ದೀಪದ ಮಲ್ಲಿ.

೧.ನೀ ಬರುವ ದಾರಿಯಲಿ.

ನೀ ಬರುವ ದಾರಿಯಲಿ

ಹಗಲು ತಂಪಾಗಿ

ಬೇಲಿಗಳ ಸಾಲಿನಲಿ

ಹಸುರು ಕೆಂಪಾಗಿ

ಪಯಣ ಮುಗಿಯುವ ತನಕ

ಎಳಬಿಸಿಲ ಮಣಿ ಕನಕ

ಸಾಲುಮರಗಳ ಮೇಲೆ ಸೊಬಗ ಸುರಿದಿರಲಿ !

ನೀ ಬರುವ ದಾರಿಯಲಿ

ಹಕ್ಕಿಗಳು ಹಾಡಿ

ಬೆಳ್ದಿಂಗಳಿಂಪಿನಲಿ

ತಾರೆಗಳು ಮೂಡಿ

ಕನಸು ಹಬ್ಬಲಿ ನಿನ್ನ

ಕಣ್ಣಬಳಿ, ಚಿನ್ನ,

ಹತ್ತಾರು ಗಳಿಗೆಯಲಿ ಹಾದಿ ಹಾರಿರಲಿ !

ನೀ ಬರುವ ದಾರಿಯಲಿ

ಬನದೆಲರು ಸುಳಿದು

ಸಂತಸದ ಇರುಳಿನಲಿ

ಆದುದನು ನುಡಿದು

ಮುಂದೆ ಕಾದಿಹ ನೂರು

ಹರುಷಗಳ ಕಣ್ ತೆರೆದು

ಪಯಣವೋ ನಿಲುಗಡೆಯೊ ನೀನರಿಯದಂತಿರಲಿ !

೨.ನಿಲ್ಲಿಸದಿರೆನ್ನ ಪಯಣವನು.

ಕಣ್ಣ ಸನ್ನೆಯಿದೇನು ? ಕೆನ್ನೆಯಲಿ ಸುಳಿಬಂದು

ತುಟಿಯಂಚಿನಲಿ ಮಾತು ಮಾಯವಾಗಿರಲು

ಮತ್ತೊಮ್ಮೆ ಬೆಡಗಿನಲಿ ಜಡೆಯನೆದುರಿಗೆ ತಂದು

ಅದರ ಮೇಲೊಂದು ಸಲ ನಡುಬೆರಳನಿಳಿಸಿ

ಕಡೆಗೆ ಏನೋ ಏಕೋ ಜಗದಗಲ ಕಣ್ ತೆರೆದು

ನಿರಿಯ ಜರಿಯಂಚಿನಲಿ ಚೆಂದುಟಿಯನೊರಸಿ

ಮುನ್ನೀರು ತನ್ನ ಹನಿಯೊಂದರಲಿ ಮೈಹುದುಗಿ

ಮಿಂಚುವೊಲು, ಮೋಹನಾಂಗಿಯೆ, ಉಸಿರ ಬಲೆ ಬೀಸಿ

ನಿಲ್ಲಿಸದಿರೆನ್ನ ಪಯಣವನು. ನಾನಿಲ್ಲಿನ್ನು

ನಿಲ್ಲಲಾರೆನು ; ನನ್ನ ಬೀಳ್ಕೊಡುವುದುದೇ ಚೆನ್ನು.

ಹಬ್ಬಸಾಲಿಗೆ ಬಂದು ಹತ್ತುದಿನ ಇಲ್ಲಿದ್ದೆನಲ್ಲ !

ಗದ್ದಲದ ನಡುವೆ ಪ್ರೇಮದ, ತೆರೆಗೆ ತೆತ್ತೆವಲ್ಲ !

ಎಷ್ಟು ದಿನವಿದ್ದರೂ ಅಗಲಿಕೆಯು ತಪ್ಪದಲ್ಲ !

ಮತ್ತೆ ನಾನಿಲ್ಲಿ ಬಹ ದಿನವೇನು ಬಲುದೂರವಲ್ಲ !

೩.ದೀಪದ ಮಲ್ಲಿ .

ಎಲೆಲೆ! ದೇಪದ ಮಲ್ಲಿ,

ಎದೆಯ ಕತ್ತಲೆಯಲ್ಲಿ

ಪದುಮ ದೀಪದ ಹಿಡಿದು

ಬಾಗಿ ನಿಂತು

ಕವಿಗಿನಿತೆ ಬೆಳಕಿನಲ್ಲಿ

ಎಂಬ ಕಿರುನಗೆಯಲ್ಲಿ

ಹಿಗ್ಗಿ ಹೂವಾಯ್ತಿಂತು

ಪ್ರಾಣ ತಂತು.

ನೀನೆ ಕಂಚಿನ ಬೊಂಬೆ ?

ಅಲ್ಲ ಮಿಂಚಿನ ಬೊಂಬೆ ?

ಹಂಬಲವನೆದೆಯೊಳಗೆ

ತುಂಬಿದೊಲುಮೆ.

ಎಲ್ಲಿತ್ತೊ ಒಂದು ದನಿ,

ಎಲ್ಲಿತ್ತೊ ಒಂದು ಬನಿ,

ನಿನ್ನಿಂದ ಹಾಡಾಯ್ತು

ಅಮೃತವಾಯ್ತು.

೪.ಹೃದಯ ಮೋಹಿನಿಗೆ.

ನಿದ್ದೆಯ ಬೇಲಿಯ ಕನಸಿನ ಬನದಲಿ

ಆಡುವ ಹೆಣ್ಣೆ, ನೀನಾರು ?

ಕಾಮನ ಬಿಲ್ಲಿನ ಸೀರೆಯ ಹೆಣ್ಣೆ,

ಜಡೆಯಲಿ ತಾರೆಯ ಮುಡಿದಿಹ ಹೆಣ್ಣೆ,

ಮಿಂಚುವ ಕಂಗಳ ಸಂಚಿನ ಹೆಣ್ಣೆ,

ಬಿಂಕದ ಹೆಣ್ಣೆ, ನೀನಾರು ?

ಎತ್ತಿದ ಮುಖವೊ ಚೆಲುವಿನ ಗೋಪುರ ;

ಕಂಗಳೊ ಕಳಸದ ಜೊತೆದೀಪ,

ಕೊರಳೊ ಕೇಳದ ದನಿಯ ವಿಮಾನ -

ಹೃದಯದ ಮರುಳೆ, ನೀನಾರು ?

ವಸಂತ ಹಸೆಮಣೆ ನಿನ್ನ ಹಣೆ;

ನಡುವೆ ಕುಂಕುಮದ ಚಿತ್ರಲತೆ -

ಕರೆದರೆ ನಿಲ್ಲದೆ ತಿರುಗಿ ನೋಡದೆ

ತೆರಳುವ ಹೆಣ್ಣೆ, ನೀನಾರು ?

ಕನಸಿನ ಬನದಲಿ ಕಮಲಾಕರದಲಿ

ಕನಕ ವೀಣೆಯನು ದನಿಮಾಡಿ,

ನನ್ನ ನೆರಳಿಗೇ ಯೋಜನ ಹಾರುವ

ಒಲಿಯದ ಹೆಣ್ಣೆ, ನೀನಾರು ?

ಕೆನ್ನೆಯ ಬಾನಲಿ ಮುತ್ತಿನ ಚಂದಿರ

ಮೂಡದ ಹೆಣ್ಣೆ, ನೀನಾರು ?

ಪ್ರೇಮಪದಪದುಮ ಸೋಂಕದ ಮಂದಿರ

ಮಾಯಾಮೋಹಿನಿ, ನೀನಾರು ?

೫.ನಿರೀಕ್ಷೆ.

ಹಗಲಿನಬ್ಬರ ತಣ್ಣಗಾಯಿತು ;

ಸಂಜೆ ರಂಜಿಸಿ ತೆರಳಿತು ;

ತುಂಬುತಾರೆಯ ಗಗನ ಮೆರೆಯಿತು ;

ಚಂದ್ರಲೋಕವೆ ತೆರೆಯಿತು.

ಸುತ್ತ ಬೆಳ್ಳಿಯ ಹಬೆಯನೆಬ್ಬಿಸಿ

ಬೆಳಕು ನುಗ್ಗಿತು ಹಳ್ಳಿಗೆ.

ಹಾದಿ ಬೀದಿಯಲೆಲ್ಲ ಮಲ್ಲಿಗೆ ! -

ಹಾಡು, ಜೀವವೆ, ಮೆಲ್ಲಗೆ,

ಆಳಿನೆತ್ತರ ಬೆಳೆದ ಜೋಳದ

ಹೊಲದ ಚೆಲುವಿನ ತೊಡೆಯಲಿ

ಬಾನಿನೆತ್ತರ ಹಾರಿದೊಲವಿನ

ಕೆಂಪು ಕನಸಿನ ಸುಳಿಯಲಿ,

ದಿಕ್ಕು ದಿಕ್ಕಿಗೆ ಕಣ್ಣ ತಿರುಗಿಸಿ

ಎದುರುಗಾಳಿಯನೆದುರಿಸಿ

ಬೇಲಿಯಾಚೆಗೆ ನೆರಳನೋಡಿಸಿ

ಬಳಿಯ ಜಿಂಕೆಯ ಗದರಿಸಿ,

'ಇನಿಯ ಬಂದನು, ಬಂದ ; ಬಂದನೆ ?'

ಎಂದು ಕಾದಿಹ ಹೆಣ್ಣಿಗೆ

ಅವನೆ ಚಂದಿರ, ತಾನೆ ಚಂದ್ರಿಕೆ ;

ಬೇರೆ ಹುಣ್ಣಿಮೆ ಇವರಿಗೆ !