ್ಗಿ ಇನ್ನೇನು ಬಂದೇ ಬಿಟ್ಟಿತು ಎಂದು ಹಿಗ್ಗುತ್ತ ಗಿಳಿಗಳ ಸಾಲುಗಳು ಮಾಮರವನ್ನು ಆಶ್ರಯಿಸಿವೆ. ಗಿಳಿಗಳ ಈ ಸಾಲುಗಳು ಕವಿಗೆ ತೋರಣದಂತೆ ಕಾಣುತ್ತವೆ. ಆದರೆ ಇದು ಕಾಮದೇವನನ್ನು ಸ್ವಾಗತಿಸುವ ತೋರಣ.

ಈ ರೀತಿಯಾಗಿ ನಿಸರ್ಗವೆಲ್ಲ (--ಮನುಜನನ್ನು ಹೊರತುಪಡಿಸಿ--) ಹೊಸ ವರ್ಷದೊಡನೆ ಹೊಸ ಜನ್ಮ ತಾಳಿ ಸಂಭ್ರಮಿಸುತ್ತದೆ. ಹಳೆಯ ನೆಲೆಯನ್ನು ಕಳಚಿ ಹಾಕಿ, ಹರ್ಷದ ಹೊಸ ನೆಲೆಯನ್ನು ಪಡೆಯುತ್ತದೆ. ಪ್ರತಿ ವರುಷದಲ್ಲೂ ಪ್ರಕೃತಿಯು ಹೊಸ ಬಾಲ್ಯ ಹಾಗು ಹೊಸ ಯೌವನವನ್ನು ಪಡೆಯುತ್ತದೆ.

ಆದರೆ, ಮನುಜನ ಸ್ಥಿತಿ ಹೇಗಿದೆ?

ವರುಷಕೊಂದು ಹೊಸತು ಜನ್ಮ

ಹರುಷಕೊಂದು ಹೊಸತು ನೆಲೆಯು

ಅಖಿಲ ಜೀವಜಾತಕೆ!

ಒಂದೆ ಒಂದು ಜನ್ಮದಲ್ಲಿ

ಒಂದೆ ಬಾಲ್ಯ ಒಂದೆ ಹರೆಯ

ನಮಗದಷ್ಟೆ ಏತಕೆ?

ಮನುಜಕುಲಕ್ಕೆ ಮಾತ್ರ ಒಂದು ಜನ್ಮದಲ್ಲಿ ಒಂದೇ ಬಾಲ್ಯ ಹಾಗೂ ಒಂದೇ ಯೌವನ! ನಮಗೂ ಸಹ ನಿದ್ದೆಯು ನಮ್ಮ ಹಳತನ್ನು ಕಳೆದೊಗೆದು, ಎಚ್ಚರವಾದೊಡನೆ ಹೊಸ ಜೀವನವನ್ನು ಕೊಡುವ ಹಾಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು!

ನಿದ್ದೆಗೊಮ್ಮೆ ನಿತ್ಯ ಮರಣ

ಎದ್ದ ಸಲ ನವೀನ ಜನನ

ನಮಗೆ ಏಕೆ ಬಾರದೊ?

ಕವಿಯು ಕಾಮದೇವನನ್ನು (=ಸನತ್ಕುಮಾರನನ್ನು) ಪ್ರಶ್ನಿಸುತ್ತಾನೆ.

‘ಕಾಮದೇವಾ, ನೀನು ಚಿರಂಜೀವಿ, ನೀನು ಸಾಹಸಿ. ನಿನ್ನಂಥವನು ಮನುಜರಿಗೂ ಸಹ ಇಂತಹ ವೈಭೋಗ ಕೊಡಬೇಕಾಗಿತ್ತು. ಕೊಡದಿರುವ ಕಾರಣವೇನು? ನಿನಗೆ ಲೀಲೆ (=play) ಸೇರದೊ?’

ಎಲೆ ಸನತ್ಕುಮಾರದೇವ!

ಸಲೆ ಸಾಹಸಿ ಚಿರಂಜೀವ!

ನಿನಗೆ ಲೀಲೆ ಸೇರದೋ?

ಕವಿಯು ಪ್ರಕೃತಿಯ ಹಾಗು ಮನುಜರ ನಡುವಿನ ಈ ಕಂದರವನ್ನು ನೆನೆದು ವಿಷಾದಿಸುತ್ತಾನೆ:

ಯುಗಯುಗಾದಿ ಕಳೆದರೂ

ಯುಗಾದಿ ಮರಳಿ ಬರುತಿದೆ.

ಹೊಸ ವರುಷಕೆ ಹೊಸ ಹರುಷವ

ಹೊಸತು ಹೊಸತು ತರುತಿದೆ.

ನಮ್ಮನಷ್ಟೆ ಮರೆತಿದೆ!

http://sallaap.blogspot.com/2009/03/blog-post_30.html

೪.‘ದೀಪ’

ಹೆಚ್ಚಿನ ಓದಿಗೆ: http://sallaap.blogspot.com/2010/10/blog-post.html

ಬೇಂದ್ರೆಯವರಿಗೆ ಪ್ರಣಯವು ಒಂದು ವೈಯಕ್ತಿಕ ಕಾಮನೆಯಲ್ಲ. ಇದೊಂದು ವಿಶ್ವಲೀಲೆ. ಅವರ ಅನೇಕ ಪ್ರಣಯಗೀತೆಗಳು ವಿಶ್ವಪ್ರಣಯವನ್ನು ತೋರಿಸುವ ಗೀತೆಗಳೇ ಆಗಿವೆ. ಅವರ ಸುಪ್ರಸಿದ್ಧ ಗೀತೆಯಾದ ‘ಅನಂತ ಪ್ರಣಯ’ವು (‘ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ ಚುಂಬಕ ಗಾಳಿಯು ಬೀಸುತಿದೆ….’) ವಿಶ್ವದ ಅಂತರಂಗದಲ್ಲಿ ಚಿಮ್ಮುತ್ತಿರುವ ಪ್ರಣಯವನ್ನು ತೋರಿಸುತ್ತದೆ. ಅವರ ‘ಕಾಮಕಸ್ತೂರಿ’ ಕವನಸಂಕಲನದಲ್ಲಿ ಇರುವ ‘ನನ್ನವಳು’ ಕವನವಂತೂ ಸಮಗ್ರ ಜಗತ್ತಿನ ಶ್ರೇಷ್ಠ ಪ್ರಣಯಕವನಗಳಲ್ಲಿ ಒಂದಾಗಿದೆ. ಈ ಕವನದಲ್ಲಿ ನಿಸರ್ಗದ ದೈನಂದಿನ ಬದಲಾವಣೆಗಳಾದ ಹಗಲು,ಸಂಜೆ ಹಾಗು ಇರುಳುಗಳ ಜೊತೆಗೆ ತನ್ನ ಕೆಳದಿಯನ್ನು ಸಮೀಕರಿಸಿ ಬೇಂದ್ರೆಯವರು ಹಾಡಿದ್ದಾರೆ. ತಮ್ಮ ವೈಯಕ್ತಿಕ ಪ್ರಣಯವನ್ನು ವಿಶ್ವಪ್ರಣಯದೊಂದಿಗೆ ಸಮೀಕರಿಸಿ ಅವರು ಹಾಡಿದ ಮತ್ತೊಂದು ಕವನವೆಂದರೆ ‘ದೀಪ’. ಈ ಕವನವು ‘ನಾದಲೀಲೆ’ ಸಂಕಲನದಲ್ಲಿದೆ. ಈ ಕವನದ ಪೂರ್ತಿಪಾಠ ಹೀಗಿದೆ:

ಬಂತಿದೊ ಶೃಂಗಾರಮಾಸ

ಕಂತು ನಕ್ಕ ಚಂದ್ರಹಾಸ

ಎಂತು ತುಂಬಿತಾsಕಾಶ

ಕಂಡವರನು ಹರಸಲು.

ಕಿರಿಬೆರಳಲಿ ಬೆಳ್ಳಿಹರಳು

ಕರಿಕುರುಳೊಳು ಚಿಕ್ಕೆ ಅರಳು

ತೆರಳಿದಳಿದೊ ತರಳೆ ಇರುಳು

ತನ್ನರಸನನರಸಲು.

ಗಂಗೆ ಯಮುನೆ ಕೂಡಿ ಹರಿದು

ಸಂಗಮ ಜಲ ಬಿಳಿದು ಕರಿದು

ತಿಂಗಳ ನಗೆ ಮೇರೆವರಿದು

ಬೇರೆ ಮಿರುಗು ನೀರಿಗು.

ಪಂಥದಿಂದ ಮನೆಯ ತೊರೆದು

ಪಾಂಥ ನೆನೆದನತ್ತು ಕರೆದು :

ಇಂಥ ಸಮಯ ಬೇರೆ ಬರದು

ದಂಪತಿಗಳಿಗಾರಿಗು !

ನಾನು ನೀನು ಜೊತೆಗೆಬಂದು

ಈ ನದಿಗಳ ತಡಿಗೆ ನಿಂದು

ಸಾನುರಾಗದಿಂದ ಇಂದು

ದೀಪ ತೇಲಿಬಿಟ್ಟೆವೇ—

ದೀಪ ತೇಲಿ ಬಿಟ್ಟೆವು.

ಬ್ರಾಹ್ಮೀ ಮುಹೂರ್ತದಲ್ಲಿ ನದಿಯಲ್ಲಿ ದೀಪಗಳನ್ನು ತೇಲಿ ಬಿಡುವದು ಧಾರಿäಕ ವಿಧಿಯ ಒಂದು ಭಾಗವಾಗಿದೆ. ಬೇಂದ್ರೆಯವರು ತಮ್ಮ ಹೆಂಡತಿಯೊಡನೆ ಪ್ರಯಾಗಕ್ಕೆ ಹೋದಾಗ ಅಲ್ಲಿ ಗಂಗಾ ಹಾಗು ಯಮುನಾ ನದಿಗಳ ಸಂಗಮದಲ್ಲಿ ದೀಪವನ್ನು ತೇಲಿ ಬಿಡುತ್ತಾರೆ. ಇದು ಈ ಕವನದ ಸಂದರã. ಗಂಡ,ಹೆಂಡತಿಯರು ಜೊತೆಯಾಗಿ ಯಾವುದೇ ಕಾರåವನ್ನು ಮಾಡಲಿ, ಆ ಸಂದರãವು ಅವರಿಗೆ ಸಹಜವಾಗಿಯೇ ಪ್ರೇಮಭಾವದ ಉದ್ದೀಪನದ ಕಾರಣವೂ ಆಗಬಲ್ಲದು. ಇನ್ನೂ ನಸುಗತ್ತಲೆ ಇರುವ ಸಮಯದಲ್ಲಿ ಬೇಂದ್ರೆ ದಂಪತಿಗಳು ಒಂದು ಧಾರಿäಕ ವಿಧಿಯನ್ನು ನೆರವೇರಿಸಲು ಜೊತೆಯಾಗಿ ನದಿಯ ದಂಡೆಗೆ ಬಂದಿದ್ದಾರೆ. ಬೆಳದಿಂಗಳು ಇನ್ನೂ ತನ್ನ ಪೂರÚ ಪ್ರಭೆಯಲ್ಲಿದೆ. ನದಿಯಲ್ಲಿ ತೇಲುತ್ತಿರುವ ದೀಪಗಳು ಭಾವೋದ್ದೀಪನವನ್ನು ಮಾಡುತ್ತಿವೆ. ಹೀಗಾಗಿ ಜೊತೆಯಾಗಿರುವ ದಂಪತಿಗಳಿಗೆ ಇದು ಶೃಂಗಾರಮಾಸದಂತೆ ಭಾಸವಾದರೆ ಆಶÑರåವಿಲ್ಲ. ಕವಿಯಲ್ಲಿ ಮೂಡಿದ ಆ ಭಾವನೆಯ ಫಲವೇ ಈ ಕವನ : ಶೃಂಗಾರ ಮಾಸ’. ಆದರೆ ಬೇಂದ್ರೆಯವರು ‘ಶೃಂಗಾರಮಾಸ’ವನ್ನು ಕೇವಲ ರೂಪಕವಾಗಿ ಬಳಸುತ್ತಿಲ್ಲ. ಋತುಮಾನವನ್ನು ಸೂಚಿಸಲೂ ಸಹ ಅವರು ಈ ಪದವನ್ನು ಪ್ರಯೋಗಿಸಿದ್ದಾರೆ. ‘ಶೃಂಗಾರಮಾಸ’ ಎಂದರೆ ಚೈತ್ರಮಾಸ. ವಸಂತ ಋತುವಿನ ಮೊದಲ ಮಾಸವಾದ ಚೈತ್ರದಲ್ಲಿಯೇ, ನಿಸರÎವು ತನ್ನನ್ನು ಹೂವುಗಳಿಂದ ಸಿಂಗರಿಸಿಕೊಳ್ಳುವದು ಹಾಗು ಫಲವತಿಯಾಗಲು ಕಾಯುವದು.

(ಬೇಂದ್ರೆಯವರ ಮತ್ತೊಂದು ಕವನವಾದ ‘ಯುಗಾದಿ’ಯಲ್ಲಿಯೂ ಸಹ ಇದೇ ಧ್ವನಿಯಿದೆ :

“ಕಮ್ಮನೆ ಬಾಣಕ್ಕೆ ಸೋತು

ಜುಮ್ಮನೆ ಮಾಮರವು ಹೂತು

ಕಾಮಗಾಗಿ ಕಾದಿದೆ.”)

ಆದುದರಿಂದ ಶೃಂಗಾರಮಾಸವೆಂದರೆ ಚೈತ್ರಮಾಸದ ಕಾಲ. ಮುಂದಿನ ಸಾಲುಗಳಲ್ಲಿ ಬೇಂದ್ರೆಯವರು ಇನ್ನೂ ನಿರಿÝಷ್ಟವಾದ ಕಾಲಸೂಚನೆಗಳನ್ನು ನೀಡುತ್ತಾರೆ. ಮೊದಲ ನುಡಿಯನ್ನು ಎಳೆಎಳೆಯಾಗಿ ಪರೀಕ್ಷಿಸಿದಾಗ ಈ ಸೂಚನೆಗಳು ಹೊಳೆಯುವವು:

ಬಂತಿದೊ ಶೃಂಗಾರಮಾಸ

ಕಂತು ನಕ್ಕ ಚಂದ್ರಹಾಸ

ಎಂತು ತುಂಬಿತಾsಕಾಶ

ಕಂಡವರನು ಹರಸಲು.

ಕಂತುವದು ಎಂದರೆ ಮುಳುಗುವದು. ‘ಕಂತು ನಕ್ಕ ಚಂದ್ರಹಾಸ’ ಎಂದರೆ, ಮುಳುಗುತ್ತಿರುವ ಚಂದ್ರ. ಬೆಳದಿಂಗಳು ಆಕಾಶವನ್ನೆಲ್ಲ ತುಂಬಿಕೊಂಡಾಗ, ಚಂದ್ರನು ಮುಳುಗುತ್ತಿದ್ದಾನೆ ಎಂದರೆ ಇದು ಹುಣ್ಣಿವೆಯ ದಿನ ಹಾಗೂ ಈ ಸಮಯವು ಸೂರೋåದಯಕ್ಕಿಂತ ಮೊದಲಿನ ಸಮಯ. ಆದುದರಿಂದ ಬೇಂದ್ರೆಯವರು ಚೈತ್ರಪೂರಿÚಮೆಯಂದು ಇರುಳಿನ ಕೊನೆಯ ಜಾವದಲ್ಲಿ ದೀಪಗಳನ್ನು ತೇಲಿಬಿಡಲು ಅಲ್ಲಿ ತೆರಳಿದ್ದರು ಎಂದು ಸೂಚಿಸುತ್ತಿದ್ದಾರೆ. ಇದು ಪೂರಿÚಮೆಯ ದಿನವಾದದ್ದರಿಂದಲೇ ಆಕಾಶವೆಲ್ಲ ಬೆಳದಿಂಗಳಿನಿಂದ ತುಂಬಿದೆ. ಅದನ್ನೇ ಬೇಂದ್ರೆಯವರು ‘ಎಂತು ತುಂಬಿತಾsಕಾಶ’ ಎಂದು ಹಾಡಿದ್ದಾರೆ. ಶೃಂಗಾರಮಾಸದ ವರÚನೆಯನ್ನು ಪರಿಪೂರÚಗೊಳಿಸುತ್ತಲೇ, ಬೇಂದ್ರೆಯವರು ಕಾಲವನ್ನು ಸೂಚಿಸುವ ಪರಿ ಇದು.

‘ಕಂತು’ ಪದಕ್ಕೆ ಕಾಮದೇವ ಎನ್ನುವ ಅರÜವೂ ಇದೆ. ಹೀಗಾಗಿ ‘ಕಂತು ನಕ್ಕ ಚಂದ್ರಹಾಸ’ ಎಂದರೆ ಕಾಮದೇವನ ನಗೆಯೇ ಬೆಳದಿಂಗಳಾಯಿತು ಎನ್ನುವ ಭಾವನೆಯೂ ಇಲ್ಲಿ ಬರುತ್ತದೆ. ಪ್ರಣಯಭಾವನೆಯನ್ನು ಜಾಗೃತಗೊಳಿಸುವ ಈ ಕಾಮದೇವನ ಉದ್ದೇಶವೇನು? ಈತನು ಕೇವಲ ಸಾಧಾರಣ ಕಾಮನಲ್ಲ ; ಈತನು ದೇವನು ಎನ್ನುವದನ್ನು ಗಮನದಲ್ಲಿ ಇಟ್ಟುಕೊಳ್ಳಿ. (ಬೇಂದ್ರೆಯವರು ತಮ್ಮ ಮತ್ತೊಂದು ಕವನದಲ್ಲಿ ’ದೇವಕಾಮವೆ ಕಾಮದೇವನಾಗಿ’ ಎಂದು ಹೇಳಿದ್ದಾರೆ.) ದೇವತೆಯಲ್ಲಿ ಸದಾಕಾಲವೂ ಅನುಗ್ರಹ ಭಾವನೆಯು ತುಂಬಿರುತ್ತದೆ. ಅದರಂತೆ ಕಾಮದೇವನೂ ಸಹ ತನ್ನ ಚಂದ್ರಹಾಸದಿಂದ ಅಂದರೆ ಬೆಳದಿಂಗಳಿನಿಂದ ಆಕಾಶವನ್ನೆಲ್ಲ ತುಂಬುವದು ಅನುಗ್ರಹ ನೀಡುವ ಕಾರಣಕ್ಕಾಗಿ. ಈ ಅನುಗ್ರಹವು ಕೇವಲ ಪ್ರಣಯಿಗಳಿಗಾಗಿ ಮಾತ್ರ ಅಲ್ಲ, ‘ಕಂಡವರನು ಹರಸಲು’. ಇದರ ಅರÜ ಕಣ್ಣಿಗೆ ಬಿದ್ದ ಕೆಲವರನ್ನು ಮಾತ್ರ ಹರಸುವದು ಎಂದಲ್ಲ. ಆಕಾಶವನ್ನೆಲ್ಲ ಬೆಳದಿಂಗಳ ರೂಪದ ನಗೆಯಿಂದ ವ್ಯಾಪಿಸಿದ ಆ ಕಾಮದೇವನಿಗೆ ಕೆಳಗಿರುವ ಸೃಷ್ಟಿಯೆಲ್ಲ ಕಾಣದಿದ್ದೀತೆ? ಆದುದರಿಂದ ಸಕಲ ಚರಾಚರ ಜಗತ್ತನ್ನೆಲ್ಲ ಹರಸಲು ಕಾಮದೇವನು ಕಾತರನಾಗಿದ್ದಾನೆ ಎನ್ನುವದು ಈ ಸಾಲುಗಳ ಮರä.

ಮೊದಲನೆಯ ನುಡಿಯಲ್ಲಿ ಪ್ರಕೃತಿಯಲ್ಲಿ ಹರಡಿದ ಪ್ರಣಯ ಭಾವನೆಯನ್ನು ತೋರಿಸುತ್ತಲೇ ಎರಡನೆಯ ನುಡಿಯಲ್ಲಿ ಬೇಂದ್ರೆಯವರು ಈ ವಿಶ್ವಪ್ರಣಯದ ನಾಯಕ, ನಾಯಕಿಯರನ್ನು ತೋರಿಸುತ್ತಿದ್ದಾರೆ. ಜೊತೆಜೊತೆಗೇ ಕಾಲಸೂಚನೆಯನ್ನೂ ಮಂಡಿಸುತ್ತಿದ್ದಾರೆ :

ಕಿರಿಬೆರಳಲಿ ಬೆಳ್ಳಿಹರಳು

ಕರಿಕುರುಳೊಳು ಚಿಕ್ಕೆ ಅರಳು

ತೆರಳಿದಳಿದೊ ತರಳೆ ಇರುಳು

ತನ್ನರಸನನರಸಲು.

ಇರುಳು ಎಂಬ ಚಿಕ್ಕ ವಯಸ್ಸಿನ ಯುವತಿ (=ತರಳೆ) ತನ್ನ ಅರಸನನ್ನು ಅರಸಲು ಅಂದರೆ ಹುಡುಕಲು ಹೊರಟಿದ್ದಾಳೆ ಎನ್ನುವದು ಈ ನುಡಿಯ ತಿರುಳು. ರಾತ್ರಿ ಎನ್ನುವ ಈ ಯುವತಿ ಅನಾದಿಕಾಲದಿಂದಲೂ ತನ್ನ ಅರಸನನ್ನು ಅರಸುತ್ತಳೇ ಇದ್ದಾಳೆ. ಹೀಗಾಗಿ ಇವಳು ಚಿರಯೌವನೆ. ಆದುದರಿಂದಲೇ ಇವಳು ‘ತರಳೆ’. ಈ ತರಳೆಯ ಅರಸ ಯಾರು? ರಾತ್ರಿಕುಮಾರಿಯ ಅರಸನು ಚಂದ್ರನೇ ತಾನೆ? ಆದುದರಿಂದ ಚಂದ್ರನೇ ಇವಳು ಅರಸುತ್ತಿರುವ ಪ್ರಣಯಿ. ಚಂದ್ರ ಎಲ್ಲಿದ್ದಾನೆ? ಆತನು ಕಂತು (=ಮುಳುಗು)ತ್ತಿದ್ದಾನೆ ಎಂದು ಬೇಂದ್ರೆಯವರು ಮೊದಲನೆಯ ನುಡಿಯಲ್ಲಿಯೇ ಹೇಳಿದ್ದಾರೆ. ಮುಳುಗುತ್ತಿರುವ ಚಂದ್ರನ ಹಿಂದೆಯೇ ಇರುಳೂ ಕೂಡ ಸರಿಯುತ್ತಿದೆ. ಈ ರಾತ್ರಿಕುವರಿಯ ಒಡವೆಗಳನ್ನಷ್ಟು ನೋಡಿರಿ. ಇವಳು ಕಿರಿಬೆರಳಿನಲ್ಲಿ ಬೆಳ್ಳಿಹರಳಿರುವ ಉಂಗುರವನ್ನು ಹಾಗು ಕಪ್ಪು ಕುರುಳಿನಲ್ಲಿ ಚಿಕ್ಕೆಗಳ ಅರಳು ಎಂದರೆ ಹೂವುಗಳನ್ನು ಧರಿಸಿದ್ದಾಳೆ. ಬೆಳ್ಳಿಹರಳು ಎಂದರೆ ಶುಕ್ರಗ್ರಹ. ಶುಕ್ರಗ್ರಹಕ್ಕೆ ಕನ್ನಡದಲ್ಲಿ ‘ಬೆಳ್ಳಿ ಚಿಕ್ಕಿ’ ಎಂದೇ ಕರೆಯುತ್ತಾರೆ. ಇವಳ ಕಪ್ಪು ಕುರುಳು ಎಂದರೆ ಆಕಾಶ. ಆಕಾಶದ ಅರಳುಗಳು ಎಂದರೆ ನಕ್ಷತ್ರಗಳು. ಇಷ್ಟು ಶೃಂಗಾರದೊಡನೆ ರಾತ್ರಿಕುಮಾರಿ ಚಂದ್ರನ ಬೆನ್ನು ಹತ್ತಿ ನಡೆದಿದ್ದಾಳೆ. ಇದಿಷ್ಟು ವಿಶ್ವಪ್ರಣಯಿಗಳ ವರÚನೆಯಾದರೆ, ಇದರಲ್ಲಿ ಅಡಗಿರುವ ಕಾಲಸೂಚನೆಯನ್ನಷ್ಟು ನೋಡೋಣ :

ಶುಕ್ರಗ್ರಹವು ಸೂರೋåದಯಕ್ಕಿಂತ ಮೊದಲು ಅಥವಾ ಸೂರಾåಸ್ತದ ನಂತರ ಕಾಣಿಸುತ್ತದೆ.

ಈ ಸಂದರãದಲ್ಲಿ ಇದು ಸೂರೋåದಯದ ಮೊದಲಿನ ವರÚನೆ. ಇದನ್ನು ದೃಢೀಕರಿಸಲು ಬೇಂದ್ರೆಯವರು ‘ಕಿರಿಬೆರಳಲಿ ಬೆಳ್ಳಿಹರಳು’ ಎಂದು ಹೇಳುತ್ತಾರೆ. ರಾತ್ರಿಕುವರಿಯು ತನ್ನ ಯಾವುದೇ ನಾಲ್ಕು ಬೆರಳುಗಳಲ್ಲಿ ಉಂಗುರ ಧರಿಸಬಹುದಾಗಿತ್ತು. ಆದರೆ ಅವಳು ತನ್ನ ಕಿರಿಬೆರಳಲ್ಲಿ ಧರಿಸಿದ್ದಾಳೆ. ಈಗ ತೋರುಬೆರಳಿನಿಂದ ಬೆರಳುಗಳನ್ನು ಎಣಿಸಿರಿ : (೧) ತೋರುಬೆರಳು, (೨) ನಡುವಿನ ಬೆರಳು, (೩) ಉಂಗುರ ಬೆರಳು ಹಾಗು (೪) ಕಿರಿಬೆರಳು. ಈ ಎಣಿಕೆಯಲ್ಲಿ ಕಿರಿಬೆರಳು ನಾಲ್ಕನೆಯ ಬೆರಳಾಗುತ್ತದೆ. ಆದುದರಿಂದ ಈ ಸಮಯವು ರಾತ್ರಿಯ ನಾಲ್ಕನೆಯ ಜಾಮ. ಆದರೆ ನಕ್ಷತ್ರಗಳು ಇನ್ನೂ ಕಾಣುತ್ತಲೇ ಇವೆ. ಆದುದರಿಂದ ಇದು ನಾಲ್ಕನೆಯ ಜಾಮದ ಪೂರಾéರÞ ಅರಾÜತ್ ಬ್ರಾಹ್ಮೀ ಮುಹೂರÛ.

ಮೂರನೆಯ ನುಡಿಯಲ್ಲಿ ಬೇಂದ್ರೆಯವರು ಆಕಾಶದಿಂದ ಭೂಮಿಗೆ ಇಳಿಯುತ್ತಾರೆ ಹಾಗು ಭೂಮಿಯ ಮೇಲಿನ ಪ್ರಣಯವನ್ನು ಅಂದರೆ ಗಂಗಾ-ಯಮುನಾ ನದಿಗಳ ಸಂಗಮವನ್ನು ವರಿÚಸುತ್ತಾರೆ :

ಗಂಗೆ ಯಮುನೆ ಕೂಡಿ ಹರಿದು

ಸಂಗಮ ಜಲ ಬಿಳಿದು ಕರಿದು

ತಿಂಗಳ ನಗೆ ಮೇರೆವರಿದು

ಬೇರೆ ಮಿರುಗು ನೀರಿಗು.

ಗಂಗೆಯ ನೀರಿನ ಬಣ್ಣ ಬಿಳಿ ಹಾಗು ಯಮುನೆಯ ನೀರಿನ ಬಣ್ಣ ಕರಿ. ಈ ನದಿಗಳ ಸಂಗಮದ ಜಲವು ಬಿಳಿ ಹಾಗು ಕರಿಯ ಬಣ್ಣಗಳ ಮಿಶ್ರಣವಾಗುತ್ತದೆ. ಈ ಮಿಶ್ರಣದ ಮೇಲೆ ತಿಂಗಳಿನ ನಗೆ ಅಂದರೆ ಬೆಳದಿಂಗಳು ಬಿದ್ದಾಗ ಆ ನೀರಿಗೆ ಒಂದು ವಿಭಿನ್ನ ಮಿರುಗು ಬರುತ್ತದೆ. ದಾಂಪತ್ಯದಲ್ಲೂ ಸಹ ಗಂಡ ಹಾಗು ಹೆಂಡತಿಯ ಸ್ವಭಾವಗಳು ಭಿನ್ನವಾಗಿರುತ್ತವೆ. ಆದರೆ ಸರಸ ಪ್ರೇಮದ ಬೆಳದಿಂಗಳಿನಲ್ಲಿ ಮಿಂದಾಗ ಆ ದಾಂಪತ್ಯಕ್ಕೆ ಒಂದು ಹೊಸ ಸೊಬಗು ಬರುತ್ತದೆ ಎಂದು ಬೇಂದ್ರೆಯವರು ಅನ್ಯೋಕ್ತಿಯ ಮೂಲಕ ಹೇಳುತ್ತಿದ್ದಾರೆ.

ನಾಲ್ಕನೆಯ ನುಡಿ ಹೀಗಿದೆ :

ಪಂಥದಿಂದ ಮನೆಯ ತೊರೆದು

ಪಾಂಥ ನೆನೆದನತ್ತು ಕರೆದು :

ಇಂಥ ಸಮಯ ಬೇರೆ ಬರದು

ದಂಪತಿಗಳಿಗಾರಿಗು !

ಮೇಲಿನ ಮೂರು ನುಡಿಗಳಲ್ಲಿ ಬೇಂದ್ರೆಯವರು ಆಕಾಶದಲ್ಲಿಯ ಪ್ರಣಯವನ್ನು ಹಾಗು ಭೂಮಿಯ ಮೇಲಿನ ಪ್ರಣಯವನ್ನು ಬಣ್ಣಿಸಿದರು. ಆದರೆ ತಮ್ಮದೇ ಸಂಸಾರದಲ್ಲಿ ಅವರು ಒಂದು ಮನಸ್ತಾಪವನ್ನು ಅನುಭವಿಸುತ್ತಿದ್ದಾರೆ. ಇದರ ಸುಳಿವು ಈ ನಾಲ್ಕನೆಯ ನುಡಿಯಲ್ಲಿದೆ.

ಪಂಥ ಎಂದರೆ ಜಿದ್ದು , ಹಟ. ಪಾಂಥ ಎಂದರೆ ದಾರಿಕಾರ, ಪ್ರಯಾಣಿಕ. ಯಾವ ಕಾರಣಕ್ಕಾಗಿ ಬೇಂದ್ರೆ ದಂಪತಿಗಳಲ್ಲಿ ವಿರಸ ಹುಟ್ಟಿತು ಎನ್ನುವದನ್ನು ಬೇಂದ್ರೆಯವರು ತಿಳಿಸಿಲ್ಲ. ಒಟ್ಟಿನಲ್ಲಿ ಹಟಮಾರಿತನ, ಸಿಟ್ಟು, ಸೆಡವು ಇವೆಲ್ಲ ಭಾವನೆಗಳು ಇಬ್ಬರಲ್ಲೂ ಬಂದು ಹೋಗಿವೆ. ಇಬ್ಬರಿಗೂ ದುಃಖವಾಗಿದೆ ಎನ್ನುವದು ‘ಅತ್ತು ಕರೆದು’ ಎನ್ನುವದರ ಮೂಲಕ ಸ್ಪಷ್ಟವಾಗಿದೆ. ಇಂತಹ ಸಂದರãವು ಬೇರೆ ಯಾವ ದಂಪತಿಗಳಿಗೂ ಬಂದಿರಲಿಕ್ಕಿಲ್ಲ ಹಾಗು ಬರದಿರಲಿ ಎಂದು ಬೇಂದ್ರೆಯವರು ಹಾರೈಸುತ್ತಾರೆ. ಆದರೆ ಗಂಗೆ-ಯಮುನೆಗಳ ಸಂಗಮದ ತಟದಲ್ಲಿ ಇವರೀರéರೂ ಆ ಅಸುಖೀ ಭಾವನೆಯಿಂದ ಈಗ ಹೊರಬಂದಿದ್ದಾರೆ. ವಿಶ್ವಪ್ರಣಯದ ಬೆಳದಿಂಗಳಿನಲ್ಲಿ ಮಿಂದು, ಮತ್ತೆ ಸರಸ, ಸಮಾಧಾನದ ಭಾವಕ್ಕೆ ಮರಳಿದ್ದಾರೆ. ಈ ಭಾವನೆಯು ಅವರ ಮುಂದಿನ (ಕೊನೆಯ) ನುಡಿಯಲ್ಲಿ ವ್ಯಕ್ತವಾಗುತ್ತಿದೆ :

ನಾನು ನೀನು ಜೊತೆಗೆಬಂದು

ಈ ನದಿಗಳ ತಡಿಗೆ ನಿಂದು

ಸಾನುರಾಗದಿಂದ ಇಂದು

ದೀಪ ತೇಲಿಬಿಟ್ಟೆವೇ—

ದೀಪ ತೇಲಿ ಬಿಟ್ಟೆವು.

ಸಾನುರಾಗದಿಂದ ಎಂದು ಹೇಳುವಾಗ ಅವರೀರéರಲ್ಲಿ ಮತ್ತೆ ಅನುರಾಗ ಭಾವ ಬಂದಿರುವದನ್ನು ಬೇಂದ್ರೆಯವರು ಸ್ಪಷ್ಟ ಪಡಿಸುತ್ತಾರೆ. ದೀಪ ತೇಲಿ ಬಿಡುವ ವಿಧಿಯನ್ನು ಜೊತೆಯಾಗಿ ಮಾಡುವದರ ಮೂಲಕ ದಾಂಪತ್ಯ ಜೀವನದಲ್ಲಿ ಗಂಡ-ಹೆಂಡಿರ ಸಾಮರಸ್ಯವನ್ನು ಸೂಚಿಸುತ್ತಾರೆ. ಅಲ್ಲದೆ, ಈ ದೀಪವು ಬಾಳಿಗೆ ಬೆಳಕು ನೀಡುವ ದೀಪವೂ ಹೌದು ಎಂದು ಸೂಚಿಸುತ್ತಾರೆ.

……………………………………………………………….

ಟಿಪ್ಪಣಿ (೧):

ಬೇಂದ್ರೆಯವರ ಕವನಗಳಲ್ಲಿ ಪದಗಳ ಶ್ಲೇಷೆಯನ್ನು ಕಾಣುವದು ಅತಿ ಸಹಜ. ಉದಾಹರಣೆಗೆ ‘ಸಾವಿರದ ಮನೆಯಲೊಂದು ಮನೆಯ ಮಾಡಿದೆ’ ಎಂದು ಹೇಳುವಾಗ ‘ಸಾವಿರದ’ ಪದಕ್ಕೆ ‘ಅನೇಕ’ ಎನ್ನುವ ಅರÜಇರುವಂತೆಯೇ ‘ಸಾವು+ಇರದ’ ಎನ್ನುವ ಅರÜವೂ ಇದೆ. ಕೆಲವೊಮ್ಮೆ ವಿರುದ್ಧಾರÜದ ಶ್ಲೇಷೆಯನ್ನೂ ಅವರು ಮಾಡುತ್ತಾರೆ. ಉದಾಹರಣೆಗೆ, ಈ ಸಾಲು ನೋಡಿರಿ: ‘ಅಮೃತಂತ ಬಾಯಿ ಚಪ್ಪರಿಸತಾವ, ಕೇಳಿ ಕಣ್ಣು ಮಿಟಕತದ ರಾತ್ರಿ.’

ನಲ್ಲ, ನಲ್ಲೆಯರು ಮುತ್ತು ಕೊಟ್ಟುಕೊಳ್ಳುವಾಗ ‘ಇದು ಅಮೃತ’ ಎನ್ನುತ್ತ ಬಾಯಿ ಚಪ್ಪರಿಸುತ್ತಾರೆ. ಇದನ್ನು ಕೇಳಿದ ರಾತ್ರಿಯು ಕಣ್ಣು ಹೊಡೆಯುತ್ತದೆ ಎನ್ನುವದು ಒಂದು ಅರÜ. ಮತ್ತೊಂದು ಅರÜ ಹೀಗಿದೆ: ಇದು ಅಮೃತ ಎಂದರೆ ನಿರಂತರ ಎಂದು ಪ್ರಣಯಿಗಳು ಭಾವಿಸುತ್ತಾರೆ. ಆದರೆ ಇದರ ಅವಧಿ ಅತ್ಯಲ್ಪ ಅರ್ಥಾತ್ಕಣ್ಣು ಮಿಟುಕಿಸುವ ಸಮಯದಷ್ಟು ಮಾತ್ರ.

‘ದೀಪ’ ಕವನದಲ್ಲಿ ಮೊದಲಿನ ಎರಡೂ ನುಡಿಗಳೇ ಶ್ಲೇಷೆಯಿಂದ ಕೂಡಿರುವದು ಈ ಕವನದ ಒಂದು ಹೆಚ್ಚುಗಾರಿಕೆ. ಈ ನುಡಿಗಳು ವಿಶ್ವಪ್ರಣಯವನ್ನು ಹಾಗು ನಾಯಕ, ನಾಯಕಿಯರನ್ನು ವರಿÚಸುವದರ ಜೊತೆಗೇ ಕಾಲಸೂಚನೆಯನ್ನೂ ಮಾಡುವದು ಬೇಂದ್ರೆಯವರ ಶ್ಲೇಷಪ್ರತಿಭೆಯ ನಿದರêನವಾಗಿದೆ.

…………………………………………………………………………….

ಅಕ್ಟೋಬರ ೨೬ ಬೇಂದ್ರೆಯವರ ಪುಣ್ಯತಿಥಿ. ೧೯೮೧ ಅಕ್ಟೋಬರ ೨೬ರಂದು ಬೇಂದ್ರೆಯವರು ಮುಂಬಯಿಯಲ್ಲಿ ನಿಧನರಾದರು. ಅಂದು ನರಕಚತುರÝಶಿಯ ದಿನವಾಗಿತ್ತು. ಅವರು ಕಾಲವಶರಾಗಿ ಇಂದಿಗೆ ಎರಡು ದಶಕಗಳು ಸಂದವು.

೫. ಮನುವಿನ ಮಕ್ಕಳು

ಹೆಚ್ಚಿನ ಓದಿಗೆ: http://sallaap.blogspot.com/2010/09/blog-post_20.html

ಅಂಬಿಕಾತನಯದತ್ತರ ‘ಮನುವಿನ ಮಕ್ಕಳು’ ಕವನವು ಅವರ ‘ನಾದಲೀಲೆ’ ಕವನಸಂಗ್ರಹದಲ್ಲಿ ಅಡಕವಾಗಿದೆ. ಈ ಕವನಸಂಕಲನವು ೧೯೩೮ರಲ್ಲಿ ಪ್ರಕಟವಾಯಿತು. ಭಾರತದಲ್ಲಿ ಹಾಗು ಜಗತ್ತಿನಲ್ಲಿ ಇದು ಉದ್ವಿಗ್ನತೆಯ ಕಾಲ. ಯುರೋಪಿಯನ್ನರ ಶೋಷಣಾ ನೀತಿಯಿಂದಾಗಿ ಏಶಿಯಾ ಹಾಗು ಆಫ್ರಿಕಾ ಖಂಡಗಳಲ್ಲಿದ್ದ ಅವರ ವಸಾಹುತುಗಳು ನಿರ್ಜೀವ ಅಸ್ಥಿಪಂಜರಗಳಾಗಿದ್ದವು. ಭಾರತದಲ್ಲಿಯೂ ಸಹ ಉಳ್ಳವರು ಇಲ್ಲದವರನ್ನು ಕಾಲ ಕೆಳಗೆ ತುಳಿದೇ ಮೇಲೇರುತ್ತಿದ್ದರು. ಅನೇಕ ಭಾರತನಿವಾಸಿಗಳಂತೆ ಬೇಂದ್ರೆಯವರೂ ಸಹ ಈ ಅವಧಿಯಲ್ಲಿ ವೈಯಕ್ತಿಕ ಸಂಕಷ್ಟಗಳನ್ನು ಅನುಭವಿಸಿದ್ದಾರೆ. ಆದರೆ ಅವರಲ್ಲಿಯ ಕವಿ ಹೃದಯವು ತನ್ನ ಬವಣೆಯನ್ನಷ್ಟೇ ನೋಡದೆ, ಈ ಸಂಕಟಕಾಲದ ಸಾರ್ವತ್ರಿಕತೆಯನ್ನು ಗ್ರಹಿಸಿಕೊಳ್ಳುತ್ತದೆ. ಈ ಅನುಭೂತಿಯ ಫಲವೇ ‘ಮನುವಿನ ಮಕ್ಕಳು’.

ಬ್ರಹ್ಮನಿರ್ಮಿತ ಸೃಷ್ಟಿಯಲ್ಲಿ ಸ್ವಾಯಂಭೂ ಮನು ಹಾಗು ಶತರೂಪಾ ಇವರು ಮೊದಲ ದಂಪತಿಗಳು. ಇವರಿಂದಲೇ ಪ್ರಜೆಗಳ ಉತ್ಪತ್ತಿಯಾಗಿದೆ. ಮನುವಿನ ಮಕ್ಕಳು ಮನುಜರು ಅಥವಾ ಮಾನವರು.

ನಿಸರ್ಗ-ಚೈತನ್ಯಗಳಾದ ಗಾಳಿ,ಬೆಳಕು ಹಾಗು ನೀರು ಇವೆಲ್ಲ ಜೀವಪೋಷಣೆಯಲ್ಲಿ ತೊಡಗಿವೆ. ಆದುದರಿಂದಲೆ ಇವು ದೇವತೆಗಳು. ಗಾಳಿಯು ವಾಯುದೇವನಾದರೆ, ನೀರು ಜಲದೇವಿ. ಬೆಳಕು ಕೊಡುವ ಸೂರ್ಯನೂ ಸಹ ದೇವನೇ.

ನಿಸರ್ಗ ಹಾಗು ಸಸ್ಯಸಂಕುಲದಲ್ಲಿ ಸಾಮರಸ್ಯವಿದೆ. ಆದರೆ ಪ್ರಾಣಿಸಂಕುಲದಲ್ಲಿ ಶ್ರೇಣೀಕೃತ ಭಕ್ಷಣೆಯೇ ವಾಡಿಕೆಯಾಗಿದೆ. ಪುರಾಣಕಾಲದಲ್ಲಿಯ ಭಾರತದ ಚಕ್ರವರ್ತಿಗಳಾದ ಶಿಬಿ, ದಿಲೀಪ ಹಾಗು ಸಂವೇದನಾಶೀಲ ವ್ಯಕ್ತಿಯಾದ ಜೀಮೂತವಾಹನರು ಈ ಭಕ್ಷಣೆಯನ್ನು ತಪ್ಪಿಸಲು ವೈಯಕ್ತಿಕ ಬಲಿದಾನಕ್ಕೂ ಸಹ ಮುಂದಾಗುತ್ತಿದ್ದರು. ಇಂತಹ ಪರಂಪರೆಯ ಭಾರತದಲ್ಲಿ ಕಾಲಗತಿಯಿಂದಾಗಿ ವರ್ತಮಾನ ಪರಿಸ್ಥಿತಿಯು ವಿಪರ್ಯಸ್ತವಾಗಿದೆ.

‘ಮನುವಿನ ಮಕ್ಕಳು’ ಕವನದ ಪೂರ್ತಿಪಾಠ ಹೀಗಿದೆ:

ಗಾಳಿಯು ಸುಳಿ ಸುಳಿ ಸೂಸುವದು

ಬಿಮ್ಮನೆ ಬೀಸುವದು.

ಪ್ರಾಣತರಂಗಿಣಿ ತುಳುಕುವಳು

ದಡಗಳ ದುಡುಕುವಳು.

ಹೂಗಂಪಿನ ಹುಡಿ ಮಿಸುಕುವದು

ಗಮಗಮ ಮಸುಕುವದು.

ಬಾಳಿನ ಕೊಳಲುಲಿ ಕೇಳುವವರೆಗೂ

ಕೇಳಲು ಕಿವಿಯಿಲ್ಲ.

ಬೆಳುದಿಂಗಳು ಬಿಸಿಲಾಡಿದರೇನು—

ನಾಲಿಗೆ ಸವಿಯಿಲ್ಲ.

ಜಗವು ಕಲ್ಲಿಗೂ ಕಡೆಗಾಗಿರುವದು

ಜೀವವು ಕವಿಯಲ್ಲ.

ಪಾರಿವಾಳಗಳ ಮೈಜೋಡು

ಗಿಡುಗದ ಮುಖಕೀಡು.

ಆವಿಗೆ ದಿನದಿನವೂ ಕುತ್ತು

ಸಿಂಹಕೆ ಸವಿತುತ್ತು.

ಮಲಸಂಬಂಧದ ಭಾಗಾದಿ

ಹದ್ದಿಗೆ ಹಳೆಹಾದಿ.

ಶಿಬಿ ದಿಲೀಪ ಜೀಮೂತವಾಹನರು

ಮಣ್ಣನು ಮುಕ್ಕಿದರು.

ಸ್ವರ್ಗದೊಳಿದ್ದೂ ಸಂಶಯ ಬಂದಿತು

ಕಣ್ಗಳು ತಿಕ್ಕಿದರು.

ತಮ್ಮ ನಾಡಿನಲಿ ನಡೆದಿಹ ಲೀಲೆಯ

ನೋಡುತ ಬಿಕ್ಕಿದರು.

ದುಡಿವರ ಉಸಿರಿಗೆ ದಣಿವಿಲ್ಲ

ಕೊನೆಗೂ ತಣಿವಿಲ್ಲ.

ಕೂಸುಗಳಾಟಕೆ ಕಳೆಯಿಲ್ಲ

ಭೂಮಿಗೆ ಬೆಳೆಯಿಲ್ಲ.

ಹೆಣ್ಣಿನ ಕಂಬನಿ ತೊಡೆದಿಲ್ಲ

ಗಂಡಿಗೆ ಬಿಡುವಿಲ್ಲ.

ಹಸಿವಿನ ಕೂಗಿನ ಕಹಳೆಯ ಕೇಳಿ

ಜೀವವು ನಡುಗುವದು.

ಸಾವಿನ ಎದೆಗಳ ಭೇರಿಗೆ ಎತ್ತೋ

ಓಡಲು ತೊಡಗುವದು.

ಮನುವಿನ ಮಕ್ಕಳ ಬೇಟೆಯ ಕಂಡು

ತನ್ನೊಳಗಡಗುವದು.

ಧರ್ಮಕೆ ‘ಧರ್ಮs’ ಎನಬೇಡಾ

ಕರ್ಮವು ಇದು ನೋಡಾ;

ಹಗರಣದೊಳಗಿನ ಸೋಗುಗಳು

ಅವುಗಳ ಕೂಗುಗಳು.

ಜೀವದೇವನೇ ಮೈವೆತ್ತು

ನೀನೇ ತಲೆಯೆತ್ತು.

ವೇದಾಂತಿಯ ಮುಖಮುದ್ರೆಯ ನೋಡಿ

ಕನಿಕರ ಹುಟ್ಟುವದು.

ಹತ್ತವತಾರದ ಹೇಡಿತನಕ್ಕೆ

ಮನ ಗೊಣಗುಟ್ಟುವದು.

ಗಾಳಿಗೆ ಗಾಳಿಯು ಬಯಲಿಗೆ ಬಯಲು

ತಲೆ ರಣಗುಟ್ಟುವದು.

ಕವನದ ಮೊದಲ ನುಡಿ:

ಗಾಳಿಯು ಸುಳಿ ಸುಳಿ ಸೂಸುವದು

ಬಿಮ್ಮನೆ ಬೀಸುವದು.

ಪ್ರಾಣತರಂಗಿಣಿ ತುಳುಕುವಳು

ದಡಗಳ ದುಡುಕುವಳು.

ಹೂಗಂಪಿನ ಹುಡಿ ಮಿಸುಕುವದು

ಗಮಗಮ ಮಸುಕುವದು.

ಗಾಳಿ ಹಾಗು ನೀರು ಇವು ಸಕಲ ಜೀವಿಗಳಿಗೆ ಅವಶ್ಯವಾದಂತಹ ನಿಸರ್ಗದ ಮೂಲ ಚೈತನ್ಯಗಳು. ಇವು ಸೃಷ್ಟಿಯಲ್ಲಿಯ ಜೀವಿಗಳನ್ನು ಪೋಷಿಸುತ್ತವೆ. ಗಾಳಿ ಹಾಗು ನೀರು ಇಲ್ಲದೆ ಯಾವ ಜೀವಿಯೂ ಬದುಕಲಾರದು. ಈ ನುಡಿಯ ಮೊದಲ ನಾಲ್ಕು ಸಾಲುಗಳಲ್ಲಿ ಕವಿಯು ಈ ಚೈತನ್ಯಗಳ ಸ್ವಭಾವವನ್ನು ಬಣ್ಣಿಸುತ್ತಾನೆ:

ಗಾಳಿಯು ಒಮ್ಮೊಮ್ಮೆ ಮೆಲ್ಲಗೆ ಸುಳಿಸುಳಿಯಾಗಿ ಸೂಸುತ್ತದೆ, ಮತ್ತೊಮ್ಮೆ ಬಿಮ್ಮನೆ(=ತೀವ್ರವಾಗಿ) ಬೀಸುತ್ತದೆ. ಈ ಎರಡೂ ಕ್ರಿಯೆಗಳು ಜೀವಿಗಳಿಗೆ ಉಲ್ಲಾಸ ನೀಡುವ ಕ್ರಿಯೆಗಳೇ ಆಗಿವೆ. ಗಾಳಿಯಂತೆಯೆ ನಿಸರ್ಗದ ಮತ್ತೊಂದು ಮೂಲ ಚೈತನ್ಯವಾದ ನೀರನ್ನು ಕವಿಯು ಪ್ರಾಣತರಂಗಿಣಿ ಎಂದು ಬಣ್ಣಿಸುತ್ತಾನೆ. ತರಂಗಿಣಿ ಎಂದರೆ ತರಂಗಗಳು (=ಅಲೆಗಳು) ಇದ್ದಂಥವಳು ಅರ್ಥಾತ್ ನದಿ. ಈ ತರಂಗಗಳು ಅಂದರೆ ತೆರೆಗಳು ಸಕಲ ಪ್ರಾಣಿಗಳಿಗೆ ಜೀವಾಧಾರವಾಗಿವೆ. ಆದುದರಿಂದ ನದಿಯು ಪ್ರಾಣತರಂಗಿಣಿ. ಈ ವಾತ್ಸಲ್ಯಮಯಿ ನದಿಯು ಅರೆಬರೆಯಾಗಿ ಹರಿಯುತ್ತಿಲ್ಲ. ಅವಳು ಸಕಲ ಜೀವಿಗಳಿಗೆ ತನ್ನ ಪೋಷಣೆಯನ್ನು ಧಾರಾಳವಾಗಿ ಹಂಚಲು ತುಳುಕುತ್ತ ಧಾವಿಸುತ್ತಾಳೆ. ಈ ಆತುರದಲ್ಲಿ ನದಿಯು ತನ್ನ ದಡಗಳನ್ನು ಉಕ್ಕಿ ಹರಿಯುತ್ತಾಳೆ. ತಾಯಿಗೆ ಮಾತ್ರ ಸಹಜವಾದ ಈ ಸಂಭ್ರಮವನ್ನು ಸೂಚಿಸಲು ಕವಿಯು ಇವಳಿಗೆ ‘ದಡಗಳ ದುಡುಕುವಳು’ ಎಂದು ಬಣ್ಣಿಸುತ್ತಾನೆ. ಹಸುಗೂಸಿಗೆ ಮೊಲೆಯೂಡಿಸಲು ತಾಯಿ ಕಾತುರಳಾಗಿ ಬರುವಂತೆ, ನದಿಯೂ ಸಹ ‘ದಂಡೆಗಳನ್ನು ದುಡುಕುತ್ತಾಳೆ’.

ನಿಸರ್ಗದ ಈ ಚೈತನ್ಯಗಳಾದ ಗಾಳಿ ಹಾಗು ನೀರನ್ನು ಹೀರಿಕೊಂಡು ಬೆಳೆಯುವ ಸಸ್ಯಗಳು ಸುತ್ತಲೆಲ್ಲ ಸುಗಂಧವನ್ನು ಪಸರಿಸುತ್ತವೆ. ಹೂಗಂಪಿನ ಹುಡಿ (ಎಂದರೆ ಹೂವಿನ ಸುವಾಸನೆಯನ್ನು ಹೊತ್ತುಕೊಂಡಂತಹ ಪರಾಗರೇಣುಗಳು) ಎಲ್ಲೆಲ್ಲೂ ಹರಡಿಕೊಂಡು, ವಾತಾವರಣವನ್ನು ಸುಗಂಧಮಯವನ್ನಾಗಿ ಮಾಡುತ್ತವೆ.

ಗಾಳಿಯನ್ನು ವಾಯುದೇವ ಎಂದು ಕರೆಯುವ ವಾಡಿಕೆಯಿದೆ. ಆದುದರಿಂದ ಗಾಳಿ ಪುರುಷರೂಪಿ. ನದಿಯು ಜಲದೇವಿ, ಅಂದರೆ ಸ್ತ್ರೀರೂಪಿಣಿ. ಇವರು ಜಗತ್ತನ್ನು ಪೋಷಿಸುವದರಿಂದ, ಜಗದ ತಂದೆ-ತಾಯಿ ಇದ್ದಂತೆ. ಇವರ ಪೋಷಣೆಯನ್ನು ಪಡೆದ ಸಸ್ಯಸಂಕುಲವು ಇವರ ಸಂತತಿಯಿದ್ದಂತೆ. ಆದುದರಿಂದ ನಿಸರ್ಗದ ಚೈತನ್ಯಗಳಿಗೆ ಹಾಗು ನಿಸರ್ಗದಲ್ಲಿಯ ಸಸ್ಯಸಂಕುಲಕ್ಕೆ ಸಾಮರಸ್ಯವಿದೆ.

ಈ ಸಾಮರಸ್ಯವು ಪ್ರಾಣಿಸಂಕುಲದಲ್ಲಿ ಇಲ್ಲ ಎನ್ನುವದನ್ನು ಬೇಂದ್ರೆಯವರು ಮುಂದಿನ ನುಡಿಗಳಲ್ಲಿ ಹೇಳುತ್ತಾರೆ:

ಬಾಳಿನ ಕೊಳಲುಲಿ ಕೇಳುವ ವರೆಗೂ

ಕೇಳಲು ಕಿವಿಯಿಲ್ಲ.

ಬೆಳುದಿಂಗಳು ಬಿಸಿಲಾಡಿದರೇನು—

ನಾಲಿಗೆ ಸವಿಯಿಲ್ಲ.

ಜಗವು ಕಲ್ಲಿಗೂ ಕಡೆಗಾಗಿರುವದು

ಜೀವವು ಕವಿಯಲ್ಲ.

ಬಾಳಿನ ಕೊಳಲು ಎಂದರೆ ಬದುಕಿನಲ್ಲಿಯ ಸಾಮರಸ್ಯ. (ಕೃಷ್ಣ ಪರಮಾತ್ಮನ ಕೊಳಲಿಗೆ ಇಲ್ಲಿ ಸಾಮ್ಯವಿದೆ.) ಈ ಕೊಳಲ ಧ್ವನಿಯನ್ನು ಕೇಳುವ ಒಲವು ಇಲ್ಲದಿದ್ದಾಗ, ಕಿವಿಯು ಇದ್ದರೂ ಇಲ್ಲದಂತೆ. ಸಕಲ ಜೀವಿಗಳಿಗೆ ಸುಖವನ್ನು ನೀಡುವ ಬೆಳದಿಂಗಳು ನಿಸರ್ಗದ ಆಪ್ಯಾಯಮಾನತೆಗೆ ಒಂದು ಉದಾಹರಣೆ. ನಾಲಿಗೆಯು ಸಂವೇದನೆಯನ್ನು ಕಳೆದುಕೊಂಡಾಗ ಎಂತಹ ತೀವ್ರ ರುಚಿಯನ್ನೂ ಅದು ಅರಿಯಲಾರದು. ಅದರಂತೆಯೇ ಸಂವೇದನಾಶಕ್ತಿ ಇಲ್ಲದ ಜೀವಿಗೆ ನಿಸರ್ಗದ ಈ ಸುಖದಾಯಿ ಬೆಳದಿಂಗಳು ನಿಷ್ಪ್ರಯೋಜಕ. ಬೆಳದಿಂಗಳೇ ಆಗಲಿ, ಬಿಸಿಲೇ ಆಗಲಿ ಅದರಿಂದ ಏನೂ ವ್ಯತ್ಯಾಸವಾಗದು. ಕವಿ ಎಂದರೆ ಸಂವೇದನಾಶೀಲ ಜೀವಿ. ‘ಜೀವಿಯು ಕವಿಯಲ್ಲ’ ಅಂದರೆ ಅವನು ಸಂವೇದನಾಶೂನ್ಯನಾಗಿದ್ದಾನೆ ಎಂದರ್ಥ. ಕೊಳಲ ನಾದವನ್ನು ಕೇಳಲಾರದ, ಬೆಳದಿಂಗಳಲ್ಲಿ ಸುಖಿಸಲಾರದ ಇಂತಹ ಜೀವಿಯ ಪಾಲಿಗೆ ಈ ಜಗತ್ತು ನಿರ್ಜೀವವಾದ ಕಲ್ಲಿನಂತೆಯೇ ಸರಿ.

ಈ ಸಂವೇದನಾಶೂನ್ಯ ಪ್ರಾಣಿಸಂಕುಲದಲ್ಲಿ ಶ್ರೇಣೀಕೃತ ಶೋಷಣೆ ಇದೆ. ಗಿಡುಗವು ಪಾರಿವಾಳಗಳನ್ನು ಬೇಟೆಯಾಡುತ್ತಿದೆ. ಗೋವು ಸಿಂಹಕ್ಕೆ ಸಿಹಿತುತ್ತಾಗಿದೆ. ಹದ್ದಿನ ಭಾಗಾದಿ ಎಂದರೆ ಹಾವು. ಅದು ಹದ್ದಿನ ಊಟವಾಗಿದೆ:

ಪಾರಿವಾಳಗಳ ಮೈಜೋಡು

ಗಿಡುಗದ ಮುಖಕೀಡು.

ಆವಿಗೆ ದಿನದಿನವೂ ಕುತ್ತು

ಸಿಂಹಕೆ ಸವಿತುತ್ತು.

ಮಲಸಂಬಂಧದ ಭಾಗಾದಿ

ಹದ್ದಿಗೆ ಹಳೆಹಾದಿ.

ಬೇಂದ್ರೆಯವರು ಇಲ್ಲಿ ಕೊಟ್ಟ ಮೂರೂ ಉದಾಹರಣೆಗಳು ಮೂರು ಪುರಾಣಕತೆಗಳನ್ನು ಅವಲಂಬಿಸಿವೆ. ಮೊದಲನೆಯ ಕತೆ ಹೀಗಿದೆ. ಪುರಾಣಕಾಲದಲ್ಲಿ ಭಾರತದೇಶವನ್ನಾಳಿದ ಚಕ್ರವರ್ತಿಗಳಲ್ಲಿ ಶಿಬಿಯು ತನ್ನ ನ್ಯಾಯತತ್ಪರತೆಗೆ ಹೆಸರಾದವನು. ಒಮ್ಮೆ ಆತನ ಆಸ್ಥಾನಕ್ಕೆ ಪಾರಿವಾಳಗಳ ಜೋಡೊಂದು ಹಾರಿ ಬರುತ್ತದೆ ಹಾಗು ಆ ಪಾರಿವಾಳಗಳು ಶಿಬಿಯಲ್ಲಿ ರಕ್ಷಣೆಯನ್ನು ಕೋರುತ್ತವೆ. ಅದೇ ಸಮಯದಲ್ಲಿ ಅವುಗಳನ್ನು ಅಟ್ಟಿಸಿಕೊಂಡು ಒಂದು ಗಿಡುಗವು ಅಲ್ಲಿಗೆ ಬರುತ್ತದೆ. ಪಾರಿವಾಳಗಳು ತನ್ನ ಆಹಾರವಾಗಿದ್ದರಿಂದ ಅವುಗಳನ್ನು ತನಗೆ ಒಪ್ಪಿಸಬೇಕೆಂದು ಗಿಡುಗವು ನ್ಯಾಯ ಕೇಳುತ್ತದೆ. ಶಿಬಿಗೆ ಇದೊಂದು ಧರ್ಮಸಂಕಟ. ಆಗ ಆತನು ತನ್ನ ಮಾಂಸವನ್ನೇ ಗಿಡುಗಕ್ಕೆ ನೀಡಿ, ಪಾರಿವಾಳಗಳನ್ನು ರಕ್ಷಿಸುವ ನಿರ್ಧಾರ ಕೈಗೊಳ್ಳುತ್ತಾನೆ. ಪಕ್ಷಿವೇಷದಲ್ಲಿದ್ದ ದೇವತೆಗಳು ನಿಜರೂಪ ತಾಳಿ ಶಿಬಿಯನ್ನು ಶ್ಲಾಘಿಸುತ್ತಾರೆ.

ಎರಡನೆಯ ಕತೆಯು ರಘುವಂಶದ ಪ್ರಸಿದ್ಧ ಚಕ್ರವರ್ತಿಯಾದ ದಿಲೀಪನಿಗೆ ಸಂಬಂಧಿಸಿದ ಕತೆ. ದಿಲೀಪನಿಗೆ ಮಕ್ಕಳಿರಲಿಲ್ಲ. ಕಾಮಧೇನುವಿನ ಮಗಳಾದ ಸುರಭಿಯ ಸೇವೆಯನ್ನು ಮಾಡಿದರೆ ಮಕ್ಕಳಾಗುವರು ಎಂದು ಋಷಿಗಳು ಆತನಿಗೆ ಹೇಳುತ್ತಾರೆ. ದಿಲೀಪನು ಅಡವಿಯಲ್ಲಿ ಒಂದು ಆಶ್ರಮವನ್ನು ಕಟ್ಟಿಕೊಂಡು ಸುರಭಿಯ ಸೇವಾಕೈಂಕರ್ಯವನ್ನು ನಿಷ್ಠೆಯಿಂದ ಕೈಕೊಳ್ಳುತ್ತಾನೆ.

ಸುರಭಿಯನ್ನು ಒಮ್ಮೆ ಹುಲ್ಲು ಮೇಯಿಸಲೆಂದು ಕರೆದುಕೊಂಡು ಹೋದಾಗ, ಸಿಂಹವೊಂದು ಸುರಭಿಯನ್ನು ಅಡ್ಡಗಟ್ಟಿ ತಿನ್ನಲು ಸಿದ್ಧವಾಗುತ್ತದೆ. ದಿಲೀಪನು ಸಿಂಹಕ್ಕೆ ತನ್ನನ್ನೇ ಬಲಿ ಕೊಟ್ಟು ಸುರಭಿಯನ್ನು ಉಳಿಸಲು ಸಿದ್ಧನಾಗುತ್ತಾನೆ. ಆ ಸಿಂಹವು ಕೇವಲ ಮಾಯಾಸಿಂಹವಾಗಿದ್ದು, ದೇವತೆಗಳು ದಿಲೀಪನ ನಿಷ್ಠೆಯನ್ನು ಮೆಚ್ಚಿಕೊಳ್ಳುತ್ತಾರೆ.

ಮೂರನೆಯ ಕತೆಯು ಗರುಡ ಹಾಗು ಸರ್ಪಗಳ ವೈರಕ್ಕೆ ಸಂಬಂಧಿಸಿದ ಕತೆಯಾಗಿದೆ. ಗರುಡ ಹಾಗು ನಾಗರು ಒಂದೇ ತಂದೆಯ ಇಬ್ಬರು ಹೆಂಡಂದಿರಲ್ಲಿ ಹುಟ್ಟಿದವರು. ಮಲತಾಯಿ ಮಕ್ಕಳಾದ ಇವರನ್ನು ಕವಿಯು ‘ಮಲಸಂಬಂಧದ ಭಾಗಾದಿ’ ಎಂದು ಬಣ್ಣಿಸುತ್ತಾರೆ. (ಭಾಗಾದಿ ಎಂದರೆ ಆಸ್ತಿಯಲ್ಲಿ ಭಾಗ ಪಡೆಯುವ ಹಕ್ಕನ್ನು ಹೊಂದಿದವನು.) ಹೀಗಾಗಿ ಇವರಲ್ಲಿ ಜಾತವೈರವಿರುತ್ತದೆ. ಗರುಡನು ನಾಗರಿಗಿಂತ ಬಲಿಷ್ಠನಾಗಿದ್ದರಿಂದ, ನಾಗರ ಪ್ರದೇಶದಲ್ಲಿ ಹೊಕ್ಕು, ಕಂಡಕಂಡ ನಾಗರನ್ನೆಲ್ಲ ಕುಕ್ಕಿ ತಿನ್ನಲು ಪ್ರಾರಂಭಿಸುತ್ತಾನೆ. ಆಗ ನಾಗರೆಲ್ಲರೂ ಗರುಡನೊಡನೆ ಒಂದು ಒಪ್ಪಂದವನ್ನು ಮಾಡಿಕೊಳ್ಳುತ್ತಾರೆ. ಒಪ್ಪಂದದ ಮೇರೆಗೆ ಪ್ರತಿದಿನವೂ ಸರದಿಯ ಪ್ರಕಾರ ಒಬ್ಬ ನಾಗನು ಗರುಡನಿಗೆ ಬಲಿಯಾಗಬೇಕು.

ಜೀಮೂತವಾಹನ ಎನ್ನುವ ವಿದ್ಯಾಧರನು ಅಕಸ್ಮಾತ್ತಾಗಿ ಬಲಿಗೆ ಸಿದ್ಧನಾದ ಓರ್ವ ನಾಗನನ್ನು ನೋಡುತ್ತಾನೆ. ರೋದಿಸುತ್ತಿರುವ ಅವನ ತಾಯಿಯನ್ನು ನೋಡಿ, ಮರುಕಗೊಂಡ ಜೀಮೂತವಾಹನನು ನಾಗನನ್ನು ಕಳುಹಿಸಿಬಿಟ್ಟು ತಾನೇ ಬಲಿವೇಷದಲ್ಲಿ ಅಲ್ಲಿ ನಿಂತುಕೊಳ್ಳುತ್ತಾನೆ. ಜೀಮೂತವಾಹನನನ್ನೇ ನಾಗನೆಂದು ಭಾವಿಸಿದ ಗರುಡನು ಅವನನ್ನು ಕುಕ್ಕಿ ತಿನ್ನುವಾಗ, ಈತನು ನಾಗನಲ್ಲ ಎಂದು ಅರಿಯುತ್ತಾನೆ. ಜೀಮೂತವಾಹನನನ್ನು ಬಿಡುಗಡೆ ಮಾಡಿದ ಗರುಡನು ನಾಗರ ಹತ್ಯೆಯನ್ನು ನಿಲ್ಲಿಸಿ ಬಿಡುತ್ತಾನೆ.

ಈ ಮೂರೂ ಪುರಾಣಕತೆಗಳಲ್ಲಿ ಒಂದು ಸಂದೇಶವಿದೆ. ಬಲಿಷ್ಠ ಜೀವಿಯು ದುರ್ಬಲ ಜೀವಿಯನ್ನು ಭಕ್ಷಿಸುವದು ಪ್ರಾಣಿಸಂಕುಲದ ವ್ಯವಸ್ಥೆಯಾಗಿದೆ. ಮಾನವೀಯ ಸಂವೇದನೆಯುಳ್ಳ ಶಿಬಿ , ದಿಲೀಪ ಹಾಗು ಜೀಮೂತವಾಹನರು ಸ್ವಂತ ಬಲಿದಾನದ ಮೂಲಕ ಈ ಶೋಷಣೆಯನ್ನು ತಪ್ಪಿಸಲು ಪ್ರಯತ್ನಿಸಿದರು. ಅದೇ ಪ್ರಕಾರ ಮಾನವ ಜಗತ್ತಿನಲ್ಲಿಯೂ ಸಹ ಶೋಷಣೆ ನಡದೇ ಇದೆ. ಬಲಿಷ್ಠರು ದುರ್ಬಲರನ್ನು ಶೋಷಿಸುವ ಸಾಮಾಜಿಕ ಶೋಷಣೆ ನಿರಂತರವಾಗಿದೆ. ಇದನ್ನು ತಡೆಗಟ್ಟುವ ಶಿಬಿ, ದಿಲೀಪ ಹಾಗು ಜೀಮೂತವಾಹನರು ಮಾತ್ರ ಈಗ ಇಲ್ಲಿಲ್ಲ! ಈ ಆದರ್ಶವು ನಮ್ಮ ನಾಡಿನಲ್ಲಿ ಈಗ ಮಾಯವಾಗಿದೆ.

ಈ ಆಲೋಚನೆಯು ಕವನದ ಕೊನೆಯ ನುಡಿಯಲ್ಲಿ ವ್ಯಕ್ತವಾಗಿದೆ:

ಶಿಬಿ ದಿಲೀಪ ಜೀಮೂತವಾಹನರು

ಮಣ್ಣನು ಮುಕ್ಕಿದರು.

ಸ್ವರ್ಗದೊಳಿದ್ದೂ ಸಂಶಯ ಬಂದಿತು

ಕಣ್ಗಳು ತಿಕ್ಕಿದರು.

ತಮ್ಮ ನಾಡಿನಲಿ ನಡೆದಿಹ ಲೀಲೆಯ

ನೋಡುತ ಬಿಕ್ಕಿದರು.

ಶಿಬಿ, ದಿಲೀಪ ಹಾಗು ಜೀಮೂತವಾಹನರು ಭಾರತೀಯ ಆದರ್ಶದ ಶಿಖರಗಳು. ಈ ಆದರ್ಶಗಳು ನಮ್ಮ ನಾಡಿನಲ್ಲಿ ಈಗ ಮಾಯವಾಗಿವೆ. ‘ಮಣ್ಣನು ಮುಕ್ಕಿದರು’ ಎಂದು ಹೇಳುವಾಗ ಈ ಆದರ್ಶಪುರುಷರು ಮರಣಹೊಂದಿದರು ಎಂದು ಹೇಳುತ್ತಲೇ, ಅವರ ಆದರ್ಶಗಳೂ ಸಹ ಮಣ್ಣು ಮುಕ್ಕಿದವು ಎಂದು ಕವಿಯು ಶ್ಲೇಷೆಯನ್ನು ಸೂಚಿಸುತ್ತಾನೆ. ಸ್ವರ್ಗಸ್ಥರಾದ ಅವರು ತಮ್ಮ ನಾಡಿನ ದುರವಸ್ಥೆಯನ್ನು ನೋಡಿದಾಗ, ‘ಇದು ನಿಜವೇ?!’ ಎಂದು ಕಣ್ಣುಗಳನ್ನು ವಿಸ್ಮಯದಿಂದ ತಿಕ್ಕಿಕೊಳ್ಳುತ್ತಾರೆ! ಮತ್ತು ತಮ್ಮ ನಾಡಿನ ನೈತಿಕ, ಸಾಂಸ್ಕೃತಿಕ ದುರವಸ್ಥೆಯನ್ನು ಕಂಡು ವ್ಯಥೆಯಿಂದ ಬಿಕ್ಕುತ್ತಿದ್ದಾರೆ ಎಂದು ಕವಿಯು ಹೇಳುತ್ತಾನೆ. ಇಂತಹ ವ್ಯವಸ್ಥೆ ಬದಲಾದೀತೆನ್ನುವ ಆಶಾಭಾವವನ್ನು ಕವನದ ಕೊನೆಯಲ್ಲಿ ಕವಿಯು ತೋರಿಸುವದಿಲ್ಲ. ಅನಾದಿ ಕಾಲದಿಂದ ನಡೆದು ಬಂದ ವ್ಯವಸ್ಥೆಯಲ್ಲಿ ಬದಲಾವಣೆ ಸಾಧ್ಯವಿಲ್ಲ ಎನ್ನುವ ಅರಿವು ಕವಿಗಿದೆ.

ಶಿಬಿ ಮೊದಲಾದ ನಮ್ಮ ಪೂರ್ವಜರು ಪುಣ್ಯವಂತರು . ಅವರು ಸ್ವರ್ಗವಾಸಿಗಳು. ಆದರೆ ಅಲ್ಲಿಯೂ ಅವರು ಕಣ್ಣೀರಿಡುವಂತಹ ಯಾವ ಆಟವನ್ನು ಅವರು ಭಾರತದಲ್ಲಿ ನೋಡುತ್ತಲಿದ್ದಾರೆ ಎನ್ನುವದನ್ನು ಕವಿ ಮುಂದಿನ ನುಡಿಯಲ್ಲಿ ಹೇಳುತ್ತಾರೆ:

ದುಡಿವರ ಉಸಿರಿಗೆ ದಣಿವಿಲ್ಲ

ಕೊನೆಗೂ ತಣಿವಿಲ್ಲ.

ಕೂಸುಗಳಾಟಕೆ ಕಳೆಯಿಲ್ಲ

ಭೂಮಿಗೆ ಬೆಳೆಯಿಲ್ಲ.

ಹೆಣ್ಣಿನ ಕಂಬನಿ ತೊಡೆದಿಲ್ಲ

ಗಂಡಿಗೆ ಬಿಡುವಿಲ್ಲ.

ಶೋಷಣಾಜಾಲದಲ್ಲಿ ಸಿಲುಕಿದ ಶ್ರಮಿಕರು ದಣಿವೆನ್ನದೇ ದುಡಿಯುತ್ತಲೆ ಇದ್ದಾರೆ. ಆದರೆ ಕೊನೆಗೂ ಇವರ ದುಡಿತಕ್ಕೆ ‘ತಣಿವು’ ಅಂದರೆ ತೃಪ್ತಿ ಸಿಗುತ್ತಿಲ್ಲ. ದುಡಿದವನಿಗೆ ತೃಪ್ತಿ ಸಿಗುವದು ಯಾವಾಗ? ತನ್ನ ಸಂಸಾರದ ಪ್ರಾಥಮಿಕ ಅವಶ್ಯಕತೆಗಳನ್ನಾದರೂ ಪೂರೈಸಲು ಅವನಿಗೆ ಶಕ್ಯವಾದಾಗ ತಾನೆ? ತನ್ನ ಹೆಂಡತಿ, ಮಕ್ಕಳಿಗೆ ಅರೆಹೊಟ್ಟೆ ಊಟ ಹಾಕಲೂ ಸಹ ಅವನಿಗೆ ಸಾಧ್ಯವಾಗದಿದ್ದರೆ? ಆ ಸಮಯದಲ್ಲಿ ಆಟವಾಡುವ ಮಕ್ಕಳೂ ಸಹ ಕಳಾಹೀನ ಮುಖ ಹೊತ್ತುಕೊಂಡು ನಿಲ್ಲುವರು. ಅದನ್ನು ನೋಡುತ್ತಿರುವ ತಾಯಿ ಕಣ್ಣೀರು ಹಾಕದಿರುವಳೆ? ಆದರೇನು, ಅಸರಂತ ದುಡಿಮೆಯ ಚಕ್ರದಲ್ಲಿ ಸಿಲುಕಿದ ಗಂಡಿಗೆ ತನ್ನ ಹೆಂಡತಿಯ ಕಣ್ಣೀರು ಒರೆಸಲೂ ಸಹ ಸಮಯವಿಲ್ಲ! ಆ ಕಾಲದ ನಮ್ಮ ನಾಡಿನ ಬಹುತೇಕ ಸಂಸಾರಗಳ ಬವಣೆಯನ್ನು ಕವಿ ಮೇಲಿನಂತೆ ಚಿತ್ರಿಸಿದ್ದಾರೆ.

ತನ್ನ ಸಂಸಾರದ ಸಂಕಷ್ಟವನ್ನು ಪರಿಹರಿಸಲಾಗದೆ, ಅಸಹಾಯಕತೆಯಿಂದ ಬಳಲುವವನ ಮನೋಸ್ಥಿತಿ ಹೇಗಿರುತ್ತದೆ? ಅದನ್ನು ಕವಿಯು ಹೀಗೆ ಬಣ್ಣಿಸುತ್ತಾನೆ:

ಹಸಿವಿನ ಕೂಗಿನ ಕಹಳೆಯ ಕೇಳಿ

ಜೀವವು ನಡುಗುವದು.

ಸಾವಿನ ಎದೆಗಳ ಭೇರಿಗೆ ಎತ್ತೋ

ಓಡಲು ತೊಡಗುವದು.

ಮನುವಿನ ಮಕ್ಕಳ ಬೇಟೆಯ ಕಂಡು

ತನ್ನೊಳಗಡಗುವದು.

ಕಹಳೆ ಮತ್ತು ಭೇರಿ ಇವು ರಣರಂಗದಲ್ಲಿ ಬಳಸುವ ವಾದ್ಯಗಳು. ಕವಿಯು ನೋಡುತ್ತಿರುವದು ಸಂಸಾರದ ರಣರಂಗ. ಇಲ್ಲಿ ಈತನು ಎದುರಿಸುತ್ತಿರುವದು ಹಸಿವು ಹಾಗು ಸಾವು ಎನ್ನುವ ವೈರಿಗಳನ್ನು. ‘ಹಸಿವು, ಹಸಿವು’ ಎನ್ನುವ ಕೂಗೇ ಇವನಿಗೆ ಕಹಳೆಯ ಧ್ವನಿಯಂತೆ ಕೇಳುತ್ತದೆ. ಹಸಿವು ಹಾಗು ರೋಗ ರುಜಿನ ಇವು ಶೋಷಿತರ ಸಾವಿನ ಸರಣಿಯನ್ನೇ ಹೆಣೆದಿವೆ. ಇವರ ಎದೆಗಳ ತೊಗಲನ್ನೇ ಭೇರಿ ಮಾಡಿ ಬಾರಿಸಲಾಗುತ್ತಿದೆ. ಆದರೆ ಈ ರಣರಂಗದಲ್ಲಿ

ಶೋಷಿತರಿಗೆ ಹೋರಾಡುವ ಅವಕಾಶವೇ ಇಲ್ಲ. ಆದುದರಿಂದ ಇಲ್ಲಿ ನಡೆದದ್ದು ಬರಿ ಯುದ್ಧವಲ್ಲ, ಮಾನವ-ಬೇಟೆ.

ಈ ಬೇಟೆಯಲ್ಲಿ ಶೋಷಿತನು ಪ್ರತಿಕ್ರಿಯಿಸುವ ಬಗೆ ಹೇಗೆ? ಪ್ರಾಣಿಗಳ ಬೇಟೆಯನ್ನು ನೋಡಿರುವಿರಾ? ಬೇಟೆಗಾರರ ಸದ್ದಿಗೆ ಬೇಟೆಯ ಮೊದಲ ಪ್ರತಿಕ್ರಿಯೆ ಎಂದರೆ ಭಯ. ಬಳಿಕ ಈ ಪ್ರಾಣಿಯು ಬೇಟೆಗಾರರಿಂದ ತಪ್ಪಿಸಿಕೊಳ್ಳಲು ದಾರಿ ಕಂಡತ್ತ ಓಡತೊಡುಗುವದು. ಬೇಟೆಗಾರನ ಕೈಗೆ ಸಿಕ್ಕಿಬೀಳುವ ಸಂದರ್ಭ ಬಂದಾಗ ಬೇಟೆಯು ತನ್ನಲ್ಲೇ ಮುರುಟಿಕೊಳ್ಳುವದು. ಈ ಪ್ರತಿಕ್ರಿಯೆಗಳನ್ನು ಕವಿಯು ಶೋಷಿತರಿಗೂ ಅನ್ವಯಿಸಿ, ‘ಜೀವವು ನಡುಗುವದು…ಓಡಲು ತೊಡಗುವದು………ತನ್ನೊಳು ಅಡಗುವದು.’ ಎಂದು ಹೇಳಿದ್ದಾನೆ. ಆದರೆ ಇಲ್ಲಿ ನಡೆಯುತ್ತಿರುವದು ಪ್ರಾಣಿ-ಬೇಟೆಯಲ್ಲ; ಮನುವಿನ ಮಕ್ಕಳ ಬೇಟೆ, ಮಾನವ-ಬೇಟೆ.

ಇದಕ್ಕೆ ಪರಿಹಾರವೇನು? ನಮ್ಮ ಭಾರತೀಯ ತಾತ್ವಿಕತೆಯಲ್ಲಿ ಇದಕ್ಕೆ ಪರಿಹಾರವಿಲ್ಲವೆಂದು ಕವಿಯು ಸಂಕಟದಿಂದ ಹೇಳುತ್ತಾನೆ.

ಧರ್ಮಕೆ ‘ಧರ್ಮs’ ಎನಬೇಡಾ

ಕರ್ಮವು ಇದು ನೋಡಾ;

ಹಗರಣದೊಳಗಿನ ಸೋಗುಗಳು

ಅವುಗಳ ಕೂಗುಗಳು.

ಜೀವದೇವನೇ ಮೈವೆತ್ತು

ನೀನೇ ತಲೆಯೆತ್ತು.

ಯಾವುದಕ್ಕೆ ನಾವು ‘ಧರ್ಮಮಾರ್ಗ’ ಎಂದು ಉನ್ನತಭಾವದಲ್ಲಿ ನೋಡುತ್ತ ಬಂದಿದ್ದೇವೆಯೋ ಅದು ನಿಜವಾಗಿಯೂ ಧರ್ಮವೇ ಅಲ್ಲ. ಈ ತಪ್ಪು ಕರ್ಮದ ಫಲವನ್ನು ನಾವೀಗ ಉಣ್ಣಬೇಕಾಗಿದೆ! ಧರ್ಮ, ನೀತಿ ಇಂತಹ ದೊಡ್ಡ ದೊಡ್ಡ ಮಾತುಗಳೆಲ್ಲ ಹಗರಣಗಳ(=ಪ್ರಕರಣಗಳ=ನಾಟಕದ) ಸೋಗುಗಳ(=ಪಾತ್ರಗಳ) ಬುಡುಬುಡಿಕೆ ಅಷ್ಟೇ! ಈ ನಾಟಕವನ್ನು ನೋಡುತ್ತ ಕೂಡಬೇಡಿರಿ ಎಂದು ಕವಿ ಕರೆ ನೀಡುತ್ತಾರೆ. ಪ್ರತಿವ್ಯಕ್ತಿಯು ತನ್ನ ಅಂತರಂಗದ ವಿವೇಚನೆಯನ್ನು ಅನುಸರಿಸಬೇಕೇ ಹೊರತು ಕುರುಡು ಧರ್ಮಶಾಸ್ತ್ರಗಳನ್ನಲ್ಲ ಎನ್ನುವದು ಕವಿಯ ಕರೆಯಾಗಿದೆ. ಈ ಕರೆಯು ಶೋಷಿತರಿಗಿಂತ ಹೆಚ್ಚಾಗಿ ಶೋಷಕರಿಗೆ ನೀಡಿದ ಕರೆಯಾಗಿದೆ. ನಮ್ಮ ನಾಡಿನವರೇ ಆದ ಶೋಷಕವರ್ಗವೂ ಸಹ ಶ್ರಮಿಕರ ಶೋಷಣೆಯಲ್ಲಿ ಹಿಂದೆ ಬಿದ್ದಿರಲಿಲ್ಲ. ಈ ಶೋಷಕರಿಗೆ ಕವಿಯು ಕೊಡುತ್ತಿರುವ ಕರೆ ಇದು: “ಧರ್ಮದ ಒಣ ಸೋಗುಗಳನ್ನು ಬಿಟ್ಟು ಬಿಡಿ, ನೀವೇ ಒಳಿತನ್ನು ಅರಿತುಕೊಂಡು ಜೀವದೇವರಾಗಿರಿ!”

ಇಲ್ಲಿಯವರೆಗೆ ಭಾರತದಲ್ಲಿ ನಡೆದ ಒಣ ವೇದಾಂತ, ಒಣ ಶಾಸ್ತ್ರಾರ್ಥಗಳು ಜೀವೋಪಕಾರಿಯಾಗಿಲ್ಲ ಎಂದು ಕವಿಯು ಬೇಸರಿಸುತ್ತಾನೆ. ಇಂತಹ ತತ್ವಜ್ಞಾನಿಗಳ ಬಗೆಗೆ ಅವನಿಗೆ ಕನಿಕರವೇ ಹುಟ್ಟುತ್ತದೆ:

ವೇದಾಂತಿಯ ಮುಖಮುದ್ರೆಯ ನೋಡಿ

ಕನಿಕರ ಹುಟ್ಟುವದು.

ಹತ್ತವತಾರದ ಹೇಡಿತನಕ್ಕೆ

ಮನ ಗೊಣಗುಟ್ಟುವದು.

ಗಾಳಿಗೆ ಗಾಳಿಯು ಬಯಲಿಗೆ ಬಯಲು

ತಲೆ ರಣಗುಟ್ಟುವದು.

‘ಧರ್ಮವನ್ನು ಸ್ಥಾಪಿಸಲು ಪುನ: ಪುನ: ಹುಟ್ಟುತ್ತೇನೆ’ ಎನ್ನುವ ಭರವಸೆ ನೀಡಿದ ದೇವರ ಹತ್ತು ಅವತಾರಗಳು ಧರ್ಮವನ್ನು ಸ್ಥಾಪಿಸಿದವೆ? ಶೋಷಣೆಯಿಂದ ಮಾನವನನ್ನು ಪಾರು ಮಾಡಿದವೆ? ಇದನ್ನು ಸಾಧ್ಯ ಮಾಡಲಾರದ ಈ ದಶಾವತಾರಗಳು ಹೇಡಿ ಅವತಾರಗಳು ಎಂದು ಕವಿಯು ತನ್ನಲ್ಲಿ ತಾನೇ ಗೊಣಗಿಕೊಳ್ಳುತ್ತಾನೆ. ಯಾಕೆಂದರೆ, ಈ ಮಾತನ್ನು ಉದ್ಘೋಷಿಸಿ ಕ್ರಾಂತಿಯನ್ನು ಮಾಡೇನು ಎನ್ನುವ ವಿಶ್ವಾಸ ಆತನಲ್ಲಿ ಇಲ್ಲ. ಗಾಳಿಗೆ ಗಾಳಿ ಡಿಕ್ಕಿ ಹೊಡೆದರೆ ಅಥವಾ ಬಯಲಿಗೆ ಬಯಲು ಡಿಕ್ಕಿ ಹೊಡೆದರೆ, ವಾಸ್ತವ ಬದುಕು ಬದಲಾಗುವದಿಲ್ಲ. ನಮ್ಮ ಸಮಾಜದಲ್ಲಿ ಕ್ರಾಂತಿ ಹುಟ್ಟುವದಿಲ್ಲ. ಇದು ಕವಿಯ ಅಸಹಾಯಕ ನಿರ್ಣಯ. ಈ ಮಾತಿನ ಮನವರಿಕೆಯಿಂದಾಗಿ ಆತನ ತಲೆ ರಣಗುಟ್ಟುತ್ತಿದೆ.

ಈ ಕವನದ ಕೆಲವು ವೈಶಿಷ್ಟ್ಯಗಳು:

(೧) ಸಂವೇದನಾಶೀಲನಾದ ಕವಿಯ ನಿಟ್ಟುಸಿರಿನ ಕವನವಿದು. ಆದುದರಿಂದ ಈ ಕವನದಲ್ಲಿ ಅಬ್ಬರವಿಲ್ಲ, ಆಕ್ರೋಶವಿಲ್ಲ. ಇಂತಹ ಕವನಕ್ಕೆ ಅವಶ್ಯವಾದ ಪುಟ್ಟ ಪದಗಳ, ಪುಟ್ಟ ಸಾಲುಗಳ ಛಂದಸ್ಸನ್ನು ಕವಿ ಬಳಸಿದ್ದಾನೆ. ಕವನದಲ್ಲಿ ಬಳಕೆಯಾದ ಪದಗಳೂ ಸಹ ಮೃದು ಪದಗಳೇ ಆಗಿವೆ. ಪದಗಳು ಹಾಗು ಛಂದಸ್ಸು ಇವು ಕವಿತೆಯ ದೇಹವಿದ್ದಂತೆ. ಕಾವ್ಯವಸ್ತು ಅಂದರೆ ಕವನದ ಆತ್ಮವಿದ್ದಂತೆ. ಇವೆರಡೂ ಈ ಕವನದಲ್ಲಿ ಒಂದಕ್ಕೊಂದು ಸಂಪೂರ್ಣ ಅನುರೂಪವಾಗಿವೆ.

(೨) ಪದ-ಸಂರಚನೆಯು ಬೇಂದ್ರೆಯವರಲ್ಲಿ ಕಂಡು ಬರುವ ಒಂದು ವಿಶಿಷ್ಟವಾದ ಅದ್ಭುತ ಪ್ರತಿಭೆ. ‘ಪ್ರಾಣತರಂಗಿಣಿ’ ಎನ್ನುವ ಪದ-ಸಂರಚನೆಯನ್ನೇ ನೋಡಿರಿ. ತರಂಗಗಳು ಇರುವದರಿಂದ ನದಿಯನ್ನು ತರಂಗಿಣಿ ಎಂದು ಸ್ತ್ರೀರೂಪದಲ್ಲಿ ಕರೆಯಬಹುದು. ಪ್ರಾಣಪೋಷಣೆ ಮಾಡುವ ಇವಳ ಕಾರ್ಯವನ್ನು ಸೂಚಿಸಲು ಬೇಂದ್ರೆಯವರು ನದಿಯನ್ನು ‘ಪ್ರಾಣತರಂಗಿಣಿ’ ಎಂದು ಸಂಕೇತಿಸಿದ್ದಾರೆ.

(೩) ಪದ-ಸಂರಚನೆಯಷ್ಟೇ ಅಲ್ಲ, ಪದಗಳ ಅರ್ಥವನ್ನೇ ಬದಲಾಯಿಸಬಲ್ಲ ಸಾಮರ್ಥ್ಯ ಬೇಂದ್ರೆಯವರಿಗಿದೆ. ‘ದುಡುಕು’ ಪದಕ್ಕೆ `ಅವಿವೇಕದಿಂದ ಮುನ್ನುಗ್ಗು’ ಎನ್ನುವ ಅರ್ಥವಿದೆ. ಈ ಕವನದಲ್ಲಿ ನದೀದೇವಿಯು ‘ದಡಗಳ ದುಡುಕುವಳು’ ಎನ್ನುವ ಸಾಲನ್ನು ಪರೀಕ್ಷಿಸಿರಿ. ನದೀದೇವಿಯು ಇಲ್ಲಿ ವಿವೇಚನೆಯಿಲ್ಲದ ಕೆಲಸ ಮಾಡುತ್ತಿಲ್ಲ. ಆದರೆ ವಾತ್ಸಲ್ಯಮಯಿ ತಾಯಿಯು ತನ್ನ ಕೂಸುಗಳಿಗೆ ಮೊಲೆಯೂಡಿಸಲು ಧಾವಿಸುವಂತೆ, ಜೀವಪೋಷಣೆಗಾಗಿ ಅವಳು ತನ್ನ ದಂಡೆಗಳನ್ನು ಮೀರಿ ಹರಿಯುತ್ತಿದ್ದಾಳೆ. ಈ ಮಮತಾಸ್ವರೂಪದ ಅರ್ಥವನ್ನು ಎರಡೇ ಪದಗಳಲ್ಲಿ ಸಂಗ್ರಹಿಸಿ ಬಿಂಬಿಸಲು ಬೇಂದ್ರೆಯವರು ‘ದಡಗಳ ದುಡುಕುವಳು’ ಎಂದು ಹೇಳಿದ್ದಾರೆ. ಪದದ ಅರ್ಥವನ್ನು ಮಾರ್ಪಡಿಸಬಲ್ಲ ಪ್ರತಿಭೆ ಎಂದರೆ ಇದು! ವರಕವಿಗೆ ಮಾತ್ರ ಇದು ಸುಲಭದ ಸಿದ್ಧಿ!

೬. ನಾದಲೀಲೆ

ಹೆಚ್ಚಿನ ಓದಿಗೆ: http://sallaap.blogspot.com/2010/09/blog-post.html

ಗೋಪಾಲಕೃಷ್ಣ ಅಡಿಗರು ಕನ್ನಡದಲ್ಲಿ ನವ್ಯಕಾವ್ಯದ ಜನಕರೆಂದೇ ಖ್ಯಾತರಾದವರು. ಗೌರೀಶ ಕಾÊಕಿಣಿಯವರು ಕನ್ನಡದ ಶ್ರೇಷ್ಠ ಸಾಹಿತ್ಯಚಿಂತಕರು. ಅಡಿಗರು ಒಮ್ಮೆ ಕಾÊಕಿಣಿಯವರನ್ನು ಗೋಕರ್ಣದಲ್ಲಿ ಭೆಟ್ಟಿಯಾದ ಸಂದರ್ಭದಲ್ಲಿ ಸಾಹಿತ್ಯ ಸಂವಾದ ನಡೆಯಿತು. ಆ ಸಂದರ್ಭದಲ್ಲಿ ಅಡಿಗರು ಕಾವ್ಯರಚನೆಯ ಪ್ರಯತ್ನ ಹಾಗು ಕಾವ್ಯಸಾಫಲ್ಯದ ಬಗೆಗೆ ಹೀಗೆ ಹೇಳಿದ್ದರು:

“ಕವಿಯ ಕಾವ್ಯರಚನಾಸಂಕಲ್ಪ ಹಾಗು ಆತನ ಕಾವ್ಯಸಿದ್ಧಿ ಇವುಗಳ ನಡುವೆ ಅಂತರವಿದ್ದೇ ಇರುತ್ತದೆ. ಕನ್ನಡದಲ್ಲಿ ಈ ಸಂಕಲ್ಪ ಹಾಗು ಸಿದ್ಧಿಗಳ ನಡುವೆ ಏನೂ ಅಂತರವಿಲ್ಲದ ಒಬ್ಬರೇ ಕವಿಯೆಂದರೆ ಬೇಂದ್ರೆ.”

ಬೇಂದ್ರೆಯವರ ‘ನಾದಲೀಲೆ’ ಕವನವನ್ನು ಅಭ್ಯಾಸ ಮಾಡಿದಾಗ, ಅಡಿಗರ ಮಾತಿನ ಸತ್ಯ ಗೋಚರಿಸುತ್ತದೆ.

‘ನಾದಲೀಲೆ’ ಕವನದ ತಿರುಳು ಹೀಗಿದೆ:

ಹುಟ್ಟು ಮತ್ತು ಸಾವು ಇವು ಸಾರ್ವತ್ರಿಕ ಸತ್ಯಗಳು. ಈ ಬದುಕೆಂದರೆ ಹುಟ್ಟು ಮತ್ತು ಸಾವಿನ ನಡುವಿನ ಆಟವಾಗಿದೆ. ಸಾವಿನ ಕತ್ತಿ ತಲೆಯ ಮೇಲೆಯೇ ತೂಗುತ್ತಿದ್ದರೂ ಸಹ ಅದರ ಅರಿವು ಮಾತ್ರ ಯಾವ ಜೀವಿಗೂ ಇರುವದಿಲ್ಲ. ಈ ಅಜ್ಞಾನಸುಖದಿಂದಲೇ ಪ್ರತಿ ಜೀವಿಯೂ ಜೀವನ್ಮುಖಿಯಾಗಿ ಬದುಕಿನ ಆಹ್ಲಾದವನ್ನು ಅನುಭವಿಸುತ್ತದೆ. ಆದರೆ ಈ ಜೀವಿಗೆ ತಿಳಿಯದಂತೆಯೇ ಮೃತ್ಯು ಅದನ್ನು ಹಿಂಬಾಲಿಸುತ್ತಿರುತ್ತದೆ. ಇದು ವಿಶ್ವಸತ್ಯ. ಹಾಗಿದ್ದರೆ ಈ ಬದುಕೊಂದು ನಿರರ್ಥಕ ಪ್ರಯಾಣವೆ? ಅಲ್ಲವೆನ್ನುತ್ತಾರೆ ಬೇಂದ್ರೆಯವರು. ಈ ಬದುಕು ದೇವನಾಡುತ್ತಿರುವ ಲೀಲೆ. ಆತ ನಮ್ಮ ಕಣ್ಣಿಗೆ ಕಾಣಲಾರ. ದೇವನು ಕಾಣದಿದ್ದರೂ ಸಹ ಆತನ ಸೃಷ್ಟಿಯ ಮಹತ್ತು ನಮ್ಮ ಕಣ್ಣೆದುರಿಗಿದೆ. ಅದನ್ನು ಅರಿತು ನಾವು ಬದುಕಿನ ಕೋಲಾಟದಲ್ಲಿ ಶ್ರದ್ಧೆಯಿಟ್ಟು ಭಾಗವಹಿಸಬೇಕು.

ಕವನದ ವಿಧಾನ ಹೀಗಿದೆ:

ಕವನವು ಪ್ರಾರಂಭವಾಗುವದು ಕೋಲಾಟದ ಹಾಡಿನ ಪಲ್ಲದೊಂದಿಗೆ. ವರ್ಷಾಕಾಲವು ಮುಗಿದು, ಆಹ್ಲಾದಕರ ವಾತಾವರಣವು ಎಲ್ಲೆಲ್ಲೂ ಹಬ್ಬಿರುವಾಗ, ಹೆಂಗಳೆಯರು ಕೋಲಾಟದ ಹಬ್ಬವನ್ನು ಉತ್ಸಾಹದಿಂದ ಜರುಗಿಸುತ್ತಾರೆ. ಮುಖ್ಯ ಹಾಡನ್ನು ಒಬ್ಬರು ಅಥವಾ ಇಬ್ಬರು ಹಾಡಿದರೆ, ಉಳಿದ ಗೆಳತಿಯರು ಗುಂಪಾಗಿ, “ಕೋಲೆ ಸಖೀ, ಚಂದ್ರಮುಖೀ…..” ಎಂದು ಪಲ್ಲವನ್ನು ಹಾಡುತ್ತಿರುತ್ತಾರೆ.

ಆದರೆ ಈ ಗೀತೆಯಲ್ಲಿ, ಹಾಡು ಹೇಳುತ್ತಿರುವ ವ್ಯಕ್ತಿ ಓರ್ವ ಗಂಡಸು. ಆತ ನಿಸರ್ಗದಲ್ಲಿಯ ಅರುಣೋದಯದ ಸಮಯದ ಮೂರು ದೃಶ್ಯಗಳನ್ನು ಮೂರು ನುಡಿಗಳಲ್ಲಿ ಬಣ್ಣಿಸಿ ತನ್ನ ನಲ್ಲೆಗೆ ಹೇಳುತ್ತಿದ್ದಾನೆ. ನಾಲ್ಕನೆಯ ನುಡಿಯಲ್ಲಿ ಆತನ ಕಾಣ್ಕೆ ಇದೆ.

ಅರುಣೋದಯವು ಬದುಕಿನ ಪ್ರಾರಂಭದ ಸಂಕೇತವಾಗಿದೆ. ಕವಿಯು ಅರುಣೋದಯದಲ್ಲಿ ನಿಸರ್ಗದಲ್ಲಿಯ ಜೀವಿಗಳ ಜೀವನೋತ್ಸಾಹವನ್ನು ಬಣ್ಣಿಸುತ್ತಲೇ, ಆ ಜೀವಿಗಳ ಕಣ್ಣಿಗೆ ಬೀಳದಂತಹ ಮೃತ್ಯುವಿನ ಕಡೆಗೆ ತನ್ನ ನಲ್ಲೆಯ ಗಮನ ಸೆಳೆಯುತ್ತಾನೆ. ಮೊದಲನೆಯ ನುಡಿಯಲ್ಲಿ ಕಾಡಿನ ಮುಗ್ಧ ಪ್ರಾಣಿಗಳಾದ ಚಿಗರಿಗಳ ಆಟವನ್ನು ವರ್ಣಿಸಲಾಗಿದೆ. ಎರಡನೆಯ ನುಡಿಯಲ್ಲಿ ನಾಡಿನ ಪ್ರಾಣಿಗಳಾದ ಗೋಸಮೂಹದ ಉಲ್ಲಾಸದ ವರ್ಣನೆ ಇದೆ. ಮೂರನೆಯ ನುಡಿಯಲ್ಲಿ ಮಾನವಜೀವಿಯ ಪ್ರಣಯದಾಟವಿದೆ. ಈ ಮೂರೂ ನುಡಿಗಳಲ್ಲಿ ಬದುಕಿನ ಕೋಲಾಟವನ್ನು ಕೆಡೆಯಬಲ್ಲ ಮೃತ್ಯುವಿನ ಸೂಚನೆ ಇದೆ. ಈ ಜೀವಿಗಳನ್ನು ಕಾಯುವ ಗೋಪಾಲಕ ಎಲ್ಲಿಹನೋ ಎಂದು ಕವಿಯು ಆತಂಕಗೊಳ್ಳುತ್ತಾನೆ. ಮರುಕ್ಷಣದಲ್ಲಿಯೇ ಆ ಗೋಪಾಲನ ವಿಶ್ವಾತ್ಮರೂಪವನ್ನು ಅರಿತುಕೊಳ್ಳುತ್ತಾನೆ; ನಾಲ್ಕನೆಯ ನುಡಿಯಲ್ಲಿ ಎಲ್ಲ ಜೀವಿಗಳ ರಕ್ಷಕನಾದ ಭಗವಂತನ ಕೋಲಾಟವಿದು ಎನ್ನುವ ದರ್ಶನವಿದೆ. ಕವಿಗೆ ದೇವನಲ್ಲಿಯ ಶ್ರದ್ಧೆ ದೃಢವಾಗುತ್ತದೆ.

‘ನಾದಲೀಲೆ’ ಕವನದ ಪೂರ್ತಿಪಾಠ ಹೀಗಿದೆ:

ಕೋಲು ಸಖೀ, ಚಂದ್ರಮುಖೀ, ಕೋಲೆ ನಾದಲೀಲೆ ||ಪಲ್ಲ||

ಮುಂಜಾವದ ಎಲರ ಮೂಸಿ ನೋಡುತಿಹವು ನಲ್ಲೆ

ತರಳ ಎರಳೆ, ಚಿಗುರ ಚಿಗುರೆ, ಹೂವು ಹೂವು ಹುಲ್ಲೆ,

ಕಂಗೊಳಿಸುವ ಕೆಂಪು ಮುಂದೆ, ಕಂಗೆಡಿಸುವ ಮಂಜು ಹಿಂದೆ

ಅತ್ತಣಿಂದ ಬೇಟೆಗಾರ ಬರುವ ನಾನು ಬಲ್ಲೆ.

ಮುಂಜಾವದ ಎಲರ ಮೂಸಿ ನೋಡುತಿಹವು ನಲ್ಲೆ

ಕೋಲು ಸಖೀ. . . .

ಬೀರುತಿರುವ ಪ್ರಾಣವಾಯು ಹೀರುತಿಹವೆ ನೀರೆ

ಕರೆವ ಕರುವು, ಕುಣಿವ ಮಣಕ, ತೊರೆವ ಗೋಗಭೀರೆ,

ಕಂಗೊಳಿಸುವ ಕೆಂಪು ಮುಂದೆ, ಕಂಗೆಡಿಸುವ ಮಂಜು ಹಿಂದೆ

ಕಾಣೆ ಕೊಳಲಿನವನ ಎನುವೆ, ಎಲ್ಲು ಇಹನು ಬಾರೆ.

ಬೀರುತಿರುವ ಪ್ರಾಣವಾಯು ಹೀರುತಿಹವೆ ನೀರೆ

ಕೋಲು ಸಖೀ. . . .

ಬೆಳ್ಳಿಚುಕ್ಕೆ ಚಿಕ್ಕೆಯಾಗಿ ಮುಳುಗಿತಲ್ಲೆ; ಬಾಲೆ

ಮುಕುಲ, ಅಲರು, ಮಲರು, ಪಸರ ಕಂಡು ಕಣ್ಣು ಸೋಲೆ

ಕಂಗೊಳಿಸುವ ಕೆಂಪು ಮುಂದೆ, ಕಂಗೆಡಿಸುವ ಮಂಜು ಹಿಂದೆ

ಕಾದಲನೆಡೆ ಬೇಡ ಬಹಳು ಕಾದಲೆ ಹೂಮಾಲೆ.

ಬೆಳ್ಳಿಚುಕ್ಕೆ ಚಿಕ್ಕೆಯಾಗಿ ಮುಳುಗಿತಲ್ಲೆ ಬಾಲೆ

ಕೋಲು ಸಖೀ. . . .

ಬೇಟೆಯಲ್ಲ; ಆಟವೆಲ್ಲ; ಬೇಟದ ಬಗೆ, ನಾರಿ.

ಮುಗಿಲ ಬಾಯ ಗಾಳಿಕೊಳಲ ಬೆಳಕಹಾಡ ಬೀರಿ

(ಕಂಗೊಳಿಸುವ ಕೆಂಪು ಇರಲಿ, ಕಂಗೆಡಿಸುವ ಮಂಜು ಬರಲಿ)

ಕಳೆಯಲಿಲ್ಲೆ ಕತ್ತಲಂಥ ಕತ್ತಲವೇ ಜಾರಿ?

ಬೇಟೆಯಲ್ಲ; ಆಟವೆಲ್ಲ, ಬೇಟದ ಬಗೆ, ನಾರಿ.

ಕೋಲು ಸಖೀ. . . .

ಈಗ ಕವನದ ಮೊದಲ ನುಡಿಯನ್ನು ಗಮನಿಸೋಣ:

ಕೋಲು ಸಖೀ, ಚಂದ್ರಮುಖೀ, ಕೋಲೆ ನಾದಲೀಲೆ ||ಪಲ್ಲ||

ಮುಂಜಾವದ ಎಲರ ಮೂಸಿ ನೋಡುತಿಹವು ನಲ್ಲೆ

ತರಳ ಎರಳೆ, ಚಿಗುರ ಚಿಗುರೆ, ಹೂವು ಹೂವು ಹುಲ್ಲೆ,

ಕಂಗೊಳಿಸುವ ಕೆಂಪು ಮುಂದೆ, ಕಂಗೆಡಿಸುವ ಮಂಜು ಹಿಂದೆ

ಅತ್ತಣಿಂದ ಬೇಟೆಗಾರ ಬರುವ ನಾನು ಬಲ್ಲೆ.

ಮುಂಜಾವದ ಎಲರ ಮೂಸಿ ನೋಡುತಿಹವು ನಲ್ಲೆ

ಕೋಲು ಸಖೀ. . . .

ಮುಂಜಾವಿನ ಹೊತ್ತಿನಲ್ಲಿ ಆಹ್ಲಾದಕರವಾದ ತಣ್ಣನೆಯ ಗಾಳಿಯು ಬೀಸುತ್ತಿರುತ್ತದೆ. ಕಾಡಿನ ಮುಗ್ಧ ಪ್ರಾಣಿಗಳಾದ ಚಿಗರೆಗಳು ಈ ಎಲರನ್ನು ಅಂದರೆ ಗಾಳಿಯನ್ನು ಮೂಸಿ ನೋಡುತ್ತ ಬದುಕಿನ ಆನಂದವನ್ನು ಸವಿಯುತ್ತಿವೆ. ಕವಿಯು ಸಾತ್ವಿಕ ಹಾಗು ಸುಂದರ ಪ್ರಾಣಿಗಳಾದ ಚಿಗರೆಗಳನ್ನಷ್ಟೇ ವರ್ಣಿಸುತ್ತಿರುವದನ್ನು ಗಮನಿಸಬೇಕು. ಈ ಚಿಗರೆಗಳಾದರೂ ಎಂತಹವು? ತರಳ ಎರಳೆ ಅಂದರೆ ಪುಟ್ಟ ಚಿಗರೆ ಮರಿ, ಚಿಗುರ ಚಿಗರೆ ಅಂದರೆ ಪ್ರಾಯವು ಚಿಗುರುತ್ತಿರುವ (=adolescent) ಚಿಗುರೆ ಹಾಗು ಹೂವು ಹೂವು ಹುಲ್ಲೆ ಅಂದರೆ ಗರ್ಭಧಾರಣೆಯ ಯೋಗ್ಯ ವಯಸ್ಸನ್ನು ತಲುಪಿದ ಚಿಗುರೆ. ಪ್ರಕೃತಿಯು ಸೃಷ್ಟಿಸುವದನ್ನು ಬಯಸುತ್ತದೆ, ಬೆಳೆಯುವದನ್ನು ಬಯಸುತ್ತದೆ ಎನ್ನುವ ಪ್ರಕೃತಿಯ ಹಂಬಲವನ್ನು ಈ ಎಳೆವಯಸ್ಸಿನ ಸಂಕೇತಗಳು ಹೇಳುತ್ತವೆ. ಈ ಸಾತ್ವಿಕ ಪ್ರಾಣಿಗಳ ಕಣ್ಣುಗಳ ಮುಂದೆ ಇರುವದು ಕಂಗೊಳಿಸುವ ಕೆಂಪು ಅಂದರೆ ಅರುಣೋದಯ, ಸೂರ್ಯೋದಯಕ್ಕಿಂತ ಮೊದಲು ಬಾನು ಕೆಂಪಾಗಿ ಕಾಣುವ ದೃಶ್ಯ. ಇದು ಬದುಕಿನಲ್ಲಿ ಉತ್ಸಾಹ ತುಂಬುವ ನೋಟ. ಆದರೆ ಈ ಮುಗ್ಧ ಪ್ರಾಣಿಗಳಿಗೆ ತಮ್ಮ ಹಿಂದೆ ಕಂಗೆಡಿಸುವ ಅಂದರೆ ಧೈರ್ಯಗುಂದಿಸುವಂತಹ ಮಂಜು ಇದೆ ಎನ್ನುವದು ಕಾಣುತ್ತಿಲ್ಲ. ಆ ಮಂಜಿನ ಪರದೆಯ ಹಿಂದೆ ಅಡಗಿರುವವನು ಬೇಟೆಗಾರ ಅಂದರೆ ಮೃತ್ಯು. ಇದರ ಅರಿವಿಲ್ಲದ ಈ ಮುಗ್ಧ ಪ್ರಾಣಿಗಳು ಜೀವಸ್ನೇಹಿಯಾದ ಮುಂಜಾವಿನ ಗಾಳಿಯನ್ನು ಸೇವಿಸುತ್ತ ಆನಂದದಿಂದಿವೆ.

(ಮೃತ್ಯುವು ಕ್ರೂರ ಪ್ರಾಣಿಗಳ ರೂಪದಲ್ಲಿಯೂ ಇರಬಹುದು ಎನ್ನುವ ಕಾರಣಕ್ಕಾಗಿ, ಕವಿಯು ಕೇವಲ ಸಾತ್ವಿಕ ಪ್ರಾಣಿಗಳ ಆಟವನ್ನು, ಆನಂದವನ್ನು ಬಣ್ಣಿಸಿದ್ದಾನೆ.)

ಈಗ ಎರಡನೆಯ ನುಡಿಯನ್ನು ನೋಡೋಣ:

ಬೀರುತಿರುವ ಪ್ರಾಣವಾಯು ಹೀರುತಿಹವೆ ನೀರೆ

ಕರೆವ ಕರುವು, ಕುಣಿವ ಮಣಕ, ತೊರೆವ ಗೋಗಭೀರೆ,

ಕಂಗೊಳಿಸುವ ಕೆಂಪು ಮುಂದೆ, ಕಂಗೆಡಿಸುವ ಮಂಜು ಹಿಂದೆ

ಕಾಣೆ ಕೊಳಲಿನವನ ಎನುವೆ, ಎಲ್ಲು ಇಹನು ಬಾರೆ.

ಬೀರುತಿರುವ ಪ್ರಾಣವಾಯು ಹೀರುತಿಹವೆ ನೀರೆ

ಕೋಲು ಸಖೀ. . . .

ಎರಡನೆಯ ನುಡಿಯಲ್ಲಿಯೂ ಸಹ ಎಳೆಯ, ಮುಗ್ಧ, ಸಾತ್ವಿಕ ಪ್ರಾಣಿಗಳ ಸಂಕೇತಗಳಿವೆ. ಆದರೆ ಈ ಪ್ರಾಣಿಗಳು ಕಾಡಾಡಿ ಪ್ರಾಣಿಗಳಲ್ಲ. ಮನುಷ್ಯನ ನಾಗರಿಕತೆಯ ಮೊದಲ ಮೆಟ್ಟಲಿನಲ್ಲಿ ಅವನ ಜೊತೆಗೆ ನಾಡಿನಲ್ಲಿ ನೆಲೆಸಿದ ಗೋ-ಸಮೂಹ. ಕರೆವ ಕರು ಅಂದರೆ female calf. ಕುಣಿವ ಮಣಕ ಅಂದರೆ male calf. ಇವು ಸಂತಾನವನ್ನು ಬೆಳೆಯಿಸುವ ಉತ್ಸಾಹದಲ್ಲಿರುವ ಎಳೆ ಜೀವಿಗಳು. ‘ಗೋಗಭೀರೆ’ ಅಂದರೆ ಈಗಾಗಲೇ ಸಂತಾನವನ್ನು ಪಡೆದಿರುವ ಗೋವು. ಇವಳನ್ನು ‘ ತೊರೆವ ಅಂದರೆ ಸಮೃದ್ಧಿಯಾಗಿ ಹಾಲು ನೀಡುತ್ತಿರುವ, ಪ್ರೌಢ ವಯಸ್ಸಿನ ಗೋವು ಎಂದು ಕವಿ ಬಣ್ಣಿಸುತ್ತಾನೆ. ಮುಂಜಾವಿನಲ್ಲಿ ಎಲ್ಲೆಲ್ಲೂ ಬೀಸುತ್ತಿರುವ ಪ್ರಾಣವಾಯುವನ್ನು (=oxygen) ಈ ಗೋ-ಸಮೂಹವೂ ಸಹ ಹೀರುತ್ತಿದೆ. ಇವುಗಳಿಗೂ ಸಹ ಅರುಣೋದಯದ ಕೆಂಪು ಕಾಣುತ್ತಿದೆಯೇ ಹೊರತು, ತಮ್ಮ ಹಿಂದೆ ಇರುವ ಮಂಜು ಕಾಣುತ್ತಿಲ್ಲ. ಈ ಗೋವುಗಳನ್ನು ಸಂರಕ್ಷಿಸಬೇಕಾದ, ಕೊಳಲು ಹಿಡಿದ ಗೋಪಾಲಕನು ಕವಿಗೆ ಕಾಣುತ್ತಿಲ್ಲ. ಆದರೆ ಆತನು ಎಲ್ಲೆಲ್ಲೂ ಇರುವನು ಹಾಗು ಈ ಗೋಸಮೂಹವನ್ನು ರಕ್ಷಿಸುವನು ಎನ್ನುವ ಭರವಸೆ ಕವಿಗಿದೆ. ಆದುದರಿಂದಲೇ ಗೋಪಾಲಕನು ‘ಎಲ್ಲು ಇಹನು’ ಎಂದು ಕವಿ ಹೇಳುತ್ತಾನೆ. ಕವಿಯು ಅಪ್ರತ್ಯಕ್ಷವಾಗಿ ವಿಶ್ವರಕ್ಷಕನಾದ ಭಗವಂತನ ಬಗೆಗೆ ಪ್ರಸ್ತಾವಿಸುತ್ತಾನೆ.

(‘ಗೋ’ ಪದಕ್ಕೆ ‘ಜೀವಿ’ ಎನ್ನುವ ಅರ್ಥವೂ ಇದೆ. ಆದುದರಿಂದ ಗೋಪಾಲನೆಂದರೆ ಎಲ್ಲ ಜೀವಿಗಳನ್ನು ಪಾಲಿಸುವ ಭಗವಂತನೇ ಆಗುತ್ತಾನೆ.)

ಮೂರನೆಯ ನುಡಿ ಹೀಗಿದೆ:

ಬೆಳ್ಳಿಚುಕ್ಕೆ ಚಿಕ್ಕೆಯಾಗಿ ಮುಳುಗಿತಲ್ಲೆ; ಬಾಲೆ

ಮುಕುಲ, ಅಲರು, ಮಲರು, ಪಸರ ಕಂಡು ಕಣ್ಣು ಸೋಲೆ

ಕಂಗೊಳಿಸುವ ಕೆಂಪು ಮುಂದೆ, ಕಂಗೆಡಿಸುವ ಮಂಜು ಹಿಂದೆ

ಕಾದಲನೆಡೆ ಬೇಡ ಬಹಳು ಕಾದಲೆ ಹೂಮಾಲೆ.

ಬೆಳ್ಳಿಚುಕ್ಕೆ ಚಿಕ್ಕೆಯಾಗಿ ಮುಳುಗಿತಲ್ಲೆ ಬಾಲೆ

ಕೋಲು ಸಖೀ. . . .

ಮೊದಲ ನುಡಿಯಲ್ಲಿ ಕವಿಯು ಕಾಡಿನಲ್ಲಿಯ ಸಾತ್ವಿಕ ಪ್ರಾಣಿಗಳನ್ನು ಬಣ್ಣಿಸಿದ್ದರೆ, ಎರಡನೆಯ ನುಡಿಯಲ್ಲಿ ನಾಡಿನಲ್ಲಿ ನೆಲೆ ನಿಂತ ಮಾನವ-ಸ್ನೇಹಿ ಮುಗ್ಧ ಜೀವಿಗಳನ್ನು ಬಣ್ಣಿಸಿದ್ದಾನೆ. ಇದೀಗ ಮೂರನೆಯ ನುಡಿಯಲ್ಲಿ ಸಂಸ್ಕೃತಿಯ ಮುಂದಿನ ಮೆಟ್ಟಲಾದ ಮಾನವರ ವಿಚಾರವಿದೆ. ಮಾನವರು ಪ್ರಾಣಿಗಳಿಗಿಂತ ಹೆಚ್ಚಿನ ಪ್ರಜ್ಞೆಯುಳ್ಳವರು. ಉತ್ಕ್ರಾಂತಿಯ ಕಾಲಮಾನದಲ್ಲಿ ಹೇಳುವದಾದರೆ, ಪ್ರಾಣಿಗಳು ಅರುಣೋದಯ ಕಾಲದವರಾದರೆ, ಮನುಷ್ಯ ಜೀವಿಗಳು ಬೆಳ್ಳಿಚುಕ್ಕೆ ಮುಳುಗಿದ ಕಾಲದವರು; ಅಂದರೆ ಅರುಣೋದಯದ ನಂತರದ ಸೂರ್ಯೋದಯದ ಕಾಲದವರು. ಅದನ್ನು ತೋರಿಸಲೆಂದು ಕವಿ ಬೆಳ್ಳಿಚುಕ್ಕೆಯು(=ಶುಕ್ರ ಗ್ರಹವು) ಈಗ ಚಿಕ್ಕೆಯಾಗಿ ಮುಳುಗಿದೆ ಎಂದು ಹೇಳುತ್ತಾನೆ. ಆದರೇನು, ಮಾನವರೂ ಸಹ ಪ್ರಕೃತಿಯ ಕೂಸುಗಳೇ. ಬದುಕಿನ ಮುಂದುವರಿಕೆಯು ಪ್ರಕೃತಿಯ ಅಪೇಕ್ಷೆಯಾಗಿದೆ. ಆದುದರಿಂದಲೇ ಇಲ್ಲಿ ಕಾದಲೆಯು ಅಂದರೆ ಪ್ರಿಯತಮೆಯು ತನ್ನ ಕಾದಲನಿಗೆ ಬೇಡಲು ಬರುತ್ತಿದ್ದಾಳೆ. ಅವಳು ಬೇಡುತ್ತಿರುವದು ಪ್ರಣಯವನ್ನು. ಪ್ರಣಯದ ಸಂಕೇತವಾದ ಹೂಮಾಲೆಯೇ ಅವಳಾಗಿದ್ದಾಳೆ. ಆದರೆ ಈ ಮಾನವರಿಗೂ ಸಹ ಕಣ್ಣು ಮುಂದಿನ ಕೆಂಪು ಕಾಣುತ್ತದೆಯೇ ಹೊರತು, ಅದರ ಹಿಂದಿನ ಮಂಜು ಕಾಣುತ್ತಿಲ್ಲ.

(ಇಲ್ಲಿ ಕೆಂಪು ಬಣ್ಣವು ಜೀವನದ ಸಂಕೇತವಾಗಿ, ಉತ್ಸಾಹದ ಸಂಕೇತವಾಗಿ ಬಂದಿದೆ, ಹಾಗು ಮಂಜು ನಮ್ಮ ಅರಿವಿಗೆ ಕಾಣದ ಮೃತ್ಯುವಿನ ಸಂಕೇತವಾಗಿದೆ.)

ಕೊನೆಯ ನುಡಿ ಹೀಗಿದೆ:

ಬೇಟೆಯಲ್ಲ; ಆಟವೆಲ್ಲ; ಬೇಟದ ಬಗೆ, ನಾರಿ.

ಮುಗಿಲ ಬಾಯ ಗಾಳಿಕೊಳಲ ಬೆಳಕಹಾಡ ಬೀರಿ

(ಕಂಗೊಳಿಸುವ ಕೆಂಪು ಇರಲಿ, ಕಂಗೆಡಿಸುವ ಮಂಜು ಬರಲಿ)

ಕಳೆಯಲಿಲ್ಲೆ ಕತ್ತಲಂಥ ಕತ್ತಲವೇ ಜಾರಿ?

ಬೇಟೆಯಲ್ಲ; ಆಟವೆಲ್ಲ; ಬೇಟದ ಬಗೆ, ನಾರಿ.

ಕೋಲು ಸಖೀ. . . .

ಮೊದಲ ಮೂರು ನುಡಿಗಳಲ್ಲಿ ಹುಟ್ಟು ಸಾವುಗಳ ನಡುವಿನ ಬದುಕಿನ ವರ್ಣನೆ ಇದ್ದರೆ, ಕೊನೆಯ ನುಡಿಯಲ್ಲಿ ಇದು ವಿಶ್ವಾತ್ಮನ ಆಟವೆನ್ನುವ ದರ್ಶನವಿದೆ. ಆದುದರಿಂದ ಇದು ಬೇಟೆಯಲ್ಲ. ಇದೆಲ್ಲ (ಅವನ) ಆಟ; ಇದು ಬೇಟ, ಅಂದರೆ ಪ್ರಣಯದ ಒಂದು ರೀತಿ ಎಂದು ಕವಿ ಹೇಳುತ್ತಾರೆ. ಈ ಪ್ರಣಯವು ಪ್ರಕೃತಿ ಹಾಗು ವಿಶ್ವಾತ್ಮನಾದ ಪುರುಷ ಇವರೀರ್ವರ ನಡುವಿನ ಪ್ರಣಯ. ಈ ‘ಪುರುಷ’ನ ಸ್ವರೂಪವನ್ನು ವಿಶದೀಕರಿಸಲು ಕವಿಯು “ಮುಗಿಲ ಬಾಯ ಗಾಳಿಕೊಳಲ ಬೆಳಕಹಾಡ ಬೀರಿ” ಎನ್ನುವ ಒಂದು ಅದ್ಭುತ ರೂಪಕವನ್ನು ಅಚಾನಕವಾಗಿ ಬಳಸಿ ಓದುಗರನ್ನು ಬೆರಗಿನಲ್ಲಿ ಸೆರೆ ಹಿಡಿಯುತ್ತಾರೆ.

ಆ ವಿಶ್ವಾತ್ಮನಿಗೆ ಮುಗಿಲೇ ಬಾಯಿ, ಗಾಳಿಯೇ ಅವನ ಕೊಳಲು ಹಾಗು ಬೆಳಕೇ ಆತನ ಹಾಡು. ಮುಗಿಲು, ಗಾಳಿ ಹಾಗು ಬೆಳಕು ಇವು ಪಂಚಮಹಾಭೂತಗಳಾದ ಪೃಥ್ವಿ, ಅಪ್, ತೇಜ, ಆಕಾಶ ಹಾಗು ವಾಯು ಇವುಗಳಲ್ಲಿ ಮೂರು ಮಹಾಭೂತಗಳ ಅಂದರೆ ಆಕಾಶ, ವಾಯು ಹಾಗು ತೇಜ ಇವುಗಳ ಸಂಕೇತವಾಗಿವೆ ಎನ್ನುವದನ್ನು ಗಮನಿಸಬೇಕು.

ಜೊತೆಜೊತೆಗೇ ವಿಶ್ವಾತ್ಮನನ್ನು ಕೃಷ್ಣನಿಗೆ ಹೋಲಿಸುವ ಕೆಲವು ಸಂಕೇತಗಳನ್ನು ಈ ಕವನದಲ್ಲಿ ಬಳಸಲಾಗಿದೆ. ತಾಯಿ ಯಶೋದೆಗೆ ಪುಟ್ಟ ಕೃಷ್ಣನು ತನ್ನ ಬಾಯಿಯಲ್ಲಿ ಸಕಲ ಲೋಕಗಳನ್ನು ಅನಿರೀಕ್ಷಿತವಾಗಿ ತೋರಿಸಿ ಬೆರಗುಗೊಳಿಸಿದನು. ಈ ಗೀತೆಯಲ್ಲಿ ಕವಿಯು ಗೋಪಾಲಕನನ್ನು ವಿಶ್ವಾತ್ಮನಿಗೆ ಹೋಲಿಸುವಂತಹ ರೂಪಕವನ್ನು ಥಟ್ಟನೆ ಬಳಸಿ ಓದುಗನನ್ನು ಬೆರಗಿನಲ್ಲಿ ಸೆರೆ ಹಿಡಿಯುತ್ತಾನೆ. ಕೃಷ್ಣನು ಅರ್ಜುನನಿಗೆ ತನ್ನ ವಿಶ್ವರೂಪವನ್ನು ತೋರಿಸುವಂತೆ, ಕವಿಯು ಓದುಗರಿಗೆ ‘ಮುಗಿಲ ಬಾಯ, ಗಾಳಿ ಕೊಳಲ, ಬೆಳಕ ಹಾಡ’ ಎನ್ನುವ ವಿಶ್ವರೂಪವನ್ನು ತೋರಿಸುತ್ತಾನೆ. ಓದುಗರನ್ನು ಸಾಧಾರಣ ನೋಟದಿಂದ ಅಸಾಧಾರಣ ನೋಟಕ್ಕೆ ಓಯ್ಯುವ ಈ ರೂಪಕವು ಕನ್ನಡ ಕಾವ್ಯದಲ್ಲಷ್ಟೇ ಅಲ್ಲ, ಜಗತ್ತಿನ ಕಾವ್ಯದಲ್ಲೇ ಒಂದು ಅದ್ಭುತ, ಅನನ್ಯ ರೂಪಕವಾಗಿದೆ.

ಈ ವಿಶ್ವಾತ್ಮನಲ್ಲಿ ನಂಬಿಕೆ ಇರುವ ಕಾರಣದಿಂದಲೇ ಕವಿಯ ಮನಸ್ಸಿನಲ್ಲಿ ಒಂದು ಸತ್ಯ ಹೊಳೆಯುತ್ತದೆ. ಅದನ್ನು ಕವಿಯು ತನ್ನ ನಲ್ಲೆಗೆ ಉದ್ಘೋಷಿಸುವದಿಲ್ಲ; ಉಸುರುತ್ತಾನೆ. ಆದುದರಿಂದ ಆ ಸತ್ಯದ ಪ್ರಥಮಾರ್ಧವನ್ನು ಸ್ವಗತರೂಪದಲ್ಲಿ, ಕಂಸಿನಲ್ಲಿ ತೋರಿಸಲಾಗಿದೆ: (ಕಂಗೊಳಿಸುವ ಕೆಂಪು ಇರಲಿ, ಕಂಗೆಡಿಸುವ ಮಂಜು ಬರಲಿ). ಹಾಗು ಈ ಸತ್ಯದ ದ್ವಿತೀಯಾರ್ಧವನ್ನು ಕವಿಯು ಅಪ್ತವಾಗಿ ತನ್ನ ನಲ್ಲೆಗೆ ಬೋಧಿಸುತ್ತಾನೆ: “ಕಳೆಯಲಿಲ್ಲೆ ಕತ್ತಲಂಥ ಕತ್ತಲವೇ ಜಾರಿ?”

ಕೋಲಾಟದ ಪಲ್ಲದೊಂದಿಗೆ ಈ ಗೀತೆ ಮುಗಿಯುತ್ತದೆ.

ಈ ಗೀತೆಯ ವೈಶಿಷ್ಟ್ಯಗಳು:

(೧) ಅನೇಕ ವೈಶಿಷ್ಟ್ಯಗಳ ಆಗರವಾಗಿದೆ ಈ ಗೀತೆ. ಮೊದಲನೆಯದಾಗಿ ಇದು ಕೋಲಾಟದ ಧಾಟಿಯಲ್ಲಿಯೇ ಹಾಡಬಹುದಾದ ಗೀತೆ. ಆದುದರಿಂದ ಇದನ್ನು ಕವನ ಎನ್ನುವದಕ್ಕಿಂತ ಗೀತೆ ಎನ್ನುವದೇ ಸರಿಯಾಗುತ್ತದೆ.

ವೈಯುಕ್ತಿಕವಾಗಿ ಹೊಳೆವ ಸತ್ಯವಾದರೆ ವೈಯಕ್ತಿಕ ಓದಿನ ಕವನವನ್ನು ರಚಿಸಬಹುದು. ಆದರೆ ಇಲ್ಲಿ ಕವಿ ತೋರಬಯಸುತ್ತಿರುವದು ಒಂದು ವಿಶ್ವಸತ್ಯವನ್ನು. ಆದುದರಿಂದಲೇ ಕವಿಯು ಒಂದು ಸಮೂಹಗೀತೆಯ ರಚನೆಯನ್ನು ಬಳಸಿಕೊಂಡಿದ್ದಾನೆ. ಅಲ್ಲದೆ ಬದುಕಿನ ವೈರುಧ್ಯಗಳ ನಡುವೆಯೂ ಸಹ, ಜೀವನೋತ್ಸಾಹವು ನಶಿಸಿ ಹೋಗಬಾರದು ಎನ್ನುವದನ್ನು ತೋರಿಸುವ ಉದ್ದೇಶದಿಂದಲೇ ಹುರುಪು ಹುಮ್ಮಸ್ಸಿನ ಪ್ರತೀಕವಾದ ಕೋಲಾಟದ ಧಾಟಿಯನ್ನು ಕವಿಯು ಉಪಯೋಗಿಸಿಕೊಂಡಿದ್ದಾನೆ. ಎರಡನೆಯದಾಗಿ ಕೋಲಾಟದ ಪದಗಳು ಹೆಚ್ಚಾಗಿ ಕೃಷ್ಣಲೀಲೆಯ ಪದಗಳು.

(ಉದಾ: ಕೋಲನಾಡುತ ಬಂದಾ / ಕಾವೇರಿ ರಂಗಾ).

ಈ ಗೀತೆಯಲ್ಲಿಯೂ ಸಹ ಬದುಕು ಮುರಲೀಧರನ ಲೀಲೆ ಎನ್ನುವ ಶ್ರದ್ಧೆ ವ್ಯಕ್ತವಾಗಿದೆ.

(೨) ವಿಶ್ವಸತ್ಯದ ಲಕ್ಷಣವೆಂದರೆ ಅದು ಅನಾದಿ ಕಾಲದ ಸತ್ಯ. ಆದುದರಿಂದ ಕವಿಯು ಉತ್ಕ್ರಾಂತಿಯ ವಿವಿಧ ಮಜಲುಗಳನ್ನು ಕಾಲಾನುಸಾರವಾಗಿ ತೋರಿದ್ದಾನೆ. ಮೊದಲ ನುಡಿಯಲ್ಲಿ ಕಾಡಿನ ಮುಗ್ಧ ಜೀವಿಗಳಾದ ಚಿಗರೆಗಳ ಸಂಕೇತವಿದ್ದರೆ, ಎರಡನೆಯ ನುಡಿಯಲ್ಲಿ ನಾಡಿನಲ್ಲಿ ಈಲಾದ ಗೋಸಮೂಹವಿದೆ. ಮೂರನೆಯ ನುಡಿಯಲ್ಲಿ ಪ್ರಜ್ಞಾವಂತ ಮಾನವಜೀವಿಗಳ ಸಂಕೇತವಿದೆ. ಮೊದಲ ಎರಡು ನುಡಿಗಳಲ್ಲಿ ಅರುಣೋದಯದ ಸಂಕೇತವಾಗಿ ‘ಕಂಗೊಳಿಸುವ ಕೆಂಪು’ ಎನ್ನುವ ವರ್ಣನೆ ಇದ್ದರೆ, ಮೂರನೆಯ ನುಡಿಯಲ್ಲಿ ಅರುಣೋದಯವು ಮುಗಿದು ಸೂರ್ಯೋದಯವು ಆಗುತ್ತಿರುವ ಸಂಕೇತವಾಗಿ ‘ಬೆಳ್ಳಿಚುಕ್ಕೆ ಚಿಕ್ಕೆಯಾಗಿ ಮುಳುಗಿತಲ್ಲೆ ಬಾಲೆ’ ಎನ್ನುವ ವರ್ಣನೆ ಇದೆ. ಅರುಣೋದಯ ಹಾಗು ಸೂರ್ಯೋದಯಗಳು ಈ ಗೀತೆಯಲ್ಲಿ ಕಾಲಗತಿಯ ಮಾನದಂಡಗಳಾಗಿವೆ.

(೩) ಸಂಪೂರ್ಣ ಕವನವೇ ಪ್ರತಿಮಾಮಯವಾಗಿರುವದು ಈ ಕವನದ ಪ್ರಮುಖ ವೈಶಿಷ್ಟ್ಯವಾಗಿದೆ.

ಮೊದಲ ನುಡಿಯಲ್ಲಿ ಎಳೆಯ ಜೀವಿಗಳನ್ನು ಸೂಚಿಸುವ ಉದ್ದೇಶದಿಂದ ತರಳ, ಚಿಗುರು ಹಾಗು ಹೂವು ಎನ್ನುವ ವಿಶೇಷಣಗಳನ್ನು ಬಳಸಲಾಗಿದೆ. ಸಸ್ಯದಲ್ಲಿ ಮೊದಲು ಬರುವದು ಚಿಗುರು ಹಾಗು ಬಳಿಕ ಕಾಣುವದು ಹೂವು ಎನ್ನುವದನ್ನು ಗಮನಿಸಬೇಕು. ಅದರಂತೆ ಎರಡನೆಯ ನುಡಿಯಲ್ಲಿ ‘ಕರೆವ ಕರು ಹಾಗು ಕುಣಿವ ಮಣಕ’ಗಳು ಎಳೆತನವನ್ನು ಸೂಚಿಸಿದರೆ ‘ತೊರೆವ ಗೋಗಭೀರೆಯು’ ಪ್ರೌಢಾವಸ್ಥೆಯನ್ನು ಸೂಚಿಸುತ್ತಾಳೆ.

ಮೂರನೆಯ ನುಡಿಯಲ್ಲಿ ನಿಸರ್ಗದಲ್ಲಿ ಸಾಮರಸ್ಯದಿಂದ ಜೀವಿಸುತ್ತಿರುವ ಮಾನವ-ಜೀವಿಗಳ ವರ್ಣನೆ ಇದೆ. ಸಾಮರಸ್ಯವನ್ನು ಸೂಚಿಸುವ ಉದ್ದೇಶದಿಂದ, “ಮುಕುಲ, ಅಲರು, ಮಲರು, ಪಸರ ಕಂಡು ಕಣ್ಣು ಸೋಲೆ ” ಎನ್ನುವ ವರ್ಣನೆ ಬಂದಿದೆ.

(೪) ಬದುಕು ಬೆಳವಣಿಗೆಯ ದಿಕ್ಕಿನಲ್ಲಿ ಹರಿಯುತ್ತಿರುತ್ತದೆ ಎನ್ನುವದನ್ನು ತೋರಿಸಲು ಬೇಂದ್ರೆಯವರು ಕವನದ ಮೂರೂ ನುಡಿಗಳಲ್ಲಿ ನಿಸರ್ಗವಸ್ತುಗಳ ಬೆಳವಣಿಗೆಯನ್ನು ವಿಶೇಷಣಗಳಂತೆ ಬಳಸಿಕೊಂಡಿದ್ದಾರೆ. ಉದಾಹರಣೆಗಾಗಿ ಮೊದಲ ನುಡಿಯಲ್ಲಿ ಬರುವ “ತರಳ ಎರಳೆ, ಚಿಗುರ ಚಿಗುರೆ, ಹೂವು ಹೂವು ಹುಲ್ಲೆ” ಎನ್ನುವ ರೂಪಕವನ್ನು ನೋಡಿರಿ. ತರಳ(=ಎಳೆಯ), ಚಿಗುರ(=ಚಿಗುರಿದ) ಹಾಗು ಹೂವ(=ಪೂರ್ಣವಾಗಿ ಅರಳಿದ) ಎನ್ನುವ ಪ್ರತಿಮೆಗಳು ಸಸ್ಯದ ಬೆಳವಣಿಗೆಯ ದಿಕ್ಕನ್ನು ತೋರಿಸುತ್ತಿವೆ.

ಅದರಂತೆ ಮೂರನೆಯ ನುಡಿಯಲ್ಲಿ ಮುಕುಲ(=ಮೊಗ್ಗೆ), ಅಲರು(=ಬಿರಿಯುತ್ತಿರುವ ಹೂವು), ಹಾಗು ಮಲರು(=ಅರಳಿದ ಹೂವು) ಈ ಪ್ರತಿಮೆಗಳು ಕಾಲಗತಿಯನ್ನು ತೋರಿಸುವ ಪ್ರತಿಮೆಗಳಾಗಿವೆ.

ಎರಡನೆಯ ನುಡಿಯಲ್ಲಿ ಕರು/ಮಣಕ ಹಾಗು ಗೋವು ಇವು ಬದುಕಿನ ಬೆಳವಣಿಗೆಯ ಸಂಕೇತಗಳಾಗಿವೆ.

(೫) ಮೊದಲ ಮೂರು ನುಡಿಗಳ ಮೂರನೆಯ ಸಾಲಿನಲ್ಲಿ ಅಂದರೆ ನಡುವಿನ ಸಾಲಿನಲ್ಲಿ ಮೃತ್ಯುವಿನ ಆತಂಕವು ವ್ಯಕ್ತವಾಗಿದೆ: “ಕಂಗೊಳಿಸುವ ಕೆಂಪು ಮುಂದೆ, ಕಂಗೆಡಿಸುವ ಮಂಜು ಹಿಂದೆ”. ಈ ಆತಂಕವನ್ನು ಎದುರಿಸುವ ಉದ್ದೇಶದಿಂದ ಪ್ರತಿ ನುಡಿಯ ಮೊದಲ ಹಾಗು ಕೊನೆಯ ಸಾಲುಗಳು ಬದುಕಿನಲ್ಲಿ ಭರವಸೆಯನ್ನು ನೀಡುವ ಸಾಲುಗಳಾಗಿವೆ. ಆದುದರಿಂದಲೇ ಪ್ರತಿ ನುಡಿಯ ಮೊದಲ ಸಾಲನ್ನು, ಕೊನೆಯ ಅಂದರೆ ಐದನೆಯ ಸಾಲಿನಲ್ಲಿ ಆವರ್ತಿಸಲಾಗಿದೆ.

ಉದಾಹರಣೆಗೆ:

ಮೊದಲ ನುಡಿಯ ಮೊದಲ ಹಾಗು ಕೊನೆಯ ಸಾಲು:

“ಮುಂಜಾವದ ಎಲರ ಮೂಸಿ ನೋಡುತಿಹವು ನಲ್ಲೆ”

ಎರಡನೆಯ ನುಡಿಯ ಮೊದಲ ಹಾಗು ಕೊನೆಯ ಸಾಲು:

“ಬೀರುತಿರುವ ಪ್ರಾಣವಾಯು ಹೀರುತಿಹವೆ ನೀರೆ”

ಮೂರನೆಯ ನುಡಿಯ ಮೊದಲ ಹಾಗು ಕೊನೆಯ ಸಾಲು:

ಬೆಳ್ಳಿಚುಕ್ಕೆ ಚಿಕ್ಕೆಯಾಗಿ ಮುಳುಗಿತಲ್ಲೆ; ಬಾಲೆ

ಕೊನೆಯ ನುಡಿಯ ಮೊದಲ ಹಾಗು ಕೊನೆಯ ಸಾಲು:

ಬೇಟೆಯಲ್ಲ; ಆಟವೆಲ್ಲ; ಬೇಟದ ಬಗೆ, ನಾರಿ.

ಅಲ್ಲದೆ ಕೊನೆಯ ನುಡಿಯ ಮಧ್ಯದ ಸಾಲಿನಲ್ಲಿ ಮೃತ್ಯುವಿನ motifದಲ್ಲಿ ಆದ ಬದಲಾವಣೆಯನ್ನು ಗಮನಿಸಬೇಕು:

“(ಕಂಗೊಳಿಸುವ ಕೆಂಪು ಇರಲಿ, ಕಂಗೆಡಿಸುವ ಮಂಜು ಬರಲಿ)”.

ಈ ರೀತಿಯಾಗಿ ಕವಿಯು ಕೋಲಾಟದ ಗೀತೆಯು ಬದುಕಿನ ಗೀತೆ ಎನ್ನುವದನ್ನು ದೃಢಪಡಿಸುತ್ತಾನೆ.

(೬) ಇಂಗ್ಲಿಶ್ ಕವನಗಳಲ್ಲಿ ಬಳಸಲಾಗುತ್ತಿರುವ enjambment ಅನ್ನುವ ಕವನವಿಶಿಷ್ಟತೆಯನ್ನು ಬೇಂದ್ರೆಯವರು ಈ ಗೀತೆಯಲ್ಲಿ ಬಳಸಿದ್ದಾರೆ. ಉದಾಹರಣೆಗೆ ಐದು ಸಾಲುಗಳ ನುಡಿಯ ಮಧ್ಯದ ಸಾಲು ಲಯಭಂಗದ ಮೂಲಕ, ಹಾಗು ಅರ್ಥಪಲ್ಲಟದ ಮೂಲಕ ಅರ್ಥವಿಸ್ತರಣೆಯನ್ನು ಸಾಧಿಸುತ್ತದೆ. ಇದೇ ವಿಶಿಷ್ಟತೆಯನ್ನು ಬೇಂದ್ರೆಯವರು ತಮ್ಮ “ಚಿಗರಿಗಂಗಳ ಚೆಲುವಿ” ಕವನದಲ್ಲಿಯೂ ಬಳಸಿದ್ದಾರೆ.

(೭) ವ್ಯಥೆಯನ್ನು ಒಳಗೊಂಡ ಕವನಗಳನ್ನು ಬರೆಯುವಾಗ ಬೇಂದ್ರೆಯವರು ಮೂರು ವಿಭಿನ್ನ ರೀತಿಗಳಲ್ಲಿ ಬರೆಯುವದನ್ನು ಗಮನಿಸಬೇಕು:

(i) ಸಾರ್ವತ್ರಿಕ ಅಥವಾ ತಾತ್ವಿಕ ಸ್ವರೂಪದ ವ್ಯಥೆ

(ii) ಸಂಪೂರ್ಣವಾಗಿ ವೈಯಕ್ತಿಕವಾದ ವ್ಯಥೆ

(iii) ಸಾರ್ವಜನಿಕ ಸಂಬಂಧವುಳ್ಳ ವೈಯಕ್ತಿಕ ವ್ಯಥೆ

(i) ಸಾರ್ವತ್ರಿಕ ಅಥವಾ ತಾತ್ವಿಕ ಸ್ವರೂಪದ ವ್ಯಥೆ:

‘ನಾದಲೀಲೆ’ ಕವನದಲ್ಲಿ ವ್ಯಕ್ತವಾಗುತ್ತಿರುವ ಮೃತ್ಯುವಿನ ಕಳವಳವು ಸಾರ್ವತ್ರಿಕ ಹಾಗು ತಾತ್ವಿಕ ಆತಂಕ. ಈ ಗೀತೆಯಲ್ಲಿ ಕವಿಯು ಗ್ರಾಂಥಿಕ ಕನ್ನಡವನ್ನು ಹಾಗು ಹಳೆಗನ್ನಡಕ್ಕೆ ಹತ್ತಿರವಾದ ಕನ್ನಡವನ್ನು ಬಳಸಿದ್ದಾನೆ. ಹಾಗು ಕವನದಲ್ಲಿ ಮೃದು ಪದಗಳನ್ನು ಬಳಸಲಾಗಿದೆ.

ಗೀತರಚನೆಯನ್ನು ಹಳೆಗನ್ನಡ ಕವನಗಳ ‘ಉತ್ಸಾಹ ಮಾತ್ರಾ’ ಛಂದಸ್ಸನ್ನು ಅನುಸರಿಸಿ ಮಾಡಲಾಗಿದೆ.

ಈ ಛಂದಸ್ಸಿನಲ್ಲಿ ಪ್ರತಿ ಪಾದದಲ್ಲಿ ಏಳು ತ್ರಿಮಾತ್ರಾಗಣಗಳು, ಕೊನೆಗೊಂದು ಗುರು ಬರುತ್ತವೆ. ಈ ರೀತಿಯಾದ ನಾಲ್ಕು ಸಾಲುಗಳು ಇರುತ್ತವೆ. ಬೇಂದ್ರೆಯವರು ಪ್ರತಿ ಪಾದದಲ್ಲಿ ಮೂರು ಮಾತ್ರೆಯ ಏಳು ಗಣಗಳನ್ನು ಇಟ್ಟುಕೊಂಡಿದ್ದಾರೆ. ಆದರೆ ಕೊನೆಯಲ್ಲಿ ಗುರುವನ್ನು ಇಟ್ಟುಕೊಂಡಿಲ್ಲ. ನಾಲ್ಕು ಸಾಲುಗಳ ಬದಲಾಗಿ ಐದು ಸಾಲುಗಳನ್ನು ಬಳಸಿಕೊಂಡಿದ್ದಾರೆ. (ಮಧ್ಯದ ಸಾಲನ್ನು enjambment ತರಹ ಉಪಯೋಗಿಸಿಕೊಂಡಿದ್ದಾರೆ.)

(ii) ಸಂಪೂರ್ಣವಾಗಿ ವೈಯಕ್ತಿಕವಾದ ವ್ಯಥೆ:

ಬೇಂದ್ರೆಯವರ ಅನೇಕ ಕವನಗಳು ವೈಯಕ್ತಿಕ ದುಃಖದ ಅಗ್ನಿಯಲ್ಲಿ ಬೆಂದು ಬಂದ ಚಿನ್ನದ ಒಡವೆಗಳಾಗಿವೆ.

‘ನೀ ಹೀಂಗ ನೋಡಬ್ಯಾಡ ನನ್ನ’, ‘ಬಿಸಿಲುಗುದುರೆ’, ‘ಹುದುಗಲಾರದ ದುಃಖ’, ‘ನನ ಕೈಯ ಹಿಡಿದಾಕೆ’ ಮೊದಲಾದ ಕವನಗಳು ಇಂತಹ ವೈಯಕ್ತಿಕ ದುಃಖದ ಕವನಗಳು. ಇಂತಹ ಕವನಗಳಲ್ಲಿ ಇರುವ ಭಾಷೆ ದೇಸಿ ಭಾಷೆ, ರಚನೆ ಸಹ ಸರಳವಾದ ದೇಸಿ ಶೈಲಿ, ಉಪಮೆಗಳು ದೇಸಿ ಉಪಮೆಗಳು.

(ಉದಾಹರಣೆ:

ಇಬ್ಬನ್ನಿ ತೊಳೆದರೂ ಹಾಲು ಮೆತ್ತಿದಾ ಕವಳಿ ಕಂಟಿಯಾ ಹಣ್ಣು

ಹೊಳೆಹೊಳೆವ ಹಾಂಗ ಕಣ್ಣಿರುವ ಹೆಣ್ಣ, ಹೇಳು ನಿನ್ನವೇನ ಈ ಕಣ್ಣು?)

(iii) ಸಾರ್ವಜನಿಕ ಸಂಬಂಧವುಳ್ಳ ವೈಯಕ್ತಿಕ ವ್ಯಥೆ:

ವೈಯಕ್ತಿಕ ದುಃಖಕ್ಕೆ ಸಾರ್ವಜನಿಕ ಸಂಬಂಧವಿದ್ದಾಗಿನ ಸಂದರ್ಭದಲ್ಲಿ ಬೇಂದ್ರೆಯವರು ಬರೆದ ಕವನಗಳು ಈ ವರ್ಗದಲ್ಲಿ ಬರುತ್ತವೆ. ಉದಾಹರಣೆಗೆ, ಬೇಂದ್ರೆಯವರು ಧಾರವಾಡವನ್ನು ಬಿಟ್ಟು ಹೋಗುವಂತಹ ಪರಿಸ್ಥಿತಿ ಉದ್ಭವವಾಯಿತು. ಧಾರವಾಡವೆಂದರೆ ಕವಿಗೆ ಜೀವದ ಉಸಿರು; ಆತನು ಹುಟ್ಟಿ, ಬೆಳೆದ ಊರು; ಗೆಳೆಯರ ಬಳಗವನ್ನು ಕಟ್ಟಿ ಸಾಹಿತ್ಯದ ಸಲ್ಲಾಪವಾಡಿದ ಊರು. ಆ ಹೊತ್ತಿನಲ್ಲಿ ಅವರಿಂದ ಹೊರಬಂದ ಕವನ: “ನಾವು ಬರತೇವಿನ್ನ”.

ಧಾರವಾಡದ ಕನ್ನಡವು ಪ್ರಾಕೃತ, ಪಾರಸಿ ಹಾಗು ಮರಾಠಿ ಭಾಷೆಗಳೊಡನೆ ಒಡನಾಡಿದ ಕನ್ನಡ. ಆದುದರಿಂದ ಈ ‘ವೈಯಕ್ತಿಕ-ಸಾರ್ವಜನಿಕ’ ಕವನದಲ್ಲಿ ಬೇಂದ್ರೆಯವರು ಇಂತಹ ಕನ್ನಡವನ್ನೇ ಬಳಸಿದ್ದಾರೆ. ಉದಾಹರಣೆಗೆಂದು ಈ ಕವನದ ಒಂದು ನುಡಿಯನ್ನು ಇಲ್ಲಿ ಕೊಡುತ್ತಿದ್ದೇನೆ:

“ಜೋಲಿ-- ಹೋದಾಗ ಆದಿರಿ ಕೋಲು

ಹಿಡಿದಿರಿ ನಮ್ಮ ತೋಲು

ಏನು ನಿಮ್ಮ ಮೋಲು-- ಲೋಕದಾಗ ?

ನಾವು-- ಮರತೇವದನ ಹ್ಯಾಂಗ ?”

(೮) `ನಾದಲೀಲೆ’ ಗೀತೆಯ ಪ್ರತಿಯೊಂದು ನುಡಿಯ ಮೊದಲೆರಡು ಸಾಲುಗಳು ಒಂದು ಭೌತಿಕ ನೋಟವನ್ನು (physical sight) ತೋರಿಸುತ್ತವೆ. ಉದಾಹರಣೆಗೆ ಚಿಗರಿಗಳು ಅಥವಾ ಹಸುಗಳು ಆಡುತ್ತಿರುವ ದೃಶ್ಯ. ಮೂರನೆಯ ಸಾಲು ಥಟ್ಟನೆ ಪಾರಭೌತಿಕ ಸತ್ಯವನ್ನು (metaphysical truth) ಹೇಳುತ್ತದೆ (“ಕಂಗೊಳಿಸುವ ಕೆಂಪು ಮುಂದೆ, ಕಂಗೆಡಿಸುವ ಮಂಜು ಹಿಂದೆ”).

ಇದರಂತೆಯೇ ಮೊದಲ ಮೂರು ನುಡಿಗಳು ಭೌತಿಕ ವಿಷಯವನ್ನು ಹೇಳಿದರೆ, ಕೊನೆಯ ನುಡಿಯು ಪಾರಭೌತಿಕ ಸತ್ಯವನ್ನು ಹೇಳುತ್ತದೆ. ಕವಿಯು ಬದುಕಿನ ಸಾಧಾರಣ ಸಂಗತಿಗಳನ್ನು ಹೇಳುತ್ತಲೇ, ಅವುಗಳ ಹಿಂದೆ ನಿಹಿತವಾಗಿರುವ ಅಸಾಧಾರಣ ತತ್ವವನ್ನು ತೋರಿಸುತ್ತಿರುವದು ಗಮನಿಸಬೇಕಾದ ವಿಷಯವಾಗಿದೆ.

(೯) ಕಾವ್ಯಪ್ರತಿಭೆ ಎಂದರೆ ಏನು?

ಗೋಪಾಲಕೃಷ್ಣ ಅಡಿಗರು ಹೇಳಿದಂತೆ ಕವಿಯ ಸಂಕಲ್ಪ ಹಾಗು ಕಾವ್ಯಸಿದ್ಧಿಯಲ್ಲಿ ಅಂತರ ಇರುತ್ತದೆ. ಕಾವ್ಯಸಂಕಲ್ಪವನ್ನು ಪೂರ್ಣವಾಗಿ ಸಿದ್ಧಿಯಲ್ಲಿ ಪರಿವರ್ತಿಸಬಲ್ಲವನೇ ಪ್ರತಿಭಾವಂತ ಕವಿ. ಕೆಲವರು ಪ್ರತಿಭೆ ಎನ್ನುವದನ್ನು ಒಪ್ಪುವದಿಲ್ಲ. ಜಾಗೃತ ಮನಸ್ಸು, ಅರೆಜಾಗೃತ ಮನಸ್ಸು ಹಾಗು ಸುಪ್ತ ಮನಸ್ಸುಗಳ ಸುಸಂಯೋಜಿತ ಪರಿಶ್ರಮವೇ ಪ್ರತಿಭೆಯಂತೆ ಭಾಸವಾಗುತ್ತದೆ ಎಂದು ಇವರು ಹೇಳುತ್ತಾರೆ. ಇದ್ದಿರಬಹುದು. ಆದರೆ ಇತರರಿಗೆ ಪರಿಶ್ರಮವೆನ್ನುವದು ಈ ಪ್ರತಿಭಾವಂತರಿಗೆ ಅನಾಯಾಸವಾಗಿರುತ್ತದೆ. ಒಂದು ಉದಾಹರಣೆ ಕೊಡಬಹುದಾದರೆ ಗಣಿತಪ್ರತಿಭೆಯ ಶ್ರೀಮತಿ ಶಕುಂತಲಾದೇವಿಯವರು ೧೩ ಅಂಕಿಗಳುಳ್ಳ ಎರಡು ಸಂಖ್ಯೆಯ ಗುಣಾಕಾರವನ್ನು ೨೮ ಸೆಕೆಂಡುಗಳಲ್ಲಿ ಉತ್ತರಿಸಿದ್ದರ ದಾಖಲೆಯಿದೆ. ಇದು ಅನಾಯಾಸದ ಪ್ರತಿಭೆ. ಬೇಂದ್ರೆಯವರ ಕಾವ್ಯಪ್ರತಿಭೆಯು ಇದೇ ರೀತಿಯದು. ಅನೇಕ ವೈಶಿಷ್ಟ್ಯಗಳ ಈ ಗೀತೆಯು ಅವರ ಅನಾಯಾಸ ಪ್ರತಿಭೆಯ ಫಲವಾಗಿದೆ.

(೧೦) ‘ನಾದಲೀಲೆ’:

ಈ ವಿಶ್ವವು ಕೃಷ್ಣನ ಕೊಳಲಿನ ಮೋಹಕ ನಾದವನ್ನು ಪಸರಿಸುವ ಕೋಲಾಟವಾಗಿದೆ. ಕೋಲಾಟಕ್ಕೆ ಗೆಳೆಯ, ಗೆಳತಿಯರ ಸಮೂಹ ಬೇಕು. ಅದರಂತೆ ಪರಮಾತ್ಮನಿಗೂ ಸಹ ವಿಶ್ವವು ಬೇಕು. (ಮುಗಿಲ ಬಾಯ ಗಾಳಿಕೊಳಲ ಬೆಳಕಹಾಡ ಬೀರಿ). ಆದುದರಿಂದ ಈ ಗೀತೆಗೆ ‘ನಾದಲೀಲೆ’ ಎನ್ನುವ ಶೀರ್ಷಿಕೆ ಸಾರ್ಥಕವಾಗಿದೆ.

‘ನಾದಲೀಲೆ’ ಕವನಸಂಕಲನವು ೧೯೩೮ರಲ್ಲಿ ಪ್ರಕಟವಾಯಿತು.

೬. ಕುರುಡು ಕಾಂಚಾಣ

ಕುರುಡು ಕಾಂಚಾಣ ಕುಣಿಯುತಲಿತ್ತು

ಕಾಲಿಗೆ ಬಿದ್ದವರ ತುಳಿಯುತಲಿತ್ತೊs

ಕುರುಡು ಕಾಂಚಾಣ

ಬಾಣಂತಿಯೆಂಬಾ ಸಾ-

ಬಾಣದ ಬಿಳುಪಿನಾ

ಕಾಣದ ಕಿರುಗೆಜ್ಜೆ ಕಾಲಾಗೆ ಇತ್ತೋ

ಸಣ್ಣ ಕಂದಮ್ಮಗಳ

ಕಣ್ಣೀನ ಕವಡಿಯ

ತಣ್ಣನ್ನ ಜೋಮಾಲೆ ಕೊರಳೊಳಗಿತ್ತೋ;

ಬಡವರ ಒಲವಿನ

ಬಡಬಾsನಲದಲ್ಲಿ

ಸುಡು ಸುಡು ಪಂಜವು ಕೈಯೊಳಗಿತ್ತೊ;

ಕಂಬನಿ ಕುಡಿಯುವ

ಹುಂಬ ಬಾಯಿಲೆ ಮೈ-

ದುಂಬಿದಂತಧೊ ಉಧೊ ಎನ್ನುತ್ತಲಿತ್ತೊ;

ಕೂಲಿ ಕಂಬಳಿಯವರ

ಪಾಲಿನ ಮೈದೊಗಲ

ಧೂಳಿಯ ಭಂಡಾರ ಹಣೆಯೊಳಗಿತ್ತೊ;

ಗುಡಿಯೊಳಗೆ ಗಣಣ ಮಾ-

ಹಡಿಯೊಳಗೆ ತನನ ಅಂ-

ಗಡಿಯೊಳಗ ಝಣಣ ನುಡಿಗೊಡುತ್ತಿತ್ತೋ;

ಹ್ಯಾಂಗಾರೆ ಕುಣಿಕುಣಿದು

ಮಂಗಾಟ ನಡೆದಾಗ

ಅಂಗಾತ ಬಿತ್ತೋ, ಹೆಗಲಿ ಎತ್ತೋ.